ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿನ ಮೂರನೇ ಅಲೆಯ ಗಂಭೀರತೆಯಿಂದಾಗಿ ಕೆಲವು ದಿನಗಳಿಂದ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಅದರಲ್ಲೂ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ದೃಢೀಕೃತ ಹೊಸ ಪ್ರಕರಣಗಳ ಸಂಖ್ಯೆ ಅಧಿಕಗೊಳ್ಳುತ್ತಿವೆ. ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವುದರಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಹತ್ವದ ಸಭೆ ಏರ್ಪಡಿಸಿದ್ದಾರೆ.
ಕೊರೊನಾ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ನಿಯಮಗಳಗಳ ಮೂಲಕ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತಜ್ಞರ ಅಭಿಪ್ರಾಯ ಕೇಳಲಿದ್ದಾರೆ. ನಗರದಲ್ಲಿಯೂ ಮಕ್ಕಳಿಗೆ ಕೋವಿಡ್ ಸೋಂಕು ಹೆಚ್ಚಳವಾಗುತ್ತಿರುವುದರಿಂದ ಆತಂಕ ಎದುರಾಗಿದೆ. ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಮೂರನೇ ಅಲೆ ನಿಶ್ಚಿತ ಎನ್ನಲಾಗುತ್ತಿದೆ. ಹೀಗಾಗಿ ಏರಿಕೆಯಾಗುತ್ತಿರುವ ಸೋಂಕನ್ನು ಈಗಿನಿಂದಲೇ ಕಟ್ಟಿಹಾಕಲು ಸರ್ಕಾರ ಹೆಣಗಾಡುತ್ತಿದ್ದು, ಹಂತ ಹಂತವಾಗಿ ಬಿಗಿಕ್ರಮಗಳನ್ನು ಕೈಗೊಳ್ಳಲು ಅನುವಾಗುತ್ತಿದೆ.
ಇದನ್ನು ಓದಿ: ಮಕ್ಕಳ ಮೇಲೆ ಹೆಚ್ಚಿನ ನಿಗಾ-ಪ್ರತ್ಯೇಕ ಐಸಿಯು ಘಟಕ ಸ್ಥಾಪನೆ: ಸಿಎಂ ಬೊಮ್ಮಾಯಿ
ರಾಜ್ಯದಲ್ಲಿ ಏಕಾಏಕಿ ಲಾಕ್‌ಡೌನ್ ಮಾಡದಿರಲು ಸರ್ಕಾರ ನಿರ್ಧರಿಸಿದರೂ ಸಹ ಹಂತ ಹಂತವಾಗಿ ಸೋಂಕು ನಿಯಂತ್ರಣಕ್ಕೆ ಬೇಕಾದ ಕ್ರಮಗಳಿಗೆ ಮುಂದಾಗಿದ್ದು, ಲಾಕ್‌ಡೌನ್ ಹೇರುವ ಸಾಧ್ಯತೆಯೂ ಇದೆ. ಸದ್ಯ ಬೆಂಗಳೂರಿನಲ್ಲಿ ಪ್ರತಿನಿತ್ಯ ಪತ್ತೆಯಾಗುವ ಸೋಂಕಿತರ ಪ್ರಮಾಣ 350ರಿಂದ 450ರ ಆಸುಪಾಸಿನಲ್ಲಿದೆ. ಅದು ಎರಡು ಸಾವಿರಕ್ಕೆ ಏರಿಕೆಯಾದಲ್ಲಿ 7 ದಿನ ಲಾಕ್‌ಡೌನ್ ಜಾರಿಯಾಗುವುದು ಬಹುತೇಕ ಖಚಿತವಾಗಿದೆ.
ಪ್ರಸ್ತುತ ಬೆಂಗಳೂರಿನಲ್ಲಿ ಪಾಸಿಟಿವಿಟಿ ದರ ಶೇಕಡ 0.57ರಷ್ಟು ಇದ್ದು, ಪ್ರತಿದಿನ 350 ರಿಂದ 450 ರಷ್ಟು ಹೊಸ ಪ್ರಕರಗಳು ಪತ್ತೆಯಾಗುತ್ತಿವೆ. ಮಕ್ಕಳಿಗೆ ಸೋಂಕು ತಗುಲುವಿಕೆ ಶೇಕಡ 5ರಷ್ಟಿದೆ. ಅಂದರೆ ಸೊಂಕಿತರಾಗುವ 100 ಜನರ ಪೈಕಿ 5 ಮಕ್ಕಳಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದೆ.
ತಜ್ಞರ ಅಭಿಪ್ರಾಯದಂತೆ ಸೋಂಕಿತರ ಪ್ರಮಾಣ ಒಂದು ಸಾವಿರದಿಂದ ಎರಡು ಸಾವಿರಕ್ಕೆ ಏರಿಕೆಯಾಗಲು 15 ದಿನಗಳು ಮಾತ್ರ ಬೇಕಾಗಬಹುದು. ನಂತರವೂ ಜನರ ಓಡಾಟಕ್ಕೆ ನಿರ್ಬಂಧ ವಿಧಿಸದೇ ಇದ್ದಲ್ಲಿ ಪರಿಸ್ಥಿತಿ ಕೈಮೀರುವ ಅಪಾಯವಿದೆ. ಹೀಗಾಗಿ ಪಾಸಿಟಿವಿಟಿ ಪ್ರಮಾಣ ಶೇಕಡ 2ಕ್ಕೆ ಏರಿಕೆಯಾದರೆ ತಕ್ಷಣದಲ್ಲೇ ಲಾಕ್‌ಡೌನ್ ಜಾರಿ ಮಾಡುವ ಸಿದ್ದತೆಯಲ್ಲಿದೆ.
