ರಿಯಲ್‌ ವಾರಿಯರ್ಸ್‌ಗಳಿಗೆ ಇಲ್ಲ ಭದ್ರೆತೆ : ಮೂರು ತಿಂಗಳಿಂದ ವೇತನವೂ ಇಲ್ಲ

ಹಳ್ಳಿಗಳಲ್ಲಿ ಕೋವಿಡ್ ರೋಗಿಗಳ ಜಾಗೃತಿ ಮೂಡಿಸುವಲ್ಲಿ ಮತ್ತು ದತ್ತಾಂಶವನ್ನು ಸಂಗ್ರಹಿಸುವಲ್ಲಿ ಪಟ್ಟುಬಿಡದೆ ತೊಡಗಿಸಿಕೊಂಡು ಕೆಸಲ ಮಾಡುತ್ತಿದ್ದೇವೆ.  ನಮಗೆ ನೀಡುತ್ತಿರುವ ವೇತನ ಕೇವಲ 4,000 ರೂ. ಈ ಹಣವನ್ನು ಸಹ ನಮಗೆ ಸಮಯಕ್ಕೆ ಸರಿಯಾಗಿ ನೀಡದಿದ್ದಾಗ ಅದು ನೋವು ತರುತ್ತದೆ. ‘ಎಂದು ಯಲಬುರ್ಗಾ ತಾಲ್ಲೂಕಿನ ತಲ್ಲೂರು ಗ್ರಾಮದ ಸಕ್ರವ್ವ ಸರಕಾರದ ನಡೆಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಗುರುರಾಜ ದೇಸಾಯಿ

ಕೊರೋನಾ ಸೋಂಕು ತೀವ್ರಗತಿಯಲ್ಲಿ ಏರುತ್ತಿರುವ ಕಠಿಣ ಪರಿಸ್ಥಿತಿಯಲ್ಲೂ ಜೀವದ ಹಂಗು ತೊರೆದು ಮುಂಚೂಣಿ ಕೊರೋನಾ ವಾರಿಯರ್ಸ್‌ಗಳು ಶ್ರಮಿಸುತ್ತಿದ್ದಾರೆ. ವೈದ್ಯರು, ದಾದಿಯರು, ಆಶಾ – ಅಂಗನವಾಡಿ ಕಾರ್ಯಕರ್ತೆಯರು, ಪಂಚಾಯತಿ ಸಿಬ್ಬಂದಿ, ಪೊಲೀಸರು, ಕಂದಾಯ ಇಲಾಖೆ, ಆ್ಯಂಬುಲೆನ್ಸ್‌ ಚಾಲಕ, ನಿರ್ವಹಣಾ ಸಿಬ್ಬಂದಿ,  ಬ್ಯಾಂಕ್‌ ಸಿಬ್ಬಂದಿ ಹೀಗೆ ಅನೇಕ ವಿಭಾಗಗಳಲ್ಲಿ ಮುಂಚೂಣಿ ಕಾರ್ಯಕರ್ತರು ನಮಗೆ ಸಿಗುತ್ತಾರೆ.  ಕೊರೋನಾ ಪಾಸಿಟಿವ್‌ ವ್ಯಕ್ತಿಗಳನ್ನು ಆಸ್ಪತ್ರೆಗೆ ಕರೆತರುವುದು, ಸೋಂಕಿನಿಂದ ಮೃತಪಟ್ಟವರನ್ನು ಸಂಬಂಧಿಕರಿಗೆ ಹಸ್ತಾಂತರಿಸುವುದು, ಜನರಿಗೆ ಮಾರ್ಗದರ್ಶನ, ಊರೂರು ಅಲೆದು ಸರ್ವೆ ಮಾಡುವುದು,  ಔಷಧಿ ಕಿಟ್‌ ವಿತರಿಸಿವುದು ಹೀಗೆ  ಆರೋಗ್ಯ ತುರ್ತು ಸೇವೆ ಸಲ್ಲಿಸುತ್ತಿರು ರಿಯಲ್‌ ವಾರಿಯರ್‌ಗಳಿಗೆ ಮೂರು ತಿಂಗಳಿಂದ ವೇತನವಿಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇತ್ತ ಭದ್ರತೆ ಇಲ್ಲದೆ ಇರುವುದು ಆತಂಕವನ್ನು ಸೃಷ್ಟಿಸಿದೆ.

