ಕಾರ್ಪೊರೇಟ್-ಹಿಂದುತ್ವ ಕಥನಕ್ಕೆ ರೈತ ಚಳುವಳಿಯ ಸವಾಲು

ಒಂದು ತಿಂಗಳಿನಿಂದಲೂ ದೇಶದ ರೈತರು ನಡೆಸುತ್ತಿರುವ ಚಳುವಳಿಯು, ಕನಿಷ್ಠ ಬೆಂಬಲ ಬೆಲೆಗಾಗಿ ಅಥವಾ ಕೃಷಿಯ ಕಾರ್ಪೊರೇಟೀಕರಣದ ವಿರುದ್ಧ ಎನ್ನುವುದಕ್ಕಿಂತಲೂ ಹಿರಿದಾದ ಒಂದು ಹೋರಾಟವಾಗಿ ಬಿಟ್ಟಿದೆ. ಈ ಹೋರಾಟವು ತನ್ನ ಘನ ನಡವಳಿಕೆಯ ಮೂಲಕ ನವ-ಉದಾರವಾದದ ಅಡಿಯಲ್ಲಿ ಪ್ರತಿಪಾದಿಸಲ್ಪಟ್ಟ ಕಥನ-ನಿರೂಪಣೆಯನ್ನು ಮರುನಿರೂಪಿಸುತ್ತಿದೆ. ಮುಂಬರುವ ದಿನಗಳಲ್ಲಿ ಈ ಆಂದೋಲನವನ್ನು ಮುರಿಯಲು ಮೋದಿ ಸರ್ಕಾರವು ನಿರ್ಲಜ್ಜ ಪ್ರಯತ್ನಗಳನ್ನು ಎಷ್ಟು ತೀವ್ರಗೊಳಿಸುತ್ತದೆಯೊ ಅಷ್ಟೇ ಜೋರಾಗಿ ಕಥನದ ಈ ಮರುನಿರೂಪಣೆಯೂ ಹೆಚ್ಚು ವ್ಯಾಪಕವೂ ಮತ್ತು ಸ್ಪಷ್ಟವೂ ಆಗಲಿದೆ. ಚಳುವಳಿಯೂ ಹೆಚ್ಚು ಪ್ರಖರವಾಗಲಿದೆ. ಈಗ, ‘ರಾಷ್ಟ್ರ’ ಎಂಬ ಪರಿಕಲ್ಪನೆಯನ್ನು ವಿವರಿಸುವ ಮೂಲಕವೇ ವಿಷಯವನ್ನು ಆರಂಭಿಸೋಣ.

‘ರಾಷ್ಟ್ರ’ ಎಂಬ ಪರಿಕಲ್ಪನೆಯು 17ನೇ ಶತಮಾನದ ಯೂರೋಪಿನಲ್ಲಿ ಬಂಡವಾಳಶಾಹಿಯ ಉದಯದೊಂದಿಗೆ ಒಂದು ಖಚಿತ ರೂಪ ಪಡೆಯಿತು. 19ನೇ ಶತಮಾನದ ಕೊನೆಯ ಭಾಗದಲ್ಲಿ ಹಣಕಾಸು ಬಂಡವಾಳದ ಉದಯದೊಂದಿಗೆ ರಾಷ್ಟ್ರದ ಪರಿಕಲ್ಪನೆಯು ಒಂದು ವಿಶೇಷ ಪ್ರಾಮುಖ್ಯತೆಯನ್ನು ಪಡೆಯಿತು. ‘ರಾಷ್ಟ್ರೀಯ ಭಾವನೆ’ಯ ವೈಭವೀಕರಣವೇ ಹಣಕಾಸು ಬಂಡವಾಳದ ಸಿದ್ಧಾಂತ ಎಂಬುದಾಗಿ ರುಡಾಲ್ಫ್ ಹಿಲ್ಫರ್ಡಿಂಗ್ (1877-1941, ಅರ್ಥಶಾಸ್ತ್ರಜ್ಞರು) ಹೇಳಿದ್ದರು. ಹಣಕಾಸು ಬಂಡವಾಳವು ‘ರಾಷ್ಟ್ರೀಯ ಭಾವನೆ’ಯನ್ನು ವೈಭವೀಕರಿಸುತ್ತಿತ್ತು, ಏಕೆಂದರೆ, ‘ರಾಷ್ಟ್ರ’ ಮತ್ತು ಹಣಕಾಸು ಬಂಡವಾಳ, ಈ ಎರಡೂ ಸಮಾನಾರ್ಥಕ ಎಂದೂ ಮತ್ತು ರಾಷ್ಟ್ರದ ಹಿತ ಮತ್ತು ಹಣಕಾಸು ಬಂಡವಾಳದ ಹಿತ ಬೇರೆ ಬೇರೆಯಲ್ಲ ಎಂದು ಪ್ರತಿಪಾದಿಸಿತು. ಹೀಗೆ ‘ರಾಷ್ಟ್ರ’ವನ್ನು ವೈಭವೀಕರಿಸುವುದರ ಜೊತೆಗೆ, ‘ರಾಷ್ಟ್ರ’ವನ್ನು ತನ್ನೊಂದಿಗೆ ಗುರುತಿಸಿಕೊಂಡ ಹಣಕಾಸು ಬಂಡವಾಳವು, ಅಂತರ್-ಸಾಮ್ರಾಜ್ಯಶಾಹಿ ಪೈಪೋಟಿಯ ಅವಧಿಯಲ್ಲಿ, ಇತರ ದೇಶಗಳ ಹಣಕಾಸು ಬಂಡವಾಳಗಳ ವಿರುದ್ಧ ತೊಡಗಿದ ಹೋರಾಟದಲ್ಲಿ ‘ರಾಷ್ಟ್ರ’ದ ಪರಿಕಲ್ಪನೆಯನ್ನು ಬಳಸಿಕೊಂಡಿತು.

