ಸಿ.ಸಿದ್ಧಯ್ಯ
ತಾವೇ ಆಹಾರ ಧಾನ್ಯಗಳನ್ನು ಬೆಳೆಯಲು ಸಹಸ್ರಾರು ಎಕರೆ ಕೃಷಿ ಭೂಮಿಯ ಅಗತ್ಯ ಇದೆ. ಇದುವರೆಗೆ ಇದ್ದ ಭೂಮಿತಿ ಕಾಯ್ದೆಯು ಕಾರ್ಪೊರೇಟ್ ವ್ಯಾಪಾರಿಗಳು ಭೂಮಿ ಖರೀದಿಸಲು ಅಡ್ಡಿಯಾಗಿತ್ತು. ಇವರಿಗೆ ಭೂಮಿ ಖರೀದಿಸಲು ಅಡ್ಡಿಯಾಗಿದ್ದ ಕಾಯ್ದೆಗಳನ್ನು ಕೇಂದ್ರದ ನರೇಂದ್ರ ಮೋದಿ ಸರ್ಕಾರ ಮತ್ತು ರಾಜ್ಯ ಬಿಜೆಪಿ ಸರಕಾರ ತೆಗೆದು ಹಾಕಿದವು.
ದೇಶದಲ್ಲಿ ಬಿರ್ಲಾ ಒಡೆತನದ 580 ಮೋರ್ ಸೂಪರ್ ಮಾರ್ಕೇಟ್ ಇವೆ. ಒಂದು ಮಳಿಗೆಯಲ್ಲಿ ದಿನವೊಂದರಲ್ಲಿ ಐನೂರು ಕೆಜಿ ಅಕ್ಕಿ ಮಾರಾಟ ಆಗುತ್ತದೆ ಎಂದು ಇಟ್ಟುಕೊಳ್ಳೋಣ. ದೇಶದ 580 ಮಳಿಗೆಯಲ್ಲಿ (580×500) 2,90,000 ಕೆಜಿ ಅಕ್ಕಿ ಮಾರಾಟ ಆಗುತ್ತದೆ. ವರ್ಷಕ್ಕೆ (2,90,000×365) 10,34,80,000 ಕೆಜಿ (1ಲಕ್ಷ ಟನ್) ಅಕ್ಕಿ ಮಾರಾಟ ಆಗುತ್ತದೆ. ಈಗ ಇಷ್ಟೂ ಅಕ್ಕಿಯನ್ನು ರೈತರು ಮತ್ತು ಅಕ್ಕಿ ಗಿರಣಿಗಳ ಮೂಲಕ ಈ ಸೂಪರ್ ಮಾರ್ಕೆಟ್ ನವರು ಖರೀದಿ ಮಾಡುತ್ತಾರೆ. ಇದರಿಂದ ಮೋರ್ ಕಂಪನಿಗೆ ಬರುವ ಲಾಭ ಕಡಿಮೆ. ಈ ಭತ್ತ ತಾವೇ ಬೆಳೆದು, ತಾವೇ ಅಕ್ಕಿ ಮಾಡಿ ಮಾರಾಟ ಮಾಡಿದರೆ ಎಲ್ಲಾ ಲಾಭವನ್ನು ತಾವೇ ಪಡೆಯಬಹುದಲ್ಲವೆ?
ಹೀಗೆ ಸಕ್ಕರೆ, ಗೋಧಿ, ಬೇಳೆ, ಕಾಳುಗಳು, ಎಣ್ಣೆ ಬೀಜಗಳು, ಸೊಪ್ಪು ತರಕಾರಿಗಳು,…. ಎಲ್ಲವನ್ನೂ ತಾವೇ ಬೆಳೆದು, ಇವುಗಳಿಂದ ತಾವೇ ಆಹಾರ ಉತ್ಪನ್ನಗಳನ್ನು ಮಾಡಿ, ತಾವೇ ಮಾರಾಟ ಮಾಡಿದರೆ ಎಲ್ಲಾ ಲಾಭಗಳನ್ನು ತಾವೇ ಪಡೆಯಬಹುದು ಅಲ್ಲವೇ?
ಇದೇ ರೀತಿ ರಿಲಯನ್ಸ್, ಟಾಟಾ ಒಡೆತನದ ಸ್ಟಾರ್ ಮಾರ್ಕೆಟ್, ಬಿಗ್ ಬ್ಯಾಸ್ಕೆಟ್ ಮುಂತಾದ ದೊಡ್ಡ ಬಂಡವಾಳಗಾರರ ಮತ್ತು ವಿದೇಶಿ ಬಹುರಾಷ್ಟ್ರೀಯ ವ್ಯಾಪಾರಿ ಸಂಸ್ಥೆಗಳಾದ ವಾಲ್ ಮಾರ್ಟ್, ಅಮೆಜಾನ್, ಪ್ಲಿಪ್ ಕಾರ್ಟ್… ಇತ್ಯಾದಿ ಚಿಲ್ಲರೆ ವ್ಯಾಪಾರಿ ಸಂಸ್ಥೆಗಳ ವಹಿವಾಟುಗಳನ್ನು ಲೆಕ್ಕಾಚಾರ ಮಾಡಿ.
