ಭಾರತದಲ್ಲಿ ಕೋವಿಡ್ ಲಸಿಕೆ ಉತ್ಪಾದನೆ ಮತ್ತು ಪೂರೈಕೆ ಪ್ರಮಾಣ ಹೇಗಿದೆ?

ಭಾರತದಲ್ಲಿ ನಿರೀಕ್ಷೆ ಮೀರಿ ವ್ಯಾಪಕವಾಗಿ ಹಬ್ಬುತ್ತಿರುವ ಕೊರೊನಾ ಸೋಂಕು ಜನರನ್ನು ಚಿಂತಿಗೀಡು ಮಾಡೀದೆ.  ಕೊರೊನಾ ಚಿಕಿತ್ಸೆಯಲ್ಲಿ ಬಳಸಲಾಗುತ್ತಿರುವ ಲಸಿಕೆಯೆ ಕೊರತೆಯೂ ಎದ್ದು ಕಾಣುತ್ತಿದೆ? ಮೇ 01 ರಿಂದ 18 ವರ್ಷದ ಮೇಲ್ಪಟ್ಟವರೆಲ್ಲರಿಗೂ ಲಸಿಕೆ ಪಡೆಯಲು ಅವಕಾಶ ನೀಡಲಾಗಿದೆ. ಇತ್ತ ಉತ್ಪಾದನೆ ಕೊರತೆ ನಡುವೆ ಲಸಿಕೆ ಎಲ್ಲರಿಗೂ ಲಭ್ಯವಾಗಬಹುದಾ? ಲಸಿಕೆ ಬಗ್ಗೆ ಮೂಡಿರುವ ಅನುಮಾನಗಳನ್ನು ನಿವಾರಿಸಲು ಕೇಂದ್ರಸರಕಾರ ಇಲ್ಲಿಯವರೆಗೆ ಮೂಡಿಸಿರುವ ಜನಾಗೃತಿ ಏನು? ಎಂಬ ಪ್ರಶ್ನೆ ಮೂಡುತ್ತಿದೆ.

ಕೋವಿಡ್-19 ಲಸಿಕೆ ಕಾರ್ಯಕ್ರಮದಲ್ಲಿ ಭಾರತವು ಜಗತ್ತಿನಲ್ಲಿ ಮೂರನೇ ಸ್ಥಾನದಲ್ಲಿದೆ. ಆದರೆ ಈ ಲಸಿಕೆ ಕಾರ್ಯಕ್ರಮದ ಪ್ರಗತಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಭಾರತದಲ್ಲಿ ಈ ಕಾರ್ಯಕ್ರಮ ಮಂದಗತಿಯಲ್ಲಿ ಸಾಗುತ್ತಿದೆ ಎಂಬ ಅಂಶ ನಿಶ್ಚಯವಾಗುತ್ತದೆ.. ಭಾರತದಲ್ಲಿ ಈವರೆಗೆ ಕೇವಲ 12 ಕೋಟಿ  ಲಸಿಕೆಗಳನ್ನು  ಮಾತ್ರ ಹಾಕಲಾಗಿದೆ. ಅಂದ್ರೆ ಶೇ 11 ರಷ್ಟು ಜನರಿಗೆ ಮಾತ್ರ ಲಸಿಕೆ ಹಾಕಲಾಗಿದೆ.  91, ಲಕ್ಷದ 5 ಸಾವಿರದ 429 ಜನ ಆರೋಗ್ಯ ಕಾರ್ಯಕರ್ತರಿಗೆ ಮೊದಲ ಡೋಸ್‌ ನೀಡಲಾಗಿದೆ.  56 ಲಕ್ಷದ 70 ಸಾವಿರದ 818 ಜನ ಆರೋಗ್ಯ ಕಾರ್ಯಕರ್ತರು 2 ನೇ ಡೋಸ್‌ ತೆಗೆದುಕೊಂಡಿದ್ದಾರೆ.

