“ಕೋವಿಡ್-19 ಲಸಿಕೆಯ ಸುತ್ತ ಪ್ರಶ್ನೆಗಳ ಹುತ್ತ”ಎಂಬ ಈ ಲೇಖನ ಸರಣಿ 3 ವಾರಗಳ ಹಿಂದೆ ಬರೆದಿದ್ದು ಈ ನಡುವೆ ಕೇಂದ್ರ ಸರಕಾರದ ಕೊವಿಡ್-19 ವ್ಯಾಕ್ಸೀನ್ ನೀತಿ ತುಂಡು ತುಂಡಾಗಿ ರೂಪುಗೊಳ್ಳಲಾರಂಭಿಸಿದೆ. ಈ ಲೇಖನ ಸರಣಿಯಲ್ಲಿ ನಿರೀಕ್ಷಿಸಿದಂತೆ ಎದುರಾಗಬೇಕಾದ ಎಲ್ಲ ಸಮಸ್ಯೆಗಳನ್ನು ಎದುರಿಸಲು ವಾಸ್ತವಿಕ ನೆಲೆಯ ಮೇಲೆ ವೈಜ್ಞಾನಿಕ ಕ್ರಮಗಳನ್ನು ಹೊಂದಿರುವ ಸಮಗ್ರ ಯೋಜನೆ ಕಂಡು ಬರುತ್ತಿಲ್ಲ. ಕೊವಿದ್-19 ಬಿಕ್ಕಟ್ಟನ್ನು ಎದುರಿಸುವಲ್ಲಿ ಮೊದಲಿನಿಂದಲೂ ಇದ್ದಂತೆ ಅದನ್ನು ರಾಜಕೀಯ ಉದ್ದೇಶಗಳಿಗೆ ಹೇಗೆ ಬಳಸಿಕೊಳ್ಳಬಹುದು ಎಂಬುದೇ ಪ್ರಧಾನವಾಗುತ್ತಿದೆ. ಇಂತಹ ಪ್ರಯತ್ನದಲ್ಲಿ ಬಿಕ್ಕಟ್ಟನ್ನು ಇನ್ನಷ್ಟು ತೀವ್ರವಾಗಿಸುವ ಅಪಾಯವಿದ್ದೇ ಇದೆ. ಜೊತೆಗೆ ಮೋದಿ ಸರಕಾರದ ಸ್ಥಾಯಿ ನೀತಿಗಳಾದ ‘ಹುಸಿ-ದೇಶಪ್ರೇಮ’ ಮತ್ತು ‘ಹಸು-ವಿಜ್ಞಾನ’ಗಳಿಗೆ ಅದು ಹಿಂದಿನಂತೆ ಬಲಿಯಾಗುತ್ತಿರುವಂತೆ ಕಂಡು ಬರುತ್ತದೆ.
– ವಸಂತರಾಜ ಎನ್.ಕೆ.
ಬಿಹಾರ ಚುನಾವಣೆಯಲ್ಲಿ ಎನ್.ಡಿ.ಎ ಅಧಿಕಾರಕ್ಕೆ ಬಂದರೆ ಕೊವಿಡ್-19 ವ್ಯಾಕ್ಸೀನನ್ನು ಬಿಹಾರದಲ್ಲಿ ಉಚಿತವಾಗಿ ಕೊಡಲಾಗುತ್ತದೆ ಎಂದು ಬಿಜೆಪಿ ಘೋಷಿಸಿತ್ತು. ಹಾಗಾದರೆ ವ್ಯಾಕ್ಸೀನ್ ಬೆಲೆ ಕುರಿತು ನೀತಿ ಎನ್.ಡಿ.ಎ-ಬಿಜೆಪಿ ಮತ್ತು ವಿರೋಧ ಪಕ್ಷಗಳ ಆಳ್ವಿಕೆಯ ರಾಜ್ಯಗಳಲ್ಲಿ ಭಿನ್ನವಾಗಿರುತ್ತದೆಯೆ ಎಂಬ ಪ್ರಶ್ನೆಗೆ ಸ್ಪಷ್ಟೀಕರಣ ಕೊಡುವ ಬದಲು ಇನ್ನಷ್ಟು ಗೊಂದಲ ಸೃಷ್ಟಿಸಲಾಗಿದೆ. ಬಿಜೆಪಿ ಮತ್ತು ಸರಕಾರದ ವಿವಿಧ ವಕ್ತಾರರು ವ್ಯಾಕ್ಸೀನ್ ಬೆಲೆ ನೀತಿಯ ಕುರಿತು ಭಿನ್ನವಾದ ಹೇಳಿಕೆಗಳನ್ನು ನೀಡುತ್ತಾ ಬಂದಿದ್ದಾರೆ. ಒಬ್ಬರು ವ್ಯಾಕ್ಸೀನ್ ಉಚಿತವಾಗಿರುತ್ತದೆ ಎಂದು ಹೇಳಿದರೆ, ಇನ್ನೊಬ್ಬರು ಈ ನಿರ್ಣಯವನ್ನು ರಾಜ್ಯಗಳಿಗೆ ಬಿಡಲಾಗುವುದು ಎಂದು ಅಪ್ಪಣೆ ಕೊಡಿಸಿದ್ದಾರೆ. ಹಾಗಾದರೆ ರಾಜ್ಯಗಳಿಗೆ ಕೇಂದ್ರ ಉಚಿತವಾಗಿ ವಿತರಣೆ ಮಾಡುವುದೇ ಅಥವಾ ಯಾವ ಬೆಲೆಯಲ್ಲಿ ಕೊಡುವುದು ಎಂಬುದನ್ನು ತಿಳಿಸಿಲ್ಲ. ವ್ಯಾಕ್ಸೀನ್ ಖರೀದಿ, ಸಾಗಾಣಿಕೆ, ಶೇಖರಣೆ, ವಿತರಣೆ, ಫಲಾನುಭವಿಗಳ ಗುರುತಿಸುವಿಕೆ ಇತ್ಯಾದಿ ಜವಾಬ್ದಾರಿಗಳನ್ನು ಮತ್ತು ಅದರ ವೆಚ್ಚವನ್ನು ಕೇಂದ್ರ ಅಥವಾ ರಾಜ್ಯ ಸರಕಾರಗಳಲ್ಲಿ ಯಾವುವು ಹೇಗೆ ನಿಭಾಯಿಸುವುದು ಎಂಬುದು ಇನ್ನೂ ಸ್ಪಷ್ಟವಿಲ್ಲ. ಮೋದಿ ಸರಕಾರದ ಹಿಂದಿನ ಕೊವಿಡ್-19 (ಲಾಕ್ ಡೌನ್ ತಂದ ವಲಸೆ, ನಷ್ಟ, ಪರಿಹಾರ ಇತ್ಯಾದಿ) ಸಮಸ್ಯೆಗಳ ನಿರ್ವಹಣೆಗಳ ಅನುಭವದ ಆಧಾರದ ಮೇಲೆ ಹೇಳುವುದಾದರೆ, ವ್ಯಾಕ್ಸಿನ್ ನಲ್ಲೂ ಎಲ್ಲ ನೀತಿ ನಿರ್ಣಯಗಳನ್ನು ಕೇಂದ್ರೀಕರಿಸಿ ಅದರ ಜಾರಿಯ ವೆಚ್ಚ, ಸವಾಲು, ಜವಾಬ್ದಾರಿಗಳನ್ನು ರಾಜ್ಯ ಸರಕಾರಗಳ ಮೇಲೆ ಹೊರಿಸುವ ಸಾಧ್ಯತೆಯೇ ಹೆಚ್ಚು. ಈಗಾಗಲೇ ಪ್ರತಿ ಹೊಸ ಕೇಂದ್ರದ ನೀತಿ/ಕ್ರಮಗಳಿಂದ ಸಂಪನ್ಮೂಲಗಳನ್ನು ಕಳೆದುಕೊಳ್ಳುತ್ತಾ ಹೆಚ್ಚೆಚ್ಚು ಜವಾಬ್ದಾರಿಯನ್ನು ಮಾತ್ರ ಹೊರಿಸಲಾಗಿರುವ ರಾಜ್ಯ ಸರಕಾರಗಳು ಇವನ್ನು ನಿಭಾಯಿಸಬಲ್ಲವೇ ಎಂಬುದು ಜನತೆಯ ಜೀವನ್ಮರಣದ ಪ್ರಶ್ನೆಯಾಗಿದೆ.
ವ್ಯಾಕ್ಸೀನ್ ಯಾರಿಗೆ ಆದ್ಯತೆಯಲ್ಲಿ ಕೊಡಲಾಗುವುದು ಎಂಬುದರ ಕುರಿತು ಮಾತ್ರ (ಅದು ಸಹಜ ಮತ್ತು ಸರ್ವವಿದಿತವಾಗಿದ್ದರೂ) ಸ್ಥೂಲ ನೀತಿಯನ್ನು ನಿರ್ಧರಿಸಲಾಗಿದೆ. ಮೊದಲನೆಯ ಆದ್ಯತೆಯನ್ನು ಸಹಜವಾಗಿಯೇ ಕೊವಿಡ್-10 ಚಿಕಿತ್ಸೆಯಲ್ಲಿ ತೊಡಗಿರುವ ವೈದ್ಯರು, ನರ್ಸುಗಳು, ಮುಂತಾದ ಮುಂಚೂಣಿ ಆರೋಗ್ಯ ಸಿಬ್ಬಂದಿಗಳಿಗೆ ಕೊಡಲಾಗಿದೆ. ಎರಡನೆಯ ಆದ್ಯತೆಯನ್ನು ಪೋಲಿಸ್, ವಿದ್ಯುತ್, ಜಲನಿರ್ವಹಣೆ ಇತ್ಯಾದಿ ಅಗತ್ಯ ಸೇವಾ ಸಿಬ್ಬಂದಿ, ಸರಕಾರಿ ಮತ್ತು ಸ್ಥಳೀಯ ಆಡಳಿತದ ನೌಕರರು ಇತ್ಯಾದಿ ಸಾರ್ವಜನಿಕ ಸೇವೆಯಲ್ಲಿ ತೊಡಗಿರುವ ಸಿಬ್ಬಂದಿಗೆ ಕೊಡಲಾಗಿದೆ. ಮೂರನೆಯ ಆದ್ಯತೆಯನ್ನು 50 ವರ್ಷ ಮೇಲ್ಪಟ್ಟ ಹೃದಯ-ಶ್ವಾಸಕೋಶ ಸಂಬಂಧಿ ಮತ್ತಿತರ ತೀವ್ರ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಕೊಡಲಾಗಿದೆ. ಈ ಮೂರು ಆದ್ಯತೆಗಳ ವ್ಯಾಪ್ತಿಯಲ್ಲಿ ಸುಮಾರು 3 ಕೋಟಿ ಜನ ಬರುತ್ತಾರೆ ಮತ್ತು ಇಷ್ಟು ವ್ಯಾಕ್ಸೀನ್ ಖರೀದಿಗೆ ಯೋಜಿಸಲಾಗಿದೆ ಎನ್ನಲಾಗಿದೆ. ಮೊದಲನೆಯ ಎರಡನೆಯ ಆದ್ಯತೆಯ ಜನರನ್ನು ಗುರುತಿಸುವುದು ಕಷ್ಟದ ಕೆಲಸವಲ್ಲ. ಆದರೆ ಮೂರನೆಯ ಆದ್ಯತೆಯ (50 ವರ್ಷ ಮೇಲ್ಪಟ್ಟ ತೀವ್ರ ಕಾಯಿಲೆಗಳಿಂದ ಬಳಲುತ್ತಿರುವ) ಜನರ ಗುರುತಿಸುವಿಕೆ ಅಷ್ಟೇನೂ ಸುಲಭವಲ್ಲ. ಇದಕ್ಕೆ ಯಾವ ಕ್ರಮಗಳನ್ನು ಯಾರು ತೆಗೆದುಕೊಳ್ಳುವುದು ಎಂಬುದು ಸ್ಪಷ್ಟವಿಲ್ಲ. ಇನ್ನು ವ್ಯಾಕ್ಸೀನ್ ಈ ಜನರಿಗೆ (ವಿಶೇಷವಾಗಿ ಮೂರನೆಯ ಆದ್ಯತೆಯವರಿಗೆ) ಉಚಿತವಾಗಿರುತ್ತದೆಯೆ ಕಡ್ಡಾಯವಾಗಿರುತ್ತದೆಯೆ ಎಂಬುದೂ ಇನ್ನೂ ಸ್ಪಷ್ಟವಿಲ್ಲ.
ಈ ನಡುವೆ ಫೈಝರ್, ಮೊಡರ್ನಾ, ಆಕ್ಸಫರ್ಡ್-ಆಸ್ಟ್ರಾಜೆನೆಕಾ ವ್ಯಾಕ್ಸೀನುಗಳಲ್ಲಿ ಎಲ್ಲ ಅಥವಾ ಕೆಲವಕ್ಕೆ ಯು.ಎಸ್, ಯು.ಕೆ., ಜರ್ಮನಿ, ಮತ್ತಿತರ ದೇಶಗಳಲ್ಲಿ ತುರ್ತು ಬಳಕೆಗೆ ಆಯಾ ಔಷಧಿ ನಿಯಂತ್ರಣ ಸಂಸ್ಥೆಗಳು ಅನುಮತಿ ನೀಡಿವೆ. ಭಾರತದಲ್ಲೂ ಮೊದಲು ಆಕ್ಸಫರ್ಡ್-ಆಸ್ಟ್ರಾಜೆನೆಕಾದ ‘ಕೊವಿಡ್-ಶೀಲ್ಡ್’ ಮತ್ತು ಆ ಮೇಲೆ ಭಾರತ್ ಬಯೋಟೆಕ್ ನ ‘ಕೊವ್ಯಾಕ್ಸೀನ್’ ವ್ಯಾಕ್ಸೀನುಗಳ ತುರ್ತು ಬಳಕೆಗೆ ಸಿ.ಡಿ.ಎಸ್.ಸಿ.ಒ (ಕೇಂದ್ರೀಯ ಔಷಧಿ ಮಾನಕ ನಿಯಂತ್ರಣ ಸಂಸ್ಥೆ) ಅನುಮತಿ ನೀಡಿದೆ. ಆಕ್ಸಫರ್ಡ್-ಆಸ್ಟ್ರಾಜೆನೆಕಾ ಪುಣೆಯಲ್ಲಿರುವ ಸೆರಂ ಇನ್ಸ್ಟಿಟ್ಯೂಟ್ ಜೊತೆ ವಿಶ್ವವ್ಯಾಪಿ ಮಾರುಕಟ್ಟೆಗೆ ವ್ಯಾಕ್ಸೀನ್ ಉತ್ಪಾದನೆಯ ಕರಾರು ಹೊಂದಿದೆ. ಹೈದರಾಬಾದಿನಲ್ಲಿರುವ ಭಾರತ್ ಬಯೋಟೆಕ್, ಐ.ಸಿ.ಎಂ.ಆರ್ (ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ) ಮತ್ತು ಎನ್.ಐ.