-ಜಿ.ಎನ್.ನಾಗರಾಜ್
ಯಾವುದೇ ವಿಷಯವನ್ನು, ಅದಕ್ಕೆ ಸಂಬಂಧಿಸಿದ ಮತ್ತೊಂದು ವಿಷಯದ ಜೊತೆಗೆ ತುಲನೆ ಮಾಡಿ ವಿಶ್ಲೇಷಿಸಿದಾಗ ಮಾತ್ರ ಅದರ ಎಲ್ಲ ಆಯಾಮಗಳೊಂದಿಗೆ ಸಮಗ್ರವಾಗಿ, ಆಳವಾಗಿ ಅರ್ಥಮಾಡಿಕೊಳ್ಳಲು ಸಾಧ್ಯ. ಇದು ಮಾನವ ಕುಲ ಲಕ್ಷಾಂತರ ವರ್ಷಗಳಿಂದ ಉಪಯೋಗಿಸುತ್ತಾ ಬಂದ ವಿಧಾನ. ಸಾಮ್ರಾಜ್ಯ
ಹಾಗೆಯೇ ಟಾಟಾಗಳ, ಅವರ ಪಾರ್ಸಿ ಸಮುದಾಯ ಕಾರ್ಪೊರೇಟ್ ಸಾಮ್ರಾಜ್ಯಗಳ ಬೆಳವಣಿಗೆಯ ವಿಧಾನ ಮತ್ತು ಸ್ವರೂಪವನ್ನು ಅರ್ಥಮಾಡಿಕೊಳ್ಳಲು ಅವರಷ್ಟೇ ಬೃಹತ್ತಾಗಿ ಬೆಳೆದ ಬಿರ್ಲಾ ಮತ್ತು ಅವರ ಮಾರ್ವಾಡಿ ಕಾರ್ಪೊರೇಟ್ ಸಾಮ್ರಾಜ್ಯಗಳ ಜೊತೆ ತುಲನೆ ಅವಶ್ಯ. ಸಾಮ್ರಾಜ್ಯ
ಇದೇ ರೀತಿ ಮತ್ತೊಂದು ಸಮುದಾಯವೆಂದರೆ ಮಹೀಂದ್ರ ಮಹೀಂದ್ರ, ಒಬೆರಾಯ್, ಥಾಪರ್ ಮೊದಲಾದವರನ್ನು ಒಳಗೊಂಡ ಪಂಜಾಬಿನ ಖತ್ರಿಗಳೆಂಬ ವ್ಯಾಪಾರಿ ಸಮುದಾಯ. ಸಾಮ್ರಾಜ್ಯ
ಅಂಬಾನಿ, ಅದಾನಿ, ವಿಪ್ರೋ, ಗೊದ್ರೆಜ್, ನಿರ್ಮಾ ಮೊದಲಾದ ಕಾರ್ಪೊರೇಟ್ ಸಾಮ್ರಾಜ್ಯಗಳನ್ನು ಒಳಗೊಂಡ ಗುಜರಾತಿಗಳು. ಸಾಮ್ರಾಜ್ಯ
ಇದನ್ನೂ ಓದಿ: ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಮಹಿಳೆ ಆತ್ಮಹತ್ಯೆ
ಇವರೆಲ್ಲರೂ ಕೂಡಾ ಪಶ್ಚಿಮ ಭಾರತದ ಪ್ರದೇಶಗಳಿಗೆ ಸೇರಿದವರು ಹಾಗೂ ಹೆಚ್ಚಾಗಿ ಬನಿಯಾ / ವೈಶ್ಯ ವರ್ಣಕ್ಕೆ ಸೇರಿದವರು ಎಂಬುದು ವಿಶೇಷ. ಭಾರತದ ಅತಿ ದೊಡ್ಡ ಕಾರ್ಪೊರೇಟ್ ಸಾಮ್ರಾಜ್ಯಗಳಲ್ಲಿ ಕೆಲವೇ ಕೆಲ ಕೈಬೆರಳಿನ ಸಂಖ್ಯೆಯಷ್ಟು ಕಾರ್ಪೊರೇಟ್ಗಳು ಮಾತ್ರ ಭಾರತದ ಉಳಿದೆಲ್ಲ ರಾಜ್ಯಗಳ ಮೂಲದವರು.
ಆದ್ದರಿಂದ ಭಾರತದ ಬಂಡವಾಳಶಾಹಿ ಬೆಳವಣಿಗೆಯ ವಿಧಾನವನ್ನು ಅರ್ಥಮಾಡಿಕೊಳ್ಳಲು ಜಾತಿಯ ಜೊತೆಗೆ ಪ್ರಾದೇಶಿಕ ಅಂಶಗಳೆರಡನ್ನೂ ಒಟ್ಟಿಗೆ ಅಧ್ಯಯನಕ್ಕೆ ಒಳಪಡಿಸಬೇಕಾಗಿದೆ. ಸಾಮ್ರಾಜ್ಯ
ಇಂದು ನಾವು ಉಪಯೋಗಿಸುವ ಹಲವಾರು ವಸ್ತುಗಳನ್ನು ತಯಾರಿಸುವ ಏಕಸ್ವಾಮ್ಯ ಕಾರ್ಪೊರೇಟ್ ಕಂಪನಿಗಳಾದ ಬಿರ್ಲಾಗಳು, ಬಜಾಜ್, ಜಿಂಡಾಲ್, ಗೊಯೆಂಕಾ ಖೈತಾನ್, ಅಗರ್ವಾಲ್, ಪೊದ್ದಾರ್, ಒಸ್ವಾಲ್ಗಳೆಲ್ಲ ಮಾರ್ವಾಡಿ ಬನಿಯಾ ಮೂಲದವರು.
