ಕೋವಿಡ್‌ನಿಂದಾಗಿ ಮಕ್ಕಳಿಗೆ ಕಲಿಕೆ ನಷ್ಟ, ಕಲಿಕೆಯ ಸಾಮರ್ಥ್ಯದಲ್ಲಿ ಇಳಿಕೆ

ಕೋವಿಡ್‍-19 ಶಾಲಾ ಶಿಕ್ಷಣರಂಗದ ಮೇಲೆ ಭಾರೀ ದುಷ್ಪರಿಣಾಮ ಉಂಟು ಮಾಡಿದೆ, ಈ ಅವಧಿಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಕೇವಲ 8% ಮತ್ತು ನಗರ ಪ್ರದೇಶಗಳಲ್ಲಿ 25% ವಿದ್ಯಾರ್ಥಿಗಳಿಗೆ  ಮಾತ್ರ ನಿಯಮಿತ ಶಿಕ್ಷಣ ಲಭ‍್ಯವಾಗಿದ್ದು, ಒಟ್ಟಾರೆಯಾಗಿ, ಸುಮಾರು ಒಂದು ವರ್ಷದ ‘ಕಲಿಕೆ ನಷ್ಟ’ ಮತ್ತು ಇದರಿಂದಾಗಿ ವಿದ್ಯಾರ್ಥಿಗಳ ಅಕ್ಷರ ಮತ್ತು ಅಂಕ ಕಲಿಕೆ ಎರಡೂ ಮಟ್ಟಗಳಲ್ಲಿ ತೀವ್ರ ಇಳಿಕೆಯಾಗಿದೆ ಎಂದು ಕಂಡು ಬಂದಿದೆ.

ಸುಮಾರು ಒಂದೂವರೆ ವರ್ಷದಿಂದ ಮುಚ್ಚಿದ್ದ ಶಾಲೆಗಳನ್ನು ಹಂತ-ಹಂತವಾಗಿ ತೆರೆಯಲಾಗುತ್ತಿದೆ. ಈ ವೇಳೆಗೆ  ಇದರಿಂದಾಗಿರುವ ದುಷ್ಪರಿಣಾಮದ ಕುರಿತ ಎರಡು ಸರ್ವೆ ವರದಿಗಳು ಈಗ ಪ್ರಕಟವಾಗಿವೆ: ಒಂದು, ಪ್ರಥಮ್ ಎಂಬ ಸಂಸ್ಥೆ ನಡೆಸುವ ಶಿಕ್ಷಣದ ವಾರ್ಷಿಕ ಸ್ಥಾನಮಾನ ವರದಿ (ASER- ಏಸರ್) ಇದು ಕರ್ನಾಟಕದಲ್ಲಿ ನಡೆಸಿರುವ ಸರ್ವೆ. ಇನ್ನೊಂದು  ಕರ್ನಾಟಕವೂ ಸೇರಿದಂತೆ 15 ರಾಜ್ಯಗಳಲ್ಲಿ ಸಂಶೋಧಕರು ಪ್ರಖ್ಯಾತ ಅರ್ಥಶಾಸ್ತ್ರಜ್ಞ ಜೀನ್‍ ಡ್ರೀಝ್‍ರೊಂದಿಗೆ ನಡೆಸಿರುವ ಅಧ್ಯಯನ-ಶಾಲಾ ಮಕ್ಕಳ ಆನ್‍ಲೈನ್‍ ಮತ್ತು ಆಫ್‍ಲೈನ್ ಕಲಿಕೆ(ಇಂಗ್ಲಿಷ್ ನಲ್ಲಿ ಸಂಕ್ಷಿಪ್ತವಾಗಿ SCHOOL- ‘ಸ್ಕೂಲ್’).

ಕರ್ನಾಟಕದಲ್ಲಿ ಈ ವರ್ಷ ಪ್ರಾಥಮಿಕ ತರಗತಿಗಳಲ್ಲಿ ವಿದ್ಯಾರ್ಥಿಗಳ ಅಕ್ಷರ ಮತ್ತು ಅಂಕ ಕಲಿಕೆ ಮಟ್ಟಗಳಲ್ಲಿ ತೀವ್ರ ಇಳಿಕೆಯಾಗಿದೆ ಎಂದು ಏಸರ್ ವರದಿ ಹೇಳುತ್ತದೆ. ಮೊದಲನೆ ತರಗತಿಯ 42.6% ವಿದ್ಯಾರ್ಥಿಗಳಲ್ಲಿ ಅಂಕೆಗಳನ್ನು ಗುರುತಿಸುವ ಸಾಮರ್ಥ್ಯದ ಕೊರತೆ ಕಂಡು ಬಂದರೆ 56.8% ವಿದ್ಯಾರ್ಥಿಗಳಲ್ಲಿ ಅಕ್ಷರಗಳನ್ನು ಗುರುತಿಸುವ ಸಾಮರ್ಥ್ಯದ ಕೊರತೆ ಕಂಡು ಬಂದಿದೆ. ಇದು 2018ರಲ್ಲಿ ಇದು 40% ಇತ್ತು. ಇನ್ನೂ ಆತಂಕದ ಸಂಗತಿಯೆಂದರೆ ರಾಜ್ಯಾದ್ಯಂತ ವಿದ್ಯಾರ್ಥಿಗಳ ನಡುವೆ ಸುಮಾರು ಒಂದು ವರ್ಷದ ‘ಕಲಿಕೆ ನಷ್ಟ’ ಕಂಡು ಬರುತ್ತಿದೆ.

ಇದನ್ನು ಓದಿ: ರಾಜ್ಯದಲ್ಲಿ 14 ಲಕ್ಷ ಮಕ್ಕಳ ಬಳಿ ಮೊಬೈಲ್‌ ಸೌಲಭ್ಯವಿಲ್ಲ- ಶೇಕಡಾ 40ರಷ್ಟು ವಿದ್ಯಾರ್ಥಿಗಳು ಶಿಕ್ಷಣದಿಂದ ದೂರ

ಬುನಾದಿ ಮಟ್ಟದ ಕೌಶಲ್ಯಗಳಲ್ಲಿ ಇಂತಹ ಇಳಿಕೆ ಪ್ರಾಥಮಿಕ ಶಿಕ್ಷಣದ ಎಲ್ಲ ಹಂತಗಳಲ್ಲೂ ಕಂಡು ಬಂದಿದೆ.

ಕೋವಿಡ್-19 ಬಾಧಿಸಿದ ನಂತರ ಈ ವರ್ಷದ ಆರಂಭದಲ್ಲಿ. ಪ್ರಥಮ್ ಎಂಬ ಸಂಸ್ಥೆ ನಡೆಸಿದ ಈ ಸರ್ವೆಯಲ್ಲಿ ರಾಜ್ಯದ 24 ಜಿಲ್ಲೆಗಳಲ್ಲಿ 13,365 ಕುಟುಂಬಗಳ 5ರಿಂದ 16 ವಯೋಗುಂಪಿನ 18,385 ಸರಕಾರಿ ಮತ್ತು ಖಾಸಗಿ ಶಾಲೆಗಳ ವಿದ್ಯಾರ್ಥಿಗಳನ್ನು ಸಂಪರ್ಕಿಸಲಾಗಿತ್ತು.

2018ರಲ್ಲಿ ಎರಡನೇ ತರಗತಿಯ ಪಠ್ಯವನ್ನು ಓದಬಲ್ಲ 8ನೇ ತರಗತಿಯ ವಿದ್ಯಾರ್ಥಿಗಳ ಪ್ರಮಾಣ 70% ಇದ್ದರೆ, ಈಗ 2021ರಲ್ಲಿ ಅದು 66%ಕ್ಕೆ ಇಳಿದಿದೆ. ಕೇವಲ 9.8% 3ನೇ ತರಗತಿ ವಿದ್ಯಾರ್ಥಿಗಳು 2ನೇ ತರಗತಿ ಪಠ್ಯವನ್ನು ಓದಬಲ್ಲವರಾಗಿದ್ದಾರೆ. 2018ರಲ್ಲಿ ಇದು 19.2% ಇತ್ತು. 5ನೇ ತರಗತಿ ಮತ್ತು 8ನೇ ತರಗತಿಯ ಮಟ್ಟಗಳಲ್ಲೂ ಕಲಿಕೆಯ ಕೌಶಲದ ಮಟ್ಟಗಳಲ್ಲಿ ಇಂತಹ ಇಳಿಕೆ ಕಂಡುಬಂದಿದೆ ಎಂದು ಈ ವರದಿ ಹೇಳುತ್ತದೆ.

ಅಂಕಾ ಜ್ಞಾನದಲ್ಲಂತೂ ಕಲಿಕೆಯ ಮಟ್ಟದಲ್ಲಿ ಇಳಿಕೆ ಇನ್ನೂ ಹೆಚ್ಚು. ಒಂದನೇ ತರಗತಿಯಲ್ಲಿ ಅಂಕೆಗಳನ್ನು ಗುರುತಿಸಲಾರದ ವಿದ್ಯಾರ್ಥಿಗಳ ಪ್ರಮಾಣ 2018ರಲ್ಲಿ 29.7%ವಿತ್ತಷ್ಟೇ. ಈಗ ಅದು 42.6%ಕ್ಕೇ ಏರಿದೆ.

