ದೇಶ ಮತ್ತು ಜಗತ್ತಿನ ವಿದ್ಯಮಾನಗಳನ್ನು ಗಮನಿಸಿದರೆ, ಕೊರೊನದಂತಹ ಮಾರಣಾಂತಿಕ ಸಾಂಕ್ರಾಮಿಕ ರೋಗಗಳು ಈ ಹಿಂದೆಯೂ ಬಂದಿವೆ. ಆಗ ವೈಜ್ಞಾನಿಕ ಸಂಶೋಧನೆಗಳು, ವೈದ್ಯಕೀಯ ವಲಯ ಈ ಸಾಂಕ್ರಾಮಿಕ ರೋಗಗಳನ್ನು ಎದುರಿಸಿದಂತೆ ಸಾಂಪ್ರದಾಯಿಕ ದೇಸಿ ಜ್ಞಾನವೂ ಇಂತಹ ರೋಗಗಳನ್ನು ಎದುರುಗೊಂಡಿದೆ. ಸಾಮಾನ್ಯವಾಗಿ ಮಾರಕ ಎನ್ನುವ ಸಾಂಕ್ರಾಮಿಕ ರೋಗವನ್ನು ಅದೊಂದು ಅಗೋಚರ ಶಕ್ತಿ ಯಾವುದೋ ಕೇಡಿನ ಕಾರಣಕ್ಕೆ ಬಂದಿದೆ ಎಂದು ದೇಶವ್ಯಾಪಿ ಗ್ರಾಮೀಣ ಜನರಲ್ಲಿ ನಂಬಿಕೆಯಿದೆ. ಈ ನಂಬಿಕೆಯ ಪರಿಣಾಮವಾಗಿ ದೇಶವ್ಯಾಪಿ ಸಾಂಕ್ರಾಮಿಕ ರೋಗಗಳಿಗೆ ಅತಿಮಾನುಷ ಶಕ್ತಿಯ `ದೇವಿ’ ಎಂದು ಸಾಮಾನ್ಯ ಜನರು ಭಾವಿಸುತ್ತಾರೆ. ಈ ನಂಬಿಕೆಯಿಂದ ಅತಿಮಾನುಷ ಶಕ್ತಿ ದೇವತೆಯನ್ನು ಸಂತೈಸಿದರೆ, ಬೇಡಿಕೊಂಡರೆ, ಪೂಜಿಸಿದರೆ, ಅವಳ ಮೊರೆ ಹೋದರೆ ಅವಳು ಶಾಂತವಾಗುತ್ತಾಳೆ ಎಂದು ನಂಬುತ್ತಾ ಬರಲಾಗಿದೆ. ವೈದ್ಯಕೀಯ ಪರಿಭಾಷೆ ಗೊತ್ತಿರದ ಸಾಮಾನ್ಯ ಜನರು ತಮ್ಮೊಳಗೆ ಈ ಸಾಂಕ್ರಾಮಿಕ ರೋಗವನ್ನು ಎದುರಿಸಲು ಹೀಗೆ ಶಕ್ತಿ ದೇವತೆಯ ಮೊರೆ ಹೋಗಿ ಮಾನಸಿಕವಾದ ಭಯ ಆತಂಕವನ್ನು ದೂರ ಮಾಡಿಕೊಂಡಿದ್ದಾರೆ. ಬಹುಶಃ ಈ ಪ್ರಕ್ರಿಯೆ ಜಗತ್ತಿನಾದ್ಯಂತ ನಡೆದಿದೆ. ಇದೊಂದು ಮೌಢ್ಯ ಎಂದು ತಳ್ಳಿಹಾಕುವುದಕ್ಕಿಂತ, ಇದರ ಮಾನಸಿಕ ನೆಲೆಗಳನ್ನು ಮನಃಶಾಸ್ತ್ರೀಯ ನೆಲೆಯಲ್ಲಿ ಅಧ್ಯಯನ ಮಾಡಬೇಕಿದೆ.
– ಅರುಣ್ ಜೋಳದಕೂಡ್ಲಿಗಿ
`ದೈವತ್ವಕ್ಕೇರಿದ ಕೊರೊನ’ ಎಂಬ ತಲೆಬರಹದ ಸುದ್ದಿಯನ್ನು ಗಜಾಪುರದ ಭೀಮಣ್ಣ ಕನ್ನಡಪ್ರಭ ಪತ್ರಿಕೆಗೆ ವರದಿ ಮಾಡಿದ್ದರು. ನಾನು ಈ ಬಗ್ಗೆ ಮತ್ತಷ್ಟು ವಿವರ ಪಡೆದು ನನ್ನ ಫೇಸ್ಬುಕ್ಕಲ್ಲಿ ಫೋಟೋದೊಂದಿಗೆ ಚುಟುಕಾಗಿ ಬರೆದೆ. ಈ ಮಾಹಿತಿಯನ್ನು ಸ್ನೇಹಿತರಾದ ಸಂಗಮೇಶ್ ಮೆಣಸಿನಕಾಯಿ ಅವರಿಗೆ ತಿಳಿಸಿದೆ. ಅವರು ಇದೇ ಸುದ್ದಿಯನ್ನು ಟೈಮ್ಸ್ ಆಫ್ ಇಂಡಿಯಾ ಇಂಗ್ಲೀಷ್ ಪತ್ರಿಕೆಗೆ ಬರೆದರು. ಅದು ದೇಶವ್ಯಾಪಿ ಪುಟದಲ್ಲಿ ಪ್ರಕಟವಾಯಿತು. ಈ ಸುದ್ದಿ ತೆಲುಗು, ತಮಿಳು, ಮರಾಠಿ, ಬೆಂಗಾಲಿ ಒಳಗೊಂಡಂತೆ ಇಡೀ ದೇಶದ ಹತ್ತಾರು ಬಾಷೆಗಳ ಸ್ಥಳೀಯ ಪತ್ರಿಕೆಗಳಲ್ಲಿ ಕಾಣ ಸಿಕೊಂಡಿತು. ಇದನ್ನು ನೋಡಿದರೆ ಕೊರೊನಕ್ಕೆ ಸಂಬಂಧಿಸಿದ ಜನರ ಪ್ರತಿಕ್ರಿಯೆಯಲ್ಲಿ ಈ ಆಚರಣೆ ದೇಶದ ಗಮನ ಸೆಳೆದಿತ್ತು.
ಇದು ನಡೆದದ್ದು ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹುಲಿಕೆರೆ ಗ್ರಾಮದಲ್ಲಿ. ಜಾಗತಿಕವಾಗಿ ಕೊರೊನ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಊರಿನವರು ಭಯಗೊಂಡಿದ್ದಾರೆ. ಪ್ರತಿ ವರ್ಷ ಕಳಿಸುವ `ಅಮ್ಮನ’ ಆಚರಣೆಯ ಸಂದರ್ಭದಲ್ಲಿ ಕೊರೊನ ಬಂದ ಕಾರಣ, ಈಕೆ ಕೊರೊನಮ್ಮನೆ ಇರಬೇಕೆಂದು ಭಾವಿಸಿ, ಊರವರೆಲ್ಲಾ ಸೇರಿ ಮರದ ಮೂರ್ತಿ ಮಾಡಿಸಿ, ಮೂರ್ತಿಗೆ ಕೊರೊನಮ್ಮ ಎಂದು ನಾಮಕರಣ ಮಾಡಿ, ಕಿವಿಯಲ್ಲಿ ಜೀವಗಳ ತುಂಬಿ, ಪ್ರಾಣ ಪ್ರತಿಷ್ಠಾಪನೆ ಮಾಡಿದ್ದಾರೆ. ಹೀಗೆ ಸಿದ್ದಗೊಂಡ ಕೊರೊನಮ್ಮನಿಗೆ ಹೋಳಿಗೆ ಮಾಡಿ, ಹಣ್ಣು ಕಾಯಿ ನೈವೇಧ್ಯ ಮಾಡಿ, ಅಮ್ಮನನ್ನು ನಾಲ್ಕು ಗಾಲಿಗಳ ಸಣ್ಣ ಬಂಡಿಯಲ್ಲಿ ಕೂರಿಸಿಕೊಂಡು ಊರವರೆಲ್ಲಾ ಜೈಕಾರ ಮಾಡಿಕೊಂಡು ಎಳೆದುಕೊಂಡು ಹೋಗಿ ಊರ ಗಡಿ ದಾಟಿಸಿ ಬಂದರು.
ಮೇಲುನೋಟಕ್ಕೆ ಇದು ನಗು ತರಿಸುವ ಸಂಗತಿ. ಈ ಜನರ ಮೌಢ್ಯ, ಮೂಢನಂಬಿಕೆ ಮುಂತಾದ ವೈಚಾರಿಕ ಚಿಂತನೆಗಳು ತಕ್ಷಣ ಹೊಳೆಯುತ್ತವೆ. ಇದು ತಪ್ಪಲ್ಲ. ಆದರೆ ಈ ಗ್ರಾಮಸ್ಥರು ಯಾಕೆ ಈ ಕೊರೊನಮ್ಮನನ್ನು ಮಾಡಿದರು. ಈ ಜನರಲ್ಲಿ ಕೊರೊನ ಬಗ್ಗೆ ಈ ತರಹದ ಭಯ ಬಿತ್ತನೆ ಮಾಡಿದವರು ಯಾರು? ಇದೊಂದು ವೈರಸ್ ಸೃಷ್ಠಿಸಿದ ಕಾಯಿಲೆ ಎಂದು ಜನರಿಗೆ ಅರ್ಥ ಮಾಡಿಸುವುದರಲ್ಲಿ ಎಲ್ಲಿ ಎಡವಿದ್ದೇವೆ? ಜನರಲ್ಲಿ ವೈಚಾರಿಕತೆಗಿಂತ ಈ ಬಗೆಯ `ಮೌಢ್ಯ’ ನೆಲೆಸಲು ಸರಕಾರ, ಪ್ರಜ್ಞಾವಂತರ ಪಾತ್ರವಿಲ್ಲವೇ? ಮುಂತಾದ ಮೂಲಭೂತ ಪ್ರಶ್ನೆಗಳಿಗೂ ಉತ್ತರ ಕಂಡುಕೊಳ್ಳಬೇಕಾಗುತ್ತದೆ. ಅಂತೆಯೇ ಈ ಗ್ರಾಮದ ಜನರು ಈ ಆಚರಣೆಯಿಂದ ಪಡೆದ ಮಾನಸಿಕ ಬಿಡುಗಡೆ ಯಾವುದು ಎಂದು ಪರಿಶೀಲಿಸಿದರೆ ಮತ್ತೊಂದು ಆಯಾಮ ಹೊಳೆಯುತ್ತದೆ.
