ನಾ ದಿವಾಕರ
“ಬಂಡವಾಳದ ಕೇಂದ್ರೀಕೃತ ಸಂಗ್ರಹ, ಸಂಪತ್ತಿನ ಕ್ರೋಢೀಕರಣ ಮತ್ತು ಆರ್ಥಿಕ ಪ್ರಾಬಲ್ಯವುಳ್ಳವರ ಮಾರುಕಟ್ಟೆಯ ಅನಿರ್ಬಂಧಿತ ವಿಸ್ತರಣೆ ” ಈ ಮೂರೂ ಸೂತ್ರಗಳು ಬಂಡವಾಳಶಾಹಿ ಆರ್ಥಿಕತೆಯ ಮೂಲ ಮಂತ್ರಗಳು. ಬಂಡವಾಳಶಾಹಿ ಆರ್ಥಿಕ ಅಭಿವೃದ್ಧಿ ಮಾದರಿಯನ್ನು ಒಪ್ಪಿಕೊಂಡಿರುವ ಯಾವುದೇ ದೇಶದಲ್ಲಾದರೂ ಇದು ಸಾಮಾನ್ಯವಾಗಿ ಕಾಣಬಹುದಾದ ವಿದ್ಯಮಾನ. 1980ರ ದಶಕದಲ್ಲಿ ತನ್ನ ಸಂಕೋಲೆಗಳಿಂದ ಬಿಡಿಸಿಕೊಂಡ ಜಾಗತಿಕ ಬಂಡವಾಳವು ವಿವಿಧ ರೂಪಗಳಲ್ಲಿ ತನ್ನ ವ್ಯಾಪ್ತಿ ಮತ್ತು ಆಳವನ್ನು ವಿಸ್ತರಿಸಿಕೊಂಡೇ ಬರುತ್ತಿದ್ದು ತಂತ್ರಜ್ಞಾನಾಧಾರಿತ ನಾಲ್ಕನೇ ಔದ್ಯೋಗಿಕ ಕ್ರಾಂತಿಯ ಸಂದರ್ಭದಲ್ಲಿ ಡಿಜಿಟಲ್ ರೂಪದಲ್ಲಿ ಸಮಾಜಗಳನ್ನು ಆಕ್ರಮಿಸಿಕೊಳ್ಳುತ್ತಿದೆ. ನವ ಉದಾರವಾದಿ ನೀತಿಗಳು ನಿರ್ದೇಶಿಸುವ ಅಭಿವೃದ್ಧಿ ಮಾದರಿಗಳು ಈ ಸಮಾಜದೊಳಗಿನ ಸಾಮಾಜಿಕ ವೈರುಧ್ಯಗಳನ್ನು ಬಗೆಹರಿಸಿಕೊಳ್ಳುತ್ತಲೇ, ತಳಸ್ತರದವರೆಗಿನ ಸಮುದಾಯಗಳನ್ನು ತನ್ನ ಹಾದಿಯಲ್ಲಿ ಹೊತ್ತೊಯ್ಯುತ್ತವೆ. ರಾಜಕಾರಣ
ಭಾರತ ಇಂದು ಇಂತಹ ಸನ್ನಿವೇಶವನ್ನು ಎದುರಿಸುತ್ತಿದೆ. ಪಂಜಾಬಿ ಭಾಷೆಯ ಆಡುಮಾತಿನಲ್ಲಿ ಪ್ರಚಲಿತವಾಗಿರುವ ಒಂದು ನುಡಿಗಟ್ಟು “ಸಬ್ ಚಂಗಾ ಸಿ” ಅಂದರೆ ʼಎಲ್ಲವೂ ಚೆನ್ನಾಗಿದೆʼ , All is well ಎಂದರ್ಥ. ಕಳೆದ ಹತ್ತು ವರ್ಷಗಳಲ್ಲಿ ಭಾರತ ಅನುಸರಿಸಿರುವ ಆರ್ಥಿಕತೆಯ ಹಾದಿಯಲ್ಲಿ ಈ ನುಡಿಗಟ್ಟು ಹೆಚ್ಚು ಪ್ರಚಾರ ಪಡೆದುಕೊಂಡಿದ್ದು, ಕೋವಿದ್ ಸಂದರ್ಭದ ಅಪಾರ ಪ್ರಾಣಹಾನಿಗಳ ನಡುವೆಯೂ ಇದನ್ನು ವ್ಯಂಗ್ಯೋಕ್ತಿಯಾಗಿ ಬಳಸಲಾಗಿತ್ತು. ರಾಜಕಾರಣ
