ಕೋವಿಡ್ ಲಸಿಕೆಗೆ ವಿರೋಧ ಎಷ್ಟು ಸರಿ?

-ಡಾ| ಕೆ. ಸುಶೀಲಾ

ಇಲ್ಲಿಯ ತನಕ ಉಪಯೋಗಕ್ಕೆ ಬಂದ ಲಸಿಕೆಗಳು 4-6 ವರ್ಷಗಳ ಅಧ್ಯಯನದ ನಂತರ ಉಪಯೋಗಕ್ಕೆ ಬಿಡುಗಡೆಗೊಂಡಂತಹವು. ಆದರೆ, ಬಹಳ ಶೀಘ್ರವಾಗಿ ಹಬ್ಬುತ್ತಿದ್ದು, ಕಾಯಿಲೆ ಗುಣಪಡಿಸುವ ಸೂಕ್ತ ಔಷಧ ಇಲ್ಲದ ಕೋವಿಡ್ ತಡೆಗಟ್ಟಲು ಸೂಕ್ತ ಲಸಿಕೆಯ ಅವಶ್ಯಕತೆ ಬಹಳವಾಗಿತ್ತು. ಇದಕ್ಕಾಗಿ ಹಗಲಿರುಳು ಶ್ರಮಿಸಿದ ಹಲವು ವಿಜ್ಞಾನಿಗಳ ಕೆಲಸದ ಪರಿಣಾಮವಾಗಿ ವರ್ಷ ಒಂದರೊಳಗೆ ಕೋವಿಡ್ ಲಸಿಕೆ ತಯಾರಾಗಿತ್ತು.

 

ಈ ಲಸಿಕಾ ವಿರೋಧ ಕೇವಲ ಕೋವಿಡ್ ಲಸಿಕೆಯ ವಿರುದ್ಧವಾಗಿ ಮಾತ್ರ ಪ್ರಚಲಿತದಲ್ಲಿ ಪ್ರಾರಂಭವಾದದ್ದಲ್ಲ. ಬದಲು ವೈದ್ಯ ಝನ್ನರ್ 18ನೇ ಶತಮಾನದಲ್ಲಿ ಮೊತ್ತ ಮೊದಲ ಅಂತ್ಯದಲ್ಲಿ/ಸಿಡುಬು ಕಾಯಿಲೆಯ ವಿರುದ್ಧದ ಲಸಿಕೆ ಕಂಡು ಹಿಡಿದಾಗಿನಿಂದಲೆ ಕಾಣಿಸಿಕೊಂಡಿತ್ತು. ಅಮೇರಿಕಾದಲ್ಲಿ 1860ರಲ್ಲಿ ಪ್ರಾರಂಭವಾದ ಈ ವಿರೋಧ ಮುಂದೆ ಅಲ್ಲಿ ಈ ಲಸಿಕೆಯನ್ನು ಜನಸಾಮಾನ್ಯರು ತೆಗೆದುಕೊಳ್ಳುವುದನ್ನು ಕಡ್ಡಾಯಗೊಳಿಸಿದಾಗ ಉಲ್ಬಣಿಸಿತ್ತು. 1879ರಲ್ಲಿ ಅಲ್ಲಿ ಲಸಿಕಾ ವಿರೋಧಿ ಸಂಘಟನೆ ಸ್ಥಾಪನೆಗೊಂಡಿತು. ಇದು ಲಸಿಕೆ ನೀಡುವ ಹಿಂದಿರುವ ಉದ್ದೇಶವನ್ನೇ ಪ್ರಶ್ನಿಸಿತ್ತು. ಜನಸಾಮಾನ್ಯರ ಆರೋಗ್ಯದ ಬಗೆಗಿನ ಕಾಳಜಿಯಿಂದ ಈ ಲಸಿಕೆ ನೀಡಲಾಗುತ್ತಿಲ್ಲ. ಈ ಲಸಿಕೆ ಮತ್ತು ತಯಾರಿಕೆ ದೊಡ್ಡ ಔಷಧ ಕಂಪೆನಿಗಳಿಗೆ ಅಪಾರ ಲಾಭ ತರುತ್ತದೆ. ಇವರು ನೀಡುವ ಲಂಚದಿಂದ ಪ್ರೇರಿತರಾದ ವೈದ್ಯಕೀಯ ಸಂಸ್ಥೆಗಳು, ವೈದ್ಯರು, ವಿಜ್ಞಾನಿಗಳು, ರಾಜಕೀಯ ವ್ಯಕ್ತಿಗಳು, ಈ ಲಸಿಕೆಯಿಂದ ಜನಸಾಮಾನ್ಯರಿಗಾಗುವ ಅಪಾಯಗಳನ್ನು ಮುಚ್ಚಿಟ್ಟು, ಅದರ ಉಪಯೋಗದಿಂದಾಗುವ ಲಾಭದ ಬಗೆಗೆ ಸುಳ್ಳು ಮಾಹಿತಿಗಳನ್ನು ಜನರಿಗೆ ನೀಡುತ್ತಾರೆ – ಎಂದು ಈ ಸಂಘಟನೆ ಪತ್ರಿಕೆಗಳಲ್ಲಿ ಲೇಖನ ಬರೆಯಿತು. ದೊಡ್ಡ ದೊಡ್ಡ ಜಾಹೀರಾತು ಫಲಕಗಳ ಮೂಲಕ ಜನಸಾಮಾನ್ಯರಿಗೆ ತಪ್ಪು ಮಾಹಿತಿಗಳನ್ನು ನೀಡಿತು. ಕಡ್ಡಾಯ ಲಸಿಕೆ ಹಾಕುವುದು ವ್ಯಕ್ತಿಯ ಸ್ವಾತಂತ್ರ್ಯ ಹರಣ ಎಂದು ಖಂಡ ತುಂಡವಾಗಿ ವಾದಿಸಿತು. ಇದರಿಂದಾಗಿ ಮುಂದಿನ ದಿನಗಳಲ್ಲಿ ಲಸಿಕೆಯ ಉಪಯೋಗ ಜನಸಾಮಾನ್ಯರಲ್ಲಿ ತಳಕಂಡಿತು. ಹೀಗಾಗಿ ಎರಡು ದಶಕಗಳ ನಂತರ ಅಮೇರಿಕಾದಲ್ಲಿ ಸಿಡುಬು ದೊಡ್ಡ ಮಟ್ಟದಲ್ಲಿ ಕಾಣಿಸಿಕೊಂಡಿತ್ತು.