ತಾವೇ ಆಹಾರ ಧಾನ್ಯಗಳನ್ನು ಬೆಳೆಯಲು ಸಹಸ್ರಾರು ಎಕರೆ ಕೃಷಿ ಭೂಮಿಯ ಅಗತ್ಯ ಇದೆ. ಇದುವರೆಗೆ ಇದ್ದ ಭೂಮಿತಿ ಕಾಯ್ದೆಯು ಕಾರ್ಪೊರೇಟ್ ವ್ಯಾಪಾರಿಗಳು ಭೂಮಿ ಖರೀದಿಸಲು ಅಡ್ಡಿಯಾಗಿತ್ತು. ಇವರಿಗೆ ಭೂಮಿ ಖರೀದಿಸಲು ಅಡ್ಡಿಯಾಗಿದ್ದ ಕಾಯ್ದೆಗಳನ್ನು ಕೇಂದ್ರದ ನರೇಂದ್ರ ಮೋದಿ ಸರ್ಕಾರ ಮತ್ತು ರಾಜ್ಯ ಬಿಜೆಪಿ ಸರಕಾರ ತೆಗೆದು ಹಾಕಿದವು.
ಮುಂದಿನ ದಿನಗಳಲ್ಲಿ ಸಣ್ಣ ರೈತರಿಗೆ ಉತ್ತಮ ಬೆಲೆಯ ಆಮಿಷ ತೋರಿಸಿ ದೊಡ್ಡ ಬಂಡವಾಳಗಾರರು ಕೃಷಿ ಭೂಮಿ ಖರೀದಿಸುತ್ತಾರೆ. ನಂತರ ಯಂತ್ರಗಳ ಬಳಕೆ ಮೂಲಕ ಆಧುನಿಕ ವಿಧಾನದಲ್ಲಿ ಕೃಷಿ ಮಾಡಲು ಮುಂದಾಗುತ್ತಾರೆ. ಇಂದು ಒಂದೆರಡು ಎಕರೆ ಭೂಮಿ ಇಟ್ಟುಕೊಂಡು ಕೃಷಿ ಮಾಡುವ ರೈತರು ಭೂಮಿ ಕಳೆದುಕೊಂಡು ಮತ್ತು ಕೃಷಿ ಕಾರ್ಮಿಕರು ಹಳ್ಳಿಯಲ್ಲಿ ಉದ್ಯೋಗ ಸಿಗದೇ ಬದುಕು ಅರಸಿ ನಗರ ಪಟ್ಟಣಗಳಿಗೆ ಸೇರಿಕೊಂಡು ಕಷ್ಟದ ಬದುಕು ನಡೆಸುವಂತಾಗುತ್ತದೆ.
ಇತ್ತ ನಗರ ಪ್ರದೇಶಗಳಲ್ಲಿ ನಿರುದ್ಯೋಗಿಗಳ ಸಂಖ್ಯೆ ವಿಪರೀತವಾಗಿ ಹೆಚ್ಚುತ್ತದೆ. ಕೆಲಸಕ್ಕಾಗಿ ಕಂಪನಿಗಳ/ಕಾರ್ಖಾನೆಗಳ/ವ್ಯಾಪಾರ ಮಳಿಗೆಗಳ/ಇ-ಕಾಮರ್ಸ್ ಗಳ/ಸೇವಾ ಸಂಸ್ಥೆಗಳ ಮುಂದೆ ನಿರುದ್ಯೋಗಿಗಳ ದಂಡು ಸಾಲುಗಟ್ಟಿ ನಿಲ್ಲುತ್ತದೆ. ಕಡಿಮೆ ವೇತನ/ಕೂಲಿ ಕೊಟ್ಟು ದುಡಿಸಿಕೊಳ್ಳಬಯಸುವ ಬಂಡವಾಳಗಾರರ ಮತ್ತೊಂದು ಆಸೆ ಈಡೇರುತ್ತದೆ. ಕಟ್ಟಡ ಕಾರ್ಮಿಕರಾಗಿ, ಮನೆ ಕೆಲಸದವರಾಗಿ, ಸಿರಿವಂತರ ಮನೆಯ ಕಾವಲುಗಾರರಾಗಿ, ಅವರ ಕಾರು ಚಾಲಕರಾಗಿ, ಟ್ಯಾಕ್ಸಿ ಮತ್ತು ಆಟೋ ಚಾಲಕರಾಗಿ ಮಾಲೀಕರು ಕೊಟ್ಟಷ್ಟು ಕೂಲಿ ಪಡೆದು ಕಷ್ಟದ ಬದುಕು ನಡೆಸಬೇಕಾದ ಅನಿವಾರ್ಯ ಸ್ಥಿತಿಗೆ ತಲುಪುತ್ತಾರೆ. ಕಾರ್ಮಿಕರನ್ನು ಈ ರೀತಿಯ ಶೋಷಣೆ ಮಾಡುವುದನ್ನು ತಡೆಯಲು ಇದ್ದ ಕಾರ್ಮಿಕ ಕಾಯ್ದೆಗಳನ್ನು ಕೇಂದ್ರ ಸರ್ಕಾರ ತೆಗೆದು ಹಾಕಿ ಕಾರ್ಮಿಕರನ್ನು ಶೋಷಣೆ ಮಾಡಲು ಮಾಲೀಕರಿಗೆ ಮುಕ್ತ ಅವಕಾಶ ಮಾಡಿಕೊಡಲಾಗಿದೆ.
