ನವದೆಹಲಿ: ಸುಮಾರು ಎರಡು ವರ್ಷಗಳ ನಂತರ ಈಗ ದೇಶದ ಹಲವು ರಾಜ್ಯಗಳಲ್ಲಿ ಕೋವಿಡ್ ಸೋಂಕು ತಡೆಗಟ್ಟಲು ವಿಧಿಸಲಾಗಿದ್ದ ನಿರ್ಬಂಧಗಳನ್ನು ಸಡಿಲಿಕೆ ಮಾಡಲಾಗಿದೆ. ಕೆಲವೆಡೆ ಸಂಪೂರ್ಣವಾಗಿ ಸಡಿಲಿಕೆಯಾಗಿವೆ. ಪಶ್ಚಿಮ ಬಂಗಾಳ, ದೆಹಲಿ, ಮಹಾರಾಷ್ಟ್ರದಲ್ಲಿ ಇಂದಿನಿಂದ ಮಾಸ್ಕ್ ಧರಿಸುವುದು ಕಡ್ಡಾಯವಲ್ಲ. ಹಿರಿಯ ನಾಗರೀಕರು, ಶ್ವಾಸಕೋಸ ರೋಗದಿಂದ ಬಳಲುತ್ತಿರುವವರು ಮಾಸ್ಕ್ ಧರಿಸಬೇಕು ಎಂದು ಸಲಹೆ ನೀಡಲಾಗಿದೆ.
ದೇಶದ ಬಹುತೇಕ ರಾಜ್ಯಗಳಲ್ಲಿ ಈಗ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದೆ ಓಡಾಡಿದರೆ ರೂ. 500 ನಿಂದ 1000 ವರೆಗೂ ದಂಡ ವಿಧಿಸಲಾಗುತ್ತಿತ್ತು. ಆದರೆ, ಈಗ ಅದನ್ನು ರದ್ದುಪಡಿಸಲಾಗಿದೆ. ಕೊರೊನಾ ಕಾಲದ ಆರಂಭದಲ್ಲಿ ಹೆಚ್ಚು ಸೋಂಕಿತರು ಕಂಡುಬಂದಿದ್ದ ಮಹಾರಾಷ್ಟ್ರದಲ್ಲಿಯೂ ಕೋವಿಡ್ ಸೋಂಕಿತರ ಪ್ರಮಾಣ ತೀವ್ರ ಕುಸಿದಿರುವುದರಿಂದ ಅಲ್ಲಿಯೂ ಸಹ ನಿಯಮವನ್ನು ಸಂಪೂರ್ಣ ಸಡಿಲಿಸಲಾಗಿದೆ.
ಆರೋಗ್ಯ ಇಲಾಖೆ ತಜ್ಞರು ಕೂಡ ಪರಿಸ್ಥಿತಿಯನ್ನು ಅವಲೋಕಿಸಿ ನಿಯಮಗಳನ್ನು ಸಡಿಲಗೊಳಿಸುವಂತೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದ ಕೆಲವು ಪ್ರದೇಶಗಳನ್ನು ಸೀಮಿತಗೊಳಿಸಿ ಎಲ್ಲಾ ಕಡೆ ಮಾಸ್ಕ್ ಇಲ್ಲದೆ ಮುಕ್ತ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.
ಮಾಸ್ಕ್ ಧರಿಸುವುದರಿಂದ ಹಲವು ಸಾಂಕ್ರಾಮಿಕ ರೋಗಗಳನ್ನು ತಡೆಯಬಹುದು. ಆದರೆ, ಕೆಲವರಿಗೆ ಉಸಿರಾಟದಲ್ಲಿ ತೊಂದರೆಯಾಗುವ ಹಾಗೂ ಬೇಸಿಗೆ ಹಿನ್ನೆಲೆಯಲ್ಲಿ ಕೆಲವೊಂದು ಬದಲಾವಣೆ ಮಾಡಲಾಗಿದೆ ಎಂದು ಪಶ್ಚಿಮ ಬಂಗಾಳ ಆರೋಗ್ಯ ಇಲಾಖೆ ತಿಳಿಸಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೊನಾ ಮಾರ್ಗಸೂಚಿಗಳನ್ನು ರದ್ದುಪಡಿಸಲಾಗಿದೆ ಎಂದು ಹೇಳಲಾಗಿದೆ. ಆದರೆ, ಮಾಸ್ಕ್ ಧರಿಸಬೇಕೇ, ಬೇಡವೇ ಎಂಬುದರ ಬಗ್ಗೆ ನಿರ್ದಿಷ್ಟವಾಗಿ ತಿಳಿಸಿಲ್ಲ. ಪಾಲಿಕೆ ವ್ಯಾಪ್ತಿಗಳಲ್ಲಿ ಮಾಸ್ಕ್ ಧರಿಸದಿದ್ದರೆ ಯಾವುದೇ ದಂಡವಿಲ್ಲ. ಆದರೆ, ಮಾಸ್ಕ್ ಧರಿಸುವುದು ಬಿಡುವುದು ಜನರಿಗೆ ಬಿಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರತಿ ದಿನ ದೇಶದಲ್ಲಿ 1,200 ರಿಂದ 1,300ರವರೆಗೆ ಹೊಸ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಆದರೆ, ಅವರು ಬೇಗ ಗುಣಮುಖರಾಗುತ್ತಿರುವುದರಿಂದ ಕೇಂದ್ರ ಸರ್ಕಾರ ರಾಜ್ಯಗಳಿಗೆ ಮುನ್ನೆಚ್ಚರಿಕೆ ಕ್ರಮಕೈಗೊಂಡು ಹಲವು ವಿನಾಯ್ತಿಗಳನ್ನು ನೀಡಬೇಕೆಂದು ಸೂಚನೆ ನೀಡಿರುವುದರಿಂದ ಬಹುತೇಕ ರಾಜ್ಯಗಳು ಮಾಸ್ಕ್ ಹಾಕಿಕೊಳ್ಳದಿರಲು ಮುಂದಾಗುತ್ತಿವೆ.
