ಕೋವಿಡ್ ನ ಎರಡನೆಯ ಅಲೆ ದೇಶದಲ್ಲಿ ಹಾಹಾಕಾರ ಎಬ್ಬಿಸಿದ್ದು, ಇದರಿಂದ ಭಯಭೀತರಾದ ಜನರಲ್ಲಿ ಹಲವು ಪ್ರಶ್ನೆಗಳನ್ನು ಎಬ್ಬಿಸಿದೆ. ಈ ಪ್ರಶ್ನೆಗಳಿಗೆ ದೀರ್ಘಕಾಲ ಕರ್ನಾಟಕದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿ ಕೆಲಸದ ಅಪಾರ ಅನುಭವವಿರುವ ಹಿರಿಯ ವೈದ್ಯರಾದ ಡಾ.ಕೆ.ಸುಶೀಲಾ ಈ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.
1. ಎರಡನೆಯ ಅಲೆ ಎಂದರೇನು ? ಇದು ಬರಿಯ ಅಂಕೆಸಂಖ್ಯೆಯ ಏರು–ಪೇರು ಮಾತ್ರವೇ ? ಅಥವಾ ಇದಕ್ಕೆ ವೈಜ್ಞಾನಿಕ ಆಧಾರಗಳಿವೆಯೇ?
ಯಾವುದೇ ಸೋಂಕು ಪ್ರಾರಂಭದಲ್ಲಿ ಕೆಲವೇ ಜನರಲ್ಲಿ ಕಾಣಿಸಿಕೊಂಡು ಮೆಲ್ಲಗೆ ತನ್ನ ರೋಗಿಗಳ ನೇರ, ಪರೋಕ್ಷ ಸಂಪರ್ಕಕ್ಕೆ ಬರುವ ಇತರರಲ್ಲಿ ಹರಡುತ್ತದೆ. ದಿನ ಕಳೆದಂತೆ ರೋಗಿಗಳ ಸಂಖ್ಯೆ ಜಾಸ್ತಿಯಾದಂತೆ ಈ ಸೋಂಕು ಸಮಾಜದ ಜನರಲ್ಲಿ ಹರಡುವ ವೇಗ ಹೆಚ್ಚುತ್ತದೆ.
ಅದಾಗಲೇ ಸೋಂಕು ಇಲ್ಲದವರ ದೇಹದಲ್ಲಿನ ಉತ್ಪತ್ತಿಯಾಗುವ ರೋಗ ನಿರೋಧಕ ಶಕ್ತಿ ಹಾಗೂ ರೋಗ ತಡೆಗಟ್ಟುವ ವಿಧಾನಗಳ ತುರ್ತು ಅನುಷ್ಟಾನಗಳಿಂದ ರೋಗದ ಮೇಲ್ಮುಖ ಓಟಕ್ಕೆ ತಡೆ ಉಂಟಾಗುತ್ತದೆ. ಪರಿಸ್ಥಿತಿಗೆ ಹೊಂದಿಕೊಂಡು ಸ್ವಲ್ಪ ಕಾಲದ ತನಕ ಈ ಸೋಂಕಿನ ಪ್ರಮಾಣ ಒಂದೇ ಮಟ್ಟದಲ್ಲಿ ಇರುತ್ತದೆ. ಮುಂದಿನ ದಿನಗಳಲ್ಲಿ ಸೋಂಕು ಹರಡುವ ಪ್ರಮಾಣದಲ್ಲಿ ಇಳಿಕೆಯಾಗುತ್ತದೆ. ಆದರೆ ಈ ಸೋಂಕು ಸಮಾಜದಿಂದ ನಿರ್ಮೂಲನಗೊಳ್ಳದು. ಈ ಕ್ರಿಯೆಯನ್ನು ಚಿತ್ರದ ಮೂಲಕ ನೋಡಿದಾಗ ಇದು ಅಲೆಯ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ.
ಕೆಲ ಕಾಲದ ನಂತರ-ಜನರು ರೋಗ ತಡೆಗಟ್ಟುವ ವಿಧಾನಗಳ ಅನುಷ್ಟಾನಗಳನ್ನು ನಿರ್ಲಕ್ಷಿಸಿದಾಗ, ಜನರಲ್ಲಿ ರೋಗ ನಿರೋಧಕ ಶಕ್ತಿ ಕುಸಿದಾಗ ತನ್ನ ಹರಡುವಿಕೆಗೆ ಬೇಕಾದ ಸೂಕ್ತ ಪರಿಸರ ದೊರೆತಾಗ ಅಥವಾ ಹಳೆಯ ರೋಗಾಣುವಿನ ಮುಂದಿನ ಪೀಳಿಗೆಯಲ್ಲಿ ಹುಟ್ಟಿಕೊಂಡ `ರೂಪಾಂತರ’ ಪೀಳಿಗೆ ಪ್ರಬಲವಾದಾಗ – ಅಂದರೆ ತನ್ನ ಮರು ದಾಳಿಗೆ ಸೂಕ್ತ ಪರಿಸ್ಥಿತಿ ನಿರ್ಮಿತವಾದಾಗ ಇನ್ನೊಮ್ಮೆ ಜನರಲ್ಲಿ ಶೀಘ್ರವಾಗಿ ಹರಡಿ, ಮೊದಲ ಅಲೆಯಂತೆಯೇ ಮುಂದಿನ ಅಲೆಗಳನ್ನು ನಿರ್ಮಿಸುತ್ತದೆ.