ಈ ಲಸಿಕಾ ವಿರೋಧ ಆಗ ಮಾತ್ರವಲ್ಲ ಸತತವಾಗಿ ಮುಂದುವರಿದಿದೆ. ಮೊಸೆಲ್ಸ್, ದುಮ್ಸ್, ರುಬೆಲ್ಲಾ ಎನ್ನುವ ಮೂರು ಕಾಯಿಲೆಗಳನ್ನು ತಡೆಗಟ್ಟುವ `ಎಮ್.ಎಮ್.ಆರ್.’ ಲಸಿಕೆಯನ್ನು ಮಕ್ಕಳಿಗೆ ನೀಡುವುದರಿಂದ `ಆಟಿಸಂ’ ಎನ್ನುವ ಕಾಯಿಲೆ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತದೆಯೆನ್ನುವ ಅಪಪ್ರಚಾರ ಅಮೇರಿಕಾದಲ್ಲಿ ಇತ್ತೀಚೆಗೆ ನಡೆದಿತ್ತು.

ಲಸಿಕೆಯ ಮಹತ್ವ:

1980ರಲ್ಲಿ ಪ್ರಪಂಚ ಸಿಡುಬಿನಿಂದ ಮುಕ್ತವಾಗಿತ್ತು. ಅಂದಿನ ದಿನಗಳಲ್ಲಿ ಪ್ರಬಲವಾಗಿದ್ದ ವಿಶ್ವ ಆರೋಗ್ಯ ಸಂಸ್ಥೆಯ ನೇತೃತ್ವದಲ್ಲಿ ಇಡೀ ಪ್ರಪಂಚದಲ್ಲಿ ನಡೆದ `ಸಿಡುಬು ನಿರ್ಮೂಲನಾ ಅಭಿಯಾನ’ದಿಂದ ಇದು ಸಾಧ್ಯವಾಗಿತ್ತು.

ಆ ಕಾರ್ಯದಲ್ಲಿ ಸೆಫವಾಗಲು ಬಳಸಿದ ಅಸ್ತ್ರ, ಲಸಿಕಾ ವಿರೋಧಿಗಳಿಂದ ಬಲವಾಗಿ ವಿರೋಧಕ್ಕೊಳ್ಳಪಟ್ಟ, 1796ರಲ್ಲಿ ವೈದ್ಯ ಝನ್ನರ್ ರಿಂದ ಕಂಡುಹಿಡಿಯಲ್ಪಟ್ಟ ಸಿಡುಬು ತಡೆಗಟ್ಟುವ ಲಸಿಕೆ.

