ಕೋವಿಡ್‌ ಲಸಿಕೆ ವಿತರಣೆಯ ಭಾರೀ ಪ್ರಚಾರಕ್ಕೆ ಒಂದು ತಿಂಗಳು: ಗರಿಷ್ಠದಿಂದ ಕನಿಷ್ಠ ಮಟ್ಟಕ್ಕೆ ಇಳಿಕೆ

ನವದೆಹಲಿ: ಭಾರತದಲ್ಲಿ ಕೋವಿಡ್‌ ಲಸಿಕೆ ವಿತರಣೆಯು ಕಳೆದ ಒಂದು ತಿಂಗಳಲ್ಲಿ ನಿಧಾನಗತಿಯಲ್ಲಿಯೇ ಸಾಗುತ್ತಿದೆ. ಕೋವಿಡ್‌ ಲಸಿಕೆ ಅಭಿಯಾನ ಆರಂಭವಾಗಿ 186 ದಿನಗಳಾಗಿವೆ. ಒಟ್ಟಾರೆ ಇದುವರೆಗೆ ಸುಮಾರು 41 ಕೋಟಿಗೂ ಹೆಚ್ಚಿನ ಲಸಿಕೆಯನ್ನು ವಿತರಣೆ ಮಾಡಲಾಗಿದೆ.

ದೇಶದಲ್ಲಿ ಒಟ್ಟು ಲಸಿಕೆ ವಿತರಣೆ 41,52,25,632 ಆಗಿದೆ. ಮೊದಲ ಡೋಸ್‌ ಪಡೆದವರ ಸಂಖ್ಯೆ 32,55,22,483 ಆಗಿದೆ. ಎರಡನೇ ಡೋಸ್‌ ಪಡೆದವರ ಸಂಖ್ಯೆ 8,54,15,128 ಆಗಿದೆ.

ಇಷ್ಟು ದಿನಗಳ ಅಭಿಯಾನದಲ್ಲಿ ಜೂನ್‌ 21ರಂದು ಲಸಿಕೆ ವಿತರಣೆ ಒಂದೇ ದಿನ ಗರಿಷ್ಠ ಪ್ರಮಾಣದಲ್ಲಿ ನೀಡಲಾಗಿತ್ತು. ಅಂದು 91,74,921 ಲಸಿಕೆ ವಿತರಣೆ ಮಾಡಲಾಗಿದೆ. ಇದರಲ್ಲಿ ಮೊದಲ ಡೋಸ್‌ ಪಡೆದವರ ಸಂಖ್ಯೆ 83,39,350 ಆಗಿದೆ. ಜೂನ್‌ 21ರ ಹಿಂದಿನ 10ಕ್ಕೂ ಹೆಚ್ಚಿನ ದಿನಗಳ ಲಸಿಕೆ ನೀಡಿಕೆಯ ಪ್ರಮಾಣ ದೊಡ್ಡ ಪ್ರಮಾಣದಲ್ಲಿ ಕುಸಿತ ಕಂಡಿತು. ಜೂನ್‌ 21ರಂದು ಮಾತ್ರ ಸರಕಾರವೇ ಆಯೋಜಿಸಿದ ವಿಶೇಷ ವೇದಿಕೆಗಳಿಂದ ಲಸಿಕೆ ವಿತರಣೆ ಮಾಡಲಾಯಿತು. ಇದರ ಪರಿಣಾಮವಾಗಿ ಅಂದು ಗರಿಷ್ಠ ಪ್ರಮಾಣದಲ್ಲಿ ಲಸಿಕೆ ವಿತರಣೆ ಆಗಿದೆ.

ಇದನ್ನು ಓದಿ: ಲಸಿಕೆ ಪಡೆದ ಶೇಕಡಾ 78ರಷ್ಟು ಜನ ಕೋವಿಡ್‌ ಲಸಿಕಾ ಕೇಂದ್ರದಲ್ಲೇ ನೋಂದಣಿ ಮಾಡಿಕೊಂಡಿದ್ದಾರೆ

