ಕೋವಿಡ್ ಎರಡನೇ ಅಲೆ ತಡೆಗೆ ಅಗತ್ಯ ಕ್ರಮಕ್ಕೆ ಯೋಜನೆ ರೂಪಿಸಿದ ರಾಜ್ಯ ಸರಕಾರ

ಬೆಂಗಳೂರು : ಕೋವಿಡ್ ಎರಡನೇ ಅಲೆ ನಿಯಂತ್ರಿಸಲು ಎಲ್ಲ ಬಗೆಯ ಸಿದ್ಧತೆ ಮಾಡಿಕೊಂಡಿದ್ದು, ಇಂದಿನಿಂದ ಕನಿಷ್ಠ 50 ದಿನಗಳ ಕಾಲ ವೈದ್ಯ ಸಿಬ್ಬಂದಿ, ಅಧಿಕಾರಿಗಳು ಶ್ರಮಿಸಲಿದ್ದಾರೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

ಕೋವಿಡ್ ನಿಯಂತ್ರಣ ಸಂಬಂಧ ವಿಧಾನಸೌಧದಲ್ಲಿ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಈ ಸಮಯದಲ್ಲಿ ಲಸಿಕೆ ಮುಖ್ಯ. ಕೆಲ ದಿನಗಳ ಹಿಂದೆ ಒಂದೇ ದಿನ ಎರಡೂವರೆ ಲಕ್ಷ ಲಸಿಕೆ ನೀಡಲಾಗಿದೆ. ಪ್ರತಿ ದಿನ ಮೂರು ಲಕ್ಷ ಮಂದಿಗೆ ಲಸಿಕೆ ನೀಡುವ ಗುರಿ ನಿಗದಿಪಡಿಸಲಾಗಿದೆ. 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ, 45 ವರ್ಷ ಮೇಲ್ಪಟ್ಟು ಅಸ್ವಸ್ಥತೆ ಹೊಂದಿರುವವರಿಗೆ ಲಸಿಕೆ ಹಾಕಿಸಬೇಕು. ಈ ಮೂಲಕ 2 ನೇ ಅಲೆ ತಡೆಯಬೇಕು ಎಂದರು.

ಆಂಬ್ಯುಲೆನ್ಸ್ ಕೊರತೆ ಆಗಬಾರದೆಂದು ಬೆಂಗಳೂರಿನಲ್ಲಿ 200 ಆಂಬ್ಯುಲೆನ್ಸ್ ನಿಯೋಜಿಸಲಾಗಿದೆ. ಎಲ್ಲ ಮಾಹಿತಿ ತಕ್ಷಣ ದೊರೆಯಲು ರಿಯಲ್ ಟೈಮ್ ವ್ಯವಸ್ಥೆ ಮಾಡಲಾಗುತ್ತಿದೆ. ಗೃಹ ವೈದ್ಯರು, ಅರೆವೈದ್ಯಕೀಯ ಸಿಬ್ಬಂದಿಯ ನೇಮಕವನ್ನು ತಾತ್ಕಾಲಿಕವಾಗಿ ಮಾಡಲು ತೀರ್ಮಾನಿಸಲಾಗಿದೆ. ಇದೇ ವಾರದಲ್ಲಿ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಲಾಗುವುದು. ಎರಡನೇ ಅಲೆಯ ವೇಳೆ ರೋಗಿಗಳ ಸಂಖ್ಯೆ ಹೆಚ್ಚಾದರೆ ಖಾಸಗಿ ಆಸ್ಪತ್ರೆಗಳ ವ್ಯವಸ್ಥೆ ಬೇಕಾಗುತ್ತದೆ. ಯಾವುದೇ ಸಂಸ್ಥೆಯಲ್ಲಿ ಲೋಪ ಕಂಡುಬಂದರೆ ಆಯಾ ಮುಖ್ಯಸ್ಥರನ್ನೇ ಹೊಣೆ ಮಾಡಲಾಗುವುದು ಎಂದರು.

ಇದನ್ನೂ ಓದಿ : ಲಾಕ್ಡೌನ್ ಕುರಿತು ಮಹತ್ವದ ಮಾಹಿತಿ ನೀಡಿದ ಸಚಿವ ಸುಧಾಕರ್

ಮೊದಲ ಬಾರಿ ಕೊರೋನಾ ಬಂದಾಗ ಸರಿಯಾದ ಮಾಹಿತಿ, ಜ್ಞಾನ ಇರಲಿಲ್ಲ. ಅದನ್ನು ಯಶಸ್ವಿಯಾಗಿ ನಿಯಂತ್ರಣಕ್ಕೆ ತರಲಾಗಿದೆ. ಎರಡನೇ ಅಲೆ ಬರುವ ಸಾಧ್ಯತೆ ಹಿನ್ನೆಲೆಯಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈಗ ನಮ್ಮ ಬಳಿ ಲಸಿಕೆಯೂ ಇದೆ. ಹಾಗಾಗಿ ಹೆಚ್ಚು ಜನರು ಲಸಿಕೆ ಹಾಕಿಸಿಕೊಳ್ಳಬೇಕು ಹಾಗೂ ತಪ್ಪದೇ ಸುರಕ್ಷತಾ ಕ್ರಮ ಪಾಲಿಸಬೇಕು ಎಂದರು.

