ಪ್ರೊ. ಟಿ ಆರ್. ಚಂದ್ರಶೇಖರ
ಪೆಂಡಮಿಕ್‌ನಿಂದ ದುರ್ಬಲ ವರ್ಗದ ಮಕ್ಕಳು ಶಿಕ್ಷಣದಿಂದ ವಂಚಿತವಾದ ಸಮಸ್ಯೆಯನ್ನು ಒಕ್ಕೂಟ ಸರ್ಕಾರ ತನ್ನ 2022-23ನೆಯ ಸಾಲಿನ ಬಜೆಟ್ಟಿನಲ್ಲಿ ಗುರುತಿಸಿದೆ. ಒಕ್ಕೂಟ ಸರ್ಕಾರವು ಸಮಸ್ಯೆಯನ್ನೇನೋ ಗುರುತಿಸಿದೆ. ಆದರೆ ಅದು ರೂಪಿಸುತ್ತಿರುವ ಡಿಜಿಟಲ್ ಪರಿಹಾರವು ಸಮಸ್ಯೆಯನ್ನು ನಿವಾರಿಸುವುದು ಸಾಧ್ಯವಿಲ್ಲ. ‘ಒಂದು ದೇಶ-ಒಂದು ತರಗತಿ’ ಎನ್ನುವ ಚೌಕಟ್ಟಿನಲ್ಲಿ ಒಕ್ಕೂಟ ಸರ್ಕಾರವು ಪರಿಹಾರವನ್ನು ಯೋಚಿಸುತ್ತಿದೆ. ಈ ಪರಿಹಾರಾತ್ಮಕ ಪುನಶ್ಚೇತನ ಕಾರ್ಯಕ್ರಮಕ್ಕೆ ಒಕ್ಕೂಟ ಸರ್ಕಾರ ಅನುದಾನವನ್ನು ನೀಡಿಲ್ಲ. ನಮ್ಮ ಕರ್ನಾಟಕ ಸರ್ಕಾರಕ್ಕೆ ಇಂತಹ ಒಂದು ಬೃಹತ್ ಸಮಸ್ಯೆಯನ್ನು ಗುರುತಿಸಲೂ ಸಾಧ್ಯವಾಗಿಲ್ಲ. ಇನ್ನು ಪರಿಹಾರದ ಬಗ್ಗೆ ಯಾವ ಸೂಚನೆಯೂ ಕರ್ನಾಟಕ 2022-23ರ ಬಜೆಟ್ಟಿನಲ್ಲಿ ಇಲ್ಲ. ನಮ್ಮ ಪ್ರಾಥಮಿಕ ಶಿಕ್ಷಣದಲ್ಲಿ ಕೊರೊನಾ ಪೆಂಡಮಿಕ್ ಸಮಸ್ಯೆಯಿಂದಾಗಿ ಮಕ್ಕಳಿಗೆ ಏನೆಲ್ಲ ಸಮಸ್ಯೆಗಳು ಉಂಟಾಗಿವೆ ಎಂಬುದನ್ನು ತಳಸ್ಪರ್ಶಿಯಾಗಿ ಮತ್ತು ಪ್ರಾದೇಶಿಕವಾಗಿ ಮೊದಲು ಗುರುತಿಸುವ ಕೆಲಸವಾಗಬೇಕು. ಗ್ರಾಮೀಣ ಪ್ರದೇಶದಲ್ಲಿ ಡಿಜಿಟಲೈಸೇಶನ್‌ಗೆ ಸ್ವಲ್ಪ ಸಮಯ ಬಿಡುವು ಕೊಟ್ಟು ನೇರ ಪಾಠ ಹೇಳುವ ವಿಧಾನವನ್ನು ಮತ್ತು ಪರಿಣಾಮಕಾರಿ ಕಲಿಕೆಯ ಬಗ್ಗೆ ಬೃಹತ್ ಯೋಜನೆಯನ್ನು ಹಮ್ಮಿಕೊಳ್ಳಬೇಕು. ಜಿಲ್ಲಾಮಟ್ಟದಲ್ಲಿ ಶಿಕ್ಷಣದಿಂದ ವಂಚಿತರಾದ ಮಕ್ಕಳಿಗೆ ವಿಶೇಷವಾಗಿ ಪರಿಹಾರಾತ್ಮಕ ಶಿಕ್ಷಣ ನೀಡುವದಕ್ಕೆ ನಿವೃತ್ತ ಶಿಕ್ಷಕರ, ಗ್ರಾಮೀಣ ಪ್ರದೇಸದಲ್ಲಿ ನೆಲೆಸಿರುವ ಯುವಕ-ಯುವತಿಯರ ಮತ್ತು ಕಾಲೇಜುಗಳಲ್ಲಿ ಕಲಿಯುತ್ತಿರುವ ಆಸಕ್ತ ಯುಜನರ ಒಂದು ಪಡೆಯನ್ನು ಇದಕ್ಕಾಗಿ ರೂಪಿಸುವ ಅಗತ್ಯವಿದೆ.
