ಉಲ್ಬಣಗೊಳ್ಳುತ್ತಿರುವ ಕೊವಿಡ್ ಮಹಾಜಾಡ್ಯ ಮತ್ತು ಆಳವಾಗುತ್ತಿರುವ ಆರ್ಥಿಕ ಹಿಂಜರಿತದಿಂದಾಗಿ ಮಾನವಕೋಟಿಯು ಬಹು ದೊಡ್ಡ ಕಷ್ಟಕರ ಸವಾಲನ್ನು ಎದುರಿಸುತ್ತಿರುವಾಗ, ನವ ಉದಾರವಾದಿ ಬಂಡವಾಳಶಾಹಿ ಮತ್ತು ಸಮಾಜವಾದದ ನಡುವಿನ ತೀವ್ರ ವ್ಯತ್ಯಾಸಗಳು ಎದ್ದು ಕಾಣುತ್ತಿವೆ. ನವ–ಉದಾರವಾದಿ ಬಂಡವಾಳಶಾಹಿಯ ಬಳಿ ಜನರ ಕಷ್ಟಕೋಟಲೆಗಳನ್ನು ಪರಿಹರಿಸುವ ಯಾವುದೇ ಪರಿಹಾರವಿಲ್ಲ, ಬದಲು ಅದು ಅವನ್ನು ತೀವ್ರಗೊಳಿಸುತ್ತದೆಯಷ್ಟೇ. ಯಾವುದೇ ಪರಿಹಾರವನ್ನು ಬಂಡವಾಳವಾದದ ಹೊರಗೆ ಮಾತ್ರವೇ ಕಂಡುಕೊಳ್ಳಬಹುದು, ಅಂದರೆ ಸಮಾಜವಾದದಲ್ಲಿ.
– ಸೀತಾರಾಂ ಯೆಚೂರಿ
ಜಗತ್ತಿನ ಬಹುಸಂಖ್ಯಾತ ಜನರು ಜೋಡಿ ಕೇಡುಗಳ ದಾಳಿಗಳಿಂದ ತತ್ತರಿಸಿ ಹೋಗಿದ್ದಾರೆ: ಬಂಡವಾಳಶಾಹಿ ಜಗತ್ತಿನಲ್ಲಿ ಒಂದು ಕಡೆ ಉಲ್ಬಣಗೊಳ್ಳುತ್ತಿರುವ ಕೋವಿಡ್-19 ಮಹಾರೋಗ, ಅದರ ಪರಿಣಾಮದಿಂದಾಗಿ ಲಾಕ್ಡೌನ್‌ಗಳು ಹಾಗೂ ಮೂರಾಬಟ್ಟೆಯಾದ ಜನರ ದಿನನಿತ್ಯದ ಬದುಕು; ಮತ್ತೊಂದೆಡೆ ತೀವ್ರವಾಗುತ್ತಿರುವ ಆರ್ಥಿಕ ಹಿಂಜರಿತ. ಇಂತಹ ಸಮಯದಲ್ಲಿ ಮಹಾನ್ ಅಕ್ಟೋಬರ್ ಸಮಾಜವಾದಿ ಕ್ರಾಂತಿಯ 2020ರ ವರ್ಷಾಚರಣೆ ಬಂದಿದೆ. ಈ ಸನ್ನಿವೇಶದಲ್ಲಿ, ಅಕ್ಟೋಬರ್ ಕ್ರಾಂತಿಯ ಮಹತ್ವ ಮತ್ತು ಬಂಡವಾಳವಾದಕ್ಕಿಂತ ಸಮಾಜವಾದದ ಹಿರಿಮೆಯು ಎಲ್ಲರ ಕಣ್ಣಿಗೆ ಎದ್ದು ಕಾಣುತ್ತಿದೆ.
