ಸೌಜನ್ಯ ಪ್ರಕರಣ: ರಾವ್ ಅಪರಾಧಿ ಅಲ್ಲ ನಿಜ, ಹಾಗಾದರೆ ಅಪರಾಧಿಗಳು ಯಾರು?

ಎಸ್.ವೈ. ಗುರುಶಾಂತ್

2012 ರಲ್ಲಿ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ಅತ್ಯಾಚಾರಕ್ಕೀಡಾಗಿ ಹತ್ಯೆಯಾದ ಸೌಜನ್ಯ ಪ್ರಕರಣದ ತನಿಖೆ ನಡೆಸಿದ ಸಿಬಿಐ ವಿಶೇಷ ನ್ಯಾಯಾಲಯವು ಆರೋಪಿ ಒಬ್ಬಾತನನ್ನು ಖುಲಾಸೆಗೊಳಿಸಿದೆ. ಈ ತೀರ್ಪು ಹಲವು ಹೊಸ ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಹತ್ಯೆಯನ್ನು ಪ್ರತಿಭಟಿಸಿ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ) ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ, ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್, ಸಿಐಟಿಯು, ಅಲ್ಲದೇ ಇನ್ನೂ ಹಲವಾರು ನಾಗರಿಕ ಸಂಘಟನೆಗಳು ಚಳುವಳಿ ನಡೆಸಿದ್ದವು. ನಿಜ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ನಿರಂತರ ಹೋರಾಟದ ಒತ್ತಡ ಹೆಚ್ಚಿದ ಬಳಿಕ ಮಾನಸಿಕ ಅಸ್ವಸ್ತ ಎನ್ನಲಾಗಿದ್ದ ಸಂತೋಷ್ ರಾವ್ ಎನ್ನುವವರನ್ನು ಆರೋಪಿ ಎಂದು ಪೋಲೀಸರು ಬಂಧಿಸಿ ಜೈಲಿಗೆ ತಳ್ಳಿದ್ದರು. ಆದರೆ ಈ ವ್ಯಕ್ತಿ ಕೃತ್ಯ ಆ ಎಸಗಿದ್ದಾನೆ ಎಂಬುದನ್ನು ಹೋರಾಟ ನಡೆಸುತ್ತಿದ್ದ ಸಂಘಟನೆಗಳು, ಸೌಜನ್ಯಾಳ ಕುಟುಂಬ ಒಪ್ಪಿಯೇ ಇರಲಿಲ್ಲ.

