ಅದಾನಿ ಪ್ರಕರಣದ ತೀರ್ಪು ಮತ್ತು 2023ರಲ್ಲಿ ಸುಪ್ರಿಂ ಕೋರ್ಟ್

ಅದಾನಿ ಸಮೂಹದ ವಿರುದ್ಧದ ಭ್ರಷ್ಟಾಚಾರ ಆರೋಪಗಳ ತನಿಖೆಗೆ ವಿಶೇಷ ತನಿಖಾ ತಂಡವನ್ನು(ಎಸ್‌ಐಟಿ) ರಚಿಸುವ ಅಗತ್ಯವಿಲ್ಲ; ಹಿಂಡೆನ್‌ಬರ್ಗ್ ರಿಸರ್ಚ್ ಮತ್ತು ‘ಸಂಘಟಿತ ಅಪರಾಧ ಮತ್ತು ಭ್ರಷ್ಟಾಚಾರ ವರದಿ ಯೋಜನೆ’(ಒಸಿಆರ್‌ಪಿ) ನೀಡಿದ ವರದಿಗಳ ಆಧಾರದ ಮೇಲೆ ಅದಾನಿ ವಿರುದ್ಧ ವಿಶೇಷ ತನಿಖಾ ತಂಡವನ್ನು ರಚಿಸಬೇಕೆಂದು ಆದೇಶಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಮೇಲಾಗಿ, ಅದಾನಿ ಪ್ರಕರಣದ ತನಿಖೆಯನ್ನು ಸೆಬಿ ನಡೆಸಬಹುದು ಎಂದು ಹೇಳಿರುವ ಸುಪ್ರೀಂ ಕೋರ್ಟ್, ಸೆಬಿ ನಡೆಸಿದ ತನಿಖೆಯನ್ನು ಅನುಮಾನಿಸಲು ಯಾವುದೇ ಪುರಾವೆಗಳಿಲ್ಲ ಎಂದು ಹೇಳಿದೆ. ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ.ಪಿ. ಪರ್ಡಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠವು ನೀಡಿದ ತೀರ್ಪು ಭ್ರಷ್ಟಾಚಾರ ವಿರೋಧಿ ಹೋರಾಟಗಾರರು, ಅರ್ಥಶಾಸ್ತ್ರಜ್ಞರು ಮತ್ತು ಮಾರುಕಟ್ಟೆ ಸಂಶೋಧನಾ ಸಂಸ್ಥೆಗಳನ್ನು ಬೆಚ್ಚಿಬೀಳಿಸಿದೆ. ಅದಾನಿ

ಅದಾನಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಆಘಾತಕಾರಿ ಮತ್ತು ನಿರಾಶಾದಾಯಕವಾಗಿದೆ, ಭಾರತ ದೇಶದಲ್ಲಿ ಕಾರ್ಪೊರೇಟ್‌ಗಳು ಸರ್ಕಾರದ ಕೃಪೆ ಹೊಂದಿದ್ದರೆ ಏನು ಬೇಕಾದರೂ ಮಾಡಬಹುದು ಎಂಬ ಸ್ಥಿತಿ ಬಂದಿದೆ ಎಂದು ಈ ಬಗ್ಗೆ ಪ್ರತಿಕ್ರಿಯಿಸುತ್ತ ಅರ್ಥಶಾಸ್ತ್ರಜ್ಞ ಮತ್ತು ಕೇರಳದ ಮಾಜಿ ಹಣಕಾಸು ಮಂತ್ರಿ ಡಾ. ಥಾಮಸ್ ಐಸಾಕ್ ಟಿಪ್ಪಣಿ ಮಾಡಿದ್ದಾರೆ. ಅದಾನಿ

ಏನಿದು ಅದಾನಿ ಪ್ರಕರಣ?

