- ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ 163 ರಾಷ್ಟ್ರಗಳ ಸುಮಾರು 4500ಕ್ಕೂ ಹೆಚ್ಚು ಕ್ರೀಡಾಪಟುಗಳ ಸ್ಪರ್ಧೆ
- 22 ಕ್ರೀಡೆಗಳ 540 ವಿಭಾಗಗಳಲ್ಲಿ ಸ್ಪರ್ಧೆ ಇವೆ
- ಈ ಬಾರಿ ಹೊಸದಾಗಿ ಬ್ಯಾಡ್ಮಿಂಟನ್ – ಟೆಕ್ವಾಂಡೋ ಕ್ರೀಡೆಗಳನ್ನು ಸೇರ್ಪಡೆ
- ಸ್ಪರ್ಧೆಗಳಿಗಾಗಿ ಒಟ್ಟು 19 ಕ್ರೀಡಾಂಗಣಗಳು
- ಆತಿಥೇಯ ಜಪಾನ್ ನಿಂದ ಅತಿಹೆಚ್ಚು ಅಂದರೆ 260 ಕ್ರೀಡಾಪಟುಗಳನ್ನು ಕಣಕ್ಕೆ
- ಭಾರತದಿಂದ ಈ ಬಾರಿ 54 ಸ್ಪರ್ಧಿಗಳು ಭಾಗಿ
- ಈ ಬಾರಿ ಭಾರತ ಕನಿಷ್ಠ ಪದಕ ಗೆಲ್ಲುವ ನಿರೀಕ್ಷೆ
ಟೋಕಿಯೋ: 2020ರ ಪ್ಯಾರಾಲಿಂಪಿಕ್ಸ್ ಆರಂಭವಾಗಲು ಇನ್ನು ಕೆಲವೇ ಗಂಟೆಗಳು ಬಾಕಿರುವುದರಿಂದ ಸಾಕಷ್ಟು ಕುತೂಹಲ ಮೂಡಿಸಿದೆ. ಕೋವಿಡ್‌ನಿಂದಾಗಿ ಒಂದು ವರ್ಷ ಮೂಂದೂಡಲಾಗಿದ್ದ ಕ್ರೀಡಾಕೂಟವು ಮಂಗಳವಾರ (ಆಗಸ್ಟ್ 24) ದಿಂದ ಆರಂಭವಾಗಲಿದೆ.
ಕೋವಿಡ್ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಜಪಾನ್ ದೇಶವು ಒಲಿಂಪಿಕ್ಸ್ ಕ್ರೀಡಾಕೂಟವನ್ನು ಆಯೋಜಿಸಿತ್ತು. ಈಗ ಪ್ಯಾರಾಲಿಂಪಿಕ್ಸ್ ಆಯೋಜನೆಗೆ ಸಜ್ಜಾಗಿದೆ. ಈ ಬಾರಿಯದು 16ನೇ ಪ್ಯಾರಾಲಿಂಪಿಕ್ಸ್ ಆಗಿದ್ದು, ಟೋಕಿಯೋದಲ್ಲಿ 2ನೇ ಬಾರಿ ಹಮ್ಮಿಕೊಳ್ಳಲಾಗಿದೆ. 1964ರಲ್ಲಿ ಮೊದಲ ಬಾರಿಗೆ ಕ್ರೀಡಾಕೂಟ ಆಯೋಜಿಸಿತ್ತು. ಈ ಬಾರಿ ಸುಮಾರು 163 ರಾಷ್ಟ್ರಗಳ 4500ಕ್ಕೂ ಹೆಚ್ಚು ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ.
ಇದನ್ನು ಓದಿ: ದೇಶಕ್ಕೆ ಚಿನ್ನ ತಂದುಕೊಟ್ಟ ಅಥ್ಲೇಟಿಕ್ ನೀರಜ್ ಚೋಪ್ರಾ
ಒಲಿಂಪಿಕ್ ಕ್ರೀಡಾಕೂಟದ ಸಂದರ್ಭದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಳವಾದ ಹಿನ್ನೆಲೆಯಲ್ಲಿ ಆತಂಕ ಹೆಚ್ಚಾಗಿದ್ದವು. ಆದರೂ ಅಂತಾರಾಷ್ಟ್ರೀಯ ಪ್ಯಾರಾಲಿಂಪಿಕ್ ಸಂಸ್ಥೆ (ಐಪಿಸಿ) ಕ್ರೀಡಾಕೂಟವನ್ನು ನಡೆಸಲು ಮುಂದಾಗಿದೆ. ಕ್ರೀಡಾಕೂಟ ಆರಂಭಕ್ಕೆ ಕೇವಲ 2 ದಿನ ಬಾಕಿ ಇದ್ದಾಗ ಕ್ರೀಡಾಪಟುಗಳಿಗೆ ಕ್ರೀಡಾ ಗ್ರಾಮಕ್ಕೆ ಪ್ರವೇಶ ನೀಡಲಾಗಿದೆ. ಅಲ್ಲದೇ ತಮ್ಮ ಸ್ಪರ್ಧೆ ಮುಗಿದ 48 ಗಂಟೆಗಳಲ್ಲಿ ಜಪಾನ್‌ನಿಂದ ಹೊರಡಬೇಕು ಎಂದು ಷರತ್ತು ವಿಧಿಸಲಾಗಿದೆ.