ಹೊಸ ಯುಗವನ್ನೇ ಸೃಷ್ಟಿಸಿದ ಕೊಡುಗೆಗಳು
ಹಲವಾರು ವರ್ಷಗಳಿಂದ, ಅಕ್ಟೋಬರ್ ಕ್ರಾಂತಿಯು 20ನೇ ಶತಮಾನದಲ್ಲಿ ಮಾನವ ನಾಗರೀಕತೆಯ ಮುನ್ನಡೆಯ ಹಾದಿಯನ್ನು ರೂಪಿಸುವಲ್ಲಿ ನೀಡಿದ ಯುಗಾಂತರಕಾರೀ ಕೊಡುಗೆಗಳನ್ನು ಮತ್ತೆ-ಮತ್ತೆ ಗಮನಿಸುತ್ತಲೇ ಇದ್ದೇವೆ. ಅದರ ಸಾಧನೆಗಳಾದ ಸಾರ್ವತ್ರಿಕ ಶಿಕ್ಷಣ, ಉದ್ಯೋಗ, ಆರೋಗ್ಯ ಮತ್ತು ಸಾಮಾಜಿಕ ಸುಭದ್ರತೆಗಳು ಮತ್ತು ನೀಡಿದ ಸ್ಪೂರ್ತಿಯು ಜಗತ್ತಿನ ಕಮ್ಯುನಿಸ್ಟ್ ಚಳುವಳಿಯಲ್ಲಿ ವಿದ್ಯುತ್ ಸಂಚಾರ ಉಂಟುಮಾಡಿದೆ; ಅದು ಸಮಾಜವಾದಿ ದೇಶಗಳ ಸ್ಥಾಪನೆಗೆ ಮತ್ತು ಉತ್ತಮ ಜಗತ್ತಿಗಾಗಿನ ಜನರ ಹೋರಾಟಗಳ ಮುನ್ನಡೆಗೆ ಕಾರಣವಾಗಿದೆ. ಎರಡನೇ ವಿಶ್ವ ಯುದ್ಧದಲ್ಲಿ ಸೋವಿಯತ್ ಯೂನಿಯನ್ ವಹಿಸಿದ ನೇತೃತ್ವದ ಪಾತ್ರವು ಫ್ಯಾಸಿಸಂ ಹಾಗೂ ಹಿಟ್ಲರನ ಸೋಲಿಗೆ ಕಾರಣವಾಗಿ ಜಗತ್ತನ್ನು ಫ್ಯಾಸಿಸಂನ ಪಿಡುಗಿನಿಂದ ಮುಕ್ತ ಮಾಡಿತು ಮತ್ತು ತತ್ಪರಿಣಾಮವಾಗಿ ಜಾಗತಿಕವಾಗಿ ವಸಾಹತುಗಳು ವಿಮೋಚನೆ ಪಡೆಯುವ ಪ್ರಕ್ರಿಯೆಗೆ ಚಾಲನೆ ದೊರೆಯಿತು.
ಇದು, ಬೇರೆಲ್ಲವುಗಳ ಜತೆಯಲ್ಲಿ, ಹಲವಾರು ಬಂಡವಾಳಶಾಹಿ ದೇಶಗಳು “ಕಲ್ಯಾಣ ಪ್ರಭುತ್ವ”ವನ್ನು ಅಂಗೀಕರಿಸಿ ಜನರಿಗೆ ಒಂದು ಮಟ್ಟದ ಸಾಮಾಜಿಕ ಸುಭದ್ರತೆಯನ್ನು ಖಾತ್ರಿಪಡಿಸಲೇ ಬೇಕಾದ ಬಲವಂತಕ್ಕೆ ಒಳಗಾಗುಂತೆ ಮಾಡಿತು, ಆ ಮೂಲಕ ಸಮಾಜವಾದಿ ಚಿಂತನೆಗಳು ಜನರಿಂದ ಪಡೆದ ಬೆಂಬಲದ ಮಹಾಪೂರವನ್ನು ತಡೆಯಲು ಪ್ರಯತ್ನ ಮಾಡಿದವು. ವಿಜ್ಞಾನದ ಮುನ್ನಡೆಯ ಕ್ಷೇತ್ರದಲ್ಲಿ, ಸೋವಿಯತ್ ಯೂನಿಯನ್ ಬಾಹ್ಯಾಕಾಶದ ಗಡಿಗಳನ್ನು