ರಾಜಕೀಯ ಪಕ್ಷಗಳನ್ನು ಕಾರ್ಪೋರೇಟ್ ಉದ್ದಿಮೆಗಳು ಪೋಷಿಸುವುದು ಹೊಸ ವಿದ್ಯಮಾನವೇನಲ್ಲ
ಬಂಡವಾಳಶಾಹಿ ಅರ್ಥವ್ಯವಸ್ಥೆಯಲ್ಲಿ ಮಾರುಕಟ್ಟೆಯನ್ನು ನಿಯಂತ್ರಿಸುವ ಬಂಡವಾಳಿಗರಿಗೂ, ಆಳ್ವಿಕೆ ನಡೆಸುವ ರಾಜಕೀಯ ಪಕ್ಷಗಳಿಗೂ ನಿಕಟ ಸಂಬಂಧ-ಸಂಪರ್ಕ ಮತ್ತು ಒಡನಾಟ ಇರುವುದು ಚಾರಿತ್ರಿಕವಾಗಿ ನಡೆದುಬಂದಿರುವ ಒಂದು ವಿದ್ಯಮಾನ. ಸ್ವಾತಂತ್ರ್ಯೋತ್ತರ ಭಾರತದ ಆಳ್ವಿಕೆ ದ ಸಂವಿಧಾನ ಸಮಾಜವಾದದ ಆಶಯಗಳೊಂದಿಗೆ ಆರಂಭವಾದರೂ, ಮೂಲತಃ ಆರ್ಥಿಕತೆಯಲ್ಲಿ ಅಳವಡಿಸಿಕೊಂಡಿದ್ದು ಬಂಡವಾಳಶಾಹಿ ವ್ಯವಸ್ಥೆಯ ಮಾರುಕಟ್ಟೆ ಮೌಲ್ಯಗಳನ್ನೇ ಎನ್ನುವುದು ವಾಸ್ತವ. ನೆಹರೂ ಆಳ್ವಿಕೆಯ ಮಿಶ್ರ ಆರ್ಥಿಕತೆಯಿಂದ ನರೇಂದ್ರಮೋದಿಯವರ ಮಾರುಕಟ್ಟೆ ಆರ್ಥಿಕತೆಯವರೆಗಿನ ಪಯಣವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಬಂಡವಾಳಿಗರು-ಉದ್ಯಮಿಗಳು ಮತ್ತು ಮಾರುಕಟ್ಟೆ ಆಡಳಿತಾರೂಢ ರಾಜಕೀಯ ಪಕ್ಷಗಳೊಡನೆ ಹೊಂದಾಣಿಕೆ ಮಾಡಿಕೊಳ್ಳುತ್ತಲೇ ತಮ್ಮ ಸಾಮ್ರಾಜ್ಯ ವಿಸ್ತರಿಸಿರುವುದನ್ನು ಸ್ಪಷ್ವವಾಗಿ ಗುರುತಿಸಬಹುದು. ದೇಣಿಗೆ
-ನಾ ದಿವಾಕರ
1990ರಲ್ಲಿ ಭಾರತ ತನ್ನ ಸಮಾಜವಾದಿ ಪೊರೆಯನ್ನು ಕಳಚಿ, ಮಿಶ್ರ ಆರ್ಥಿಕತೆ ಎಂಬ ಮೇಲುಹೊದಿಕೆಯನ್ನು ತೆಗೆದುಹಾಕಿ, ಮುಕ್ತ ಮಾರುಕಟ್ಟೆಗೆ ತೆರೆದುಕೊಂಡ ನಂತರದಲ್ಲಿ, ಜಾಗತೀಕರಣ ಮತ್ತು ಉದಾರವಾದಿ ಆರ್ಥಿಕ ನೀತಿಗಳು ಭಾರತದ ಆಳುವ ವರ್ಗಗಳಿಗೆ ಅಪ್ಯಾಯಮಾನವಾದವು. ಪಿ.ವಿ. ನರಸಿಂಹರಾವ್-ಮನಮೋಹನ್‌ಸಿಂಗ್ ಆರಂಭಿಸಿದ ಉದಾರವಾದಿ ಮಾರುಕಟ್ಟೆ ನೀತಿಯನ್ನು ಮತ್ತಷ್ಟು ಬಲಪಡಿಸಿದ್ದು ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದ ಎನ್‌ಡಿಎ ಸರ್ಕಾರ. ಈ ಹಂತದಲ್ಲೇ ಬಿಜೆಪಿಯ ಸಾಂಪ್ರದಾಯಿಕ ಸ್ವದೇಶಿ ಆರ್ಥಿಕ ನೀತಿಗಳು ಕೊನೆಗೊಂಡಿದ್ದವು. ನಂತರ ಅನಾವರಣಗೊಂಡಿದ್ದು ಹಿಂದುತ್ವ-ಕಾರ್ಪೋರೇಟ್ ಮಾರುಕಟ್ಟೆಯ ನವ ಉದಾರವಾದಿ ಆರ್ಥಿಕ ನೀತಿಗಳು. 2004-14ರ ಅವಧಿಯ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಇದಕ್ಕೆ ಸ್ಪಷ್ಟ ಬುನಾದಿ ಹಾಕಿತ್ತು.