ವಿ (ನೇಶನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ) ಗಳೊಂದಿಗೆ ಸಹಕಾರದಲ್ಲಿ ಇರುವ ‘ಭಾರತೀಯ’ ಪ್ರಯತ್ನ. ಆದರೆ ಭಾರತ ಸರಕಾರ ಮತ್ತು ಅನುಮತಿ ನೀಡುವ ಸಂಸ್ಥೆ ಅನುಮತಿ ನೀಡಿಕೆಯನ್ನು ನಿಭಾಯಿಸಿದ ರೀತಿ ವ್ಯಾಪಕ ಟೀಕೆ ಮತ್ತು ಆತಂಕಕ್ಕೆ ಒಳಗಾಗಿದೆ. ಮೊದಲಿಗೆ ಆಕ್ಸಫರ್ಡ್-ಆಸ್ಟ್ರಾಜೆನೆಕಾ-ಸೆರಂ ಇನ್ಸ್ಟಿಟ್ಯೂಟ್ ನ ‘ಕೊವಿಡ್-ಶೀಲ್ಡ್’ ಗೆ ತುರ್ತು ಬಳಕೆಗೆ ಅನುಮತಿ ನೀಡಲಾಯಿತು. ಆ ನಂತರ ಬಿಜೆಪಿ-ಪರ ಟ್ರೋಲ್ ಪಡೆಯು ಭಾರತ್ ಬಯೋಟೆಕ್ ನ ‘ಭಾರತೀಯ’ ‘ಕೊವ್ಯಾಕ್ಸೀನ್’ಗೆ ಇಂತಹುದೇ ತುರ್ತು ಬಳಕೆಗೆ ಅನುಮತಿ ಕೊಡದೆ ‘ವಿದೇಶಿ’ ವ್ಯಾಕ್ಸೀನ್ ಗೆ ಅನುಮತಿ ನೀಡಿದ್ದರ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಪ್ರಚಾರ ನಡೆಸಿತು. ಆಳುವ ಪಕ್ಷದ ಪ್ರಚಾರಯಂತ್ರದ ಈ ಒತ್ತಡಕ್ಕೆ ಮಣಿದ ಸಿ.ಡಿ.ಎಸ್.ಸಿ.ಒ ‘ಕೊವ್ಯಾಕ್ಸೀನ್’ಗೆ (ಕೆಲವು ಷರತ್ತುಗಳನ್ನು ವಿಧಿಸಿದರೂ) ತುರ್ತು ಬಳಕೆಗೆ ಅನುಮತಿ ನೀಡಿತು. ತುರ್ತು ಬಳಕೆಗೆ ಅನುಮತಿ ನೀಡಲು ಮೂರನೇ ಹಂತದ ವ್ಯಾಕ್ಸೀನ್ ಪರಿಣಾಮಕಾರಿತನದ ಮಾಹಿತಿ ಅತ್ಯಗತ್ಯ ಎಂಬ ತನ್ನದೇ ನಿಯಮಗಳನ್ನು ಅದು ಮುರಿದದ್ದು ಸ್ಪಷ್ಟವಾಗಿತ್ತು. ಈ ಕುರಿತು ಪ್ರಶ್ನೆಗಳು ಎದ್ದಾಗ ಮೂರನೇ ಹಂತದ ವ್ಯಾಕ್ಸೀನ್ ಪರಿಣಾಮಕಾರಿತನದ ಮಾಹಿತಿ ಭಾರತ್ ಬಯೋಟೆಕ್ ನೀಡಿಲ್ಲ ಎಂದು ಸಿ.ಡಿ.ಎಸ್.ಸಿ.ಒ ಒಪ್ಪಿಕೊಂಡಿತು. ಈ ನಿರ್ಣಯವನ್ನು ಪ್ರಶ್ನಿಸಿದವರನ್ನು ಯಥಾ ಪ್ರಕಾರ ಬಿಜೆಪಿ-ಪರ ಟ್ರೋಲ್ ಪಡೆಯು ‘ವಿದೇಶಿ ಏಜೆಂಟರು’, ‘ದೇಶ-ವಿರೋಧಿ’ಗಳು ಎಂದು ಜರೆಯಿತು. ಇದು ಈಗ ಜಗತ್ತಿನಲ್ಲಿ ಹರಡುತ್ತಿರುವ ‘ವ್ಯಾಕ್ಸೀನ್ ರಾಷ್ಟ್ರವಾದ’ದ ಹೇಯ ದೇಸಿ ಆವೃತ್ತಿಯಾಗಿದೆ. ಸ್ವದೇಶಿ ಎಚ್.ಎ.