ನವದೆಹಲಿ: ಭಾರತದಲ್ಲಿ 18 ವರ್ಷದೊಳಗಿನ ಮಕ್ಕಳಿಗೆ ಕೊರೊನಾ ವೈರಸ್ ಲಸಿಕೆ ನೀಡುವ ಬಗ್ಗೆ ಹೈದ್ರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆ ಉತ್ಪಾದಿಸುವ ಕೊವ್ಯಾಕ್ಸಿನ್ ಲಸಿಕೆಯನ್ನು 2 ವರ್ಷದಿಂದ 18 ವರ್ಷದೊಳಗಿನ ಮಕ್ಕಳಿಗೆ ನೀಡಲು ಕೊವಿಡ್-19 ತಜ್ಞರ ಸಮಿತಿ ಅನುಮೋದನೆ ನೀಡಿದೆ.
ಐಸಿಎಂಆರ್ ಮತ್ತು ಭಾರತ್ ಬಯೋಟೆಕ್ ಕೊವಾಕ್ಸಿನ್ ಭಾರತದ ಮೊದಲ ಸ್ಥಳೀಯ ಕೋವಿಡ್ -19 ಲಸಿಕೆ ಆಗಿದೆ. ಎರಡು ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಸಂಸ್ಥೆಯು ಈಗಾಗಲೇ ಪರೀಕ್ಷೆಯನ್ನು ಸೆಪ್ಟೆಂಬರ್ ತಿಂಗಳಿನಲ್ಲಿ 18 ವರ್ಷದೊಳಗಿನ ಮಕ್ಕಳ ಮೇಲೆ ಹಂತ -2 ಮತ್ತು ಹಂತ -3 ಪ್ರಯೋಗಗಳನ್ನು ಪೂರ್ಣಗೊಳಿಸಿತು ಮತ್ತು ಈ ತಿಂಗಳ ಆರಂಭದಲ್ಲಿ ಮಕ್ಕಳಿಗೆ ಲಸಿಕೆಯ ಕ್ಲಿನಿಕಲ್ ಪ್ರಯೋಗಕ್ಕೆ ಸಂಬಂಧಿಸಿದ ದತ್ತಾಂಶವನ್ನು ಡ್ರಗ್ಸ್ ಮತ್ತು ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ)ಗೆ ಸಲ್ಲಿಸಿತು.
ಸೆಪ್ಟೆಂಬರ್ 21ರಂದು ಮಕ್ಕಳಿಗೆ ಕೊವ್ಯಾಕ್ಸಿನ್ ಲಸಿಕೆ ನೀಡುವ 3ನೇ ಹಂತದ ಪ್ರಯೋಗ ಪೂರ್ಣಗೊಂಡಿತ್ತು. ಒಟ್ಟು 1,000 ಮಕ್ಕಳ ಮೇಲೆ ಪ್ರಯೋಗ ನಡೆಸಲಾಗಿತ್ತು. ಈ ತಿಂಗಳ ಅಂತ್ಯ ಅಥವಾ ನವೆಂಬರ್ ಮೊದಲ ವಾರದಲ್ಲಿ ಕೊರೊನಾ 3ನೇ ಅಲೆ ಕಾಣಿಸಿಕೊಳ್ಳಲಿದೆ. ಈ ಮೂರನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರುವ ಹಿನ್ನೆಲೆಯಲ್ಲಿ ಇದೀಗ ಮಕ್ಕಳಿಗೆ ಕೊವ್ಯಾಕ್ಸಿನ್ ಲಸಿಕೆ ನೀಡಲು ಅನುಮತಿ ಸಿಕ್ಕಿರುವುದು ಸಮಾಧಾನಕರ ಸಂಗತಿಯಾಗಿದೆ.
ಅನುಮೋದನೆ ನೀಡಿದ ಬಳಿಕವು ಕೆಲವು ಷರತ್ತುಗಳನ್ನು ವಿಧಿಸಲಾಗಿದೆ. ಕೊವ್ಯಾಕ್ಸಿನ್ ಲಸಿಕೆ ಸಂಶೋಧಕರು ನಿಷ್ಕ್ರಿಯಗೊಳಿಸಿದ ಕೊರೊನಾವೈರಸ್ ಲಸಿಕೆಯ ಅನುಮೋದನೆ ಪಡೆಯುವವರೆಗೂ ಶಿಷ್ಟಾಚಾರದಡಿ ವೈದ್ಯಕೀಯ ಪ್ರಯೋಗ ಮತ್ತು ಅಧ್ಯಯನವನ್ನು ಮುಂದುವರಿಸಬೇಕು. ಪ್ರಸ್ತುತ ಲಸಿಕೆಗೆ ಸಂಬಂಧಿಸಿದ ನವೀಕರಿಸಿದ ಮಾಹಿತಿ/ಪ್ಯಾಕೇಜ್ ಇನ್ಸರ್ಟ್, ಉತ್ಪನ್ನ ಗುಣಲಕ್ಷಣಗಳ ಸಾರಾಂಶ ಮತ್ತು ಸತ್ಯಾಂಶಗಳ ಪಟ್ಟಿಯನ್ನು ಒದಗಿಸಬೇಕಾಗುತ್ತದೆ.