ಅದಾನಿ ಆಸ್ತಿ 2014 ರಲ್ಲಿ 0.5 ಲಕ್ಷ ಕೋಟಿಯಿಂದ 2022 ರ ವೇಳೆಗೆ 11.44 ಲಕ್ಷ ಕೋಟಿಗೆ – 23 ಪಟ್ಟು ಹೆಚ್ಚಳವಾಗಿದೆ. 2021-22ರಲ್ಲಿ ಪ್ರತಿ ದಿನ ಅವರ ಆಸ್ತಿ 1,600 ಕೋಟಿ ರೂ.ನಂತೆ ಏರಿದೆ. ಇದರಲ್ಲಿ ಸಿಂಹಪಾಲು ಷೇರು ಬೆಲೆ ಏರಿಕೆಗಳದ್ದು. ಈ ಏರಿಕೆಗೂ ವಾಸ್ತವಿಕ ಹಣಕಾಸು ಸನ್ನಿವೇಶಕ್ಕೂ ಏನೇನೂ ಸಂಬಂಧವಿಲ್ಲ. ವಿದೇಶದಲ್ಲಿರುವ ಬೇನಾಮಿ ಕಂಪನಿಗಳ ಮೂಲಕ ಷೇರು ಮಾರುಕಟ್ಟೆಯಲ್ಲಿ ಶೇರುಗಳ ಬೆಲೆ ಕೃತಕವಾಗಿ ಏರಿಕೆ ಮಾಡಿದ್ದರಿಂದ ಈ ಏರಿಕೆ ಆಗಿತ್ತಷ್ಟೇ. ಕಂಪನಿಯ ಪ್ರವರ್ತಕರು ಗರಿಷ್ಠ 75% ಷೇರುಗಳನ್ನು ಹೊಂದಬಹುದು. ಆದರೆ ಆ ಬೇನಾಮಿ ಕಂಪನಿ ವಹಿವಾಟುಗಳನ್ನೂ ಗಣನೆಗೆ ತೆಗೆದುಕೊಂಡರೆ ಅದಾನಿ ಈ ಕಾನೂನನ್ನು ಉಲ್ಲಂಘಿಸಿದ್ದಾರೆ ಎಂಬುದು ಈ ಸಮೂಹದ ಮೇಲಿರುವ ಆರೋಪ. ವಿದೇಶಗಳಲ್ಲಿ ಸ್ಥಾಪಿಸಿರುವ ಬೇನಾಮಿ ಕಂಪನಿಗಳ ಹಣವನ್ನು ರೌಂಡ್ ಟ್ರಿಪ್ಪಿಂಗ್ ಮೂಲಕ ಸಂಗ್ರಹಿಸಲಾಗಿದೆ ಎಂಬ ಆರೋಪವೂ ಇದೆ. ಅದಾನಿ

