ಶಿಕ್ಷಣವನ್ನು ವಂಚಿಸುವ, ವಿಭಜನೆ ಸೃಷ್ಟಿಸುವ, ಸಂಪೂರ್ಣ ಕಾರ್ಪೋರೇಟೀಕರಣಗೊಳಿಸುವ ಪ್ರಕ್ರಿಯೆ ವ್ಯಾಪಕವಾಗುತ್ತಿವೆ: ಶಿಕ್ಷಣ ತಜ್ಞ ನಿರಂಜನಾರಾಧ್ಯ

ಬೆಂಗಳೂರು: ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷಗಳ ಬಳಿಕವೂ ನಮ್ಮಲ್ಲಿ ಶಿಕ್ಷಣ ಮಾಧ್ಯಮದಲ್ಲಿ ಭಾಷಾ ಗೊಂದಲವಿದೆ. ಈಗಾಗಲೇ ಅಂತರರಾಷ್ಟ್ರೀಯ ಮಟ್ಟದಲ್ಲಿ ಹಾಗೂ ಇದುವರೆಗಿನ ಎಲ್ಲಾ ಶಿಕ್ಷಣ ತಜ್ಞರು ಶಾಲಾ ಶಿಕ್ಷಣವನ್ನು ಅವರವರ ಮಾತೃ ಭಾಷೆಯಲ್ಲೇ ಕೊಡಬೇಕು ಎಂದಿದ್ದರೂ ಸಹ ಇಂದಿಗೂ, ಶಿಕ್ಷಣದಲ್ಲಿ ಅನ್ಯಭಾಷೆಯನ್ನು ಹೇರುವ ಮೂಲಕ ಯಜಮಾನಿಕೆಯನ್ನು ಸಾಧಿಸಲು ಮುಂದಾಗುತ್ತಿದ್ದಾರೆ ಎಂದು ಶಿಕ್ಷಣ ತಜ್ಞ ನಿರಂಜನಾರಾಧ್ಯ ವಿ.ಪಿ. ತಿಳಿಸಿದರು.

ರಾಜ್ಯಗಳ ಶಿಕ್ಷಣದ ಸ್ವಾಯತ್ತತೆಯ ಮೇಲೆ ಹೊಸ ರಾಷ್ಟ್ರೀಯ ಶಿಕ್ಷಣ ದಾಳಿ ವಿರೋಧಿಸಿ, ಹಿಂದೆ ಹೇರಿಕೆ ಖಂಡಿಸಿ ಹಾಗೂ  ಸಂವಿಧಾನ ಬದ್ಧ ಎಲ್ಲಾ ಭಾಷೆಗಳಲ್ಲಿ ಶಿಕ್ಷಣ ಹಕ್ಕು ರಕ್ಷಣೆಗಾಗಿ ಆಗ್ರಹಿಸಿ, ರಾಜ್ಯ ಸರ್ಕಾರದ ಕೋಮುವಾದ ಖಾಸಗೀಕರಣದ ದಾಳಿಗಳಿಂದ ಸರ್ಕಾರಿ ಶಿಕ್ಷಣ ವ್ಯವಸ್ಥೆಯ ಉಳಿವಿಗಾಗಿ ಆಗ್ರಹಿಸಿ ನಗರದ ಅಲುಮ್ನಿ ಅಸೋಸಿಯೇಷನ್ ಹಾಲ್ ನಲ್ಲಿ ಆಯೋಜಿಸಿದ್ದ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ರಾಜ್ಯ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಮುಂದುವರೆದು ಮಾತನಾಡಿದ ಅವರು, ನಮ್ಮಲ್ಲಿ ಇಂದು 7-8 ಮಾದರಿಯಲ್ಲಿ ಶಿಕ್ಷಣ ವ್ಯವಸ್ಥೆ ಇದೆ. ಅಂತರರಾಷ್ಟ್ರೀಯ ಮಟ್ಟದ ಐಬಿ ಶಾಲೆ ಶಿಕ್ಷಣ, ಐಜಿಸಿಎಸ್‌ಇ, ಸಿಬಿಎಸ್‌ಇ, ಐಸಿಎಸ್‌ಇ, ರಾಜ್ಯಗಳಲ್ಲಿ ಅಂಗ್ಲ ಶಿಕ್ಷಣ ಸಂಸ್ಥೆ, ಅರೆಬರೆ ಅಂಗ್ಲ ಶಿಕ್ಷಣ ಸಂಸ್ಥೆ, ಎಡೆಡೆ, ಸರ್ಕಾರಿ ಶಾಲೆ ಶಿಕ್ಷಣ ಸಂಸ್ಥೆ ಎಂಬ ವಿಭಜಿಸಲ್ಪಟ್ಟಿರುವ ಶಿಕ್ಷಣ ಪದ್ದತಿಯಡಿ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಇಷ್ಟೊಂದು ದೊಡ್ಡ ಮಟ್ಟದ ವಿಭಜಿತ ಶಿಕ್ಷಣ ವ್ಯವಸ್ಥೆ ಬ್ರಿಟಿಷ್‌ ಆಡಳಿತ ವ್ಯವಸ್ಥೆಯಲ್ಲಿಯೂ ಇರಲಿಲ್ಲ. ಇಂದಿಗೂ ಅಸಮಾನತೆಯನ್ನು, ಶ್ರೇಣೀಕೃತ ವ್ಯವಸ್ಥೆ, ವರ್ಗ ವಿಭಜಿತ ಶಿಕ್ಷಣವನ್ನು ಗಟ್ಟಿಗೊಳಿಸಲಾಗುತ್ತಿದೆ. ಕೇಂದ್ರವೂ ರೂಪಿಸಿರುವ ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ-2020) ಯಲ್ಲಿಯೂ ಇದೇ ವ್ಯವಸ್ಥೆಯ ಅಂಶಗಳು ಉಲ್ಲೇಖಗೊಂಡಿವೆ ಎಂದು ತಿಳಿಸಿದರು.

ಆತುರವಾಗಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸುವ ತರಾತುರಿ ನಿರ್ಧಾರ. ಪಠ್ಯಕ್ರಮ ಚೌಕಟ್ಟಿಲ್ಲದೆ ಪಠ್ಯ ಪರಿಷ್ಕರಣೆ, ಅಲ್ಪಸಂಖ್ಯಾತರ ಹೆಣ್ಣು ಮಕ್ಕಳ ಶಿಕ್ಷಣವನ್ನು ಕಸಿಯುವ ಹಿಜಾಬ್ ನಿಷೇಧ, ವೈಜ್ಞಾನಿಕ ಶಿಕ್ಷಣವನ್ನು ಅಣಿಕಿಸುವ ರೀತಿಯಲ್ಲಿ ಧ್ಯಾನ, ವೇದಗಣಿತ, ಸನಾತನ ಶಿಕ್ಷಣ ಪದ್ಧತಿ, ಶಾಲಾ ಗೋಡೆಗಳಿಗೆ ಕೇಸರಿ ಬಣ್ಣ ಇತ್ಯಾದಿ ಗೊಂದಲಗಳನ್ನು ಸರ್ಕಾರವೇ ಸೃಷ್ಟಿಸಿದೆ. ಕೋವಿಡ್ ಸೋಂಕಿನ ನಂತರ ಶಾಲೆಗಳು ಪ್ರಾರಂಭವಾದಾಗ ಮಕ್ಕಳ ಕಲಿಕೆಗೆ ತೀವ್ರ ಹಿನ್ನಡೆಯುಂಟಾಗಿದೆ. ಅದನ್ನು ತುಂಬಿಕೊಡುವ ಮೂಲಕ ಮಕ್ಕಳ ಕಲಿಕೆಯನ್ನು ಮುಖ್ಯ ವಾಹಿನಿಗೆ ತರಬೇಕೆಂದು ಹಲವು ಸಾಮಾಜಿಕ ಸಂಘಟನೆಗಳು ಸರ್ಕಾರವನ್ನು ಒತ್ತಾಯಿಸುತ್ತಲೇ ಬಂದಿದ್ದರೂ ಸರಕಾರ ನಿರ್ಲಕ್ಷ್ಯ ಮಾಡಿದೆ ಎಂದು ದೂರಿದರು.

