ಕೊರೊನಾ ನಿಯಂತ್ರಣ: ತಾಂತ್ರಿಕ ಸಲಹಾ ಸಮಿತಿಯಿಂದ 13 ಅಂಶಗಳ ಶಿಫಾರಸ್ಸು

ಬೆಂಗಳೂರು: ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ತಾಂತ್ರಿಕ ಸಲಹಾ ಸಮಿತಿ ರಾಜ್ಯ ಸರ್ಕಾರಕ್ಕೆ 13 ಅಂಶಗಳ ಶಿಫಾರಸ್ಸನ್ನ ನೀಡಿದೆ. ಆ ಶಿಫಾರಸ್ಸನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ಸೂಚನೆ ನೀಡಿದೆ.

ಆರೋಗ್ಯ ಸಚಿವ ಡಾ. ಸುಧಾಕರ್​ ಜೊತೆ ಈ ಸಂಬಂಧ ಚರ್ಚೆ ನಡೆಸಿರುವ ಸಮಿತಿ ಅಲ್ಲಿ ಚರ್ಚಿಸಲಾದ ಅಂಶಗಳನ್ನೇ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ ಎನ್ನಲಾಗಿದೆ. ಆ ಮೂಲಕ ಈಗಾಗಲೇ ಮುಖ್ಯಮಂತ್ರಿಗಳು ತಿಳಿಸಿರುವಂತೆ ಲಾಕ್​ಡೌನ್​ ಮಾಡುವ ಕ್ರಮವನ್ನ ಕೈ ಬಿಟ್ಟಿದೆ. ಲಾಕ್​ಡೌನ್​ಗೆ ಬದಲಾಗಿ ಈ 13 ಅಂಶಗಳ ಶಿಫಾರಸ್ಸನ್ನೇ ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ಸಲಹೆ ನೀಡಲಾಗಿದೆ.

ತಜ್ಞರು ಕೊಟ್ಟ ಶಿಫಾರಸ್ಸಿನ ಕೆಲವು ಅಂಶಗಳು ಹೀಗಿವೆ..

1) ರಾಜ್ಯದ 8 ನಗರಗಳಲ್ಲಿ ಜಾರಿಯಾಗಿರುವ ಕೊರೊನಾ ಕರ್ಫ್ಯೂವನ್ನ ಯಥಾವತ್ತಾಗಿ ರಾಜ್ಯಾದ್ಯಾಂತ ವಿಸ್ತರಣೆ ಮಾಡುವುದು.

2) ಗಡಿಭಾಗಗಳಲ್ಲಿ ಕಟ್ಟೆಚ್ಚರ ವಹಿಸುವುದು ಅನಿವಾರ್ಯವಾಗಿದೆ, ಕನಿಷ್ಠ ಮುಂದಿನ ಒಂದೂವರೆ ತಿಂಗಳು ಗಡಿಭಾಗಗಳಲ್ಲಿ ಹದ್ದಿನ ಕಣ್ಣು ಇಡಲೇಬೇಕು. ಅಂತರರಾಜ್ಯ ಪ್ರಯಾಣಿಕರ ಮೇಲೆ ಕಡ್ಡಾಯವಾಗಿ ನಿಗಾವಹಿಸಬೇಕು.

3) ಹೊಟೇಲ್‌ಗಳಲ್ಲಿ ಸೇವೆಯನ್ನ ಸ್ಥಗಿತಗೊಳಿಸುವುದು, ಕೇವಲ ಪಾರ್ಸೆಲ್‌ಗೆ ಮಾತ್ರ ಅವಕಾಶ ನೀಡುವುದು. ಬಾರ್​ ಮತ್ತು ರೆಸ್ಟೋರೆಂಟ್‌ಗಳಲ್ಲೂ ಇದೇ ನಿಯಮ ಜಾರಿಗೊಳಿಸುವುದು.