ಕೊವಿಡ್ ನಿರ್ವಹಣೆಯಲ್ಲಿ ತಮ್ಮ ಪ್ರಾಣದ ಹಂಗು ತೊರೆದು ಹೋರಾಡುತ್ತಿರುವ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಸೂಕ್ತ ಸೌಲಭ್ಯ ಇಲ್ಲದೆ ಕಾರ್ಯನಿರ್ವಹಿಸುತ್ತಿದ್ದಾರೆ. ಮೂರು ತಿಂಗಳಿಂದ ವೇತನ ಸಿಗದೆ ಪರಿತಪಿಸುತ್ತಿದ್ದಾರೆ. ಇವರ ವೇತನವನ್ನೆ ನಂಬಿರುವ ಕುಟುಂಬಗಳು ಈಗ ಸಂಕಷ್ಟದಲ್ಲಿವೆ. ಕೋವಿಡ್ ಮೊದಲ ಅಲೆಯಲ್ಲಿ ಜೀವಪಣಕ್ಕಿಟ್ಟು ದುಡಿದ ಆಶಾ ಕಾರ್ಯಕರ್ತೆಯರಿಗೆ ಗೌರವ ಧನದ ಜೊತೆಗೆ ತಲಾ ₹3 ಸಾವಿರ ಪ್ರೋತ್ಸಾಹಧನ ನೀಡುವುದಾಗಿ ಘೋಷಿಸಿದ್ದ ಸರ್ಕಾರ ಶೇಕಡಾ 50ರಷ್ಟು ಮಂದಿಗೆ ಕೊಟ್ಟು ಉಳಿದವರಿಗೆ ವಂಚಿಸಿದೆ. ಕೊವಿಡ್ 19 ನಿಯಂತ್ರಣಕ್ಕಾಗಿ ಶ್ರಮಿಸಿದ 16 ಮಂದಿ ಆಶಾ ಕಾರ್ಯಕರ್ತೆಯರು ಈವರೆಗೆ ಸಾವನ್ನಪ್ಪಿದ್ದಾರೆ. ಸಾವಿರಕ್ಕೂ ಅಧಿಕ ಮಂದಿ ಕೊರೊನಾ ವೈರಸ್‌ ಸೋಂಕಿತರಾಗಿದ್ದಾರೆ. ಮಾಸಿಕ ಗೌರವಧನ ಕೊಡುವಲ್ಲಿ ಸೋತಿರುವ ರಾಜ್ಯ ಸರ್ಕಾರ ಆಶಾ ಕಾರ್ಯಕರ್ತೆಯರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದೆ. ಹಳ್ಳಿಗಳಲ್ಲಿ ಕೋವಿಡ್ ರೋಗಿಗಳ ಜಾಗೃತಿ ಮೂಡಿಸುವಲ್ಲಿ ಮತ್ತು ದತ್ತಾಂಶವನ್ನು ಸಂಗ್ರಹಿಸುವಲ್ಲಿ ಪಟ್ಟುಬಿಡದೆ ತೊಡಗಿಸಿಕೊಂಡು ಕೆಸಲ ಮಾಡುತ್ತಿದ್ದೇವೆ.  ನಮಗೆ ನೀಡುತ್ತಿರುವ ವೇತನ ಕೇವಲ 4,000 ರೂ. ಈ ಹಣವನ್ನು ಸಹ ನಮಗೆ ಸಮಯಕ್ಕೆ ಸರಿಯಾಗಿ ನೀಡದಿದ್ದಾಗ ಅದು ನೋವು ತರುತ್ತದೆ. ‘ಎಂದು ಯಲಬುರ್ಗಾ ತಾಲ್ಲೂಕಿನ ತಲ್ಲೂರು ಗ್ರಾಮದ ಸಕ್ರವ್ವ ಸರಕಾರದ ನಡೆಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಕಳೆದ ವರ್ಷ 25, ಈ ವರ್ಷ 19 ಅಂಗನವಾಡಿ ಕಾರ್ಯಕರ್ತೆ ಯರು ಸಾವಿಗೀಡಾಗಿದ್ದಾರೆ. ಇದುವರೆಗೆ ಐವರಿಗೆ ಮಾತ್ರ ಪರಿಹಾರ ನೀಡಲಾಗಿದೆ. 15 ಜನರಿಗೆ ಪರಿಹಾರ ನೀಡಲು ತಾಂತ್ರಿಕ ಕಾರಣದಿಂದ ವಿಳಂಬವಾಗಿದೆ ಎಂದು ಇಲಾಖೆ ಕೈ ಚೆಲ್ಲಿ ಕುಳಿತಿದೆ. ಕೆಲಸ ಮಾಡಿ ಎಂದು ಒತ್ತಡ ಹೇರುವ  ಸರಕಾರ ಮೌನ ವಹಿಸಿದೆ. ಅನೇಕ ಕಡೆಗಳಲ್ಲಿ ಗ್ಲೌಸ್‌, ಸ್ಯಾನಿಟೈಸರ್‌, ಪಿಪಿಇ ಕಿಟ್ ಇಲ್ಲದೆ ಆಶಾ – ಅಂಗನವಾಡಿ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಇವರಿಗೆ ಬೇಕಾದ ಆರೋಗ್ಯ ಸೌಲಭ್ಯಗಳನ್ನು ಸರಕಾರ ನೀಡಿಲ್ಲ.