ದಾಟುವುದಲ್ಲದೇ ಇನ್ನಿತರ ವೈಜ್ಞಾನಿಕ ಮುನ್ನಡೆಗಳಲ್ಲಿ ಮತ್ತು ಸಾಧನೆಗಳಲ್ಲಿ ಮೊದಲಿಗರಾಗಿದ್ದು ಉಳಿದವರ ಕಣ್ಣು ಕೆಂಪಗೆ ಮಾಡಿತ್ತು. ಅದೇ ರೀತಿಯಲ್ಲಿ ಕಲೆಯ ಜಗತ್ತಿನಲ್ಲಿ, ಐಸೆನ್ ಸ್ಟೈನ್ ಅವರು ದೃಶ್ಯ ಸಂಯೋಜನೆಯ(ಮಾಂಟಾಜ್) ತಂತ್ರ ಕೌಶಲವನ್ನು ಆರಂಭಿಸುವ ಮೂಲಕ ಸೋವಿಯತ್ ಸಿನಿಮಾವು ಚಲನಚಿತ್ರ ಕಲೆಯಲ್ಲಿ ಕ್ರಾಂತಿಯನ್ನೇ ಉಂಟುಮಾಡಿತು. ಇದಕ್ಕೂ ಮಿಗಿಲಾಗಿ, ಸಾಮ್ರಾಜ್ಯಶಾಹಿಯು ಜಾಗತಿಕ ಯಜಮಾನಿಕೆಗಾಗಿ ನಡೆಸುತ್ತಿದ್ದ ಆಕ್ರಮಣಕಾರಿ ಪ್ರಯತ್ನಗಳ ವಿರುದ್ಧ ಕಲ್ಲುಬಂಡೆಯಂತಹ ತಡೆಗೋಡೆಯಾಗಿ ನಿಂತ ಸೋವಿಯತ್ ಯೂನಿಯನ್ ಜಗತ್ತಿನಲ್ಲಿ ರಾಷ್ಟ್ರೀಯ ವಿಮೋಚನಾ ಚಳುವಳಿಗೆ ಸ್ಪೂರ್ತಿ ನೀಡಿತು ಮತ್ತು ಅದನ್ನು ಹುರಿದುಂಬಿಸಿತು ಕೂಡ. ಇದು ಜಾಗತಿಕ ಶಾಂತಿ ನೆಲೆಸುವಂತೆ ಖಾತರಿಪಡಿಸಿತು.
ಅದರ ಅವಸಾನದೊಂದಿಗೆ (ಅದಕ್ಕೆ ಕಾರಣಗಳನ್ನು ಸಿಪಿಐ(ಎಂ) ನ 14ನೇ ಮಹಾಧಿವೇಶನದ ಸೈದ್ಧಾಂತಿಕ ನಿರ್ಣಯದಲ್ಲಿ ನಾವು ವಿಶ್ಲೇಷಿಸಿದ್ದೇವೆ) ಸಾಮ್ರಾಜ್ಯಶಾಹಿಯು ತನ್ನ ನಗ್ನ ಆಕ್ರಮಣವನ್ನು ಅಂತರಾಷ್ಟ್ರೀಯ ಹಣಕಾಸು ಬಂಡವಾಳದ ನಾಯಕತ್ವದಲ್ಲಿ ನವ ಉದಾರವಾದಿ ಜಾಗತೀಕರಣದ ಮೂಲಕ ಪ್ರಾರಂಭಿಸಿತು. ಇದರ ಪರಿಣಾಮಗಳನ್ನು ವಿಶ್ಲೇಷಿಸಲಾಗಿದೆ ಮತ್ತು ಯಾವ ರೀತಿಯಲ್ಲಿ ಇದನ್ನು ಪ್ರತಿರೋಧಿಸಬೇಕು ಎಂಬುದನ್ನು ಜಾಗತಿಕವಾಗಿ ಕಮ್ಯುನಿಸ್ಟ್ ಪಕ್ಷಗಳು ತಂತಮ್ಮ ದೇಶಗಳಲ್ಲಿ ಯೋಜಿಸಿವೆ ಮತ್ತು ನಾವು ನಮ್ಮ ದೇಶದಲ್ಲಿ ಇಲ್ಲಿನ ಪರಿಸ್ಥಿತಿಗಳಿಗೆ ಅನುಗುಣವಾಗಿ ಮೂರ್ತವಾಗಿ ಯೋಜಿಸಿದ್ದೇವೆ..