ಮಾರವಾರ್/ ಮಾರ್ವಾಡ ಎಂಬುದು ರಾಜಸ್ಥಾನದ ಒಂದು ಪ್ರದೇಶ. ಈ ಪ್ರದೇಶದ ಎಲ್ಲ ಜನರೂ ಮಾರವಾಡಿಗಳೇ ಆದರೂ ಆ ಹೆಸರಿನಿಂದ ಇಡೀ ದೇಶದಲ್ಲಿ ಪ್ರಸಿದ್ಧರಾಗಿರುವವರು ಮಾರವಾರದ ಬನಿಯಾ ಅಥವಾ ವ್ಯಾಪಾರಿಗಳು ಮಾತ್ರ. ಮಾರ್ವಾಡ ಎಂಬುದು ರಾಜಾಸ್ಥಾನ ರಾಜ್ಯದ ಜೋಧ್ಪುರ, ಪಾಲಿ, ಜಾಲೋರ್, ನಾಗೋರ್, ಬಾರ್ಮೆರ್, ಝುಂಝುನು, ಬಿಕಾನೆರ್, ಜೈಸಲ್ಮೇರ್ ಮೊದಲಾದ ಜಿಲ್ಲೆಗಳು ಸೇರಿದ ಪ್ರದೇಶ.
ಮಾರ್ವಾಡಿಗಳ ವ್ಯಾಪಾರ ವೃದ್ಧಿಸಿತು
ಅಹಮದಾಬಾದ್ನ ಐಐಎಂನಲ್ಲಿ ಉನ್ನತ ತರಬೇತಿಯ ಭಾಗವಾಗಿ ಅಧ್ಯಯನ ವರದಿ ತಯಾರಿಸಲು ಈ ಪ್ರದೇಶದಲ್ಲಿ ಪ್ರವಾಸ ಮಾಡಿದ್ದೆ. ಈ ಪ್ರದೇಶದ ಹಲವು ಜಿಲ್ಲೆಗಳು ಮುರುಭೂಮಿ. ಎಲ್ಲೋ ಕೆಲವೆಡೆ ಭಾವಿಗಳಿಂದ ನೀರಾವರಿ. ಉಳಿದೆಡೆ ವರ್ಷದ ಮುಕ್ಕಾಲು ಭಾಗ ಕುಡಿಯುವ ನೀರಿಗೂ ತತ್ವಾರ. ಇಂತಹ ಪ್ರದೇಶದಲ್ಲಿ ಕರಕುಶಲ ವಸ್ತುಗಳ ಉತ್ಪಾದನೆಯೇ ಬದುಕಿನ ಮುಖ್ಯ ಆಸರೆ. ಬಟ್ಟೆಯ ಮೇಲೆ ಚಿತ್ತಾರಗಳು, ರತ್ನಗಂಬಳಿಗಳು, ಇತ್ಯಾದಿ ಕರಕುಶಲ ವಸ್ತುಗಳು ಹಿಂದಿನ ಕಾಲದಲ್ಲಿ ಉತ್ತರ ಭಾರತ, ಇರಾನ್, ಮಧ್ಯ ಏಷಿಯಾದವರೆಗೆ ಪಯಣಿಸುತ್ತಿದ್ದವು.
ಅಂದು ಗುಜರಾತಿನ ಬಂದರುಗಳು ಇರಾನ್, ಅರಬ್, ಆಫ್ರಿಕಾ ಖಂಡದ ದೇಶಗಳ ಜೊತೆ, ಅರಬ್ ವ್ಯಾಪಾರಿಗಳ ಮೂಲಕ ಅಲ್ಲಿಂದ ಮುಂದೆ ಯುರೋಪ್ ದೇಶಗಳಿಗೂ ಭಾರತದ ಹತ್ತಿ ಹಾಗೂ ರೇಷ್ಮೆಬಟ್ಟೆ, ಕರಕುಶಲ ವಸ್ತುಗಳು ಇತ್ಯಾದಿ ಮಾರಲ್ಪಡುತ್ತಿತ್ತು. ಈ ಪ್ರದೇಶಗಳಿಂದ ಆಮದಾದ ಹಲವು ವಸ್ತುಗಳು ಹಾಗೂ ಗುಜರಾತ್ ಮತ್ತು ಮಹಾರಾಷ್ಟ್ರದ ಹಲವು ತಯಾರಿಕೆಗಳು, ಕೃಷಿ ವಸ್ತುಗಳು ಆಗ್ರಾ, ವಾರಾಣಸಿ, ದೆಹಲಿ ಮೊದಲಾದ ಪ್ರದೇಶಗಳಿಗೆ ಸಾಗಾಣಿಕೆಯಾಗಿ ಅಲ್ಲಿಂದ ಇರಾನ್ ತುರ್ಕಿ, ಮಧ್ಯ ಏಷಿಯಾದ ದೇಶಗಳು, ರಷ್ಯಾಗಳಿಗೆ ಪಯಣ ಬೆಳೆಸುತ್ತಿದ್ದವು. ಮಾರವಾಡ, ಪಂಜಾಬ್ ಮೂಲಕ ಮುಖ್ಯ ವ್ಯಾಪಾರಿ ಭೂ ಮಾರ್ಗಗಳು ಹಾದು ಹೋಗುತ್ತಿದ್ದವು. ಗುಜರಾತ್, ಮಾರವಾಡ, ಪಂಜಾಬ್ಗಳ ವ್ಯಾಪಾರಿ ವರ್ಗ ಬಲಿಷ್ಠವಾದವು.
