ಬೆಂಗಳೂರು: ಕೊರೊನಾ ಸೋಂಕಿನ ನಾಲ್ಕನೇ ಅಲೆ ಶುರುವಾಗಿದ್ದು, ರಾಜ್ಯ ರಾಜಧಾನಿ ಬೆಂಗಳೂರು ವ್ಯಾಪ್ತಿಯಲ್ಲಿ ದಿನಕ್ಕೆ ನೂರಕ್ಕೂ ಹೆಚ್ಚಿನ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಬೆಂಗಳೂರು ನಗರದಲ್ಲಿ ಕೋವಿಡ್ ಹರಡುವಿಕೆ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ಶುಕ್ರವಾರ(ಏಪ್ರಿಲ್ 29) 133 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಬೆಂಗಳೂರಿನಲ್ಲೇ 127 ಪ್ರಕರಣಗಳು ಪತ್ತೆಯಾಗಿವೆ.
ಇದನ್ನು ಓದಿ: ಎರಡು ಡೋಸ್ ಲಸಿಕೆ ಪಡೆದವರಿಗೆ ಮಾತ್ರ ಮಾಲ್, ಚಿತ್ರಮಂದಿರ ಪ್ರವೇಶಕ್ಕೆ ಅವಕಾಶ: ಬಿಬಿಎಂಪಿ
ಬಿಬಿಎಂಪಿ ವ್ಯಾಪ್ತಿಯಲ್ಲಿ ಕಳೆದ ಕೆಲ ತಿಂಗಳಿಂದ ಸೋಂಕಿತ ಪ್ರಕರಣಗಳ ಸಂಖ್ಯೆ 100ಕ್ಕಿಂತ ಕಡಿಮೆ ವರದಿಯಾಗುತ್ತಿದ್ದವು. ಒಂದು ವಾರದಿಂದ ಸೋಂಕಿತರ ಸಂಖ್ಯೆ ಪ್ರತಿದಿನ 100ರ ಗಡಿ ದಾಟುತ್ತಿದೆ. ಕಳೆದ 7 ದಿನಗಳಲ್ಲಿ ಬೆಳ್ಳಂದೂರು 8, ಹಗದೂರು 5, ವರ್ತೂರು 4, ಎಚ್‌ಎಸ್‌ಆರ್ ಲೇಔಟ್, ದೊಡ್ಡ ನೆಕ್ಕುಂದಿ, ಕೋರಮಂಗಲದಲ್ಲಿ ತಲಾ 3, ರಾಜಾಜಿನಗರ, ಹೂಡಿ, ಕಾಡುಗೋಡಿ, ಹೊರಮಾವು ವಾರ್ಡ್‌ನಲ್ಲಿ ತಲಾ 2 ಪ್ರಕರಣಗಳು ಪತ್ತೆಯಾಗಿವೆ. ಪಾಲಿಕೆಯ 198 ವಾರ್ಡ್‌ಗಳ ಪೈಕಿ 168 ಕಡೆ 5ಕ್ಕಿಂತ ಹೆಚ್ಚು ಸೋಂಕಿತ ಪ್ರಕರಣಗಳು ವರದಿಯಾಗಿವೆ. ಇದರಿಂದ ಕೋವಿಡ್‌ನ 4ನೇ ಅಲೆಯ ಭೀತಿ ಉಂಟಾಗಿದ್ದು, ನಿಯಮಗಳನ್ನು ಬಿಗಿಗೊಳಿಸಲಾಗುತ್ತಿದೆ.
ಕೋವಿಡ್ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಬಿಡುಗಡೆಗೊಳಿಸಿರುವ ಹೊಸ ಮಾರ್ಗಸೂಚಿಯಲ್ಲಿ ಆಯಕಟ್ಟಿನ ಸ್ಥಳಗಳಾದ ಆಸ್ಪತ್ರೆ, ಥಿಯೇಟರ್ ಹಾಗೂ ಹೋಟೆಲ್, ಮಾಲ್ ಮತ್ತು ವಾಣಿಜ್ಯ ಸಂಸ್ಥೆಗಳಿಗೆ ನಿಯಮಗಳನ್ನು ಜಾರಿಗೊಳಿಸಿದೆ.