ಕೋವಿಡ್ ಸವಾಲನ್ನು ಎದುರಿಸುವಲ್ಲಿ
ಅತ್ತ ಬಂಡವಾಳಶಾಹಿ ದೇಶಗಳು ಸದ್ಯದಲ್ಲಿ ಮಹಾರೋಗದ ಮರುಕಳಿಸುವಿಕೆಯ ಹೊಡೆತದಿಂದ ತತ್ತರಿಸುತ್ತಿರುವಾಗ, ಸೋಂಕಿನ ಹಠಾತ್ ಏರಿಕೆ ಮತ್ತು ಸಾವುಗಳು “ಇನ್ನೂ ಹೆಚ್ಚಿನ ಅಪಾಯದ ಸಣ್ಣ ಸೂಚನೆಯಷ್ಟೆ” ಎಂದು ತಜ್ಞರು ಎಚ್ಚರಿಸುತ್ತಿರುವಾಗ, ಇದಕ್ಕೆ ಸಂಪೂರ್ಣ ವ್ಯತಿರಿಕ್ತವಾಗಿ, ಅತ್ತ ಸಮಾಜವಾದಿ ದೇಶಗಳು ಕೋವಿಡ್ ಸೋಂಕಿನ ಹರಡುವಿಕೆಯನ್ನು ತಡೆಯುವಲ್ಲಿ ಶಕ್ತವಾಗಿವೆ ಮತ್ತು ಆರ್ಥಿಕ ಚಟುವಟಕೆಗಳನ್ನು ಮತ್ತೆ ಆರಂಭಿಸಿರುವುದು ಎದ್ದು ಕಾಣುತ್ತಿದೆ. ಅಕ್ಟೋಬರ್‌ವರೆಗೆ, ಚೀನಾವು 85,000 ಕ್ಕಿ ಮತ ಹೆಚ್ಚು ಪ್ರಕರಣಗಳು ಹಾಗೂ 4,634 ಸಾವುಗಳನ್ನು ವರದಿ ಮಾಡಿದೆ.
ಕ್ಯೂಬಾ, ಈ ರೋಗದಿಂದ 123 ಜನರನ್ನು ಕಳೆದುಕೊಂಡಿದೆ. ಅಮೆರಿಕದ ಆರ್ಥಿಕ ದಿಗ್ಬಂಧನದ ಹೊರತಾಗಿಯೂ, ಆ ದೇಶವು ಈ ಮಹಾರೋಗವನ್ನು ತಡೆಯುವಲ್ಲಿ ಮತ್ತು ದೊಡ್ಡ ಸಂಖ್ಯೆಯಲ್ಲಿ ಜನರ ಜೀವಗಳನ್ನು ರಕ್ಷಿಸಲು ಶಕ್ತವಾಗಿದೆ. ಅದು ಈಗ ಜಗತ್ತಿನ ಸುಮಾರು 50 ದೇಶಗಳಲ್ಲಿ ತನ್ನ ವೈದ್ಯರೊಂದಿಗೆ, ಔಷಧಿಗಳೊಂದಿಗೆ ಮತ್ತು ವೈದ್ಯಕೀಯ ಉಪಕರಣಗಳೊಂದಿಗೆ ಸಹಾಯ ಮಾಡುತ್ತಿದೆ.
ವಿಯೆಟ್ನಾಂನಲ್ಲಿ, ಇಲ್ಲಿಯವರೆಗೆ 139 ಜನರು ತಮ್ಮ ಜೀವ ಕಳೆದುಕೊಂಡಿದ್ದಾರೆ ಮತ್ತು ಆ ದೇಶದಲ್ಲಿ ಮತ್ತೆ ಎರಗಿದ ಆ ರೋಗದ ಎರಡನೇ ಅಲೆಯನ್ನು ಯಶಸ್ವಿಯಾಗಿ ತಡೆಯಲಾಗಿದೆ. ವಿಯೆಟ್ನಾಂ ಸರ್ಕಾರವು ವಾರದ ಮಾರುಕಟ್ಟೆಯನ್ನು ಪ್ರಾರಂಭಿಸಿ ಜನರಿಗೆ ಎಲ್ಲಾ ಜೀವನಾವಶ್ಯಕ ವಸ್ತುಗಳನ್ನು ಉಚಿತವಾಗಿ ನೀಡುತ್ತಿದೆ. ಅಕ್ಕಿಯ ಎಟಿಎಂಗಳನ್ನು ಆರಂಭಿಸಿ ಅಲ್ಲಿ ಜನರು ಅಕ್ಕಿಯನ್ನು ಉಚಿತವಾಗಿ ಕೊಂಡೊಯ್ಯುವಂತೆ ವ್ಯವಸ್ಥೆ ಮಾಡಿದೆ.
ಡಿಪಿಆರ್‌ಕೆ(ಉತ್ತರ ಕೊರಿಯಾ)ದಲ್ಲಿ ಇಲ್ಲಿಯವರೆಗೂ, ಪ್ರವಾಹದ ಹಾವಳಿ ಮತ್ತು ಚಂಡಮಾರುತಗಳ ಹೊರತಾಗಿಯೂ ಯಾವುದೇ ಸಾವು ಸಂಭವಿಸಿಲ್ಲ ಎಂದು ವರದಿಯಾಗಿದೆ. ನೆರವು ಮತ್ತು ಪುನರ್ವಸತಿಗಾಗಿನ ಭಾರಿ ಕಾರ್ಯಾಚರಣೆಗಳ ನಡುವೆಯೂ ಮಹಾರೋಗ ಹರಡದಂತೆ ನೋಡಿಕೊಳ್ಳಲಾಗಿದೆ.
