ಬೆಂಗಳೂರು : ವಕೀಲರು ಕೂಡ ನಿತ್ಯ ಸಾರ್ವಜನಿಕ ಸಂಪರ್ಕ ಹೊಂದುವದರಿಂದಾಗಿ ಈಗಾಗಲೇ ರಾಜ್ಯದಾದ್ಯಂತ 200ಕ್ಕೂ ಹೆಚ್ಚು ವಕೀಲರು ಕೋವಿಡ್ ಬಾಧಿತರಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಪ್ರಾಣ ಕಳೆದುಕೊಂಡ ವಕೀಲರ ಕುಟುಂಬದವರು ಹಲವಾರು ಸಮಸ್ಯೆಗಳನ್ನು ಹಾಗೂ ಸಂಕಷ್ಟ ಎದುರಿಸುತ್ತಿದ್ದಾರೆ. ಮರಣ ಹೊಂದಿದ ವಕೀಲ ಕುಟುಂಬದವರಿಗೆ ರೂ. 30 ಲಕ್ಷ ಪರಿಹಾರ ನೀಡಬೇಕೆಂದು ಅಖಿಲ ಭಾರತ ವಕೀಲರ ಒಕ್ಕೂಟ ಎಐಎಲ್‌ಯು, ಕರ್ನಾಟಕ ರಾಜ್ಯ ಸಮಿತಿಯು ಒತ್ತಾಯಿಸಿದೆ.
ಎಐಎಲ್‌ಯು ಸಮಿತಿಯು ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಿದ್ದು, ಕೋವಿಡ್ ಸಂಕಷ್ಟದಿಂದಾಗ ಲಾಕ್‌ಡೌನ್ ಜಾರಿಯಲ್ಲಿರುವುದರಿಂದ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ, ವಕೀಲರಿಗೆ ಸಹಾಯ ಒದಗಿಸಲು ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿಗೆ 100 ಕೊಟಿ ರೂಪಾಯಿ ಹಣಕಾಸು ಅನುದಾನ ನೀಡಬೇಕೆಂದು ವಿನಂತಿಸಿಕೊಂಡಿದೆ.
ಇದನ್ನು ಓದಿ: ಸಂಪೂರ್ಣ ಲಾಕ್‌ಡೌನ್ ಕಾನೂನು ಬಾಹಿರ: ಎಐಎಲ್‌ಯು
ಕೋವಿಡ್ ಸೋಂಕಿತರಾದ ಕೆಲವು ವಕೀಲರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲವು ವಕೀಲರು ಮನೆಯಲ್ಲಿಯೇ ಆರೈಕೆ ಪಡೆಯುತ್ತಿದ್ದಾರೆ. ಕೊವಿಡ್-19 ರಿಂದ ಭಾದಿತರಾಗುವ ವಕೀಲರಿಗೆ ಉಚಿತ ಚಿಕಿತ್ಸೆ ಒದಗಿಸಲು ಯೋಜನೆ ರೂಪಿಸಬೇಕು. ವಕೀಲರು ದಿನ ನಿತ್ಯ ಸಾರ್ವಜನಿಕ ಸಂಪರ್ಕಕ್ಕೆ ಬರುವ ಕಾರಣದಿಂದಾಗಿ ವಕೀಲರಿಗೆ ಹಾಗೂ ವಕೀಲರ ಕುಟುಂಬದ ಸದಸ್ಯರಿಗೆ ಆದ್ಯತೆ ಮೇರೆಗೆ ಹಾಗೂ ಶೀಘ್ರವಾಗಿ ಲಸಿಕೆ ನೀಡುವ ವ್ಯವಸ್ಥೆ ಮಾಡಲು, ವಕೀಲರನ್ನು ಪ್ರಂಟ್ ಲೈನ್ ವಾರಿಯರ‍್ಸ್ ಎಂದು ಪರಿಗಣಿಸಲು ಒತ್ತಾಯಿಸಿ ಮನವಿ ಮಾಡಿದ್ದಾರೆ.