4) ಬೆಳಿಗ್ಗೆ 5 ಘಂಟೆಯಿಂದ 10 ಘಂಟೆಯವರೆಗೂ ಹಾಗೂ ಸಂಜೆ 5 ಘಂಟೆಯಿಂದ ರಾತ್ರಿ 10 ಘಂಟೆಯವರೆಗೂ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕೊಟ್ಟು, ಹಗಲಿನ ಸಮಯದಲ್ಲೂ 10 ಘಂಟೆಯಿಂದ 5 ಘಂಟೆಯವರೆಗೂ ಕರ್ಫ್ಯೂ ಜಾರಿಗೊಳಿಸಿದ್ರೆ ಕೊರೊನಾ ಹಿಡಿತಕ್ಕೆ ತರಬಹುದು.

5) ಈಗ ಆರಂಭವಾಗಿರುವ ಸಿನಿಮಾ ಮಂದಿರಗಳು, ಜಿಮ್‌ಗಳು ಬಂದ್​ ಮಾಡಿದ್ರೆ, ಒಳಿತು. ಸ್ವಿಮ್ಮಿಂಗ್​ ಫೂಲ್‌ಗಳನ್ನು ಬಂದ್​ ಮಾಡಲೇಬೇಕು.

6) ಬೆಂಗಳೂರಿನಲ್ಲಿ ವಾರ್ಡ್​ ‌ಮಟ್ಟದಲ್ಲಿ 45 ವರ್ಷ ಮೇಲ್ಪಟ್ಟವರನ್ನು ಗುರುತಿಸಿ, ಲಸಿಕೆ ಹಾಕಿಸಿಕೊಂಡಿದ್ದಾರೋ ಇಲ್ಲವೋ ಎಂಬುದನ್ನು ಪತ್ತೆ ಹಚ್ಚಲು ತಂಡ ರಚಿಸಬೇಕು. 1ನೇ ಡೋಸ್​​ ಪಡೆದುಕೊಂಡವರು 2ನೇ ಡೋಸ್‌ಗೆ ಬಂದಿಲ್ಲವಾದ್ರೆ, ಅಂತಹವರನ್ನು ಕೂಡ ಪತ್ತೆ ಹಚ್ಚುವ ಕೆಲಸ ಮಾಡುವುದು.

7) ಸಾರ್ವಜನಿಕರ ಹಿತಾಸಕ್ತಿಯ ಹಿನ್ನೆಲೆಯಲ್ಲಿ, ಸೆಲೆಬ್ರಿಟಿಗಳ ಕಡೆಯಿಂದ ಕೊರೊನಾ ಸೋಂಕಿನ ಎಚ್ಚರಿಕೆಯ ಬಗ್ಗೆ ಜಾಗೃತಿ ಮೂಡಿಸುವುದು.

8)ಜನಸಂದಣಿ ನಿಯಂತ್ರಿಸಬೇಕು, ಜನಸಂದಣಿ ಇರುವ ಮಾರ್ಕೆಟ್​ ಮತ್ತಿತರ ಕಡೆ 144 ಸೆಕ್ಷನ್​ ಜಾರಿ‌ ಮಾಡಬೇಕು.

9)ಬಿಬಿಎಂಪಿಯ ಪ್ರತೀ ವಾರ್ಡ್​ಗೆ ಎರಡು ಆಯಂಬುಲೆನ್ಸನ್ನ ನಿಯೋಜನೆ ಮಾಡಬೇಕು.
ಖಾಸಗಿ ಆಸ್ಪತ್ರೆಗಳಿಗೆ ಅಗತ್ಯ ಪ್ರಮಾಣದ ರೆಮ್ಡಿಸಿವಿರ್​ ಪೂರೈಕೆ ಮಾಡಬೇಕು.

10) ಹೋಂ ಐಸೋಲೇಷನ್​ನಲ್ಲಿ ಇರುವವರಿಗೆ ಮೆಡಿಕಲ್​‌ ಕಿಟ್​, ಆಕ್ಸಿಮೀಟರ್​ ಒದಗಿಸಿಬೇಕು, ಅವರ ಬಗ್ಗೆ ಸೂಕ್ತ ನಿಗಾ ಇರಿಸಬೇಕು.