ಕಳೆದ ಎರಡು ವರ್ಷಗಳಿಂದ(2020-21 ಮತ್ತು 2021-22) ಕೊರೊನಾ ಪೆಂಡಮಿಕ್ ಕಾರಣದಿಂದ ನಮ್ಮ ಬಹುಪಾಲು ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ನಿಜ, ಶಿಕ್ಷಣ ಇಲಾಖೆಯು ಪೆಂಡಮಿಕ್‌ನಿಂದ ವ್ಯತ್ಯಯವಾದ ಶಾಲಾ ಕಾರ್ಯಕ್ರಮವನ್ನು ಸರಿದೂಗಿಸಲು ಆಲ್‌ಲೈನ್ ಪಾಠಗಳನ್ನು ಶ್ರಮವಹಿಸಿ ನಡೆಸಿತು. ಶಿಕ್ಷಕರು ಪೆಂಡಮಿಕ್‌ಗೆ ಹೆದರದೆ ಮಕ್ಕಳಿಗೆ ಪಾಠ ಹೇಳುವ ಬಗ್ಗೆ ಅನೇಕ ಬಗೆಯ ಪ್ರಯತ್ನ ನಡೆಸಿದರು. ಆದರೆ ಪೆಂಡಮಿಕ್‌ನ ಭಯಾನಕ ಪರಿಣಾಮದಿಂದಾಗಿ ಇವಾವುವು ನಮ್ಮ ಮಕ್ಕಳು ಶಿಕ್ಷಣದಿಂದ ವಂಚಿತರಾಗುವುದನ್ನು ತಡೆಯಲಾಗಲಿಲ್ಲ. ಏಕೆಂದರೆ ಕುಟುಂಬಗಳ ಬದುಕೇ ಮೂರಾಬಟ್ಟೆಯಾಯಿತು, ಪಾಲಕರು ಉದ್ಯೋಗ ಕಳೆದುಕೊಂಡರು ಮತ್ತು ಅವರು ಕೂಡಿಟ್ಟಿದ್ದ ಹಣವೆಲ್ಲ ಖಾಲಿಯಾಯಿತು. ಬಡಕುಟುಂಬಗಳಲ್ಲಿ ಶಾಲಾ ಶಿಕ್ಷಣದಿಂದ ವಂಚಿತರಾದ ಮಕ್ಕಳು ಕೂಲಿಗೆ ಹೋಗಬೇಕಾಯಿತು. ನಮ್ಮ ರಾಜ್ಯದ ಗ್ರಾಮೀಣ ಪ್ರದೇಶದಲ್ಲಿನ ವಿಶೇಷವಾಗಿ ಪ. ಜಾ., ಪ. ಪಂ., ಮತ್ತು ಹಿಂದುಳಿದ ವರ್ಗಗಳ ಮಕ್ಕಳು ಭಯಾನಕ ರೀತಿಯಲ್ಲಿ ಎರಡು ವರ್ಷಗಳ ಕಾಲ ಶಿಕ್ಷಣದಿಂದ ವಂಚಿತರಾಗಿದ್ದಾರೆ. ನಮ್ಮ ರಾಜ್ಯದಲ್ಲಿನ 1 ರಿಂದ 10ನೆಯ ತರಗತಿವರೆಗಿನ ಮಕ್ಕಳ ಸಾಮಾಜಿಕ ಗುಂಪುವಾರು ದಾಖಲಾತಿ ಚಿತ್ರವನ್ನು ಕೋಷ್ಟಕದಲ್ಲಿ ನೀಡಲಾಗಿದೆ.
ಕೋಷ್ಟಕ 1. ಸಾಮಾಜಿಕ ಗುಂಪುವಾರು ಮಕ್ಕಳ ದಾಖಲಾತಿ 2018-19
ಮೂಲ: ಕರ್ನಾಟಕ ಸರ್ಕಾರ. ಸ್ಕೂಲ್ ಎಜಿಕೇಶನ್ ಇನ್ ಕರ್ನಾಟಕ. 2018-19. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ. ಬೆಂಗಳೂರು.