ಒಂದರ್ಥದಲ್ಲಿ ಈ ನುಡಿಗಟ್ಟು ನವ ಉದಾರವಾದಿ ಆರ್ಥಿಕತೆಯ ಮೂಲ ಮಂತ್ರವಾಗಿರುವುದನ್ನೂ ಗಮನಿಸಬಹುದು. ಮೇಲ್ನೋಟಕ್ಕೆ ಕಾಣುವ ಸೌಂದರ್ಯಕ್ಕೂ ಆಂತರಿಕವಾಗಿ ಸಮಾಜವನ್ನು ಕಾಡುವ ಬಡತನ, ಹಸಿವು, ನಿರುದ್ಯೋಗ, ಅಸಮಾನತೆಗಳಿಗೂ ಇರುವ ವ್ಯತ್ಯಾಸ ಹೊರ ಸಮಾಜಕ್ಕೆ ಕಾಣದ ಹಾಗೆ ಬಂಡವಾಳಶಾಹಿ ವ್ಯವಸ್ಥೆಯು ಜನಸಾಮಾನ್ಯರನ್ನು ಭ್ರಮಾಧೀನವಾಗಿಸುತ್ತದೆ. ಅಲ್ಲಿ ʼಸಬ್ ಚಂಗಾ ಸಿʼ ನುಡಿಗಟ್ಟು ವೇದಮಂತ್ರವಾಗಿಬಿಡುತ್ತದೆ. ರಾಜಕಾರಣ
ಆದರೆ ಈ ಅರ್ಥವ್ಯವಸ್ಥೆಯಲ್ಲಿ ಬಂಡವಾಳ ಮತ್ತು ಬಂಡವಾಳಿಗರು ಸೃಷ್ಟಿಸುವ ಅಸಮಾನತೆಗಳು ಸಮಾಜದ ಬಹುಸಂಖ್ಯಾತ ವರ್ಗವನ್ನು ಕಾಡುತ್ತಲೇ ಹೋಗುತ್ತವೆ. ಇಲ್ಲಿ ತಮ್ಮ ನಿತ್ಯಬದುಕು ಸವೆಸುವ ಕೋಟ್ಯಂತರ ಶ್ರಮಜೀವಿಗಳು ಸುಸ್ಥಿರ ಬದುಕಿನ ಕಲ್ಪನೆಯೂ ಇಲ್ಲದೆ ನಿರಂತರ ಸಂಘರ್ಷದಲ್ಲಿರುತ್ತಾರೆ. ಈ ತಳಮಟ್ಟದ ಸಮಾಜದಲ್ಲಿ ಉಂಟಾಗುವ ತಲ್ಲಣ, ತಳಮಳಗಳ ಬಗ್ಗೆ ಗಮನಹರಿಸುವ ವ್ಯವಧಾನ ಇರಲೇಬೇಕಾದ ಪ್ರಜಾಪ್ರಭುತ್ವದಲ್ಲಿ, ಸಂವಿಧಾನಬದ್ಧ ಆಳ್ವಿಕೆಯಲ್ಲಿ ಬೂರ್ಷ್ವಾ (ಬಂಡವಾಳಿಗ) ರಾಜಕೀಯ ಪಕ್ಷಗಳು ಬಂಡವಾಳಶಾಹಿ ಅಪೇಕ್ಷಿಸುವ ಬಂಡವಾಳ ಕ್ರೋಢೀಕರಣ ಮತ್ತು ಒಂದು ಸಣ್ಣ ವರ್ಗದ ಸಂಪತ್ತಿನ ಸಮೃದ್ಧಿಯನ್ನೇ ಕೇಂದ್ರೀಕರಿಸಿದಾಗ, ಅಲ್ಲಿ ಭ್ರಷ್ಟಾಚಾರ ಮತ್ತು ಅಕ್ರಮ ಸಂಪತ್ತಿನ ಕ್ರೋಢೀಕರಣ ತೀವ್ರವಾಗುತ್ತಾ ಹೋಗುತ್ತದೆ. ಭಾರತ ಇಂತಹ ಒಂದು ಸನ್ನಿವೇಶವನ್ನು ಎದುರಿಸುತ್ತಿದೆ. ರಾಜಕಾರಣ
ಇದನ್ನೂ ಓದಿ: ಮಹಿಳೆ ಮೇಲಿನ ದೌರ್ಜನ್ಯ ಕ್ಷಮಿಸಲು ಅಸಾಧ್ಯ: ಪ್ರಧಾನಿ ಮೋದಿ
ಆಳ್ವಿಕೆಯ ಭ್ರಷ್ಟ ಹಾದಿಗಳು
ಹಾಗಾಗಿಯೇ ಆಡಳಿತ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಎನ್ನುವುದು ಪ್ರಜಾಪ್ರಭುತ್ವದ ದೇಹದ ಮೇಲಾಗಿರುವ ಗಾಯದಂತೆ ಅಥವಾ ಅದರ ಒಡಲೊಳಗಿನ ವ್ರಣದಂತೆ ಕಾಣದೆ, ಕೇವಲ ಮೇಲ್ಪದರದ ಸಮಸ್ಯೆಯಾಗಿ ಕಾಣತೊಡಗಿದೆ. ಸಮಾಜವಾದಿ ಹಿನ್ನೆಲೆ, ಸಾಮಾಜಿಕ ನ್ಯಾಯದ ಪರಿಕಲ್ಪನೆ, ಸಂವಿಧಾನಬದ್ಧತೆಯ ಚೌಕಟ್ಟಿನಲ್ಲಿ ಕಳೆದ ವರ್ಷ ಅಧಿಕಾರ ವಹಿಸಿಕೊಂಡ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಈ ಒಡಲ ವ್ರಣವನ್ನು ಈಗ ಬಹಿರಂಗಗೊಳಿಸಲು ಯತ್ನಿಸುತ್ತಿದೆ. ಏಕೆಂದರೆ ಈ ಸರ್ಕಾರದ ಮೇಲಿನ ಗುರುತರ ಭ್ರಷ್ಟಾಚಾರ ಆರೋಪಗಳು ಸರ್ಕಾರವನ್ನು ಅಸ್ಥಿರಗೊಳಿಸುವ ಹಂತ ತಲುಪಿದೆ. ಮುಡಾ ಮತ್ತು ವಾಲ್ಮೀಕಿ ಹಗರಣಗಳು ಭ್ರಷ್ಟಾಚಾರದ ಸರ್ವವ್ಯಾಪಿ-ಸಾರ್ವಕಾಲಿಕತೆಯನ್ನು ಸಾರಿ ಹೇಳುತ್ತಿರುವಾಗಲೇ, ಈ ಭ್ರಷ್ಟ ಹಾದಿಗಳೇನೂ ಅಪರೂಪವಲ್ಲ ಎಂದು ನಿರೂಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹಿಂದಿನ ಸರ್ಕಾರಗಳ ಅಕ್ರಮಗಳನ್ನು ಹೊರತೆಗೆಯುತ್ತಿದೆ. ರಾಜಕಾರಣ
ಮುಡಾ-ವಾಲ್ಮೀಕಿ ಹಗರಣಗಳಲ್ಲಿ ಅಪರಾಧಿ ಯಾರಾಗುತ್ತಾರೆ ಎಂಬ ಪ್ರಶ್ನೆಯನ್ನು ಬದಿಗಿಟ್ಟು ನೋಡಿದಾಗ ಅಲ್ಲಿ ಕಾಣುವುದು ಕಾರ್ಪೋರೇಟ್ ಮಾರುಕಟ್ಟೆ ಆರ್ಥಿಕತೆಯು ಸೃಷ್ಟಿಸಿರುವ ಭ್ರಷ್ಟತೆಯ ಭ್ರೂಣಗಳು. ನವ ಉದಾರವಾದದ ಸಂದರ್ಭದಲ್ಲಿ ಆಡಳಿತಾರೂಢ ಸರ್ಕಾರಗಳು ಹೇಗೆ ಕಾರ್ಪೋರೇಟ್ ಮಾರುಕಟ್ಟೆಯ ಹಿತಾಸಕ್ತಿಗಳನ್ನು ರಕ್ಷಿಸಲು ಕಟಿಬದ್ಧವಾಗಿರುತ್ತವೆ ಎನ್ನುವುದಕ್ಕೆ ಜಿಂದಾಲ್ ಪ್ರಕರಣ ಒಂದು ಸ್ಪಷ್ಟ ನಿದರ್ಶನ. 2005ರಲ್ಲಿ ಧರಂಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರ ತೋರಣಗಲ್ ಬಳಿ ಇರುವ 2000 ಎಕರೆ ಭೂಮಿಯನ್ನು ಜಿಂದಾಲ್ ಸೌತ್ ವೆಸ್ಟ್ ಐರನ್ ಅಂಡ್ ಸ್ಟೀಲ್ ಕಂಪನಿಗೆ ಎಕರೆಗೆ 90 ಸಾವಿರ ರೂಗಳ ದರದಲ್ಲಿ ಹಂಚಿಕೆ ಮಾಡಲು ಒಪ್ಪಿಗೆ ಸೂಚಿಸುತ್ತದೆ. 2006-07ರಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಈ ಭೂಮಿಯನ್ನು ಆರುವರ್ಷಗಳ ಭೋಗ್ಯಕ್ಕೆ ನೀಡಲು ಮಂಜೂರಾತಿ ದೊರೆಯುತ್ತದೆ. ಇದೇ ಅವಧಿಯಲ್ಲಿ ಸಮೀಪದ ಮುಸೇನಾಯಕಹಳ್ಳಿಯ 1666.73 ಎಕರೆ ಭೂಮಿಯನ್ನು ಎಕರೆಗೆ 1.22 ಲಕ್ಷ ರೂಗಳಂತೆ ಹಂಚಿಕೆ ಮಾಡಲಾಗುತ್ತದೆ.