ತದನಂತರದ ನರೇಂದ್ರ ಮೋದಿ ಆಳ್ವಿಕೆ, ಕಾರ್ಪೋರೇಟ್ ಆಳ್ವಿಕೆಯನ್ನು ವಿಸ್ತರಿಸಿದ್ದೇ ಅಲ್ಲದೆ, ಕಾರ್ಪೋರೇಟ್ ಮಾರುಕಟ್ಟೆಯ ಔದ್ಯಮಿಕ ಹಿತಾಸಕ್ತಿಗಳೇ ಸರ್ಕಾರದ ಆರ್ಥಿಕ-ಹಣಕಾಸು ನೀತಿಗಳನ್ನು ನಿರ್ದೇಶಿಸುವ ಹಂತಕ್ಕೆ ತಲುಪಿಸಿದೆ. ಮಿಶ್ರ ಆರ್ಥಿಕತೆಯಲ್ಲಿ, ಸಮಾಜವಾದಿ ಆಶಯಗಳೊಂದಿಗೆ ರಾಷ್ಟ್ರೀಕರಣಗೊಂಡ ದೇಶದ ನೈಸರ್ಗಿಕ ಸಂಪತ್ತು ಮತ್ತು ಔದ್ಯಮಿಕ ನೆಲೆಗಳನ್ನು ಹಂತಹಂತವಾಗಿ ಮಾರುಕಟ್ಟೆಗೆ ಪರಭಾರೆ ಮಾಡುವ ಒಂದು ಗುರಿಯತ್ತ ಡಿಜಿಟಲ್ ಭಾರತ ಸಾಗುತ್ತಿದೆ. ಸಾರಿಗೆ, ಸಂಚಾರ, ಶಿಕ್ಷಣ, ಆರೋಗ್ಯ, ವಿಮಾನಯಾನ, ಕಡಲಸಾರಿಗೆ, ರಸ್ತೆ ಇತ್ಯಾದಿ ಮೂಲ ಸೌಕರ್ಯಗಳು ಹಾಗೂ ಉತ್ಪಾದನಾ ವಲಯದ ಸಕಲ ನೆಲೆಗಳನ್ನೂ ಕಾರ್ಪೋರೇಟ್ ಮಾರುಕಟ್ಟೆಗೆ ಒಪ್ಪಿಸಿ 2047ರ ಸ್ವಾತಂತ್ರ್ಯದ ಶತಮಾನೋತ್ಸವದ ವೇಳೆಗೆ ʼ ವಿಕಸಿತ ಭಾರತ ʼ ವನ್ನು ಸಂಪೂರ್ಣ ಬಂಡವಾಳಶಾಹಿ ಆರ್ಥಿಕತೆಯತ್ತ ಪರಿವರ್ತಿಸುವ ಹಾದಿಯಲ್ಲಿ ದೇಶ ಸಾಗುತ್ತಿದೆ.
ಇದನ್ನೂ ಓದಿ: ಆಕೆಯ ಮೇಲಾದ ಅತ್ಯಾಚಾರಕ್ಕೆ ಅವಳೇ ಜವಾಬ್ದಾರಿ: ಅಲಹಾಬಾದ್ ಹೈಕೋರ್ಟ್
ಬಂಡವಾಳಶಾಹಿಯ ಭಿನ್ನ ರೂಪ
ಔದ್ಯೋಗಿಕ ಬಂಡವಾಳಶಾಹಿ ಯುಗದಲ್ಲಿ ಭಾರತ ಅನುಸರಿಸುತ್ತಿದ್ದ ಅರೆ-ಸಮಾಜವಾದಿ ಅಥವಾ ಮಿಶ್ರ ಆರ್ಥಿಕ ನೀತಿಗಳು ಸ್ಥಳೀಯ ಮತ್ತು ವಿದೇಶಿ ಬಂಡವಾಳವನ್ನು ಉತ್ತೇಜಿಸುವ ಸಲುವಾಗಿ, ಉದ್ಯಮಗಳಿಗೆ ಸ್ಥಾವರಗಳನ್ನು ಸ್ಥಾಪಿಸಲು ಭೂ ನಿವೇಶನಗಳನ್ನು ನೀಡಲು ನೆರವಾಗುತ್ತಿತ್ತು. ಉತ್ಪಾದನಾ ವಲಯದಲ್ಲಿ ಕಾರ್ಖಾನೆಗಳನ್ನು ಸ್ಥಾಪಿಸಲು ಭೂಮಿಯ ಪರಭಾರೆ ಭೋಗ್ಯದ ರೂಪದಲ್ಲಿ ನೀಡಲಾಗುತ್ತಿತ್ತು. ನೈಸರ್ಗಿಕ ಸಂಪತ್ತನ್ನು ಆಧರಿಸಿದ ಗಣಿ ಮುಂತಾದ ಉದ್ಯಮಗಳಿಗೆ ಸರ್ಕಾರದ ಹಣಕಾಸು ಸೌಲಭ್ಯದೊಂದಿಗೇ ಮೂಲ ಸೌಕರ್ಯಗಳ ಅನುಕೂಲತೆಗಳನ್ನೂ ಕಲ್ಪಿಸಲಾಗುತ್ತಿತ್ತು. ಈ ಔದ್ಯಮಿಕ ಹಿತಾಸಕ್ತಿಯ ಕಾರಣ ಬಂಡವಾಳಿಗರು ರಾಜಕೀಯ ದೇಣಿಗೆಯನ್ನು ಉದಾರವಾಗಿ ನೀಡುತ್ತಿದ್ದರು. ಹಾಗಾಗಿ ರಾಜಕೀಯ ದೇಣಿಗೆ ಎಂಬ ಪರಿಕಲ್ಪನೆಯ ಹಿಂದೆ ಯಾವುದೇ ಉದಾತ್ತ ಮನೋಭಾವವನ್ನು ಕಾಣಲಾಗುವುದಿಲ್ಲ. ಬದಲಾಗಿ ಮಾರುಕಟ್ಟೆಯ ಅವಶ್ಯಕತೆಗಳನ್ನು ಸರಿದೂಗಿಸಲು ಸರ್ಕಾರಗಳಿಂದ ಒದಗುವ ಹಣಕಾಸು-ಮೂಲ ಸೌಕರ್ಯಗಳ ಸಹಾಯವನ್ನು ಪಡೆಯುವ ವಾಣಿಜ್ಯೋದ್ಯಮದ ಸ್ವಾರ್ಥ ಅಲ್ಲಿ ಮುಖ್ಯವಾಗುತ್ತಿತ್ತು.
1990ರ ಜಾಗತೀಕರಣದ ನಂತರ ದೇಶದ ಬಹುತೇಕ ಉತ್ಪಾದಕ ವಲಯಗಳು, ಸೇವಾ ಕ್ಷೇತ್ರಗಳು ಹಾಗೂ ನಿಸರ್ಗ ಸಂಪತ್ತಿನ ಮೇಲೆ ವಾಣಿಜ್ಯೋದ್ಯಮದ ಆಧಿಪತ್ಯ ವಹಿಸುವ ಗಣಿಗಾರಿಕೆ ಮೊದಲಾದ ಉದ್ದಿಮೆಗಳು, ವಿಮಾನಯಾನ, ಬಂದರು ಮತ್ತಿತರ ನಾಗರಿಕ ಮೂಲ ಸೌಕರ್ಯಗಳು, ಈ ಎಲ್ಲ ಕ್ಷೇತ್ರಗಳು ಕಾರ್ಪೋರೇಟ್ ಮಾರುಕಟ್ಟೆಯ ಪಾಲಾಗತೊಡಗಿದವು. ಈ ಹಂತದಲ್ಲಿ ಖಾಸಗೀಕರಣಕ್ಕೊಳಗಾದ ಸಾರ್ವಜನಿಕ ಉದ್ದಿಮೆಗಳನ್ನು ವಹಿಸಿಕೊಂಡ ಹಾಗೂ ಹೊಸ ಬಂಡವಾಳ ಹೂಡಿಕೆಯನ್ನು ಮಾಡುವ ಸ್ಥಳೀಯ ಬಂಡವಾಳಿಗರಿಗೆ ಸಾಮಾಜಿಕ ಜವಾಬ್ದಾರಿಯೂ ಇರಬೇಕು ಎನ್ನುವ ಪರಿಕಲ್ಪನೆಯಡಿ ʼ ಕಾರ್ಪೋರೇಟ್ ಸಾಮಾಜಿಕ ಜವಾಬ್ದಾರಿ ʼ (CSR) ನೀತಿಯನ್ನು ಜಾರಿಗೊಳಿಸಲಾಯಿತು. ಕಾರ್ಪೋರೇಟ್ ಸಮೂಹಗಳು ತಮ್ಮ ಸಾಮಾಜಿಕ ಬದ್ಧತೆಯನ್ನು ನಿರೂಪಿಸಲು ತಮ್ಮ ಲಾಭದ ಇಂತಿಷ್ಟು ಭಾಗವನ್ನು ಈ ಯೋಜನೆಯಡಿ ಖರ್ಚುಮಾಡಲು ಅವಕಾಶ ಕಲ್ಪಿಸಲಾಯಿತು.