ಕೋವಿಡ್ ಕೇರ್ ಸೆಂಟರ್ : ಬೆಂಗಳೂರಿನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು ಮುನ್ನೆಚ್ಚರಿಕಾ ಕ್ರಮವಾಗಿ ಒಟ್ಟು 1,000 ಹಾಸಿಗೆಯ ಕೋವಿಡ್ ಕೇರ್ ಸೆಂಟರ್ ನಿರ್ಮಿಸಿದ್ದು, ಸೋಮವಾರದಿಂದ ಕಾರ್ಯನಿರ್ವಹಿಸಲಿದೆ ಎಂದು ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಕೋವಿಡ್ ಸೋಂಕಿತರಿಗಾಗಿ ಹೆಚ್ಚುವರಿ ಹಾಸಿಗೆಗಳು, ಐಸಿಯುಗಳನ್ನು ಮೀಸಲಿಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಬೆಂಗಳೂರಿನಲ್ಲಿ 3 ಕೋವಿಡ್ ಕೇರ್ ಸೆಂಟರ್ ಗಳನ್ನು ಸ್ಥಾಪಿಸಲು ನಿರ್ಧಾರ ಮಾಡಲಾಗಿದೆ. ಇದರೊಂದಿಗೆ ರಾಜ್ಯದಲ್ಲಿರುವ 3500ಕ್ಕೂ ಹೆಚ್ಚಿನ ಲಸಿಕಾ ಕೇಂದ್ರಗಳಲ್ಲಿ ಲಸಿಕೆ ಅಭಿಯಾನವನ್ನು ತೀವ್ರಗೊಳಿಸಲಾಗುವುದು. ಪ್ರತಿ ದಿನ 3 ಲಕ್ಷ ಜನರಿಗೆ ಲಸಿಕೆ ನೀಡುವ ಗುರಿ ಹಾಕಿಕೊಳ್ಳಲಾಗಿದೆ. ಭಾರತ ಸರ್ಕಾರದ ನೀತಿಯಂತೆ ಆರೋಗ್ಯ ಕೇಂದ್ರಗಳಲ್ಲಿ ಮಾತ್ರ ಲಸಿಕೆ ನೀಡಬೇಕಾಗಿದೆ. ವೃದ್ಧಾಶ್ರಮಗಳಲ್ಲಿ, ಅಪಾರ್ಟ್ ಮೆಂಟ್ ಗಳಲ್ಲಿ ಹಾಗೂ ದುರ್ಗಮ ಪ್ರದೇಶಗಳಲ್ಲಿ ಲಸಿಕೆ ಅಭಿಯಾನ ಕೈಗೊಳ್ಳಲು ಅನುಮತಿ ಕೋರಲಾಗಿದೆ ಎಂದರು.

ಜನಶಕ್ತಿ ಮೀಡಿಯಾ ವಾಟ್ಸಪ್ ಸೇರಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ

ಇದಕ್ಕೂ ಮುನ್ನ ಕೊರೊನಾ ಎರಡನೇ ಅಲೆ ಹಿನ್ನೆಲೆ ಮುಂದಿನ ದಿನಗಳಲ್ಲಿ ಕೈಗೊಳ್ಳಬಹುದಾದ ಕ್ರಮಗಳ ಕುರಿತು ವೈಧ್ಯರೊಂದಿಗೆ ಹಾಗೂ ಅಧಿಕಾರಿಗಳೊಂದಿಗೆ ಮಹತ್ವದ ಚರ್ಚೆ ನಡೆಸಲಾಯಿತು. ಕೊರೊನಾ ಎರಡನೇ ಅಲೆ ನಿಯಂತ್ರಣ ಪರಿಣಾಮಕಾರಿಯಾಗಿ ಮಾಡುವುದು ಹೇಗೆ? ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್ ಕೊಠಡಿಗಳ ವ್ಯವಸ್ಥೆ, ಸೋಂಕಿತರಿಗಾಗಿ ಹಾಸಿಗೆಗಳ ಮೀಸಲು, ವೆಂಟಿಲೇಟರ್, ಆಕ್ಸಿಜನ್​ಗೆ ವ್ಯವಸ್ಥೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮಹತ್ವದ ಚರ್ಚೆ ನಡೆಸಲಾಯಿತು.

ಸಭೆಯಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಭಾಗಿಯಾಗಿದ್ದಾರೆ. ವೈದ್ಯಕೀಯ ಇಲಾಖೆ ಪ್ರಧಾನ ಕಾರ್ಯ ಅನಿಲ್ ಕುಮಾರ್, ಆರೋಗ್ಯ ಇಲಾಖೆ ಪ್ರಧಾನಕಾರ್ಯದರ್ಶಿ ಜಾವೇದ್ ಅಖ್ತರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ತ್ರಿಲೋಕ ಚಂದ್ರ, ರಾಜೀವ್ ಗಾಂಧಿ ವಿವಿ ಕುಲಪತಿ ಸಚ್ಚಿದಾನಂದ ಬಾಬು ಸೇರಿದಂತೆ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.

Donate Janashakthi Media

Leave a Reply

Your email address will not be published. Required fields are marked *