ಕೊರೊನಾ ವಾರಿಯರ್ಸ್‌ ಗಳಲ್ಲಿ ಮೊದಲ ಡೋಸ್‌ ಪಡೆದವರ ಸಂಖ್ಯೆ 1 ಕೋಟಿ, 11 ಲಕ್ಷದ 44 ಸಾವಿರದ 69 ಇದ್ರೆ, ಎರಡನೇ ಡೋಸ್‌ ಪಡೆದವರ ಸಂಖ್ಯೆ 54 ಲಕ್ಷದ  8 ಸಾವಿರದ 572.  65 ವರ್ಷ ಮೇಲ್ಪಟ್ಟವರು ಪಡೆದ ಮೊದಲ ಡೋಸ್‌ ಸಂಖ್ಯೆ 4 ಕೋಟಿ, 49 ಲಕ್ಷದ 35 ಸಾವಿರದ 11, ಎರಡನೇ ಡೋಸ್‌ ಪಡೆದವರ ಸಂಖ್ಯೆ 34 ಲಕ್ಷದ 88 ಸಾವಿರದ 257, 45 ವರ್ಷ ಮೇಲ್ಪಟ್ಟವರಲ್ಲಿ ಮೊದಲ ಡೋಸ್‌ ಪಡೆದವರ ಸಂಖ್ಯೆ 3 ಕೋಟಿ 92 ಲಕ್ಷದ 23 ಸಾವಿರದ 975, ಎರಡನೇ ಡೋಸ್‌ ಪಡೆದವರ ಸಂಖ್ಯೆ 9 ಲಕ್ಷದ 61 ಸಾವಿರದ 610 ಇದೆ.

ಇದನ್ನು ಓದಿ: “ವೈದ್ಯಲೋಕವೇ ಅಸಹಾಯಕ ಸ್ಥಿತಿಯಲ್ಲಿದೆ” ಕಣ್ಣೀರಿಟ್ಟ ವೈದ್ಯೆ

ಲಸಿಕೆ ಕಾರ್ಯಕ್ರಮ ಆರಂಭವಾಗಿ 100 ದಿನ ಕಳೆದ ಬಳಿಕವೂ ಭಾರತದ ಪ್ರಗತಿ ಈ ನಿಟ್ಟಿನಲ್ಲಿ ಕುಂಟುತ್ತಾ ಸಾಗಿದೆ.  12 ಕೋಟಿ ಜನರಿಗೆ ಲಸಿಕೆಯನ್ನು ವಿತರಿಸಲು  ಭಾರತ ಬರೋಬ್ಬರಿ 100 ದಿನಗಳನ್ನು ತೆಗೆದುಕೊಂಡಿದೆ. ಭಾರತದಲ್ಲಿ ಒಟ್ಟು ಜನಸಂಖ್ಯೆ 138 ಕೋಟಿ ಇದ್ದು ಇದರಲ್ಲಿ ಲಸಿಕೆ ಪಡೆಯುವವರ ಸಂಖ್ಯೆ ಎಷ್ಟಿದೆ ಎಂಬುದನ್ನು ನೋಡೋಣ, 18 ರಿಂದ 65 ವರ್ಷ ವಯಸ್ಸಿನವರ ಸಂಖ್ಯೆ ಶೇ 67 ರಷ್ಟಿದೆ. 65 ವರ್ಷ ವಯಸ್ಸು ಮೇಲ್ಪಟ್ಟವರ ಸಂಖ್ಯೆ ಶೇ 6. 38 ರಷ್ಟಿದೆ. ಒಟ್ಟು ಲಸಿಕೆ ಪಡೆಯುವವರ ಪ್ರಮಾಣ ಎಷ್ಟಿದೆ ಅಂದ್ರೆ ಶೇ 74 ರಷ್ಟಿದೆ ಅಂದ್ರೆ ಅಂದಾಜು 95 ಕೋಟಿ ಜನರಿಗೆ ಲಸಿಕೆಯನ್ನು ಉತ್ಪಾದನೆ ಮಾಡಬೇಕಿದೆ.