ಎಲ್ ಲೈಸೆನ್ಸ್ ಉತ್ಪಾದನೆಯ ಬದಲಿಗೆ ರ್ಯಾಫೆಲ್ ನಿಂದ ಮೋದಿ ಸರಕಾರ ನೇರವಾಗಿ ಖರೀದಿಸಿದಾಗ ಇವರ ‘ದೇಶಪ್ರೇಮ’ ಎಲ್ಲಿ ಹೋಗಿತ್ತು ಎಂದೂ ಪ್ರಶ್ನಿಸಲಾಯಿತು. ಈ ನಡುವೆ ಸೆರಂ ಇನ್ಸ್ಟಿಟ್ಯೂಟ್ ಮತ್ತು ಭಾರತ್ ಬಯೋಟೆಕ್ ಸಂಸ್ಥೆಗಳ ಮುಖ್ಯಸ್ಥರು ಮತ್ತು ವಕ್ತಾರರ ನಡುವೆ ಸಾರ್ವಜನಿಕ ಚಕಮಕಿ ನಡೆಯಿತು. ಸೆರಂ ಇನ್ಸ್ಟಿಟ್ಯೂಟ್ ವಕ್ತಾರರು ಭಾರತ್ ಬಯೋಟೆಕ್ ಪರಿಣಾಮಕಾರಿತನವನ್ನು ಪ್ರಶ್ನಿಸಿ ಅದು ಒಂದು ‘ಬದಲಿ’ (ಬ್ಯಾಕ್ ಅಪ್) ಮಾತ್ರ ಎಂದರೆ, ಭಾರತ್ ಬಯೋಟೆಕ್ ಅವರನ್ನು ‘ಸ್ವದೇಶೀ’ ಪೈಪೋಟಿಯನ್ನು ಸಹಿಸದವರು ಎಂದು ಟೀಕಿಸಿದರು.
ಭಾರತದ ಸಾಂಕ್ರಾಮಿಕ ವಿಜ್ಞಾನ ಪರಿಣತರು, ವಿಜ್ಞಾನಿ ಸಮುದಾಯ ಮತ್ತು ಬಿಜಿವಿಎಸ್-ಎ.ಐ.ಪಿ.ಎಸ್.ಎನ್ ನಂತಹ ಜನವಿಜ್ಞಾನ ಸಂಘಟನೆಗಳು ಎರಡೂ ತುರ್ತು ಬಳಕೆಗೆ ಅನುಮತಿ ನೀಡಿದ್ದನ್ನು ಹಲವು ಕಾರಣಗಳಿಗಾಗಿ ಪ್ರಶ್ನಿಸಿದವು. ಮೊದಲನೆಯದಾಗಿ, ಎರಡೂ ನಿರ್ಣಯಗಳಲ್ಲಿ ಆಯಾ ಸಂಸ್ಥೆಗಳು ತಮ್ಮ ವ್ಯಾಕ್ಸೀನ್ ಪ್ರಯೋಗಗಳಲ್ಲಿ ಸಲ್ಲಿಸಲಾದ ಮಾಹಿತಿ/ದತ್ತಾಂಶಗಳನ್ನು ಸಾರ್ವಜನಿಕಗೊಳಿಸಿಲ್ಲ. ಅಗತ್ಯವಾದ ಪಾರದರ್ಶಕತೆಯನ್ನು ತೋರಿಸಿಲ್ಲ. ಆಕ್ಸಫರ್ಡ್-ಆಸ್ಟ್ರಾಜೆನೆಕಾ-ಸೆರಂ ಇನ್ಸ್ಟಿಟ್ಯೂಟ್ ನ ‘ಕೊವಿಡ್-ಶೀಲ್ಡ್’ ಯು.ಕೆ, ಯು.ಎಸ್ ಗಳಲ್ಲಿ ಮೂರನೇ ಹಂತದ ಪರಿಣಾಮಕಾರಿತನದ ಮಾಹಿತಿ/ದತ್ತಾಂಶಗಳನ್ನು ಸಲ್ಲಿಸಿದ್ದರೂ, ಅದು ಭಾರತದಲ್ಲಿ ಮಾಡಲಾದ ಇಂತಹ ಮಾಹಿತಿ/ದತ್ತಾಂಶಗಳನ್ನು ಸಲ್ಲಿಸಿದೆಯೇ ಎಂಬ ಪ್ರಶ್ನೆಗೆ ಸಿ.ಡಿ.ಎಸ್.ಸಿ.ಒ ಮೌನವಹಿಸಿದೆ. ಎರಡನೆಯದಾಗಿ, ಭಾರತ್ ಬಯೋಟೆಕ್ ವ್ಯಾಕ್ಸೀನನ್ನು ‘ಕ್ಲಿನಿಕಲ್ ಟ್ರಯಲ್ ಮೋಡ್’ ನಲ್ಲಿ ಸಾಮೂಹಿಕ ಬಳಕೆಗೆ ಅನುಮತಿ ನೀಡಿದ್ದರ ಅರ್ಥಹೀನತೆಯನ್ನು ಎತ್ತಿ ತೋರಿಸಿದ್ದಾರೆ. ಪರಿಣಾಮಕಾರಿತನದ ಕುರಿತು ಖಾತ್ರಿ ಪಡಿಸಿಕೊಳ್ಳದೆ ಮುಂಚೂಣಿ ವೈದ್ಯಕೀಯ ಸಿಬ್ಬಂದಿಯನ್ನು ‘ಪ್ರಯೋಗ ಪಶು’ಗಳಾಗಿ ಬಳಸಿಕೊಳ್ಳಲಾಗುತ್ತಿದೆಯೇ ಎಂದು ಅವರು ಪ್ರಶ್ನಿಸಿದ್ದಾರೆ. ಮೂರನೆಯದಾಗಿ, ಸಿ.ಡಿ.ಎಸ್.ಸಿ.