ಕೊರೊನ ಇಡೀ ವಿಶ್ವಕ್ಕೆ ಬಂದೆರಗಿದ ಮೇಲೆ ಇಡೀ ಲೋಕದ ಜನ ಈ ಕುರಿತು ಹಲ ಬಗೆಯ ಕಥನಗಳನ್ನೂ, ನಿರೂಪಣೆಗಳನ್ನೂ ಕಟ್ಟಿದ್ದಾರೆ. ಆರಂಭಕ್ಕೆ ಕೊರೊನ ಕುರಿತ ಸುದ್ದಿಗಳು, ರೋಗ ಲಕ್ಷಣಗಳು, ಜನರಿಂದ ಹಾಸ್ಯಕ್ಕೆ ಒಳಗಾದವು. ನಂತರದ ದಿನಗಳಲ್ಲಿ ಸಾಂಪ್ರದಾಯಿಕ ಜಾನಪದ ನಿರೂಪಣೆಗಳು ಅಥವಾ ಜಾನಪದ ಧಾರೆಗಳು ತಮ್ಮದೇ ದಾಟಿಯಲ್ಲಿ ಕೊರೊನ ಬಗೆಗೆ ಜಾಗೃತಿಯನ್ನು ಮೂಡಿಸಲು ಶುರುಮಾಡಿದರು. ಮೂರನೆಯ ಆಯಾಮವೆಂದರೆ, ಕೊರೊನ ಕಾರಣಕ್ಕೆ ವಿಧಿಸಿದ ಲಾಕ್ಡೌನ್ ನಿಂದ ಸಾರ್ವಜನಿಕ ಸಂಪರ್ಕ ಕಡಿತವಾಗಿ ಸಾರ್ವಜನಿಕರ ಕೂಡುಬಿಂಧುಗಳನ್ನೆ ಆಧರಿಸಿದ ಜಾನಪದ ಪರಂಪರೆಯ ಕಲೆ-ಕಲಾವಿದರು ತುಂಬಾ ಬಿಕ್ಕಟ್ಟಿನ ಸ್ಥಿತಿಯನ್ನು ಅನುಭವಿಸಿ, ತಮ್ಮ ಕಲೆಯ ಅಭಿವ್ಯಕ್ತಿ ಮಾಧ್ಯಮವನ್ನೆ ಕೊರೊನ ರೂಪಾಂತರಕ್ಕೆ ಒಳಗುಮಾಡಲಾಯಿತು. ಇದು ಕೊರೊನ ಜಾನಪದ ಹುಟ್ಟಿಸಿದ ಬಹುಮುಖ್ಯ ಆಯಾಮವಾಗಿದೆ. ಈ ಆಯಾಮಗಳನ್ನು ಒಂದೊಂದಾಗಿ ಪರಿಶೀಲಿಸೋಣ.