ಲಸಿಕೆ ಉತ್ಪಾದನಾ ಪ್ರಮಾಣ ಹಾಗೂ ಬಳಕೆ ಪ್ರಮಾಣದ ನಡುವಣ ಹೆಚ್ಚುತ್ತಿರುವ ಅಂತರ, ತುರ್ತು ಕ್ರಮದ ಅನಿವಾರ್ಯತೆಯನ್ನು ಎತ್ತಿ ತೋರಿಸುತ್ತದೆ. ಭಾರತದಲ್ಲಿ ಸದ್ಯ, ದಿನಕ್ಕೆ 30 ಲಕ್ಷ ಡೋಸ್‌ ಲಸಿಕೆಯ ಬೇಡಿಕೆ ಇದೆ. ಅಂದರೆ ತಿಂಗಳಿಗೆ 9 ಕೋಟಿ ಡೋಸ್‌ ನ ಅಗತ್ಯವಿದೆ. ಆದರೆ ಭಾರತದಲ್ಲಿ ಇಲ್ಲಿಯವರೆಗೆ ಕೋವಿಶೀಲ್ಡ್‌ ಲಸಿಕೆ ಒಂದು ತಿಂಗಳಲ್ಲಿ 7 ಕೋಟಿ  ಡೋಸ್‌ ಉತ್ಪಾದನೆಯನ್ನು ಮಾಡಿದ್ದರೆ, ಕೋವ್ಯಾಕ್ಸಿನ್‌ 40 ಕೋಟಿ  ಡೋಸ್‌ ನ್ನು ಉತ್ಪಾದನೆ ಮಾಡಿದೆ. ಈ ಅಂತರವನ್ನು ಕಡಿಮೆ ಮಾಡಿಕೊಳ್ಳಲು ಪರದಾಡುವ ಬೆನ್ನಲ್ಲಿಯೇ ಈಗ ಅಮೇರಿಕಾ ಲಸಿಕಾ ಉತ್ಪಾದನೆಗೆ ಬೇಕಾಗಿರುವ ಕಚ್ಚಾ ಸಾಮಗ್ರಿಗಳ ರಫ್ತಿಗೆ ಅಮೇರಿಕಾ ನಿಷೇಧವನ್ನು ಹೇರಿದೆ.

ಲಸಿಕೆ ಉತ್ಪಾದನಯೇ ಸಂಕೀರ್ಣ ಪ್ರಕ್ರಿಯೆ, ಇದಕ್ಕೆ ಬೇಕಾಗಿರುವ ಕಚ್ಚಾ ವಸ್ತುಗಳು, ಬಿಡಿಭಾಗಗಳ ಸರಣಿಯನ್ನು ಹೊಂದಿಸಿಕೊಳ್ಳಬೇಕು. ಡಬ್ಲೂ.ಎಚ್.ಒ ಪ್ರಕಾರ  9 ಸಾವಿರ ವಿವಿಧ ಕಚ್ಚಾ ಸಾಮಗ್ರಿಗಳನ್ನು ಬಳಸಲಾಗುತ್ತಿದೆ. ಪ್ರಮುಖವಾಗಿ ಬೇಕಿರುವ ಫಿಲ್ಟರ್‌, ಸೊಲ್ಯೂಷನ್‌, ಪ್ಲಾಸ್ಟಿಕ್‌ ಬ್ಯಾಗ್‌ಗಳು ಅಮೆರಿಕದಿಂದಲೇ ಬರಬೇಕಿದೆ. ಆದರೆ, ರಕ್ಷಣಾ ಉತ್ಪನ್ನಗಳ ಕಾಯ್ಡೆಯಡಿ ಅಮೆರಿಕ ಇವುಗಳ ರಫ್ತಿಗೆ ನಿರ್ಬಂಧ ಹೇರಿದೆ’ ಎಂದಿದೆ.  ಇದರೊಂದಿಗೆ ಕೋವಿಡ್‌ 19 ಲಸಿಕೆ ಉತ್ಪಾದನೆಗೆ ಅಮೇರಿಕಾದ  ಅವಲಂಬನೆಯ ತೀವ್ರತೆಯನ್ನು ಇದು ಎತ್ತಿ ತೋರಿಸುತ್ತದೆ. ಕೂಡಲೆ ಉಲ್ಬಣಗೊಂಡಿರುವ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಕೇಂದ್ರ ಸರಕಾರ ದಿಟ್ಟ ಹೆಜ್ಜೆಯನ್ನು ಹಾಕಬೇಕಿದೆ.