ಮತ್ತೊಂದೆಡೆ ವ್ಯಾಪಾರಿಗಳು ಆಹಾರ ಧಾನ್ಯಗಳನ್ನು ದಾಸ್ತಾನು ಮಾಡಲು ಇದ್ದ ಮಿತಿಯನ್ನು ತೆಗೆದು ಹಾಕಲಾಗಿದೆ. ಇನ್ನು ಮುಂದೆ ಕಾರ್ಪೊರೇಟ್ ಸಂಸ್ಥೆಗಳು ಎಷ್ಟು ಪ್ರಮಾಣದಲ್ಲಾದರೂ ದಾನ್ಯಗಳನ್ನು ದಾಸ್ತಾನು ಮಾಡಿ ಆಹಾರ ಧಾನ್ಯಗಳ ಕೃತಕ ಅಭಾವ ಸೃಷ್ಟಿಸಬಹುದು. ನಂತರ ತಮಗೆ ಇಷ್ಟ ಬಂದಂತೆ ದರ ನಿಗದಿ ಮಾಡಿ ಮಾರಾಟ ಮಾಡಬಹುದು.
ಮತ್ತೊಂದೆಡೆ ಸರ್ಕಾರ ಇದುವರೆಗೆ ಬೆಂಬಲ ಬೆಲೆ ನೀಡಿ ರೈತರಿಂದ ದಾನ್ಯಗಳನ್ನು ಖರೀದಿಸಿ ದಾಸ್ತಾನು ಮಾಡುತ್ತಿತ್ತು. ಮುಂದಿನ ದಿನಗಳಲ್ಲಿ ಇಂತಹ ಖರೀದಿ ಇರುವುದಿಲ್ಲ. ಅಂದರೆ, ಸರ್ಕಾರದ ಗೋದಾಮುಗಳಿಗೆ ಆಹಾರ ಧಾನ್ಯಗಳು ಬರುವುದು ನಿಂತು ಹೋಗುತ್ತದೆ. ಇದರರ್ಥ, ಮುಂದಿನ ದಿನಗಳಲ್ಲಿ ಪಡಿತರ ವ್ಯವಸ್ಥೆ ಇರುವುದಿಲ್ಲ. ಪಡಿತರ ವ್ಯವಸ್ಥೆ ಇಲ್ಲವಾದಾಗ ಬಡ ಕುಟುಂಬಗಳೂ ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿ, ಗೋದಿ ಖರೀದಿ ಮಾಡಬೇಕಾಗುತ್ತದೆ. ಇದುವರೆಗೆ ತಮ್ಮ ಕುಟುಂಬಕ್ಕೆ ಅವಶ್ಯಕವಾದ ಬೆಳೆಗಳನ್ನು ಬೆಳೆದುಕೊಳ್ಳುತ್ತಿದ್ದ ರೈತರೂ ಸಹ ಮಾರುಕಟ್ಟೆಯಲ್ಲಿ ಆಹಾರ ಪದಾರ್ಥಗಳನ್ನು ಖರೀದಿಸುವ ಅನಿವಾರ್ಯತೆಗೆ ಸಿಲುಕುತ್ತಾರೆ. ಅಂದರೆ ಮುಕ್ತ ಮಾರುಕಟ್ಟೆಯಲ್ಲಿ ಆಹಾರ ಪದಾರ್ಥಗಳ ಬೇಡಿಕೆ ಹೆಚ್ಚಾಗಿ ಅವುಗಳ ಬೆಲೆಗಳು ಏರುತ್ತವೆ….. ಮೋದಿ ಸರ್ಕಾರದ ನೀತಿಗಳಿಂದಾಗಿ ಜನಸಾಮಾನ್ಯರಿಗೆ ಮುಂದೆ ಬರುವ ಸಂಕಷ್ಟದ ದಿನಗಳ ಬಗ್ಗೆ ಹೀಗೆ ಹೇಳುತ್ತಾ ಹೋಗಬಹುದು.