ಎಲ್ಲಿಯ ತನಕ ತಡೆಗಟ್ಟುವ ಸೂಕ್ತ ಕ್ರಮಗಳ ಪರಿಣಾಮಕಾರೀ ಅನುಷ್ಟಾನದ ಮುಂದಿನ ಕಾಲದಲ್ಲಿ ಈ ಸೋಂಕು ಸಾಮೂಹಿಕ ಆರೋಗ್ಯದ ಮಟ್ಟ ಮೇಲೆ ದುಷ್ಪರಿಣಾಮ ಬೀರಲು ಸಾಧ್ಯವಾಗದ `ಹತೋಟಿ’ಯ ಹಂತಕ್ಕೆ ಒಳಗಾಗುವುದಿಲ್ಲವೋ ಅಲ್ಲಿಯ ತನಕ ಈ ಸೋಂಕು ಕಾಲಕಾಲಕ್ಕೆ ಅಲೆಗಳ ರೂಪದಲ್ಲಿ ಸಮಾಜದಲ್ಲಿ ಕಾಣಿಸಿಕೊಳ್ಳುವುದು. ಪರಿಸ್ಥಿತಿಗೆ ಅನುಗುಣವಾಗಿ ಈ ಅಲೆಗಳು ಬಹಳ ಪ್ರಬಲವಾಗಿದ್ದು ಸಮಾಜದಲ್ಲಿ ಅಪಾರ ನಾವು ನೋವಿಗೆ ಕಾರಣವಾಗಬಹುದು. ಕೆಲವೊಮ್ಮೆ ಸ್ವಲ್ಪ ದುರ್ಬಲವಾಗಿದ್ದು ಅಲೆಗಳ ನಡುವೆ ಅಂತರ ಹೆಚ್ಚಿರಬಹುದು. ಒಮ್ಮೆ ಸೋಂಕು ಹತೋಟಿಗೆ ಬಂದ ಮೇಲೆ ಅದು ಸಮಾಜದಿಂದ ಮಾಯವಾಗದಿದ್ದರೂ, ಪರಿಸ್ಥಿತಿಗನುಗುಣವಾಗಿ ಬಹಳ ಕಾಲದ ಅಂತರದಲ್ಲಿ, ಅತೀ ದುರ್ಬಲ ಹಾಗು ಚಿಕ್ಕ ಅಲೆಯ ರೂಪದಲ್ಲಿ ಕಾಣಿಸಿಕೊಳ್ಳಬಹುದು. ಆದರೆ ಇದು ಸಮಾಜದಲ್ಲಿ ಹೆಚ್ಚಿನ ದುಷ್ಪರಿಣಾಮ ಬೀರಲಾರದು. ಸೋಂಕಿನ ನಿರ್ಮೂಲನದಿಂದ ಮಾತ್ರ ಅಲೆಗಳ ಶಾಶ್ವತ ನಿರ್ಮೂಲನೆ ಸಾಧ್ಯ. ಇಲ್ಲಿಯ ತನಕ, ಪ್ರಪಂಚಕ್ಕೆ ಹೆಮ್ಮಾರಿಯಾಗಿ ಕಾಡಿದ್ದ `ಸಿಡುಬು’ ಮಾತ್ರ ನಿರ್ಮೂಲನೆಗೊಳಗಾದ ಸೋಂಕು ಕಾಯಿಲೆ.
2. ಎರಡನೆಯ ಅಲೆ ರೂಪಾಂತರಗೊಂಡ ವೈರಸ್ ನಿಂದಾಗಿ ಬರುತ್ತಿದೆ ಅಂತಾರೆ. ಏನಿದು ರೂಪಾಂತರಗೊಂಡ ವೈರಸ್?
2019 ರಲ್ಲಿ ಪ್ರಥಮ ಬಾರಿಗೆ ಪ್ರಪಂಚ ಪ್ರವೇಶಿಸಿದ ಕೋವಿಡ್-19 ಸೋಂಕುರೋಗ ಭಾರತದಲ್ಲಿ ತನ್ನ ಮೊದಲ ಅಲೆಯನ್ನು ಪೂರೈಸಿ 2 ನೇ ಅಲೆಯ ರೂಪದಲ್ಲಿ ಬಂದು ದೇಶವನ್ನು ಅಪಾರ ಸಂಕಷ್ಟಕ್ಕೀಡು ಮಾಡುತ್ತಿದೆ.
ಮೊದಲನೆಯ ಅಲೆಯಲ್ಲಿ ಕೋವಿಡ್-19 ಸೋಂಕಿಗೆ ಕಾರಣೀಭೂತವಾದ ವೈರಸ್‌ನೊಂದಿಗೆ ಈ ಅಲೆಯ ಸೋಂಕಿಗೆ ಕೆಲವು ರೂಪಾಂತರಗಳೂ ಸೇರಿಕೊಂಡಿವೆ.
ಪ್ರತೀ ಜೀವಿಯೂ ವಂಶಾಭಿವೃದ್ಧಿಗೆ ಒಳಗಾಗಿ ಅವುಗಳ ಸಂಖ್ಯೆ ಏರಿದಂತೆ, ನಡುನಡುವೆ ಕೆಲವೊಂದರ ವಂಶವಾಹಿನಿಯ ಡಿ.ಎಸ್.ಐ.ಗಳಲ್ಲಿ ಬದಲಾವಣೆಗಳಾಗಿ ಅದು ಅವುಗಳ ಮುಂದಿನ ಪೀಳಿಗೆಗೆ ರವಾನಿಸಲ್ಪಡುತ್ತದೆ. ಈ ಬದಲಾವಣೆಗಳಿಗೆ ಒಳಗಾದ ಪೀಳಿಗೆಗಳ ಗುಣಲಕ್ಷಣದಲ್ಲೂ ಅಲ್ಪ ಬದಲಾವಣೆಗೊಳಗಾದ ಪೀಳಿಗೆಗಳಿಗೆ `ರೂಪಾಂತರಿ’ಗಳೆಂದು ತೆರೆಯುತ್ತಾರೆ. ಅದೇ ರೀತಿ ಸಾರ್ಸ್-ಕೋವೆ-2 ವೈರಸ್‌ನ ಪೀಳಿಗೆಗಳೂ ಕೆಲವು ಬದಲಾವಣೆಗಳಿಗೆ ಒಳಪಟ್ಟಿವೆ ಮತ್ತು ಇವುಗಳ ಬದಲಾದ ಗುಣಲಕ್ಷಣಗಳ ತೀವ್ರತೆಗನುಗುಣವಾಗಿ ಇವುಗಳಿಂದ ಸೋಂಕಿತಗೊಂಡ ರೋಗಿಗಳ ರೋಗದ ಗುಣಲಕ್ಷಣ ಹಾಗೂ ತೀವ್ರತೆಗಳಲ್ಲಿ ಬದಲಾವಣೆಗಳಾಗಬಹುದು.