ಹೀಗೆ ಗುರುತಿಸಿಕೊಂಡ ಪರಿಣಾಮವಾಗಿ, ‘ರಾಷ್ಟ್ರ’ವು ಜನರಿಂದ ಸಂಬಂಧ ಕಳಚಿಕೊಂಡು ಅವರಿಂದ ದೂರ ಉಳಿಯಿತು. ‘ರಾಷ್ಟ್ರ’ ಎಂಬ ಕಲ್ಪನೆಯನ್ನು/ಭಾವನೆಯನ್ನು ಜನರಿಗಿಂತ ಏತ್ತರದಲ್ಲಿ ಇಡಲಾಯ್ತು. ಜನರು ‘ರಾಷ್ಟ್ರ’ಕ್ಕಾಗಿ ತ್ಯಾಗ ಮಾಡಿದರೇ ವಿನಃ, ‘ರಾಷ್ಟ್ರ’ವು ಜನರ ಅಭ್ಯದಯಕ್ಕಾಗಿ ಅಥವಾ ಜನರ ಲೌಕಿಕ ಮತ್ತು ಅವರ ಸ್ಥಿತಿ-ಗತಿಗಳ ಬಗ್ಗೆ ವಿಶೇಷ ಕಾಳಜಿ ವಹಿಸಲಿಲ್ಲ. ‘ರಾಷ್ಟ್ರ’ದ ಕಾಳಜಿ ಏನಿದ್ದರೂ ತನ್ನ ಅಧಿಕಾರ-ಹಿರಿಮೆ-ಗರಿಮೆಗಳ ಬಗ್ಗೆ ಮಾತ್ರ ಇತ್ತೇ ವಿನಃ, ಕ್ಯಲೊರಿ ಸೇವನೆ ಅಥವಾ ಜನರ ಆರೋಗ್ಯದ ಬಗ್ಗೆ ಇರಲೇ ಇಲ್ಲ.

‘ರಾಷ್ಟ್ರ’ದ ಬಗ್ಗೆ ಯೂರೋಪಿನಲ್ಲಿ ಮೂಡಿಬಂದ ಈ ಪರಿಕಲ್ಪನೆಗಿಂತ ವಸಾಹತು-ವಿರೋಧಿ ಹೋರಾಟದ ಕಾಲದಲ್ಲಿ ಮೂರನೆಯ ಜಗತ್ತಿನಲ್ಲಿ (ವಸಾಹತುಗಳಲ್ಲಿ) ‘ರಾಷ್ಟ್ರ’ದ ಬಗ್ಗೆ ಹೊರಹೊಮ್ಮಿದ ಪರಿಕಲ್ಪನೆಯು ಸಂಪೂರ್ಣವಾಗಿ ಭಿನ್ನವಾಗಿತ್ತು. ತನ್ನ ಅಧೀನದಲ್ಲಿದ್ದ ದೇಶಗಳ ಜನರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದ ವಸಾಹತುಶಾಹಿ ಆಡಳಿತವು ಜನರನ್ನು ದಮನಮಾಡುತ್ತಿದ್ದ ಕಾರಣದಿಂದ, ಜನರು ‘ರಾಷ್ಟ್ರ’ದ ಹೊಸ ಪರಿಕಲ್ಪನೆಯೊಂದಿಗೆ ಗುರುತಿಸಿಕೊಂಡರು. ಭಾರತದಲ್ಲಿ, 1931ರಲ್ಲಿ ಕರಾಚಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಜನರ ಪರಿಸ್ಥಿತಿಯನ್ನು ಸುಧಾರಿಸುವ ಬಗ್ಗೆ ಸುದೀರ್ಘವಾಗಿ ಚರ್ಚಿಸಿ ಕೈಗೊಂಡ ನಿರ್ಣಯವು ‘ರಾಷ್ಟ್ರೀಯ’ ವಿಮೋಚನೆಯ ಕಾರ್ಯಸೂಚಿಗೆ ಒಂದು ಮಾದರಿಯಾಗಿತ್ತು. ವಸಾಹತುಶಾಹಿ ಆಳ್ವಿಕೆಗೆ ಒಳಗಾಗಿದ್ದ ಇತರ ದೇಶಗಳಲ್ಲಿಯೂ ಸಹ ಇದೇ ರೀತಿಯ ದಸ್ತಾವೇಜುಗಳನ್ನು ಕಾಣಬಹುದು.

‘ರಾಷ್ಟ್ರ’ವನ್ನು ‘ಕಾರ್ಪೊರೇಟ್’ಗಳೊಂದಿಗೆ ಸಮೀಕರಿಸುವ ಕಥನವನ್ನು ಕಿಸಾನ್ ಚಳುವಳಿಯು ಪ್ರಶ್ನೆಗೆ ಒಳಪಡಿಸಿದೆ ಮಾತ್ರವಲ್ಲ, ಈ ಕಥನ-ನಿರೂಪಣೆಗೆ ಬದಲಿಯಾಗಿ, ‘ರಾಷ್ಟ್ರವೆಂದರೆ ದುಡಿಯುವ ಜನರು ಎಂಬ ಪರಿಕಲ್ಪನೆಯನ್ನು ರಂಗಸ್ಥಳದ ಮಧ್ಯಕ್ಕೆ ಮತ್ತೊಮ್ಮೆ ತಂದು ನಿಲ್ಲಿಸಿದೆ. ಈ ಮೂರೂ ಕೃಷಿ ಕಾಯ್ದೆಗಳು ರೈತರಿಗೆ ಒಳಿತು ಮಾಡುತ್ತವೆ ಎಂಬುದಾಗಿ ಮೋದಿಯವರು ಮಂಡಿಸಿದ ವಾದವನ್ನು ತಿರಸ್ಕರಿಸಿದ ರೈತರ ಈ ಕ್ರಮವು, ಎಲ್ಲವನ್ನೂ ಬಲ್ಲ, ದೋಷ ರಹಿತ, ಸರ್ವಶಕ್ತ, ರಾಷ್ಟ್ರದ ಸಂಕೇತವೆಂದೇ ಗುರುತಿಸಲ್ಪಡುವ ಮತ್ತು ದೇವರೆಂದು ಆರಾಧಿಸಲ್ಪಡುತ್ತಿರುವ ಈ ನಾಯಕನಿಗೆ ಕೊಟ್ಟ ಒಂದು ದೊಡ್ಡ ಹೊಡೆತವೇ.