ಕರ್ನಾಟಕದಲ್ಲಿ ಪ್ರಾಥಮಿಕ-ಪ್ರೌಢ ಶಿಕ್ಷಣ ಎಂದರೆ ಅದು 100 ಲಕ್ಷ ಮೀರಿದ ಮಕ್ಕಳ ಶೈಕ್ಷಣಿಕ ಬದುಕಾಗಿದೆ. ಇದರಲ್ಲಿ ಸಾಮಾನ್ಯ ವರ್ಗದ ಮಕ್ಕಳ ಪ್ರಮಾಣ ಶೇ. 12.13ರಷ್ಟಾದರೆ ಒಬಿಸಿ ವರ್ಗದ ಮಕ್ಕಳ ಪ್ರಮಾಣ ಶೇ. 61.32. ಪ. ಜಾ. ಮತ್ತು ಪ. ಪಂ. ಮಕ್ಕಳ ಪ್ರಮಾಣ ಶೇ. 26.55. ಒಟ್ಟು ಮಕ್ಕಳಲ್ಲಿ ಸರ್ಕಾರಿ ನೆರವಿನ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳ ಪ್ರಮಾಣ ಶೇ. 61.08.
ಕೊರೊನಾ ಪೆಂಡಮಿಕ್‌ನಿಂದಾಗಿ 2020-21 ಮತ್ತು 2021-22ನೆಯ ಸಾಲುಗಳಲ್ಲಿ ಮಕ್ಕಳ ಶಿಕ್ಷಣ ತೀವ್ರ ವ್ಯತ್ಯಯವಾಗಿದೆ. ವಿಶೇಷವಾಗಿ ಒಬಿಸಿ, ಪ. ಜಾ. ಮತ್ತು ಪ. ಪಂ.ಗಳಿಗೆ ಸೇರಿದ 91.17 ಲಕ್ಷ ಮಕ್ಕಳು ಅಕ್ಷರಶಃ ಶಿಕ್ಷಣ ಧಾರೆಯಿಂದ ಹೊರಬಿದ್ದಿದ್ದಾರೆ. ಉನ್ನತ ವರ್ಗದ ಮತ್ತು ನಗರ ಕೇಂದ್ರಿತ ಮಕ್ಕಳು ಅನೇಕ ರೀತಿಯಲ್ಲಿ ಎಲ್ಲ ಅಡೆತಡೆಗಳನ್ನು ನೀಗಿಕೊಂಡು ಶಿಕ್ಷಣವನ್ನು ಮುಂದುವರಿಸಿದ್ದಾರೆ. ಇಂಟರ್‌ನೆಟ್ ಸಂಪರ್ಕ-ಆನ್‌ಲೈನ್ ಕಲಿಕೆ ಸಾಧ್ಯವಾಗದೆ, ವಿದ್ಯುತ್ ಕೊರತೆ-ವ್ಯತ್ಯಯಗಳಿಂದಾಗಿ ಮತ್ತು ದುಡಿಮೆಯ ಅನಿವಾರ್ಯತೆಯಿಂದಾಗಿ ದುರ್ಬಲ ವರ್ಗದ ಮಕ್ಕಳಿಗೆ ಡಿಜಿಟಲ್ ಕಲಿಕೆ ಸಾಧ್ಯವಾಗಿಲ್ಲ.
ಹೀಗೆ ಪೆಂಡಮಿಕ್‌ನಿಂದ ದುರ್ಬಲ ವರ್ಗದ ಮಕ್ಕಳು ಶಿಕ್ಷಣದಿಂದ ವಂಚಿತವಾದ ಸಮಸ್ಯೆಯನ್ನು ಒಕ್ಕೂಟ ಸರ್ಕಾರ ತನ್ನ 2022-23ನೆಯ ಸಾಲಿನ ಬಜೆಟ್ಟಿನಲ್ಲಿ ಹೀಗೆ ಗುರುತಿಸಿದೆ:
‘ಪೆಂಡಮಿಕ್‌ನಿಂದ ಶಾಲೆಗಳು ಮುಚ್ಚಿಹೋದ ಕಾರಣ ನಮ್ಮ ಮಕ್ಕಳು, ವಿಶೇಷವಾಗಿ ಗ್ರಾಮೀಣ ಪ್ರದೇಶದ ಮತ್ತು ಪ. ಜಾ., ಪ. ಪಂ., ಹಾಗೂ ಇತರೆ ದುರ್ಬಲ ವರ್ಗದ ಮಕ್ಕಳು ಎರಡು ವರ್ಷಗಳ ಶಾಲಾ ಶಿಕ್ಷಣವನ್ನು ಕಳೆದುಕೊಂಡಿದ್ದಾರೆ. ಇವರಲ್ಲಿ ಅತಿ ಹೆಚ್ಚು ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಕಲಿಯುವ ಮಕ್ಕಳಾಗಿದ್ದಾರೆ. ಈ ಸಮಸ್ಯೆಯನ್ನು