ವ್ಯಾಪಾರದ ಬೆಳವಣಿಗೆ ಈ ಪ್ರದೇಶದ ಉತ್ಪಾದನಾ ವ್ಯವಸ್ಥೆಯ ಮೇಲೆ ಬದಲಾವಣೆಯ ಒತ್ತಡವನ್ನು ಹೇರಿತು. ವ್ಯಾಪಾರಿ ವರ್ಗ ಕರಕುಶಲ ಕೆಲಸಗಾರರ ಉತ್ಪಾದನೆಗಳನ್ನು ಕೊಳ್ಳುವುದು, ಅವರಿಗೆ ಮುಂಗಡ ಸಾಲ ನೀಡುವುದು ಇತ್ಯಾದಿ ಅವಶ್ಯವಾಯಿತು. ಈ ಪ್ರದೇಶದ ಸಂಪತ್ತು ಹೆಚ್ಚಿತು.
ಸರ್ಕಾರದ ಸ್ವರೂಪವೇ ಬದಲಾಯಿತು.
ಅದರ ಪರಿಣಾಮವಾಗಿ ಜೋಧಪುರ ಕೇಂದ್ರವಾಗಿ ಮಾರವಾಡ ಪ್ರದೇಶದ ಸ್ವತಂತ್ರ ರಾಜಪುತ್ರ ಸಂಸ್ಥಾನ ಸ್ಥಾಪನೆಗೊಂಡಿತು. ನಂತರದ ದಶಕಗಳಲ್ಲಿ ಈ ಸಂಸ್ಥಾನಕ್ಕೆ ಮುಖ್ಯ ಆದಾಯವೇ ಕರಕುಶಲ ಕೆಲಸಗಾರರಿಂದ ವಸೂಲಿ ಮಾಡುತ್ತಿದ್ದ ತೆರಿಗೆ ಮತ್ತು ವ್ಯಾಪಾರಿಗಳು ತೆರುತ್ತಿದ್ದ ತೆರಿಗೆ. ಕರಕುಶಲ ಕೆಲಸಗಾರರಿಗೆ ವ್ಯಾಪಾರಿಗಳು ನೀಡುತ್ತಿದ್ದ ಮುಂಗಡ, ಸಾಲಗಳಿಂದಲೇ ಆ ಕೆಲಸಗಾರರು ತಮ್ಮ ತೆರಿಗೆಯನ್ನು ತೆರುತ್ತಿದ್ದುದು.
ಜೊತೆಗೆ ಕರಕುಶಲ ಕೆಲಸಗಾರರ ಉತ್ಪಾದನೆಯ ಆಧಾರದ ಮೇಲೆ ಅವರು ತೆರಬೇಕಾದ ತೆರಿಗೆಗಳನ್ನು ಸರಿಯಾಗಿ ಲೆಕ್ಕಿಸಲು ಅವರ ಉತ್ಪಾದನೆಯ ಬಹು ಭಾಗವನ್ನು ಕೊಳ್ಳುತ್ತಿದ್ದ ವ್ಯಾಪಾರಿಗಳಲ್ಲದೆ ಬೇರಾರಿಗೆ ಸಾಧ್ಯ. ಆದ್ದರಿಂದ ಈ ತೆರಿಗೆ ವಸೂಲಿಗೆ ವ್ಯಾಪಾರಿಗಳೇ ಉತ್ತಮ ಸಾಧನವಾದರು. ವ್ಯಾಪಾರಿಗಳು ಸ್ವತಃ ತೆರುತ್ತಿದ್ದ ತೆರಿಗೆ, ಅವರು ವಸೂಲಿ ಮಾಡುತ್ತಿದ್ದ ತೆರಿಗೆ ಇವುಗಳಿಂದ ವ್ಯಾಪಾರಿಗಳೇ ಈ ಸಂಸ್ಥಾನಗಳ ಮುಖ್ಯ ಆಧಾರವಾದರು.