ಮಕ್ಕಳಿಗೆ ಹಾಗೂ ಗರ್ಭೀಣಿ ಸ್ತ್ರೀಯರಿಗೆ ಸೂಕ್ತ ಕಾಲದಲ್ಲಿ ನೀಡುತ್ತಿದ್ದ ಲಸಿಕೆಯಿಂದಾಗಿ ಇಂದು ಪೋಲಿಯೋ, ಡಿಫ್ತೀರಿಯಾ, ನಾಯಿ ಕೆಮ್ಮು, ದ-ಮಿಸೆಲ್ಟ್(ಧಡಾರ) ನವಜಾತ ಶಿಶುಗಳಲ್ಲಿನ ಪೆಟಿನೆಸ್, ಕಾಯಿಲೆಗಳು ನಮ್ಮ ದೇಶದಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡಿವೆ. ಮುಂದಿನ ದಿನಗಳಲ್ಲಿ ಕಂಡು ಹಿಡಿದೆ ಇತರ ಕೆಲವು ಲಸಿಕೆಗಳು ಅಸಂಖ್ಯಾತ ಜೀವವನ್ನು ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದು ಕಾಣಿಸುತ್ತಿದೆ.

ಇಂದಿನ ದಿನಗಳಲ್ಲಿ ಲಸಿಕೆಯೂ ಸೇರಿ ಕೋವಿಡ್-19 ಕಾಯಿಲೆ ತಡೆಗಟ್ಟು ವಿವಿಧ ವಿಧಾನಗಳ ವಿರೋಧ:

ಕೋವಿಡ್-19 ಈ ಪ್ರಪಂಚಕ್ಕೆ ಕಾಲಿಟ್ಟ ದಿನಗಳಲ್ಲಿ `ಕೋವಿಡ್’ ಎನ್ನುವ ಕಾಯಿಲೆಯೇ ಸುಳ್ಳು ಎನ್ನುವ ವಾದ ಪ್ರಪಂಚದ ಹಲವು ಭಾಗಗಳಿಂದ ಕೇಳಿಬಂದಿತ್ತು. ಆದರೆ ಈ ಕಾಯಿಲೆಯ ಭೀಕರ ದರ್ಶನ ಮುಂದುವರಿದಂತೆ ಈ ಗುಂಪಿನ ವಾದ ಕ್ಷೀಣಗೊಳ್ಳುತ್ತಾ ಬಂದಿತ್ತು.

ಕೋವಿಡ್‌ನಿಂದ ಬಳಲುವ ವ್ಯಕ್ತಿಯ ಉಸಿರು ಹಾಗೂ ಮಾತನಾಡುವಾಗ ಬಾಯಿಂದ ಹೊರ ಸಿಡಿಯುವ ಸೂಕ್ಷ್ಮ ಎಂಜಲು ಕಣಗಳ ಮೂಲಕ ಹೊರಬಂದು ಹತ್ತಿರದಲ್ಲಿರುವ ಆರೋಗ್ಯವಂತ ಮೂಗು ಬಾಯಿ ಕಣ್ಣಿನ ಮೂಲಕ ಅವರ ದೇಹ ಪ್ರವೇಶಿಸುವ `ಸಾರ್ಸ್-ಕೋವ್-2’ ವೈರಸ್ ಅವರಲ್ಲಿ ಕಾಯಿಲೆಯನ್ನುಂಟು ಮಾಡುವುದು ತಿಳಿದ ವಿಷಯ. ಕೋವಿಡ್ ಕಾಣಿಸಿಕೊಂಡ ಪ್ರಾರಂಭಿಕ ದಿನಗಳಲ್ಲಿ ಈ ವಿಷಯ ಅರಿತ ತಜ್ಞರು, ಸೋಂಕು ತಡೆಗಟ್ಟಲು ಮೂಗು, ಬಾಯಿಗಳನ್ನು ಮಾಸ್ಕ್‌ಗಳಿಂದ ಮುಚ್ಚುವುದು, ಇಬ್ಬರು ವ್ಯಕ್ತಿಗಳ ನಡುವೆ ಅಂತರ ಕಾಪಾಡುವುದು, ಮೂಗು ಬಾಯಿಗಳನ್ನು ಮುಟ್ಟಿ ವೈರಸ್‌ಗಳಿಂದ ಕಲುಷಿತಗೊಂಡ ಕೈಗಳನ್ನು ಪದೇ ಪದೇ ಸಾಬೂನಿನಿಂದ ತೊಳೆಯುವುದು ಸೂಕ್ತ ವಿಧಾನವೆನ್ನುವ ಮಾಹಿತಿ ನೀಡಿದ್ದರು. ಆದರೆ ಮಾಸ್ಕ್‌ ತಯಾರಿಕೆಗೆ ಉಪಯೋಗಿಸುವ ವಸ್ತುಗಳಲ್ಲಿ ಸೂಕ್ಷ್ಮ ರಂದ್ರಗಳಿದ್ದು ವೈರಸ್‌ಗಳು ಈ ರಂಧ್ರದ ಪರಿಧಿಗಿಂತ ಅತೀ ಸೂಕ್ಷ್ಮವಿರುವುದರಿಂದ ಮಾಸ್ಕ್‌ಧಾರಣೆ ಕೋವಿಡ್ ತಡೆಗಟ್ಟಲು ಪ್ರಯೋಜನಕಾರಿ ಅಲ್ಲ ಎಂದು ಹಲವರು ಆಕ್ಷೇಪಣೆ ಎತ್ತಿದ್ದರು. ಒಂದು ಪದರಿನ ಬಟ್ಟೆಯ ಮಾಸ್ಕ್ ಪ್ರತಿಶತ 20% ವೈರಸ್‌ಗಳನ್ನು ತಡೆಯಬಲ್ಲದಾದರೆ, ಗುಣಮಟ್ಟ ಹೊಂದಿಕೊಂಡು 90-95% ವೈರಸ್‌ಗಳನ್ನು ತಡೆಗಟ್ಟಲು ಮಾಸ್ಕ್‌ಗಳಿಂದ ಸಾಧ್ಯ ಎನ್ನುವುದು. ಈ ವಿಷಯದಲ್ಲಿ ಸಂಶೋಧನೆ ಮಾಡಿದ ತಜ್ಞರು ಮಾಹಿತಿ ನೀಡಿದರು. ಈ ಎರಡು ವರ್ಷಗಳ ಅನುಭವದಲ್ಲಿ ಕೋವಿಡ್ ತಡೆಗಟ್ಟುವ ವಿಧಾನಗಳ ಸೂಕ್ತ ನಡವಳಿಕೆ ಪಾಲಿಸುವುದರಿಂದ ಬಹಳಷ್ಟು ಪ್ರಮಾಣದಲ್ಲಿ ಈ ಕಾಯಿಲೆ ತಡೆಗಟ್ಟಲು ಸಾಧ್ಯ ಎನ್ನುವುದು ಸಾಬೀತಾಗಿದೆ.