ನಯಾ ಕಾನೂನ್ ‘ಸೆಲ್ಫಿ ಬೂತ್!’ ಕೃಪೆ: ಸತೀಶ ಆಚಾರ್ಯ, ಫೇಸ್‌ಬುಕ್

“ಸೆಬಿ ಈ ಆರೋಪಗಳ ತನಿಖೆ ಆರಂಭಿಸಿತ್ತು. ಆದರೆ ಮೋದಿ ಅಧಿಕಾರಕ್ಕೆ ಬರುತ್ತಿದ್ದಂತೆ ಈ ತನಿಖೆಗಳು ನಿಂತು ಹೋದವು. ಹಿಂಡೆನ್‌ಬರ್ಗ್ ರಿಸರ್ಚ್ ಸಂಸ್ಥೆ ಈ ಮೋಸಗಳನ್ನು ಕಂಡುಹಿಡಿಯಿತು. ಅದು ನಿರೀಕ್ಷಿಸಿದಂತೆ ಅದರ ವರದಿ ಬಿಡುಗಡೆಯೊಂದಿಗೆ ಅದಾನಿ ಸಂಕಷ್ಟ ಶುರುವಾಯಿತು. ನಿಜ, ಹಿಂಡೆನ್‌ಬರ್ಗ್ ಕೂಡ ಅದರಿಂದ ಲಾಭವನ್ನು ಗಳಿಸಿತು. ಸುಪ್ರೀಂ ಕೋರ್ಟ್ ಈಗ ಇಷ್ಟು ದಿನ ಯಾವುದೇ ತೃಪ್ತಿಕರ ತನಿಖೆ ನಡೆಸದೆ ಅದಾನಿಯನ್ನು ಉಳಿಸಲು ಯತ್ನಿಸುತ್ತಿರುವ ಸೆಬಿಯ ತನಿಖೆಯೇ ಸಾಕಾಗಿದೆ, ಬೇರೆ ಯಾವುದೇ ವಿಶೇಷ ತನಿಖೆ ಅಗತ್ಯವಿಲ್ಲ ಎಂದು ಹೇಳಿದ್ದು, ಈ ನಿರ್ಧಾರವು ಸುಪ್ರೀಂ ಕೋರ್ಟ್ ನೇಮಿಸಿದ ತನಿಖಾ ತಂಡದ ತೀರ್ಮಾನಗಳಿಗೂ ವಿರುದ್ಧವಾಗಿದೆಯಷ್ಟೇ ಅಲ್ಲ, ತನಿಖೆಯಲ್ಲಿ ಸಿಕ್ಕ ಅಪರಾಧಗಳನ್ನು ಮುಚ್ಚಿಹಾಕಲು ಸೆಬಿ ಮಾಡಿದ ತಿದ್ದುಪಡಿಗಳಿಗೂ ಅನುಮೋದನೆ ನೀಡಿದೆ” ಎನ್ನುತ್ತಾರೆ ಥಾಮಸ್ ಐಸಾಕ್. ಅದಾನಿ

ಹಿಂಡೆನ್‌ಬರ್ಗ್ ರಿಸರ್ಚ್ ಬಗ್ಗೆಯೇ ತನಿಖೆ ಮಾಡಲು ಕೇಂದ್ರ ಸರ್ಕಾರಕ್ಕೆ ಅನುಮತಿ ನೀಡಿರುವುದು ವಿಸ್ಮಯಕಾರಿ ಸಂಗತಿ ಎಂದಿರುವ ಪ್ರೊ. ಐಸಾಕ್, ಹಿಂಡೆನ್ ಬರ್ಗ್ ವರದಿಯನ್ನು ಪ್ರಕಟಿಸಿದ ಮಾಧ್ಯಮಗಳಿಗೆ ಪಾಠ ಕಲಿಸಬೇಕೆಂದು ಮೋದಿ ಸರ್ಕಾರ ಈ ತೀರ್ಪನ್ನು ಬಳಸಿಕೊಳ್ಳಬಹುದು ಎಂಬ ಆತಂಕವನ್ನು ವ್ಯಕ್ತಪಡಿಸಿದ್ದಾರೆ.

 