ಇದಕ್ಕೆ ಪ್ರತಿಯಾಗಿ ಬಂಡವಾಳಶಾಹಿ ಜಗತ್ತು ಪಡೆದುಕೊಂಡ ಉಪಯೋಗ ಎಂದರೆ ಅಪಾರ ಪ್ರಮಾಣದ ಭೂಮಿಯ ಸ್ವಾಧೀನ ಮತ್ತು ಒಡೆತನ. ನವ ಉದಾರವಾದಿ ನೀತಿಗಳು ಔದ್ಯಮಿಕ ವಲಯದ ಕಾರ್ಪೋರೇಟೀಕರಣ ಪ್ರಕ್ರಿಯೆಯನ್ನು ಚುರುಕುಗೊಳಿಸುತ್ತಿರುವಂತೆ, ಕಾರ್ಪೋರೇಟ್ ಸಮೂಹಗಳಿಗೆ ತಮ್ಮ ಔದ್ಯಮಿಕ ಬಂಡವಾಳ ಹೂಡಿಕೆಗಾಗಿ ಭೂ ಸ್ವಾಧೀನ ಮಾಡಿಕೊಳ್ಳುವ ಅವಕಾಶಗಳನ್ನೂ ಸುಗಮಗೊಳಿಸಲಾಯಿತು. ಈ ಹಿನ್ನೆಲೆಯಲ್ಲೇ ಕೃಷಿಯೇತರ ಚಟುವಟಿಕೆಗಳಿಗೆ ನಿಷಿದ್ಧವಾಗಿದ್ದ ಕೃಷಿ ಭೂಮಿ, ಪರಿಸರಕ್ಕೆ ಮಾರಕವಾದ ಉದ್ಯಮಗಳಿಗೆ ನಿಷಿದ್ಧವಾಗಿದ್ದ ಅರಣ್ಯ ಭೂಮಿಯನ್ನು, ಕಾರ್ಪೋರೇಟ್ ಉದ್ಯಮಿಗಳಿಗೆ ಸುಲಭ ದರದಲ್ಲಿ, ಸುಗಮ ಹಾದಿಯ ಮೂಲಕ ಒದಗಿಸುವ ಹಲವು ಕಾನೂನು ತಿದ್ದುಪಡಿಗಳನ್ನೂ ಮಾಡಲಾಯಿತು. ಈಗ ಔದ್ಯೋಗಿಕ-ಔದ್ಯಮಿಕ ಚಟುವಟಿಕೆಗಳಿಗೆ ಕೃಷಿ ಮತ್ತು ಅರಣ್ಯ ಭೂಮಿಯನ್ನು ಪರಭಾರೆ ಮಾಡುವುದು ಸುಲಭವಾಗಿದ್ದು, ದೇಶದ ಲಕ್ಷಾಂತರ ಹೆಕ್ಟೇರ್ ಅರಣ್ಯ ಭೂಮಿ ಗಣಿಗಾರಿಕೆಯ ಪಾಲಾಗಿದ್ದರೆ, ಕೃಷಿ ಭೂಮಿ ರಸ್ತೆ, ಹೆದ್ದಾರಿ, ರಿಯಲ್ ಎಸ್ಟೇಟ್ ಉದ್ಯಮಗಳ ಪಾಲಾಗಿದೆ.
ಋಣ ಸಂದಾಯದ ಕಾರ್ಪೋರೇಟ್ ರೂಪ
ಈ ಅನುಕೂಲತೆಗಳ ಋಣ ತೀರಿಸುವ ಒಂದು ವಿಧಾನ ಕಾರ್ಪೋರೇಟ್ ಸಾಮಾಜಿಕ ಜವಾಬ್ದಾರಿ (CSR) ಯೋಜನೆ. ದೇಶದ ದೊಡ್ಡ ಬಂಡವಾಳಿಗರು ಈ ಯೋಜನೆಯಡಿ ಸಾಕಷ್ಟು ಉತ್ತಮ ಕೆಲಸಗಳನ್ನು ಮಾಡಿರುವುದು ಅಲ್ಲಗಳೆಯಲಾಗದ ಸತ್ಯ. ಇನ್ಫೋಸಿಸ್ ಫೌಂಡೇಷನ್, ಅಂಬಾನಿ ಮತ್ತು ಅದಾನಿ ಸಮೂಹಗಳು ದೇಶದ ವಿವಿಧೆಡೆಗಳಲ್ಲಿ ಈ ಯೋಜನೆಯಡಿ ಸಮಾಜಕ್ಕೆ ನೆರವಾಗುವ ನಿಟ್ಟಿನಲ್ಲಿ ಖರ್ಚು ಮಾಡಿವೆ. ಇದು ಅವಕಾಶವಂಚಿತ-ಅಂಚಿನಲ್ಲಿರುವ ತಳಸಮಾಜಕ್ಕೆ ತಲುಪಿದಯೋ ಇಲ್ಲವೋ ಎನ್ನುವುದು ಚರ್ಚಾಸ್ಪದ.