ಈ ಕೃತ್ಯದಲ್ಲಿನ ಅತ್ಯಂತ ಪ್ರಭಾವಿ ಪ್ರಮುಖರನ್ನು ರಕ್ಷಿಸಲೆಂದೇ ಒಬ್ಬ ಅಮಾಯಕನನ್ನು ಬಲಿ ಕೊಡಲಾಗುತ್ತಿದೆ ಎಂದೇ ಪ್ರತಿಭಟಿಸಲಾಗಿತ್ತು. ಈಗ ಸಿಬಿಐ ವಿಶೇಷ ನ್ಯಾಯಾಲಯ ನೀಡಿದ ತೀರ್ಪು ಅದನ್ನು ಸಮರ್ಥಿಸಿದೆ. ಅಪರಾಧಿಗಳು ಬೇರೆ ಇದ್ದಾರೆ ಎನ್ನುವುದನ್ನು ಧೃಡ ಪಡಿಸಿದೆ. ಈ ತೀರ್ಪಿನ ಬಳಿಕ ಮತ್ತೆ ಮುನ್ನೆಲೆಗೆ ಬಂದಿರುವ ಪ್ರಶ್ನೆ ಆ ಅಪರಾಧಿಗಳು ಯಾರು? ಯಾರು ಪ್ರಭಾವಿ ಪ್ರಬಲರು? ಅವರನ್ನು ರಕ್ಷಿಸುತ್ತಿರುವವರು ಯಾರು? ಸೌಜನ್ಯಳ ಅತ್ಯಾಚಾರ, ಕೊಲೆಯಂತಹ ಒಂದು ಪ್ರಕರಣವನ್ನು ಭೇದಿಸಲಾಗದಷ್ಟು ನಮ್ಮ ಪೊಲೀಸ್ ವ್ಯವಸ್ಥೆ, ತನಿಖಾ ಸಂಸ್ಥೆಗಳು ದುರ್ಬಲವಾಗಿವೆಯೇ ಅಥವಾ ಹಾಗೆ ಮಾಡಲಾಗುತ್ತಿದೆಯೇ? ಅದೇ ಹೊತ್ತಿನಲ್ಲಿ ಮತ್ತೆ ಎತ್ತಲಾಗಿದ್ದ ಪ್ರಶ್ನೆ- ಪ್ರತಿ ವರ್ಷವೂ ಧರ್ಮಸ್ಥಳದ ಆ ಪ್ರದೇಶಕ್ಕೆ ಬಂದ ನೂರಾರು ಯುವತಿಯರು ಕಣ್ಮರೆಯಾಗುವುದು, ಕೊಲೆಯಾಗುವುದು, ನೇತ್ರಾವತಿ ನದಿಯಲ್ಲಿ ಹೆಣಗಳು ತೇಲುವುದು ಯಾಕೆ? ಅದರ ಹಿನ್ನೆಲೆ ಏನು? ಎನ್ನುವುವುದು ಇಂದಿಗೂ ಹಾಗೇ ಉಳಿದಿದೆ. ದಾಖಲಾದ ಪ್ರಕರಣಗಳು ಕಡತದಲ್ಲಿ ಧೂಳು ಹಿಡಿದು ಮೂಲೆ ಸೇರಿವೆ ಅಷ್ಟೇ. ನಮ್ಮ ಅರಕ್ಷಕ ವ್ಯವಸ್ಥೆ, ಸರಕಾರ ಕಣ್ಣು ಮುಚ್ಚಿ, ಕೈ ಕಟ್ಟಿ ಕುಳಿತಿವೆ ಏಕೆ?. ಆದರೆ ಅದಕ್ಕೆ ಇದುವರೆಗೂ ಉತ್ತರ ಸಿಕ್ಕಿಲ್ಲ! ಉತ್ತರ ಕಂಡುಕೊಳ್ಳುವ ಕಂಡು ಹಿಡಿಯುವ ಮನಸ್ಸು ಆಳುವವರಿಗೆ ಇಲ್ಲ! ಹಾಗಾದರೆ ಸೌಜನ್ಯಳ ಪ್ರಕರಣದಲ್ಲಿ ಯಾರೆಲ್ಲಾ ಭಾಗಿಯಾಗಿದ್ದಾರೆ? ಈ ಪ್ರಶ್ನೆ ಹಾಗೂ ಉತ್ತರ ಅಗೋಚರವಾಗಿಯೇನೂ ಉಳಿದಿರಲಿಲ್ಲ.