ಕೊರೋನಾ ಸೋಂಕಿನ ತೀವ್ರಗತಿಯ ನಡುವೆಯೂ ಜೀವದ ಹಂಗು ತೊರೆದು ಕಾರ್ಯನಿರ್ವಹಿಸುತ್ತಿರುವ  108 ಆ್ಯಂಬುಲೆನ್ಸ್‌ ಸಿಬ್ಬಂದಿಗಳು ಹಗಲಿರುಳು ಶ್ರಮಿಸುತ್ತಿದ್ದಾರೆ. ಆದರೆ, ಮಾರ್ಚ್ ತಿಂಗಳಿಂದ ವೇತನ ಸಿಗದೆ  ರಾಜ್ಯದ 3300 ನೌಕರರು ಜೀವನ ನಿರ್ವಹಣೆಗೂ ಪರದಾಡುತ್ತಿದ್ದಾರೆ. ಅಷ್ಟೇ ಅಲ್ಲ, ಕಳೆದ ವರ್ಷ ಸರ್ಕಾರ ಮುಂಚೂಣಿ ಕೊರೋನಾ ವಾರಿಯರ್ಸ್‌ಗೆ ಪ್ರತಿದಿನ ನೀಡುತ್ತಿದ್ದ 500 ವಿಶೇಷ ಭತ್ಯೆಯೂ ಬಂದ್‌ ಆಗಿದೆ. ಜತೆಗೆ, ಪಿಪಿಇ ಕಿಟ್‌, ಮಾಸ್ಕ್‌, ಸ್ಯಾನಿಟೈಸರ್‌ ಸೇರಿದಂತೆ ಜೀವರಕ್ಷಕ ಸಾಮಗ್ರಿಗಳನ್ನೂ ಪೂರೈಸಿಲ್ಲ. ಇದರಿಂದ 108 ವಾಹನದ ಸಿಬ್ಬಂದಿ ನಿತ್ಯವೂ ಆತಂಕದಲ್ಲೇ ಕಾರ್ಯನಿರ್ವಹಿಸುತ್ತಿದ್ದಾರೆ. ಆ್ಯಂಬುಲೆನ್ಸ್‌ ಚಾಲಕ, ನಿರ್ವಹಣಾ ಸಿಬ್ಬಂದಿಗೆ ಕೋವಿಡ್‌-19 ಪಿಪಿಇ ಕಿಟ್‌ಗಳು ಲಭ್ಯವಿಲ್ಲ. ಬದಲಿಗೆ ಹೆರಿಗೆ ಕಿಟ್‌ ಅಥವಾ ಎಚ್‌ಐವಿ ಕಿಟ್‌ಗಳನ್ನು ಧರಿಸಿಕೊಂಡು ಕಾರ್ಯಾಚರಣೆ ಮಾಡುತ್ತಿದ್ದಾರೆ. ಪರಿಣಾಮ ಅವರೆಲ್ಲರಿಗೆ ಆತಂಕ ಎದುರಾಗಿದ್ದು. ಈ ಮಧ್ಯೆ ರೋಗಿಗಳು ಕರೆ ಮಾಡಿದರೆ ಸ್ಪಂದಿಸಲು ಹಿಂದೇಟು ಹಾಕುವಂತಾಗಿದೆ.

ಇದನ್ನು ಓದಿ: ಅತಿ ದೊಡ್ಡ ಲಸಿಕೆ ಉತ್ಪಾದನೆ ಸಾಮರ್ಥ್ಯವಿದ್ದರೂ ಭಾರತದ ಜನಗಳಿಗೆ ಲಸಿಕೆ ಹಾಕಲು ಆಗಿಲ್ಲ ಏಕೆ?

