ದೇಶದಲ್ಲಿ ವಿವಿಧ ವಯೋಮಿತಿಯವರಿಗೆ ಕೊರೋನಾ ಲಸಿಕೆ ನೀಡಲಾಗ್ತಿದೆ. ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆ ನೀಡುತ್ತಿದ್ದು, ಬಹುತೇಕ ಕಡೆಗಳಲ್ಲಿ ಕೊವ್ಯಾಕ್ಸಿನ್ ಲಸಿಕೆ ಕೊರತೆ ಕಂಡು ಬಂದಿದೆ.
ಕೊವ್ಯಾಕ್ಸಿನ್ ಲಸಿಕೆ ಕೊರತೆಯ ಬಗ್ಗೆ ಭಾರತ್ ಬಯೋಟೆಕ್ ಸಂಸ್ಥೆ ಸ್ಪಷ್ಟನೆ ನೀಡಿದ್ದು, ಲಸಿಕೆ ಉತ್ಪಾದಿಸಿ ಬಿಡುಗಡೆ ಮಾಡಲು ನಾಲ್ಕು ತಿಂಗಳು ಸಮಯ ಬೇಕಾಗುತ್ತದೆ. ಬ್ಯಾಚ್ ಗಳಲ್ಲಿ ತಯಾರಿಸಿ ಟೆಸ್ಟಿಂಗ್, ಬಿಡುಗಡೆಗೆ 120 ದಿನ ಬೇಕಾಗುತ್ತದೆ ಎಂದು ತಿಳಿಸಲಾಗಿದೆ. ತಂತ್ರಜ್ಞಾನ, ಡ್ರಗ್ಸ್ ನಿಯಮಗಳನ್ನು ಪಾಲಿಸುವುದನ್ನು ಅವಲಂಬಿಸಿದೆ. ಅಂದಾಜು ಎಪ್ರಿಲ್ ನಲ್ಲಿ ಉತ್ಪಾದನೆ ಆರಂಭಿಸಿದರೆ ಲಸಿಕೆಯನ್ನು ಜುಲೈನಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂದು ಕೊವ್ಯಾಕ್ಸಿನ್ ಲಸಿಕೆ ಕೊರತೆ ಬಗ್ಗೆ ಭಾರತ್ ಬಯೋಟೆಕ್ ನಿಂದ ಸ್ಪಷ್ಟನೆ ನೀಡಲಾಗಿದೆ.
ದೈನಂದಿನ ವ್ಯಾಕ್ಸಿನೇಷನ್ ವೇಗವು ಮೇ 23 ರಿಂದ ಕುಸಿಯುತ್ತಿದೆ. ಪ್ರತಿ ಮಿಲಿಯನ್ ಜನರಲ್ಲಿ 980 ಮಂದಿಗೆ ಮಾತ್ರ ಪ್ರತಿ ದಿನ ಲಸಿಕೆ ಹಾಕಲಾಗುತ್ತಿದೆ. ಇದರಂತೆ ದೇಶದಲ್ಲಿ ವ್ಯಾಕ್ಸಿನೇಷನ್ ಪ್ರಮಾಣ ಶೇ. 35 ಕ್ಕೆ ಕುಸಿತ ಕಂಡಿದೆ. ದೈನಂದಿನ ಹೊಸ ಪ್ರಕರಣಗಳು ಈಗ ಸರಾಸರಿ 2.1 ಲಕ್ಷದಷ್ಟಿದೆ.ಒಂದು ವಾರಕ್ಕೂ ಮುನ್ನ ದೇಶದಲ್ಲಿ ಒಂದು ಮಿಲಿಯನ್ ಜನರ ಪೈಕಿ 1,455 ಮಂದಿಗೆ ಲಸಿಕೆ ನೀಡಲಾಗುತ್ತಿತ್ತು ಎಂದು ವರದಿ ತಿಳಿಸಿದೆ.
ಲಸಿಕಾ ಅಭಿಯಾನದ 130 ನೇ ದಿನದ ಹೊತ್ತಿಗೆ ಭಾರತದಲ್ಲಿ ಲಸಿಕೆ ನೀಡಿಕೆಯ ವ್ಯಾಪ್ತಿ 20 ಕೋಟಿ ಡೋಸ್ ಗಡಿ ದಾಟಿದೆ (15,71,49,593 ಮೊದಲ ಡೋಸ್ ಮತ್ತು 4,35,12,863 ಎರಡನೇ ಡೋಸ್ ಪಡೆದಿರುವವರು ಒಳಗೊಂಡಂತೆ 20,06,62,456 ಡೋಸ್) ಎಂದು ಸಚಿವಾಲಯ ಮಾಹಿತಿ ಬಿಡುಗಡೆ ಮಾಡಿದೆ.