ಅಂದೇ ಸೂಕ್ತ ಸುಳಿವು ಮತ್ತು ಸ್ಪಷ್ಟ ಆರೋಪಗಳನ್ನು ಮಾಡಲಾಗಿತ್ತು. ನ್ಯಾಯಕ್ಕಾಗಿ ನಡೆವ ಈ ಹೋರಾಟವನ್ನು ಹೋರಾಟವನ್ನು ಬೆಂಬಲಿಸಿ ಎಂದು ಜನರ ನಡುವೆ ಹೋದಾಗ ಸಾಮಾನ್ಯ ಜನರು ಪ್ರಭಾವಿ ಗಳತ್ತಲೇ ಬೊಟ್ಟು ಮಾಡಿದ್ದರು. ಪ್ರಕರಣದ ವಿವರಗಳು ಅಪರಾಧಿಗಳತ್ತ ತಪ್ಪಿಸಿಕೊಂಡು ಹೋದ ಜಾಡನ್ನು ತೋರುತ್ತಿದ್ದವು. ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಸಹೋದರ ಸಂಬಂಧಿಗಳತ್ತ ಆರೋಪದ ಮುಳ್ಳಿತ್ತು. ಆದರೆ ಅಂದು ವಿಶೇಷ ತನಿಖೆ ನಡೆಸುತ್ತಿದ್ದ ಸಿಐಡಿ ಇಲಾಖೆ ಹೆಗ್ಗಡೆಯವರ ಕುಟುಂಬದ ಸದಸ್ಯರುಗಳಿಗೆ ಕ್ಲೀನ್ ಚಿಟ್ ನೀಡಿ ಬಿಟ್ಟಿತು. ಪ್ರಮುಖ ಆರೋಪಿತ ಹರ್ಷೇಂದ್ರ ಕುಮಾರ್ ಅವರ ಮಗ ನಿಶ್ಚಲ್ ಜೈನ್ ಹೆಸರು, ಆತನ ಬಾಗಿತ್ವದ ಬಗ್ಗೆ ಹೋರಾಟಗಾರರು ಪ್ರಬಲವಾಗಿ ಪ್ರಸ್ತಾಪಿಸಿದ್ದರು. ನಿಶ್ಚಲ್ ಜೈನ್ ಆ ಕೃತ್ಯ ನಡೆದ ದಿನ ಈ ದೇಶದಲ್ಲಿಯೇ ಇರಲಿಲ್ಲ ಎಂದು ಸಿಐಡಿ ಪೊಲೀಸರು ಹೇಳಿದ್ದರು. ಮಾತ್ರವಲ್ಲ, ಸೌಜನ್ಯ ಳ ಕುಟುಂಬ ಮತ್ತು ಹೋರಾಟಗಾರರು ಆರೋಪಿಸಿದ್ದ ಇತರೆ ಮೂವರ ಹೆಸರನ್ನು ಸಿಐಡಿ ಪೊಲೀಸರು ಗಮನಕ್ಕೂ ತೆಗೆದುಕೊಳ್ಳದೆ ಬಿಟ್ಟಿದ್ದರು! ಆ ಮೂವರೆಂದರೆ ಉದಯ್ ಜೈನ್ (ಆಟೋ ಡ್ರೈವರ್), ಮಲ್ಲಿಕ್ ಜೈನ್ (ಧರ್ಮಸ್ಥಳ ಕ್ಷೇತ್ರದಲ್ಲಿ ನೌಕರ), ಧೀರಜ್ ಜೈನ್- ಕೆಲ್ಲಾ (ಸಣ್ಣ ವ್ಯಾಪಾರಿ) ಇವರೆಲ್ಲ ಆ ಪರಿಸರದಲ್ಲೇ ಇರುವವರು. ಆ ನಡುವೆ ತಮ್ಮದೇನೂ ಪಾತ್ರ ಇಲ್ಲವೆಂದು ಈ ಮೂವರು ಮಾಧ್ಯಮಗೋಷ್ಠಿ ನಡೆಸಿ ಆರೋಪಗಳನ್ನು ನಿರಾಕರಿಸಿದ್ದರು.

ಇದನ್ನೂ ಓದಿ:ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣ: ಸಂಶಯಿತರ ಜೊತೆ ಕಾಣಿಸಿಕೊಂಡ ಕಾಂಗ್ರೆಸ್ ಮಾಜಿ ಸಚಿವ ಅಭಯಚಂದ್ರ ಜೈನ್!

