ಕುಂದಾಪುರ: ಕೇಂದ್ರ ಸರ್ಕಾರದ ಜನ ವಿರೋಧಿ ಬಜೆಟ್ ವಿರುದ್ದ ಕುಂದಾಪುರ ಶಾಸ್ತ್ರಿ ವೃತ್ತದಲ್ಲಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್(ಸಿಐಟಿಯು) ಸಂಚಾಲನಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ಸಿಐಟಿಯು ಸಂಚಾಲಕರಾದ ಎಚ್ ನರಸಿಂಹ ಮಾತನಾಡಿ, ಅಚ್ಛೆ ದಿನಗಳ ಕಾಲದ ನಂತರ ಅಮೃತ ಕಾಲದ ಬಜೆಟ್ ಆಗಿದ್ದು ಏಷ್ಯಾದ ಮೂರನೇ ದೊಡ್ಡ ಬಜೆಟ್ ಎಂದು ಬಣ್ಣಿಸಿ ಜನ ಸಾಮಾನ್ಯರಿಗೆ ಕೊಡಮಾಡುವ ಎಲ್ಲಾ ಹಣಕಾಸುಗಳನ್ನು ಕಡಿತ ಮಾಡಲಾಗಿದೆ. ಬಂಡವಾಳ ಹೂಡಿಕೆಯ ನೆಪದಲ್ಲಿ ದೇಶದ ಜನರ ಆಸ್ತಿಗಳನ್ನು ಮಾರಾಟ ಮಾಡಿ ಕಾರ್ಪೋರೇಟ್ ಲೂಟಿಗೆ ಬಜೆಟ್ ಮಂಡಿಸಿರುವುದು ಸ್ಪಷ್ಟವಾಗಿದೆ. ರಸಗೊಬ್ಬರ, ಆಹಾರ, ಉದ್ಯೋಗ ಖಾತ್ರಿ, ಕೃಷಿಗೆ ಸಂಬಂಧಿಸಿದಂತೆ ಇರುವ ಎಲ್ಲಾ ಹಣ ಕಡಿತ ಮಾಡಿದ ಜನದ್ರೋಹಿ ಬಜೆಟ್ ಇದಾಗಿದೆ ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಮಾತನಾಡಿ, ಕಳೆದ ಎರಡು ವರ್ಷಗಳಲ್ಲಿ ಹೇರಲಾದ ಲಾಕ್‌ಡೌನ್ ನಿಂದ ಶೇ.84 ರಷ್ಟು ಜನರು ಸಂಕಷ್ಟಕ್ಕೊಳಗಾದವರಿಗೆ ಬಜೆಟ್ ಯಾವುದೇ ಸಹಾಯ ಮಾಡಿಲ್ಲ. ಈ ಅವಧಿಯಲ್ಲಿ ದೇಶದ ಅತೀ ದೊಡ್ಡ ಶ್ರೀಮಂತರ ಆದಾಯ 13 ಲಕ್ಷ ಕೋಟಿ ಹೆಚ್ಚಳಗೊಂಡಿದೆ. ಶ್ರೀ ಸಾಮಾನ್ಯನ ಪರವಾಗಿ ಇರದಿರುವುದೇ ಈ ಬಾರಿಯ ಕೇಂದ್ರ ಸರ್ಕಾರದ ಬಜೆಟ್ ಆಗಿದೆ ಎಂದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ, ಗ್ರಾಮೀಣ ಅಭಿವೃದ್ಧಿಗೆ, ಕೃಷಿಗೆ ಸಂಬಂಧಿಸಿದಂತೆ ಇರುವ ಹಣ ಕಡಿತ ಮಾಡಲಾಗಿದೆ. ಜನ ಸಂಕಷ್ಟದಲ್ಲಿದ್ದಾರೆ. ಆದರೆ, ಸರ್ಕಾರ ಮುಂದೆ 50 ವರ್ಷದ ಬಗ್ಗೆ ಮಾತನಾಡುತ್ತಿರುವುದು ಹಾಸ್ಯಾಸ್ಪದ ಎಂದ ಅವರು ಈ ಬಗ್ಗೆ ಜನರು ಚರ್ಚಿಸಿದಂತೆ ಷಡ್ಯಂತ್ರ ರೂಪಿಸಲಾಗುತ್ತಿದೆ ಎಂದು ದೂರಿದರು.
ಸಿಐಟಿಯು ಜಿಲ್ಲಾಧ್ಯಕ್ಷ ಕೆ.ಶಂಕರ್, ಮಹಾಬಲ ವಡೇರ ಹೋಬಳಿ, ಬಲ್ಕೀಸ್, ಪ್ರಕಾಶ್ ಕೋಣಿ, ಲಕ್ಷ್ಮಣ ಮುಂತಾದವರು ನೇತೃತ್ವ ವಹಿಸಿದ್ದರು. ಚಂದ್ರಶೇಖರ ವಿ. ಸ್ವಾಗತಿಸಿದರು, ರಾಜುದೇವಾಡಿಗ ವಂದಿಸಿದರು.