ಒ ನಂತಹ ವೈಜ್ಞಾನಿಕ ಸಂಸ್ಥೆಗಳು ಸರಕಾರದ ಒತ್ತಡದಲ್ಲಿ ತಮ್ಮ ನಿಯಮಗಳನ್ನು ಉಲ್ಲಂಘಿಸಿ ಇಂತಹ ನಿರ್ಣಯ ಕೈಗೊಳ್ಳುವುದು, ಆಳುವ ಪಕ್ಷ ತನ್ನ ಟ್ರೋಲ್ ಪಡೆಗಳನ್ನು ‘ವ್ಯಾಕ್ಸೀನ್ ರಾಷ್ಟ್ರವಾದ’ ಉದ್ರೇಕಿಸಿ ಇಂತಹ ಒತ್ತಡವನ್ನು ರಾಜಕೀಯ ಉದ್ದೇಶಗಳಿಗಾಗಿ ಹೇರುವುದು, ಎರಡೂ ಅಪಾಯಕಾರಿ ಮತ್ತು ಆತಂಕಕಾರಿಯಾಗಿದೆ. ಮಾಹಿತಿ/ದತ್ತಾಂಶಗಳ ಆಧಾರದ ಮೇಲೆ ವೈಜ್ಞಾನಿಕವಾಗಿ ನಿರ್ಣಯ ತೆಗೆದುಕೊಳ್ಳದಿರುವುದು ಸಾಮೂಹಿಕ ವ್ಯಾಕ್ಸೀನ್ ಕಾರ್ಯಕ್ರಮದ ಸಮಗ್ರ ವೈಜ್ಞಾನಿಕ ನಿರ್ವಹಣೆಯ ಕುರಿತು ಗಂಭೀರ ಅನುಮಾನಗಳನ್ನು ಸೃಷ್ಟಿಸಿದೆ.
ಕೊನೆಯದಾಗಿ, ಇದು ಪರಿಣಾಮಕಾರಿ ವ್ಯಾಕ್ಸೀನನ್ನು ಸ್ವದೇಶಿಯಾಗಿ ಸಂಶೋಧಿಸುವುದರಲ್ಲಿ ಮತ್ತು ನಿಜವಾದ ಆತ್ಮನಿರ್ಭರತೆಯನ್ನು (ಅಥವಾ ಸ್ವಾವಲಂಬನೆ) ಕೊವಿಡ್ ವ್ಯಾಕ್ಸೀನಿನಲ್ಲಿ ಸಾಧಿಸುವುದರಲ್ಲಿ ಮೋದಿ ಸರಕಾರದ ವೈಫಲ್ಯವನ್ನು ಮುಚ್ಚಿಕೊಳ್ಳಲು ಮಾಡಲಾಗುತ್ತಿದೆ ಎಂದೂ ಟೀಕಿಸಲಾಗಿದೆ. ಖ್ಯಾತ ಸಾಂಕ್ರಾಮಿಕ ಪರಿಣತರಾದ ಜೇಕಬ್ ಜಾನ್ ಮತ್ತು ಎಂ.ಎಸ್.ಶೇಷಾದ್ರಿ ಭಾರತಕ್ಕೆ ಹಲವು ಸಕಾರಾತ್ಮಕ ಅಂಶಗಳಿದ್ದರೂ ಸರಕಾರದ ಸಕಾಲಿಕ ನಾಯಕತ್ವದ ಅಭಾವದಿಂದಾಗಿ ‘ವ್ಯಾಕ್ಸೀನ್ ಓಟ’ದಲ್ಲಿ ಭಾರತ ಹಿಂದೆ ಬಿದ್ದಿದೆ. ಭಾರತ ಸರಕಾರ ಚೀನಾ ರಶ್ಯಾಗಳಲ್ಲಿ ಮಾಡಿದಂತೆ ಒಂದು ‘ರಾಷ್ಟ್ರೀಯ ಮಿಶನ್’ ವಿಧಾನದಲ್ಲಿ ನಿರ್ವಹಿಸಿದ್ದರೆ, ಭಾರತ ಮೊದಲ ಸ್ಥಾನದಲ್ಲಿ ಇರುತ್ತಿತ್ತು ಎಂದು ಒಂದು ಲೇಖನದಲ್ಲಿ (ದಿ ಹಿಂದೂ ಜನವರಿ 3, 2021) ಅವರು ಅಭಿಪ್ರಾಯ ಪಟ್ಟಿದ್ದಾರೆ. ಅಭಿವೃದ್ಧ ಬಯೋಟೆಕ್ನೊಲಜಿ ಪ್ರಯೋಗಾಲಯಗಳು, ಸಮರ್ಥ ವೈಜ್ಞಾನಿಕ ನಾಯಕತ್ವ, ಬೃಹತ್ ಮುಂಚೂಣಿ ಸಾಮೂಹಿಕ ವ್ಯಾಕ್ಸೀನ್ ಉತ್ಪಾದನಾ ಸ್ಥಾವರಗಳು ಅಲ್ಲದೆ ಎರಡು ಜಾಗತಿಕ ಕೊವಿಡ್ ಸಂಸ್ಥೆಗಳ (ಗ್ಲೋಬಲ್ ಪ್ಯಾಂಡೆಮಿಕ್ ಪ್ರಿಪೇರ್ಡ್ ನೆಸ್ ಬೋರ್ಡ್ ಮತ್ತು ಕೋಲಿಶನ್ ಫಾರ್ ಎಪಿಡೆಮಿಕ್ ಪ್ರಿಪೇರ್ಡ್ ನೆಸ್ ಇನ್ನೋವೇಶನ್ಸ್) ಸದಸ್ಯತ್ವ – ಇವು ಭಾರತ ಹೊಂದಿದ್ದ ಸಕಾರಾತ್ಮಕ ಅಂಶಗಳು ಎಂದು ಅವರು