ನಿಶ್ಚಲ್ ಜೈನ್ ನ ಪಾಸ್ ಪೋರ್ಟ್ ಪ್ರಕಾರ ಆತ ಇಲ್ಲೇ ಇದ್ದನಂತೆ. ವಿಚಿತ್ರ ಎಂದರೆ ನಿಶ್ಚಲ್ ಜೈನ್ ನನ್ನೂ ಒಳಗೊಂಡು ಇವರಾರನ್ನೂ ಆಳವಾದ ತನಿಖೆಗೆ ಒಳ ಪಡಿಸಲೇ ಇಲ್ಲ! ಉಜಿರೆಯ ಎಸ್.ಡಿ.ಎಂ. ಕಾಲೇಜಿನ ಪಿಯುಸಿ ವಿದ್ಯಾರ್ಥಿನಿ ಸೌಜನ್ಯ ಹತ್ಯೆಯಾದುದು 2012 ಸೆಪ್ಟಂಬರ್ 9 ರಂದು. ಆಗ ಅಧಿಕಾರದಲ್ಲಿದ್ದದ್ದು ಬಿಜೆಪಿ ಸರ್ಕಾರ, ಜಗದೀಶ್ ಶೆಟ್ಟರ್ ಮುಖ್ಯಮಂತ್ರಿ. ಸಿಐಡಿ ತನಿಖೆ ಹಳ್ಳ ಹಿಡಿಯುತ್ತಿರುವುದು, ನಿಷ್ಪಕ್ಷಪಾತತೆ ನಿತ್ಯ ಹತ್ಯೆಯಾಗುತ್ತಿರುವುದು, ದೊಡ್ಡವರ ರಕ್ಷಣೆಯ ನಿದರ್ಶನಗಳು ಎದ್ದು ಕಾಣುತ್ತಿದ್ದುದರಿಂದ ಬದಲಾಗಿ ಸಿಬಿಐ ತನಿಖೆಗೆ ಒಪ್ಪಿಸಿ ಎಂಬ ಆಗ್ರಹ ಕೇಳಿ ಬಂತು. ಆದರೆ ಬಿಜೆಪಿ ಸರಕಾರ ಒಪ್ಪಿರಲಿಲ್ಲ. 2013  ಮೇ 13 ರಂದು ಸಿದ್ಧರಾಮಯ್ಯನವರು ಮುಖ್ಯಮಂತ್ರಿ ಯಾದರು. ಕೇಂದ್ರದಲ್ಲಿ ಮನಮೋಹನಸಿಂಗ್ ಸರಕಾರವಿತ್ತು. 2013 ನವೆಂಬರ್ 6 ರಂದು ರಾಜ್ಯ ಸರಕಾರದ ಗೃಹ ಸಚಿವ ಕೆ.ಜೆ.ಜಾರ್ಜ್ ಅವರು ನಿಷ್ಪಕ್ಷಪಾತ ತನಿಖೆಗಾಗಿ ಸಿಬಿಐಗೆ ಒಪ್ಪಿಸಲು ನಿರ್ಧರಿಸಿರುವುದಾಗಿ ಪ್ರಕಟಿಸಿದರು. 2014 ಮೇ 26  ರಂದು ಬಿಜೆಪಿಯ ನರೇಂದ್ರ ಮೋದಿ ಪ್ರಧಾನಮಂತ್ರಿಯಾದರು. ಸಿಬಿಐ ತನಿಖೆಯ ಹೊಣೆ ವಹಿಸಿಕೊಂಡಿತಾದರೂ ಒಲ್ಲದ ಮನಸ್ಸಿನಿಂದ ಹೆಜ್ಜೆ ಇಡುತ್ತಿರುವುದು, ತನಿಖಾ ಕಛೇರಿ ಆರಂಭಿಸಿದರೂ ಸೀಮಿತ ಸಿಬ್ಬಂದಿ, ತನಿಖಾ ವಿಳಂಬ ಅದರ ಕಾರ್ಯತಂತ್ರವಾಗಿತ್ತು.