ಲಸಿಕೆ:

ಇಲ್ಲಿಯ ತನಕ ಉಪಯೋಗಕ್ಕೆ ಬಂದ ಲಸಿಕೆಗಳು 4-6 ವರ್ಷಗಳ ಅಧ್ಯಯನದ ನಂತರ ಉಪಯೋಗಕ್ಕೆ ಬಿಡುಗಡೆಗೊಂಡಂತಹವು. ಆದರೆ, ಬಹಳ ಶೀಘ್ರವಾಗಿ ಹಬ್ಬುತ್ತಿದ್ದು, ಕಾಯಿಲೆ ಗುಣಪಡಿಸುವ ಸೂಕ್ತ ಔಷಧ ಇಲ್ಲದ ಕೋವಿಡ್ ತಡೆಗಟ್ಟಲು ಸೂಕ್ತ ಲಸಿಕೆಯ ಅವಶ್ಯಕತೆ ಬಹಳವಾಗಿತ್ತು. ಇದಕ್ಕಾಗಿ ಹಗಲಿರುಳು ಶ್ರಮಿಸಿದ ಹಲವು ವಿಜ್ಞಾನಿಗಳ ಕೆಲಸದ ಪರಿಣಾಮವಾಗಿ ವರ್ಷ ಒಂದರೊಳಗೆ ಕೋವಿಡ್ ಲಸಿಕೆ ತಯಾರಾಗಿತ್ತು. ಇದು ಫಲಾನುಭವಿಗಳಿಗೆ ಸುರಕ್ಷಿತ ಹಾಗೂ ಕೋವಿಡ್ ಬರದಂತೆ, ಬಂದರೆ ಗಂಭೀರ ಮಟ್ಟಕ್ಕೆ ಹೋಗದಂತೆ ಮತ್ತು ಹೀಗೆ ಬಂದವರಲ್ಲಿ ಸಾವಿನ ಪ್ರಮಾಣ ಬಹಳಷ್ಟು ಕಡಿತಗೊಳಿಸುವಲ್ಲಿ ಸಹಕಾರಿ ಎನ್ನುವುದು ತಜ್ಞರ ಅಭಿಪ್ರಾಯವಾಗಿತ್ತು. ಆದರೆ ಲಸಿಕೆ ನೀಡುವ ರೋಗ ತಡೆಗಟ್ಟುವ ಶಕ್ತಿಯು ದೇಹದಲ್ಲಿ ಉಳಿಯುವ ಕಾಲದ ಬಗ್ಗೆ ಧೀರ್ಘ ಕಾಲದ ನಂತರ ಈ ಲಸಿಕೆಯಿಂದ ಏನಾದರೂ ತೊಂದರೆ ಬರುವ ಸಂಭವಗಳ ಬಗ್ಗೆ ಸರಿಯಾದ ಮಾಹಿತಿ ಇರಲಿಲ್ಲ.