2015ರ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಈ ಪ್ರಸ್ತಾವನೆಗೆ ಕೆಲವು ಆಕ್ಷೇಪಗಳೊಂದಿಗೆ ಒಪ್ಪಿಗೆ ನೀಡುತ್ತದೆ. 2019ರಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಒಟ್ಟು 3666 ಎಕರೆ ಜಮೀನನ್ನು ಎಕರೆಗೆ 1.22 ಲಕ್ಷ ರೂಗಳಂತೆ ಜಿಂದಾಲ್‌ಗೆ ಮಾರಾಟ ಮಾಡಲು ಒಪ್ಪಿಗೆ ಸೂಚಿಸಲಾಗುತ್ತದೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ನಾಯಕರಿಂದ ತೀವ್ರ ವಿರೋಧವೂ ವ್ಯಕ್ತವಾಗುತ್ತದೆ. ಬಿಜೆಪಿ ಯಡಿಯೂರಪ್ಪ ನೇತೃತ್ವದಲ್ಲಿ ಪ್ರತಿಭಟನೆಯನ್ನೂ ನಡೆಸುತ್ತದೆ. 2019ರ ಜೂನ್ ವೇಳೆಗೆ ಪ್ರಸ್ತಾವವನ್ನು ಪರಿಗಣಿಸದಿರಲು ಸರ್ಕಾರ ನಿರ್ಧರಿಸುತ್ತದೆ. 2021ರಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಈ ಜಮೀನನ್ನು ಲೀಸ್ ಕಂ ಸೇಲ್ ಅಂದರೆ ಭೋಗ್ಯದ ರೂಪದಲ್ಲಿ ಮಾರಾಟ ಮಾಡಲು ಒಪ್ಪಿಗೆ ಸೂಚಿಸುತ್ತದೆ. ಆದರೆ ಕಾಂಗ್ರೆಸ್-ಬಿಜೆಪಿ ಶಾಸಕರ ವಿರೋಧಕ್ಕೆ ಮಣಿದು 2021ರ ಮೇ 7ರಂದು ಬಿಜೆಪಿ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯುತ್ತದೆ. (ಪ್ರಜಾವಾಣಿ ವರದಿ 23-ಆಗಸ್ಟ್ 2024).
ಈಗ 2024ರಲ್ಲಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸಚಿವ ಸಂಪುಟ ಈ ಜಮೀನಿನ ಮಾರಾಟಕ್ಕೆ ಮತ್ತೊಮ್ಮೆ ಒಪ್ಪಿಗೆ ಸೂಚಿಸಿದೆ. ತೋರಣಗಲ್ ಸಮೀಪದ 2000 ಎಕರೆ ಜಮೀನನ್ನು ತಲಾ 1.22 ಲಕ್ಷ ರೂ, ಮುಸೇನಾಯಕಹಳ್ಳಿಯ ಜಮೀನನ್ನು ತಲಾ 1.50 ಲಕ್ಷ ರೂ ದರದಲ್ಲಿ ಜಿಂದಾಲ್ ಕಂಪನಿಗೆ ಮಾರಾಟ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಇಡೀ ವ್ಯವಹಾರದ ಫಲಾನುಭವಿ ಜಿಂದಾಲ್ ಎಂಬ ಕಾರ್ಪೋರೇಟ್ ಉದ್ದಿಮೆ. 19 ವರ್ಷಗಳ ಕ್ರೊನಾಲಜಿಯನ್ನು ಗಮನಿಸಿದರೆ ಅರ್ಥವಾಗುವುದೇನು ? ಬಂಡವಾಳಶಾಹಿ ಅರ್ಥವ್ಯವಸ್ಥೆಯಲ್ಲಿ ಕಾರ್ಪೋರೇಟ್ ಮಾರುಕಟ್ಟೆ ಮತ್ತು ಅದರ ವಾರಸುದಾರರು ಆಳುವ ವರ್ಗಗಳ ವಿಶ್ವಾಸ ಮತ್ತು ಔದಾರ್ಯಕ್ಕೆ ಸದಾ ಪಾತ್ರರಾಗಿರುತ್ತಾರೆ, ಎಂದಲ್ಲವೇ ? ಮತ್ತೊಂದೆಡೆ ಸಾಮಾನ್ಯ ನಾಗರಿಕರು ಊಹಿಸಿಕೊಳ್ಳಲೂ ಆಗದ ಅಗ್ಗದ ದರಕ್ಕೆ ಜಮೀನು ಕಾರ್ಪೋರೇಟ್ ಉದ್ದಿಮೆಗೆ ಮಾರಾಟವಾಗುತ್ತದೆ. ಸಾಂದರ್ಭಿಕ ಪರ-ವಿರೋಧ-ಪ್ರತಿರೋಧ-ಪ್ರತಿಭಟನೆಗಳ ಹೊರತಾಗಿಯೂ ಅಂತಿಮವಾಗಿ ಮಾರುಕಟ್ಟೆ ಜಯಶಾಲಿಯಾಗುತ್ತದೆ.