ಆ ನಡುವೆ ಎಷ್ಟೋ ಸಾಕ್ಷಿಗಳು ನಾಶವಾಗಿ ಹೋದ,ಹೋಗುತ್ತಿರುವ ದೂರಿತ್ತು. ಈ ಅವಧಿಯಲ್ಲಿ ವೀರೇಂದ್ರ ಹೆಗ್ಗಡೆಯವರಿಗೆ ಕೇಂದ್ರದಿಂದ ಪದ್ಮಶ್ರೀ, ಭೂಷಣ ಇತ್ಯಾದಿ ಪ್ರಶಸ್ತಿಗಳು ಹುಡುಕಿ ಬಂದವು. ಬೇಕು ಬೇಡಗಳ ಚೌಕಾಸಿಯೂ ನಡೆಯಿತು. ಮುಂದೆ ಅವರು ಸಂಸದರೂ ಆದರು. ಸರಿ ಸುಮಾರು 11 ವರ್ಷಗಳ ಬಳಿಕ ಸಂತೋಷ್ ರಾವ್ ನಿರಪರಾಧಿ ಎಂಬ ಸತ್ಯವನ್ನು ಕೊನಗಾದರೂ ಸಿಬಿಐ ನ್ಯಾಯಾಲಯ ಘೋಷಿಸಿತು. ಮರು ತನಿಖೆಗೆ ಆದೇಶಿಸಿದ್ದರೆ ಒಳ್ಳೆಯದಿತ್ತು. ನ್ಯಾಯಾಲಯ ಸತ್ಯವನ್ನು ಹೊರ ತೆಗೆಯಿತು. ಉಳಿದ ಸತ್ಯದ ಹೆಗಲ ಮೇಲೇರಿ ಈಗಲೂ ಕುಳಿತಿದೆ ಹಾರಲಾಗದ ಅದೇ ಹಳೆಯ ಒಂದು ಪ್ರಶ್ನೆಯ ಹದ್ದು! ವಿಳಂಬವಾದರೂ ಸಿಬಿಐ ನ್ಯಾಯಾಲಯ ನೀಡಿದ್ದು ಸ್ವಾಗತಾರ್ಹ ತೀರ್ಪು. ಏನೂ ಮಾಡದ ನಿರಪರಾಧಿ, ಮಾನಸಿಕ ಅಸ್ವಸ್ಥ ಸಂತೋಷರಾವ್ ಮಾಡದ ಕೆಲಸಕ್ಕೆ `ದೊಡ್ಡವರ ರಕ್ಷಿಸಲು ನಡೆಸಲಾದ ರಾಜ್ಯದ ಪೋಲೀಸರ ಮಸಲತ್ತಿಗೆ ಜೈಲುವಾಸದಂತಹ ಯಾತನೆಯ ಶಿಕ್ಷೆ ಅನುಭವಿಸಿದ್ದನ್ನು ಸರಕಾರ ಹೇಗೆ ಸರಿಪಡಿಸುತ್ತದೆ? ಅಂದೇ ಹೋರಾಟಗಾರರು ಸ್ಪಷ್ಟವಾಗಿಯೇ ಹೇಳಿದ್ದರಲ್ಲ, ರಾವ್ ಈ ಪ್ರಕರಣದ ನಿಜ ಆರೋಪಿ ಅಲ್ಲ, ಸಂಬಂಧವೂ ಇಲ್ಲ ಎಂದು. ಈಗ ಉಳಿದೇ ಇರುವ ದೊಡ್ಡ ಪ್ರಶ್ನೆಗೆ ಉತ್ತರ ಹುಡುಕಲೇ ಬೇಕು. ಹಾಗಾದರೆ ನಿಜವಾದ ಕೊಲೆಗಾರರು, ಅಪರಾಧಿಗಳು ಯಾರು? ಈ ಪ್ರಕರಣದ ತನಿಖೆ ನಿಲ್ಲಬಾರದು. ಸೌಜನ್ಯ ಕುಟುಂಬ, ಬೆಂಬಲಿಸಿದವರು, ನ್ಯಾಯಕ್ಕಾಗಿ ಹೋರಾಡಿದವರು ಹೋರಾಟ ಮುಂದೆ ಕೊಂಡೊಯ್ಯಲು ಬಯಸಿದ್ದಾರೆ. ಈ ಹೋರಾಟ ನಿಲ್ಲಬಾರದು, ನಿಲ್ಲಲೇ ಬಾರದು. ಯಾಕೆಂದರೆ ಸೌಜನ್ಯಳ ಮೇಲೆಗಸಲಾದ ಅತ್ಯಾಚಾರ, ಕಗ್ಗೊಲೆ ಕೇಳಿ ಬರುತ್ತಿರುವ ಪ್ರಕರಣಗಳ ಸರಣಿಯಲ್ಲಿ ಒಂದು ಕೊಂಡಿ, ಗಟ್ಟಿ ಧ್ವನಿ ಪಡೆದ ಒಂದು ಪ್ರಕರಣ ಮಾತ್ರ. ಈಗ ರಾಜ್ಯದಲ್ಲಿ ಸಿದ್ಧರಾಮಯ್ಯ ಮುಖ್ಯಮಂತ್ರಿ, ಕೇಂದ್ರದಲ್ಲಿ ನರೇಂದ್ರ ಮೋದಿ. ಬೀದಿಯಲ್ಲಿ ಸೌಜನ್ಯಾಳ ಕುಟುಂಬ, ನ್ಯಾಯಕ್ಕಾಗಿ ಆಗ್ರಹಿಸುತ್ತಿರುವ ಜನ, ಜನ ಸಂಘಟನೆಗಳು. ಪ್ರಭಾವಿಕೊಲೆಗಡುಕರು! ಸರಕಾರ ನೊಂದ ಜನರ ಆಗ್ರಹದ ಮಾತಿಗೆ ಕಿವಿ ಕೊಡುವುದೇ? ಮರು ತನಿಖೆಗೆ ಆದೇಶಿಸುವುದೇ? ಸತ್ಯದ ಹುಡುಕಾಟಕ್ಕೆ, ಕೊಲೆಗಡುಕರನ್ನು ಪತ್ತೆ ಮಾಡಲು ದೃಢ ಹೆಜ್ಜೆ ಇಡುವುದೇ? ಅಥವಾ ಪ್ರವಚನದ ಪುಣ್ಯ ಹಂಚುವುದೇ?

Donate Janashakthi Media

Leave a Reply

Your email address will not be published. Required fields are marked *