11) ಆಸ್ಪತ್ರೆಯಲ್ಲಿ ಗುಣಮುಖರಾಗುತ್ತಿರುವ ರೋಗಿಗಿಗಳನ್ನು ಕೊರೊನಾ ಕೇರ್​ ಸೆಂಟರ್​ಗಳಿಗೆ ಸ್ಥಳಾಂತರಿಸಬೇಕು.

12)ಆಸ್ಪತ್ರೆಗಳಿಗೆ ಅಗತ್ಯ ಪ್ರಮಾಣದ ಆಕ್ಸಿಜನ್​, ಬೆಡ್​ಗಳು, ಔಷಧಿಗಳ ಪೂರೈಕೆ ಮತ್ತು ದಾಸ್ತಾನು ಮಾಡಬೇಕು.

13)ನಕಲಿ ಆಕ್ಸಿಮೀಟರ್​ಗಳನ್ನು ನಿಷೇಧಿಸಬೇಕು.
ರಾಜ್ಯದ ಉತ್ತರ ಭಾಗದ ಕೆಲವು ಜಿಲ್ಲೆಗಳಿಗೆ ಟೆಲಿ ಐಸಿಯು, ಟೆಲಿ ಟ್ರೀಟ್ಮೆಂಟ್​ ಸೇವೆ ಪೂರೈಸಬೇಕು.
ವೈದ್ಯರು, ಸ್ಟಾಫ್​ ನರ್ಸ್​ ಗಳಿಗೆ ಕೊರೊನಾ ಪ್ರಿವೆನ್ಷನ್​ ಬಿಹೇವಿಯರ್​ ತರಬೇತಿ ನೀಡಬೇಕು.

ಈ ನಿಯಮಗಳನ್ನ ಕಟ್ಟುನಿಟ್ಟಾಗಿ ಜಾರಿಗೊಳಿಸಿದ್ರೆ ಕೊರೊನಾ ಕಂಟ್ರೋಲ್​ ಮಾಡುವ ಸಾಧ್ಯತೆಗಳಿದೆ ಎಂದು ತಜ್ಞರ ತಂಡ ಮಾಹಿತಿ ನೀಡಿದೆ.

ಲಾಕ್ಡೌನ್ ಇಲ್ಲ ; ಸಿಎಂ ಸ್ಪಷ್ಟನೆ : ಲಾಕ್ಡೌನ್ ಕುರಿತು ಎದ್ದಿರುವ ಊಹಾಪೋಹಗಳಿಗೆ ಸಿಎಂ ಬಿಎಸ್ ಯಡಿಯೂರಪ್ಪ ಸ್ಪಷ್ಟನೆ ನೀಡಿದ್ದು, ಸದ್ಯಕ್ಕೆ ಲಾಕ್ಡೌನ್​ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.

ಕರ್ನಾಟಕದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವ ಹಿನ್ನೆಲೆ ರಾಜ್ಯ ಸರ್ಕಾರ ಮತ್ತೆ ಲಾಕ್ಡೌನ್ ಮೊರೆ ಹೋಗಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಇದಕ್ಕೆ ಇಂಬು ನೀಡುವಂತೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸಹ ತಾಂತ್ರಿಕ ಸಲಹಾ ಸಮಿತಿ ಲಾಕ್ಡೌನ್ ಮಾಡಲು ಸೂಚಿಸಿದೆ  ಎಂದು ಹೇಳಿದ್ದರು. ಆದರೆ, ಇದೆಲ್ಲವನ್ನೂ ಸ್ಪಷ್ಟವಾಗಿ ನಿರಾಕರಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜ್ಯದಲ್ಲಿ ಸದ್ಯಕ್ಕೆ ಲಾಕ್ಡೌನ್ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ

Donate Janashakthi Media

Leave a Reply

Your email address will not be published. Required fields are marked *