ಆದರೆ, ಕೋವಿಡ್ ಕಾಣಿಸಿಕೊಂಡ ಈ ಎರಡು ವರ್ಷಗಳ ಕಾಲಾವಧಿಯಲ್ಲಿ ವೈರಸ್ ಬದಲಾವಣೆಯಿಂದ ಹುಟ್ಟಿಕೊಂಡ ರೂಪಾಂತರಿ ವೈರಸ್‌ಗಳ ಬಗ್ಗೆ, ಲಸಿಕೆ ಉಪಯೋಗಕ್ಕೆ ಬಂದ ಈ ಒಂದು ವರ್ಷದ ಕಾಲಾವಧಿಯಲ್ಲಿ ಮೂಲ ಸಾರ್ಸ್-ಕೋವ-2 ಹಾಗೂ ಅದರ ರೂಪಾಂತರಿಗಳಿಂದ ಬರುವ ಕೋವಿಡ್‌ನ್ನು ತಡೆಗಟ್ಟುವ ಈ ಲಸಿಕೆಯ ಸಾಮರ್ಥ್ಯದ ಬಗ್ಗೆ ಬಹಳಷ್ಟು ಉಪಯುಕ್ತ ಮಾಹಿತಿಗಳು ದೊರೆತಿವೆ. ಲಸಿಕೆಯೂ ಸೇರಿ ಕೋವಿಡ್ ತಡೆಗಟ್ಟುವ ವಿಧಾನಗಳ ವಿರೋಧಿಗಳು ಇವುಗಳನ್ನು ವಿರೋಧಿಸಲು ನೀಡುವ ಕಾರಣಗಳು ಹಲವು.

  1. ಹಲವು ದೇಶಗಳು ಮಾಸ್ಕ್ ಧಾರಣೆ ಹಾಗೂ ಲಸಿಕೆ ಪಡೆಯುವುದನ್ನು ಕಡ್ಡಾಯಗೊಳಿಸಿವೆ. ಪ್ರತಿ ವ್ಯಕ್ತಿಗೆ ತನಗೇನು ಬೇಕು, ಬೇಡ ಎಂದು ನಿರ್ಧರಿಸುವ ಹಕ್ಕು ಇದೆ. ಕಡ್ಡಾಯಗೊಳಿಸುವುದರಿಂದ ವ್ಯಕ್ತಿಯ ಸ್ವಾತಂತ್ರ್ಯ ಹರಣವಾಗುವುದರಿಂದ ಈ ಲಸಿಕೆಯನ್ನು ಬಹಿಷ್ಕರಿಸತಕ್ಕದ್ದು.