ವ್ಯಂಗ್ಯಚಿತ್ರ ಕೃಪೆ: ಪಿ.ಮಹಮ್ಮದ್, ವಾರ್ತಾಭಾರತಿ

ಯೂರೋಪಿಯನ್ ‘ರಾಷ್ಟ್ರೀಯತೆ’ಗೂ ಮತ್ತು ಮೂರನೆಯ ಜಗತ್ತಿನ ಜನರು ಪರಿಭಾವಿಸಿಕೊಂಡ ವಸಾಹತು-ವಿರೋಧಿ ‘ರಾಷ್ಟ್ರೀಯತೆ’ಗೂ ವ್ಯತ್ಯಾಸವಿದೆ. ಈ ವ್ಯತ್ಯಾಸದ ಮುಖ್ಯ ಕಾರಣವೆಂದರೆ, ಯೂರೋಪಿನಲ್ಲಿ, ತಮ್ಮ ನಿಯಂತ್ರಣದ ಮಾಧ್ಯಮಗಳ ಮೂಲಕ ಸಾಮ್ರಾಜ್ಯಶಾಹಿಯ ಒಳಗಣ ಪೈಪೋಟಿಯಲ್ಲಿ ತೊಡಗಿದ್ದ ಹಣಕಾಸು ಬಂಡವಾಳವು ಆಯಾ ದೇಶಗಳ ‘ರಾಷ್ಟ್ರೀಯತೆ’ಯ ಪರ ನಿಂತು ಅದಕ್ಕೆ ಪ್ರೋತ್ಸಾಹ-ಬೆಂಬಲವನ್ನು ನೀಡಿತ್ತು. ಇದಕ್ಕೆ ತದ್ವಿರುದ್ಧವಾಗಿ, ವಸಾಹತುಶಾಹಿ ಆಳ್ವಿಕೆಯಲ್ಲಿ ಉಸಿರುಗಟ್ಟಿದ ದೊಡ್ಡ ಬಂಡವಾಳಗಾರರನ್ನು ಹೊರತುಪಡಿಸಿದರೆ, ವಸಾಹತುಶಾಹಿ ವಿರೋಧಿ ಹೋರಾಟದ ವರ್ಗ-ನೆಲೆಯು, ಕಾರ್ಮಿಕರು, ರೈತರು, ಕಿರು ಉತ್ಪಾದಕರು ಮತ್ತು ಸಣ್ಣ ಸಣ್ಣ ಬಂಡವಾಳಗಾರರನ್ನು ಒಳಗೊಂಡಿತ್ತು.

ಆದರೆ, ನವ-ಉದಾರವಾದದ ಆಗಮನದೊಂದಿಗೆ ಒಂದು ಪ್ರತಿ-ಕ್ರಾಂತಿಯ ಪರಿಕಲ್ಪನೆ ಹಬ್ಬಿರುವುದನ್ನು ನಾವು ಕಾಣುತ್ತಿದ್ದೇವೆ. ನವ-ಉದಾರವಾದಿ ಬಂಡವಾಳಶಾಹಿ ಯುಗದ ಸಂದರ್ಭದಲ್ಲಿ, ‘ರಾಷ್ಟ್ರ’ವನ್ನು ದೇವರ ಮಟ್ಟಕ್ಕೆ ಏರಿಸಿ, ಅದನ್ನು ಜನರಿಗಿಂತ ಎತ್ತರದಲ್ಲಿ ಕೂರಿಸಿ, ಯೂರೋಪಿಯನ್ ಮಾದರಿಯ ‘ರಾಷ್ಟ್ರೀಯತೆ’ಯನ್ನು ಕಾರ್ಪೊರೇಟ್-ಹಣಕಾಸು ಕುಳಗಳಿಗೆ ಸಮನೆಂಬ ಭಾವನೆಯನ್ನು ಮೂಡಿಸಿ ಅದನ್ನು ಭಾರತವೂ ಸೇರಿದಂತೆ ತೃತೀಯ ಜಗತ್ತಿನ ದೇಶಗಳಲ್ಲಿ ಪ್ರೋತ್ಸಾಹಿಸಲಾಯಿತು. ಅಂತರ್-ಸಾಮ್ರಾಜ್ಯಶಾಹಿ ವೈರುಧ್ಯಗಳು ಮಂಕಾಗಿವೆ, ನಿಜ. ಆದರೂ, ಯೂರೋಪಿಯನ್ ಶೈಲಿಯ ‘ರಾಷ್ಟ್ರೀಯತೆ’ಯು, ಹಣಕಾಸಿನ ಬಂಡವಾಳದ ಹಿತಾಸಕ್ತಿಗಳ ಮಟ್ಟಿಗೆ, ಇನ್ನೂ ಚಿನ್ನದ ಮೊಟ್ಟೆ ಇಡುವ ಕೋಳಿಯೇ.