ಗುರುತಿಸಿದ್ದಾರೆ. ‘ರಾಷ್ಟ್ರೀಯ ಮಿಶನ್’ ವಿಧಾನದಲ್ಲಿ ನಿರ್ವಹಿಸದ ಮೋದಿ ಸರಕಾರದ ವೈಫಲ್ಯದ ನಡುವೆಯೂ, ಎರಡು ಖಾಸಗಿ ಕಂಪನಿಗಳ ಪ್ರಯತ್ನದಿಂದ ಭಾರತ ಜಾಗತಿಕ ವ್ಯಾಕ್ಸೀನ್ ಭೂಪಟದಲ್ಲಿ ಉಳಿಯುವಂತಾಯಿತು. ಆದರೆ ಅವುಗಳ ಸೀಮಿತ ಸಂಪನ್ಮೂಲಗಳಿಂದ ಈ ಓಟ ಗೆಲ್ಲಲು ಸಾಧ್ಯವಾಗಲಿಲ್ಲ. ಈ ವೈಫಲ್ಯ ಯಾಕಾಯಿತು ಎಂದು ಸರಕಾರದ ನೀತಿ ನಿರ್ಧಾರಕರು, ವೈಜ್ಞಾನಿಕ ಸಂಸ್ಥೆಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಇದರರ್ಥ ಆಕ್ಸಫರ್ಡ್-ಆಸ್ಟ್ರಾಜೆನೆಕಾ-ಸೆರಂ ಇನ್ಸ್ಟಿಟ್ಯೂಟ್ ನ ‘ಕೊವಿಡ್-ಶೀಲ್ಡ್’ ಆಗಲಿ ಅಥವಾ ಭಾರತ್ ಬಯೋಟೆಕ್ ನ ‘ಕೊವ್ಯಾಕ್ಸೀನ್’ ಆಗಲಿ ಕೊವಿಡ್ ಪರಿಣಾಕಾರಿತನದಲ್ಲಿ ಹಿಂದೆ ಬೀಳಬಹುದು ಎಂಬ ಅನುಮಾನವಲ್ಲ. ಆದರೆ ಕೊಟ್ಯಾಂತರ ಜನರ ಜೀವನ್ಮರಣದ ಪ್ರಶ್ನೆಯಾಗಿರುವ ವ್ಯಾಕ್ಸೀನಿನ ಪರಿಣಾಮಕಾರಿತನ ಮಾಹಿತಿ/ದತ್ತಾಂಶಗಳ ಆಧಾರದ ಮೇಲೆ ವೈಜ್ಞಾನಿಕವಾಗಿ ತೆಗೆದುಕೊಳ್ಳಬೇಕು. ಇದರಲ್ಲಿ ‘ದೇಶಪ್ರೇಮ’ವಾಗಲಿ ಅಥವಾ ರಾಜಕೀಯ ಸಿದ್ಧಾಂತದ ಒತ್ತಡವಾಗಲಿ ಇರಬಾರದು. ಔಷಧಿ ಅನುಮತಿ ಕೊಡುವ ಮತ್ತು ಇತರ ಸಾರ್ವಜನಿಕ ಸರಕಾರಿ ಸಂಸ್ಥೆಗಳು ವೈಜ್ಞಾನಿಕವಾಗಿ ಮತ್ತು ಪಾರದರ್ಶವಾಗಿ ಇರಬೇಕು ಎಂಬುದಷ್ಟೇ ಮುಖ್ಯ ಕಾಳಜಿ. ಆದರೆ ಸಾಮೂಹಿಕ ಕೊವಿಡ್ ವ್ಯಾಕ್ಸೀನ್ ಕಾರ್ಯಕ್ರಮದ ವಿವರಗಳನ್ನು ರೂಪಿಸುವ ಸಿ.ಡಿ.ಎಸ್.ಸಿ.ಒ ಮತ್ತು ಇತರ ವೈಜ್ಞಾನಿಕ ಸಂಸ್ಥೆಗಳಿಂದ ಬರುತ್ತಿರುವ “ಸುದ್ದಿಗಳು” ಆತಂಕಕಾರಿಯಾಗಿವೆ. ಉದಾಹರಣೆಗೆ ಆಕ್ಸಫರ್ಡ್-ಆಸ್ಟ್ರಾಜೆನೆಕಾ ವ್ಯಾಕ್ಸೀನ್ ನ ಎರಡನೆಯ ಡೋಸನ್ನು ಒಂದು ತಿಂಗಳ ಅಂತರದಲ್ಲಿ ಕೊಟ್ಟರೆ ಅತ್ಯಂತ ಪರಿಣಾಮಕಾರಿ ಎನ್ನಲಾಗಿದೆ. ಆದರೆ ಯು.ಕೆ ಅದನ್ನು ಮೂರು ತಿಂಗಳ ಅಂತರದಲ್ಲಿ ಕೊಡಲು ನಿರ್ಧರಿಸಿದೆ. ಯು.