ಇದನ್ನು ಓದಿ: 44 ಲಕ್ಷ ಲಸಿಕೆ ಡೋಸ್‌ ವ್ಯರ್ಥ : ಹಾಳು ಮಾಡಿದ್ದರಲ್ಲಿ ತಮಿಳುನಾಡು ನಂ 1

ಇದರ ಜೊತೆಗಿನ ಇನ್ನೊಂದು ಸಮಸ್ಯೆ ಎಂದರೆ, ಸರ್ಕಾರದಿಂದ ಆದ್ಯತೆಯ ಮೇರೆಗೆ ಗುರುತಿಸಲ್ಪಟ್ಟ ಹಲವಾರು ಮಂದಿ ಈ ಲಸಿಕೆ ತೆಗೆದುಕೊಳ್ಳಲು ಹಿಂಜರಿಯುತ್ತಿರುವುದು. ಅವರಲ್ಲಿನ ಅಂಜಿಕೆಗಳು, ಅನುಮಾನಗಳು, ಅವರನ್ನು ಲಸಿಕೆ ತೆಗೆದುಕೊಳ್ಳದಂತೆ ಮಾಡಿವೆ. ಹೀಗಾಗಿ, ಲಸಿಕೆ ಶಿಬಿರಗಳತ್ತ ತುಂಬಾ ಜನ ಹೆಜ್ಜೆ ಇಡುತ್ತಿಲ್ಲ.  ಅನೇಕ ವೈದ್ಯರು, ಶಾಸಕರು, ಸಚಿವರುಗಳು ಲಸಿಕೆ ಹಾಕಿಸಿಕೊಂಡಿಲ್ಲ ಎಂಬ ಮಾಹಿತಿಗಳು ಲಭ್ಯವಾಗುತ್ತಿವೆ. ಇದು ಲಸಿಕೆಯ ಸುತ್ತಿ ಎದ್ದಿರುವ ಪ್ರಶ್ನೆಗಳ ಹುತ್ತ ಬೆಳೆಯುವಂತೆ ಮಾಡುತ್ತದೆ.

ಆರಂಭದಿಂದಲೂ ಲಸಿಕೆಯನ್ನು ಯಾರು ಪಡೆಯಬೇಕು, ಎಲ್ಲರೂ ಪಡೆಯಬೇಕಾ, ಯಾವ ವಯಸ್ಸಿನವರು ಪಡೆಯಬೇಕು, ಇತರೆ ರೋಗ ಇರುವವರು ಪಡೆಯಬಹುದಾ ಎಂಬೆಲ್ಲ ಪ್ರಶ್ನೆಗಳಿದ್ದವು ಇಲ್ಲಿಯವರೆಗೆ ಕೇಂದ್ರ ರಾಜ್ಯ ಸರಕಾರಗಳು ಆ ಸಮಸ್ಯೆಗಳನ್ನು ನಿವಾರಿಸಿ ಜಾಗೃತಿ ಮೂಡಿಸುವಲ್ಲಿ ಸಂಪೂರ್ಣವಾಗಿ ವಿಫಲರಾದ ಕಾರಣ ಲಸಿಕೆಯ ಬಗ್ಗೆ ಜನರಿಗೆ ಸರಿಯಾದ ತಿಳುವಳಿಕೆ ಬಂದಿಲ್ಲ.  ಹಾಗಾಗಿ  ಎಲ್ಲರು ಲಸಿಕೆ ತೆಗೆದುಕೊಳ್ಳುವಂತೆ ಮಾಡುವುದು ಸರ್ಕಾರದ ಮುಂದಿನ ಇನ್ನೊಂದು ದೊಡ್ಡ ಸವಾಲು. ಆಗಿದೆ.

ದೇಶದಲ್ಲಿ 10 ಕ್ಕೂ ಹೆಚ್ಚು ರಾಜ್ಯಗಳು ಹೆಚ್ಚಿನ ಲಸಿಕೆ ವಿತರಿಸುವಂತೆ ಕೇಂದ್ರ ಸರಕಾರಕ್ಕೆ ಒತ್ತಾಯವನ್ನು ಮಾಡುತ್ತಿವೆ. ಕೊರೊನಾ ವ್ಯಾಕ್ಸಿನ್​ ತಯಾರಿಕೆಗೆ ವೇಗ ನೀಡಲು ಕೇಂದ್ರ ಸರ್ಕಾರ ಭಾರತ್ ಬಯೋಟೆಕ್​ ಮತ್ತು ಸೀರಮ್ ಇನ್​ಸ್ಟಿಟ್ಯೂಟ್​ಗೆ ಒಟ್ಟು 4,500 ಕೋಟಿ ಹಣ ಬಿಡುಗಡೆ ಮಾಡಿದೆ. ಭಾರತ್​ ಬರೋಟೆಕ್​ಗೆ 1,500 ಕೋಟಿ ಹಾಗೂ ಸೀರಮ್ ಇನ್​ಸ್ಟಿಟ್ಯೂಟ್​ಗೆ 3,000 ಕೋಟಿ ರೂಗಳನ್ನು ಕೇಂದ್ರ ಸರ್ಕಾರ ಮುಂಗಡವಾಗಿ ಬಿಡುಗಡೆ ಮಾಡಿದೆ ಎನ್ನಲಾಗುತ್ತಿದೆ. ಇದು ಖುಷಿಯ ವಿಚಾರ,  ಇಷ್ಟೆ ಸಾಕಾಗುವುದಿಲ್ಲ. ತಕ್ಷಣವೇ ಸಾರ್ವಜನಿಕ ವಲಯದ ಔಷಧಿ ತಯಾರಕಾ ಸೌಕರ್ಯಗಳನ್ನೆಲ್ಲವನ್ನೂ  ಲಸಿಕೆ ಉತ್ಪಾದನೆಗೆ ಕಲೆ ಹಾಕಲು ಮುಂದಾಗಬೇಕಿದೆ.