ಕ್ರೀಡಾಪಟುಗಳಿಗೆ ಪ್ರತಿದಿನ ಕೋವಿಡ್ ಪರೀಕ್ಷೆ ನಡೆಯಲಿದೆ. ಒಲಿಂಪಿಕ್ಸ್ ಮಾದರಿಯಲ್ಲೇ ಪ್ರೇಕ್ಷಕರು ಇಲ್ಲದೆ ಸ್ಪರ್ಧೆಗಳು ನಡೆಯಲಿವೆ. ಆದರೆ ಟಿವಿ, ಇಂಟರ್‌ನೆಟ್ ಮೂಲಕ 400 ಕೋಟಿಗೂ ಹೆಚ್ಚು ಜನರು ವೀಕ್ಷಿಸುವ ನಿರೀಕ್ಷೆ ಇದೆ ಎಂದು ಐಪಿಸಿ ಮುಖ್ಯಸ್ಥ ಆ್ಯಂಡ್ರೂ ಪಾರ್ಸನ್ಸ್ ಹೇಳಿದ್ದಾರೆ.
ಭಾರತದಿಂದ 54 ಸ್ಪರ್ಧಿಗಳು ಭಾಗಿ
ಪ್ಯಾರಾಲಿಂಪಿಕ್ಸ್‌ನಲ್ಲಿ ಈ ಬಾರಿ ದಾಖಲೆಯ 54 ಕ್ರೀಡಾಪಟುಗಳನ್ನು ಭಾರತದಿಂದ ಸ್ಪರ್ಧೆಗೆ ಇಳಿದಿದ್ದಾರೆ. 2016ರ ರಿಯೋ ಪ್ಯಾರಾಲಿಂಪಿಕ್ಸ್ ನಲ್ಲಿ 19 ಕ್ರೀಡಾಪಟುಗಳು ಸ್ಪರ್ಧಿಸಿದ್ದರು. ಅದೇ ಈ ವರೆಗಿನ ದಾಖಲೆಯಾಗಿತ್ತು.
ಇದುವರೆಗಿನ 11 ಪ್ಯಾರಾಲಿಂಪಿಕ್ಸ್‌ಗಳಲ್ಲಿ ಭಾರತವು ಒಟ್ಟು 12 ಪದಕಗಳನ್ನು ಜಯಿಸಿದೆ. 1960ರಲ್ಲಿ ಮೊದಲ ಪ್ಯಾರಾಲಿಂಪಿಕ್ಸ್ ನಡೆದರೂ ಭಾರತ ಭಾಗವಹಿಸಿದ್ದು 1968ರ ಟೆಲ್ ಅವಿವ್ ಕ್ರೀಡಾಕೂಟದಲ್ಲಿ. ಅ ವರ್ಷ ಭಾರತ ಯಾವುದೇ ಪದಕ ಜಯಿಸಿರಲಿಲ್ಲ.
ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಪದಕಗಳ ಸಾಧನೆ
1972ರ ಹೀಡೆಲ್ಬರ್ಗ್: ಮುರಳೀಕಾಂತ್ ಭಾರತಕ್ಕೆ ಮೊದಲ ಪದಕ ತಂದುಕೊಟ್ಟ ಅಥ್ಲೀಟ್ ಆಗಿದ್ದಾರೆ. 50 ಮೀಟರ್ ಫ್ರಿಸ್ಟೈಲ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದವರು. ಆಗ ಅವರು ವಿಶ್ವದಾಖಲೆಯ 37.33 ಸೆಕೆಂಡ್ಗಳಲ್ಲಿ ಗುರಿ ತಲುಪಿದ್ದರು.
1984ರ ನ್ಯೂಯಾರ್ಕ್ (ಯುಎಸ್) – ಸ್ಟೋಕ್ ಮ್ಯಾಂಡೆವಿಲ್ಲೆ (ಯುಕೆ) : ಜೋಗಿಂದರ್ ಸಿಂಗ್ ಬೇಡಿ 1984ರ ಪ್ಯಾರಾಲಿಂಪಿಕ್ಸ್‌ನಲ್ಲಿ ಒಟ್ಟು ಮೂರು ಪದಕ ಪಡೆಯುವ ಮೂಲಕ ಅತಿ ಹೆಚ್ಚು ಪದಕ ಗೆದ್ದಿರುವ ಭಾರತೀಯ ಪ್ಯಾರಾ ಕ್ರೀಡಾಪಟು ಎಂಬ ದಾಖಲೆಗೆ ಪಾತ್ರರಾಗಿದ್ದಾರೆ. ಅವರು ಶಾಟ್ಪುಟ್ನಲ್ಲಿ ಬೆಳ್ಳಿ, ಡಿಸ್ಕಸ್ ಥ್ರೋ ಮತ್ತು ಜಾವಲಿನ್ ಥ್ರೋನಲ್ಲಿ ಕಂಚಿನ ಪದಕ ಪಡೆದಿದ್ದರು. ಅದೇ ರೀತಿಯಲ್ಲಿ ಕೇಸರ್ಕರ್ ಜಾವಲಿನ್ ಥ್ರೋನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು.