ಕಾರ್ಪೊರೇಟ್-ಹಣಕಾಸು ಕುಳಗಳು ಎಲ್ಲರಿಗೂ ಪ್ರಯೋಜನವಾಗುವಂತಹ ಆರ್ಥಿಕ ಬೆಳವಣಿಗೆಯನ್ನು ತರುತ್ತಾರೆ ಎಂಬ ನಂಬಿಕೆಯನ್ನು ಜನರಲ್ಲಿ ಮೂಡಿಸುವ ಸಲುವಾಗಿ, ‘ರಾಷ್ಟ್ರ’ದ ಮತ್ತು ಕಾರ್ಪೊರೇಟ್-ಹಣಕಾಸು ಕುಳಗಳ ಸ್ವರೂಪ-ಚಹರೆಗಳು ಒಂದೇ ಎಂಬ ರೀತಿಯಲ್ಲಿ ಬಿಂಬಿಸಿ ಅದನ್ನು ಆರಂಭದಲ್ಲಿ ಪ್ರೋತ್ಸಾಹಿಸಲಾಗಿತ್ತು. ಆದರೆ, ಅಸಲಿಯಾಗಿ ಇದೊಂದು ನಕಲಿ ಭರವಸೆಯ ಮೇಲಿನ ನಂಬಿಕೆಯಾಗಿತ್ತು ಎಂಬುದನ್ನು ನವ-ಉದಾರವಾದಿ ಬಂಡವಾಳಶಾಹಿಯ ಬಿಕ್ಕಟ್ಟು ಬಯಲು ಮಾಡಿತು. ಈ ಇಕ್ಕಟ್ಟಿನಿಂದ ತಪ್ಪಿಸಿಕೊಳ್ಳುವ ಸಲುವಾಗಿ ನವ-ಉದಾರವಾದವು ಹೊಸದೊಂದು ವೇಷ ತೊಡಬೇಕಾಗಿ ಬಂತು. ಆರ್ಥಿಕ ಬೆಳವಣಿಗೆಯ ಪ್ರಯೋಜನವನ್ನು ಎಲ್ಲರಿಗೂ ತರುವ ವರಸೆಯನ್ನೂ ಕೈಬಿಡದೆ, ‘ರಾಷ್ಟ್ರ’ದ ಮತ್ತು ಕಾರ್ಪೊರೇಟ್-ಹಣಕಾಸು ಕುಳಗಳ ಸ್ವರೂಪ-ಚಹರೆಗಳು ಒಂದೇ ಎಂಬುದನ್ನು ಮತ್ತೊಮ್ಮೆ ನಂಬಿಸಲು ಹೊಸದೊಂದು ದಾರಿಯನ್ನು ಹುಡುಕಬೇಕಾಗಿ ಬಂತು. ‘ಹಿಂದೂರಾಷ್ಟ್ರ’ ಎಂಬ ಒಂದು ಅಲೌಕಿಕ ಪರಿಕಲ್ಪನೆಯನ್ನು ಪರ್ಯಾಯವಾಗಿ ಪ್ರತಿಪಾದಿಸಲಾಯಿತು. ಜನರಿಗಿಂತ ಎತ್ತರದಲ್ಲಿ ಕೂರಿಸಿದ ಈ ‘ಹಿಂದೂರಾಷ್ಟ್ರ’ಕ್ಕಾಗಿ ಜನರು ತ್ಯಾಗ ಮಾಡುವಂತೆ ಮತ್ತೊಮ್ಮೆ ಕರೆ ನೀಡಲಾಯಿತು. ಈ ‘ಹಿಂದೂರಾಷ್ಟ್ರ’ದ ದೃಷ್ಟಿಯಲ್ಲೂ ಸಹ ಜನರ ದೈನಂದಿನ ಸಮಸ್ಯೆಗಳಿಗೆ ಸಿಕ್ಕಿದ ಪ್ರಾಮುಖ್ಯತೆ ಅಲ್ಪವೇ.

ನವ ಉದಾರವಾದಿ ಬಂಡವಾಳಶಾಹಿಯ ಬಿಕ್ಕಟ್ಟಿನ ಕಾಲದಲ್ಲಿ ಅಸ್ತಿತ್ವಕ್ಕೆ ಬಂದ ಮತ್ತು ಕಳೆದ ಆರು ವರ್ಷಗಳಿಂದಲೂ ಬಲಗೊಳ್ಳುತ್ತಿರುವ ಕಾರ್ಪೊರೇಟ್-ಹಿಂದುತ್ವ ಮೈತ್ರಿಯ ಕಥನವನ್ನು ಹಿಂದುತ್ವದ ಭಕ್ತರು ಸುಂದರವಾಗಿ ಹೆಣೆದಿದ್ದಾರೆ. ಈ ಹೊಸ ಕಥನದ ನಿರೂಪಣೆಯನ್ನು ಕಾರ್ಪೊರೇಟ್ ಮಾಧ್ಯಮಗಳು ಸತತವಾಗಿ ಪ್ರಚಾರ ಮಾಡಿವೆ. ನರೇಂದ್ರ ಮೋದಿಯವರು ಕಾರ್ಪೊರೇಟ್-ಹಣಕಾಸು ಕುಳಗಳನ್ನು ‘ರಾಷ್ಟ್ರ’ದ ‘ಸಂಪತ್ತಿನ ಸೃಷ್ಟಿಕರ್ತರು’ ಎಂದು ಬಣ್ಣಿಸಿದಾಗ, ‘ರಾಷ್ಟ್ರ’ದ ಅರ್ಥ ಏನು ಎನ್ನುವುದರ ಬಗ್ಗೆ ಯಾವ ಅನುಮಾನವೂ ಉಳಿಯಲಿಲ್ಲ. ಈ ವಿವರಣೆಯು, ‘ರಾಷ್ಟ್ರ’ವು ಏಳಿಗೆ ಹೊಂದಬೇಕಾದರೆ ಈ ‘ಸಂಪತ್ತಿನ ಸೃಷ್ಟಿಕರ್ತ’ರನ್ನು ಸಂತೋಷವಾಗಿಟ್ಟಿರಬೇಕು ಎಂದು ಸೂಚಿಸುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ರಾಷ್ಟ್ರದ ಹಿತಾಸಕ್ತಿಯು, ಕಾರ್ಪೊರೇಟ್-ಹಣಕಾಸು ಕುಳಗಳ ಹಿತಾಸಕ್ತಿಗೆ ಸಮಾನವಾಗುತ್ತದೆ. ಆರ್‌ಎಸ್‌ಎಸ್ ಪ್ರತಿಪಾದಿಸುವ ‘ಹಿಂದೂರಾಷ್ಟ್ರ’ವು ವಾಸ್ತವದಲ್ಲಿ ಕಾರ್ಪೊರೇಟ್-ಹಣಕಾಸು ಕುಳಗಳ ಸರ್ವಾಧಿಕಾರದ ಪ್ರಭುತ್ವವೇ – ಅದರಲ್ಲಿಯೂ ಬೆರಳೆಣಿಕೆಯಷ್ಟು ಮಂದಿಯ ಮತ್ತು ಅವರ ಹಿತಾಸಕ್ತಿ ಕಾಪಾಡುವ ನಿರಂಕುಶ ಪ್ರಭುತ್ವವೇ.