ಈ ಪೈಕಿ 45 ವರ್ಷಕ್ಕಿಂತ ಮೇಲ್ಪಟ್ಟ ಜನಸಂಖ್ಯೆಯ ಶೇಕಡಾ 34 ಕ್ಕಿಂತ ಹೆಚ್ಚು ಜನರು ಇಲ್ಲಿಯವರೆಗೆ ಭಾರತದಲ್ಲಿ ಕನಿಷ್ಠ ಮೊದಲ ಡೋಸ್ ಲಸಿಕೆಯನ್ನು ಪಡೆದಿದ್ದಾರೆ. 60 ವರ್ಷ ಮೇಲ್ಪಟ್ಟ ಜನಸಂಖ್ಯೆಯ ಶೇಕಡಾ 42 ಕ್ಕಿಂತಲೂ ಹೆಚ್ಚು ಜನರು ಕನಿಷ್ಠ ಮೊದಲ ಡೋಸ್ ಲಸಿಕೆ ಪಡೆದಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.
ಇದನ್ನೂ ಓದಿ : ನಿಮ್ಮ ಅಕ್ಕಪಕ್ಕದಲ್ಲಿನ ಕೋವಿಡ್ ಪ್ರಕರಣಗಳನ್ನು ಸುಲಭವಾಗಿ ತಿಳಿಯಬಹುದು! ಹೇಗೆ ?
ಲಸಿಕೆ ಉತ್ಪಾದನೆ ವಿಳಂಭವಾಗುತ್ತಿದೆ ಎಂದು ಸ್ವತಃ ತಯಾರಿಕಾ ಸಂಸ್ಥೆಗಳೇ ಹೇಳುತ್ತಿವೆ, ಭಾರತದಲ್ಲಿ 134 ಕೋಟಿ ಜನಸಂಖ್ಯೆಯಲ್ಲಿ ಸಲಿಕೆ ಪಡೆಯುವವರ ಸಂಖ್ಯೆ ಅಂದಾಜು 98 ಕೋಟಿ ಎಂದು ಹೇಳಲಾಗುತ್ತಿದೆ. 65 ವರ್ಷ ಮೇಲ್ಪಟ್ಟವರು 10% ರಷ್ಟು ಜನ ಇದ್ದಾರೆ. 45 ವರ್ಷ ಮೇಲ್ಪಟ್ಟವರು 21 % ಇದ್ದರೆ. 18 ವರ್ಷ ಮೇಲ್ಪಟ್ಟವರು 69% ಜನರಿದ್ದಾರೆ. ಸದ್ಯ ಒಂದು ದಿನಕ್ಕೆ 30 ಲಕ್ಷ ಜನರಿಗೆ ಲಸಿಕೆ ವಿತರಿಸುತ್ತಿದ್ದಾರೆ. ತಿಂಗಳಿಗೆ ಅಂದಾಜು 9 ಕೋಟಿ ಜನರಿಗೆ ಲಸಿಕೆ ನೀಡಲಾಗುತ್ತಿದೆ. ಈ ಅಂಕಿ ಅಂಶದ ಪ್ರಕಾರ 36 ಕೋಟಿ ಜನ ಈಗಾಗಲೆ ಲಸಿಕೆ ಪಡೆದಿರಬೇಕಿತ್ತು, ಆದರೆ ಲಸಿಕೆ ಅಭಿಯಾನ ಆರಂಭವಾಗಿ 4 ತಿಂಗಳು ಕಳೆದರು ಲಸಿಕೆ ನೀಡಿರುವುದು ಇಲ್ಲಿಯವರೆಗೆ ಕೇವಲ 20 ಕೋಟಿ ಜನರಿಗೆ. ಈಗ ಲಸಿಕೆ ಉತ್ಪಾದನೆ ವಿಳಂಭವಾದರೆ ಲಸಿಕೆಗೆ ಇನ್ನಷ್ಟು ಹಾಹಾಕಾರ ಶುರುವಾಗಲಿದೆ.
ಭಾರತದಲ್ಲಿ ಹೆಚ್ಚಾಗುತ್ತಿರುವ ಕೋವಿಡ್ ನಿಯಂತ್ರಣಕ್ಕೆ ಲಸಿಕೆಯೇ ಮದ್ದು ಎಂದು ತಜ್ಞರು ಸೇರಿದಂತೆ, ವಿಶ್ವಸಂಸ್ಥೆಯ ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ. ಸರಕಾರ ಡಿಸೆಂಬರ್ ವೇಳೆಗೆ ಲಸಿಕೆ ಅಭಿಯಾನವನ್ನು ಪೂರ್ಣಗೊಳಿಸುವುದಾಗಿ ಹೇಳುತ್ತಿದೆ. ಇಷ್ಟೆಲ್ಲ ಕುಸಿತ, ಲಸಿಕೆಯ ಕೊರತೆಯ ಮದ್ಯೆ ಅದು ಸಾಧ್ಯವೆ? ಅಥವಾ ಕೇಂದ್ರ ಸರಕಾರ ಸುಳ್ಳು ಹೇಳುತ್ತಿದೆಯಾ ಎಂಬ ಪ್ರಶ್ನೆ ಈಗ ಎದ್ದಿದೆ.