ಕೊರೊನಮ್ಮ’ನ ಆಚರಣೆಯನ್ನು ನೋಡಿದರೆ, ಜನಸಾಮಾನ್ಯರು ಕರೋನದಂತರ ಒಂದು ರೋಗವನ್ನು ಹೇಗೆಲ್ಲಾ ಒಗ್ಗಿಸಿಕೊಳ್ಳಲು ಪ್ರಯತ್ನಿಸಿದ್ದಾರೆ, ಕರೋನದ ಬಗ್ಗೆ ಹುಟ್ಟಿಸಿದ ಅನಗತ್ಯ ಭಯವನ್ನು ಹೇಗೆ ನಿವಾರಿಸಿಕೊಳ್ಳಲೆತ್ನಿಸುತ್ತಿದ್ದಾರೆ, ಇದೆಲ್ಲ ಜಾನಪದವಾಗಿ ಹೇಗೆ ರೂಪಾಂತರ ಹೊಂದಿದೆ ಎನ್ನುವುದನ್ನು ಗುರುತಿಸುವ ಸಾಂಕೇತಿಕ ಆಚರಣೆ ಅನ್ನಿಸುತ್ತದೆ. ಮನುಷ್ಯ ಮನುಷ್ಯರ ನಡುವೆ ಸಂವಹನ ನಿಲ್ಲುವ ತನಕ ಜಾನಪದ ಮರುಹುಟ್ಟು ಪಡೆಯುತ್ತಿರುತ್ತದೆ. ಹಾಗಾಗಿ ಜಾನಪದ ಹಳೆಯದರ ಪೊರೆ ಕಳಚಿ ಸದಾ ಹೊಸತಾಗುತ್ತದೆ. ಲೋಕವನ್ನು ಆವರಿಸುವ ಯಾವುದೇ ಹೊಸ ವಿದ್ಯಮಾನ ಜನಮಾನಸದಲ್ಲಿ ಹೊಸ ಬಗೆಯ ನಂಬಿಕೆ ಆಚರಣೆಗಳನ್ನು ಹುಟ್ಟಿಸುತ್ತದೆ. ಕೊರೊನ ಜಾನಪದವೂ ಹುಟ್ಟಿರುವುದಕ್ಕೆ ಹತ್ತಾರು ಸಂಗತಿಗಳು ಕಣ್ಣೆದುರು ನಿಲ್ಲುತ್ತವೆ.
ಕೊರೊನ ಸಾಂಕ್ರಾಮಿಕವು ಮೊದಲೆ ಕಷ್ಟದಲ್ಲಿರುವ ಜಾನಪದ ಕಲಾವಿದರನ್ನು ಮತ್ತಷ್ಟು ಉಸಿರುಗಟ್ಟಿಸಿತು. ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷೆ ಮಂಜಮ್ಮ ಜೋಗತಿ ಕಲಾವಿದರು ಕಷ್ಟದಿಂದ ನನಗೆ ಫೋನ್ ಮಾಡುತ್ತಿದ್ದಾರೆ. ಎರಡು ಸಾವಿರ ಪರಿಹಾರ ಕೊಡಲು ಸರಕಾರ ಅರ್ಜಿ ಕರೆದಿದೆ. ಇದರಲ್ಲಿ ಕೆಲವರಿಗೆ ಸಹಾಯವಾಗಬಹುದು ಎಲ್ಲರಿಗೂ ಸಹಾಯ ಮಾಡಲಿಕ್ಕಾಗೋದಿಲ್ಲ, ನನಿಗೂ ಮನಸ್ಸಿಗೆ ತುಂಬಾ ಬೇಸರ ಆಗುತ್ತೆ ಎನ್ನುತ್ತಾರೆ. ಇದು ಕೇವಲ ಕರ್ನಾಟಕದ ವಿದ್ಯಮಾನವೇ? ಇಡೀ ದೇಶವ್ಯಾಪಿ ಇಂತಹದ್ದೆ ಬಿಕ್ಕಟ್ಟನ್ನು ಜಾನಪದ ಕಲಾವಿದರು ಅನುಭವಿಸಿದರು.
ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕಾಗಿರುವುದರಿಂದ ಸಾರ್ವಜನಿಕ ಕಾರ್ಯಕ್ರಮಗಳನ್ನು ಸರಕಾರ ರದ್ದು ಮಾಡಿತು. ಜನಪದ ವೃತ್ತಿ ಕಲಾವಿದರ ಜೀವನ ನಿಂತಿರುವುದೆ ಸಾರ್ವಜನಿಕರ ಎದುರು. ಈ ಕಾಲದಲ್ಲಿ, ಎಲ್ಲಾ ಬಗೆಯ ಹಬ್ಬ, ಜಾತ್ರೆಗಳು ನಡೆಯದ ಕಾರಣ ಈ ಸಾರ್ವಜನಿಕರ ಸಮ್ಮುಖದಲ್ಲಿ ಅಭಿವ್ಯಕ್ತಿಗೊಳ್ಳುವ ಕಲೆಗಳ ಕಲಾವಿದರು ಇನ್ನಿಲ್ಲದ ಸಂಕಷ್ಟವನ್ನು ಎದುರಿಸುವಂತಾಯ್ತು. ಆಧುನಿಕ ಸಂಗೀತಗಾರರು, ತಂತ್ರಜ್ಞಾನ ಆಧುನಿಕತೆಗೆ ತೆರೆದುಕೊಂಡಿರುವುದರಿಂದ ವರ್ಚುವಲ್ ಜಗತ್ತಿನಲ್ಲಿ ಅವರ ಸಂಗೀತದ ಕಾರ್ಯಕ್ರಮಗಳನ್ನು ಕೊಟ್ಟರು. ಅಲ್ಲಿನ ಅವರ ಕೇಳುಗ ವರ್ಗ ಕೂಡ ವರ್ಚುವಲ್ ಲೋಕದಲ್ಲಿ ಸಿಗುತ್ತಾರೆ. ಆದರೆ ಜನಪದ ಕಲಾವಿದರು ಹೀಗೆ ಇನ್ನೂ ಆದುನಿಕತೆಗೆ, ತಂತ್ರಜ್ಞಾನಕ್ಕೆ ತೆರೆದುಕೊಂಡಿಲ್ಲ, ಅಂತೆಯೇ ಈ ಕಲಾವಿದರ ಕೇಳುಗ ನೋಡುಗ ವರ್ಗ ಕೂಡ ಈ ಬಗೆಯ ವರ್ಚುವಲ್ ಲೋಕದಲ್ಲಿಲ್ಲ. ಹೀಗಾಗಿ ಕೆಲವು ಸಂಸ್ಥೆಗಳು ಆಯೋಜಿಸಿದ ಪೇಸ್ಬುಕ್ ಲೈವ್ ಕಾರ್ಯಕ್ರಮಗಳಲ್ಲಿ ಜಾನಪದ ಕಲಾವಿದರು ಭಾಗಿಯಾದರು. ಇದರಲ್ಲಿ ಪ್ರಜಾವಾಣ ಪತ್ರಿಕೆ ಆಯೋಜಿಸಿದ ಲೈವ್ ಕಾರ್ಯಕ್ರಮದಲ್ಲಿ ಜಾನಪದ ಗಾಯಕ ಪಿಚ್ಚಳ್ಳಿ ಶ್ರೀನಿವಾಸ, ಮೈಸೂರಿನ ಜನ್ನಿ, ಇಬ್ರಾಹಿಂ ಸುತಾರ, ಜೋತಿರ್ಲಿಂಗ ಚಂದ್ರಾಮ ಹೊನಕಟ್ಟಿ, ಮೈಸೂರಿನ ಪೌರಕಾರ್ಮಿಕರ ಆದಿ ದ್ರಾವಿಡ ತಮಟೆ ಮತ್ತು ನಗಾರಿ ಕಾರ್ಯಕ್ರಮ ಹೀಗೆ ಹಲವು ಜನಪದ ಕಲಾವಿದರು ಲೈವಲ್ಲಿ ಕಾರ್ಯಕ್ರಮ ಕೊಟ್ಟರು.
ಇದು ಕೇವಲ ಕರ್ನಾಟಕದ ವಿದ್ಯಮಾನವಲ್ಲ ಇಡೀ ದೇಶವ್ಯಾಪಿ ಇಂತಹ ಬಿಕ್ಕಟ್ಟು ಕಾಣಿಸಿಕೊಂಡಿತು. ಪ್ರತ್ಯೇಕ ರಾಜ್ಯ ಚಳವಳಿಯ ಸಂದರ್ಭದಲ್ಲಿ ಹಲವಾರು ನಾಗಪುರಿ ಹಾಡುಗಳನ್ನು ಬರೆದು ಹಾಡಿದ ಜಾರ್ಖಂಡ್ನ ಖ್ಯಾತ ಜಾನಪದ ಗಾಯಕ ಈ ಬಾರಿ ಕಲಾ ಕ್ಷೇತ್ರದಲ್ಲಿ ಪದ್ಮಶ್ರೀ ಪ್ರಶಸ್ತಿ ಪಡೆದ ಮಧು ಮನ್ಸೂರಿ ಹಸ್ಮುಖ್ ಅವರು ನಿರ್ಗತಿಕ ಕಲಾವಿದರಿಂದ ದೂರವಾಣ ಕರೆಗಳು ಬರುತ್ತಿವೆ. ಅವರಿಗೆ ಹೇಗೆ ಸಹಾಯ ಮಾಡಬೇಕೋ ತಿಳಿಯದಾಗಿದೆ. ಜಾರ್ಖಂಡ್ನ ಜಾನಪದ ಲೋಕ ನನ್ನ ಮೇಲೆ ಸಾಕಷ್ಟು ಪ್ರೀತಿ ಮತ್ತು ಗೌರವ ಇಟ್ಟುಕೊಂಡಿದೆ. ಇಂತಹ ಸಂದರ್ಭದಲ್ಲಿ ಅವರ ಕಷ್ಟವನ್ನು ನನ್ನ ಬಳಿ ಹೇಳಿಕೊಳ್ಳುತ್ತಿದ್ದಾರೆ. ಆ ಬಡ ಕಲಾವಿದರ ಮನೆಯಲ್ಲಿ ಯಾವುದೇ ಹಣ ಅಥವಾ ಅಗತ್ಯ ವಸ್ತುಗಳಿಲ್ಲ. ಅವರ ಅವಸ್ಥೆಯನ್ನು ನಾನು ಯಾರಲ್ಲಿ ಹೇಳಲಿ? ಈ ಸಮಸ್ಯೆ ಬಗೆಹರಿಯುತ್ತೆ ಎಂದರೆ ನಾನು ಯಾರ ಬಳಿಯಾದರೂ ಬೇಡಿಕೊಳ್ಳಲು ಸಿದ್ಧವಿದ್ದೇನೆ ಎಂದು ಮಾಧ್ಯಮಗಳೊಂದಿಗೆ ಮಾತಾಡಿದ್ದರು.