ಸರ್ಕಾರಿ ಶಾಲೆಗಳು ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿವೆ. ಶಿಕ್ಷಣ ಹಕ್ಕು ಕಾಯ್ದೆಯಡಿ ಕನಿಷ್ಠ 8 ಮೂಲಭೂತ ಸೌಕರ್ಯಗಳನ್ನು ಗುರುತಿಸಿದರೂ ಸಹ ಶಿಕ್ಷಣ ಹಕ್ಕು ಕಾಯ್ದೆ ಜಾರಿಗೊಂಡಿದ್ದರೂ ಅವುಗಳೆ ಗುರುತಿಸಿದ ಮಾನದಂಡ ಆಧಾರದಲ್ಲಿ ಸರ್ಕಾರಿ ಶಾಲೆಗಳು ವಂಚಿತವಾಗಿವೆ. ಕರ್ನಾಟಕವು ಕನಿಷ್ಠ 8 ಮೂಲಭೂತ ಸೌಕರ್ಯಗಳು ಹೊಂದಿರುವ ಶಾಲೆಗಳ ಪರಿಸ್ಥಿತಿ ಶೇ. 23.6ರಷ್ಟು ಮಾತ್ರ ಇದೆ. ಇತರೆ ರಾಜ್ಯಗಳ ಪ್ರಮಾಣ ಹರಿಯಾಣ ಶೇ. 47.5, ತಮಿಳುನಾಡು ಶೇ. 32, ಕೇರಳ ಶೇ. 46, ಮಹಾರಾಷ್ಟ್ರ 43.2 ಹೀಗೆ ವಿವಿಧ ರಾಜ್ಯಗಳ ಸರ್ಕಾರಿ ಶಾಲೆಗಳಲ್ಲಿ ಸೌಕರ್ಯಗಳ ಪ್ರಮಾಣ ಶೇ. 35-50  ಅಸುಪಾಸಿನಲ್ಲಿದೆ. ಆದರೆ, ಕರ್ನಾಟಕದ ಪರಿಸ್ಥಿತಿ ಅತ್ಯಂತ ಶೋಚನೀಯ ಪರಿಸ್ಥಿತಿಗೆ ತಳ್ಳಪ್ಪಟ್ಟಿದೆ ಎಂದರು.

ಕೇಂದ್ರವು ಜಾರಿಗೊಳಿಸಿರುವ ಎನ್‌ಇಪಿ ವ್ಯವಸ್ಥೆ ಶಿಕ್ಷಣ ರಂಗವನ್ನು ಸಂಪೂರ್ಣವಾಗಿ ನಾಶಪಡಿಸುವ ಎಲ್ಲಾ ಅಂಶಗಳು ಅದರ ವರದಿಯಲ್ಲಿಯೇ ಅಳವಡಿಸಲಾಗಿದೆ. ಮಾತೃಭಾಷೆ ಯಿಂದ ಹಿಡಿದು ವಿವಿಧ ಎಲ್ಲಾ ವಿಚಾರಗಳಲ್ಲಿಯೂ ಎನ್‌ಇಪಿ  ಪದ್ದತಿಯೂ ಸಂಪೂರ್ಣವಾಗಿ ಶೈಕ್ಷಣಿಕ ವ್ಯವಸ್ಥೆಯ ವಿರೋಧಿ ಅಂಶಗಳೇ ಹೊಂದಿವೆ. ಆರಂಭದಲ್ಲಿ 2019ರ ಎನ್‌ಇಪಿ ಕರಡು ವರದಿಯಲ್ಲಿ ಹಿಂದಿ ಹೇರಿಕೆಯ ಎಲ್ಲಾ ಅಂಶಗಳನ್ನು ಅಳವಡಿಸಲಾಗಿತ್ತು. ನಂತರ ತೀವ್ರತರ ವಿರೋಧದಿಂದಾಗಿ ಹಿಂದಿ ಕಡ್ಡಾಯ ಎಂಬ ಅಂಶಗಳನ್ನು ಮಾರ್ಪಡುಮಾಡಲಾಗಿದೆ. ಆದರೂ ಅಂತಿಮವಾಗಿ ಹಿಂದಿ ಹೇರಿಕೆಯ ಬಹಳಷ್ಟು ಅಂಶಗಳು ಜಾರಿಯಲ್ಲಿರುವ ಎನ್‌ಇಪಿಯಲ್ಲಿದೆ ಎಂದರು.

ಹಿಂದಿ ಹೇರಿಕೆ ಎಂಬುದು ಅದು ನಿಜವಾಗಿಯೂ ಹಿಂದಿ ಭಾಷೆಯಲ್ಲ ಬದಲಾಗಿ ಮೇಲ್ವರ್ಗದ ಕೆಲವೇ ಕೆಲವು ಮಂದಿ ಮಾತನಾಡುವ ಸಂಸ್ಕೃತ ಪ್ರಣೀತ ಹಿಂದಿಯನ್ನು ಹೇರಿಕೆ ಮಾಡಲಾಗುತ್ತಿದೆ. ದೇಶದ ಸ್ವಾತಂತ್ರ್ಯ  ಸಂಸ್ಕೃತ ಪ್ರೇರಿತ ಹಿಂದಿಯನ್ನು ಅಳವಡಿಸುವ ಅಂಶಗಳು ನಿರಂತರವಾಗಿದೆ. ಸಾಗಿದೆ. ನಮಗೆ ಜನಸಾಮಾನ್ಯರ ಹಿಂದಿ ಭಾಷೆಯನ್ನು ಹೇರಿಕೆ ಮಾಡುತ್ತಿಲ್ಲ, ಬದಲಾಗಿ ಮೇಲ್ವರ್ಗದ ಸರ್ವಾಧಿಕಾರಿ ದಬ್ಬಾಳಿಕೆಯ ಅಳ್ವಿಕೆ ಮಾಡಲು ಹೊರಟಿರುವ ಕೆಲವೇ ಕೆಲವು ಮಂದಿ ಜನರ ಹಿಂದಿ ಭಾಷೆಯನ್ನು ಶಿಕ್ಷಣ ಮಾತ್ರವಲ್ಲ ಎಲ್ಲಾ ವಿಭಾಗಗಳಲ್ಲಿಯೂ ಅದನ್ನು ಹೇರುವ ಮೂಲಕ ತಮ್ಮ ಸರ್ವಾಧಿಕಾರ ಹೇರಿಕೆಯನ್ನು ಜಾರಿಗೊಳಿಸಲು ಸಿದ್ದಗೊಳಿಸಲಾಗುತ್ತಿದೆ. ಇಂದಿಗೂ ಜನಸಾಮಾನ್ಯರ ಹಿಂದಿ ಭಾಷೆ ಭಿನ್ನವಾಗಿದೆ. ಒಮ್ಮೆ ನೆಹರೂ ಅವರು ತಮ್ಮ ರೇಡಿಯೋದಲ್ಲಿ ಪ್ರಸಾರವಾದ ಇಂಗ್ಲೀಷ್‌ ಭಾಷಣವನ್ನು ಹಿಂದಿಗೆ ತರ್ಜುಮೆ ಮಾಡಿದ ವಿಧಾನ ಬಗ್ಗೆಯೇ ಪ್ರಶ್ನೆ ಮಾಡಿದ್ದರು. ಸಂಸ್ಕೃತಗೊಂಡ ಹಿಂದಿಯನ್ನು ಹೇರುತ್ತಿರುವ ಬಗ್ಗೆ ಕೆಲವು ಪುಸ್ತಕಗಳು ಬಂದಿವೆ. ಹಿಂದಿ ರಾಷ್ಟ್ರ ಭಾಷೆ, ಹಿಂದಿ ಹೇರಿಕೆ ಎಂಬ ಅದರ ಹಿಂದಿನ ರಾಜಕೀಯತೆಯನ್ನು ಅರ್ಥ ಮಾಡಿಕೊಂಡಾಗ ಮಾತ್ರ ನಾವು ನಿಜ ಸತ್ಯ ತಿಳಿಯಲಿದೆ ಎಂದು ನಿರಂಜನಾರಾಧ್ಯ ಹೇಳಿದರು.