ಆದರೆ ಇಲ್ಲಿಯೂ ಪ್ರತಿಫಲಾಪೇಕ್ಷೆ ಇಲ್ಲದೆ ಯಾವುದೇ ಬಂಡವಾಳಿಗರೂ ತಮ್ಮ ʼ ಸಾಮಾಜಿಕ ಜವಾಬ್ದಾರಿ ʼ ಯನ್ನು ನಿಭಾಯಿಸಿಲ್ಲ. 2015ರಿಂದಲೇ ದೇಶದಲ್ಲಿ ಸಂಪತ್ತಿನ ಮೇಲೆ ವಿಧಿಸುತ್ತಿದ್ದ ತೆರಿಗೆಯನ್ನು ರದ್ದುಪಡಿಸಲಾಗಿದೆ. 2019ರ ಸೆಪ್ಟೆಂಬರ್‌ನಿಂದ ವಾರ್ಷಿಕ ಕಾರ್ಪೋರೇಟ್ ತೆರಿಗೆ ದರವನ್ನು ಶೇಕಡಾ 30 ರಿಂದ ಶೇಕಡಾ 22ಕ್ಕೆ ಇಳಿಸಲಾಗಿದೆ. ಈ ನೀತಿಯನ್ನು ಜಾರಿಗೊಳಿಸಿದ ಮೊದಲ ಎರಡು ವರ್ಷಗಳಲ್ಲೇ ಸರ್ಕಾರದ ಬೊಕ್ಕಸಕ್ಕೆ 400ಕ್ಕೂ ಹೆಚ್ಚು ಕಂಪನಿಗಳಿಂದ 1.84 ಲಕ್ಷ ಕೋಟಿ ರೂ ನಷ್ಟವಾಗಿತ್ತು. ಸಂಪತ್ತಿನ ತೆರಿಗೆ ರದ್ದತಿಯ ಪರಿಣಾಮ ಕಳೆದ ಹತ್ತು ವರ್ಷಗಳಲ್ಲಿ ಸರ್ಕಾರಕ್ಕೆ 11,812.98 ಕೋಟಿ ರೂಗಳ ನಷ್ಟವಾಗಿದೆ.
ಸರ್ಕಾರದ ಈ ಔದಾರ್ಯದ ಫಲಾನುಭವಿಗಳಾಗಿ ಋಣ ಸಂದಾಯ ಮಾಡಬೇಕಾದ ಔದ್ಯಮಿಕ ಜಗತ್ತು ತನ್ನ ಸಾಮಾಜಿಕ ಜವಾಬ್ದಾರಿಯನ್ನು ನಿಗದಿತ ಮಿತಿಯ ಚೌಕಟ್ಟಿನೊಳಗೇ ನಿಭಾಯಿಸಬೇಕಾಗುತ್ತದೆ. ಈ ಋಣ ಸಂದಾಯದ ಮತ್ತೊಂದು ಆಯಾಮವನ್ನು ರಾಜಕೀಯ ಕಾರ್ಪೋರೇಟ್ ದೇಣಿಗೆಗಳಲ್ಲಿ ಕಾಣಬಹುದು. ಇದರ ನವ ಉದಾರವಾದಿ-ಕಾರ್ಪೋರೇಟ್ ರೂಪವನ್ನು ಎನ್‌ಡಿಎ ಸರ್ಕಾರ ಜಾರಿಗೊಳಿಸಿದ ಚುನಾವಣಾ ಬಾಂಡ್ ಯೋಜನೆಯಲ್ಲಿ ಗುರುತಿಸಬಹುದು. ಸುಪ್ರೀಂಕೋರ್ಟ್ ಚುನಾವಣಾ ಬಾಂಡ್ ಯೋಜನೆಯನ್ನು ಅಸಾಂವಿಧಾನಿಕ ಎಂದು ಆದೇಶ ನೀಡಿದ್ದು, ಇದು ಸಂವಿಧಾನ ಅನುಚ್ಛೇದ 19(1) (ಎ) ಅನುಸಾರ ಮಾಹಿತಿ ಹಕ್ಕಿನ ಉಲ್ಲಂಘನೆ ಎಂದು ಹೇಳಿದೆ. ಆದರೆ ಕಳೆದ ಲೋಕಸಭಾ ಚುನಾವಣೆಗಳಲ್ಲೂ ಸಹ ಇದು ಒಂದು ರಾಜಕೀಯ ಸಂಕಥನವಾಗಿ ಕಾಣಲಿಲ್ಲ. ಯಾವುದೇ ವಿರೋಧ ಪಕ್ಷವೂ ಸಹ ಸಾಂವಿಧಾನಿಕವಾಗಿ ಅಸಿಂಧು ಆಗಿರುವ ಈ ಯೋಜನೆಯನ್ನು ರದ್ದುಪಡಿಸುವ, ತಿದ್ದುಪಡಿ ಮಾಡುವ ಆಗ್ರಹವನ್ನು ಸಾರ್ವಜನಿಕವಾಗಿ ಮಂಡಿಸಿಲ್ಲ, ಅಥವಾ ಇದರ ವಿರುದ್ಧ ಜನಾಂದೋಲನಗಳನ್ನು ಹಮ್ಮಿಕೊಂಡಿಲ್ಲ.