ಎದುರಿಸುವ ಸಲುವಾಗಿ ಪರಿಹಾರಾತ್ಮಕ ಕಲಿಕೆಯ ಅಗತ್ಯವನ್ನು ನಾವು ಮನಗಂಡಿದ್ದೇವೆ. ಈ ಸಮಸ್ಯೆಯ ಹಿನ್ನೆಲೆಯಲ್ಲಿ ಪರಿಹಾರಾತ್ಮಕ ಶಿಕ್ಷಣವನ್ನು ಹೇಗೆ ಕಟ್ಟಬೇಕು ಎಂಬುದನ್ನು ಗುರುತಿಸಲಾಗಿದೆ. ಈ ಉದ್ದೇಶಕ್ಕಾಗಿ ‘ಒಂದು ತರಗತಿ-ಒಂದು ಟಿವಿ ವಾಹಿನಿ’ ಎಂಬ ‘ಪಿಎಮ್-ವಿದ್ಯಾ’ ಕಾರ್ಯಕ್ರಮದಲ್ಲಿನ 12 ವಾಹಿನಿಗಳ ಸಂಖ್ಯೆಯನ್ನು 200ಕ್ಕೆ ಏರಿಸಲಾಗುವುದು. ಈ ಕಾರ್ಯಕ್ರಮದಿಂದಾಗಿ ರಾಜ್ಯ ಸರ್ಕಾರಗಳು 1 ರಿಂದ 12ನೆಯ ತರಗತಿಗಳ ಮಕ್ಕಳಿಗೆ ಪರಿಹಾರಾತ್ಮಕ ಶಿಕ್ಷಣ ಕೊಡುವುದು ಸಾಧ್ಯವಾಗುತ್ತದೆ’(ಮೂಲ: ಒಕ್ಕೂಟ ಬಜೆಟ್ 2022-23: ಭಾಷಣ. ಪ್ಯಾರಾ 46).
ಒಕ್ಕೂಟ ಸರ್ಕಾರವು ಸಮಸ್ಯೆಯನ್ನೇನೋ ಗುರುತಿಸಿದೆ. ಆದರೆ ಅದು ರೂಪಿಸುತ್ತಿರುವ ಡಿಜಿಟಲ್ ಪರಿಹಾರವು ಸಮಸ್ಯೆಯನ್ನು ನಿವಾರಿಸುವುದು ಸಾಧ್ಯವಿಲ್ಲ. ‘ಒಂದು ದೇಶ-ಒಂದು ತರಗತಿ’ ಎನ್ನುವ ಚೌಕಟ್ಟಿನಲ್ಲಿ ಒಕ್ಕೂಟ ಸರ್ಕಾರವು ಪರಿಹಾರವನ್ನು ಯೋಚಿಸುತ್ತಿದೆ. ಈ ಪರಿಹಾರಾತ್ಮಕ ಪುನಶ್ಚೇತನ ಕಾರ್ಯಕ್ರಮಕ್ಕೆ ಒಕ್ಕೂಟ ಸರ್ಕಾರ ಅನುದಾನವನ್ನು ನೀಡಿಲ್ಲ. ನಮ್ಮ ಕರ್ನಾಟಕ ಸರ್ಕಾರಕ್ಕೆ ಇಂತಹ ಒಂದು ಬೃಹತ್ ಸಮಸ್ಯೆಯನ್ನು ಗುರುತಿಸಲೂ ಸಾಧ್ಯವಾಗಿಲ್ಲ. ಇನ್ನು ಪರಿಹಾರದ ಬಗ್ಗೆ ಯಾವ ಸೂಚನೆಯೂ ಕರ್ನಾಟಕ 2022-23ರ ಬಜೆಟ್ಟಿನಲ್ಲಿ ಇಲ್ಲ. ಕರ್ನಾಟಕ ಆರ್ಥಿಕ ಸಮೀಕ್ಷೆ 2021-22ರಲ್ಲಿಯೂ ಇದರ ವಿಶ್ಲೇಷಣೆಯಿಲ್ಲ. ಬರೀ ಪರೀಕ್ಷೆ-ಪರೀಕ್ಷೆ ಎಂದು ನಮ್ಮ ಶಿಕ್ಷಣ ಮಂತ್ರಿಗಳು ಚಡಪಡಿಸಿದರೇ ವಿನಾಃ ಪೆಂಡಮಿಕ್‌ನಿಂದ ಜರ್ಜರಿತವಾದ ಗ್ರಾಮೀಣ ಪ. ಜಾ., ಪ. ಪಂ. ಮತ್ತು ಒಬಿಸಿ ಮಕ್ಕಳ ಶೈಕ್ಷಣಿಕ ಬದುಕನ್ನು ಮರುಕಟ್ಟುವ ಬಗ್ಗೆ ರವಷ್ಟು ಯೋಚಿಸಿದಂತೆ ಕಾಣಲಿಲ್ಲ. ಈ ಮಕ್ಕಳ ಸಂಖ್ಯೆ 91 ಲಕ್ಷ ಮೀರುತ್ತದೆ. ಈ ಮಕ್ಕಳ ಶೈಕ್ಷಣಿಕ ಪುನಶ್ಚೇತನದ ಬಗ್ಗೆ ಕಾರ್ಯಕ್ರಮ ರೂಪಿಸದಿದ್ದರೆ ಈ 91 ಲಕ್ಷ ಮಕ್ಕಳ ಭವಿಷ್ಯ ಅಂಧಕಾರಮಯವಾಗುತ್ತದೆ. ಅದರಲ್ಲೂ ಹಿಂದುಳಿದ ಜಿಲ್ಲೆಗಳಲ್ಲಿ 6-59 ತಿಂಗಳ ವಯೋಮಾನದ ಒಟ್ಟು ಮಕ್ಕಳಲ್ಲಿ ಶೇ. 