ಕೊರೋನಾ ವೈರಸ್ ಸೋಂಕು ಹರಡಿದ ಮೇಲೆ ಶಿಕ್ಷಣ ವ್ಯವಸ್ಥೆಯೇ ತಲೆಕೆಳಗಾಗಿದೆ. ರಾಜ್ಯದಲ್ಲಿ ಒಟ್ಟು 600 ಶಿಕ್ಷಕರು. ಕೊರೋನಾದಿಂದ ಸಾವನ್ನಪ್ಪಿದ್ದರೆ, ಒಂದುವರೆ ತಿಂಗಳಲ್ಲಿ 175 ಜನ ವಕೀಲರು ಕೋವಿಡ್‌ನಿಂದಾಗಿ ನಿಧನರಾಗಿದ್ದಾರೆ. ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ 55 ಶಿಕ್ಷಕರು ಕೊರೊನಾ ಸೊಂಕಿಗೆ ಬಲಿಯಾಗಿದ್ದರು. ಅನೇಕರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ರಾಜ್ಯದಲ್ಲಿ 25ರಿಂದ 30 ಸಾವಿರ ಶಿಕ್ಷಕರು ಕೋವಿಡ್ ಸಂಬಂಧಿ ಕಾರ್ಯಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಆದರೆ, ಈ ಶಿಕ್ಷಕರಿಗೆ ಯಾವುದೇ ಸುರಕ್ಷತೆಯೂ ಇಲ್ಲ! ಕರೊನಾ ಮೊದಲ ಅಲೆ, ಲಾಕ್​ಡೌನ್ ಹಾಗೂ ವಿದ್ಯಾಗಮ ಜಾರಿ ಸಂದರ್ಭದಲ್ಲೂ ಸುಮಾರು ನೂರಾರು ಶಿಕ್ಷಕರು ನಿಧನರಾಗಿದ್ದರು. ಕಳೆದ ಏಪ್ರಿಲ್‌ನಲ್ಲಿ ಆರಂಭವಾದ ಕೋವಿಡ್‌ ಎರಡನೇ ಅಲೆಯಿಂದ ರಾಜ್ಯದಲ್ಲಿ ಈವರೆಗೆ ಅಂದಾಜು 175ಕ್ಕೂ ಹೆಚ್ಚು ವಕೀಲರು ಹಾಗೂ 15ಕ್ಕೂ ಹೆಚ್ಚು ವಿವಿಧ ನ್ಯಾಯಾಲಯಗಳ ಸಿಬ್ಬಂದಿ ಸಾವನ್ನಪ್ಪಿದ್ದಾರೆ.. ಇದೇ ವೇಳೆ, ರಾಜಧಾನಿ ಬೆಂಗಳೂರಿನಲ್ಲಿಯೇ ಸುಮಾರು 70 ಮಂದಿ ವಕೀಲರು ಕೊರೊನಾಗೆ ಬಲಿಯಾಗಿರುವ ಆಘಾತಕಾರಿ ಮಾಹಿತಿಯೂ ಲಭ್ಯವಾಗಿದೆ.