ಆಸ್ಪತ್ರೆಗಳಿಗೆ ಮಾರ್ಗಸೂಚಿ
ಹೊರ ರೋಗಿಗಳ ವಿಭಾಗಗಳಲ್ಲಿನ ಎಲ್ಲ ಐಎಲ್‌ಐ, ಸಾರಿ ಪ್ರಕರಣಗಳನ್ನು ಪರೀಕ್ಷಿಸಬೇಕು. ಒಳರೋಗಿಗಳಿಗೆ ಕೋವಿಡ್ ಪರೀಕ್ಷೆ ಮಾಡಬೇಕು
ಪರೀಕ್ಷಾ ವಿವರಗಳನ್ನು ಐಸಿಎಂಆರ್ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಬೇಕು. ಸಿಟಿ ವ್ಯಾಲ್ಯೂ 30ಕ್ಕಿಂತ ಕಡಿಮೆ ಇರುವ ಎಲ್ಲ ಪಾಸಿಟಿವ್ ಪ್ರಕರಣಗಳ ಮಾದರಿಗಳನ್ನು ಜಿನೋಮ್ ಸೀಕ್ವೆನ್ಸಿಂಗ್ ಪರೀಕ್ಸೆಗೆ ಕಳುಹಿಸಬೇಕು
ಸೋಂಕಿತರ ಚಿಕಿತ್ಸೆಗಾಗಿ ಶೇ 10ರಷ್ಟು ಹಾಸಿಗೆಗಳನ್ನು ಮೀಸಲಿಟ್ಟು, ಸನ್ನದ್ಧ ಸ್ಥಿತಿಯಲ್ಲಿಇಟ್ಟುಕೊಳ್ಳಬೇಕು
ಇದನ್ನು ಓದಿ: ನಗರದಲ್ಲಿ ಸಭೆ-ಸಮಾರಂಭಗಳಿಗೆ ನಿರ್ದಿಷ್ಟ ನಿಯಮಗಳ ಜಾರಿಗೆ ಬಿಬಿಎಂಪಿ ಪ್ರಸ್ತಾವನೆ
ಖಾಸಗಿ ಆಸ್ಪತ್ರೆಯ ಹಾಸಿಗೆಗಳನ್ನು ಹಂಚಿಕೆ ಮಾಡಲು ರಿಯಲ್ ಟೈಂ ಬೆಡ್ ಲಭ್ಯತೆಯ ಪೋರ್ಟಲ್ ಅನ್ನು ತಕ್ಷಣವೇ ಸಕ್ರಿಯಗೊಳಿಸಬೇಕು
ಸಿನಿಮಾ, ಮಾಲ್, ಹೋಟೆಲ್, ರೆಸ್ಟೋರೆಂಟ್, ವರ್ತಕರು
ಹೋಟೆಲ್, ಮಾಲ್, ಅಂಗಡಿ-ಮುಂಗಟ್ಟುಗಳು, ಚಿತ್ರಮಂದಿರಗಳು ಹಾಗೂ ವಾಣಿಜ್ಯ ಪ್ರದೇಶಗಳಲ್ಲಿ ಕೋವಿಡ್ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು
ಸಿನಿಮಾ ಹಾಲ್‌ಗಳು, ಮಾಲ್, ರೆಸ್ಟೋರೆಂಟ್, ಹೋಟೆಲ್‌ಗಳು ಎರಡೂ ಡೋಸ್ ಲಸಿಕೆ ಪಡೆದಿರುವವರಿಗೆ ಮಾತ್ರ ಪ್ರವೇಶ ನೀಡಬೇಕು
ಮಾಸ್ಕ್, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ, ಪ್ರವೇಶ ದ್ವಾರಗಳಲ್ಲಿಯೇ ಪ್ರತಿಯೊಬ್ಬರ ದೇಹದ ಉಷ್ಣಾಂಶ ತಪಾಸಣೆ ಮಾಡಬೇಕು