70 ರಷ್ಟು ಮಕ್ಕಳು ಅನಿಮಿಯ ಎದುರಿಸುತ್ತಿದ್ದಾರೆ ಎಂಬುದನ್ನು ಎನ್.ಎಫ್.ಎಚ್.ಎಸ್ 5 ವರದಿ(2019-2020) ಬಹಿರಂಗಪಡಿಸಿದೆ. ಈ ಜಿಲ್ಲೆಗಳಲ್ಲಿ ಶೇ. 30 ರಿಂದ ಶೇ. 35 ರಷ್ಟು ಜನರು ಬಹುಮುಖಿ ಬಡತನವನ್ನು ಅನುಭವಿಸುತ್ತಿದ್ದಾರೆ ಎಂಬುದನ್ನು ನೀತಿ ಆಯೋಗದ ಬಹುಮುಖಿ ಬಡತನ ಸೂಚ್ಯಂಕ ವರದಿಯಲ್ಲಿ ಗುರುತಿಸಲಾಗಿದೆ(2021). ಈ ಹಿನ್ನೆಲೆಯಲ್ಲಿ ಪೆಂಡಮಿಕ್‌ನಿಂದಾಗಿ ಶಿಕ್ಷಣ ವಂಚಿತ ಮಕ್ಕಳ ಬದುಕನ್ನು ಕುರಿತು ಯೋಚಿಸಬೇಕಾಗಿದೆ.
ಬಜೆಟ್ಟಿನಲ್ಲಿ ಶಿಕ್ಷಣಕ್ಕೆ ಅನುದಾನ
ಕರ್ನಾಟಕ ಸರ್ಕಾರ 2021-22ರ ಬಜೆಟ್ಟಿನಲ್ಲಿನ ಒಟ್ಟು ಶಿಕ್ಷಣಕ್ಕೆ ಮೀಸಲಿಟ್ಟ ಅನುದಾನ ರೂ.26,346.16 ಕೋಟಿ. ಇದು ಅದರ ಒಟ್ಟು ವೆಚ್ಚದ ಶೇ.10.70ರಷ್ಟಾಗುತ್ತದೆ. ಪ್ರಸಕ್ತ ವರ್ಷ 2022-23ರಲ್ಲಿ ಒಟ್ಟು ಶಿಕ್ಷಣಕ್ಕೆ ನೀಡಲಾದ ಅನುದಾನ ರೂ.28,558.65 ಕೋಟಿ. ಇದು ಬಜೆಟ್ ವೆಚ್ಚದ ಶೇ. 10.74 ರಷ್ಟಾಗುತ್ತದೆ. ಅಂದರೆ ಅನುದಾನವನ್ನು ತೀವ್ರ ಹೆಚ್ಚಿಸಿಲ್ಲ. ಒಟ್ಟು ಶಿಕ್ಷಣ ಅನುದಾನದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣಕ್ಕೆ 2021-22ರಲ್ಲಿ ನೀಡಿದ್ದು ರೂ. 23,054.01 ಕೋಟಿಯಾದರೆ 2022-23ರಲ್ಲಿನ ಅನುದಾನ ರೂ.24,698.99 ಕೋಟಿ. ಇದರಲ್ಲಿ ಹೆಚ್ಚಿನ ಭಾಗ ರೆವಿನ್ಯೂ ವೆಚ್ಚವಾಗಿದೆ. ಅಂದರೆ ಶಿಕ್ಷಕರ ಸಂಬಳ ಮತ್ತು ಇತರೆ ವೆಚ್ಚಕ್ಕೆ ಹೋಗುತ್ತದೆ. ಇದರಲ್ಲಿ 2021-22 ಮತ್ತು 2022-23ರಲ್ಲಿ ಶೈಕ್ಷಣಿಕ ಧಾರೆಯಿಂದ ಹೊರಬಿದ್ದ ಮಕ್ಕಳಿಗೆ ಸಂಬಂಧಿಸಿದಂತೆ ಯಾವುದೇ ಕಾರ್ಯಕ್ರಮವಿಲ್ಲ. ಈ ಸಮಸ್ಯೆಯ ಬಗ್ಗೆ ಶಿಕ್ಷಣ ಮಂತ್ರಿಯಾಗಲಿ ಅಥವಾ ಹಣಕಾಸು(ಮುಖ್ಯುಮಂತ್ರಿ) ಮಂತ್ರಿಗಳಾಗಲಿ ಚಕಾರವೆತ್ತಿಲ್ಲ.