ಮಾನವಕೋಟಿಯು ಬಹು ದೊಡ್ಡ ಕಷ್ಟಕರ ಸವಾಲನ್ನು ಎದುರಿಸುತ್ತಿರುವಾಗ, ನವ ಉದಾರವಾದಿ ಬಂಡವಾಳಶಾಹಿ ಮತ್ತು ಸಮಾಜವಾದದ ನಡುವೆ ಈ ವಿಚಾರದಲ್ಲಿ ವ್ಯತ್ಯಾಸಗಳು ಎದ್ದು ಕಾಣುತ್ತಿವೆ.
ಜಾಗತಿಕ ಆರ್ಥಿಕ ಪರಿಸ್ಥಿತಿ
1929-30ರ ಮಹಾ ಕುಸಿತದ ನಂತರ ಈಗಿನ ಜಾಗತಿಕ ಆರ್ಥಿಕತೆಯು ಅತ್ಯಂತ ಆಳವಾದ ಹಿಂಜರಿತಕ್ಕೆ ಒಳಗಾಗಿದೆ ಎಂದು ವಿಶ್ವ ಬ್ಯಾಂಕ್ ವರ್ಣಿಸಿದೆ.
ಇದು ಜಗತ್ತಿನ ಬಹುಪಾಲು ಜನರ ಬದುಕಿನ ಪರಿಸ್ಥಿತಿಯ ಮೇಲೆ ಗಂಭೀರ ಪರಿಣಾಮ ಬೀರಿದೆ. ವಿಶ್ವ ಬ್ಯಾಂಕಿನ ಪ್ರಕಾರ, 2021ರ ಹೊತ್ತಿಗೆ, 15ಕೋಟಿಗಿಂತಲೂ ಹೆಚ್ಚು ಜನರು ತೀವ್ರ ಬಡತನಕ್ಕೆ ತಳ್ಳಲ್ಪಡುತ್ತಿದ್ದಾರೆ. ಅರ್ಥವ್ಯವಸ್ಥೆಯಲ್ಲಿ ಶ್ರಮಶಕ್ತಿಯ ಭಾಗವಹಿಸುವಿಕೆಯು ಕೋವಿಡ್‌ಗೆ ಮುಂಚಿನ ಮಟ್ಟಕ್ಕಿಂತಲೂ ಕೆಳಗೆ ಇರಲಿದೆ ಮತ್ತು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ನಷ್ಟವಾಗಲಿದೆ. ಐಎಲ್‌ಒ(ಅಂತರಾಷ್ಟ್ರೀಯ ಕಾರ್ಮಿಕ ಸಂಘಟನೆ)ಯ ಪ್ರಕಾರ, ಜಾಗತಿಕ ಮಾನವ ಗಂಟೆಗಳ ಇಳಿಕೆಯು 2019ರ ನಾಲ್ಕನೇ ತ್ರೈಮಾಸಿಕಕ್ಕೆ ಹೋಲಿಸಿದರೆ 2020ರ ಎರಡನೇ ತ್ರೈಮಾಸಿಕದಲ್ಲಿ 40 ಕೋಟಿ ಪೂರ್ಣಕಾಲದ ಉದ್ಯೋಗ ನಷ್ಟಕ್ಕೆ ಸಮನಾಗಿದೆ. ಇದು ಮೊದಲ ತ್ರೈಮಾಸಿಕದ 15.5 ಕೋಟಿ ಉದ್ಯೋಗ ನಷ್ಟದ ಸಂಖ್ಯೆಗೆ ಹೋಲಿಸಿದರೆ ಅಪಾಯಕಾರಿ ಏರಿಕೆಯಾಗಿದೆ.