ಪಕ್ಷ ರಾಜಕಾರಣ ಮತ್ತು ಮಾರುಕಟ್ಟೆ
ಇದು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಪ್ರತಿನಿಧಿಸುವ ಪ್ರಧಾನ ರಾಜಕೀಯ ಪಕ್ಷಗಳ ನಡುವಿನ ತಾತ್ವಿಕ ಒಮ್ಮತದ ಸೂಚನೆ ಎನ್ನಬಹುದೇನೋ ? ಸಿಪಿಐ, ಸಿಪಿಎಂ ಮತ್ತು ಸಿಪಿಐ-ಎಮ್‌ಎಲ್ ಲಿಬರೇಷನ್ ಪಕ್ಷಗಳು 2023ರಲ್ಲಿ ಚುನಾವಣಾ ಆಯೋಗಕ್ಕೆ ಮುಚ್ಚಳಿಕೆ ಪತ್ರ ಬರೆದುಕೊಟ್ಟಿದ್ದು, ಚುನಾವಣಾ ಬಾಂಡ್‌ಗಳನ್ನು ಸ್ವೀಕರಿಸುವುದಿಲ್ಲ ಎಂದು ಪ್ರಮಾಣೀಕರಿಸಿವೆ. ಉಳಿದಂತೆ ಎಲ್ಲ ಪ್ರಾದೇಶಿಕ ಪಕ್ಷಗಳೂ ಇದರ ಫಲಾನುಭವಿಗಳೇ ಆಗಿವೆ. ಇತ್ತೀಚೆಗೆ ಅಸೋಷಿಯೆಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ಸಂಸ್ಥೆ ಬಿಡುಗಡೆ ಮಾಡಿರುವ ವರದಿಯೊಂದರ ಅನುಸಾರ, 2023-24ರಲ್ಲಿ ಬಿಜೆಪಿ 2,243.947 ಕೋಟಿ ರೂಗಳನ್ನು ದೇಣಿಗೆಯ ರೂಪದಲ್ಲಿ ಪಡೆದಿದೆ.
ಉಳಿದ ಮುಖ್ಯವಾಹಿನಿಯ ಎನ್‌ಸಿಪಿ, ಆಮ್ ಆದ್ಮಿ ಪಕ್ಷ ಮತ್ತಿತರ ಪಕ್ಷಗಳು ಒಟ್ಟು ಪಡೆದಿರುವ ದೇಣಿಗೆಯ ಆರುಪಟ್ಟು ಹೆಚ್ಚು ಮೊತ್ತವನ್ನು ಬಿಜೆಪಿ ಪಡೆದಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಬಹುಜನ ಸಮಾಜ ಪಕ್ಷ ಯಾವುದೇ ದೇಣಿಗೆ ಪಡೆದಿಲ್ಲ. 2025ರ ADR ವರದಿಯ ಅನುಸಾರ ಬಿಜೆಪಿ 2024ರ ಹಣಕಾಸು ವರ್ಷದಲ್ಲಿ ಗಳಿಸಿದ ಒಟ್ಟು ವರಮಾನ 4,340.40 ಕೋಟಿ ರೂಗಳ ಪೈಕಿ, 2,211.6 ಕೋಟಿ ರೂಗಳನ್ನು ಖರ್ಚು ಮಾಡಿದೆ. ಕಾಂಗ್ರೆಸ್ ಪಕ್ಷವು ಕ್ರಮವಾಗಿ 1,225 ಕೋಟಿ ರೂಗಳಲ್ಲಿ 1,025 ಕೋಟಿ ರೂಗಳನ್ನು ಖರ್ಚು ಮಾಡಿದೆ.
ಇದನ್ನೂ ನೋಡಿ: ಬಾಣಂತಿಯರ ಸಾವಿನ ಹೊಣೆ ಯಾರದ್ದು? ಮೆಡಿಸಿನ್ ಮಾಫಿಯಾಗೆ ಕಡಿವಾಣ ಯಾವಾಗ?! Janashakthi Media
2023-24ರಲ್ಲಿ ಎಲ್ಲ ರಾಜಕೀಯ ಪಕ್ಷಗಳು 12,547 ವಹಿವಾಟುಗಳ ಮೂಲಕ ಪಡೆದ ಒಟ್ಟು ದೇಣಿಗೆಯ ಮೊತ್ತ 2.544.278 ಕೋಟಿ ರೂಗಳಷ್ಟಾಗಿವೆ ಎಂದು ADR ವರದಿ ಹೇಳುತ್ತದೆ. ಇದರ ಸಿಂಹಪಾಲು, 8,358 ದೇಣಿಗೆಗಳನ್ನು, 2,243.947 ಕೋಟಿ ರೂಗಳನ್ನು ಬಿಜೆಪಿ ಪಡೆದುಕೊಂಡಿದೆ. ನಂತರದ ಸ್ಥಾನದಲ್ಲಿ ಕಾಂಗ್ರೆಸ್ ಪಕ್ಷ 1194 ದೇಣಿಗೆಗಳ ಮೂಲಕ 281.48 ಕೋಟಿ ರೂಗಳನ್ನು ಪಡೆದಿದೆ. ತಲಾ ದೇಣಿಗೆ 20, 000 ರೂಗಳಿಗೂ ಹೆಚ್ಚು ಇರುವುದನ್ನು ಮಾತ್ರ ಇಲ್ಲಿ ಪರಿಗಣಿಸಲಾಗಿದೆ. ಬಿಜೆಪಿ 2022-23ರ ವರ್ಷಕ್ಕೆ ಹೋಲಿಸಿದರೆ ಕಳೆದ ವರ್ಷದಲ್ಲಿ 719.858 ಕೋಟಿ ರೂಗಳ ಹೆಚ್ಚು ದೇಣಿಗೆಯನ್ನು (ಶೇಕಡಾ 211.72) ಪಡೆದಿದೆ. ಕಾಂಗ್ರೆಸ್ ಪಕ್ಷ 79.924 ಕೋಟಿ ರೂಗಳನ್ನು ಹೆಚ್ಚಾಗಿ (ಶೇಕಡಾ 252.18) ಪಡೆದಿದೆ. ಆಮ್ ಆದ್ಮಿ ಪಕ್ಷ ಮತ್ತು ಎನ್‌ಪಿಇಪಿ ಪಕ್ಷಗಳ ದೇಣಿಗೆಯ ಪ್ರಮಾಣ ಕಡಿಮೆಯಾಗಿರುವುದಾಗಿ ವರದಿಯಲ್ಲಿ ಹೇಳಲಾಗಿದೆ.