ಇತ್ತೀಚಿನ ಅಮಿತ್‌ ಷಾ ನೇತೃತ್ವದ ಭಾಷಾ ಸಮಿತಿಯ ವರದಿಯೂ ಸಹ ಹಿಂದಿ ಅಳವಡಿಸುವ ಬಗ್ಗೆ ತನ್ನ ವರದಿಯನ್ನು ನೀಡಿದೆ. ಬ್ರಾಹ್ಮಣವಾದಿಗಳ ಮೇಲ್ವರ್ಗದ ಅಲ್ಪಸಂಖ್ಯಾತರು ಬಹುಸಂಖ್ಯಾತ ಜನರ ಮೇಲೆ ತಮ್ಮ ರಾಜತ್ವವನ್ನು ಜಾರಿಗೊಳಿಸಿಕೊಳ್ಳಲು ಈ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಒಕ್ಕೂಟ ವ್ಯವಸ್ಥೆಗೆ ಅಪಮಾನಿಸುವ, ಸಂವಿಧಾನಕ್ಕೆ ಅಗೌರವ ತೋರುವ ಮೂಲಕ ರಾಜಕೀಯಗೊಂಡಿರುವ ಹಿಂದಿನ ಹುನ್ನಾರವನ್ನು ಅರ್ಥ ಮಾಡಿಕೊಂಡಾಗ ಮಾತ್ರ ಭಾಷಾ ನೀತಿ ಬದಲಾವಣೆಯ ಅಂಶಗಳ ವಿಚಾರ ತಿಳಿಯಲಿದೆ. ವೈವಿದ್ಯತೆಯನ್ನು ಒಪ್ಪದೆ, ಎಲ್ಲವನ್ನೂ ಏಕಸ್ವಾಮ್ಯಗೊಳಿಸಿವು ಮೂಲಕ ಸರ್ವಾಧಿಕಾರವನ್ನು ಸಾಧಿಸಲು ಹೊರಡಲಾಗಿದೆ. ಒಂದೇ ಭಾಷೆ, ಒಂದೇ ತೆರಿಗೆ, ಒಂದೇ ನೀತಿ ಎಂಬ ಏಕ ಸಂಸ್ಕೃತಿಯನ್ನು ಒಂದೊಂದಾಗಿ ಜಾರಿಗೊಳಿಸುವ ಮೂಲಕ ಸರ್ವಾಧಿಕಾರಕ್ಕೆ ಎಡೆಮಾಡಿಕೊಡಲಾಗುತ್ತಿದೆ. ಆ ಮೂಲಕ ಒಂದು ದೊಡ್ಡ ಜನವರ್ಗಕ್ಕೆ ಶಿಕ್ಷಣವನ್ನು ವಂಚಿಸುವ ಹುನ್ನಾರ ಇದರ ಹಿಂದಿದೆ.

ನಾವು ಇಂತಹ ಯಜಮಾನಿಕೆ ಪ್ರವೃತ್ತಿಯ ವಿರುದ್ಧ ಜನರ ಸಮಸ್ಯೆಗಳಾದ ನಿರುದ್ಯೋಗ, ಹಸಿವು, ಬಡತನ, ಶೈಕ್ಷಣಿಕ ವ್ಯವಸ್ಥೆಯಲ್ಲಿ ಅಸಮಾನತೆ ಮುಂತಾದ ಎಲ್ಲಾ ಅಂಶಗಳು ರಾಜಕೀಯಗೊಳಿಸುವ ಮೂಲಕ ಸೋಲಿಸುವ ಕೆಲಸಗಳಾಗಬೇಕಾಗಿದೆ. ಕಳೆದ ಮೂರು ವರ್ಷ ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಆಳ್ವಿಕೆಯು ಜನಸಾಮಾನ್ಯರ ಎಲ್ಲಾ ವಿಚಾರಗಳನ್ನು ಮೂಲೆಗುಂಪು ಮಾಡಲು ಒಂದಲ್ಲ ಒಂದು ವಿಚಾರಗಳನ್ನು ಎತ್ತಿ ದಿಕ್ಕುತಪ್ಪಿಸುವ ಕೆಲಸ ಮುಂದಾಗಿದೆ. ಜನರ ಪ್ರಶ್ನೆಗಳು, ಶೈಕ್ಷಣಿಕ ಸಮಸ್ಯೆಗಳು, ಮೂಲಸೌಕರ್ಯಗಳ ಕೊರತೆಗಳು ದೊಡ್ಡ ಪ್ರಮಾಣದಲ್ಲಿ ಚರ್ಚೆಗೆ ಒಳಪಟ್ಟು, ಅಧಿಕಾರದಲ್ಲಿರುವವರನ್ನು ಪ್ರಶ್ನಿಸುವ ಕೆಲಸ ಆಗಬೇಕಾಗಿದೆ.