ಒಂದು ಸಮಯದಲ್ಲಿ ಯಾವುದೇ ವ್ಯಕ್ತಿ ಸಾಂಕ್ರಾಮಿಕ ಸೋಂಕು ರೋಗದಿಂದ ಬಳಲುತ್ತಿದ್ದು ಅದು ಇತರರಿಗೆ ಹರಡುವುದನ್ನು ತಡೆಗಟ್ಟುವ ವಿಧಾನಗಳನ್ನು (ಉದಾ: ಮಾಸ್ಕ್ ಧಾರಣೆ, ಅಂತರ ಕಾಪಾಡುವಿಕೆ)- ಪಾಲಿಸದಿದ್ದರೆ ಆತ ನೇರ ಹಾಗೂ ಪರೋಕ್ಷವಾಗಿ ಆ ಸೋಂಕು ಸಮಾಜದ ಅಸಂಖ್ಯಾತ ಜನರಿಗೆ ಹರಡಲು ಹಾಗೂ ಅವರ ಸಾವು ನೋವಿಗೆ ಕಾರಣನಾಗುತ್ತಾನೆ. ಈ ರೋಗಿಗಳಿಂದಾಗಿ ಅಲ್ಲಿನ ಆರೋಗ್ಯ ಸೇವೆಯ ಮೇಲೆ ವಿಪರೀತ ಒತ್ತಡ ಬೀಳುತ್ತದೆ. ಇದು ಇತರ ಹಲವಾರು ಕಾಯಿಲೆಗಳಿಂದ ಬಳಸುವ ತುರ್ತು ಚಿಕಿತ್ಸೆಯ ಅವಶ್ಯಕತೆ ಇರುವ ರೋಗಿಗಳಿಗೆ ಸೂಕ್ತ ಚಿಕಿತ್ಸೆ ದೊರಕದೇ ಅದರ ಸಾವು ನೋವಿಗೂ ಕಾರಣವಾಗುತ್ತದೆ. ಅಮೇರಿಕಾದಲ್ಲಿ 19ನೇ ಶತಮಾನದಲ್ಲಿ ಸಿಡುಬಿನ ಲಸಿಕೆಯನ್ನು ಜನರಿಗೆ ಕಡ್ಡಾಯಗೊಳಿಸಿದಾಗ ಅದು ವ್ಯಕ್ತಿ ಸ್ವಾತಂತ್ರಕ್ಕೆ ಧಕ್ಕೆ ಬರುತ್ತದೆಂದು ವಿರೋಧಿಸಿದಾಗ ಅಲ್ಲಿನ ಸುಪ್ರೀಂ ಕೋರ್ಟ್ ಸಾರ್ವಜನಿಕರ ಒಳಿತಿಗಿಂತ ಒಬ್ಬ ವ್ಯಕ್ತಿಯ ಸ್ವಾತಂತ್ರ್ಯ ಮುಖ್ಯವಲ್ಲ. ಯಾವುದೇ ವ್ಯಕ್ತಿ ಸರ್ಕಾರ ನೀಡುವ ಸಾರ್ವಜನಿಕ ಸೌಲಭ್ಯಗಳನ್ನು ಉಪಯೋಗಿಸುವಾಗ, ಸಮಾಜದ ಒಳಿತನ್ನು ಬಯಸಬೇಕಾಗುತ್ತದೆ ಎಂದು ನೀಡಿದ ತೀರ್ಪು ಇಲ್ಲಿಯೂ ಪ್ರಸ್ತುತ.

  1. ಲಸಿಕೆ ನೀಡುವ ಉದ್ದೇಶ-ಸಮಾಜದ ಒಳಿತಿಗಾಗಿ ಇಲ್ಲ; ಬದಲು ಬಹುರಾಷ್ಟ್ರೀಯ ಔಷಧ ಕಂಪನಿಗಳ ಅಪಾರ ಲಾಭಕ್ಕಾಗಿ ಇದೆ. ಲಸಿಕೆ ತೆಗೆದುಕೊಂಡ ನಂತರವೂ ಹಲವರಿಗೆ ಕೋವಿಡ್ ಸೋಂಕು ತಗಲಿದೆ. ಈ ಲಸಿಕೆ ಪಡೆದ ಹಲವರಿಗೆ ತೊಂದರೆ ಉಂಟಾಗಿದೆ. ಹೀಗಾಗಿ ಈ ಲಸಿಕೆಯನ್ನು ಬಹಿಷ್ಕರಿಸಬೇಕೆನ್ನುವುದು ಈ ಲಸಿಕಾ ವಿರೋಧಿ ಗುಂಪಿನ ವಾದ.

ಈ ಲಸಿಕಾ ತಯಾರಿಸುವ ಕಂಪೆನಿಗಳಾದ `ಫೈಝರ್’ ಹಾಗೂ ಮಾಡರ್ನಗಳೂ ಈ ಒಂದು ವರ್ಷದಲ್ಲಿ ಲಸಿಕೆಯ ದುಬಾರಿ ಮಾರಾಟದಿಂದ 50 ಬಿಲಿಯನ್ ಡಾಲರ್ ಪಡೆದವು ಎಂದು ಹೇಳಲಾಗುತ್ತಿದೆ. ಆದರೆ ಇದಕ್ಕಾಗಿ ಅವರು ತಯಾರಿಸಿದ ಲಸಿಕೆಗೆ ಬಹಿಷ್ಕಾರ ಹಾಕುವುದು ಸೂಕ್ತ ಉತ್ತರವಲ್ಲ. ಬದಲು ಅವರು ಲಸಿಕೆಯನ್ನು ಸೂಕ್ತವಾದ ಕಡಿಮೆ ಬೆಲೆಯಲ್ಲಿ ಮಾರಬೇಕೆನ್ನುವ ಬೇಡಿಕೆ ಇಟ್ಟು ಆ ಕಂಪೆನಿಗಳ ವಿರುದ್ಧ ಪ್ರತಿಭಟನೆ ನಡೆಸುವುದು ಅಗತ್ಯ.