ಸಮಾಜವಾದಿ ಚೀನಾ
2020ರ ಅದೇ ಎರಡನೇ ತ್ರೈಮಾಸಿಕ(ಏಪ್ರಿಲ್-ಜೂನ್)ದಲ್ಲಿ, ಜಗತ್ತಿನ ಇತರ ಪ್ರಮುಖ ಅರ್ಥವ್ಯವಸ್ಥೆಗಳು ತಮ್ಮ ಜಿಡಿಪಿಯಲ್ಲಿ ಗಣನೀಯವಾದ ಕುಸಿತವನ್ನು ಕಾಣುತ್ತಿದ್ದಾಗ, ಭಾರತವು (-) 23.9ಶೇ. ದಾಖಲಿಸಿದ ಸಂದರ್ಭದಲ್ಲಿ, ಚೀನಾ ಜನತಾ ಗಣತಂತ್ರ ಮಾತ್ರವೇ ಧನಾತ್ಮಕ ಬೆಳವಣಿಗೆಯಾದ ಶೇಕಡಾ +3.2ರಷ್ಟು ದಾಖಲಿಸಿತು. ಅದರ ಮುಂದಿನ ತ್ರೈಮಾಸಿಕದಲ್ಲಿ, ಬಂಡವಾಳಶಾಹಿ ಜಗತ್ತು ಇನ್ನೂ ಹಿಂಜರಿತದಲ್ಲೇ ತತ್ತರಿಸುತ್ತಿದ್ದಾಗ, ಚೀನಾದ ಆರ್ಥಿಕತೆಯು ಶೇಕಡಾ 4.9 ರಷ್ಟು ಬೆಳೆಯಿತು. ಐಎಂಎಫ್‌ನ ಅಂದಾಜಿನ ಪ್ರಕಾರ 2020ರಲ್ಲಿ ಚೀನಾವು ಶೇಕಡಾ 6.1 ರಷ್ಟು ನೈಜ ಜಿಡಿಪಿಯನ್ನು ದಾಖಲಿಸಿದರೆ ಇತರ ಪ್ರಮುಖ ಆರ್ಥಿಕತೆಗಳು ಶೇಕಡಾ (-) 5.9 ರಷ್ಟು ನೈಜ ಜಿಡಿಪಿ ದಾಖಲಿಸಬಹುದು.
ನವ–ಉದಾರವಾದದ ದಿವಾಳಿತನ
ನವ-ಉದಾರವಾದ ಮತ್ತು ಅದರ ಆರ್ಥಿಕ ಸುಧಾರಣೆಯ ಹಾದಿಯು ಲಾಭಗಳನ್ನು ಅತ್ಯಧಿಕ ಪ್ರಮಾಣಕ್ಕೆ ಕೊಂಡೊಯ್ಯುವ ಗುರಿಯನ್ನು ಹೊಂದಿತ್ತು ಮತ್ತು ಅದು ಜಗತ್ತಿನ ಎಲ್ಲೆಡೆಯ ಬಹುಪಾಲು ಜನರ ಶೋಷಣೆಯನ್ನು ತೀವ್ರವಾಗಿಸಿತು. ಅದು ಆರ್ಥಿಕ ಅಸಮಾನತೆಗಳನ್ನು ಹೆಚ್ಚಿಸಿತು, ಕೊವಿಡ್ ಮಹಾರೋಗ ಹೆಚ್ಚಿದಂತೆಲ್ಲಾ ಹಾಗೂ ಆರ್ಥಿಕ ಹಿಂಜರಿತ ಆಳವಾದಂತೆಲ್ಲಾ ಜಾಗತಿಕ ಬಿಲಿಯಾಧಿಪತಿಗಳ ಲಾಭಗಳು ಇನ್ನೂ ಕೊಬ್ಬಿದವು. ತತ್ಪರಿಣಾಮವಾಗಿ ಅದು ಬಹುಪಾಲು ಜನರ ಕೈಯಲ್ಲಿನ ಕೊಳ್ಳುವ ಶಕ್ತಿಯನ್ನು ಏಕಾಏಕಿ ತೀವ್ರವಾಗಿ ಇಳಿಸಿತು, ಅದು, ಪುನಃ, ಬೇಡಿಕೆಯಲ್ಲಿ ಭಾರಿ ಕುಸಿತಕ್ಕೆ ಕಾರಣವಾಯಿತು. ಬಂಡವಾಳಶಾಹಿ ವ್ಯವಸ್ಥೆಯಲ್ಲಿ, ಉತ್ಪಾದನೆಯಾಗಿದ್ದು