ದರೋಡೆಗಾರರಿಂದ ರಕ್ಷಿಸುವುದಕ್ಕಾಗಿ ಖಾಯಂ ಸೈನ್ಯ
ಹೀಗೆ ಬೆಳೆಯುತ್ತಿದ್ದ ವ್ಯಾಪಾರವನ್ನು ದರೋಡೆಗಾರರಿಂದ ರಕ್ಷಿಸುವುದಕ್ಕಾಗಿ ಖಾಯಂ ಸೈನ್ಯ ಅವಶ್ಯವಾಯಿತು. ಅಲ್ಲಿಯವರೆಗೆ ರಾಜನ ಬಳಿ ತನ್ನ ಮತ್ತು ಅರಮನೆಯ ರಕ್ಷಣೆಗೆ ಬೇಕಾದ ಸ್ವಂತ ಸೈನ್ಯ ಬಲವಲ್ಲದೆ ಇತರ ಸೈನ್ಯವೆಲ್ಲ ಮಾಂಡಲಿಕರ ಬಳಿ ಇರುತ್ತಿತ್ತು. ಅವರೇ ಅದರ ದೇಖರೇಖಿ ನೋಡಿಕೊಳ್ಳುತ್ತಿದ್ದರು. ಆದರೆ ಈಗ ರಾಜನ ನೇರ ಹಿಡಿತದಲ್ಲಿನ ಖಾಯಂ ಸೈನ್ಯಕ್ಕಾಗಿ ಮಾಂಡಲಿಕರ ಬದಲಾಗಿ ರಾಜನೇ ನೇರ ತೆರಿಗೆ ಪಡೆಯುವ ವ್ಯವಸ್ಥೆ ರೂಪಿಸಬೇಕಾಯಿತು.
ಇಂತಹ ರಾಜ್ಯಾಡಳಿತ ವ್ಯವಸ್ಥೆಗೆ ಅಬ್ಸೊಲ್ಯೂಟ್ ಮಾನಾರ್ಕಿ ಎಂದು ಕರೆಯಲಾಗಿದೆ. ಮೈಸೂರು ಸಂಸ್ಥಾನದಲ್ಲಿ ಹೈದರಾಲಿ ಮತ್ತು ಟಿಪ್ಪು ಸುಲ್ತಾನ್ ಪಾಳೆಯಗಾರರನ್ನು ಸೋಲಿಸಿ ಅಥವಾ ಕಿತ್ತು ಹಾಕಿ ಇಂತಹ ಆಡಳಿತವನ್ನು ಸ್ಥಾಪಿಸಿದರು ಎಂಬುದನ್ನು ನೆನಪಿಸಿಕೊಳ್ಳೋಣ. ಹೀಗೆ ವ್ಯಾಪಾರ, ಕುಶಲ ಕೆಲಸದ ವಸ್ತುಗಳ ಪ್ರಾಮುಖ್ಯತೆ ಹೊಸ ಆಡಳಿತ ವ್ಯವಸ್ಥೆಯನ್ನು ಅಸ್ತಿತ್ವಕ್ಕೆ ತಂದಿತು. ಈ ಕೇಂದ್ರೀಕೃತ ಆಡಳಿತ ವ್ಯವಸ್ಥೆಯ ಸಲುವಾಗಿ ಆಡಳಿತ ಸಿಬ್ಬಂದಿ ಹೆಚ್ಚಳಗೊಂಡಿತು, ಅಧಿಕಾರಶಾಹಿ ಬಲಗೊಂಡಿತು. ಈ ಸ್ಥಾನಗಳನ್ನು ಆವರಿಸಿದವರಲ್ಲಿ ವ್ಯಾಪಾರಿಗಳದು ಮೊದಲನೇ ಸ್ಥಾನವಾದರೆ, ಎರಡನೇ ಸ್ಥಾನ ಬ್ರಾಹ್ಮಣರದು.
ವ್ಯಾಪಾರ ಹಾಗೂ ಉತ್ಪಾದನೆಯ ವಿಸ್ತರಣೆ ರಾಜ್ಯಾಡಳಿತದ ಸ್ವರೂಪದಲ್ಲಿ ಮಾತ್ರವಲ್ಲ ಧಾರ್ಮಿಕ ಸಿದ್ಧಾಂತ ಮತ್ತು ಆಚರಣೆಗಳಲ್ಲಿ ಕೂಡ ಬದಲಾವಣೆಗೆ ಕಾರಣವಾಯಿತು. ಅದನ್ನು ಮುಂದೆ ನೋಡೋಣ.
ವ್ಯಾಪಾರಿಗಳಿಗೆ ರಾಜ್ಯಾಡಳಿತ- ದಿವಾನ ಪದವಿ
ಈ ಆಡಳಿತ ಪ್ರಕ್ರಿಯೆಗಳ ಪರಿಣಾಮವಾಗಿ ಮಾರವಾಡ ಮತ್ತು ಇತರ ಪ್ರದೇಶದಲ್ಲಿ ರಾಜರುಗಳು ವ್ಯಾಪಾರಿಗಳನ್ನು ಆಡಳಿತದ ಮುಖ್ಯ ಸ್ಥಾನವಾದ ದಿವಾನ್ ಪದವಿ, ಭಕ್ಷಿ ಮತ್ತಿತರ ಮಂತ್ರಿ ಸ್ಥಾನ, ತೆರಿಗೆ ಸಂಗ್ರಹಣೆಯ ಉಸ್ತುವಾರಿ ಮಾತ್ರವಲ್ಲದೆ ವಿವಿಧ ಜಿಲ್ಲೆಗಳ ಕಂದಾಯ, ತೆರಿಗೆ ಸಂಗ್ರಹವನ್ನು ವಹಿಸಿಕೊಳ್ಳುವವರಾಗಿ, ಆಡಳಿತ ಪ್ರಮುಖರಾಗಿ ಕೂಡಾ ಗಣನೀಯವಾಗಿ ನೇಮಿಸಿಕೊಂಡರು. ಈ ವಿಸ್ತರಣೆಯಿಂದ ಬ್ರಾಹ್ಮಣರಿಗೂ ಹೆಚ್ಚು ಸ್ಥಾನಗಳು ದೊರಕಿದವು. ಆದರೆ ವ್ಯಾಪಾರಿ ವರ್ಗದ ನಂತರದ ಸ್ಥಾನ. ಇದು ಭಾರತದ ಬೇರೆ ರಾಜ ಸಂಸ್ಥಾನಗಳಿಗೆ ಹೋಲಿಸಿದರೆ ಬಹಳ ವಿಶೇಷವಾದ ಸಂಗತಿ. ಕೃಷಿ, ಭೂಕಂದಾಯಕ್ಕಿಂತಲೂ ವಾಣಿಜ್ಯ ತೆರಿಗೆ, ಕುಶಲ ವಸ್ತುಗಳ ಮೇಲಿನ ತೆರಿಗೆಗಳಿಂದ ಹೆಚ್ಚು ಆದಾಯ ಪಡೆಯುತ್ತಿದ್ದುದರ ಪರಿಣಾಮವೆಂದು ಕಾಣುತ್ತದೆ.