ಈ ದೇಣಿಗೆಗಳ ಪೈಕಿ ಕಾರ್ಪೋರೇಟ್ ಔದ್ಯಮಿಕ ವಲಯದಿಂದ ರಾಷ್ಟ್ರೀಯ ಪಕ್ಷಗಳಿಗೆ 2,262.5537 ಕೋಟಿ ರೂಗಳಷ್ಟು ಲಭಿಸಿದ್ದರೆ (ಶೇಕಡಾ 88.9271) , 8,493 ವ್ಯಕ್ತಿಗಳಿಂದ 270.872 ಕೋಟಿ ರೂ (ಶೇಕಡಾ 10.6463) ಲಭಿಸಿದೆ. ಬಿಜೆಪಿಗೆ ದೇಣಿಗೆ ನೀಡಿರುವ ಉದ್ದಿಮೆಗಳ ಸಂಖ್ಯೆ 3,478, ವ್ಯಕ್ತಿಗಳ ಸಂಖ್ಯೆ 4,628 ಇರುವುದಾಗಿ ವರದಿಯಲ್ಲಿ ಹೇಳಲಾಗಿದೆ. ಕಾರ್ಪೋರೇಟ್ ದೇಣಿಗಗಳ ಪೈಕಿ ಬಿಜೆಪಿ ಉಳಿದೆಲ್ಲಾ ರಾಷ್ಟ್ರೀಯ ಪಕ್ಷಗಳಿಗಿಂತಲೂ ಒಂಬತ್ತು ಪಟ್ಟು ಹೆಚ್ಚಿನ ದೇಣಿಗೆಯನ್ನು ಸಂಗ್ರಹಿಸಿದೆ. ಪ್ರೂಡೆಂಟ್ ಎಲೆಕ್ಟೋರಲ್ ಟ್ರಸ್ಟ್, ಟ್ರಿಯಂಫ್ ಎಲೆಕ್ಟೋರಲ್ ಟ್ರಸ್ಟ್, ಡಿರೈವ್ ಇನ್ವೆಸ್ಟ್‌ಮೆಂಟ್ಸ್, ಅಕ್ಮೇ ಸೋಲಾರ್ ಎನರ್ಜಿ ಪ್ರೈ. ಲಿಮಿಟೆಡ್, ಭಾರತ್ ಬಯೋಟೆಕ್, ರುಂಗ್ಟಾ ಸನ್ಸ್ ಪ್ರೈ. ಲಿಮಿಟೆಡ್, ದಿನೇಶ್ ಚಂದ್ರ ಅಗರ್ವಾಲ್ ಇನ್ಫ್ರಾಕಾನ್ ಲಿಮಿಟೆಟ್ ಮೊದಲಾದ ಕಂಪನಿಗಳು ಪ್ರಧಾನವಾಗಿ ಬಿಜೆಪಿಗೆ ಹೆಚ್ಚಿನ ದೇಣಿಗೆಯನ್ನು ನೀಡಿವೆ.
ರಾಜಕಾರಣದ ಕಾರ್ಪೋರೇಟೀಕರಣ
ಚುನಾವಣಾ ಬಾಂಡ್ ಮೂಲಕ ಮತ್ತು ಇತರ ಮೂಲಗಳನ್ನು ಬಳಸಿಕೊಂಡು ಔದ್ಯಮಿಕ ಜಗತ್ತು ರಾಜಕೀಯ ಪಕ್ಷಗಳಿಗೆ ನೀಡುವ ದೇಣಿಗೆಗಳು , ಜಾಗತೀಕರಣ ಪೂರ್ವದ ದಿನಗಳಿಗೆ ಹೋಲಿಸಿದರೆ ರೂಪಾಂತರ ಹೊಂದಿರುವುದನ್ನು ಗುರುತಿಸಬಹುದು. ಇಂದು ಕಾರ್ಪೋರೇಟ್ ಉದ್ದಿಮೆಗಳು, ರಿಯಲ್ ಎಸ್ಟೇಟ್ ಉದ್ದಿಮೆಗಳು ಮುಖ್ಯವಾಹಿನಿ ರಾಜಕೀಯ ಪಕ್ಷಗಳ ಚುನಾವಣಾ ವೆಚ್ಚಗಳನ್ನೂ ಸಹ ಭರಿಸುವ ಹಲವು ವಿಧಾನಗಳನ್ನು ಅನುಸರಿಸುತ್ತವೆ. ಪ್ರಾಯೋಜಿತ ಜಾಹೀರಾತು , ಹಣಸಂದಾಯದ ಸುದ್ದಿ (Paid news) ಇದರ ಒಂದು ಆಯಾಮ. ಇದರ ಫಲಾನುಭವಿಗಳ ಪಟ್ಟಿಯಲ್ಲಿ ಎಡಪಕ್ಷಗಳನ್ನು ಹೊರತುಪಡಿಸಿ ಉಳಿದೆಲ್ಲಾ ಪಕ್ಷಗಳನ್ನೂ ಕಾಣಬಹುದು. ಇದು ನವ ಉದಾರವಾದದ ಕಾರ್ಪೋರೇಟ್ ರೂಪ ಒಂದೆಡೆಯಾದರೆ, ದೇಶದ ಆರ್ಥಿಕತೆಯ ಕಾರ್ಪೋರೇಟೀಕರಣದ (Corporatisation) ಮತ್ತೊಂದು ಆಯಾಮ. ಇದರ ವಿಶಾಲ ರೂಪವನ್ನು ದೇಶದ ಪ್ರಜಾಸತ್ತಾತ್ಮಕ ರಾಜಕಾರಣದ ಕಾರ್ಪೋರೇಟೀಕರಣ (Corporatisation of Democratic Politics) ಮತ್ತು ಕಾರ್ಪೋರೇಟ್ ಔದ್ಯಮಿಕ ಜಗತ್ತಿನ ರಾಜಕೀಕರಣದಲ್ಲಿ ( Politicisation of Coroprate World) ಗುರುತಿಸಬಹುದು.