ಎಲ್ಲ ಸಿಬ್ಬಂದಿಗಳು ಲಸಿಕೆ ಪಡೆದಿರುವುದನ್ನು ಖಚಿತಪಡಿಸಿಕೊಂಡು, ಆಗಾಗ್ಗೆ ಪರೀಕ್ಷೆಗೊಳಪಡಿಸಬೇಕು
ಅಧಿಕ ಸೋಂಕಿತ ಪ್ರಕರಣಗಳಿರುವ ಪ್ರದೇಶಗಳಿಂದ ಬರುವವರು, ಅಂತಾರಾಷ್ಟ್ರೀಯ ಪ್ರಯಾಣಿಕರ ಮೇಲೆ ಹೆಚ್ಚು ನಿಗಾ ಇಡಬೇಕು
ಇದನ್ನು ಓದಿ: ಮನೆ ಬಾಗಿಲಿಗೆ ವೈದ್ಯರ ತಂಡ : ವಿನೂತನ ಪ್ರಯೋಗಕ್ಕೆ ಬಿಬಿಎಂಪಿ ಸಜ್ಜು
ಮಾರುಕಟ್ಟೆಗಳು, ಜನಸಂದಣಿ ಪ್ರದೇಶಗಳಲ್ಲಿ ಮಾರ್ಷಲ್‌ಗಳು ಗಸ್ತು ತಿರುಗಬೇಕು. ಜಾಗೃತಿ ಕ್ರಮಗಳನ್ನು ಕೈಗೊಳ್ಳಬೇಕು
ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳಿಗೆ ಸೂಚನೆಗಳು
ಹೆಚ್ಚಿನ ಕಣ್ಗಾವಲು ಚಟುವಟಿಕೆಗಳಿಗೆ ಸಹಕಾರ ನೀಡಬೇಕು.
ಮುನ್ನೆಚ್ಚರಿಕೆ ಡೋಸ್ ಕವರೇಜ್ ಮತ್ತು ಮಕ್ಕಳ ವ್ಯಾಕ್ಸಿನೇಷನ್ ಬಗ್ಗೆ ಆರ್‌ಡಬ್ಲ್ಯೂಎ ಮಟ್ಟದಲ್ಲಿ ಜಾಗೃತಿ ಉಪಕ್ರಮಗಳನ್ನು ಕೈಗೊಳ್ಳಬೇಕು.
ಎಲ್ಲಾ ವಯೋಮಾನದವರೂ ಶೇ. 100 ಲಸಿಕೆ ಪಡೆದಿರುವುದನ್ನು ಖಚಿತಪಡಿಸಿಕೊಳ್ಳಲು ಶಿಬಿರಗಳನ್ನು ಆಯೋಜಿಸಬೇಕು.
ದೊಡ್ಡ ಅಪಾರ್ಟ್‌ಮೆಂಟ್ ಸಂಕೀರ್ಣಗಳಿಂದ ಜಿನೋಮಿಕ್ ಕಣ್ಗಾವಲಿಗಾಗಿ ಸೀವೇಜ್ ಮಾದರಿಗಳನ್ನು ಸಂಗ್ರಹಿಸಬೇಕು.
ಈಗಾಗಲೇ ಜಾರಿಗೊಂಡಿರುವ ಕೇಂದ್ರ ಮತ್ತು ರಾಜ್ಯಸರ್ಕಾರಗಳ ಪ್ರಕಾರ ಆರ್‌ಡಬ್ಲ್ಯೂಎ ಪರಿಷ್ಕೃತ ಸಲಹೆಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಮತ್ತು ಅದನ್ನು ಹಂಚಿಕೊಳ್ಳಬೇಕು.
ಉಗುಳುವಿಕೆ ವಿರುದ್ಧ ಆಂದೋಲನ ಮತ್ತು ಮಾಸ್ಕ್ ಧಾರಣೆ ಅಭಿಯಾನ ಪುನರಾರಂಭ ಮಾಡಬೇಕು.
ಎಲ್ಲಾ ಪ್ರಾಥಮಿಕ ಸಂಪರ್ಕಗಳನ್ನು ಪರೀಕ್ಷಿಸಬೇಕು.