ಜೋಧಪುರ ಸಂಸ್ಥಾನದ ಕೆಲ ನಗರಗಳಲ್ಲಿ ಶೇ. ೩೦-೪೦ ರಷ್ಟು ವ್ಯಾಪಾರಿಗಳಿದ್ದರೆಂದರೆ ರಾಜ್ಯದ ಆರ್ಥಿಕತೆಯಲ್ಲಿ ಅವರ ಪಾತ್ರದ ಪ್ರಮಾಣವನ್ನು ಊಹಿಸಬಹುದು. ಇಂತಹ ಹಣ ಗಳಿಕೆಯಿಂದ ಮಾರ್ವಾಡಿ ವ್ಯಾಪಾರಿಗಳಿಗೆ ರಜಪೂತ ಪಾಳೆಯಗಾರರು, ರಾಜರುಗಳಿಗೂ ಅವರ ವೈಭವಗಳ, ಯುದ್ಧಗಳ ವೆಚ್ಚಕ್ಕೆ ಸಾಲ ನೀಡುವ ಸ್ಥಿತಿಗೆ ಬಂದರು. ಇಂತಹುದೇ ಪ್ರಕ್ರಿಯೆ ರಾಜಸ್ಥಾನದ ಇನ್ನೂ ಕೆಲವು ಸಂಸ್ಥಾನಗಳಲ್ಲೂ ಕಾಣಬರುತ್ತದೆ. ಹಾಗೆಯೇ ಪಂಜಾಬಿನಲ್ಲಿ ಕೂಡಾ ಖತ್ರಿ ವ್ಯಾಪಾರಿಗಳು ದಿವಾನ ಇತ್ಯಾದಿ ಪದವಿಗಳನ್ನು ವಹಿಸಿಕೊಂಡಿದ್ದಾರೆ.
ಮಾರವಾಡ ಪ್ರದೇಶವನ್ನು ಮಾರಾಠರು ವಶಪಡಿಸಿಕೊಳ್ಳಲೆತ್ನಿಸಿದಾಗ ಮಾರ್ವಾಡಿ ವ್ಯಾಪಾರಿಗಳಿಗೆ ಮರಾಠ ಸಂಸ್ಥಾನಗಳೊಡನೆ ಹೆಚ್ಚು ಸಂಪರ್ಕ ಬಂದಿತು. ಈಗಿನ ಮಧ್ಯಪ್ರದೇಶದ ಹಲವು ಮರಾಠ ಸಂಸ್ಥಾನಗಳಲ್ಲಿ ವ್ಯಾಪಾರ, ಸಾಲ ನೀಡುವುದು ಮುಂತಾದವುಗಳನ್ನು ಆರಂಭಿಸಿದರು.
ಮೊಘಲರ ಎರಡು ಶತಮಾನಗಳ ಆಳ್ವಿಕೆ ವ್ಯಾಪಾರದ ಬೆಳವಣಿಗೆಗೆ ಹಲವು ಅನುಕೂಲಗಳನ್ನು ಕಲ್ಪಿಸಿತು. ಒಂದು ಕಡೆ ವಿಶಾಲ ಪ್ರದೇಶದಲ್ಲಿ ಸ್ಥಿರವಾದ ಆಡಳಿತ. ಆ ಇಡೀ ಪ್ರದೇಶದಲ್ಲಿ ಒಂದೇ ರೀತಿಯ ನಾಣ್ಯ ಚಲಾವಣೆ, ಒಂದೇ ರೀತಿಯ ಅಳತೆ, ತೂಕ ಪದ್ಧತಿ ಇತ್ಯಾದಿ ವ್ಯಾಪಾರವನ್ನು ಈ ವಿಶಾಲ ಪ್ರದೇಶಗಳಿಗೆ ವಿಸ್ತರಿಸಲು ನೆರವಾದವು. ಮೊಘಲರು ಮತ್ತು ರಜಪೂತರ ನಡುವೆ ಒಂದು ವಿಭಾಗಕ್ಕೆ ತೀವ್ರ ಸಂಘರ್ಷ, ಯುದ್ಧಗಳು.