ಇದು ಭಾರತಕ್ಕಷ್ಟೇ ಸೀಮಿತವೂ ಅಲ್ಲ, ಕಾರ್ಪೋರೇಟ್ ಮಾರುಕಟ್ಟೆಯ ಬೆಳವಣಿಗೆ, ನವ ಉದಾರವಾದಿ ಬಂಡವಾಳಶಾಹಿಯ ಹೊಸ ಡಿಜಿಟಲ್ ಯುಗ ಮತ್ತು ಬಲಪಂಥೀಯ, ನಿರಂಕುಶಾಧಿಕಾರಿ ಆಳ್ವಿಕೆಗಳ ವಿಭಿನ್ನ ರೂಪಗಳನ್ನು ವಿಶ್ವದ ಹಲವು ದೇಶಗಳಲ್ಲಿ ಗುರುತಿಸಬಹುದು. ಕಾರ್ಪೋರೇಟ್ ಉದ್ದಿಮೆಗಳು ರಾಜಕೀಯ ಪಕ್ಷಗಳಿಗೆ ನೀಡುವ ದೇಣಿಗೆಯ ಹಿಂದಿರುವ ಈ ಸೂಕ್ಷ್ಮವನ್ನು ಗ್ರಹಿಸಬೇಕಿದೆ. ಇದು ಪರಸ್ಪರ ಋಣಸಂದಾಯ ಪ್ರಕ್ರಿಯೆಯಾಗಿದ್ದು, ಆಡಳಿತಾರೂಢ ಪಕ್ಷಗಳು ಪ್ರಧಾನ ಫಲಾನುಭವಿಗಳಾಗಿರುವುದು ಅಚ್ಚರಿಯೇನಲ್ಲ. ಪ್ರಜಾಪ್ರಭುತ್ವದ ಮೂಲ ಆಶಯಗಳನ್ನು ರಕ್ಷಿಸಲು ಅಪೇಕ್ಷಿಸುವ ರಾಜಕೀಯ ಪಕ್ಷಗಳು ಈ ಮಾರುಕಟ್ಟೆ ಪ್ರವೃತ್ತಿಯ ವಿರುದ್ಧ ದನಿಎತ್ತಬೇಕು. ಆದರೆ ದುರದೃಷ್ಟವಶಾತ್, ಭಾರತದ ರಾಜಕಾರಣದಲ್ಲಿ ಇದು ರಾಜಕೀಯ ಸಂಕಥನದ ಒಂದು ಭಾಗವಾಗಿ ಹೊರಹೊಮ್ಮುತ್ತಲೇ ಇಲ್ಲ. ನಾಗರಿಕ ಸಮಾಜದ ಜನಾಂದೋಲನಗಳ ನಡುವೆಯೂ ಇದು ಗಂಭೀರ ಚರ್ಚೆ-ಪರಾಮರ್ಶೆಗೆ ಒಳಗಾಗುತ್ತಿಲ್ಲ. ಇದು ಸಂವಿಧಾನ-ಪ್ರಜಾಪ್ರಭುತ್ವವನ್ನು ಪ್ರೀತಿಸುವ ಪ್ರಜ್ಞಾವಂತ ನಾಗರಿಕರನ್ನು ಕಾಡಬೇಕಾದ ಮೂರ್ತ ಪ್ರಶ್ನೆ. ನಾಗ
( ರಾಜಕೀಯ ದೇಣಿಗೆಗಳ ದತ್ತಾಂಶಗಳಿಗೆ ಆಧಾರ ADR ವರದಿ @ Livemint.com ಮತ್ತಿತರ ಅಂತರ್ಜಾಲ ಮೂಲಗಳು )