ಮಧ್ಯಪ್ರದೇಶದ ಮಾಲ್ವಿ ಜಾನಪದ ಶೈಲಿಯಲ್ಲಿ ಕಬೀರ್ ಭಜನೆಗಳನ್ನು ಪ್ರದರ್ಶಿಸುವ ಮತ್ತೊಬ್ಬ ಪದ್ಮಶ್ರೀ ಜಾನಪದ ಗಾಯಕ ಪ್ರಹ್ಲಾದ್ ಸಿಂಗ್ ತಿಪಾನಿಯಾ, ಈ ದಿನಗಳಲ್ಲಿ ಕೆಲವು ಆನ್ಲೈನ್ ಸಂಗೀತ ಕಚೇರಿಗಳ ಬಗ್ಗೆ ಕೇಳುತ್ತಿದ್ದೇನೆ. ಆದರೆ ಜಾನಪದ ಕಲಾವಿದರು ಹೀಗೆ ಒಗ್ಗಿಕೊಳ್ಳಲು ಹೈಟೆಕ್ ಬುದ್ಧಿವಂತರಲ್ಲ ಎನ್ನುತ್ತಾರೆ.
ಮಹಾರಾಷ್ಟ್ರದ ಸಾಂಪ್ರದಾಯಿಕ ಜಾನಪದ ನೃತ್ಯವನ್ನು ಪ್ರದರ್ಶಿಸುವ ಧಂಗರಿ ಗಜಾ ನರ್ತಕರು ಪ್ರತಿವರ್ಷ ಮಾರ್ಚ-ಏಪ್ರಿಲ್ನ ಅವಧಿ ನಮಗೆ ಸೀಜನ್ನಿನ ಕಾಲ. ರಾಜ್ಯಾದ್ಯಂತ ಮದುವೆಗಳು, ಹಬ್ಬಗಳ ಸಮಯವಾಗಿತ್ತು. ಹಾಗಾಗಿ ಹೆಚ್ಚೆಚ್ಚು ಕಾರ್ಯಕ್ರಮಗಳು ಸಿಗುತ್ತಿದ್ದವು. ಏಕೆಂದರೆ ನಾವು ಜೂನ್ನಿಂದ ಕೃಷಿ ಮಾಡಲು ಈ ಸೀಜನ್ನಿನ ದುಡಿಮೆ ಸಹಾಯಕವಾಗುತ್ತಿತ್ತು. ಈಗ ನಾವು ಕೃಷಿ ಮಾಡುವುದು ಕಷ್ಟವಾಗಿದೆ ಎಂದು ಮಹಾರಾಷ್ಟçದ ಸಾಂಗ್ಲಿಯಲ್ಲಿ ಧಂಗರಿ ಗಜಾ ಆರ್ಟಿಸ್ಟ್ಸ್ ಗುಂಪಿನ ಸಂಸ್ಥಾಪಕ ಅನಿಲ್ ಕೋಲೆಕರ್ ಮಾಧ್ಯಮಗಳಿಗೆ ಹೇಳಿದ್ದರು. ಅವರು ರಷ್ಯಾ, ಲಂಡನ್, ದೆಹಲಿ ಕಾಮನ್ವೆಲ್ತ್ ಕ್ರೀಡಾಕೂಟ ಸೇರಿದಂತೆ ಅನೇಕ ಅಂತರರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡಿದ್ದಾರೆ.
`ನಮಗೆ ಸಂಸ್ಕೃತಿ ಇಲಾಖೆಯಿಂದ ಯಾವುದೇ ಬೆಂಬಲ ಸಿಗಲಿಲ್ಲ. ಲಾವನಿ, ತಮಾಶಾ, ಭರೂದ್ ನೃತ್ಯವನ್ನು ಪ್ರದರ್ಶಿಸುವ ಇತರ ಕಲಾವಿದರು ಸಹ ಸಹಾಯಕ್ಕಾಗಿ ಕೈಚಾಚಿದ್ದಾರೆ. ನಾನು ಅಂತರರಾಷ್ಟ್ರೀಯ ಕಲಾವಿದನಾಗಿರುವುದರಿಂದ ಅವರ ಕೋರಿಕೆ ಈಡೇರಬಹುದೆಂದು ಭಾವಿಸಿದ್ದಾರೆ, ಸ್ವತಃ ನಮ್ಮ ತಂಡದಲ್ಲಿ ಅನೇಕ ವಯಸ್ಸಾದ ಕಲಾವಿದರಿದ್ದಾರೆ, ಅವರು ಕುಳಿತು ವಾದ್ಯಗಳನ್ನು ಮಾತ್ರ ನುಡಿಸಬಲ್ಲರು, ಬೇರೆ ಯಾವುದೇ ಕೆಲಸ ಮಾಡಲಾರರು. ಇವರೆಲ್ಲರೂ ಬಡವರು ಮತ್ತು ಅನಕ್ಷರಸ್ಥರು. ಇವರುಗಳು ಸೋಷಿಯಲ್ ಮೀಡಿಯಾದಲ್ಲಿ ಧ್ವನಿ ಎತ್ತುವುದಿರಲಿ, ಅವರಲ್ಲಿ ಹೆಚ್ಚಿನವರಿಗೆ ಫೋನ್ ಕೂಡ ಇಲ್ಲ ಎಂದು ವಿವರಿಸುತ್ತಾರೆ. ಕೋಲೆಕರ್ ಅವರ ತಂಡದಲ್ಲಿ ಸುಮಾರು 50 ಜಾನಪದ ಕಲಾವಿದರು ಸಾಮಾನ್ಯ ಸ್ಥಿತಿಯಲ್ಲಿ ಪಡಿತರ ಆಹಾರ ಸಾಮಗ್ರಿಯನ್ನು ಅವಲಂಬಿಸಿ ಬದುಕುತ್ತಿದ್ದಾರೆ.