ಮೊಘಲ ಬಾದಶಾಗಳು ಯುದ್ಧಕ್ಕೆ ಹೊರಟರೆಂದರೆ ಅವರೊಡನೆ ರಾಣಿವಾಸ, ನೃತ್ಯಗಾತಿಯರು, ಹಲವು ಸೇವೆಗಳಿಗಾಗಿ ಸೇವಕ ವೃಂದ ಮೊದಲಾಗಿ ಒಂದು ನಗರವೇ ಚಲಿಸಿದಂತಿರುತ್ತಿತ್ತು. ಇಂತಹವುಗಳನ್ನು ಅಂದು ಭಾರತದಲ್ಲಿ ಪ್ರವಾಸ ಮಾಡಿದ ಬರ್ನಿಯರ್ ಟ್ರಾವರ್ನಿಯರ್ ಮೊದಲಾದ ಪ್ರವಾಸಿಗಳು ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದಾರೆ. ಇದು ವ್ಯಾಪಾರಿಗಳಿಗೆ ಹಬ್ಬವಾಗುವುದರ ಜೊತೆಗೆ ಎರಡೂ ಕಡೆಯ ನಾಯಕರಿಗೆ ಯುದ್ಧ ನಿರ್ವಹಿಸಲು ದುಬಾರಿ ಬಡ್ಡಿಯ ಸಾಲ ನೀಡುವುದು ದೊಡ್ಡ ಲಾಭದ ಸಂದರ್ಭ.
ಮೊಘಲರ ಸಾಮ್ರಾಜ್ಯದ ಭಾಗವಾದರು
ರಜಪೂತರ ಮತ್ತೊಂದು ವಿಭಾಗ ಮೊಘಲರ ಜೊತೆ ರಾಜಿ ಮಾಡಿಕೊಂಡು ಅವರ ಸಾಮ್ರಾಜ್ಯದ ಭಾಗವಾದರು. ಅವರ ಆಡಳಿತದ, ಸೈನ್ಯದ ಮುಖ್ಯ ಸ್ಥಾನಗಳಿಗೆ ನೇಮಕವಾದರು. ಮೊಘಲ ಬಾದಾಶಾ ಮತ್ತಿತರ ಸರದಾರರ ಜೊತೆ ವಿವಾಹ ಸಂಬಂಧವನ್ನೂ ಬೆಳೆಸಿದರು. ಅಕ್ಬರನ ಹಿಂದೂ ರಾಣಿಯರಲ್ಲಿ ಮುಂದಿನ ಬಾದಶಾ ಜಹಾಂಗೀರ್ನ ತಾಯಿಯೂ ಸೇರಿದಂತೆ ಆರೇಳು ರಾಣಿಯರು ರಜಪೂತ ಕುಟುಂಬದವರು.
ಅದರಲ್ಲಿ ಮೂರು ಜನರು ಮಾರವಾಡ ಪ್ರದೇಶದ ನಾಗೋರ್, ಬಿಕಾನೆರ್, ಜೈಸಲ್ಮೇರ್ ಗಳವರು. ಹೀಗೆ ಮೊಘಲ ಬಾದಶಾಗಳ ಆಡಳಿತದಲ್ಲಿ ಸ್ಥಾನ ಪಡೆದ ರಜಪೂತರ ಜೊತೆಗೆ ಮಾರ್ವಾಡಿ ವ್ಯಾಪಾರಿಗಳಿಗೂ ಮೊಘಲ ಆಡಳಿತದ ಪ್ರದೇಶಗಳಿಗೆ ಪ್ರವೇಶ ದೊರಕಿತು. ಪ್ರಸಿದ್ಧ ಕಂದಾಯ ಮಂತ್ರಿ, ಭೂ ಕಂದಾಯದ ಸುಧಾರಣೆಗಳ ಕರ್ತ ರಾಜಾ ತೋದರಮಲ್ ಒಬ್ಬ ಖತ್ರಿ. ಹೀಗೆ ಯುದ್ಧ ಮತ್ತು ರಾಜಿಗಳೆರಡೂ ಮಾರ್ವಾಡಿಗಳಿಗೆ ತಮ್ಮ ವ್ಯಾಪಾರ, ವ್ಯವಹಾರವನ್ನು ಮಾರವಾರದ ಹೊರಕ್ಕೆ ಮೊಘಲರ ವಿಶಾಲ ಸಾಮ್ರಾಜ್ಯದೊಳಗೆ ವಿಸ್ತರಿಸಲು ಅವಕಾಶ ನೀಡಿತು.