ಈಗಲೂ ಕಾಲ ಮಿಂಚಿಲ್ಲ. ಹಿಜಾಬ್, ಸಮವಸ್ತ್ರ, ಟಿಪ್ಪೂ ಪಾಠ ಬಿಡಬೇಕೋ-ಭಗವದ್ಗೀತೆ ಪಾಠ ಸೇರಿಸಬೇಕೋ, ಹಲಾಲ್, ಮುಸ್ಲಿಮ್ ವ್ಯಾಪಾರಿಗಳಿಗೆ ಬಹಿಷ್ಕಾರ, ಲವ್ ಜಿಹಾದ್, ದೇವಸ್ಥಾನಗಳ ಖಾಸಗೀಕರಣ, ಮಸೀದಿಗಳಲ್ಲಿನ ಧ್ವನಿವರ್ಧಕ ನಿಲ್ಲಿಸುವುದು ಮುಂತಾದ ಭಾವನಾತ್ಮಕ – ವಿಭಜನಾತ್ಮಕ – ದ್ವೇಷಪೂರಿತ ಸಂಗತಿಗಳನ್ನು ಕೈಬಿಟ್ಟು ಘನ ಸರ್ಕಾರವು ಜನರ ಬದುಕನ್ನು, ಅವರ ಜೀವನೋಪಾಯವನ್ನು ಕಟ್ಟುವುದರ ಬಗ್ಗೆ ಮತ್ತು ಸರಿಸುಮಾರು 90 ಲಕ್ಷ ಮಕ್ಕಳ ಶೈಕ್ಷಣಿಕ ಪುನಶ್ಚೇತನದ ಬಗ್ಗೆ ಗಮನ ನೀಡಬೇಕು. ಜಸ್ಟೀಸ್ ಎಚ್. ಎನ್. ನಾಗಮೋಹನದಾಸ್ ಹೇಳುವಂತೆ ಇಂದು ಕರ್ನಾಟಕದಲ್ಲಿ ನಡೆದಿರುವುದು ‘ಜನಾಂಗೀಯವಾದ’ವಾಗಿದೆ. ಸಮಾಜದಲ್ಲಿ ಶೇ. 90 ರಷ್ಟಿರುವ ಶೂದ್ರರು-ದಲಿತರ ಮೇಲೆ ಶೇ. 10 ರಷ್ಟಿರುವ ತ್ರೈವರ್ಣಿಕರು ನಡೆಸಿರುವ ಆಕ್ರಮಣ ಇದಾಗಿದೆ. ‘ತ್ರೈವರ್ಣೀಕತೆ ವರ್ಸ್ಸ್ ದಲಿತಾಯಿಸಮ್-ಶೂದ್ರಾಯಿಸಮ್’ ಎಂಬ ಜನಾಂಗೀಯತೆ ಇದಾಗಿದೆ. ಈ ಜನಾಂಗೀಯತೆಯಲ್ಲಿ ನಮ್ಮ 90 ಲಕ್ಷಕ್ಕೂ ಮೀರಿದ ಶಿಕ್ಷಣ ವಂಚಿತ ಮಕ್ಕಳ ಬಗ್ಗೆ ಸರ್ಕಾರ ಘನಮೌನ ವಹಿಸಿದೆ.