ಹಗರಣಗಳ ವಾಸ್ತವಿಕ ನೆಲೆಗಳು
ಈಗ ರಾಜ್ಯದಲ್ಲಿ, ಹೊರಬಿದ್ದಿರುವ ಭ್ರಷ್ಟಾಚಾರ ಪ್ರಕರಣಗಳನ್ನು ಗಮನಿಸಿದಾಗ ಬಂಡವಾಳಶಾಹಿ ತನ್ನ ಒಡಲಲ್ಲಿ ಎಷ್ಟೊಂದು ಅಕ್ರಮ ಭ್ರೂಣಗಳನ್ನು ಅವಿಸಿಟ್ಟಿರುತ್ತದೆ ಎಂದು ಅರ್ಥವಾಗುತ್ತದೆ.
ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಕಾಂಗ್ರೆಸ್ ಸರ್ಕಾರ 2018-23ರ ಬಿಜೆಪಿ ಆಳ್ವಿಕೆಯಲ್ಲಿ ನಡೆದ ಕಿಯೋನಿಕ್ಸ್ ಹಗರಣವನ್ನು ಹೊರತೆಗೆದಿದೆ. ಈ ಪ್ರಕರಣದಲ್ಲಿ 400 ಕೋಟಿ ರೂಗಳಿಗೂ ಹೆಚ್ಚಿನ ಅಕ್ರಮ ನಡೆದಿರುವುದಾಗಿ ಹೇಳಲಾಗಿದೆ. 2021-22ರಲ್ಲಿ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದಲ್ಲಿ ನಡೆದ ಭ್ರಷ್ಟಾಚಾರದ ತನಿಖೆಯನ್ನು ಚುರುಕುಗೊಳಿಸಲಾಗಿದೆ. ಬಿಜೆಪಿ ಆಳ್ವಿಕೆಯಲ್ಲಿ ದೇವರಾಜ ಅರಸು ಟ್ರಕ್ ಟರ್ಮಿನಲ್ ನಿರ್ಮಾಣದಲ್ಲಿ ನಡೆದಿದೆ ಎನ್ನಲಾದ 47 ಕೋಟಿ ರೂಗಳ ಪ್ರಕರಣವನ್ನು ಹೊರಗೆಳೆಯಲಾಗಿದೆ. ಈಗ ಕೇಂದ್ರ ಸಚಿವರಾಗಿರುವ ಕುಮಾರಸ್ವಾಮಿ 2007ರಲ್ಲಿ ಸಾಯಿ ವೆಂಕಟೇಶ್ವರ ಮಿನರಲ್ ಕಂಪನಿಗೆ ಗಣಿಗಾರಿಕೆ ನಡೆಸಲು 550 ಎಕರೆ ಅರಣ್ಯ ಜಮೀನು ಮಂಜೂರಾತಿ ಮಾಡಿರುವುದಾಗಿ ಲೋಕಾಯುಕ್ತ ವರದಿಯಲ್ಲಿ ಹೇಳಲಾಗಿದ್ದು 2017ರಲ್ಲೇ ಸುಪ್ರೀಂಕೋರ್ಟ್ ಲೋಕಾಯುಕ್ತ ಎಸ್‌ಐಟಿ ತನಿಖೆಗಾಗಿ ಅದೇಶಿಸಿತ್ತು. ಈ ಪ್ರಕರಣ ಈಗ ಮತ್ತೊಮ್ಮೆ ಮುನ್ನಲೆಗೆ ಬಂದಿದೆ.