ವಕೀಲ ವೃತ್ತಿ ಉದಾತ್ತವಾದ ವೃತ್ತಿಯಾಗಿದ್ದು, ಜನ ಸಮುದಾಯದಲ್ಲಿ ವಕೀಲರಿಗೆ ಅಪಾರವಾದ ಗೌರವವಿದೆ. ವಕೀಲರು ನ್ಯಾಯಾಂಗದ ಅಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಾ ಬಂದಿರುತ್ತಾರೆ. ಕೊವಿಡ್-19 ವೈರಸ್ ಪರಿಣಾಮವಾಗಿ ವಕೀಲರು ಬಹಳ ಸಮಸ್ಯೆ, ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ.
ಕಳೆದ ವರ್ಷ ಮಾರ್ಚ ತಿಂಗಳಿನಿಂದ ಕರ್ನಾಟಕ ಹೈಕೋರ್ಟ್ ಎಸ್‌ಓಪಿ ಪ್ರಕಾರ ನ್ಯಾಯಾಲಯದ ಕಾರ್ಯಕಲಾಪಗಳು ಕೆಲವು ದಿನಗಳವರೆಗೆ ಮಾತ್ರ ನಡೆದವು. ಅಲ್ಲದೇ ಅಧಿವಿಚಾರಣಾ ನ್ಯಾಯಾಲಯಗಳಲ್ಲಿ ದಿನಕ್ಕೆ 20-30 ಪ್ರಕರಣಗಳನ್ನು ಮಾತ್ರ ನಡೆಸುವುದಕ್ಕೆ ನಿರ್ಧರಿಸಲಾಗಿದೆ.
ಕಳೆದ ವರ್ಷದ ಅವಧಿಯಲ್ಲಿ ನ್ಯಾಯಾಲಯದ ಕಾರ್ಯಲಾಪಗಳು ಸುಗಮವಾಗಿ ನಡೆಯದ ಕಾರಣ ವಕೀಲರಿಗೆ ಬರುವ ಆದಾಯ ನಿಂತು ಹೊಗಿದೆ. ಈ ವರ್ಷವೂ ಕೂಡಾ ಹಲವು ಷರತ್ತುಗಳ ಹಾಗೂ ನಿರ್ಬಂಧಗಳ ಅನ್ವಯ ನ್ಯಾಯಾಲಯದ ಕಾರ್ಯಕಲಾಪಗಳು ನಡೆಯುತ್ತಿತ್ತು. ಹಲವು ನಿರ್ಬಂಧಗಳು ಇದ್ದ ಕಾರಣ ಕಕ್ಷಿದಾರರಿಗೆ ನಿರ್ಭಿತಿಯಿಂದ ನ್ಯಾಯಾಲಯಕ್ಕೆ ಬರಲು ಸಾದ್ಯವಾಗದ ಪರಿಸ್ಥಿತಿ ಇತ್ತು.
ಈಗ ಎರಡನೇ ಅಲೆ ಬರಸಿಡಿಲಿನಂತೆ ಬಂದು ಎರಗಿದರ ಪರಿಣಾಮವಾಗಿ ಸರಕಾರ ಲಾಕ್‌ಡೌನ್ ಘೋಷಣೆ ಮಾಡಿದೆ. ನ್ಯಾಯಾಲಯದ ಕಾರ್ಯಕಲಾಪಗಳು ಸುಗಮವಾಗಿ ಹಾಗೂ ಸರಾಗವಾಗಿ ನಡೆದಲ್ಲಿ ಮಾತ್ರ ಪಕ್ಷಗಾರರು ನ್ಯಾಯಾಲಯಕ್ಕೆ ಬರಲು ಅನುಕೂಲವಾಗುತ್ತದೆ, ಅಲ್ಲದೇ ವಕೀಲರಿಗೂ ಕೂಡಾ ಆದಾಯವೂ ಬರುತ್ತದೆ. ಪಕ್ಷಗಾರರೇ ಬರದಿದ್ದರೇ ಯಾವುದೇ ಆದಾಯ ಬರಲಾರದು ಎಂದು ತಿಳಿಸಿದ್ದಾರೆ.