ಇದನ್ನು ಓದಿ : ಗಾಜಾ ಹತ್ಯಾಕಾಂಡ | 42 ಪತ್ರಕರ್ತರು ಸಾವು; 37 ಜನರು ಪ್ಯಾಲೆಸ್ತೀನಿಯನ್ನರು

ಸುಪ್ರಿಂ ಕೋರ್ಟ್ ಮತ್ತು ಮೋದಿ ಸರಕಾರ

ಈ ತೀರ್ಪು ಸುಪ್ರಿಂ ಕೋರ್ಟ್ ಬಗ್ಗೆ ಎದ್ದು ಬರುತ್ತಿರುವ ಸಂದೇಹಗಳನ್ನು ಬಲಗೊಳಿಸಿದಂತೆ ಕಾಣುತ್ತದೆ. “ಸುಪ್ರಿಂ ಕೋರ್ಟ್ ನಿರಾಸೆಗೊಳಿಸುವಲ್ಲಿ ಎಂದೂ ವಿಫಲವಾಗುವುದಿಲ್ಲ” ಇದು ಕೆಲವು ವಾರಗಳ ಹಿಂದೆ ಸಲಿಂಗ ವಿವಾಹ ಕುರಿತಂತೆ ಸುಪ್ರಿಂ ಕೋರ್ಟಿನ ತೀರ್ಪು ಬಂದಾಗ ಒಬ್ಬ ವಿಶ್ಲೇಷಕರು ಮಾಡಿದ್ದ ಟಿಪ್ಪಣಿ(ಅವಯ್ ಶುಕ್ಲ, ದಿ ವೈರ್, ನವಂಬರ್22). ಅದಾನಿ ಪ್ರಕರಣದ ತೀರ್ಪು ಆ ಭಾವನೆಯನ್ನು ಮತ್ತಷ್ಟು ಗಟ್ಟಿಗೊಳಿಸಿದೆ.

ಮತದಾರನಿಗೆ ತನ್ನ ಮತವನ್ನು ಹೇಗೆ ದಾಖಲಿಸಲಾಗಿದೆ ಅಥವ ಲೆಕ್ಕ ಹಾಕಲಾಗಿದೆ ಎಂದು ತಿಳಿಯುವ ಹಕ್ಕಿಲ್ಲ ಎಂದೋ, ಅಥವ ಯಾರು , ಯಾವ ರಾಜಕೀಯ ಪಕ್ಷಕ್ಕೆ ಎಷ್ಟು ವಂತಿಗೆ ನೀಡಿದ್ದಾರೆ ಎಂದು ತಿಳಿಯುವ ಹಕ್ಕು ಸಾರ್ವಜನಿಕರಿಗೆ ಇಲ್ಲ ಎಂದೋ ಸರಕಾರದ ನ್ಯಾಯವಾದಿಗಳು ಸರ್ವೋಚ್ಚ ನ್ಯಯಾಲಯದ ಸಮ್ಮುಖವೇ ಹೇಳುತ್ತಿರಲು ಸಾಧ್ಯವೆಂದರೆ, ಅದು ಅವರ ಅಥವ ಅವರು ಪ್ರತಿನಿಧಿಸುವ ಸರಕಾರದ ದುರಹಂಕಾರ ಅಥವ ಮೇರೆ ಮೀರಿದ ಆತ್ಮವಿಶ್ವಾಸವೆಂದು ಭಾವಿಸಬೇಕಾಗಿಲ್ಲ. ನಮ್ಮ ಸಾಮಾಜಿಕ, ಸಂವಿಧಾನಿಕ, ಕಾನೂನಾತ್ಮಕ ಮತ್ತು ಸಾಂಸ್ಥಿಕ ಸನ್ನಿವೇಶಗಳನ್ನು ಆಳುವ ಪಕ್ಷ ಧ್ವಂಸ ಮಾಡದಂತೆ ತಡೆಯುವಲ್ಲಿ ನ್ಯಾಯಾಂಗ ಎಂದೂ ಅಡ್ಡಿಯಾಗಿಲ್ಲ, ಬಹುಶಃ ಸರಕಾರ ಅಪ್ರಬುದ್ಧತೆ ಪ್ರದರ್ಶಿಸುತ್ತಿದ್ದರೆ, ಅದಕ್ಕೆ ಅವಕಾಶ ಮಾಡಿಕೊಡಲು, ಅನುಗ್ರಹಿಸಲು ನ್ಯಾಯಾಲಯವೂ ಹಿಂದೆ ಬಿದ್ದಿಲ್ಲ ಎಂದು ಭಾವಿಸದಿರಲು ಸಾಧ್ಯವಿಲ್ಲ ಎನ್ನುತ್ತಾರೆ ಇವರು. ಅದಾನಿ