ಇದನ್ನು ಓದಿ: ಮನೆ ಬಾಗಿಲಿಗೆ ವೈದ್ಯರ ತಂಡ : ವಿನೂತನ ಪ್ರಯೋಗಕ್ಕೆ ಬಿಬಿಎಂಪಿ ಸಜ್ಜು
ತಾಂತ್ರಿಕ ಸಲಹಾ ಸಮಿತಿ ಸದಸ್ಯರು, ತಜ್ಞರು, ಬಿಬಿಎಂಪಿ ಅಧಿಕಾರಿಗಳು ಲಾಕ್‌ಡೌನ್ ಮಾಡೋದು ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ. ಲಾಕ್‌ಡೌನ್ ಮಾಡಿದರೂ ಮೊದಲು ಏಳು ದಿನಗಳು ಮಾಡವ ಚಿಂತನೆಯಿದ್ದು, ಕೊರೊನಾ ಸಾಂಕ್ರಾಮಿಕ ರೋಗ ಅಧಿಕ ಪ್ರಮಾಣದಲ್ಲಿ ಹೆಚ್ಚಳವಾಗದಂತೆ ತಡೆಯಲು ಏಳು ದಿನ ಬೇಕು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಲಾಕ್‌ಡೌನ್ ಜಾರಿಯಾದರೆ ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಅವಕಾಶ ನೀಡಬೇಕು. ಬೆಳಗ್ಗೆ 6 ರಿಂದ ಬೆಳಗ್ಗೆ 11 ಗಂಟೆವರೆಗೂ ಹಣ್ಣು, ತರಕಾರಿ, ಮಾಂಸ ಖರೀದಿಗೆ ಅವಕಾಶ ನೀಡಬೇಕು. ಉಳಿದಂತೆ ಬಸ್ ಓಡಾಟ, ವಾಹನಗಳ ಓಡಾಟ ಸಂಪೂರ್ಣ ಬಂದ್ ಮಾಡಬೇಕು. ರೈಲುಗಳ ಓಡಾಟದ ಬಗ್ಗೆ ಅಂತಿಮ ಹಂತದಲ್ಲಿ ನಿರ್ಧಾರ ಕೈಗೊಳ್ಳಬೇಕಾಗಬಹುದು ಎಂಬ ಅಂದಾಜು ಇದೆ.
ಕೆಲವು ನಿಯಮಗಳ ಜಾರಿ ಮಾಡುವ ಸಾಧ್ಯತೆ
ಕಚೇರಿ, ಕೈಗಾರಿಕೆಗಳಲ್ಲಿ ಶೇಕಡ 50 ಸಿಬ್ಬಂದಿ ಮಾತ್ರ ಕಾರ್ಯನಿರ್ವಹಿಸಬೇಕು
ಸಾರ್ವಜನಿಕ ಸಾರಿಗೆ ಶೇಕಡ 50ರಷ್ಟು ಮಾತ್ರ ಓಡಾಡಲು ಅವಕಾಶ ನೀಡಬೇಕು
ಮದುವೆಗಳಿಗೆ 100 ಜನರ ಬದಲು 40 ಕ್ಕೆ ಸೀಮಿತಗೊಳಿಸಬೇಕು
ಅಂತಿಮ ಸಂಸ್ಕಾರ ಕಾರ್ಯಗಳಿಗೆ ಕೇವಲ 10 ಜನಕ್ಕೆ ಮಾತ್ರ ಅವಕಾಶ ಕೊಡಿ
ರೆಸಾರ್ಟ್ ಅಥವಾ ಪ್ರವಾಸಿ ತಾಣಗಳನ್ನ ಬಂದ್ ಮಾಡಬೇಕು
ದೇವಸ್ಥಾನಗಳಲ್ಲಿ ಭಕ್ತರ ಪ್ರವೇಶ ನಿಷೇಧಿಸಬೇಕು
ರ್‍ಯಾಲಿ, ಸಾರ್ವಜನಿಕ ಸಮಾವೇಶ, ಬೃಹತ್ ಕಾರ್ಯಕ್ರಮಗಳಿಗೆ ಅವಕಾಶ ಕೊಡಬಾರದು
ಪಬ್, ಬಾರ್, ಜಿಮ್, ಯೋಗ ಕೇಂದ್ರಗಳನ್ನು ಲಾಕ್ ಮಾಡಬೇಕು
ಜನ ಸಂದಣೀಯ ಮಾರುಕಟ್ಟೆಗಳನ್ನು ಬಂದ್ ಮಾಡಬೇಕು