ಇಷ್ಟೇ ಅಲ್ಲದೆ ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಮಾಡಲಾಗಿದ್ದ 40 ಪರ್ಸೆಂಟ್ ಕಮಿಷನ್ ಆರೋಪಗಳು ನ್ಯಾ. ನಾಗಮೋಹನ್ ದಾಸ್ ಸಮಿತಿಯಿಂದ ತನಿಖೆಗೊಳಗಾಗುತ್ತಿದ್ದು ಇದನ್ನು ಚುರುಕುಗೊಳಿಸಲಾಗಿದೆ. ಬೊಮ್ಮಾಯಿ ಸರ್ಕಾರದ ಅವಧಿಯಲ್ಲಿ ನಡೆಸಿದ್ದ ಬಿಟ್ ಕಾಯಿನ್ ಹಗರಣ ಮತ್ತು ಕೋವಿದ್ ಸಮಯದ 2000 ಕೋಟಿ ರೂಗಳ ವೈದ್ಯಕೀಯ ಕಿಟ್ ಹಗರಣಗಳಿಗೂ ಜೀವ ನೀಡಲು ಸಂಪುಟ ನಿರ್ಧರಿಸಿದೆ. ಈ ಭ್ರಷ್ಟಾವತಾರದ ವಾತಾವರಣದ ನಡುವೆಯೇ ಮೂರು ವರ್ಷಗಳ ಹಿಂದೆ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಸಂಭವಿಸಿದ ಆಕ್ಷಿಜನ್ ದುರಂತದ ಪ್ರಕರಣಕ್ಕೂ ಜೀವ ಬಂದಿದೆ. ಇಲ್ಲಿ ಜೀವ ಕಳೆದುಕೊಂಡ 24 ಅಮಾಯಕರು ಈಗಾಗಲೇ ನಮ್ಮ ನೆನಪಿನಿಂದ ಅಳಿಸಿಹೋಗಿರುತ್ತಾರೆ. ಆದರೆ ಇಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಜೀವ ಬಂದಿದೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಪೋಕ್ಸೋ ಪ್ರಕರಣದಲ್ಲಿ ಕೋರ್ಟ್ ತಡೆಯಾಜ್ಞೆ ತೆರೆದು ಕಾನೂನು ಪ್ರಕ್ರಿಯೆ ಆರಂಭಿಸುವಂತೆ ಸಚಿವ ಸಂಪುಟ ಸೂಚಿಸಿದೆ.
ಈ ಎಲ್ಲ ಬೆಳವಣಿಗೆಗಳ ತಿರುಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ನಮಗೆ ಕಾಣುವುದು ಭಾರತದ ಪ್ರಜಾಪ್ರಭುತ್ವದ ಅಂತರಾಳದಲ್ಲಿ ಒಂದು ವ್ರಣವಾಗಿ ಪರಿಣಮಿಸಿರುವ ಭ್ರಷ್ಟಾಚಾರ ಎಂಬ ಗಾಯ. ಮುಡಾ-ವಾಲ್ಮೀಕಿ ಹಗರಣಗಳಿಂದ ಸರ್ಕಾರಕ್ಕೆ ಸಂಚಕಾರ ಎದುರಾಗಬಹುದು ಎಂಬ ಆತಂಕದಲ್ಲೇ ರಾಜ್ಯ ಕಾಂಗ್ರೆಸ್ ಸರ್ಕಾರ ಈ ಹಳೆಯ ಕಡತಗಳನ್ನು ಮತ್ತೊಮ್ಮೆ ಮುನ್ನಲೆಗೆ ತಂದಿದೆ. ಇದರಿಂದ ಸರ್ಕಾರ ಏನು ಹೇಳಲಿಚ್ಛಿಸಿದೆ ? ನಮ್ಮ ಆಳ್ವಿಕೆಯಲ್ಲಿ ನಡೆಯುವ ಭ್ರಷ್ಟಾಚಾರ-ಅಕ್ರಮಗಳನ್ನು ಹೊರಹಾಕಿದರೆ ನಾವೂ ಹಿಂದಿನ ಸರ್ಕಾರಗಳ ಅಕ್ರಮಗಳನ್ನು ಹೊರತೆಗೆಯುತ್ತೇವೆ ಎಂದರ್ಥವೇ ? ಈ ಮುಯ್ಯಿ ತೀರಿಸಿಕೊಳ್ಳುವ ಭರದಲ್ಲಿ ಅಧಿಕಾರ ರಾಜಕಾರಣದ ಗರ್ಭದಲ್ಲಡಗಿರುವ ಭ್ರಷ್ಟತೆಯ ಎಲ್ಲ ಭ್ರೂಣಗಳನ್ನೂ ಹೊರಹಾಕಲು ಸರ್ಕಾರ ಮುಂದಾಗಿದೆ. ಅಂದರೆ ಒಂದು ವೇಳೆ ಮುಡಾ-ವಾಲ್ಮೀಕಿ ಹಗರಣಗಳು ಬೆಳಕು ಕಾಣದೆ ಹೋಗಿದ್ದರೆ?