3. ಎರಡನೆಯ ಅಲೆಯಲ್ಲಿ ರೋಗ ವೇಗವಾಗಿ ಹರಡುವ, ಯುವಜನರಲ್ಲೂ ಬಾಧಿಸುವ ಮತ್ತು ಸಾವಿನ ಸಾಧ್ಯತೆ ಹೆಚ್ಚಾಗಿದೆಯೇ?
ನಮ್ಮ ದೇಶದ 2ನೇ ಅಲೆಯ ಸೋಂಕಿಗೂ ಕೂಡಾ ಕೆಲವು ರೂಪಾಂತರಗಳು ಕಾರಣವಾದರೂ ಇವುಗಳಲ್ಲಿ ಪ್ರಮುಖವಾದವು-ಯು.ಕೆ. (ಬಿ.1.1.7) ಹಾಗೂ ಭಾರತದಲ್ಲಿ ಕಾಣಿಸಿಕೊಂಡ ಡಬಲ್ ಮ್ಯುಟೆಂಟ್ (ಬಿ.1.167) ಇವು ದೇಶದ ಹಲವು ರಾಜ್ಯಗಳ ಸೋಂಕಿನಲ್ಲಿ, ಮಹತ್ವದ ಪಾತ್ರ ವಹಿಸುತ್ತಿವೆ. ಇವುಗಳು
(1) ಮೂಲ ವೈರಸ್‌ಗಿಂತ ಹೆಚ್ಚು ಶೀಘ್ರವಾಗಿ ಹರಡಬಲ್ಲವು.
(2) ಹಾಗಾಗಿ ಸೋಂಕಿತರ ಸಂಖ್ಯೆ ಹೆಚ್ಚು.
(3) ಇವುಗಳು ಚಿಕ್ಕ ಪ್ರಾಯದವರಲ್ಲಿ ಹರಡುವ ಪ್ರಮಾಣ ಹೆಚ್ಚು.
(4) ಆದರೆ ರೋಗದಿಂದ ಗುಣಮುಖರಾಗಲು ಬೇಕಾದ ಸಮಯ ಕಡಿಮೆ.
ಆದರೆ ಈ ವೈರಸ್‌ಗಳು ಸಾವಿನ ಪ್ರಮಾಣದ ಹೆಚ್ಚಳಕ್ಕೆ ಕಾರಣವೆ? ಎನ್ನುವುದಕ್ಕೆ ಸರಿಯಾದ ಮಾಹಿತಿ ಸಿಕ್ಕಿಲ್ಲ. ಆದರೆ ರೋಗಿಗಳ ಸಂಖ್ಯೆ ಏರಿದಂತೆ ಹಾಗೂ ಸರಿಯಾದ ಚಿಕಿತ್ಸೆಯ ಕೊರತೆಯಾದಾಗ ಒಟ್ಟು ಸಾವಿನ ಸಂಖ್ಯೆ ಏರುವುದು ಸಹಜ. ಈ ಅಲೆಯಲ್ಲಿ ಯಾವುದೇ ಧೀರ್ಘಕಾಲಿಕ ಕಾಯಿಲೆಗಳಿಲ್ಲದ ಕೋವಿಡ್-19 ರೋಗಿಗಳ ಸಾವಿನ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿರುವುದು ಕಂಡು ಬಂದಿದೆ. ಇಲ್ಲಿಯ ತನಕದ ಮಾಹಿತಿಯಂತೆ ಇವುಗಳ ಲಸಿಕೆಗೆ ಪ್ರತಿರೋಧ ತೋರಿಸುತ್ತಿಲ್ಲ.
4. ಎರಡನೆಯ ಅಲೆಯಲ್ಲಿ ರೋಗಲಕ್ಷಣಗಳಲ್ಲಿ ವ್ಯತ್ಯಾಸವಿದೆಯೆ?
ಮೊದಲ ಅಲೆಯ ರೋಗಿಗಳಲ್ಲಿ ಕಂಡುಬರುವ ಎಲ್ಲಾ ಗುಣಲಕ್ಷಣಗಳು ಈ ಅಲೆಯಲ್ಲೂ ಕಂಡು ಬರುತ್ತಿವೆ. ಆದರೆ ಆ ಗುಣಲಕ್ಷಣಗಳ ತೀವ್ರತೆಯಲ್ಲಿ ಹೆಚ್ಚು ಕಡಿಮೆ ಕಂಡು ಬರುತ್ತಿದೆ. ಅದರೊಂದಿಗೆ ಇತರ ಕೆಲವು ಹೊಸ ಲಕ್ಷಣಗಳೂ ಕಾಣಿಸಿಕೊಳ್ಳುತ್ತಿದೆ.
ಅ) ಹಿಂದಿನ ಅಲೆಯಂತೆ ಈ ಅಲೆಯಲ್ಲೂ ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತಿದೆ. ಆದರೆ ಇದು ಹೆಚ್ಚಿನ ತೀವ್ರತೆಯೊಂದಿಗೆ, ರೋಗದ ಪ್ರಾರಂಭಿಕ ಹಂತದಲ್ಲಿ ಹೆಚ್ಚಿದ ಪ್ರಮಾಣದ ರೋಗಿಗಳಲ್ಲಿ ಕಾಣಿಸಿಕೊಳ್ಳುತ್ತಿದೆ. ಹಾಗಾಗಿ ರೋಗಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಆಮ್ಲಜನಕದ ಕೊರತೆಗೆ ಕಾರಣವಾಗಿದೆ. ಆಮ್ಲಜನಕದ ಉಪಯೋಗದ ಅವಶ್ಯಕತೆ ಈ ಅಲೆಯಲ್ಲಿ ಏರಿಕೆಯಾಗಿದೆ.