ಕೆ ಯಲ್ಲಿ ಹೊಸ ಕೊವಿಡ್ ಪ್ರಕರಣಗಳು ಸ್ಫೋಟಗೊಂಡ ತುರ್ತು ಪರಿಸ್ಥಿತಿ ಇರುವುದರಿಂದ ಹೆಚ್ಚಿನ ಜನರಿಗೆ ಮೊದಲ ಡೋಸ್ ಕೊಡುವುದಕ್ಕೆ ಆದ್ಯತೆ ಕೊಡಲಾಗುತ್ತಿದೆ ಎಂಬ ಕಾರಣವನ್ನು ಇದಕ್ಕೆ ಕೊಡಲಾಗಿದೆ. ಆದರೆ ಭಾರತದಲ್ಲಿ ಹೊಸ ಕೊವಿಡ್ ಪ್ರಕರಣಗಳು ಕಡಿಮೆಯಾಗುತ್ತಿದ್ದು ಅಂತಹ ಯಾವುದೇ ತುರ್ತು ಇಲ್ಲ. ಆದರೆ ಇಲ್ಲೂ ಪ್ರಾಯೋಗಿಕ ಕಾರಣಗಳಿಗಾಗಿ ಮೂರು ತಿಂಗಳ ಅಂತರದಲ್ಲಿ ಕೊಡಲು ನಿರ್ಧರಿಸಲಾಗಿದೆ ಎಂದು ಹೇಳಲಾಗುತ್ತಿದೆ. ಇದು ಆತಂಕಕಾರಿ ಸುದ್ದಿ. ಇಂತಹ ನಿರ್ಣಯಗಳನ್ನು ಸರಕಾರ, ಆಡಳಿತ ತೆಗೆದುಕೊಂಡು ವೈಜ್ಞಾನಿಕ ಸಂಸ್ಥೆಗಳಿಗೆ ನಿರ್ದೇಶನ ಕೊಡಲಾಗುತ್ತಿದೆ ಎಂಬ ಗುಮಾನಿ ಇದೆ. ಸಾಮೂಹಿಕ ಕೊವಿಡ್ ವ್ಯಾಕ್ಸೀನ್ ಕಾರ್ಯಕ್ರಮವು ಅತ್ಯಂತ ಸಂಕೀರ್ಣ ಕಾರ್ಯಕ್ರಮ. ಮೋದಿ ಸರಕಾರ ಲಾಕ್ ಡೌನ್ ನಿಂದ ಆರಂಭಿಸಿ ಕೊವಿಡ್ ಪರಿಸ್ಥಿತಿಯನ್ನು ಅತ್ಯಂತ ಅವೈಜ್ಞಾನಿಕವಾಗಿ ನಿಭಾಯಿಸಿದೆ. ತಟ್ಟೆ ಬಟ್ಟಲು ಬಾರಿಸುವ, ದೀಪ ಉರಿಸಿ ಕೊವಿಡ್ ಓಡಿಸುವ ‘ಹಸು ವಿಜ್ಞಾನ’ (ಹಸು ಆಕ್ಸಿಜನ್ ಬಿಡುತ್ತದೆ, ದನದ ಮೂತ್ರ ಎಲ್ಲ ಕಾಯಿಲೆಗಳನ್ನು ವಾಸಿ ಮಾಡುವ ದಿವ್ಯ ಔಷಧ, ಕೊವಿಡ್ ಗೆ ಆಯುರ್ವೇದದಲ್ಲಿ ಔಷಧಿ ಇದೆ ಇತ್ಯಾದಿ) ಗಳನ್ನು ಈಗಾಗಲೇ ನೋಡಿದ್ದೇವೆ. ‘ಹುಸಿ ದೇಶಪ್ರೇಮ’, ‘ಹಸು ವಿಜ್ಞಾನ’ ಮತ್ತು ಎಲ್ಲವನ್ನೂ ರಾಜಕೀಯ ಉದ್ದೇಶಗಳಿಗೆ ತಿರುಚುವ ಪ್ರವೃತ್ತಿಗೆ ಕಡಿವಾಣ ಹಾಕದಿದ್ದರೆ, ಅತ್ಯಂತ ಸಂಕೀರ್ಣವಾದ ಸಾಮೂಹಿಕ ಕೊವಿಡ್ ವ್ಯಾಕ್ಸೀನ್ ಕಾರ್ಯಕ್ರಮ ಅಪಾಯಕಾರಿ ವೈಫಲ್ಯದತ್ತ ಹೆಜ್ಜೆಯಿಡುತ್ತಿದೆ. ಇದನ್ನು ತಡೆಯಲು ವಿಜ್ಞಾನಿ ಸಮುದಾಯ, ಜನವಿಜ್ಞಾನ ಚಳುವಳಿಗಳು, ಜನಸಂಘಟನೆಗಳು, ರಾಜ್ಯ ಸರಕಾರಗಳು ಸಾಮೂಹಿಕ ಕೊವಿಡ್ ವ್ಯಾಕ್ಸೀನ್ ಕಾರ್ಯಕ್ರಮದ ವಿವರಗಳಿಗೆ ಮತ್ತು ಪಾರದರ್ಶಕತೆಗೆ ಒತ್ತಾಯಿಸಬೇಕಾಗಿದೆ. ಅವನ್ನು ಜಾಗ್ರತೆಯಿಂದ ಪರಿಶೀಲಿಸಲಾಗಿದೆ. ಅದನ್ನು ‘ಹುಸಿ ದೇಶಪ್ರೇಮ’, ‘ಹಸು ವಿಜ್ಞಾನ’ಪೀಡಿತ ಸರಕಾರ ಮತ್ತು ಆಳುವ ಪಕ್ಷದ ಮರ್ಜಿಗೆ ಬಿಡಲು ಸಾಧ್ಯವಿಲ್ಲ.