ಜೂನ್‌ 21ರ ನಂತರ ಒಂದು ವಾರ ಲಸಿಕೆ ವಿತರಣೆ ಸರಾಸರಿಯಾಗಿ ಐವತ್ತು ಲಕ್ಷಕ್ಕೂ ಹೆಚ್ಚು ಇತ್ತು. ಕಳೆದ ಒಂದು ವಾರದಲ್ಲಿ ಲಸಿಕೆ ವಿತರಣೆ ಸರಾಸರಿ ಪ್ರಮಾಣ 37 ರಿಂದ 52 ಲಕ್ಷದ ಆಸುಪಾಸಿನಲ್ಲಿಯೇ ಇದೆ. ಯಾವುದೇ ಅಭಿಯಾನಗಳನ್ನು ಆರಂಭವಾಗುವುದು ಹೆಚ್ಚಿನ ಜನರನ್ನು ಒಳಗೊಳ್ಳುವಂತೆ ಮಾಡುವುದೇ ಉದ್ದೇಶವಾಗಿರುತ್ತದೆ. ಅಭಿಯಾನ ಆರಂಭವಾಗಿ ನಂತರದ ದಿನಗಳಲ್ಲಿ ಗರಿಷ್ಠ ಪ್ರಮಾಣದಿಂದ ಕನಿಷ್ಠ ಪ್ರಮಾಣಕ್ಕೆ ಇಳಿಕೆಯಾಗುವುದೆಂದರೆ ಒಂದು ಅಭಿಯಾನ ಪೂರ್ಣಗೊಳ್ಳಬೇಕಿತ್ತು. ಲಸಿಕೆ ಅಭಿಯಾನದಲ್ಲಿ ಅದು ಆಗಿಲ್ಲ. ಅಭಿಯಾನ ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗಿದೆ.

ಅಭಿಯಾನ ಆರಂಭವಾಗಿದ್ದು,  ಜನವರಿ 16ರಂದು ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರು ಮತ್ತು ಕೋವಿಡ್‌ ವಿರುದ್ಧ ಹೋರಾಡುವವರಿಗೆ ಮತ್ತು ಮೊದಲ ದರ್ಜೆಯ ಕಾರ್ಮಿಕರಿಗೆ ಲಸಿಕೆ ವಿತರಣೆ ಆರಂಭಿಸಲಾಯಿತು. ಮಾರ್ಚ್ 1ರಿಂದ ಎರಡನೇ ಹಂತದಲ್ಲಿ ಆರೋಗ್ಯ ಸಮಸ್ಯೆ ಹೊಂದಿರುವ 45 ವರ್ಷ ಮೇಲ್ಪಟ್ಟ ಹಾಗೂ 60 ವರ್ಷದ ಮೇಲ್ಪಟ್ಟವರಿಗೆ ಲಸಿಕೆ ವಿತರಣೆ ಆರಂಭಿಸಲಾಯಿತು. ಏಪ್ರಿಲ್ 1ರಿಂದ ಮೂರನೇ ಹಂತದಲ್ಲಿ 45 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಕೋವಿಡ್-19 ಲಸಿಕೆ ವಿತರಣೆ ಶುರು ಮಾಡಲಾಗಿತ್ತು. ಜೂನ್ 21ರಿಂದ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಲಸಿಕೆ ವಿತರಣೆಯನ್ನು ನೀಡಲಾಗುತ್ತಿದೆ.

ಇದನ್ನು ಓದಿ: ದೇಶದಲ್ಲಿ ಒಂದೇ ದಿನ 82 ಲಕ್ಷ ಕೋವಿಡ್ ಲಸಿಕೆ ವಿತರಣೆ-ರಾಜ್ಯದಲ್ಲಿ 10 ಲಕ್ಷಕ್ಕೂ ಹೆಚ್ಚು

ದೇಶದಲ್ಲಿ ಅತೀ ಹೆಚ್ಚು ಲಸಿಕೆ ವಿತರಣೆ ರಾಜ್ಯಗಳಲ್ಲಿ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದೆ. ಸರಾಸರಿ 20-21 ಕೋಟಿ ಜನಸಂಖ್ಯೆ ಇರುವ ರಾಜ್ಯದಲ್ಲಿ 4,16,21,644 ಕೋಟಿ ಲಸಿಕೆ ವಿತರಣೆಯಾಗಿದೆ. ನಂತರದ ಸ್ಥಾನದಲ್ಲಿ ಮಹಾರಾಷ್ಟ್ರದಲ್ಲಿ ಸರಾಸರಿ 4 ಕೋಟಿ ಲಸಿಕೆ ವಿತರಣೆಯಾಗಿದೆ.

ಲಸಿಕೆ ವಿತರಣೆಯಲ್ಲಿ ಕರ್ನಾಟಕ ಐದನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಇದುವರೆಗೆ 2,78,15,678 ಲಸಿಕೆ ವಿತರಣೆಯಾಗಿದೆ. ಮೊದಲ ಡೋಸ್‌ ಪಡೆದವರ ಸಂಖ್ಯೆ 2,23,20,158 ಇದ್ದು, ಎರಡನೇ ಡೋಸ್‌ ಪಡೆದವರ ಸಂಖ್ಯೆ 54.95.520 ಇದೆ.