ಶೈಕ್ಷಣಿಕ ಪುನಶ್ಚೇತನ ಕಾರ್ಯಕ್ರಮ
ನಮ್ಮ ಪ್ರಾಥಮಿಕ ಶಿಕ್ಷಣದಲ್ಲಿ ಕೊರೊನಾ ಪೆಂಡಮಿಕ್ ಸಮಸ್ಯೆಯಿಂದಾಗಿ ಮಕ್ಕಳಿಗೆ ಏನೆಲ್ಲ ಸಮಸ್ಯೆಗಳು ಉಂಟಾಗಿವೆ ಎಂಬುದನ್ನು ತಳಸ್ಪರ್ಶಿಯಾಗಿ ಮತ್ತು ಪ್ರಾದೇಶಿಕವಾಗಿ ಮೊದಲು ಗುರುತಿಸುವ ಕೆಲಸವಾಗಬೇಕು. ಇದಕ್ಕಾಗಿ ಸರ್ಕಾರವು ಒಂದು ತಜ್ಞರ ಸಮಿತಿಯನ್ನು ರಚಿಸಬೇಕು. ಎರಡನೆಯದಾಗಿ ಗ್ರಾಮೀಣ ಪ್ರದೇಶದಲ್ಲಿ ಡಿಜಿಟಲೈಸೇಶನ್‌ಗೆ ಸ್ವಲ್ಪ ಸಮಯ ಬಿಡುವು ಕೊಟ್ಟು ನೇರ ಪಾಠ ಹೇಳುವ ವಿಧಾನವನ್ನು ಮತ್ತು ಪರಿಣಾಮಕಾರಿ ಕಲಿಕೆಯ ಬಗ್ಗೆ ಬೃಹತ್ ಯೋಜನೆಯನ್ನು ಹಮ್ಮಿಕೊಳ್ಳಬೇಕು. ಇದಕ್ಕಾಗಿ ವಿಶೇಷವಾದ ಉಪಯುಕ್ತ ವರ್ಕ್‌ಬುಕ್ಕುಗಳನ್ನು ಸಿದ್ಧಪಡಿಸುವ ಬಗ್ಗೆ ನಾವು ಯೋಚಿಸಬೇಕು. ‘ಬೆಂಗಳೂರೇ ಕರ್ನಾಟಕವಲ್ಲ’ ಎಂಬುದನ್ನು ನಾವು ಮೊದಲು ಗಮನಿಸಬೇಕು. ಜಿಲ್ಲಾಮಟ್ಟದಲ್ಲಿ ಶಿಕ್ಷಣದಿಂದ ವಂಚಿತರಾದ ಮಕ್ಕಳಿಗೆ ವಿಶೇಷವಾಗಿ ಪರಿಹಾರಾತ್ಮಕ ಶಿಕ್ಷಣ ನೀಡುವದಕ್ಕೆ ನಿವೃತ್ತ ಶಿಕ್ಷಕರ, ಗ್ರಾಮೀಣ ಪ್ರದೇಶದಲ್ಲಿ ನೆಲೆಸಿರುವ ಯುವಕ-ಯುವತಿಯರ ಮತ್ತು ಕಾಲೇಜುಗಳಲ್ಲಿ ಕಲಿಯುತ್ತಿರುವ ಆಸಕ್ತ ಯುಜನರ ಒಂದು ಪಡೆಯನ್ನು ಇದಕ್ಕಾಗಿ ರೂಪಿಸುವ ಅಗತ್ಯವಿದೆ. ಶಿಕ್ಷಕರ ವರ್ಗಾವಣೆ, ಬಡ್ತಿ, ಎಸ್‌ಡಿಎಮ್‌ಸಿ ಮುಂತಾದ ಸಂಗತಿಗಳನ್ನು ಸದ್ಯಕ್ಕೆ ಪಕ್ಕಕ್ಕಿಟ್ಟು ಶಿಕ್ಷಣ ಇಲಾಖೆಯ ಅಧಿಕಾರಿಗಳು (ಡಿಡಿಪಿಐ-ಬಿಈಒ) ಅಧಿಕಾರಿಗಳು ಶಿಕ್ಷಣವನ್ನು ಕಳೆದುಕೊಂಡು ಕಂಗಾಲಾಗಿರುವ ಮಕ್ಕಳ ಶೈಕ್ಷಣಿಕ ಪುನಶ್ಚೇತನದ ಬಗ್ಗೆ ಗಮನ ನೀಡಬೇಕು. ಈ ಕಾರ್ಯಕ್ರಮದ ಅನುಷಾನಕ್ಕೆ ಒಕ್ಕೂಟ ಸರ್ಕಾರ ಬಜೆಟ್ಟಿನಲ್ಲಿ ಪ್ರಕಟಿಸಿರುವ ಕಾರ್ಯಯೋಜನೆಗೆ ಅನುದಾನವನ್ನು ನೀಡುವಂತೆ ಒತ್ತಾಯಿಸಬೇಕು.
ರಾಜ್ಯದಲ್ಲಿ 2022-23ನೆಯ ಸಾಲಿನಲ್ಲಿ ರೂಢಿಗತ ಶೈಕ್ಷಣಿಕ ಕಾರ್ಯಕ್ರಮದ ಜೊತೆಯಲ್ಲಿ ವಿಶೇಷ ಶೈಕ್ಷಣಿಕ ಪುನಶ್ಚೇತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು. ಎರಡೂ ಜೊತೆ ಜೊತೆಯಲ್ಲಿ ನಡೆಯಬೇಕು. ಈಗಾಗಲೆ ನ್ಯಾಯಾಲಯಗಳ ಆದೇಶಗಳಿಂದಾಗಿ ಮತ್ತು ಸರ್ಕಾರಗಳ ಅಖಂಡ ವಿಧಾನದ ಅಭಿವೃದ್ಧಿ ನೀತಿಗಳಿಂದಾಗಿ ರಾಜ್ಯದ ಹಿಂದುಳಿದ ವರ್ಗ ಹೈರಾಣಾಗಿದೆ. ಇಂದು ಆಳುವ ವರ್ಗವು ಪ್ರತಿಪಾದಿಸುತ್ತಿರುವ ‘ಎಲ್ಲ ಜಾತಿಗಳಲ್ಲಿಯೂ ಬಡವರಿದ್ದಾರೆ’ ಎಂಬ ಪ್ರಣಾಳಿಕೆಯಿಂದ ಪ. ಜಾ., ಪ. ಪಂ., ಒಬಿಸಿಗಳಿಗೆ ನ್ಯಾಯ ದೊರೆಯುವುದಿಲ್ಲ. ಈ ಪ್ರಣಾಳಿಕೆಯ ಹುಸಿತನವನ್ನು ಗಮನಿಸಬೇಕು. ಏಕೆಂದರೆ ಪ.ಜಾ.ಯ ಅನಕ್ಷರಸ್ಥ ದಿನಗೂಲಿ ಮಹಿಳೆಯರ ಬಡತನ ಮತ್ತು ಉನ್ನತ ಜಾತಿಯ ಅಕ್ಷರಸ್ಥ ಮಹಿಳೆಯರ ಬಡತನವನ್ನು ಒಂದೆ ತಕ್ಕಡಿಯಲ್ಲಿಟ್ಟು ತೂಗುವುದು ಸರಿಯಲ್ಲ. ಯಾವುದನ್ನು ಜಾನ್ ರಾಲ್ಸ್ ‘ಭಿನ್ನತೆಯ ನಿಯಮ’ ಎನ್ನುತ್ತಾನೋ ಅದನ್ನು ಶ್ರದ್ಧೆಯಿಂದ ನಾವು ಪಾಲಿಸುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ 91 ಲಕ್ಷ ಮಕ್ಕಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ನಮ್ಮ ಸರ್ಕಾರವು ಒಂದು ಬೃಹತ್ ಶೈಕ್ಷಣಿಕ ಪುನಶ್ಚೇತನ ಕಾರ್ಯಕ್ರಮವನ್ನು ತುರ್ತಾಗಿ ಹಮ್ಮಿಕೊಳ್ಳಬೇಕು. ಇಲ್ಲದಿದ್ದರೆ ಯಾವುದನ್ನು ಜನಸಂಖ್ಯಾಶಾಸ್ತ್ರಜ್ಞರು ‘ಪಾಪ್ಯುಲೇಶನ್ ಡಿವಿಡೆಂಡ್’ ಎನ್ನುತ್ತಾರೋ ಅದರ ಕಾಣಿಕೆಯು ಆರ್ಥಿಕ ಅಭಿವೃದ್ಧಿಗೆ ದೊರೆಯುವುದಿಲ್ಲ. ಈಗಾಗಲೆ ನಮ್ಮ ಯುವ ಜನಾಂಗ ಕುಶಲತೆ ಕೊರತೆಯಿಂದ ಕೂಡಿದೆ ಎಂದು ಟೀಕಿಸಲಾಗುತ್ತಿದೆ. ಈಗ ಎರಡು ವರ್ಷ ಶಿಕ್ಷಣದಿಂದ ವಂಚಿತರಾದ ಮಕ್ಕಳ ಶೈಕ್ಷಣಿಕ ಪುನಶ್ಚೇತನ ಕಾರ್ಯಯೋಜನೆಯನ್ನು ಹಮ್ಮಿಕೊಳ್ಳದಿದ್ದರೆ ಸಮಸ್ಯೆಯು ಮತ್ತಷ್ಟು ಉಲ್ಬಣಗೊಳ್ಳುತ್ತದೆ.