ಇನ್ನೊಂದು ಕಡೆ ಕೋವಿದ್ ಕಾರಣಕ್ಕೆ ಜನಪದ ಕಲಾವಿದರು ತಮ್ಮ ಕಲಾ ಪ್ರಕಾರವನ್ನು ಕೊರೊನ ಜಾಗೃತಿಗಾಗಿ ಬದಲಿಸಿದ್ದಾರೆ. ಕನ್ನಡದಲ್ಲಿ ಡೊಳ್ಳಿನಹಾಡಿನ ಕಲಾವಿದೆ ಸುಮಿತ್ರಾ ಮುಗಳಿಹಾಳ ಅವರು ಹಾಡಿದ ಡೊಳ್ಳಿನ ಹಾಡಿನ ಶೈಲಿಯ ಕೊರೊನ ಜಾಗೃತಿ ಗೀತೆ ಹಾಡಿದ್ದಾರೆ. ಹೀಗೆ ಜನಪದ ಜನಪ್ರಿಯ ಕವಿಗಳಾದ ಶಬ್ಬೀರ್ ಡಾಂಗೆ, ಫರೀಟ್, ಆಕಾಶ ಮನಗೊಳಿ ಮುಂತಾದ ಉತ್ತರಕರ್ನಾಟಕದ ಜನಪದ ಹಾಡುಗಾರರು ಪದಕಟ್ಟಿ ಹಾಡಿದ ಕನಿಷ್ಠ ಮುವತ್ತರಷ್ಟು ಕೊರೊನ ಜಾಗೃತಿ ಜನಪದ ಗೀತೆಗಳು ಯೂಟೂಬಿನಲ್ಲಿವೆ. ಬಹುಶಃ ಭಾರತದ ಎಲ್ಲಾ ಭಾಷೆಗಳಲ್ಲಿಯೂ ಇಂತಹ ಕೊರೊನ ಜಾಗೃತಿ ಹಾಡುಗಳು ಹುಟ್ಟಿರುವ ಸಾಧ್ಯತೆಗಳಿವೆ. ಅಂದರೆ ಜನಪದ ದಾಟಿ, ಲಯ ಬಳಸಿ ಕೊರೊನ ಜಾಗೃತಿ ಮೂಡಿಸಲು ಜನಪದ ಕಲಾವಿದರು ಮುಂದಾಗಿದ್ದಾರೆ.
ರಾಜಸ್ಥಾನದ ಫಾಡ್ ಬಟ್ಟೆ ಕಲೆಯಲ್ಲಿ ಕೊರೊನ ಜಾಗೃತಿಯನ್ನು ಮೂಡಿಸಿದ್ದಾರೆ. ರಾಜಾಸ್ಥಾನದ ಬಿಲ್ವಾರ್ ಪ್ರದೇಶದಲ್ಲಿ 700 ವರ್ಷಕ್ಕೂ ಹಿಂದಿನ ಫಾಡ್ ಪೇಟಿಂಗ್ಸ್ ಸಂಗ್ರಹಿಸಿದ ಕಲಾವಿದ ಕಲ್ಯಾಣ್ ಜೋಷಿಯ ಕುಟುಂಬ ಪಾರಂಪರಿಕವಾಗಿ ನೈಸರ್ಗಿಕ ಬಣ್ಣಗಳನ್ನು ಬಳಸಿ ಬಟ್ಟೆಯ ಫಾಡ್ ಮೇಲೆ ಪೇಟಿಂಗ್ಸ್ ಮಾಡಿ ಅದರಿಂದ ಜೀವನ ಸಾಗಿಸುತ್ತಿದ್ದರು. ಈ ಫಾಡ್ ಕಲೆಯಲ್ಲಿ ನಾರಾಯಣ ಒಳಗೊಂಡAತೆ ದೇವರ ಕತೆಗಳನ್ನು ಚಿತ್ರಕತೆಯಂತೆ ರಚಿಸುತ್ತಿದ್ದರು. ಕೊರೊನ ಲಾಕ್ಡೌನ್ ಪರಿಣಾಮ, ತಮ್ಮ ಫಾಡ್ ಕಲೆಯನ್ನು ಕೊಳ್ಳುವವರಿಲ್ಲದಂತಾಯ್ತು. ಹೀಗಾಗಿ ಇದೇ ಮಾದರಿಯ ಕಲೆಯಲ್ಲಿ ಕೊರೊನಾಕ್ಕೆ ಪೂರಕವಾಗಿ ಪೇಟಿಂಗ್ಸ್ ಮಾಡಲು ಶುರುಮಾಡಿದರು. ಸರಕಾರ ಕೊರೊನ ಜಾಗೃತಿ ಮೂಡಿಸಲು ಈ ಕಲಾಕೃತಿಗಳನ್ನು ಕೊಳ್ಳಲು ಆರಂಭಿಸಿತು. ಕೊರೊನ ಹರಡದಂತೆ ಮುನ್ನೆಚ್ಚರಿಕೆ, ಕ್ವಾರಂಟೈನಲ್ಲಿರುವಾಗ ಪಾಲಿಸಬೇಕಾದ ಎಚ್ಚರಿಕೆ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಜನರನ್ನು ಉದ್ದೇಶಿಸಿ ಭಾಷಣ ಮಾಡುವುದು ಇತ್ಯಾದಿಗಳನ್ನು ಚಿತ್ರಿಸಲಾಯಿತು.