ಆ) ಹಸಿವಿಲ್ಲದಿರುವಿಕೆ, ವಾಂತಿ, ಭೇಧಿ, ಹೊಟ್ಟೆನೋವು ಮೊದಲಾದ ಜೀರ್ಣಾಂಗದ ತೊಂದರೆಗಳ ಪ್ರಮಾಣ ಹೆಚ್ಚಿದೆ. ಭೇಧಿ ಸೋಂಕಿನ ಪ್ರಾರಂಭದ ಲಕ್ಷಣವಾಗಿರುವ ಪ್ರಮಾಣ.
ಇ) ಕಿವಿಯಲ್ಲಿ ಗುಂಯ್‌ಗುಡುವ ಸದ್ದು ಹಾಗೂ ಅಲ್ಪ, ಮಧ್ಯಮ ಮತ್ತು ತೀವ್ರತರದ ಕಿವುಡುತನ ಕಾಯಿಲೆಯ ಮೊದಲ ವಾರದಲ್ಲಿ ಧಿಢೀರನೆ ಕಾಣಿಸಿಕೊಳ್ಳಬಹುದು.
ಈ) ತುರಿಕೆ, ನೀರು ಸುರಿಯುವುದರೊಂದಿಗೆ ಕಣ್ಣು ಊದಿಕೊಂಡು ಕೆಂಬಣ್ಣಕ್ಕೆ ತಿರುಗಬಹುದು. ಒಂದೇ ಕಣ್ಣು ಹೆಚ್ಚಾಗಿ ಈ ತೊಂದರೆಗೆ ಒಳಗಾಗುವುದು ಇಲ್ಲಿ ಸಾಮಾನ್ಯ ಲಕ್ಷಣ.
ಎ) ತೀವ್ರ ಆಯಾಸ, ನಿಶ್ಯಕ್ತಿ ಕೋವಿಡ್ ಸೋಂಕಿನ ಪ್ರಥಮ ಚಿಹ್ನೆಯಾಗಿರಬಹುದು.
ಏ) ಬಾಯಿ, ನಾಲಗೆ ಒಣಗುವುದು, ನಾಲಗೆಯ ಬಣ್ಣ ಬದಲಾಗುವುದು. ಬಾಯಲ್ಲಿ ಹುಣ್ಣುಗಳಾಗುವುದು.
ಉ) ಧಿಡೀರನೆ ಕಾಣಿಸಿಕೊಂಡು ಎಡೆಬಿಡದೆ ಕಾಡುವ ನೋವು ಶಮನಕಗಳಿಂದಲೂ ಕಡಿಮೆಯಾಗದ ತಲೆನೋವು ಈ ಅಲೆಯ ಸೋಂಕಿನಲ್ಲಿ ಕಾಣಿಸಿಕೊಳ್ಳುತ್ತಿದೆ.
ಹಾಗಾಗಿ ರೋಗದ ಯಾವುದೇ ಗುಣ ಲಕ್ಷಣ ಕಾಣಿಸಿ ಒಂದೆರಡು ದಿನಗಳೊಳಗೆ ಹಾಗೂ ಯಾವುದೇ ಕೋವಿಡ್ ರೋಗಿಯ ಸಂಪರ್ಕಕ್ಕೆ ಬಂದ ನಾಲ್ಕು ದಿನಗಳ ನಂತರ ಕೋವಿಡ್-19 ರ ಪತ್ತೆಗಾಗಿ ಪರೀಕ್ಷೆಗೊಳಪಡುವುದು ಸೂಕ್ತ.
5. ಎರಡನೆಯ ಅಲೆಯಲ್ಲಿ ರೋಗಲಕ್ಷಣಗಳಿದ್ದರೂ ಟೆಸ್ಟಿಂಗ್ ನೆಗೆಟಿವ್ ಬರುತ್ತಿರುವರ ಸಂಖ್ಯೆ ಹೆಚ್ಚಾಗಿದೆಯೇ? ಏಕೆ?
ಮೂಗು ಬಾಯಿಗಳ ದ್ರವವನ್ನು ತೆಗೆದು ಪರೀಕ್ಷೆಗೊಳಪಡಿಸುವ `ಆರ್.ಟಿ.-ಪಿಸಿಆರ್’ ಕಾಯಿಲೆಯ ಇರುವಿಕೆಯನ್ನು ಶೇಕಡಾ 70 ರಿಂದ 80 ಪ್ರಮಾಣ ನಿಖರವಾಗಿ ತಿಳಿಸಿದರೆ, ʻರ‍್ಯಾಟ್’ (ರ‍್ಯಾಪಿಡ್ ಆ್ಯಂಟಿಜನ್ ಟೆಸ್ಟ್) 40-50 ಶೇಕಡಾ ನಿಖರವಾಗಿ ತಿಳಿಸಬಲ್ಲದು.