ಇದನ್ನೂ ನೋಡಿ: R B More | Dalit Movement Bridges Communist Movement – Ashoka Dhawale Janashakthi Media
ಮೊಘಲರ ಆಡಳಿತದ ಮತ್ತೊಂದು ಕ್ರಮ ವ್ಯಾಪಾರಿಗಳಿಗೆ ಅದರಲ್ಲೂ ಮಾರ್ವಾಡಿಗಳಿಗೆ ಚಿನ್ನದ ಬಾಗಿಲನ್ನೇ ತೆರೆಯಿತು. ಅದುವೇ ರೈತರು ಮತ್ತಿತರರೆಲ್ಲರೂ ಅಲ್ಲಿಯವರೆಗೂ ತೆರಿಗೆಯನ್ನು ವಸ್ತು ರೂಪದಲ್ಲಿ ಕೊಡಬಹುದಾಗಿದ್ದುದನ್ನು ಮಾರ್ಪಡಿಸಿ ಹಣದ ರೂಪದಲ್ಲಿ ಕೊಡಬೇಕೆಂಬ ಪದ್ಧತಿ. ರೈತರ ಬಳಿಯಲ್ಲಾಗಲಿ, ನೇಕಾರ, ಗಾಣದವರು, ಕಮ್ಮಾರ, ಕುಂಬಾರರ ಹಣ ಎಲ್ಲಿಂದ ಬರಬೇಕು? ಆದ್ದರಿಂದ ಈ ಎಲ್ಲರಿಂದ ಬೆಳೆಗಳು, ತಯಾರಿಕೆಗಳನ್ನು ಕೊಂಡು ಹಣವಾಗಿ ಪರಿವರ್ತಿಸಿ ಕೊಡುವುದು ವ್ಯಾಪಾರಿಗಳ ಕೆಲಸವಲ್ಲವೇ! ಅಹಹಾ! ಈ ಸುವರ್ಣಾವಕಾಶವನ್ನು ಬಳಸಿ ಮಾರ್ವಾಡಿಗಳು ಹೇಗೆ ಬೆಳೆದರು ಎಂಬುದು ಒಂದು ಪ್ರತ್ಯೇಕ ಲೇಖನದ ವಸ್ತು.
ಧರ್ಮದಲ್ಲೂ ಬದಲಾವಣೆ ಮತ್ತು ವ್ಯಾಪಾರದ ವಿಸ್ತರಣೆ
ಹೀಗೆ ಅವರ ವ್ಯವಹಾರಗಳ ವಿಸ್ತರಣೆಯ ಸಂದರ್ಭದಲ್ಲಿ ಮಾರ್ವಾಡಿಗಳು ಬ್ರಜ್ ಪ್ರದೇಶದಲ್ಲಿ ಬೆಳೆಯುತ್ತಿದ್ದ ವಲ್ಲಭಾಚಾರ್ಯರ ಕೃಷ್ಣ ಭಕ್ತಿ ಪಂಥದಿಂದ ಆಕರ್ಷಿತರಾದರು. ಆ ಮೊದಲೇ ಈ ಪಂಥದ ಪೂರ್ವ ರೂಪವಾದ ವಿಷ್ಣುಸ್ವಾಮಿ ಪಂಥದ ಪರಿಚಯವಾಗಿತ್ತು. ಜಗತ್ತಿನ ಅಸ್ತಿತ್ವ ಕೇವಲ ಭ್ರಮೆ ಎಂಬ ಮಾಯಾವಾದವನ್ನು ತಿರಸ್ಕರಿಸಿದ, ವೈರಾಗ್ಯ ಸಂನ್ಯಾಸ, ಉಪವಾಸ, ವ್ರತಗಳ ಮೂಲಕ ದೇಹ ದಂಡನೆಯನ್ನು ತಿರಸ್ಕರಿಸಿದ ವಲ್ಲಭಾಚಾರ್ಯರ ವಿಚಾರಗಳು ಅವರನ್ನು ಸೆಳೆದವು. ವಿಷ್ಣುವಿನ ವಿವಿಧ ಅವತಾರಗಳು, ಅದರಲ್ಲೂ ನಾಥಜೀ ಎಂದು ಪೂಜಿಸುವ ಕೃಷ್ಣನ ಭಕ್ತಿಯನ್ನು ಅಂಗೀಕರಿಸಿ ಹಲವು ಕೃಷ್ಣ ದೇವಾಲಯಗಳನ್ನು ನಿರ್ಮಿಸಿದರು. ಈ ಪಂಥದ ಪಕ್ಕಾ ಸಸ್ಯಾಹಾರ, ಕೃಷ್ಣ ಭಕ್ತಿ ಮೊದಲಾದವು ಮೂಲದಲ್ಲಿ ಆರ್ಯ ವರ್ಣದ ವೈಶ್ಯರೇನೂ ಅಲ್ಲದ ಮಾರ್ವಾಡಿಗಳಿಗೆ ಭಾರತದ ಎಲ್ಲೆಡೆಯಲ್ಲಿ ಸಾಮಾಜಿಕ ಮಾನ್ಯತೆಯನ್ನು ಒದಗಿಸಿತು.
ಮಾರವಾಡ, ಇತರ ರಜಪೂತ ಸಂಸ್ಥಾನಗಳಲ್ಲಿ, ಗುಜರಾತಿನಲ್ಲಿ ಜನಪ್ರಿಯವಾದ ವಲ್ಲಭಾಚಾರ್ಯ ಪಂಥವನ್ನು ಮಾರವಾಡ ಪ್ರದೇಶದ ರಾಜರು, ಸಂಸ್ಥಾನಿಕರೂ ಒಪ್ಪಿಕೊಂಡರು. ಈ ರಾಜರು ದೇವಾಲಯ ನಿರ್ಮಾಣದ ಜೊತೆಗೆ ಸ್ವತಃ ತಾವೇ ಕೃಷ್ಣ ಭಕ್ತಿಯ ಕಾವ್ಯಗಳನ್ನು ರಚಿಸಿದರು. ಭಾಗವತ, ರಾಮಚರಿತ ಮಾನಸಗಳನ್ನು ಪ್ರತಿ ಮಾಡಿಸಿ ಜನಪ್ರಿಯಗೊಳಿಸಿದರು. ಇದರಿಂದ ಕೃಷ್ಣನ ಏಕದೇವೋಪಾಸನೆ ಜನಸಾಮಾನ್ಯರಲ್ಲಿ ಪಸರಿಸಿತು. ಇದರ ಜೊತೆಗೆ ಅಂದು ಆಡಳಿತದ ದಾಖಲೆಗಳ ಭಾಷೆಯಾಗಿದ್ದ ಪರ್ಷಿಯನ್ಗೆ ಬದಲಾಗಿ ಮಾರವಾರಿ ಭಾಷೆ ಹೆಚ್ಚು ಪ್ರಚಲಿತವಾಯಿತು.