ಒಡಿಸ್ಸಾದ ಪಟ್ಟಚಿತ್ರ ಕಲಾವಿದರಾದ ಅಪಿಂದ್ರ ಸ್ವಿನ್ ಅವರು ಹೇಳುವಂತೆ, `12 ನೇ ಶತಮಾನದಲ್ಲಿ ಸಣ್ಣಹಳ್ಳಿ ರಘುರಾಜಾಪುರ ಹಳ್ಳಿಯಲ್ಲಿ ಹುಟ್ಟಿದ ಪಟ್ಟಚಿತ್ರ, (ಬಟ್ಟೆಯ ಮೇಲೆ ಬಿಡಿಸುವ ಹಸೆ ಚಿತ್ರ) ವನ್ನು ಕೊವಿದ್ ಜಾಗೃತಿಗಾಗಿ ಬಳಸಿದೆವು. ಇದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡೆವು, ಇದರಿಂದ ಪೋಸ್ಟಲ್ ಡಿಪಾರ್ಟ್ಮೆಂಟಿನವರು ನಮಗೆ ಈ ತರಹದ ಅಂಚೆ ಕಾರ್ಡ್, ಸ್ಟ್ಯಾಂಪ್ ತಯಾರಿಸಲು ಅವಕಾಶ ಕೊಟ್ಟರು’ ಎನ್ನುತ್ತಾರೆ. ಬಿಹಾರದ ದಕ್ಷಿಣ ವಲಯದ ರಶೀದಪುರ ಹಳ್ಳಿಯ ಕಲಾವಿದೆ ಅಂಬಿಕಾ ದೇವಿ ಮಧುಬನಿ ಕಲೆಯಲ್ಲಿ ಕೊರೊನಾ ಜಾಗೃತಿಯ ಪೇಟಿಂಗ್ಸ್ ಮಾಡಿದ್ದಾರೆ.
ಹೀಗೆ ಕೊರೊನ ಸೃಷ್ಠಿಸಿದ ಸಂಗತಿಗಳೆ ಜನಪದ ವಿದ್ಯಮಾನಗಳಾಗಿ ರೂಪಾಂತರ ಹೊಂದಿರುವುದೂ, ಇಂತಹ ಸಾಂಕ್ರಾಮಿಕ ರೋಗಗಳನ್ನು ಸಾಂಸ್ಕೃತಿಕ ಲೋಕಗಳು ಕಂಡಿರುವ ಬಗೆ, ಕೊರೊನ ಕಾರಣಕ್ಕೆ ಜಾರಿಯಾದ ಲಾಕ್ಡೌನ್ ಜನಪದ ಕಲಾವಿದರನ್ನು ಇನ್ನಿಲ್ಲದ ಸಂಕಷ್ಟಕ್ಕೆ ದೂಡಿದ್ದೂ ಈ ಎಲ್ಲವನ್ನೂ ಕೊರೊನ ಜಾನಪದ ವ್ಯಾಪ್ತಿಯಲ್ಲಿ ವಿಶ್ಲೇಷಿಸಬಹುದಾಗಿದೆ. ಇದರ ಮೂಲಕ ಒಂದು ಸಾಂಕ್ರಾಮಿಕ ರೋಗ ಸಮಾಜದಲ್ಲಿ ಬೀರಿದ ಪರಿಣಾಮವನ್ನು ಸಾಮಾನ್ಯ ಜನರ ಕಣ್ಣೋಟದಲ್ಲಿ ನೋಡಿದಂತಾಗುತ್ತದೆ.