ಸಂಪನ್ಮೂಲಗಳನ್ನು ಹೊಂದಿರುವ ಮತ್ತು ನೀತಿಗಳನ್ನು ಸ್ವತಂತ್ರವಾಗಿ ನಿರ್ಧರಿಸುವ ಅಧಿಕಾರವುಳ್ಳ ರಾಜ್ಯಗಳಿಂದ ಕೂಡಿರುವ ಒಂದು ಒಕ್ಕೂಟ ಪ್ರಭುತ್ವ ವ್ಯವಸ್ಥೆಯು, ಕಾರ್ಪೊರೇಟ್-ಹಣಕಾಸು ಕುಳಗಳ ಒಡೆತನದ ಬೃಹತ್ ಘಟಕಗಳನ್ನು ಪ್ರೋತ್ಸಾಹಿಸುವುದರ ಜೊತೆಯಲ್ಲೇ ಸಣ್ಣ ಸಣ್ಣ ಸ್ಥಳೀಯ ಬಂಡವಾಳಗಾರರಿಗೆ ತಮ್ಮ ಸುತ್ತಮುತ್ತಲ ಪ್ರದೇಶಗಳ ಅಭಿವೃದ್ಧಿಯಲ್ಲಿ ಪಾಲುದಾರರಾಗುವ ಅವಕಾಶವನ್ನು ಕಲ್ಪಿಸುತ್ತದೆ ಮತ್ತು ಸಣ್ಣ ಪುಟ್ಟ ಗೃಹ ಕೈಗಾರಿಕೆಗಳು ಹಾಗೂ ರಾಜ್ಯ ಸರ್ಕಾರಗಳ ಉದ್ದಿಮೆಗಳು ಸರಾಗವಾಗಿ ಕಾರ್ಯನಿರ್ವಹಿಸಲು ಅನುವಾಗುವಂತೆ ನೋಡಿಕೊಳ್ಳುತ್ತದೆ. ಆದರೆ, ರಾಜ್ಯಗಳಿಗೆ ದಕ್ಕಬೇಕಿದ್ದ ಸಂಪನ್ಮೂಲಗಳನ್ನು ಕೇಂದ್ರವೇ ಕಬಳಿಸಿದರೆ, ನೀತಿ-ನಿರ್ಧಾರಗಳು ಕೇಂದ್ರೀಕೃತಗೊಳ್ಳುತ್ತವೆ. ಅಂದರೆ, ಕೇಂದ್ರವು ರಾಜ್ಯಗಳ ಅಧಿಕಾರವನ್ನು ಕಸಿದುಕೊಳ್ಳುತ್ತದೆ. ಆಗ, ಸರ್ವಾಂಗೀಣ (ಎಲ್ಲ ಪ್ರದೇಶಗಳ) ಅಭಿವೃದ್ಧಿಯ ಮಾತುಗಳು ಬೊಗಳೆಯಾಗುತ್ತವೆ. 1930ರ ದಶಕದಲ್ಲಿ ಜಪಾನ್ ದೇಶದಲ್ಲಿ, ಕೈಗಾರಿಕೆ, ವಾಣಿಜ್ಯ ಮುಂತಾದ ಎಲ್ಲ ರೀತಿಯ ಚಟುವಟಿಕೆಗಳನ್ನೂ ನಿರ್ವಹಿಸಿದ ಶಿಂಕೊ ಎಂಬ ಕಂಪೆನಿಗಳ ಸಮೂಹ (shinko zaibatsu) ಮಾದರಿಯಲ್ಲಿ, ಕೇಂದ್ರ ಸರ್ಕಾರದ ಕೃಪಾಕಟಾಕ್ಷಕ್ಕೆ ಪಾತ್ರರಾದ ಬೆರಳೆಣಿಕೆಯ ಕಾರ್ಪೊರೇಟ್-ಹಣಕಾಸು ಕುಳಗಳಿಗೆ ಬೇಕಾದದ್ದನ್ನು ಮಾಡಿಕೊಳ್ಳುವ ಅನುಕೂಲವನ್ನು ಕಲ್ಪಿಸಿಕೊಡಲಾಗುತ್ತಿದೆ. ಈ ಬೆರಳೆಣಿಕೆಯ ಏಕಸ್ವಾಮ್ಯ ಉದ್ದಿಮೆ ಮನೆತನಗಳು ಹೊಂದಿರುವ ಪ್ರಾಬಲ್ಯದ ಪ್ರತಿರೂಪದಂತೆ ಎಲ್ಲ ಸಂಪನ್ಮೂಲಗಳನ್ನು ಮತ್ತು ಅಗಾಧ ಅಧಿಕಾರಗಳನ್ನು ಮೋದಿ ತಮ್ಮ ಕೈಯಲ್ಲಿ ಇಟ್ಟುಕೊಂಡಿದ್ದಾರೆ. ಅವರ ಈ ಪ್ರಾಬಲ್ಯವನ್ನು ಪೂರ್ಣಗೊಳಿಸಲು ಈಗ ರೈತರನ್ನು ಬಲಿ ಪಡೆಯಲಾಗುತ್ತಿದೆ.