ಇದನ್ನು ಓದಿ: ಭಾರತ ಒಲಿಂಪಿಕ್ಸ್ ನಲ್ಲಿ ವಿಶ್ವಗುರು ಆದೀತೆ?
2004 ಅಥೆನ್ಸ್ : ಜಾವಲಿನ್ ಥ್ರೋದಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ದೇವೇಂದ್ರ ಜಜಾರಿಯಾ 20 ವರ್ಷಗಳ ಪದಕದ ಬರ ನೀಗಿಸಿದ್ದರು. ಅವರು 62.15 ಮೀಟರ್ ಎಸೆಯುವ ಮೂಲಕ ವಿಶ್ವದಾಖಲೆ ಬರೆದಿದ್ದರು. ದೇವೇಂದ್ರ ಈ ಬಾರಿ ಟೋಕಿಯೊದಲ್ಲೂ ಕಣಕ್ಕಿಳಿಯುತ್ತಿದ್ದಾರೆ.
ರಾಜೀಂದರ್ ಸಿಂಗ್ ರಹೇಲು ಅವರು ಕೇವಲ 8 ತಿಂಗಳ ಮಗುವಿದ್ದಾಗಲೇ ಪೋಲಿಯೋಗೆ ತುತ್ತಾಗಿದ್ದರು. ಅವರು 56 ಕೆಜಿ ಪವರ್ಲಿಫ್ಟಿಂಗ್ನಲ್ಲಿ 147.5 ಕೆಜಿ ಭಾರ ಎತ್ತುವ ಮೂಲಕ ಕಂಚಿನ ಪದಕ ಪಡೆದಿದ್ದರು.
2012ರ ಲಂಡನ್: ಕರ್ನಾಟಕದ ಸ್ಪರ್ಧಿ ಗಿರೀಶ್ ಏಕೈಕ ಭಾರತೀಯನಾಗಿ ಪದಕ ಗೆದ್ದಿದ್ದರು. ಅವರು ಹೈಜಂಪ್ನಲ್ಲಿ 1.74 ಮೀಟರ್ ಎತ್ತರ ಜಿಗಿದು ಬೆಳ್ಳಿ ಪದಕ ಪಡೆದಿದ್ದರು. ಇವರು ಈ ಸ್ಪರ್ಧೆಯಲ್ಲಿ ಪದಕ ಗೆದ್ದ ಭಾರತದ ಮೊದಲ ಕ್ರೀಡಾಪಟುವಾಗಿದ್ದರು.
2016ರ ರಿಯೋ: ದೇವೇಂದ್ರ ಜಜಾರಿಯಾ 2ನೇ ಚಿನ್ನದ ಪದಕ ಪಡೆದರು. ದಾಖಲೆಯ 63.97 ಮೀಟರ್ ಎಸೆದು ಪ್ಯಾರಾಲಿಂಪಿಕ್ಸ್‌ನಲ್ಲಿ 2 ಚಿನ್ನ ಗೆದ್ದ ಭಾರತದ ಮೊದಲ ಕ್ರೀಡಾಪಟು ಎನಿಸಿದ್ದರು.
ಮರಿಯಪ್ಪನ್ ತಂಗವೇಲು ಹೈಜಂಪ್ ಸ್ಪರ್ಧೆಯಲ್ಲಿ 1.89 ಮೀಟರ್ ಜಿಗಿದು ಚಿನ್ನದ ಪದಕ ಪಡೆದಿದ್ದರು. ಈ ಮೂಲಕ ದೇಶಕ್ಕೆ ಚಿನ್ನದ ಪದಕ ತಂದುಕೊಟ್ಟ 3ನೇ ಕ್ರೀಡಾಪಟು ಎನಿಸಿದ್ದರು. ಇವರು ಟೋಕಿಯೊ ಗೇಮ್ಸ್ನಲ್ಲೂ ಸ್ಪರ್ಧಿಸುತ್ತಿದ್ದ ಮತ್ತೊಂದು ಪದಕದ ಮೇಲೆ ಕಣ್ಣಟ್ಟಿದ್ದಾರೆ.
ದೀಪಾ ಮಲಿಕ್ ಶಾಟ್ಪುಟ್ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಪದಕ ಗೆದ್ದ ಭಾರತದ ಮೊದಲ ಮಹಿಳಾ ಕ್ರೀಡಾಪಟು. ಅವರು ರಿಯೋದಲ್ಲಿ 4.61 ಮೀಟರ್ ಎಸೆದು ಬೆಳ್ಳಿ ಪದಕ ಪಡೆದಿದ್ದರು.
ಹೈಜಂಪ್ನಲ್ಲಿ ವರುಣ್ ಸಿಂಗ್ ಭಾಟಿ ಮೂರನೇ ಸ್ಥಾನ ಪಡೆದು ಕಂಚಿನ ಪದಕ ಪಡೆದಿದ್ದರು.