ಹಿಂದಿ ರಾಷ್ಟ್ರ ಭಾಷೆಯಲ್ಲ ಶೆಡ್ಯೂಲ್ಡ್‌ 8ರಲ್ಲಿರುವ ಎಲ್ಲಾ ಭಾಷೆಗಳು ರಾಷ್ಟ್ರಭಾಷೆಗಳು. ಅದರೊಂದಿಗೆ ಶೆಡ್ಯೂಲ್ಡ್‌ 8ಕ್ಕೆ ಕೇಳಿ ಬರುತ್ತಿರುವ 38 ಭಾಷೆಗಳನ್ನು ಅಳವಡಿಸಬೇಕು. ಅಲ್ಲದೆ, ರಾಷ್ಟ್ರ ಭಾಷೆ ವಿಚಾರದ ಬಗೆಗಿನ ಕಲಂ 343ಕ್ಕೆ ತಿದ್ದುಪಡಿಗೊಳಿಸಿ ಎಲ್ಲಾ ಭಾಷೆಗಳೂ ಸಮಾನ ಮತ್ತು ರಾಷ್ಟ್ರ ಭಾಷೆ, ಅವರವರ ಭಾಷೆಗಳೇ ಪ್ರಮುಖ ಮತ್ತು ದೇಶದ ವೈವಿದ್ಯತೆಯಲ್ಲಿ ಏಕತೆ ಎಂಬ ಸಂವಿಧಾನ ಆಶಯಗಳ ಉಳಿವಿಗೆ ಆದ್ಯತೆಯಾಗಬೇಕಿದೆ ಎಂದರು.

ಶಿಕ್ಷಣ ವ್ಯವಸ್ಥೆಯನ್ನು ಸಂಪೂರ್ಣವಾಗಿ ನಾಲ್ಕು ಅಂಶಗಳಿಂದ ಮುಕ್ತಿಗೊಳ್ಳಬೇಕಾಗಿದೆ. ಕೇಂದ್ರೀಕರಣ, ಕಾರ್ಪೋರೇಟೀಕರಣ, ಕೋಮುವಾದಿಕರಣ ಮೂಲಕ ಮೌಲ್ಯಗಳನ್ನು ಧಿರಿಸುವ ಅಂಶಗಳು, ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ನಾಶಪಡಿಸುವ ಅಂಶಗಳು ದೂರವಾಗಬೇಕಾಗಿದೆ. ಎನ್‌ಇಪಿ ಶಿಕ್ಷಣ ಪದ್ದತಿಯು ಸಂವಿಧಾನವನ್ನು ಬುಡಮೇಲು ಮಾಡುವ ಎಲ್ಲಾ ಚೌಕಟ್ಟುಗಳನ್ನು ಹಾಕಿಕೊಳ್ಳಲಾಗಿದೆ. ಎನ್‌ಇಪಿ ಅದರ ಒಂದು ಕೈಪಿಡಿಯಂತಿದೆ. ಶಿಕ್ಷಣ ನೀತಿಯ ಬಗ್ಗೆ ಅಜೆಂಡಾ ರೂಪಿಸಿಕೊಳ್ಳುವ ಮೂಲಕ ಶೈಕ್ಷಣಿಕ ವಲಯವನ್ನು ಸಂವಿಧಾನಬದ್ದವಾಗಿ, ಕಾಪಾಡಲು ಪಣತೊಡಬೇಕೆಂದು ನಿರಂಜನಾರಾಧ್ಯ ಕರೆ ನೀಡಿದರು.