ಕೇಂದ್ರೀಕರಣದ ಅರ್ಥವೆಂದರೆ, ರಾಜ್ಯ ಸರ್ಕಾರಗಳ ವಿರುದ್ಧವಾಗಿ ಕೇಂದ್ರ ಸರ್ಕಾರದ ಬಲಗೊಳ್ಳುವಿಕೆ ಎಂಬುದಷ್ಟೇ ಅಲ್ಲ. ಕೇಂದ್ರ ಸರ್ಕಾರದ ಒಳಗೂ ಸಹ ಎಲ್ಲಾ ಅಧಿಕಾರಗಳೂ, ಜನರಿಗೆ ಯಾವುದು ಒಳ್ಳೆಯದು ಎಂಬುದನ್ನು ಬಲ್ಲ ಮತ್ತು ಯಾವ ತಪ್ಪನ್ನೂ ಮಾಡದ ಒಬ್ಬ ಸರ್ವಶಕ್ತ “ನಾಯಕ”ನ ಕೈಯಲ್ಲಿ ಸೇರಿರುವುದೂ ಸಹ ಕೇಂದ್ರೀಕರಣವೇ. ಕಾರ್ಪೊರೇಟ್-ಹಿಂದುತ್ವ ಮೈತ್ರಿಯ ‘ರಾಷ್ಟ್ರೀಯತೆ’ಯು ಈ ‘ನಾಯಕ’ನನ್ನು ‘ರಾಷ್ಟ್ರ’ದ ಸಂಕೇತ ಎಂದು ಭಾವಿಸುತ್ತದೆ ಮತ್ತು ಆ ನಾಯಕನನ್ನು ದೇವರೆಂದು ಆರಾಧಿಸುತ್ತದೆ. ಹಾಗಾಗಿ, ಮೋದಿ ಅವರನ್ನು ಯಾರಾದರೂ ಗೇಲಿಮಾಡಿದರೆ, ನಿಂದಿಸಿದರೆ, ಅಥವಾ ಲೇವಡಿ ಮಾಡಿದರೆ, ಅವರನ್ನು ಎನ್‌ಐಎ ಅಂಥಹ ಪ್ರಭುತ್ವದ ತನಿಖಾ ಸಂಸ್ಥೆಗಳು ‘ದೇಶ ವಿರೋಧಿ’ ಎಂದು ಪರಿಗಣಿಸುವುದು ಆಶ್ಚರ್ಯವಲ್ಲ. ಹಾಗಾಗಿ, ‘ದೇಶ ವಿರೋಧಿ’ಗಳನ್ನು ಬಂಧಿಸಲಾಗುತ್ತಿದೆ.

ರಾಷ್ಟ್ರದ ಬಗ್ಗೆ ಪ್ರತಿಪಾದಿಸಲ್ಪಟ್ಟ ಈ ಕಥನ-ನಿರೂಪಣೆಯನ್ನು, ತನ್ನ ಘನ ನಡವಳಿಕೆಯ ಮೂಲಕ ಕಿಸಾನ್ ಚಳುವಳಿಯು ಪ್ರಶ್ನೆಗೆ ಒಳಪಡಿಸಿದೆ ಮಾತ್ರವಲ್ಲ, ಈ ಕಥನ-ನಿರೂಪಣೆಗೆ ಬದಲಿಯಾಗಿ, ‘ರಾಷ್ಟ್ರ,ವೆಂದರೆ ದುಡಿಯುವ ಜನರು ಎಂಬ ಪರಿಕಲ್ಪನೆಯನ್ನು ರಂಗಸ್ಥಳದ ಮಧ್ಯಕ್ಕೆ ಮತ್ತೊಮ್ಮೆ ತಂದು ನಿಲ್ಲಿಸಿದೆ. ಈ ಮೂರೂ ಕೃಷಿ ಕಾಯ್ದೆಗಳು ರೈತರಿಗೆ ಒಳಿತು ಮಾಡುತ್ತವೆ ಎಂಬುದಾಗಿ ಮೋದಿಯವರು ಮಂಡಿಸಿದ ವಾದವನ್ನು ತಿರಸ್ಕರಿಸಿದ ರೈತರ ಈ ಕ್ರಮವು, ಎಲ್ಲವನ್ನೂ ಬಲ್ಲ, ದೋಷ ರಹಿತ, ಸರ್ವಶಕ್ತ, ರಾಷ್ಟ್ರದ ಸಂಕೇತವೆಂದೇ ಗುರುತಿಸಲ್ಪಡುವ ಮತ್ತು ದೇವರೆಂದು ಆರಾಧಿಸಲ್ಪಡುತ್ತಿರುವ ಈ ನಾಯಕನಿಗೆ ಕೊಟ್ಟ ಒಂದು ದೊಡ್ಡ ಹೊಡೆತವೇ. ರೈತರ ಮಾತುಗಳನ್ನು ಆಲಿಸದ ಅಥವಾ ಅವರೊಂದಿಗೆ ಅರ್ಥಪೂರ್ಣ ಮಾತು ಕತೆ ನಡೆಸದ ಸರ್ಕಾರದ ಕ್ರಮವನ್ನು ಅನೇಕರು ಟೀಕಿಸಿದ್ದಾರೆ. ಆದರೆ, ಬೇರೆಯವರ ಮಾತುಗಳನ್ನು ಆಲಿಸುವುದೇ, ಮೂಲಭೂತವಾಗಿ, ರಾಷ್ಟ್ರದ ಈ ಪರಿಕಲ್ಪನೆಗೆ ವಿರೋಧಾತ್ಮಕವಾಗುತ್ತದೆ. ಈ ಪರಿಕಲ್ಪನೆಯ ಪ್ರಕಾರ, ರಾಷ್ಟ್ರೀಯ ಏಕತೆ ಎಂಬುದು ಎಲ್ಲರಲ್ಲೂ ಮೊದಲೇ ಅಂತರ್ಗತವಾಗಿರುತ್ತದೆ. ಆದ್ದರಿಂದ, ಅದನ್ನು ಪ್ರತ್ಯೇಕವಾಗಿ ಮಾತು ಕತೆಗಳ ಮೂಲಕ ಮೂಡಿಸುವ ಅಗತ್ಯವಿಲ್ಲ. ಅದು ನಾಯಕನ ಮೂಲಕ ಪ್ರತಿಬಿಂಬಿತವಾಗುತ್ತದೆ. ಈ ಕಾರಣದಿಂದಾಗಿ, ನಾಯಕನನ್ನು ಪ್ರಶ್ನಿಸುವ ಕ್ರಮವು ಒಂದೊ ರಾಷ್ಟ್ರ-ವಿರೋಧಿ ಕೃತ್ಯವಾಗುತ್ತದೆ ಅಥವಾ ಜ್ಞಾನದ ಕೊರತೆಯಿಂದ ನೆಲೆಸಿರುವ ಮುಗ್ಧತೆಯ ಮೂಲದ್ದಾಗಿರುತ್ತದೆ.