ತಮಿಳುನಾಡಿನಲ್ಲಿ ಸಾರ್ವಜನಿಕ ವಲಯದಲ್ಲಿರುವ ಸೌಕರ್ಯಗಳಲ್ಲಿ ಒಂದಾದ  ‘ಸಮಗ್ರ ಲಸಿಕೆ ಸಂಕೀರ್ಣ'(ಇಂಟಿಗ್ರೇಟೆಡ್ ವ್ಯಾಕ್ಸೀನ್ ಕಾಂಪ್ಲೆಕ್ಸ್- ನ್ನು 6೦೦ ಕೋಟಿ  ರೂ ವೆಚ್ಚದಲ್ಲಿ ನಿರ್ಮಿಸಿದ್ದರೂ, ಅದಿನ್ನೂ ಬಳಕೆಯಾಗದೆ ಬಿದ್ದಿದೆ.  ಲಸಿಕೆಗಳ ಬೇಡಿಕೆ ಮತ್ತು ಪೂರೈಕೆಯಲ್ಲಿನ ಅಂತರವನ್ನು ತುಂಬಲು ಇಂತಹ ಎಲ್ಲ ಸೌಲಭ್ಯಗಳನ್ನು  ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳಬೇಕಾಗಿದೆ.

ಸರಕಾರ ಲಸಿಕೆ ತಯಾರಿಕೆಗೆ ಬಜೆಟಿನಲ್ಲಿ ನಮೂದಿಸಿರುವ ಹಣ  35೦೦೦ ಕೋಟಿ ರೂ. ಗಳನ್ನು ತಕ್ಷಣವೇ ವೆಚ್ಚ ಮಾಡುವುದು ಅಗತ್ಯವಾಗಿದೆ. ಕೋವಿಡ್-19 ಚಿಕಿತ್ಸೆಯಲ್ಲಿ ಬಳಸುವ ಲಸಿಕೆಗಳು ಮತ್ತು ಔಷಧಿಗಳ ಲಭ್ಯತೆ ಮತ್ತು ಹಂಚಿಕೆಯ  ಬಗ್ಗೆ  ಸಾರ್ವಜನಿಕರಲ್ಲಿ ವಿವಿಧ ಸಂದೇಹಗಳು ಮತ್ತು ಆತಂಕಗಳು ಎದ್ದಿರುವುದರಿಂದ ಅವುಗಳ ಲಭ್ಯತೆ ಮತ್ತು ಹಂಚಿಕೆಯನ್ನು ಪಾರದರ್ಶಕವಾಗಿ  ಮಾಡಬೇಕು  ಅಗತ್ಯ ಔಷಧಿಗಳ ಕಳ್ಳ ದಾಸ್ತಾನು ಮತ್ತು ಕಾಳಸಂತೆಯ ವಿರುದ್ಧ ಕಟ್ಟುನಿಟ್ಟಾದ  ಕ್ರಮಗಳನ್ನು ಜಾರಿ ಮಾಡಬೇಕು. ಲಸಿಕೆಯನ್ನು ಮೇ 01 ರಿಂದ ಮುಕ್ತ ಮಾರುಕಟ್ಟೆಗೆ ಬಿಡಲಾಗಿದೆ. ಅಲ್ಲಿ ಬ್ರಷ್ಟಾಚಾರಕ್ಕೆ ಹೆಚ್ಚು ಅವಕಾಶವಾಗದಂತೆ ನೋಡಿಕೊಳ್ಳಬೇಕಿದೆ.

ಕೇಂದ್ರ ಸರಕಾರದ ಲಸಿಕೆ ವಿತರಣಾ ಶೈಲಿಗೆ ಆರ್ಥಿಕ ತಜ್ಞ ಮತ್ತು  ಕೇರಳ ಯೋಜನಾ ಆಯೋಗದ ಸದಸ್ಯ ಪ್ರೊ. ರಾಮ ಕುಮಾರ್ ಕಳವಳ ವ್ಯಕ್ತಪಡಿಸಿದ್ದಾರೆ. ಮೂಲಭೂತವಾಗಿ ಭಾರತ ಸರಕಾರ  ರಾಜ್ಯಗಳಿಗೆ ಲಸಿಕೆಗಳನ್ನು ಖಾತ್ರಿಪಡಿಸುವ  ತನ್ನ ಹೊಣೆಗಾರಿಕೆಯಿಂದ ಹಿಂದಕ್ಕೆ ಸರಿದಿದೆ. ಕಳೆದ ನಾಲ್ಕು ತಿಂಗಳಲ್ಲಿ ಲಸಿಕೆ ಕೊರತೆಯನ್ನು ನಿರ್ಮಿಸಿದ ಕೇಂದ್ರ ಸರಕಾರ ಈಗ ರಾಜ್ಯ ಸರಕಾರಗಳಿಗೆ ಲಸಿಕೆ ತಯಾರಕರಿಂದ ನೇರವಾಗಿಯೇ ಖರೀದಿಸಿ ಎಂದು ಹೇಳುತ್ತಿದೆ. ಮೇ 1ರಿಂದ ಲಸಿಕೆಗಳ ಕೊರತೆಯಾದರೆ, ಅದಕ್ಕೆ ರಾಜ್ಯ ಸರಕಾರಗಳೇ ಹೊಣೆಯಾಗುತ್ತವೆ. ಕೇಂದ್ರ ಸರಕಾರದ ಹೊಣೆ ಕೇವಲ ಮೊದಲ 30 ಕೋಟಿ ಆದ್ಯತೆಯ ವಿಭಾಗಗಳಿಗೆ ಉಚಿತವಾಗಿ ಲಸಿಕೆ ಹಾಕಿಸುವಷ್ಟಕ್ಕೇ ಸೀಮಿವಾಗುತ್ತದೆ. ಉಳಿದವರೆಲ್ಲರೂ ಈಗ ತೆರುವುದಕ್ಕಿಂತ ಹೆಚ್ಚಿನ ಬೆಲೆ ತೆತ್ತು ಲಸಿಕೆ ಹಾಕಿಸಿಕೊಳ್ಳಬೇಕಾಗುತ್ತದೆ  ಎಂದು  ಪ್ರೊ.ರಾಮ ಕುಮಾರ್ ಆರೋಪಿಸಿದ್ದಾರೆ.

ಈ ವೇಗದಲ್ಲಿ ಲಸಿಕೆ ನೀಡುತ್ತಾ ಹೋದರೆ, ದೇಶದ ಎಲ್ಲಾ ನಾಗರಿಕರಿಗೆ ಲಸಿಕೆ ನೀಡಲು ಸುಮಾರು ಐದು ವರ್ಷಗಳೇ ಬೇಕಾಗಬಹುದು. ಅದರಲ್ಲೂ ಇದು ಗ್ರಾಮೀಣ ಭಾಗದ ಜನರಿಗೆ ತಲುಪಲು ತುಂಬಾ ಸಮಯ ತೆಗೆದುಕೊಳ್ಳಬಹುದು. ಹಾಗಾಗಿ ಈಗ ಎದುರಾಗಿರುವ ಆರೋಗ್ಯ ಬಿಕ್ಕಟ್ಟನ್ನು ಕೇಂದ್ರ ಸರಕಾರ ಇತರ ರಾಜ್ಯಗಳ ಜೊತೆ ವಿಶ್ವಾಸವನ್ನು ಬೆಳಿಸಿಕೊಂಡು, ತಾರತಮ್ಯ ಮಾಡದ ಕೊರೊನಾ ವಿರುದ್ಧ ಹೋರಾಟವನ್ನು ಮಾಡಲು ಮುದಾಗಬೇಕಿದೆ.

 

Donate Janashakthi Media

Leave a Reply

Your email address will not be published. Required fields are marked *