ಸಾಂಕ್ರಾಮಿಕ ಪರಿಸ್ಥಿತಿಯಲ್ಲಿನ ಒಟ್ಟಾರೆ ಸುಧಾರಣೆಯ ದೃಷ್ಟಿಯಿಂದ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಕೋವಿಡ್ ನಿಯಂತ್ರಣ ಕ್ರಮಗಳಿಗಾಗಿ ವಿಪತ್ತು ನಿರ್ವಹಣಾ ಕಾಯಿದೆ 2005ರ ಪಾಲನೆಯನ್ನು ನಿಲ್ಲಿಸುವಂತೆ ಶಿಫಾರಸು ಮಾಡಿದೆ. ಎನ್‌ಡಿಎಂಎ ಶಿಫಾರಸ್ಸನ್ನು ಗಮನಿಸಿ ಕೇಂದ್ರ ಗೃಹ ಕಾರ್ಯದರ್ಶಿ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಕೋವಿಡ್ ನಿಯಂತ್ರಣ ಕ್ರಮಗಳಿಗಾಗಿ ವಿಪತ್ತು ನಿರ್ವಹಣಾ ಕಾಯ್ದೆಯಡಿ ಹೊರಡಿಸಲಾದ ಆದೇಶಗಳು ಮತ್ತು ಮಾರ್ಗಸೂಚಿಗಳನ್ನು ಸ್ಥಗಿತಗೊಳಿಸುವಂತೆ ಪತ್ರ ಬರೆದಿದ್ದಾರೆ.
ಆದ್ದರಿಂದ, ಕೋವಿಡ್ ನಿಯಂತ್ರಣ ಕ್ರಮಗಳಿಗಾಗಿ ಆದೇಶಗಳು ಮತ್ತು ಮಾರ್ಗಸೂಚಿಗಳನ್ನು ಸೂಕ್ತವಾಗಿ ಸ್ಥಗಿತಗೊಳಿಸುವುದನ್ನು ಪರಿಗಣಿಸಲು ನಾನು ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸಲಹೆ ನೀಡುತ್ತೇನೆ ಎಂದು ಈ ಹಿಂದೆ ತಿಳಿಸಿದ್ದರು.
ಇದರ ನಡುವೆ ಜನರು ಹೆಚ್ಚು ಗುಂಪು ಗೂಡುವುದನ್ನು ಆದಷ್ಟು ತಡೆಯಬೇಕು ಎಂದು ಕೂಡ ತಿಳಿಸಲಾಗಿದೆ. ಬೇಸಿಗೆಯ ಬಿಸಿ ಗಾಳಿಗೆ ಹಲವು ಸಾಂಕ್ರಾಮಿಕ ರೋಗಗಳು ಹೆಚ್ಚುವುದರಿಂದ ಜನ ಸಾಮಾನ್ಯರು ಎಚ್ಚರಿಕೆ ವಹಿಸಬೇಕೆಂದು ಹವಾಮಾನ ಇಲಾಖೆ ಕೂಡ ತಿಳಿಸಿದೆ.
ಕೋವಿಡ್ ಪ್ರಕರಣಗಳು ಇಳಿಕೆ
ದೇಶದಲ್ಲಿನ ಕೋವಿಡ್ 19 ಸೋಂಕು ಪ್ರಕರಣಗಳ ಒಟ್ಟು ಸಂಖ್ಯೆ 4,30,25,775ಕ್ಕೆ ಏರಿಕೆಯಾಗಿದೆ. ಭಾರತದಲ್ಲಿ ಈವರೆಗೆ ಕೋವಿಡ್ 19 ಸೋಂಕಿನಿಂದ ಸಾವನ್ನಪ್ಪಿರುವವರ ಸಂಖ್ಯೆ 5,21,181ಕ್ಕೆ ತಲುಪಿದೆ ಎಂದು ವರದಿ ಹೇಳಿದೆ. ದೇಶಾದ್ಯಂತ ಕೋವಿಡ್ 19 ಸೋಂಕಿನಿಂದ ಚೇತರಿಸಿಕೊಂಡವರ ಒಟ್ಟು ಸಂಖ್ಯೆ 4,24,90,922ಕ್ಕೆ ಏರಿಕೆಯಾಗಿದೆ.