ಈಗ ಸಚಿವ ಸಂಪುಟ ತನಿಖೆಯನ್ನು ಚುರುಕುಗೊಳಿಸಲು ನಿರ್ಧರಿಸಿರುವ ಭ್ರಷ್ಟಾಚಾರದ ಹಗರಣಗಳು ಕಳೆದ 15 ತಿಂಗಳ ಆಳ್ವಿಕೆಯಲ್ಲಿ ಸರ್ಕಾರದ ಗಮನಕ್ಕೆ ಬಂದಿರಲಿಲ್ಲವೇ ? ಈ ಹಗರಣಗಳನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ದು ಆಡಳಿತವನ್ನು ಸ್ವಚ್ಚಗೊಳಿಸಬೇಕು ಎಂಬ “ಘನ ಉದ್ದೇಶ” ಸರ್ಕಾರಕ್ಕೆ ಇರಲಿಲ್ಲವೇ? ರಾಜಕೀಯ ವಿರೋಧಕ್ಕಾದರೂ ಇದನ್ನು ಮಾಡಬಹುದಿತ್ತಲ್ಲವೇ. ತನ್ನ ಸ್ಥಾನ ಅಲುಗಾಡಿದ ಕೂಡಲೇ ಹಿಂದಿನ ಸರ್ಕಾರದ ಅಕ್ರಮಗಳು ನೆನಪಾದವೇ ? ಇದು ಬಂಡವಾಳಶಾಹಿ ನಿರ್ದೇಶಿಸುವ ಪ್ರಜಾಪ್ರಭುತ್ವ ಆಳ್ವಿಕೆಯ ಒಂದು ವಿಧಾನ. ಸಮಾಜವಾದಿ ಮುಖ್ಯಮಂತ್ರಿಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಸಂವಿಧಾನಕ್ಕೆ ನಿಷ್ಠೆ, ಸಾಮಾಜಿಕ ನ್ಯಾಯಕ್ಕೆ ಬದ್ಧತೆ ಹೊಂದಿದ್ದುದೇ ಆದರೆ ಈ ವೇಳೆಗೆ ಈ ಎಲ್ಲ ಭ್ರಷ್ಟಾಚಾರ ಹಗರಣಗಳೂ ತಾರ್ಕಿಕ ಅಂತ್ಯ ತಲುಪಿರಬೇಕಿತ್ತು ಅಲ್ಲವೇ ?
ಆಡಳಿತ ಸ್ವಚ್ಛತೆಯ ಅಪೇಕ್ಷೆ-ನಿರೀಕ್ಷೆ
ಸ್ವಚ್ಛ ಆಡಳಿತ, ಪ್ರಾಮಾಣಿಕ ಆಳ್ವಿಕೆ ಮತ್ತು ಸಾಂವಿಧಾನಿಕ ನೈತಿಕತೆಯನ್ನು ಅಪೇಕ್ಷಿಸುವ ನಾಗರಿಕರನ್ನು ಕಾಡುವ ಪ್ರಶ್ನೆ ಇದು. ತಮ್ಮ ದೈನಂದಿನ ಜೀವನ ಹಸನಾಗುವ ಅಥವಾ ಭವಿಷ್ಯದ ಬದುಕು ಸುಗಮವಾಗುವ ಕನಸು ಕಟ್ಟಿಕೊಳ್ಳುತ್ತಾ ಅಧಿಕಾರಕ್ಕಾಗಿ ಪೈಪೋಟಿ ನಡೆಸುವ ರಾಜಕೀಯ ಪಕ್ಷಗಳನ್ನು ಆಯ್ಕೆ ಮಾಡುವ ನಾಗರಿಕರಿಗೆ, ತಳಸಮಾಜಕ್ಕೆ ಹಾಗೂ ಅವಕಾಶವಂಚಿತ ಜನಕೋಟಿಗೆ ಯಾರು ಭ್ರಷ್ಟರು ಎಂದು ನಿಷ್ಕರ್ಷೆ ಮಾಡಲೂ ಸಾಧ್ಯವಾಗದ ಹಾಗೆ ಅಧಿಕಾರ ರಾಜಕಾರಣದ ಎಲ್ಲ ವಾರಸುದಾರ ಪಕ್ಷಗಳೂ ಸಾಲುಗಟ್ಟಿ ನಿಂತಿವೆ. ಸಮಾಜದ ಕಟ್ಟಕಡೆಯ ವ್ಯಕ್ತಿಯಿಂದಲೂ ಪ್ರಾಮಾಣಿಕತೆಯನ್ನು ಅಪೇಕ್ಷಿಸುವ ಸರ್ಕಾರಗಳು, ರಾಜಕೀಯ ಪಕ್ಷಗಳು ಈ ವ್ಯಕ್ತಿಗೆ ತಲುಪಿಸುವುದಾದರೂ ಏನನ್ನು ? ತಾವು ತಿಂದು ತೇಗಿ ಉಳಿದ ತುಣುಕುಗಳನ್ನೇ ? ಅಥವಾ ತಮ್ಮ ಸಾಮ್ರಾಜ್ಯಗಳನ್ನು ವಿಸ್ತರಿಸಿ ಸುಭದ್ರವಾಗಿ ಕಾಪಾಡಿಕೊಂಡು, ಅಳಿದುಳಿದ ಪಳೆಯುಳಿಕೆಗಳನ್ನೇ ?