ಕೋವಿಡ್ ರೋಗಿಗಳ ಸಂಪರ್ಕಕ್ಕೆ ಬಂದು ನಾಲ್ಕು ದಿನದೊಳಗೆ ಪರೀಕ್ಷೆಯ ಮಾದರಿ (ಸ್ಯಾಂಪಲ್) ತೆಗೆದರೆ, ಮಾದರಿ ತೆಗೆಯುವ ವಿಧಾನದಲ್ಲಿ ವ್ಯತ್ಯಯವಾದರೆ ಹಾಗೂ ಮಾದರಿ ತೆಗೆದು ಅದನ್ನು ಪರೀಕ್ಷಿಸುವ ಸಮಯದ ಅಂತರ ಹೆಚ್ಚಿದ್ದು ಆ ಸಮಯದಲ್ಲಿ ಮಾದರಿಯಲ್ಲಿ ಕಾಪಾಡುವಿಕೆಯಲ್ಲಿ ವ್ಯತ್ಯಯವಾದರೆ ಈ ಪರೀಕ್ಷೆಗಳು ತಪ್ಪಾಗಿ ನೆಗೆಟಿವ್ ಫಲಿತಾಂಶ ಕೊಡಬಹುದು ಆದರೆ ರೂಪಾಂತರಿಗಳಿಂದಾಗಿ ಮಾದರಿಯ ಪರೀಕ್ಷೆಯಲ್ಲಿ ನೆಗೆಟಿವ್ ಬರುತ್ತಿರುವ ಬಗ್ಗೆ ನಿಖರವಾದ ಮಾಹಿತಿ ಸಿಕ್ಕಿಲ್ಲ.
6. ಎರಡನೆಯ ಅಲೆಯಲ್ಲಿ ರೋಗ ಚಿಕಿತ್ಸೆಯ ವಿಧಾನದಲ್ಲಿ ಬದಲಾವಣೆಯಿದೆಯೇ? ಬದಲಾವಣೆ ಬೇಕೆ?
ಯಾವುದೇ ವ್ಯಕ್ತಿ ತನ್ನ ಕೋವಿಡ್-19ರ ಪರೀಕ್ಷೆ ಫಲಿತಾಂಶ `ಪೊಸಿಟಿವ್’ ಬಂದರೆ ಗಾಬರಿಯಾಗಬೇಕಿಲ್ಲ. ರೋಗ ಖಾತರಿಯಾದ ಪ್ರತಿಶತ 94 ಜನರಲ್ಲಿ ಇದು ಬೇರೆ `ಸೀತ ಜ್ವರ’ದಂತೆ ಹೆಚ್ಚಿನ ತೊಂದರೆ ನೀಡದೆ ಐದಾರು ದಿನಗಳಲ್ಲಿ ಗುಣವಾಗುವ ಕಾಯಿಲೆ ಜ್ವರ, ಮೈಕೈನೋವು, ಗಂಟಲು ನೋವು, ಕೆಮ್ಮು, ನೆಗಡಿಗೆ ಪ್ಯಾರಸಿಟಮೇಲ್, ಆ್ಯಂಟಿ ಅಲರ್ಜಿಯ ಮಾತ್ರೆಗಳನ್ನು ತೆಗೆದುಕೊಳ್ಳುವುದು, ಕೆಲವು ಸಿರಪುದ್ರವ, ಮನೆ ಮದ್ದುಗಳ ಉಪಯೋಗ ಸಮರ್ಪಕ.
ಈ ಕಾಯಿಲೆ ವೈರಲ್ ರೋಗಾಣುವಿನಿಂದ ಬರುವುದು. ಯಾವುದೇ ಆ್ಯಂಟಿಬಯೋಟಿಕ್ ಈ ವೈರಲ್‌ಗಳನ್ನು ನಾಶಮಾಡುವ ಗುಣವನ್ನು ಹೊಂದಿಲ್ಲ. ಹಾಗಾಗಿ ಅನಾವಶ್ಯಕಾವಾದ ಆ್ಯಂಟಿಬಯಾಟಿಕ್‌ಗಳ ಉಪಯೋಗ ರೋಗಿಯಲ್ಲಿ ಅಡ್ಡಪರಿಣಾಮಕ್ಕೆ ಕಾರಣವಾಗಬಹುದು. ಇಂತಹ ಉಪಯೋಗಗಳಿಂದ ಈಗಾಗಲೇ ಹಲವು ರೋಗಾಣುಗಳು ಬಹಳಷ್ಟು ಆ್ಯಂಟಿಬಯೋಟಿಕ್‌ಗಳಿಗೆ ಪ್ರತಿರೋಧ ಬೆಳೆಸಿಕೊಂಡು ಹಲವು ಕಾಯಿಲೆಗಳ ಸಮರ್ಪಕ ಚಿಕಿತ್ಸೆಗೆ ದೊಡ್ಡ ದೊಡ್ಡ ಸವಾಲು ಒಡ್ಡುತ್ತಿವೆ.
ಆದರೆ ಮನೆಯಲ್ಲಿ ಚಿಕಿತ್ಸೆ ಪಡೆಯುವ ರೋಗಿ, ಕುಟುಂಬದ ಸೋಂಕುರಹಿತ ತನ್ನಿಂದ ಸೋಂಕು ತಗಲದಂತೆ ಇತರ ಸದಸ್ಯರಿಗೆ ತನ್ನನ್ನು ಸಂಪೂರ್ಣ ಬೇರ್ಪಡಿಸಿಕೊಳ್ಳಬೇಕಾದದ್ದು, ಮಾಸ್ಕ ಧರಿಸುವುದು ಅವಶ್ಯಕ. ತಮ್ಮ ವೈದ್ಯರ ನಿರಂತರ ಸಂಪರ್ಕದಲ್ಲಿದ್ದು ಅವರ ಸಲಹೆಯಂತೆ ಚಿಕಿತ್ಸೆ ಪಡೆಯುವುದು ಸೂಕ್ತ. ಕೊನೆಯಲ್ಲಿ ಕ್ರಮಪ್ರಚಾರ ರಕ್ತದಲ್ಲಿನ ಆಮ್ಲಜನಕದ ಒತ್ತಡ (ಎಸ್.ಲು.02 ಲೆವೆಲ್), ಜ್ವರ, ನಾಡಿ ಬಡಿತಗಳನ್ನು ಪರೀಕ್ಷಿಸಿಕೊಳ್ಳುವುದು ಅಗತ್ಯ.
(1) ಎದೆ ಬಿಗಿತ, ಎದೆ ನೋವು ಉಸಿರಾಟದ ತೊಂದರೆ ಇದ್ದರೆ, ಆಕ್ಸಿಜನ್ ಮಟ್ಟ 94ರ ಕ್ಕಿಂತ ಕೆಳಗಿಳಿದರೆ.