ಕೊರೋನಾ ಮೊದಲನೆ ಅಲೆಯಲ್ಲಿ ಕರ್ನಾಟಕದ 61 ವೈದ್ಯರು ಸಾವನ್ನಪ್ಪಿದ್ದರು. ಎರಡನೇ ಅಲೆಯಲ್ಲಿ  08 ಜನ ಸಾವನ್ನಪ್ಪಿದ್ದಾರೆ. ಸಾವನ್ನಪ್ಪಿದವರಿಗೆ ಸೂಕ್ತ ಸಮಯದಲ್ಲಿ ಬೆಡ್ ಮತ್ತು ಚಿಕಿತ್ಸೆ ದೊರೆತಿರಲಿಲ್ಲ, ಅವರೆಲ್ಲಾ ಕೊರೋನಾ ವಾರಿಯರ್ಸ್ ಎಂದು ಸರಕಾರ ಪರಿಗಣಿಸಿದೆ. ಕೊರೊನಾ ಸಂದರ್ಭದಲ್ಲಿ ಕೃಷಿ ಇಲಾಖೆಯನ್ನು ಅಗತ್ಯ ಸೇವೆ ವ್ಯಾಪ್ತಿಗೆ ಒಳಪಡಿಸಲಾಗಿದೆ. ಹೀಗಾಗಿ ಲಾಕ್‌ಡೌನ್‌ ಸಂದರ್ಭದಲ್ಲಿಯೂ ಕೃಷಿ ಇಲಾಖೆಯ ಸಿಬಂದಿ ಗ್ರಾಮೀಣ ಭಾಗದಲ್ಲಿ ರೈತರೊಂದಿಗೆ ನಿರಂತರ ಸಂಪರ್ಕ ಇರಿಸಿಕೊಂಡಿದ್ದಾರೆ. ಹೀಗಾಗಿ ಇವರೂ ಕೊರೊನಾ ಬಾಧಿತರಾಗಿದ್ದು, ಕರ್ತವ್ಯ ಸಂದರ್ಭದಲ್ಲಿ ಸೋಂಕಿನಿಂದ 9 ಜನ ಸಾವಿಗೀಡಾಗಿದ್ದಾರೆ. ಆದರೆ ಪರಿಹಾರ ಸಿಕ್ಕಿಲ್ಲ. ಪೋಲೀಸರು ಮುಂಚೂಣಿ ಯೋಧರಾಗಿದ್ದು, ಎರಡು ವರ್ಷಗಳಲ್ಲಿ 146 ಮಂದಿ ಮೃತಪಟ್ಟಿದ್ದಾರೆ. ಕಳೆದ ವರ್ಷ 103, ಈ ವರ್ಷ 43 ಜನ ಪೋಲೀಸರು ಜೀವ ತೆತ್ತಿದ್ದಾರೆ. ಗೃಹ ಸಚಿವ ಬಸವರಾಜ ಬೊಮ್ಮಾಯಿ ಮತ್ತು ಡಿಜಿಪಿ ಪ್ರವೀಣ್‌ ಸೂದ್‌ ಮುತುವರ್ಜಿ ವಹಿಸಿದ್ದು, ಮೃತ ಪೊಲೀಸರ ಕುಟುಂಬಕ್ಕೆ 30 ಲಕ್ಷ ರೂ. ವಿಮೆ ಪರಿಹಾರ ಒದಗಿಸುವ ಕೆಲಸ ಮಾಡಲಾಗುತ್ತಿದೆ ಎಂದು ಪ್ರವೀಣ್‌ ಸೂದ್‌ ತಿಳಿಸಿದ್ದಾರೆ.

ಇದನ್ನೂ ಓದಿ : ಕೋವಿಡ್‌ನಿಂದ 600 ಶಿಕ್ಷಕರು, 175 ಜನ ವಕೀಲರ ಸಾವು

ಕಂದಾಯ ಇಲಾಖೆ ಕೊರೊನಾ ನಿಯಂತ್ರಣದಲ್ಲಿ ಮಾತೃ ಇಲಾಖೆಯಾಗಿ ಕಾರ್ಯ ನಿರ್ವಹಿಸುತ್ತಿದೆ. ಗ್ರಾಮೀಣ ಮಟ್ಟದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ಜನರೊಂದಿಗೆ ನೇರವಾಗಿ ಬೆರೆಯುತ್ತಿದ್ದಾರೆ. ಈ ವರೆಗೆ 43 ಮಂದಿ ಕೊರೊನಾದಿಂದ ಜೀವ ಕಳೆದುಕೊಂಡಿದ್ದಾರೆ. ಆದರೆ ಇದುವರೆಗೆ ಯಾರಿಗೂ ಸರಕಾರದಿಂದ ಪರಿಹಾರ ದೊರೆತಿಲ್ಲ. ಬ್ಯಾಂಕ್‌ ನೌಕರರಲ್ಲಿ ಬಹಳಷ್ಟು ಮಂದಿಗೆ ಕೋವಿಡ್‌ ಸೋಂಕು ತಗಲಿದ್ದು, ರಾಜ್ಯದಲ್ಲಿ ಎಷ್ಟುಜನ ಮೃತರಾಗಿದ್ದಾರೆ ಎಂದು ಅಧಿಕೃತ ಮಾಹಿತಿ ಸಿಕ್ಕಿಲ್ಲ. ಬ್ಯಾಂಕ್‌ ಆಡಳಿತಾಧಿಕಾರಿಗಳ ಒತ್ತಡದಲ್ಲಿ ಸಿಬ್ಬಂದಿಗಳು ಕೆಲಸವನ್ನು ನರ್ವಹಿಸುತ್ತಿದ್ದು, ಅನೇಕರು ಮಾನಸಿಕ ಖಾಯಿಲೆಗೆ ಒಳಗಾಗಿ ರಕ್ತದೊತ್ತಡ ಮತ್ತು ಸಕ್ಕರ ಖಾಯಿಲೆ ಪ್ರಮಾಣದಲ್ಲಿ  ಏರುಪೇರಾಗುತ್ತಿದೆ ಎಂದು ಸಿಬ್ಬಂದಿಗಳು ಅಳಲು ತೋಡಿಕೊಂಡಿದ್ದಾರೆ.