ಅಂಬಾನಿ ಒಡೆತನದ ಜಿಯೋ ಮೊಬೈಲ್ ಸಂಪರ್ಕವನ್ನು ಬಹಿಷ್ಕರಿಸುವಂತೆ ರೈತ ಚಳುವಳಿಯು ಕೊಟ್ಟಿರುವ ಕರೆ ಮತ್ತು ಅಂಬಾನಿ-ಅದಾನಿ ಜೊತೆಗೆ ಮೋದಿಯವರ ಪ್ರತಿಕೃತಿಗಳನ್ನು ಸುಡುವುದು; ಇವೆಲ್ಲವೂ ಮೋದಿ ಅವರು ‘ಸಂಪತ್ತಿನ ಸೃಷ್ಟಿ’ಯ ಹೆಸರಿನಲ್ಲಿ ಕೆಲವು ಉದ್ಯಮ ಸಂಸ್ಥೆಗಳನ್ನು ರಾಷ್ಟ್ರದೊಂದಿಗೆ ಗುರುತಿಸಿದ ಸುಳ್ಳಿನ ಬಗ್ಗೆ ಅರಿವು ಮೂಡಿಸುತ್ತಿವೆ. ವಿಪರ್ಯಾಸವೆಂದರೆ, ರೈತರು ಜಿಯೋ ಮೊಬೈಲ್ ಸಂಪರ್ಕವನ್ನು ಬಹಿಷ್ಕರಿಸುವಂತೆ ಕರೆ ಕೊಟ್ಟ ಹಿಂದಿನ ದಿನವಷ್ಟೇ ಮುಖೇಶ್ ಅಂಬಾನಿ 5-ಜಿ ಅನ್ನು ಶುರು ಮಾಡುವುದಾಗಿ ಘೋಷಿಸಿದ್ದರು. ಇದನ್ನು ಎಲ್ಲಾ ಟಿವಿ ಚಾನೆಲ್‌ಗಳೂ ಒಂದು ದೊಡ್ಡ ‘ರಾಷ್ಟ್ರೀಯ’ ಸಾಧನೆ ಎಂದೇ ಬಿಂಬಿಸಿದ್ದವು. ಜಿಯೋ ಮೊಬೈಲ್ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ರೈತ ಚಳುವಳಿಯು ಕೊಟ್ಟಿರುವ ಕರೆಯು ಕೇವಲ ಒಂದು ನಿರ್ದಿಷ್ಟ ತಂತ್ರಗಾರಿಕೆ ಮಾತ್ರವಲ್ಲ; ಅದು, ‘ರಾಷ್ಟ್ರ’ವನ್ನು ಕೆಲವು ಕಾರ್ಪೊರೇಟ್ ಸಂಸ್ಥೆಗಳ ಜೊತೆಗೆ ಸಮಾನವೆಂದು ಭಾವಿಸುವ ಕಥನದ ನಿರೂಪಣೆಗೆ ವಿರುದ್ಧವಾಗಿ ನಿಲ್ಲುತ್ತದೆ.