(2) 6-7 ದಿನಗಳಾದರೂ ಜ್ಷರ ಮುಂದುವರಿಯುತ್ತಿದ್ದರೆ.
(3) ಚರ್ಮ ಬಿಳಿಚಿಕೊಂಡು ನೀಲಿವರ್ಣಕ್ಕೆ ತಿರುಗಿದರೆ.
(4) ಕೆಮ್ಮು ಅತೀ ಹೆಚ್ಚಾದರೆ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸೇರಿಕೊಳ್ಳುವುದು ಅವಶ್ಯಕ, ಆಮ್ಲಜನಕ (ಆಕ್ಸಿಜನ್) ದ ಅವಶ್ಯಕತೆ ಯಾವಾಗ?
ದೇಹದ ಆಮ್ಲಜನಕದ ಮಟ್ಟ ಅಳೆಯಲಿರುವ ಸಾಧನ – ಫಿಂಗರ್‌ಟಿಪ್ & ಪಲ್ಸ್ ಒಕ್ಸಿಮೀಟರ್. ಇದನ್ನು ಉಪಯೋಗಿಸಿ ಕೈಗಳ ಯಾವುದೇ ಬೆರಳಿನಿಂದಲೂ `ಆಕ್ಸಿಜನ್’ನ ಸಾಂದ್ರತೆ ಅಳೆಯಬಹುದು. ಆದರೆ ಆ ಬೆರಳು ತಣ್ಣಗಿರಬಾರದು, `ನೈಲ್ ಪೋಲಿಷ್’ ಹಚ್ಚಿರಬಾರದು, ಬೆರಳು ಅಲುಗಾಡುತ್ತಿರಬಾರದು ಹಾಗೂ ಉಪಕರಣ `ಬ್ಯಾಟರಿ’ ಸಮರ್ಪಕವಾಗಿರಬೇಕು.
ಆರೋಗ್ಯವಂತರಲ್ಲಿ ಆಕ್ಸಿಜನ್ ಮಟ್ಟ ಸಾಮಾನ್ಯವಾಗಿ 94 ರಿಂದ 100 ರ ನಡುವೆ ಇರುತ್ತದೆ. ಈ ಮಟ್ಟ 94 ಕ್ಕಿಂತ ಕೆಳಗೆ ಬಂದರೆ ಆಸ್ಪತ್ರೆಗೆ ಸೇರುವುದು ಒಳ್ಳೆಯದು. 92 ಕ್ಕಿಂತ ಈ ಮಟ್ಟ ಕೆಳಗೆ ಬಂದರೆ ಆಗ ಆಕ್ಸಿಜನ್ ಪ್ರಾರಂಭಿಸುವುದು ಸೂಕ್ತ. ಆದರೆ ಯಾವುದೇ ಕಾರಣಕ್ಕೆ ಆಸ್ಪತ್ರೆಗೆ ಸೇರುವುದು ಧೀರ್ಘ ಕಾಲ ತೆಗೆದರೆ ರೋಗಿ ತನ್ನ ಕೆಳಹೊಟ್ಟೆ ಮತ್ತು ಮೇಲ್ತೋಡೆಯ ಮಟ್ಟಕ್ಕೆ ಎರಡು, ಕಾಲು ಪಾದಕ್ಕಿಂತ ಮೇಲ್ಮಟ್ಟದಲ್ಲಿ ಒಂದು, ಎದೆಯ ಮೇಲ್ಬಾಗದ ಮಟ್ಟಕ್ಕೆ ಬರುವಂತೆ ಒಂದು ದಿಂಬನ್ನು ಇಟ್ಟು ಅದರ ಮೇಲೆ ಕವಚಿ ಮಲಗಿ ಅರ್ಧ ಗಂಟೆಯೂ ಅದಕ್ಕೂ ಹೆಚ್ಚು ಕಾಲ ಧೀರ್ಘ ಉಸಿರಾಟ ಪ್ರಾರಂಭಿಸುವುದರಿಂದ ಆಕ್ಸಿಜನ್ ಏರುತ್ತದೆ. ಇನ್ನು ತಲೆಯ ಕೆಳಗೆ ಕೆಲವು ದಿಂಬುಗಳಿಟ್ಟು ಎಡ ಯಾ ಬಲ ಪಕ್ಕದಲ್ಲಿ ಮಲಗಿ ಧೀರ್ಘ ಉಸಿರಾಟವೂ ಇಲ್ಲಿ ಪ್ರಯೋಜನಕಾರಿ ಹಾಗೂ ಕುಳಿತು ಧೀರ್ಘ ಉಸಿರಾಟದ ವ್ಯಾಯಮಗಳೂ ಪ್ರಯೋಜನಕಾರಿ.
ಮನೆಯಲ್ಲಿ ಆಕ್ಸಿಜನ್ ನೀಡಲು ವ್ಯವಸ್ಥೆ ಇದ್ದರೆ ನೀಡಬಹುದು. ಉಸಿರಾಟದ ತೊಂದರೆ ತೀವ್ರವಾಗಿದ್ದರೆ ಆಕ್ಸಿಜನ್ ಸಾಂದ್ರಯೆ 93 ಯೂ ಅದಕ್ಕಿಂತ ಕೆಳಗಿಳಿದರೆ ವೈದ್ಯರ ಸಲಹೆ ಪಡೆದು ಸೂಕ್ತ ಪ್ರಮಾಣದಲ್ಲಿ ಸ್ಟೀರೋಯ್ಡ್ ಉಪಯೋಗ ಸೂಕ್ತ.