ಎಸ್‌ಎಫ್‌ಐ ಅಖಿಲ ಭಾರತ ಜಂಟಿ ಕಾರ್ಯದರ್ಶಿ ನಿತೀಶ್‌ ನಾರಾಯಣ್‌ ಮಾತನಾಡಿ, ನಾಲ್ಕು ವರ್ಷದ ಬಳಿಕ ಹೈದರಾಬಾದ್‌ ನಲ್ಲಿ ಎಸ್‌ಎಫ್‌ಐ ಅಖಿಲ ಭಾರತ ಸಮ್ಮೇಳನ ನಡೆಯುತ್ತಿದೆ. ಶಿಕ್ಷಣದ ಹಕ್ಕುಗಳಿಗಾಗಿ, ವಿದ್ಯಾರ್ಥಿಗಳ ಚಳುವಳಿಯನ್ನು ಬಲಪಡಿಸುವ ಮೂಲಕ ವಿಶಾಲ ಸಮೂಹದ ಶೈಕ್ಷಣಿಕ ವಲಯದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗಿದೆ. ಅಲ್ಲದೆ, ವಿಶೇಷವಾಗಿ ಕೋವಿಡ್‌ ಸಾಂಕ್ರಾಮಿಕತೆ ಅವಧಿಯಲ್ಲಿ ಎಸ್‌ಎಫ್‌ಐ ಸಂಘಟನೆಯು ದೇಶದ ತುಂಬೆಲ್ಲಾ ಕೈಗೊಂಡ ಹಲವು ಕಾರ್ಯಗಳು ಮಹತ್ವಪೂರ್ಣವಾಗಿತ್ತು. ಕೋವಿಡ್‌ ನಂತಹ ಗಂಭೀರ ಅವಧಿಯಲ್ಲಿಯೂ ಸಹ ಲಕ್ಷಾಂತರ ವಿದ್ಯಾರ್ಥಿಗಳು ತಮ್ಮ ಹಕ್ಕುಗಳಿಗಾಗಿ ಎಲ್ಲೆಡೆ ಹೋರಾಟಗಳನ್ನು ಸಂಘಟಿಸಿದ್ದಾರೆ. ಇದೇ ಅವಧಿಯಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಆನ್‌ಲೈನ್‌ ಶಿಕ್ಷಣ ವ್ಯವಸ್ಥೆಯಿಂದ ವಂಚಿತರಾದರು. ಶೈಕ್ಷಣಿಕವಾಗಿ ವಿದ್ಯಾರ್ಥಿಗಳಲ್ಲಿ ದೊಡ್ಡ ಮಟ್ಟದ ವಿಭಜನೆಯನ್ನು ತಂದೊಡ್ಡಿತು. ಎಸ್‌ಎಫ್‌ಐ ಚಳುವಳಿಯನ್ನು ಸಂಘಟಿಸಿ, ಮಾರ್ಗೋಪಾಯಗಳೊಂದಿಗೆ ಚಳುವಳಿಯನ್ನು ಸಹ ಸಂಘಟಿಸಿದೆ.

ಸ್ವಾತಂತ್ರ್ಯ ಚಳುವಳಿ ಸಂದರ್ಭದಲ್ಲಿ ಭಾಷಾ ಹೇರಿಕೆ ಬದಲಾಗಿ ಭಾಷಾ ವೈವಿದ್ಯತೆಯನ್ನು ಪ್ರದರ್ಶಿಸಲಾಗಿತ್ತು. ಹಿಂದಿ-ಉರ್ದು ಮಿಶ್ರಿತ ಹಿಂದೂಸ್ಥಾನಿಯನ್ನು ಆದ್ಯತೆಯಾಗಿ ಪರಿಗಣಿಸಲಾಯಿತು. ದೇಶದಲ್ಲಿ ಇಂದಿಗೂ ಅತ್ಯಂತ ಜನಪ್ರಿಯವಾಗಿ ವೈವಿದ್ಯತೆಯಲ್ಲಿ ಏಕತೆಯನ್ನು ಸಾಧಿಸುವ ವಿಚಾರಗಳು ಜಾಲ್ತಿಯಲ್ಲಿವೆ. ಸಾರೆ ಜಹಾನ್ ಸೆ ಅಚ್ಚಾ ಹಿಂದುಸ್ತಾನ್ ಹಮಾರಾ, ಹಾಗೇ ಕನ್ನಡ, ತಮಿಳು, ತೆಲುಗು, ಮಳಿಯಾಳಂ, ಮರಾಠಿ ಹೀಗಿ ವಿವಿಧ ಭಾಷೆಗಳಲ್ಲಿ ವೈವಿದ್ಯತೆಯನ್ನು ಪ್ರದರ್ಶಿಸಲಾಗಿದೆ. ದೇಶದಲ್ಲಿ ನೂರಾರು ಭಾಷೆ, ಜಾತಿ, ನಡವಳಿಕೆ ವಿಚಾರದಲ್ಲಿ ವೈವಿದ್ಯತೆಗಳಿವೆ. ರಾಜ್ಯಗಳ ನಡುವೆಗೂ ಹಾಗೂ ರಾಜ್ಯಗಳ ಒಳಗೂ ವೈವಿದ್ಯತೆಯನ್ನು ಕಾಣಬಹುದಾಗಿದೆ. ಎಸ್‌ಎಫ್‌ಐ ಸಂಘಟನೆಯು ಮಹಾನ್‌ ನಾಯಕರ ನೀಡಿರುವ ಮೌಲ್ಯಗಳ ರಕ್ಷಣೆಗಾಗಿ ಶಿಕ್ಷಣ ಕ್ಷೇತ್ರ ಮಾತ್ರವಲ್ಲ, ಕಾರ್ಮಿಕರು, ರೈತರು, ಕೂಲಿಕಾರರ ಸಮಸ್ಯೆಗಳ ವಿಚಾರವಾಗಿಯೂ ಜಂಟಿ ಚಳುವಳಿಗಳನ್ನು ನಡೆಸಿದೆ ಎಂದರು.