ಕರೋನಾ ಪ್ರೆಂಟ್ ಲೈನ್ ವರ್ಕ್ ರ್ಸ್ ಗೆ ರಾಜ್ಯದಲ್ಲೆಡೆ ಸನ್ಮಾನ, ಹಣದ ಹಂಚಿಕೆ ಮಾಡಿದರೆ ಅವರಿಗೆ ಗೌರವ ಕಟ್ಟೊಂಗೆ ಆಗುತ್ತಾ, ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನವನ್ನು 3 ತಿಂಗಳಿಂದ ಪಾವತಿಯಾಗಿಲ್ಲ, ನಿವೃತ್ತಿ ಸೌಲಭ್ಯ ವಿಲ್ಲ, ಹೆರಿಗೆ ರಜೆ ಇಲ್ಲ, ಸಾದಾರಣಾ ರಜೆಗಳಿಲ್ಲ, ಕನಿಷ್ಠ ವೇತನವಿಲ್ಲ, ಕರೋನಾ ಕೆಲಸಕ್ಕೆ ಹೋಗುವಾಗ ಕನಿಷ್ಠ ಮಾಸ್ಕ್, ಸ್ಯಾನಿಟೈಜರ್ ಮತ್ತು ಆಕ್ಸಿಮೇಟರ್ ಇಲ್ಲ, ಬಸ್ ಚಾರ್ಜ್ ಇಲ್ಲ, ಸಮಯಕ್ಕೆ ಸರಿಯಾಗಿ ಊಟ, ಕುಡಿಯುವ ನೀರಿಲ್ಲದೇ ದುಡಿಯುವ ಈ ಬಡ, ಗ್ರಾಮಾಂತರ ಪ್ರದೇಶದ ಮಹಿಳೆಯರು, ಆದೇ ರೀತಿ ಅಂಗನವಾಡಿ,108 ರಲ್ಲಿ ದುಡಿಯುವ ಚಾಲಕರು, ಸಿಬ್ಬಂದಿ ಗ್ರಾಮಪಂಚಾಯಿತಿ ನೌಕರರು 3 ತಿಂಗಳಿಂದ ವೇತನವಿಲ್ಲದೇ ದುಡಿಯುತ್ತಿದ್ದಾರೆ, 2015 ರಿಂದಲೂ ನಿವೃತ್ತಿ ಯಾದ ಅಂಗನವಾಡಿ ನೌಕರರಿಗೆ ಕೊಡಬೇಕಾದ ನಿವೃತ್ತಿ ವೇತನ ಕೊಡದೇ ಇವರ ಬೇಡಿಕೆಗಳಿಗೆ ಸಂಬಂಧಿಸಿ ಆಯಾ ಇಲಾಖೆ ಬಜೆಟ್ ಗೆ ಶಿಫಾರಸ್ಸು ಮಾಡಿದಾಗ ಶಿಫಾರಸ್ಸು ಆದ ವಿಚಾರಗಳಿಗೆ ಅನುದಾನ ಕೊಡಬೇಕೆಂದೂ ಈ ಜನಪ್ರತಿನಿದಿಗಳು ಕೇಳಿದ ಉದಾಹರಣೆಗಳಿಲ್ಲ. ಹಾಗಾಗಿ ಕೋವಿಡ್‌ ವಾರಿಯರ್‌ಗಳಿಗೆ ಕೊಡಬೇಕಾದ ವೇತನವನ್ನು ಸರಕಾರ ಕೊಡದಿರುವುದು ಸರಕಾರದ ಹೀನ ಕೃತ್ಯವನ್ನು ತೋರಿಸುತ್ತದೆ ಎಂದು ಸಿಐಟಿಯು ರಾಜ್ಯಾಧ್ಯಕ್ಷೆ ಎಸ್.‌ ವರಲಕ್ಷ್ಮಿ ಆರೋಪಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *