ಕೋವಿಡ್ ದಿನಗೂಲಿ ಕಾರ್ಮಿಕರಿಗೆ ಬೇಕು ವಿಶೇಷ ಪ್ಯಾಕೇಜ್

ನಿತ್ಯಾನಂದಸ್ವಾಮಿ

ಕೋವಿಡ್ ಎರಡನೇ ಅಲೆ ಭೀಕರವಾಗಿ ಹರಡುತ್ತಿದೆ. ಮೂರನೇ ಅಲೆಗೆ ಅದು ಕಾಲಿಡಲಿದ್ದು ಮುಗ್ದ ಮಕ್ಕಳನ್ನು ಬಲಿ ತೆಗೆದುಕೊಳ್ಳಲಿದೆ ಎಂಬ ಆತಂಕ ಜನರಲ್ಲಿ ವ್ಯಾಪಕ ಭಯ ಭೀತಿ ಉಂಟುಮಾಡಿದೆ.

ಭಾರತಕ್ಕೆ ಸ್ವಾತಂತ್ರ್ಯ ದೊರೆತ ದಿನದಿಂದಲೂ ಆರೋಗ್ಯ ಒಂದು ಮೂಲಭೂತ ಹಕ್ಕಾಗಲಿಲ್ಲ. ಇಲ್ಲಿ ಬದುಕುವ ಹಕ್ಕು ಒಂದು ಮೂಲಭೂತ ಹಕ್ಕು ಎಂದು ಸಂವಿಧಾನದಲ್ಲಿ ಘೋಷಣೆಯಾಗಿದೆ. ಇಲ್ಲಿ ಪ್ರಜೆಗಳಿಗೆ ಬದುಕುವ ಹಕ್ಕನ್ನು ನೀಡಲಾಗಿದ್ದರೂ ಬದುಕಲು ಅವಶ್ಯವಾದ ಆರೋಗ್ಯದ ಹಕ್ಕು ಮೂಲಭೂತ ಹಕ್ಕಾಗಿ ಘೋಷಣೆಯಾಗಿಲ್ಲ. ಆರೋಗ್ಯದ ಹಕ್ಕು ಮೂಲಭೂತ ಹಕ್ಕಾಗದೆ ಕೇವಲ ಬದುಕುವ ಹಕ್ಕಾಗಿ ಏನು ಅರ್ಥವಿದೆ?

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಒಂದು ಸಾವಿರ ಜನರಿಗೆ ಒಬ್ಬ ವೈದ್ಯ ಮೂರು ಹಾಸಿಗೆಗಳು ಮತ್ತು ಮೂರು ದಾದಿಯರು ಅಥವ ಸೂಲಗಿತ್ತಿಯರು ಇರಬೇಕಾಗುತ್ತದೆ. ಆದರೆ ಭಾರತದಲ್ಲಿ ಪತ್ರಿ ಒಂದು ಸಾವಿರ ಜನರಿಗೆ 0.66 ವೈದ್ಯರು, 1.8 ರಷ್ಟು ದಾದಿಯರು/ಸೂಲಗಿತ್ತಿಯರು ಮಾತ್ರ ಸೇವೆ ಸಲ್ಲಿಸುತ್ತಾರೆ. ಜಗತ್ತಿನ ಇತರ ದೇಶಗಳನ್ನು ಹೋಲಿಸಿದರೆ ಭಾರತವು ಬಹಳಷ್ಟು ಕಡಿಮೆ ಸಂಖ್ಯೆಯಲ್ಲಿ ತೀವ್ರ ನಿಗಾಘಟಕಗಳನ್ನು ಭಾರತ ಹೊಂದಿದೆ.

ಕೋವಿಡ್ ನಿರ್ವಹಣೆಗೆ ಏನೇನು ಬೇಕು ಅದು ಯಾವುದನ್ನು ಪೂರೈಸಲು ಸರ್ಕಾರ ವಿಫಲವಾಗಿದೆ. ಆಸ್ಪತ್ರೆಗಳಿಲ್ಲ, ಆಸ್ಪತ್ರೆಗಳಲ್ಲಿ ಹಾಸಿಗೆಗಳಿಲ್ಲ. ಆಮ್ಲಜನಕ ಇಲ್ಲ. ವೆಂಟಿಲೇಟರ್ ಇಲ್ಲ. ಔಷಧಿ ಇಲ್ಲ. ವ್ಯಾಕ್ಸಿನ್ ಇಲ್ಲ. ಅಂಬುಲೆನ್ಸ್ ಇಲ್ಲ. ಸೋಂಕಿತರು ಮಾತ್ರ ಎಲ್ಲೆಡೆ ಇದ್ದಾರೆ. ಅವರ ಸಂಖ್ಯೆ ಹೆಚ್ಚಾಗುತ್ತಾ ಇದೆ. ಆದರೆ ಈ ವಿಷಯದಲ್ಲಿ ಯಾರೂ ಬೊಬ್ಬೆ ಹಾಕುವ ಅಗತ್ಯವಿಲ್ಲ ಎಂದು ಯಡಿಯೂರಪ್ಪ ಮೋದಿಯವರ ಬೆನ್ನು ತಟ್ಟುತ್ತಾರೆ. ಇದಕ್ಕಾಗಿ ಮೋದಿ ರಾಜೀನಾಮೆ ನೀಡಿದರೆ ಸೋಂಕು ಹರಡುವುದು ನಿಲ್ಲುವುದೇ ಎಂದು ಸಿ.ಟಿ. ರವಿ ಕೇಳುತ್ತಾರೆ. ಇವರಿಗೆ ಮಾಡಬೇಕಾದ್ದು ಏನು ಎಂಬುದು ತಿಳಿಯದಾಗಿದೆ.

ಜನರನ್ನು ಸಾವಿನ ದವಡೆಯಿಂದ ತಪ್ಪಿಸಲು ಬೇಕಾಗಿರುವುದು ಒಂದು ವಿಶೇಷ ಪ್ಯಾಕೇಜ್. ಜನರ ಆರ್ಥಿಕ ಪರಿಸ್ಥಿತಿಯನ್ನು ಬಲಪಡಿಸುವ ಬಲವಾದ ಕ್ರಮಗಳು ಹಾಗೂ ಅವರ ಆರೋಗ್ಯವನ್ನು ಬಲಪಡಿಸುವ ಕ್ರಮಗಳು. ತಿಂಗಳಿಗೆ ಕನಿಷ್ಠ ರೂ. 10,000 ದರದಲ್ಲಿ ಪರಿಹಾರ ಅವರವರ ಬ್ಯಾಂಕ್ ಖಾತೆಗೆ ಜಮಾ ಮಾಡತಕ್ಕದ್ದು ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೆ ತಿಂಗಳಿಗೆ 10 ಕೆ.ಜಿ. ಯಷ್ಟು ಅಕ್ಕಿ ಮತ್ತು ಇತರ ಅವಶ್ಯಕ ದಿನಸಿಗಳ ಪ್ಯಾಕೆಜ್ ಹಾಗೂ ಅಗತ್ಯ ಔಷಧಿಗಳ ಉಚಿತ ಪ್ಯಾಕೇಜ್ ನೀಡಬೇಕು. ಈ ಮೂರು ತರಹದ ಪರಿಹಾರ ಪ್ಯಾಕೇಜ್‌ಗಳನ್ನು ಎಲ್ಲಾ ಬಡವರಿಗೆ, ತೆರಿಗೆ ವ್ಯಾಪ್ತಿಯಿಂದ ಹೊರಗಿರುವವರೆಗೆ ತಕ್ಷಣದಿಂದ ಮುಂದಿನ ಕನಿಷ್ಠ 6 ತಿಂಗಳವರೆಗೆ ತಪ್ಪದೆ ಒದಗಿಸಬೇಕು.

Donate Janashakthi Media

Leave a Reply

Your email address will not be published. Required fields are marked *