ರೈತರು ವಿರೋಧಿಸುತ್ತಿರುವುದು ಕೇವಲ ಈ ಕಥನವನ್ನು ಮಾತ್ರವಲ್ಲ. ಈ ಕಥನಕ್ಕೆ ಸಂಪೂರ್ಣವಾಗಿ ವಿರುದ್ಧವಾದ ಬದಲಿ ಕಥನವನ್ನು ಒದಗಿಸುವ ಮೂಲಕ, ರೈತರು, ವಸಾಹತು-ವಿರೋಧಿ ಹೋರಾಟದ ಸಂದರ್ಭದಲ್ಲಿ ಪ್ರತಿಪಾದಿಸಿದ್ದ ಮತ್ತು ಕ್ರಮೇಣ ತೆಳುವಾಗುತ್ತಿದ್ದ ನೈಜ ರಾಷ್ಟ್ರೀಯತೆಯನ್ನು ಮರಳಿ ಪಡೆದಿದ್ದಾರೆ. ಅವರು ಜಮಾವಣೆಯಾಗಿರುವ ಸ್ಥಳಗಳಲ್ಲಿ ಕೇಳಿ ಬರುವ ಸಾಮಾನ್ಯ ಘೋಷಣೆ ಎಂದರೆ: ಜೈ ಭಾರತ್, ಜೈ ಕಿಸಾನ್. ಈ ಘೋಷಣೆಗಳಿಗೆ ಇಬ್ಬಗೆಯ ಮಹತ್ವವಿದೆ. ಒಂದು ಕಡೆಯಲ್ಲಿ, ಅದು ರಾಷ್ಟ್ರವನ್ನು ದುಡಿಯುವ ಜನರೊಂದಿಗೆ ಗುರುತಿಸುತ್ತದೆ. ಮತ್ತೊಂದೆಡೆಯಲ್ಲಿ, ಭಾರತ್ ಮಾತಾ ಕಿ ಜೈ ಎಂಬ ಘೋಷಣೆ ಕೂಗದೇ ಇರುವುದೂ ಗಮನಾರ್ಹವೇ. ಭಾರತ್ ಮಾತಾ ಕಿ ಜೈ ಎಂಬ ಘೋಷಣೆಯ ಮೂಲಕ “ರಾಷ್ಟ್ರ”ವನ್ನು ಮಾತೃ-ಸಂಕೇತವಾಗಿ ತೋರಿಸುವ ಉದ್ದೇಶವೆಂದರೆ, ರಾಷ್ಟ್ರವನ್ನು ದೇವರ ಮಟ್ಟಕ್ಕೆ ಏರಿಸುವುದು (ದೈವೀಕರಣ). ಅಂದರೆ, ರಾಷ್ಟ್ರವನ್ನು ಜನರಿಗಿಂತ ಎತ್ತರದ ಮಟ್ಟದಲ್ಲಿ ಇರಿಸಿದಾಗ ಜನರು ರಾಷ್ಟ್ರಕ್ಕಾಗಿ ತ್ಯಾಗ ಮಾಡಬೇಕಾಗುತ್ತದೆ. ಜನರನ್ನು, ತಮ್ಮ ತನು-ಮನ-ಧನವನ್ನು ರಾಷ್ಟ್ರಕ್ಕಾಗಿ ತ್ಯಾಗ ಮಾಡುವಂತೆ ಪ್ರೇರೇಪಿಸುವಲ್ಲಿ ರಾಷ್ಟ್ರದ ದೈವೀಕರಣವು ಒಂದು ಸಾಧನವಾಗುತ್ತದೆ. ಇದುವೇ, ಕಾರ್ಪೊರೇಟ್-ಹಿಂದುತ್ವ ಮೈತ್ರಿಯ ‘ರಾಷ್ಟ್ರೀಯತೆ’ಯನ್ನು ಪ್ರಸರಿಸುವ ಮಾದರಿ. ಈ ಮಾದರಿಯು, ರಾಷ್ಟ್ರದ ಒಳಿತಿಗಾಗಿ ಜನರು ಕಾರ್ಪೊರೇಟ್‌ಗಳ ಪರವಾಗಿ ತ್ಯಾಗ ಮಾಡಬೇಕು (ಅಥವಾ ಅವರನ್ನು ಸಹಿಸಿಕೊಳ್ಳಬೇಕು) ಎಂದು ಬಯಸುತ್ತದೆ. ಅದೇ ರೀತಿಯಲ್ಲಿ, ರೈತರು ಘೋಷಣೆಗಳನ್ನು ಕೂಗುವಾಗ, ಒಂದು ಭಾಷೆ-ಒಂದು ದೇಶ ಎಂಬ ನಿರೀಕ್ಷೆಯ ಪ್ರಕಾರ ಕೇವಲ ಹಿಂದಿ ಭಾಷೆಯ ಘೋಷಣೆಗಳಿಗೆ ಸೀಮಿತಗೊಳ್ಳದೆ, ಪಂಜಾಬಿ ಮತ್ತು ಇತರ ಭಾಷೆಗಳನ್ನು ಬಳಸುವಂತೆ ಪಟ್ಟುಹಿಡಿಯುವ ನಡವಳಿಕೆಯು, ಒಂದೇ-ಕೇಂದ್ರೀಕೃತ-’ರಾಷ್ಟ್ರ’ ಎಂಬ ಪರಿಕಲ್ಪನೆಗಿಂತ ಭಿನ್ನವಾಗಿ, ದೇಶದ ಪ್ರಾದೇಶಿಕ-ಭಾಷಾ ರಾಷ್ಟ್ರೀಯತೆಗಳ ಬಹುತ್ವವನ್ನು ಗುರುತಿಸಿ ಅವುಗಳಿಗೆ ಕೊಡುವ ಮನ್ನಣೆಯು ಶ್ಲಾಘನೀಯವೇ.

ಸಂಕೇತಗಳು ಗಟ್ಟಿಯಾಗಿ ಮಾತನಾಡುತ್ತವೆ. ಕಿಸಾನ್ ಚಳುವಳಿಯು ಬಳಸಿದ ಸಂಕೇತಗಳು, ಸರ್ಕಾರದ ವಿರುದ್ಧ ತೆಗೆದುಕೊಂಡ ಸಹಜ ನಿಲುವು ಮುಂತಾದವುಗಳನ್ನು ಸಂಕ್ಷಿಪ್ತವಾಗಿ ಹೇಳುವುದಾದರೆ, ಘನತೆಯಿಂದ ಕೂಡಿದ ಅವರ ಒಟ್ಟಾರೆ ನಡವಳಿಕೆಗಳು, ಕಾರ್ಪೊರೇಟ್-ಹಿಂದುತ್ವ ಮೈತ್ರಿಯು ಪ್ರಚುರಪಡಿಸುತ್ತಿರುವ ರಾಷ್ಟ್ರೀಯತೆಯ ಮಾದರಿಯನ್ನು ಸಂಪೂರ್ಣವಾಗಿ ತಿರಸ್ಕರಿಸುತ್ತವೆ. ವಸಾಹತು-ವಿರೋಧಿ ಹೋರಾಟದ ಜೀವಾಳವಾಗಿದ್ದ ಮತ್ತು ಸ್ವತಂತ್ರ ಭಾರತದ ತಳಹದಿಯಾದ ನೈಜ ರಾಷ್ಟ್ರೀಯತೆಯನ್ನು ಮರುಸ್ಥಾಪಿಸುವ ಕಾರ್ಯವನ್ನು ರೈತರು ಮಾಡಿದ್ದಾರೆ.

 

ಅನು: ಕೆ.ಎಂ.ನಾಗರಾಜ್

Donate Janashakthi Media

Leave a Reply

Your email address will not be published. Required fields are marked *