ಈ ಎಲ್ಲ ಧಾರ್ಮಿಕ, ಸಾಂಸ್ಕೃತಿಕ, ಭಾಷಾ ಪ್ರಕ್ರಿಯೆಗಳು ಕೇವಲ ಮಾರವಾಡ ಪ್ರದೇಶಕ್ಕೆ ಸೀಮಿತವಾಗಿರಲಿಲ್ಲ. ಆಗ ಭಾರತಾದ್ಯಂತ ಬೆಳೆಯುತ್ತಿದ್ದ ಭಕ್ತಿ ಪಂಥಗಳ ಭಾಗವಾಗಿತ್ತು. ಮಾರವಾಡದಿಂದ ಬಂಗಾಲದವರೆಗೆ ಕಬೀರ, ತುಲಸೀದಾಸ, ಚೈತನ್ಯ ಪಂಥದವರೆಗೆ ಹಬ್ಬಿದ ಈ ಪಂಥಗಳ ಕೇಂದ್ರವಾಗಿತ್ತು ಬ್ರಜ್ ಪ್ರದೇಶ.
ಹೀಗೆ ವ್ಯಾಪಾರ, ಕುಶಲ ಉತ್ಪಾದನೆಗಳ ಬೆಳವಣಿಗೆಯ ಮುಂದುವರಿದ ಭಾಗವಾಗಿ ಪಂಜಾಬಿನಲ್ಲಿ ಸಿಖ್ ಧರ್ಮ ಉಗಮಗೊಂಡು ಬೆಳೆಯಿತು. ಮೊಘಲರ ವಿರುದ್ಧ ಸೆಟೆದು ನಿಂತಿತು. ಗುರುಮುಖಿ ಲಿಪಿ ಹಾಗೂ ಪಂಜಾಬಿ ಭಾಷೆಯನ್ನು ಜನಪ್ರಿಯಗೊಳಿಸಿತು.
ಈ ಬೆಳವಣಿಗೆಗಳಿಗಿಂತ ನಾಲ್ಕಾರು ಶತಮಾನಗಳ ಹಿಂದಿನ ಕರ್ನಾಟಕದ ವಚನ ಚಳುವಳಿಯ ಬೆಳವಣಿಗೆಗೂ ಈ ಬೆಳವಣಿಗೆಗಳಿಗೂ ಕೆಲವು ಸಾಮ್ಯತೆಗಳಿವೆ ಎಂಬುದನ್ನು ಗಮನಿಸಬೇಕು.
ಈ ತೆರನ ಭಕ್ತಿ ಪಂಥದ ವ್ಯಾಪಕತೆ ಜೊತೆಗೆ ಮಾರ್ವಾಡಿ ವೈಷ್ಣವರಿಗೆ ದೊರಕಿದ ಮಾನ್ಯತೆ ಅವರಿಗೆ ವ್ಯಾಪಾರ, ಬಡ್ಡಿ ಸಾಲ ಮೊದಲಾದ ವ್ಯವಹಾರಗಳನ್ನು ಭಾರತದಾದ್ಯಂತ ವಿಸ್ತರಿಸಲು ಸಹಾಯಕವಾಯಿತು.
ಅದೇ ಸಮಯದಲ್ಲಿ ಈ ವೈಷ್ಣವ ಆಚರಣೆಗಳು, ಸಸ್ಯಾಹಾರ, ಅಸ್ಪೃಶ್ಯ ಮತ್ತು ಇತರ ತಳ ಉತ್ಪಾದಕ ಸಮುದಾಯಗಳನ್ನು ಕೀಳ್ಗಳೆಯಲು ಹಾಗೂ ಅವರ ಉತ್ಪಾದನೆಗಳನ್ನು ಅಗ್ಗವಾಗಿ ಕೊಳ್ಳಲು ಹೇಗೆ ಸಹಾಯ ಮಾಡಿತು ಎಂಬುದು ಮುಂದಿನ ಲೇಖನದಲ್ಲಿ.
ಇದನ್ನೂ ಓದಿ: ಮೈಕ್ರೋ ಫೈನಾನ್ಸ್: ಸಾಲ ಮರುಪಾವತಿ ಮಾಡದ ಕಾರಣಕ್ಕಾಗಿ ಗರ್ಭಿಣಿಯನ್ನು ಮನೆಯಿಂದ ಹೊರ ನೂಕಿ ಕ್ರೌರ್ಯ ಮೆರೆದ ಫೈನಾನ್ಸ್ ಸಿಬ್ಬಂದಿ