ಇಂದು ಪ್ರಪಂಚದ ಹೆಚ್ಚಿನ ಎಲ್ಲಾ ಬಡದೇಶಗಳ ಅಧಿಕ ಪ್ರಮಾಣದ ಜನರು ಲಸಿಕೆ ಪಡೆದಿಲ್ಲ. ಎರಡು ಲಸಿಕೆ ತಯಾರಿಸುವ ಕಂಪೆನಿಗಳು ಹಾಗೂ ಅಮೇರಿಕಾಕ್ಕೆ ಇಡೀ ಪ್ರಪಂಚಕ್ಕೆ ಅಗತ್ಯವಿರುವ ಲಸಿಕೆ ತಯಾರಿಸುವ ಸಾಮರ್ಥ್ಯ ಇದೆ. ಇದಕ್ಕೆ ಬೇಕಾದ ಹಣ 25 ಬಿಲಿಯ ಡಾಲರ್. (ಅಮೇರಿಕಾದ ಮಿಲಿಟರಿ ವೆಚ್ಚಕ್ಕಾಗಿ ಕಾದಿಟ್ಟ ಹಣ 768 ಬಿಲಿಯನ್ ಡಾಲರು. ಆದರೆ ಈ ವೆಚ್ಚ ಭರಿಸಲು ಇವುಗಳು ತಯಾರಿಲ್ಲ ಅಥವಾ ಈ ಕಂಪೆನಿಗಳು ಈ ಲಸಿಕೆ ತಯಾರಿಸುವ ವಿಧಾನ ಹಾಗೂ ಹಕ್ಕನ್ನು ಬಡ ದೇಶಗಳಿಗೆ ಹಸ್ತಾಂತರಿಸಿದರೆ ಇವು ತಮ್ಮ ಜನರಿಗೆ ಬೇಕಾದ ಲಸಿಕೆಯನ್ನು ಅತೀ ಕಡಿಮೆ ವೆಚ್ಚದಲ್ಲಿ ತಯಾರಿಸಬಲ್ಲವು. ಹಾಗೂ ಈ ಕಾಯಿಲೆ ಪ್ರಪಂಚದಲ್ಲಿ ಹತೋಟಿಗೆ ಬಾರದಿದ್ದಗ ಈ ವೈರಸ್‌ನಿಂದ ಮುಂದೆ ಹುಟ್ಟುವ ರೂಪಾಂತರಿಯಲ್ಲಿ, ಪ್ರಚಲಿತದಲ್ಲಿ ಉಪಯೋಗದಲ್ಲಿರುವ ಲಸಿಕೆಯ ನಿರೋಧಕ ಶಕ್ತಿಗೆ ಪ್ರತಿರೋಧ ಒಟ್ಟುವ ಹಾಗೂ ತೀಕ್ಷ ಕಾಯಿಲೆ ಉಂಟು ಮಾಡುವ ರೂಪಾಂತರಿ ಹುಟ್ಟುವ ಸಂಭವ ಹೆಚ್ಚು. ಅಂತಹ ಪರಿಸ್ಥಿತಿ ಬಂದಾಗ ಈಗಿನ ಲಸಿಕೆಯಲ್ಲಿ ಮಾರ್ಪಾಡು ಮಾಡಿ ಶ್ರೀಮಂತ ರಾಷ್ಟ್ರಗಳ ಜನತೆಗೆ ದುಬಾರಿ ಬೆಲೆಯಲ್ಲಿ ದೂರುವುದು ಈ ಕಂಪೆನಿಗಳಿಗೆ ಲಾಭದಾಯಕ. ಆದ್ದರಿಂದ ಲಸಿಕೆ ನಿಷೇಧಿಸಬೇಕೆನ್ನುವ ಈ ಲಸಿಕಾ ವಿರೋಧಿಗಳ ಕಾರ್ಯ ಈ ಔಷಧ ಕಂಪನಿಗೆ ವರವಾಗಿ ಪರಿಣಮಿಸುವುದು.

ಈ ಒಂದು ವರ್ಷದ ಅನುಭವದಲ್ಲಿ ತಿಳಿದ ವಿಷಯವೇನೆಂದರೆ ಈ ಲಸಿಕೆ ಸಂಪೂರ್ಣವಾಗಿ ಸೋಂಕನ್ನು ತಡೆಗಟ್ಟುವುದಿಲ್ಲ. ಹೊಸ ರೂಪಾಂತರಿ ವೈರಸ್ ಲಸಿಕೆಗೆ ಹೆಚ್ಚಿನ ಪ್ರಮಾಣದಲ್ಲಿ ತನ್ನ ರೋಗ ನಿರೋಧಕ ಸಾಮರ್ಥ್ಯ ಇನ್ನು ಉಳಿಸಿಕೊಂಡಿದೆ. ಕೋವಿಡ್ ಕಾಯಿಲೆ ಲಸಿಕೆ ಪಡೆದ ನಂತರ ಬಂದಾಗ ತೀಕ್ಷ್ಣ ಸ್ವರೂಪ ಪಡೆಯುವ ಸಂಭವ ಹಾಗೂ ಮರಣದ ಪ್ರಮಾಣ ಬಹಳಷ್ಟು ಇಲ್ಲಿ ಕಡಿಮೆಯಾಗಿದೆ.