ಮೂರನೇ ತರಗತಿಯ 17.3% ವಿದ್ಯಾರ್ಥಿಗಳು ಮಾತ್ರವೇ ಕಳೆಯುವ ಲೆಕ್ಕ ಮಾಡಬಲ್ಲರು. 2018ರಲ್ಲಿ ಇದು 26.3% ಇತ್ತು. 8ನೇ ತರಗತಿ ವಿದ್ಯಾರ್ಥಿಗಳಲ್ಲೂ ಭಾಗಾಕಾರ ಮಾಡಬಲ್ಲವರ ಪ್ರಮಾಣ 38.9% ಮಾತ್ರ.

ಇದನ್ನು ಓದಿ: ಪಠ್ಯಪುಸ್ತಕ ನೀಡದೆ ಶಾಲೆ ಆರಂಭಿಸಿದ್ದು ಯಾಕೆ? ಸರಕಾರಕ್ಕೆ ಹೈಕೋರ್ಟ್ ಪ್ರಶ್ನೆ?

‘ಕಲಿಕೆ ನಷ್ಟ’ದೊಂಧಿಗೆ ಕಲಿಕಾ ಸಾಮರ್ಥ್ಯದಲ್ಲಿ ಹಿನ್ನಡೆಯೂ ಉಂಟಾಗುತ್ತದೆ ಎಂಬುದು ಬಹಳಷ್ಟು ಶಾಲಾ ವರದಿಗಳಲ್ಲಿ ಕಂಡು ಬಂದಿದೆ ಎಂದು ಶಿಕ್ಷಣ ತಜ್ಞರು ಹೇಳುತ್ತಾರೆ. ಆದ್ದರಿಂದ ಕೋವಿಡ್‍ ನಂತರ ಶಾಲೆಗಳು ಪುನರಾರಂಭದ ನಂತರ  ಶಿಕ್ಷಕರ ಮೇಲೆ ಎಂದಿನ ಪಠ್ಯಕ್ರಮವನ್ನು ಪೂರ್ಣಗೊಳಿಸಲೇಬೇಕೆಂಬ ಒತ್ತಡ ಹಾಕಬಾರದು, ಬದಲಿಗೆ ಮುಂದಿನ ಎರಡು ವರ್ಷಗಳಿಗೆ ಪಠ್ಯಕ್ರಮವನ್ನು ಮರುಯೋಜಿಸುವ ತುರ್ತು ಅಗತ್ಯವಿದೆ ಎಂದು ಅವರು ಹೇಳುತ್ತಾರೆ.

ಆನ್‍ಲೈನ್’ ಪ್ರಶ್ನೆಗಳು

‘ಸ್ಕೂಲ್’ ಅಧ್ಯಯನದ ಪ್ರಕಾರ  ನಗರಪ್ರದೇಶಗಳಲ್ಲಿ 25% ಮಕ್ಕಗಳಿಗೆ ನಿಯಮಿತವಾಗಿ ಆನ್‍ಲೈನ್‍ ತರಗತಿಗಳು ಲಭ್ಯವಾಗಿದ್ದರೆ, 16% ಕ್ಕೆ ಕೆಲವೊಮ್ಮೆ ಇದು ಲಭ್ಯವಾಗುತ್ತಿತ್ತು. ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರ ಕೇವಲ 8% ಮಕ್ಕಳಿಗೆ ನಿಯಮಿತವಾಗಿ, ಇನ್ನು 8% ಮಕ್ಕಳಿಗೆ ಕೆಲವೊಮ್ಮೆ ಆನ್‌ಲೈನ್ ತರಗತಿಗಳು ಲಭ್ಯವಾಗಿದೆ. ನಿಯಮಿತವಾಗಿ ಖಾಸಗಿ ಟ್ಯೂಷನ್ ಪಡೆದವರ ಪ್ರಮಾಣ ನಗರಪ್ರದೇಶಗಳಲ್ಲಿ 24%ವಿದ್ದರೆ, ಗ್ರಾಮೀಣ ಪ್ರದೇಶಗಳಲ್ಲಿ 14%. ಒಟ್ಟಾರೆಯಾಗಿ ನಗರಪ್ರದೇಶಗಳಲ್ಲಿ 47% ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 28% ಮಕ್ಕಳು ಮಾತ್ರ ನಿಯಮಿತ ತರಗತಿಗಳ ಪ್ರಯೋಜನ ಪಡೆಯಲು ಆನ್‌ಲೈನ್‍ ಮೂಲಕ ಸಾಧ್ಯವಾಗಿದೆ. ನಗರಪ್ರದೇಶಗಳಲ್ಲಿ 19% ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 37% ಈ ಕೋವಿಡ್‍ ಕಾಲದಲ್ಲಿ ಯಾವುದೇ ಶಿಕ್ಷಣವನ್ನು ಪಡೆಯಲಿಲ್ಲ. ಆನ್‍ಲೈನ್‍ ತರಗತಿಗಳಿಗೆ ಹಾಜರಾದವರಲ್ಲಿಯೂ ಬಹುಪಾಲು ಮಕ್ಕಳಿಗೆ ಸಂಪರ್ಕದ ಸಮಸ್ಯೆಗಳು ಎದುರಾದವು, ಅದರಿಂದಾಗಿ ತರಗತಿಗಳಿಂದ ಪ್ರಯೋಜನ ಪಡೆಯುವುದು ಕಷ್ಟಕರವಾಗಿತ್ತು.