ಎಸ್‌ಎಫ್‌ಐ ರಾಜ್ಯ ಕಾರ್ಯದರ್ಶಿ ವಾಸುದೇವ್‌ ರೆಡ್ಡಿ ಮಾತನಾಡಿ, ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಸರ್ಕಾರ ಯಾವ ಪೂರ್ವ ತಯಾರಿಗಳನ್ನು ಮಾಡಿಕೊಳ್ಳದೇ ಈಗಾಗಲೇ ಎನ್‌ಇಪಿಯನ್ನು ಜಾರಿಗೊಳಿಸಿ ಸಾಕಷ್ಟು ಕಡೆಗಳಲ್ಲಿ ಹಲವು ಸಮಸ್ಯೆಗಳ ಸೃಷ್ಟಿಗೆ ಕಾರಣವಾಗಿದೆ. ರಾಜ್ಯದಲ್ಲಿ ವಿದ್ಯಾರ್ಥಿಗಳ ನಡುವೆ ಹಿಂದೂ-ಮುಸ್ಲಿಂ ಎಂಬ ವಿಭಜನೆಗಳನ್ನು ತರುವ ಮೂಲಕ ಕೋಮುಹಿಂಸೆ ಪ್ರಚೋದನೆಗಳನ್ನು ನಿರಂತರವಾಗಿ ಮಾಡಲಾಗುತ್ತಿದೆ. ಶಿಕ್ಷಣ ಸಚಿವ ನಾಗೇಶ್‌ ದಿನಕ್ಕೊಂದು ಅದೇಶಗಳನ್ನು ನೀಡುವ ಮೂಲಕ ಇಡೀ ಶಿಕ್ಷಣ ವ್ಯವಸ್ಥೆಯನ್ನು ತಪ್ಪುದಾರಿಗೆ ಎಳೆಯುವುದು, ಶಿಕ್ಷಣ ರಂಗದ ಮೂಲ ಸಮಸ್ಯೆಗಳನ್ನು ಪರಿಹರಿಸಲು ಕ್ರಮಕೈಗೊಳ್ಳುವ ಬದಲಾಗಿ ದಿಕ್ಕುತಪ್ಪಿಸುವ ಕೆಲಸಗಳನ್ನಷ್ಟೆ ಬಿಜೆಪಿ ಸರ್ಕಾರ ಮಾಡುತ್ತಿದೆ. ಕೋವಿಡ್‌ ನಿಂದಾಗಿ ರಾಜ್ಯದ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿದ್ದ ಅವಧಿಯಲ್ಲಿ  ಎಸ್‌ಎಫ್‌ಐ ಸಂಘಟನೆಯು ಚಳುವಳಿಗಳನ್ನು ರೂಪಿಸಿದೆ ಎಂದರು.

ರಾಜ್ಯಾಧ್ಯಕ್ಷ  ಅಮರೇಶ್ ಕಡಗಡ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಜ್ಯ ಪದಾಧಕಾರಿ ರಮೇಶ ವೀರಾಪೂರು ನಿರೂಪಿಸಿದರು. ರಾಜ್ಯ ಉಪಾಧ್ಯಕ್ಷ ಭೀಮನಗೌಡ ವಂದಿಸಿದರು. ಈ ಸಂದರ್ಭದಲ್ಲಿ ರಾಜ್ಯ ಪದಾಧಿಕಾರಿಗಳಾದ ಶಿವಕುಮಾರ್ ಮ್ಯಾಗಳಮನಿ, ದಿಲಿಪ್‌ ಶೆಟ್ಟಿ ಸೇರಿದಂತೆ  ಅನೇಕರು ಉಪಸ್ಥಿತರಿದ್ದರು.

ವರದಿ : ವಿನೋದ್‌ ಶ್ರೀರಾಮಪುರ

Donate Janashakthi Media

Leave a Reply

Your email address will not be published. Required fields are marked *