2023ರಲ್ಲಿ ಒಂದೇ ಒಂದು ಸುಪ್ರಿಂ ಕೋರ್ಟ್ ತೀರ್ಪು ಸರಕಾರದ ವಿರುದ್ಧ ಹೋಗಿಲ್ಲ ಎಂಬ ಸಂಗತಿಯತ್ತ ಹಿರಿಯ ಸುಪ್ರಿಂ ಕೋರ್ಟ್ ನ್ಯಾಯವಾದಿ ಮತ್ತು ಮಾನವ ಹಕ್ಕುಗಳ ಹೋರಾಟಗಾರ್ತಿ ಇಂದಿರಾ ಜೈಸಿಂಗ್ ಗಮನ ಸೆಳೆದಿದ್ದಾರೆ. ಆದ್ದರಿಂದ  ‘ದನ್ನುಸೂರಜ್‍ಮುಖಿ ಕೋರ್ಟ್’ ಎನ್ನಲು ಅಡ್ಡಿಯಿಲ್ಲ ಎಂದಿದ್ದಾರೆ. (ದಿ ಲೀಫ್‌ಲೆಟ್, ಜ.2). ಸರಕಾರದ ಪ್ರಮುಖ ನಿರ್ಧಾರಗಳಿಗೆ ಬಂದ ನಾಲ್ಕು ಪ್ರಮುಖ ಸವಾಲುಗಳೆಂದರೆ, ನೋಟುರದ್ಧತಿ, ಮಹಾರಾಷ್ಟಷ್ಟ್ರದಲ್ಲಿ ರಾಜ್ಯಪಾಲರಿಂದ ಬಿಜೆಪಿ ಸರಕಾರದ ಪ್ರತಿಜ್ಞಾ ಸ್ವೀಕಾರ, ಕಲಮು 370ರ ರದ್ಧತಿ ಮತ್ತು ವಿಶೇಷ ವಿವಾಹ ಕಾಯ್ದೆಗೆ ಸವಾಲು-ಇವೆಲ್ಲವನ್ನೂ ಸರಕಾರದ ಪರವಾಗಿಯೇ ತೀರ್ಮಾನಿಸಲಾಗಿದೆ.

ಅವರು ಹೀಗೆ ಬರೆಯುವ ವೇಳೆಗೆ ಅಡಾಣಿ ಪ್ರಕರಣದ ತೀರ್ಪು ಬಂದಿರಲಿಲ್ಲ. ಈ ತೀರ್ಪು ಕೂಡ ಅದೇ ಸಾಲಿಗೆ ಸೇರಿದೆ.. ಚುನಾವಣಾ ಬಾಂಡ್ ಗೆ ಸವಾಲು ಹಾಕಿರುವ ಅರ್ಜಿಗಳ ವಿಚಾರಣೆ ಮುಗಿದಿದೆ, ತೀರ್ಪನ್ನು ಕಾದಿರಿಸಲಾಗಿದೆ ಎಂದಷ್ಟೇ ಹೇಳಬಹುದು.

2023ರಲ್ಲಿ ಸುಪ್ರಿಂ ಕೋರ್ಟ್ ಚುನಾವಣಾ ಪ್ರಜಾಪ್ರಭುತ್ವವನ್ನು, ನಮ್ಮ ಅರ್ಥವ್ಯವಸ್ಥೆಯ ಆರೋಗ್ಯವನ್ನು, ಒಕ್ಕೂಟ ತತ್ವವನ್ನು ಮತ್ತು ನಾಗರಿಕರ ಮೂಲಭೂತ ಹಕ್ಕುಗಳನ್ನು ಕಾಪಾಡುವಲ್ಲಿ ವಿಫಲವಾಗಿದೆ ಎನ್ನುತ್ತಾರೆ ಇಂದಿರಾ ಜೈಸಿಂಗ್. ನಮ್ಮ ಹಕ್ಕುಗಳನ್ನು ಇನ್ನು ಮುಂದೆ ಜಾರಿಗೊಳಿಸಲು ಸಾಧ್ಯವೇ ಇಲ್ಲವೇನೋ, ಸರಕಾರಗಳು ದಯಾಮಯ ನೀತಿ ನಿರ್ಧಾರಕರು, ಯಾವುದು ಒಳ್ಳೆಯದು ಎಂಬುದು ಅವರಿಗೆ ಗೊತ್ತು ಎಂಬ ವಿಚಾರದತ್ತ ಮರಳಿ ಹೋಗುವ ಪ್ರಯತ್ನ ನಡೆದಿದೆಯೋ ಎಂದನಿಸುತ್ತದೆ ಎಂದು ಅವರು ಹೇಳುತ್ತಾರೆ.  ಅದಾನಿ