ಮೊದಲ ಡೋಸ್‌ ಹಾಗೂ ಎರಡನೇ ಡೋಸ್‌ ಪಡೆಯಲು ದಿನಗಳ ಅಂತರ ಹೆಚ್ಚಾಗಿ ಇರುವುದರಿಂದ ಮೊದಲ ಪಡೆದವರ ಸಂಖ್ಯೆ ಅತ್ಯಧಿಕವಾಗಿದೆ.

ಲಸಿಕೆ ವಿತರಣೆಯಲ್ಲಿ ಸರಕಾರದ ವತಿಯಿಂದ ಶೇಕಡಾ 75ರಷ್ಟು ಉಚಿತವಾಗಿ ಲಸಿಕೆಯನ್ನು ವಿತರಿಸಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳಿಗೆ ಶೇಕಡಾ 25ರಷ್ಟು ಮೀಸಲಾಗಿದೆ. ಆದರೆ ಇದರಲ್ಲಿ ದೇಶದ ಖಾಸಗಿ ಆಸ್ಪತ್ರೆಗಳಲ್ಲಿ ಬಳಕೆ ಆಗದೆ ಉಳಿದಿರುವ ಲಸಿಕೆಗಳ ಪ್ರಮಾಣ 2,11,93,241 ಇದೆ.

ಇದನ್ನು ಓದಿ: ಖಾಸಗಿ ಆಸ್ಪತ್ರೆಗಳು ಖರೀದಿಸಿದ್ದು 1.29 ಕೋಟಿ ಲಸಿಕೆ-ಬಳಸಿದ್ದು 22 ಲಕ್ಷ ಮಾತ್ರ

ಸರಕಾರವೇ ಉಚಿತವಾಗಿ ಲಸಿಕೆ ವಿತರಣೆ ಮಾಡುತ್ತಿರುವುದರಿಂದ ಲಸಿಕೆಗಾಗಿ ಜನರು ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡುತ್ತಿಲ್ಲ. ಲಸಿಕೆ ವಿತರಣೆಗೆ ಖಾಸಗಿ ಆಸ್ಪತ್ರೆಗಳು ವಿಧಿಸುವ ದುಬಾರಿ ಶುಲ್ಕವೇ ಇದಕ್ಕೆ ಕಾರಣ ಎಂದು ತಿಳಿದು ಬಂದಿದೆ.

ಭಾರತದಲ್ಲಿ ನಾಲ್ಕು ಮಾದರಿಯ ಲಸಿಕೆಯ ವಿತರಣೆ

ನಾಲ್ಕು ಕಂಪನಿಗಳ ಕೊರೊನಾವೈರಸ್ ಲಸಿಕೆಯನ್ನು ನೀಡಲಾಗುತ್ತಿದೆ. ಕೇಂದ್ರ ವೈದ್ಯಕೀಯ ಔಷಧೀಯ ನಿಯಂತ್ರಣ ಪ್ರಾಧಿಕಾರವು ಅನುಮೋದನೆ ನೀಡಿದೆ.

  1. ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಹಾಗೂ ಆಸ್ಟ್ರಾಜೆನಿಕಾ ಸಂಶೋಧಿಸಿರುವ ಪುಣೆಯ ಸೀರಂ ಇನ್ಸ್‌ಟಿಟ್ಯೂಟ್ ಆಫ್ ಇಂಡಿಯಾ ಉತ್ಪಾದಿಸುತ್ತಿರುವ ಕೊವಿಶೀಲ್ಡ್ ಲಸಿಕೆ.
  2. ಹೈದ್ರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆ ಉತ್ಪಾದಿಸುತ್ತಿರುವ ಕೊವ್ಯಾಕ್ಸಿನ್
  3. ರಷ್ಯಾದಲ್ಲಿ ಸಂಶೋಧಿಸಿ ಭಾರತದ ರೆಡ್ಡೀಸ್ ಕಂಪನಿ ಸಹಭಾಗಿತ್ವದ ಸ್ಪುಟ್ನಿಕ್-ವಿ
  4. ಮಾಡೆರ್ನಾ ಲಸಿಕೆ
Donate Janashakthi Media

Leave a Reply

Your email address will not be published. Required fields are marked *