ಲಾಕ್‌ಡೌನ್ ಪರಿಣಾಮವಾಗಿ ಕೇವಲ ತುರ್ತು ಪ್ರಕರಣಗಳ ವಿಚಾರಣೆ ಮಾತ್ರ ನಡೆಯುತ್ತಿರುವದರಿಂದ ವಕೀಲರಿಗೆ ಯಾವುದೇ ಆದಾಯ ಬರುತ್ತಿಲ್ಲ. ಈಗ ತಾನೇ ವೃತ್ತಿಗೆ ಬಂದ ವಕೀಲರು ಹಾಗೂ ಯುವ ವಕೀಲರಿಗೆ ಆದಾಯ ಇಲ್ಲವಾಗಿದೆ. ಕೋರ್ಟ್ ಕಲಾಪಗಳು ನಡೆಯದ್ದರಿಂದ ಯುವ ವಕೀಲರು ತೀರ್ವವಾದ ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾರೆ ಎಂದು ಎಐಎಲ್‌ಯು ಸಂಘಟನೆಯು ವಿವರಿಸಿದೆ.
ವಕೀಲರು ವಕೀಲ ವೃತ್ತಿಯನ್ನು ಬಿಟ್ಟು ಬೇರ‍್ಯಾವುದೇ ವೃತ್ತಿ ಮಾಡಲು ಅವಕಾಶವಿಲ್ಲ. ಇವರು ತೀರ್ವತರವಾದ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿದ್ದಾರೆ. ಕರ್ನಾಟಕದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ವಕೀಲರು ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನಲ್ಲಿ ನೋಂದಣಿ ಮಾಡಿಕೊಂಡಿದ್ದು ಅದರಲ್ಲಿ ಶೇಕಡಾ 70% ರಷ್ಟು ವಕೀಲರು ಯುವ ವಕೀಲರೇ ಇರುತ್ತಾರೆ. ಹಲವು ವಕೀಲರು ಬಾಡಿಗೆ ಮನೆ ಮತ್ತು ಕಛೇರಿ ನಡೆಸಲು ಬಾಡಿಗೆ ಕಟ್ಟಡ ಮತ್ತು ಮಳಿಗೆಗಳನ್ನು ಪಡೆದಿರುತ್ತಾರೆ. ಈ ಲಾಕ್‌ಡೌನ್ ಅವಧಿಯಲ್ಲಿ ಆದಾಯ ನಿಂತು ಹೋಗಿರುವುದರಿಂದ ಕುಟುಂಬ ನಿರ್ವಹಣೆ ಮಾಡಲು ಮತ್ತು ಮನೆ ಮತ್ತು ಕಛೇರಿ ಬಾಡಿಗೆ ಸಂದಾಯ ಮಾಡಲು ತೀರ್ವವಾದ ಕಷ್ಟ ಎದುರಿಸುತ್ತಿದ್ದಾರೆ.
ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ವಕೀಲರ ಕಲ್ಯಾಣ ನಿಧಿ ಕಾಯ್ದಯಡಿಯಲ್ಲಿ ವಕೀಲರ ಕಲ್ಯಾಣ ನಿಧಿ ಸ್ಥಾಪಿಸಿದ್ದು, ಸದರ ನಿಧಿಗೆ ವಕೀಲರಿಂದ ವಾರ್ಷಿಕ ವಂತಿಗೆ ಹಣ ಪಡೆಯಲಾಗುತ್ತಿದೆ. ಸದರಿ ಹಣವನ್ನು ವಕೀಲರು ಮೃತರಾದಾಗ ವಕೀಲರ ಕುಂಟುಂಬಕ್ಕೆ ಒದಗಿಸಲು ಮತ್ತು ವಕೀಲರು ತೀರ್ವವಾದ ವೈಧ್ಯಕೀಯ ಚಿಕಿತ್ಸೆಗಾಗಿ ಹಣ ನೀಡಲು ಮತ್ತು 75 ವರ್ಷ ಪೂರೈಸಿದ ವಕೀಲರು ತಮ್ಮ ಸನದನ್ನು ಸರಂಡರ್ ಮಾಡಿದಾಗ ಹಣ ನೀಡುವುದಕ್ಕೆ ಮಾತ್ರ ಅವಕಾಶವಿದೆ. ಕೇವಲ ವಂತಿಗೆ ಹಣದಿಂದಲೇ ಸಂಕಷ್ಟಕ್ಕೆ ಒಳಗಾದ ವಕೀಲರಿಗೆ ಸಹಾಯ ನೀಡಲು ಹಣ ಸಾಕಾಗುವುದಿಲ್ಲ ಎಂದು ಸಂಕಷ್ಟ ಪರಿಸ್ಥಿತಿಯನ್ನು ವಿವರಿದ್ದಾರೆ.
ಮೂರನೇ ಅಲೆಯ ಭಯ ಹಾಗೂ ಭೀತಿ ವಕೀಲರನ್ನು ಕಾಡುತ್ತಿದೆ. ಈ ಸಂಕಷ್ಟದ ಸಂದರ್ಭದಲ್ಲಿ ಸರಕಾರಗಳು ವಕೀಲರ ಹಿತ ಕಾಪಾಡಲು ಯಾವುದೇ ಯೋಜನೆಯನ್ನು ರೂಪಿಸದಿರುವುದು ವಿಪರ್ಯಾಸದ ಸಂಗತಿ. ಸರಕಾರ ಕಳೆದ ಬಜೆಟ್ ನಲ್ಲಿಯೋ ಕೂಡಾ ವಕೀಲರಿಗಾಗಿ ಯಾವುದೇ ಯೋಜನೆ ರೂಪಿಸಿಲ್ಲ ಹಾಗೂ ಯಾವುದೇ ರೀತಿಯ ಹಣ ಮೀಸಲು ಇಟ್ಟಿಲ್ಲ. ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಹಾಗೂ ಹಲವಾರು ವಕೀಲರ ಸಂಘಟನೆಗಳು ಸರಕಾರಕ್ಕೆ ಮನವಿ ಸಲ್ಲಿಸಿದರೂ ಕೂಡಾ ಸರಕಾರ ವಕೀಲರ ಸಮುದಾಯವನ್ನು ಕಡೆಗಣಿಸುತ್ತಲೇ ಬಂದಿರುವುದು ಅತ್ಯಂತ ಖೇದಕರ ಸಂಗತಿ ಎಂದು ಸಂಘಟನೆಯು ಮನವಿಯಲ್ಲಿ ತಿಳಿಸಿದೆ.
ಕೂಡಲೇ ರಾಜ್ಯ ಸರಕಾರವು ಕೋವಿಡ್‌ನಿಂದ ಮರಣ ಹೊಂದಿದ ಕುಟುಂಬದವರಿಗೆ ರೂ.30 ಲಕ್ಷ ಪರಿಹಾರ ಹಾಗೂ ರೂ.100 ಕೋಟಿ ಹಣಕಾಸು ಅನುದಾನವನ್ನು ಬಿಡುಗಡೆಗೊಳಿಸಬೇಕು. ಅಲ್ಲದೆ, ವಕೀಲರನ್ನು ಪ್ರಂಟ್‌ಲೈನ್ ವಾರಿಯರ‍್ಸ್ ಎಂದು ಪರಿಗಣಿಸಿ ವಕೀಲರ ಸಂಕಷ್ಟಕ್ಕೆ ಪರಿಹಾರವನ್ನು ಒದಗಿಸಬೇಕೆಂದು ವಿನಂತಿಸಿಕೊಂಡಿದ್ದಾರೆ.