ಸ್ವಾತಂತ್ರ್ಯಪೂರ್ವದ ಮಹನೀಯರ ತಾತ್ವಿಕ ನೆಲೆಗಳಲ್ಲಿ ನಿಂತು, ತತ್ವ ಸಿದ್ಧಾಂತಗಳನ್ನು ಪ್ರಮಾಣೀಕರಿಸಿ, ಸಂವಿಧಾನವನ್ನು ಆರಾಧಿಸುವುದರಿಂದ ಆಳ್ವಿಕೆಯ ಕೇಂದ್ರಗಳು ಸ್ವಚ್ಛವೂ ಆಗುವುದಿಲ್ಲ, ಪ್ರಾಮಾಣಿಕವೂ ಆಗುವುದಿಲ್ಲ. ಇದಕ್ಕೆ ಬೇಕಿರುವುದು ಸ್ವಜನಪಕ್ಷಪಾತವಿಲ್ಲದ, ಪಾರದರ್ಶಕವಾದ ಹಾಗೂ ಸ್ವ ಹಿತಾಸಕ್ತಿ ಇಲ್ಲದ ಪ್ರಾಮಾಣಿಕ-ರಾಜಕೀಯ ಇಚ್ಛಾಶಕ್ತಿ. ಹಿಂದೆ ನಡೆದ ಭೀಕರ ಪ್ರಮಾದ ಇಂದು ಮಾಡುವ ತಪ್ಪುಗಳನ್ನು ಸ್ವೀಕೃತವಾಗಿಸುವುದಿಲ್ಲ. ಅಥವಾ ಒಂದು ಪಕ್ಷದ ಭ್ರಷ್ಟಾವತಾರದ ಆಳ್ವಿಕೆ ಹಾಲಿ ಸರ್ಕಾರದ ಅಕ್ರಮ ಮಾರ್ಗಗಳಿಗೆ ಮಾನ್ಯತೆ ನೀಡುವುದಿಲ್ಲ. ಈ ವಾಸ್ತವವನ್ನು ಜನತೆ ಅರಿತಿದ್ದಾರೆ. ಆದರೆ ರಾಜಕೀಯ ಪಕ್ಷಗಳು ಅರ್ಥಮಾಡಿಕೊಳ್ಳಬೇಕಿದೆ. ಅಂತಿಮವಾಗಿ ಉಳಿಯಬೇಕಿರುವುದು ಪ್ರಜಾಪ್ರಭುತ್ವ ಎಂಬ ಉನ್ನತಾದರ್ಶದ ಆಳ್ವಿಕೆಯ ಮಾದರಿ ಮತ್ತು ಅದನ್ನು ನಿರ್ದೇಶಿಸುವ ಭಾರತೀಯ ಸಂವಿಧಾನದ ಉದಾತ್ತ ತತ್ವಗಳು. ತಮ್ಮ ಜೀವನ-ಜೀವನೋಪಾಯಕ್ಕಾಗಿಯೇ ಬೆವರಿಳಿಸಿ ದುಡಿಯುವ ಕೋಟ್ಯಂತರ ಶ್ರಮಿಕರಿಗೆ ಅಂತಿಮ ಆಶ್ರಯ ತಾಣ ಇವೆರಡೇ ಅಲ್ಲವೇ ?
ಇದನ್ನು ಭವಿಷ್ಯದ ತಲೆಮಾರಿಗಾಗಿ ಕಾಪಾಡಬೇಕು ಎಂದಾದರೆ ನಾಗರಿಕರು ಪ್ರಾಮಾಣಿಕ, ಪಾರದರ್ಶಕ, ಸಂವಿಧಾನನಿಷ್ಠ ಆಳ್ವಿಕೆಗಾಗಿ ಆಗ್ರಹಿಸಿ ಹೋರಾಡಬೇಕು. ಅಲ್ಲಿ ಅಪರಾಧಿ ಸ್ಥಾನದಲ್ಲಿ ನಿಲ್ಲುವುದು ಬಂಡವಾಳಶಾಹಿ ಮತ್ತು ಅದನ್ನು ಅನುಕರಿಸಿ ನಡೆಯುವ ರಾಜಕೀಯ ವ್ಯವಸ್ಥೆ. ಅಲ್ಲೊಂದು ಪರ್ಯಾಯ ರಾಜಕಾರಣದ ಹೊಳಹು ಕಾಣಬಹುದಾದರೆ ಇತಿಹಾಸ ನಮ್ಮನ್ನು ನೆನೆಯುತ್ತದೆ ಇಲ್ಲವಾದರೆ ಕ್ಷಮಿಸಲಾರದು.
ಇದನ್ನೂ ನೋಡಿ: “ಸಂಜೆ ಹೆಣ್ಣುಮಕ್ಕಳು ನೆಮ್ಮದಿಯಾಗಿ ಓಡಾಡಬೇಕಾದರೆ ಗಂಡಸು ಮನೆಯೊಳಗಿರಬೇಕು” ವಿಕಿಪೀಡಿಯಾ ಜಾಗೃತಿ