ಆದರೆ ಸ್ಟೀರೈಡ್ ದೇಹದ ರೋಗ ನಿರೋಧಕ ಶಕ್ತಿಯನ್ನು ಕುಗ್ಗಿಸುವುದು. `ಡಿ’ ಆಗ ಈ ವೈರಸ್‌ನ ಬೆಳವಣಿಗೆಗೆ ಇದು ಸಹಕಾರಿಯಾಗುವುದು. ಹಾಗಾಗಿ ಕಾಯಿಲೆಯ ಪ್ರಥಮ ಹಂತದಲ್ಲಿ ವೈರಸ್‌ಗಳು ಶೀಘ್ರ ವಂಶಾಭಿವೃದ್ಧಿ ಮಾಡಿಕೊಳ್ಳುತ್ತಿರುವಾಗ ಅನಗತ್ಯ ಸ್ಥಿತಿಯಲ್ಲಿ ಸ್ಟೀರೋಯ್ಡ್ ಉಪಯೋಗ ಆಪತ್ತಿಗೆ ಆಹ್ವಾನ ಕೊಟ್ಟಂತೆ ಉಸಿರಾಟದ ತೊಂದರೆ ಕಾಣಿಸಿಕೊಂಡು ಆಕ್ಸಿಜನ್ ಮಟ್ಟ 94 ಕ್ಕಿಂತ ಕೆಳಗೆ ಕುಸಿದಾಗ ಇದರ ಉಪಯೋಗ ಸೂಕ್ತ. ಆದರೆ ಹೆಚ್ಚಾಗಿ ಕಾಯಿಲೆ ಪ್ರಾರಂಭವಾದ 6-7 ದಿನಗಳ ನಂತರ ರೋಗಿಯ ಪರಿಸ್ಥಿತಿ ಹೊಂದಿಕೊಂಡು ಇದರ ಉಪಯೋಗ ಉತ್ತಮ.
ರೋಗಿಯ ಆಕ್ಸಿಜನ್ ಮಟ್ಟ 95 ರಿಂದ 96 ರ ತನಕ ಇರಲು ಬೇಕಾದ ಸಾಂದ್ರತೆಯಲ್ಲಿ ಆಕ್ಸಿಜನ್ ನೀಡಬೇಕು. (ಧೀರ್ಘಕಾಲಿಕ ಶ್ವಾಸಕೋಶದ ಕಾಯಿಲೆಯಿಂದ ಬಳಲುವ ರೋಗಿಗಳಲ್ಲಿ ಆಕ್ಸಿಜನ್ ಮಟ್ಟ 93-94 ಇರುವುದರಿಂದ ಅದೇ ಮಟ್ಟ ಕಾಪಾಡಲು ಬೇಕಾದ ಆಕ್ಸಿಜನ್ ನೀಡಿದರೆ ಸಾಕು. ನಿಮಿಷಕ್ಕೆ 5 ಲೀಟರ್ ಆಕ್ಸಿಜನ್ ನಂತೆ ನೀಡಲು ಪ್ರಾರಂಭಿಸಿ, ರೋಗಿಯ ದೇಹದ ಆಕ್ಸಿಜನ್ ಮಟ್ಟ ಸಹಜ ಸ್ಥಿತಿಗೆ ಬರುವ ತನಕ ಆಕ್ಸಿಜನ್ ಸಾಂದ್ರತೆ ಹೆಚ್ಚಿಸುತ್ತ ಹೋಗಬೇಕಾಗುತ್ತದೆ. ಆದರೆ ನಿಮಿಷಕ್ಕೆ 15 ಲೀಟರ್ ಆಕ್ಸಿಜನ್ ನೀಡಿದರು ರೋಗಿಯ ದೇಹದಲ್ಲಿ ಇದರ ಸಾಂದ್ರತೆ ನಿರೀಕ್ಷಿತ ಮಟ್ಟ ಮುಟ್ಟದಿದ್ರೆ ಆಗ ಐ.ಸಿ.ಯು (ಇಂಟೆಸ್ಸಿಸ್ ಕೇರ್ ಯುನಿಟ್) ಗೆ ರೋಗಿಯನ್ನು ಸ್ಥಳಾಂತರಿಸುವುದು ಅವಶ್ಯಕವಾಗುತ್ತದೆ. ನಿಮಿಷಕ್ಕೆ 25 ಲೀಟರ್ ತನಕ ಆಕ್ಸಿಜನ್‌ನ ಸಾಂದ್ರತೆ ಹೆಚ್ಚಿಸಬಹುದು.
7. ಕೋವಿಡ್ ಚಿಕಿತ್ಸೆಯಲ್ಲಿ ರೆಮೆಡೆಸ್ವಿರ್ ಪರಿಣಾಮಕಾರಿಯೇ? ಕೋವಿಡ್ ರೋಗಪರೀಕ್ಷೆಯಲ್ಲಿ ಸಿ.ಟಿ. ಸ್ಕ್ಯಾನ್ ನ ಪಾತ್ರವೇನು? ಈ ಕುರಿತು ಇರುವ ವಿವಾದವೇನು?
ಕೋವಿಡ್-19 ರೋಗದ ಹೆಸರಿನೊಂದಿಗೆ ಅತ್ಯಂತ ಹೆಚ್ಚು ಕೇಳಿ ಬರುವ ಸಿ.ಟಿ. ಸ್ಕ್ಯಾನ್ ಹಾಗೂ ರೆಮ್‌ಡೆಸಿವಿರ್ ತಜ್ಞರ ಅಭಿಪ್ರಾಯದಂತೆ ಹಲವು ಪ್ರಾರಂಭಿಕ ಹಂತದಲ್ಲಿರುವ ಕೋವಿಡ್-19 ರ ರೋಗಿಗಳನ್ನು ಶ್ವಾಸಕೋಸದ ಸಿ.ಟಿ. ಸ್ಕ್ಯಾನ್‌ಗೆ ಒಳಪಡಿಸಿದಾಗ, ಶ್ವಾಸಕೋಶದಲ್ಲಿ ಈ ರೋಗಕ್ಕೆ ಸಂಬಂಧಿಸಿದ ಕಲೆಗಳು ಕಾಣಿಸಿಕೊಂಡಿದ್ದರು. ಆದರೆ ಇಂತಹ ರೋಗಿಗಳು ಯಾವುದೇ ಚಿಕಿತ್ಸೆಯ ಅಗತ್ಯವಿಲ್ಲದೆ ಸಂಪೂರ್ಣ ಗುಣಮುಖರಾಗಿದ್ದರು. ಹಾಗಾಗಿ ಕೋವಿಡ್ ಇದೆ ಎಂದು ಪತ್ತೆಯಾದೊಡನೆ ಸಿ.ಟಿ. ಸ್ಕ್ಯಾನ್ ಮಾಡುವುದು ಸರಿಯಲ್ಲ.