ಮಾರಾಟವಾಗದಿದ್ದರೆ, ಆಗ ಲಾಭವೂ ಇಲ್ಲ ಮತ್ತು ಬೆಳವಣಿಗೆಯೂ ಆಗುವುದಿಲ್ಲ. ಬೆಳವಣಿಗೆ ಇಲ್ಲದಿದ್ದಾಗ, ಶೋಷಣೆಯನ್ನು ಹೆಚ್ಚು ಮಾಡಿ ಜನರನ್ನು ಹಿಂಡಿಹಿಪ್ಪೆ ಮಾಡುವುದರ ಮೂಲಕ ಮಾತ್ರವೇ ಲಾಭವನ್ನು ಹೆಚ್ಚಿಸಿಕೊಳ್ಳಬಹುದು. ಈಗ ಜಾಗತಿಕವಾಗಿ ಆಗುತ್ತಿರುವುದು ಇದೇ. ಉದ್ಯೋಗವನ್ನು ಮತ್ತು ಬೇಡಿಕೆಯನ್ನು ಹೆಚ್ಚಿಸುವ ಸಾರ್ವಜನಿಕ ವೆಚ್ಚದಲ್ಲಿನ ಭಾರಿ ಏರಿಕೆಯನ್ನು ನವ-ಉದಾರವಾದವು ತಡೆಹಿಡಿಯುತ್ತದೆ, ಏಕೆಂದರೆ ಅದು ಲಾಭಗಳ ದರಗಳ ಮೇಲೆ ದುಷ್ಪರಿಣಾಮವನ್ನು ಬೀರುಬಹುದೆಂದು ಭಾವಿಸುತ್ತದೆ. ಆದಕಾರಣ, ಎಲ್ಲಾ ಉತ್ತೇಜನಾ ಪ್ಯಾಕೇಜುಗಳ ಒತ್ತಡವು ಖಾಸಗಿ ಹೂಡಿಕೆಗಾಗಿ ಹಣ ಲಭ್ಯವಾಗುವಂತೆ ಮಾಡುವುದೇ ವಿನಃ ಸಾರ್ವಜನಿಕ ಹೂಡಿಕೆಗಳಲ್ಲಿ ಏರಿಕೆ ಮಾಡಲು ಅಲ್ಲ. ಇದು ಖಂಡಿತಾ ಕೆಲಸ ಮಾಡುವುದಿಲ್ಲ, ಏಕೆಂದರೆ ಈ ಮೇಲೆ ಹೇಳಿದಂತೆ, ಖಾಸಗಿ ಹೂಡಿಕೆಯಿಂದ ಉತ್ಪಾದನೆಯಾಗಿದ್ದು ಮಾರಾಟವಾಗಬೇಕು, ಆದರೆ ಜಾಗತಿಕವಾಗಿ ಮತ್ತು ಆಂತರಿಕವಾಗಿ ಮಾರುಕಟ್ಟೆ ಕುಗ್ಗುತ್ತಿದೆ.
ಆದ್ದರಿಂದ, ನವ-ಉದಾರವಾದವು ಈ ಆಳವಾಗುತ್ತಿರುವ ಆರ್ಥಿಕ ಹಿಂಜರಿತಕ್ಕೆ ಯಾವುದೇ ಪರಿಹಾರ ಒದಗಿಸುವುದಿಲ್ಲ. ಅದಕ್ಕೆ ಪ್ರತಿಯಾಗಿ, ಅದು ಅದನ್ನು ಇನ್ನೂ ಆಳವಾಗಿಸುತ್ತದೆ. ಇದೇ ನವ-ಉದಾರವಾದದ ದಿವಾಳಿತನ.
ರಾಜಕೀಯ ಬಲಪಂಥದತ್ತ ಪಲ್ಲಟ
ದುಡಿಯುವ ಜನರನ್ನು ಹಿಂಡಿಹಿಪ್ಪೆ ಮಾಡುವ ಕಾರ್ಯ ಯಶಸ್ವಿಯಾಗಬೇಕೆಂದರೆ, ಶೋಷಣೆಯನ್ನು ತೀವ್ರಗೊಳಿಸಲು ಅನುಕೂಲವಾಗುವಂತೆ ಕರಾಳ, ಸರ್ವಾಧಿಕಾರಶಾಹಿ, ಫ್ಯಾಸಿಸ್ಟ್ ತೆರನ ವ್ಯವಸ್ಥೆಯನ್ನು ಹೇರುವಂತಹ ರಾಜಕೀಯ ಆಡಳಿತ ಕ್ರಮಗಳನ್ನು ಹೊಂದಬೇಕಾದ ಅಗತ್ಯವಿದೆ.