ಇದರ ಜೊತೆಗೆ ಭಾರತ ಮೂಲದ ಜೈಡಸ್ ಕ್ಯಾಡಿಲಾ ಕಂಪನಿ ಅಭಿವೃದ್ಧಿಪಡಿಸಿರುವ ಜೈಕೊವ್-ಡಿ ಲಸಿಕೆಯ ತುರ್ತು ಬಳಕೆಗೆ ಈಗಾಗಲೇ ಅನುಮತಿ ಸಿಕ್ಕಿದೆ. ಮೂರು ಡೋಸ್ಗಳನ್ನು ಹೊಂದಿರುವ ಈ ಲಸಿಕೆಯನ್ನು ಅಕ್ಟೋಬರ್ ಬಳಿಕ 12ರಿಂದ 17 ವರ್ಷದೊಳಗಿನ ಮಕ್ಕಳಿಗೆ ನೀಡಲಾಗುವುದು. ಮುಖ್ಯವಾಗಿ ಆರೋಗ್ಯ ಸಮಸ್ಯೆಗಳಿರುವ ಮಕ್ಕಳಿಗೆ ಲಸಿಕೆ ನೀಡಲು ಆದ್ಯತೆ ನೀಡಲಾಗುವುದು ಎನ್ನಲಾಗಿದೆ. 12 ವರ್ಷದಿಂದ 18 ವರ್ಷದೊಳಗಿನ ಮಕ್ಕಳಿಗೆ ಈ ಜೈಕೋವ್-ಡಿ ಲಸಿಕೆ ಬಹಳ ಪರಿಣಾಮಕಾರಿಯಾಗಲಿದೆ.
ದೇಶದಲ್ಲಿ ಈಗಾಗಲೇ ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಹಾಗೂ ಆಸ್ಟ್ರಾಜೆನಿಕಾ ಸಂಶೋಧಿಸಿರುವ ಪುಣೆಯ ಸೀರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಉತ್ಪಾದಿಸುತ್ತಿರುವ ಕೊವಿಶೀಲ್ಡ್ ಲಸಿಕೆ. ಹೈದ್ರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆ ಉತ್ಪಾದಿಸುತ್ತಿರುವ ಕೊವ್ಯಾಕ್ಸಿನ್, ರಷ್ಯಾದಲ್ಲಿ ಸಂಶೋಧಿಸಿ ಭಾರತದ ರೆಡ್ಡೀಸ್ ಕಂಪನಿ ಜೊತೆಗಿನ ಸಹಭಾಗಿತ್ವದಲ್ಲಿ ಉತ್ಪಾದನೆ ಆಗುತ್ತಿರುವ ಸ್ಪುಟ್ನಿಕ್-ವಿ ಹಾಗೂ ಮಾಡೆರ್ನಾ ಲಸಿಕೆಯನ್ನು ವಿತರಿಸುವುದಕ್ಕೆ ಕೇಂದ್ರ ವೈದ್ಯಕೀಯ ಔಷಧೀಯ ನಿಯಂತ್ರಣ ಪ್ರಾಧಿಕಾರವು ಅನುಮೋದನೆ ನೀಡಲಾಗಿದೆ.
ಇದರ ನಡುವೆ ಭಾರತ್ ಬಯೋಟೆಕ್ ಸಂಸ್ಥೆಯು ಉತ್ಪಾದಿಸುವ ಕೊವ್ಯಾಕ್ಸಿನ್ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆಯು ಇದುವರೆಗೂ ಅನುಮೋದನೆ ನೀಡಿಲ್ಲ. ಅಗತ್ಯವಿರುವ ಎಲ್ಲ ದಾಖಲೆಗಳನ್ನು ಸಂಸ್ಥೆಯು ಸಲ್ಲಿಸಿದ್ದರೂ ಸಹ ದಾಖಲೆಗಳ ಪರಿಶೀಲನೆಐ ಹಂತದಲ್ಲಿದೆ ಎಂದು ವರದಿಯಾಗಿದೆ.