ಲಸಿಕೆಯೂ ಸೇರಿ ಯಾವುದೇ ಔಷಧ ಮಾತ್ರವಲ್ಲ ಆಹಾರ ಪದಾರ್ಥಗಳು ಕೂಡಾ ಉಪಯೋಗಿಸುವವರಲ್ಲಿ ಅತ್ಯಲ್ಪ ಪ್ರಮಾಣದಿಂದ ಹಿಡಿದು ಬಹಳ ಗಂಭೀರ ಪರಿಣಾಮಗಳನ್ನು ಬೀರುವ ಸಾಧ್ಯತೆ ಇದೆ. ಇದಕ್ಕೆ ಕೋವಿಡ್ ಲಸಿಕೆಯೂ ಅಪವಾದವಲ್ಲ. ಆದರೆ ತೊಂದರೆಗೊಳಗಾದ ಹೆಚ್ಚಿನವರಲ್ಲಿ ಈ ತೊಂದರೆಗಳು ಬಹಳ ಸೌಮ್ಯ ಸ್ವಭಾವದ್ದಾಗಿದೆ. ಇದರಿಂದಾಗಿ ಅತೀ ಗಂಭೀರ ಪರಿಣಾಮ ಎಲ್ಲೋ 10 ಮಿಲಿಯಕ್ಕೊಬ್ಬರಲ್ಲಿ ಬಂದಿರಬಹುದು.

  1. ಯಾವುದೇ ಕೋವಿಡ್ ತಡೆಗಟ್ಟುವ ಸೂಕ್ತ ನಡವಳಿಕೆ ಪಾಲಿಸದೆ, ಲಸಿಕೆಯನ್ನು ತೆಗೆದುಕೊಳ್ಳದಿದ್ದವರಲ್ಲಿ ಹಲವರಿಗೆ ಈ ಕಾಯಿಲೆ ಬಂದಿಲ್ಲ. ಹೀಗಾಗಿ ಈ ಯಾವ ವಿಧಾನಗಳ ಬಳಕೆಯ ಅಗತ್ಯವಿಲ್ಲ ಎನ್ನುವ ವಾದವಿದೆ. ಇವರಲ್ಲಿ ಕೆಲವರಿಗೆ ಗುಣಲಕ್ಷಣ ಸೋಂಕು ಬಂದಿರಬಹುದು. ಇನ್ನು ಕೆಲವರ ವಂಶವಾಹಿನಿಯಲ್ಲಿ ಈ ಕಾಯಿಲೆ ತಡೆಗಟ್ಟುವ ಶಕ್ತಿ ಇದ್ದಿರಬಹುದು. ಒಂದು ಅಧ್ಯಯನದ ಪ್ರಕಾರ ಸಾರ್ಸ್-ಕೋವ್-2 ಜಾತಿಗೆ ಸೇರಿದ ಕೊರೋನಾ ವೈರಸ್‌ನಿಂದ ಬಂದ ಪ್ಲೂ ಕೋವಿಡ್ ಕಾಯಿಲೆ ನಿರೋಧಕ ಶಕ್ತಿಯನ್ನು ರೋಗಿಗೆ ನೀಡುವ ಸಾಧ್ಯತೆ ಇದೆ. ಆದ್ದರಿಂದ ಇದು ಎಲ್ಲರಿಗೂ ಅನ್ವಯಿಸುವುದಿಲ್ಲ.

ನಮ್ಮ ಸಮಾಜವನ್ನು ಕೋವಿಡ್‌ನಿಂದ ರಕ್ಷಿಸಲು ಲಸಿಕೆ ಪಡೆಯುವುದರೊಂದಿಗೆ ಕೋವಿಡ್ ತಡೆಗಟ್ಟುವ ಸೂಕ್ತ ನಡವಳಿಕೆಯನ್ನು ಪಾಲಿಸುವುದು ನಮ್ಮೆಲ್ಲರ ಕರ್ತವ್ಯ.

Donate Janashakthi Media

Leave a Reply

Your email address will not be published. Required fields are marked *