ತೀವ್ರವಾಗುತ್ತಿರುವ ಶೋಷಣೆ ಮತ್ತು ಹೇರಲ್ಪಡುತ್ತಿರುವ ಕಷ್ಟಗಳ ವಿರುದ್ಧ ಎದ್ದುಬರುತ್ತಿರುವ ಜನಗಳ ಪ್ರತಿಭಟನೆಗಳನ್ನು ವಿಚ್ಛಿದ್ರಕಾರಿ ಹಾದಿಗಳತ್ತ ತಿರುಗಿಸಲು ಇದು ಅವರಿಗೆ ಅವಶ್ಯಕ. ಭಾವನಾತ್ಮಕ, ಜನರ ಮನಸ್ಸನ್ನು ರಂಜಿಸುವ ವಿಷಯಗಳ ಬಳಕೆಯು ವಿಚ್ಛಿದ್ರಕಾರಿ ಪ್ರವೃತ್ತಿಗಳನ್ನು -ಜನಾಂಗವಾದ ಮತ್ತು ವಿದೇಶೀಯರ ಬಗ್ಗೆ ದ್ವೇಷ (ಅಮೆರಿಕದಲ್ಲಿಯಂತೆ), ಧಾರ್ಮಿಕ ಪಂಥವಾದ(ಭಾರತ ಮತ್ತು ಟರ್ಕಿಯಲ್ಲಿರುವಂತೆ), ಅಥವಾ, ನೇರ ನೇರಾ ಫ್ಯಾಸಿಸ್ಟ್ ತೆರನ ಆಳ್ವಿಕೆಗಳು(ಬ್ರೆಜಿಲ್‌ನಂತೆ)- ದ್ವೇಷ ಹಾಗೂ ಹಿಂಸೆಯ ಪ್ರಚಾರದ ಮೂಲಕ ಗಟ್ಟಿಗೊಳಿಸುತ್ತದೆ.
ಸದ್ಯದ ಜಾಗತಿಕ ಬಲಪಂಥೀಯ ಪಲ್ಲಟವು ಈ ಎರಡೂ ಅಂಶಗಳ ಸಂಯೋಜನೆ – ವಿಚ್ಛಿದ್ರಕಾರಿ ಭಾವನಾತ್ಮಕ ವಿಷಯಗಳನ್ನು ಬಡಿದೆಬ್ಬಿಸುವುದನ್ನೇ ಆಧರಿಸಿರುವ ನಿರಂಕುಶ ಸರ್ವಾಧಿಕಾರಶಾಹೀ ಆಡಳಿತಗಳು.
ಇಂತಹ ರಾಜಕೀಯ ಬಲಪಂಥೀಯ ಪಲ್ಲಟವೆಂದರೆ ಕಾರ್ಮಿಕ ವರ್ಗದ ವಿರುದ್ಧ ಒಂದು ದುಷ್ಟ ವರ್ಗ ದಾಳಿಯನ್ನು ಹರಿಯ ಬಿಡುವುದೇ ಆಗಿದೆ.
ಅಕ್ಟೋಬರ್ ಕ್ರಾಂತಿಯ ಸ್ಪೂರ್ತಿ
ಆರ್ಥಿಕವಾಗಿ, ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಈ ಆಕ್ರಮಣಗಳನ್ನು ಎದುರಿಸುವ ನಿಟ್ಟಿನಲ್ಲಿ ಅಕ್ಟೋಬರ್ ಕ್ರಾಂತಿ ಮತ್ತು ಅದರ ಸಾಧನೆಗಳು ಜಗತ್ತಿನಾದ್ಯಂತ ಕಾರ್ಮಿಕ ವರ್ಗಕ್ಕೆ ಸ್ಪೂರ್ತಿ ತುಂಬುತ್ತಲೇ ಇವೆ. ಇದು ಹಲವಾರು ದೇಶಗಳಲ್ಲಿ ಈಗ ನಡೆಯುತ್ತಿರುವ ಹೋರಾಟಗಳಿಗೆ ಶಕ್ತಿ ತುಂಬುತ್ತದೆ. ನವ-ಉದಾರವಾದಿ ಬಂಡವಾಳಶಾಹಿಯ ಬಳಿ ಜನರ ಕಷ್ಟಕೋಟಲೆಗಳನ್ನು ಪರಿಹರಿಸುವ ಯಾವುದೇ ಪರಿಹಾರವಿಲ್ಲ, ಬದಲು ಆ ಕಷ್ಟಕೋಟಲೆಗಳನ್ನು ತೀವ್ರಗೊಳಿಸುತ್ತದೆ. ಯಾವುದೇ ಪರಿಹಾರವನ್ನು ಬಂಡವಾಳವಾದದ ಹೊರಗೆ ಮಾತ್ರವೇ ಕಂಡುಕೊಳ್ಳಬಹುದು, ಅಂದರೆ ಸಮಾಜವಾದದಲ್ಲಿ. ಸಮಾಜವಾದವೇ ಪರ್ಯಾಯ !
ಅನು: ಟಿ.ಸುರೇಂದ್ರ ರಾವ್