ಇದರಿಂದ ಶರೀರ, ಅತೀ ಹೆಚ್ಚಿನ ಪ್ರಮಾಣದಲ್ಲಿ ಅಪಾಯಕರವಾದ ರೇಡಿಯೆಷನ್‌ಗೆ ಒಳಗಾಗುತ್ತದೆ.
ಇದು ದುಬಾರಿ.
ಚಿಕ್ಕ ಪುಟ್ಟ ಊರುಗಳಲ್ಲಿ ಇದು ಲಭ್ಯವಿಲ್ಲ.
ಸೋಂಕು ಕಾಣಿಸಿದ 5-6 ದಿನಗಳಲ್ಲಿ, ಉಸಿರಾಟದ ತೊಂದರೆ ಕಾಣಿಸಿಕೊಂಡರೆ ರೋಗಿಯನ್ನು ಈ ಸ್ಕ್ಯಾನ್‌ಗೆ ಒಳಪಡುವುದು ಉತ್ತಮ. ಎಕ್ಸ್-ರೇ- ಇದು ಸಿ.ಟಿ. ಸ್ಕ್ಯಾನ್‌ನಷ್ಟು ನಿಖರವಾಗಿ ಅಲ್ಲದಿದ್ದರೂ ಶ್ವಾಸಕೋಶಗಳಲ್ಲಿನ ಸೋಂಕು ಪತ್ತೆ ಹಚ್ಚುವಲ್ಲಿ ಸಹಕಾರಿ.
ಇಲ್ಲಿ ದೇಹಕ್ಕೆ ಸಿಗುವ ರೇಡಿಯೇಷನ್ ಪ್ರಮಾಣ ಸಿ.ಟಿ. ಸ್ಕ್ಯಾನ್‌ಗಿಂತ ಬಹಳ ಕಡಿಮೆ. ಬಹಳ ಅಗ್ಗ. ಚಿಕ್ಕ ಪುಟ್ಟ ಪ್ರದೇಶಗಳಲ್ಲೂ ಈ ಸೌಲಭ್ಯ ಲಭ್ಯ.
ಇಂದು ಜನರು ಕೋವಿಡ್ ಕಾಯಿಲೆಗೆ ರಾಮಬಾಣವೆಂದು ಭಾವಿಸುವ ಕಾಳಸಂತೆಯಲ್ಲಿ ದುಬಾರಿ ಬೆಲೆಗೆ ಮಾರಾಟವಾಗುತ್ತಿರುವ ರೆಮ್‌ಡೆಸಿವಿರ್, ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಹಲವು ತಜ್ಞರ ಪ್ರಕಾರ ಹೆಚ್ಚಿನ ಪ್ರಯೋಜನಕಾರಿಯಲ್ಲಿ. ಇದು ವೈರಸ್‌ಗಳ ನಾಶಕ ಔಷಧವಾದರೂ ಸಾರ್ಸ್-ಕೋವ್-2 ವೈರಸ್‌ಗಳ ಸಾರದಲ್ಲಿ ಹೆಚ್ಚು ಸಫಲವಾಗಿಲ್ಲ. ಇದರ ಉಪಯೋಗದಿಂದ ಏನಾದರು ಪ್ರಯೋಜನವಿದ್ದರೆ ಅದು ಈ ವೈರಸ್ಸ್ ರೋಗಿಗಳ ದೇಹದಲ್ಲಿ ಶ್ರೀಘ್ರಾವಧಿಯಲ್ಲಿ ವಂಶಾಭಿವೃದ್ಧಿಗೊಳ್ಳುವ ಪ್ರಥಮ ಹಂತ ಹಾಗೂ ದ್ವೀತಿಯ ಹಂತದಲ್ಲಿ. ಪ್ರಾರಂಭದಲ್ಲಿ ರೋಗಿಯ ದೇಹದಿಂದ ಸಾಮಾನ್ಯವಾಗಿ ಸಾಧಾರಣಾ 10 ದಿನಗಳಲ್ಲಿ ಈ ವೈರಸ್‌ಗಳು ಮಯಾವಾಗುವುದರಿಂದ ಕಾಯಿಲೆಯ ಕಾಯಿಲೆಯ ಮುಂದಿನ ಹಂತಗಳಲ್ಲಿ ಇದರ ಬಳಕೆ ಅಪ್ರಯೋಜಕ ಹಾಗೂ ಈ ಔಷಧ ಕಿಡ್ನಿ ಹಾಗೂ ಲಿವರ್‌ಗಳ ಮೇಲೆ ತೀಕ್ಷ್ಣ ಅಡ್ಡಪರಿಣಾಮ ಬೀರುವ ಸಾಧ್ಯತೆ ಇದೆ. ಮುಂದಿನ ಹಂತಗಳಲ್ಲಿ ದೇಹದಲ್ಲಿ ಕಂಡುಬರುವ ತೀವ್ರತರ ಗುಣಲಕ್ಷಣಗಳಿಗೆ ವೈರಾಣುಗಳು ಕಾರಣವಲ್ಲ. ಬದಲು ಅದಾಗಲೇ ಇವುಗಳಿಂದ ಘಾಸಿಗೊಳಗಾದ ಪ್ರಮುಖ ಅಂಗಗಳ ನಿಷ್ಕ್ರೀಯತೆ.