ದಲಿತ ಮತ್ತು ಆದಿವಾಸಿ ಕುಟಂಬಗಳ ಮಕ್ಕಳು ಈ ಕೋವಿಡ್‍ ಕಾಲದಲ್ಲಿ ಅತಿ ಹೆಚ್ಚು ಬಾಧಿತರಾಗಿದ್ದಾರೆ. ಕೇವಲ 5% ಮಕ್ಕಳಿಗೆ ಆನ್‍ಲೈನ್‍ ಸೌಕರ್ಯ ಲಭ್ಯವಾಗಿದೆ ಎಂದು ಈ ವರದಿ ಹೇಳುತ್ತದೆ.

ಶಾಲೆಗಳು ಮುಚ್ಚಿದ್ದರಿಂದ ಶಿಕ್ಷಣದ ಮೇಲಷ್ಟೇ ಅಲ್ಲ, ಪೌಷ್ಟಿಕತೆಯ ಮೇಲೂ ದುಷ್ಪರಿಣಾಮ ಉಂಟಾಗಿರುವುದು ಕೂಡ ಕಂಡುಬಂದಿದೆ. ಏಕೆಂದರೆ ಈ ಸರ್ವೆ ನಡೆಸಿದ ಎಲ್ಲ ರಾಜ್ಯಗಳಲ್ಲೂ ಶಾಲೆ ಮುಚ್ಚುವುದರೊಂದಿಗೆ ಮಧ್ಯಾಹ್ನದ ಊಟವೂ ನಿಂತು ಹೋಗಿದೆ.

ಭಾರತದಲ್ಲಿ ಶಾಲೆಗಳ ಲಾಕ್‍ಡೌನ್‍ ಅವಧಿ ಇಡೀ ಜಗತ್ತಿನಲ್ಲೇ ಅತಿ ದೀರ್ಘಕಾಲದ್ದಾಗಿದ್ದು, ಇದು ಅಪಾರ ವಿಪತ್ತನ್ನು ತಂದಿದೆ ಎನ್ನುವ ಈ ವರದಿ ಕೂಡ ಈ ಹಾನಿಯನ್ನು ತುಂಬಲು ಹಲವು ವರ್ಷಗಳ ಶ್ರಮದ ಅಗತ್ಯವಿದೆ ಎಂದಿದೆ. ಪುನರಾರಂಭ ಮೊದಲ ಹೆಜ್ಜೆಯಷ್ಟೇ. ಈ ಬಗ್ಗೆಯೂ ಇನ್ನೂ ಚರ್ಚೆ ನಡೆಯುತ್ತಿದೆ. ಹೆಚ್ಚಿನ ರಾಜ್ಯಗಳಲ್ಲಿ  ಈ ಮೊದಲನೇ ಹೆಜ್ಜೆಗೂ ಸರಿಯಾದ ಸಿದ್ಧತೆಗಳು, ಅಂದರೆ, ಶಾಲಾ ಕಟ್ಟಡಗಳ ರಿಪೇರಿ, ಸುರಕ್ಷತಾ ಮಾರ್ಗನಿರ್ದೇಶನಗಳು, ಶಿಕ್ಷಕರ ತರಬೇತಿ, ಶಾಲೆಗೆ ಸೇರಿಸುವ ಅಭಿಯಾನ ಇತ್ಯಾದಿಗಳು ಕಾಣಿಸುತ್ತಲೂ ಇಲ್ಲ ಎಂದು ಈ ಅಧ್ಯಯನ ಹೇಳುತ್ತದೆ.

Donate Janashakthi Media

Leave a Reply

Your email address will not be published. Required fields are marked *