ದೇಶದ ಮೇಲೆ ನೋಟುರದ್ಧತಿಯ ಪ್ರಭಾವವಾಗಲೀ, ಆಪರೇಷನ್ ಕಮಲಕ್ಕೆ ಒಳಗಾಗದೆ ಅಧಿಕಾರದಲ್ಲಿ ಉಳಿಯುವ ನಮ್ಮ ಚುನಾಯಿತ ಪ್ರತಿನಿಧಿಗಳ ಹಕ್ಕಾಗಲೀ, ಒಂದು ರಾಜ್ಯವನ್ನೇ ಕಾಣೆ ಮಾಡಿ ಕೇಂದ್ರಾಡಳಿತ ಪ್ರದೇಶದ ಮಟ್ಟಕ್ಕೆ ಇಳಿಸುವಲ್ಲಾಗಲೀ, ನಮ್ಮ ನ್ಯಾಯಾಲಯ ಸರಕಾರದ ವಿವೇಕಕ್ಕೆ ತಲೆಬಾಗಿದೆ, ಕೆಲವೊಮ್ಮೆ ಸರಕಾರದ ಧೋರಣೆಯಲ್ಲಿ ಹಸ್ತಕ್ಷೇಪ ಮಾಡುವುದು ನ್ಯಾಯಾಲಯದ ಕೆಲಸವಲ್ಲ ಅಥವ ‘ರಾಜಕೀಯ ಪೊದರಿನೊಳಕ್ಕೆ ಪ್ರವೇಶಿಸ ಬಯಸುವುದಿಲ್ಲ ಎಂದು ಸ್ಪಷ್ಟವಾಗಿಯೇ ಹೇಳಿದೆ ಎಂಬ ಸಂಗತಿಯತ್ತವೂ ಅವರು ಗಮನ ಸೆಳೆಯುತ್ತಾರೆ. ಅದಾನಿ

2023ರಲ್ಲಿ ಸುಪ್ರಿಂ ಕೋರ್ಟಿನ ತೀರ್ಪುಗಳ ಒಂದು ಎದ್ದು ಕಾಣುವ ಲಕ್ಷಣವೆಂದರೆ, ಕಾನೂನು ಅರ್ಜಿದಾರರ ಪರವಾಗಿದೆ ಎಂದಾಗಲೂ, ತೀರ್ಪಿನಲ್ಲಿ ಮಾತ್ರ ಅದು ಕಾಣುವುದಿಲ್ಲ ಎಂದೂ ಅವರು ಹೇಳುತ್ತಾರೆ. ಉದಾ: ಮಹಾರಾಷ್ಟçದ ರಾಜ್ಯಪಾಲರು ಹೊಸ ಸರಕಾರಕ್ಕೆ ಪ್ರತಿಜ್ಞಾವಿಧಿ ಬೋಧಿಸಿದ್ದು ಕಾನೂನಿನ ಪ್ರಕಾರ ಕೆಟ್ಟ ಸಂಗತಿ ಎಂದು ಹೇಳಿದರೂ, ಅಂತಹ ಸರಕಾರ ಅಧಿಕಾರದಲ್ಲಿ ಮುಂದುವರೆಯಲು ಬಿಡಲಾಯಿತು. ಈಗ ಮುಖ್ಯಮಂತ್ರಿ ಕಾನೂನುಬಾಹಿರವಾಗಿ ಪ್ರತಿಜ್ಞೆ ಸ್ವೀಕರಿಸಿ ಒಂದು ವರ್ಷ ಕಳೆದರೂ, ಬಿಜೆಪಿ ಆಳುವ ಪಕ್ಷವಾಗಿಯೇ ಉಳಿದಿದೆ, ಸಭಾದ್ಯಕ್ಷರು ಇನ್ನೂ ನಿರ್ಧಾರಕ್ಕೆ ಬಂದಿಲ್ಲ. ಅದಾನಿ

ಹೀಗೇಕೆ ಎಂದು ಪರೀಕ್ಷಿಸುವ ಇಂದಿರಾ ಜೈಸಿಂಗ್ ಆಳುವವರು ಸಂಪ್ರದಾಯಗಳು ಮತ್ತು ಸಂಸ್ಕೃತಿಗೆ ಮೊರೆಹೋಗುತ್ತಿರುವುದು ನ್ಯಾಯಾಂಗದ ಮೇಲೂ ನೇರ ಪ್ರಭಾವ ಬೀರಿರುವಂತೆ ಕಾಣುತ್ತದೆ, ಅವರೂ ಮೂಲಭೂತ ಹಕ್ಕುಗಳ ಮೇಲೆ ಅಡೆ-ತಡೆಗಳನ್ನು ಹಾಕುವುದನ್ನು ಅಥವ ಅವುಗಳ ಅಸ್ತಿತ್ವನ್ನೇ ಅಳಿಸುವುದನ್ನು ಸಮರ್ಥಿಸಿಕೊಳ್ಳಲು ಅದೇ ಸಂಸ್ಕೃತಿ ಮತ್ತು ಸಂಪ್ರದಾಯಗಳ ಮೊರೆ ಹೋಗಲು ಆರಂಭಿಸಿರುವಂತೆ ಕಾಣುತ್ತದೆ ಎಂದು ಖೇದ ವ್ಯಕ್ತಪಡಿಸಿದ್ದಾರೆ.

ನ್ಯಾಯ ಅನ್ಯಾಯದ ತರ್ಕ ಮತ್ತು ಅಂತಿಮ ತೀರ್ಪಿನ ನಡುವೆ ವೈರುಧ್ಯ ಅಯೋಧ್ಯಾ ತೀರ್ಪಿನೊಂದಿಗೆ ಕೊನೆಗೊಂಡಿರಬಹದು ಎಂಬ ಆಶಾಭಾವನೆಗೆ ಈಗ ಏನೂ ಆಧಾರ ಉಳಿದಿಲ್ಲ ಎನ್ನಬಹುದೇನೋ.

ಸಿಪಿಐ(ಎಂ) ಪೊಲಿಟ್‌ಬ್ಯುರೊ ಹೇಳಿರುವಂತೆ, ಈ ತೀರ್ಪಿನಿಂದ ಸುಪ್ರೀಂ ಕೋರ್ಟ್ ತನ್ನ ವಿಶ್ವಾಸಾರ್ಹತೆಯನ್ನೇನೂ ಹೆಚ್ಚಿಸಿಕೊಂಡಿಲ್ಲ.

ಇದನ್ನು ನೋಡಿ : ಹಿಟ್ & ರನ್ ಪ್ರಕರಣಗಳ ಹೊಸ ಕಾನೂನಿಗೇಕೆ ಇಷ್ಟು ವಿರೋಧ? ಚಾಲಕರಿಗೆ ಇದು ತೂಗುಕತ್ತಿಯೇ?

 

Donate Janashakthi Media

Leave a Reply

Your email address will not be published. Required fields are marked *