ದೇಶಾದ್ಯಂತ ಕೊರೊನಾ ವೈರಸ್ ತನ್ನ ಅಟ್ಟಹಾಸವನ್ನು ಮುಂದುವರೆಸಿದೆ. ದೇಶದಲ್ಲೀಗ ಕೊರೊನಾ ಸೋಂಕಿತರ ಸಂಖ್ಯೆ 48,46,427 ಇದ್ದು, ದಿನವೊಂದಕ್ಕೆ ಸರಾಸರಿ 90 ಸಾವಿರ ಪ್ರಕರಣಗಳು ಪತ್ತೆಯಾಗುತ್ತಿವೆ. ಭಾರತ ಈಗ ವಿಶ್ವದಲ್ಲೇ ಎರಡನೇ ಅತಿ ಹೆಚ್ಚು ಸೋಂಕಿತರ ದೇಶವಾಗಿದೆ. ಹೊಸ ಸೋಂಕಿತರು ಪತ್ತೆಯಾಗುವ ವೇಗ ತಗ್ಗಿದಂತೆ ಕಾಣುತ್ತಿಲ್ಲ. ಬ್ರೆಜಿಲ್ ಹಾಗೂ ಅಮೆರಿಕಗಳಲ್ಲಿ ಹೊಸ ಸೋಂಕಿತರ ಸಂಖ್ಯೆ ಕಡಿಮೆಯಾದರೂ, ಭಾರತದಲ್ಲಿ ಮಾತ್ರ ಹೆಚ್ಚುತ್ತಲೇ ಇದೆ. ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸದ ತಪ್ಪಿಗೆ ಭಾರತ ಇಂದು ಇಂತಹ ಗಂಭೀರ ಸಂಕಷ್ಟ ಎದುರಿಸುವಂತಾಗಿದೆ. ಕೊರೊನಾ ಜೊತೆ ಹೊಂದಿಕೊಂಡು ಬದುಕಿ ಸಾಗಿಸಿ ಎಂದು ಸರಕಾರ ಕೈಕಟ್ಟಿ ಕೊಳಿತುಕೊಂಡಿರುವುದಕ್ಕೆ ವ್ಯಾಪಕ ಆಕ್ರೋಶವ್ಯಕ್ತವಾಗುತ್ತಿದೆ. ಇತ್ತ ಖಾಸಗಿ ಆಸ್ಪತ್ರೆಗಳು ಕೊರೊನಾ ಹೆಸರಲ್ಲಿ ಸುಲಿಗೆಗೆ ಇಳಿದರೆ, ಸರಕಾರಿ ಆಸ್ಪತ್ರೆಗಳಲ್ಲಿ ಗುಣಮಟ್ಟದ ಚಿಕಿತ್ಸೆಯ ಕೊರತೆ ಎದ್ದು ಕಾಣುತ್ತಿದೆ.
ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ ಬ್ರೆಜಿಲ್ ನಲ್ಲಿ ಸೋಂಕಿತರ ಸಂಖ್ಯೆ 4,33,455 ಇದೆ. ಅಮೆರಿಕದ ಸೋಂಕಿತರ ಸಂಖ್ಯೆಯಲ್ಲಿ ಭಾರತಕ್ಕಿಂತ ಮುಂದಿದ್ದು, ಅಲ್ಲಿ 67,08,458 ಸೋಂಕಿತರು ಇದುವರೆಗೂ ಪತ್ತೆಯಾಗಿದ್ದಾರೆ. ಆದರೆ ಆಶ್ಚರ್ಯಕರ ವಿಚಾರ ಏನು ಅಂದರೆ ಇತರ ಯಾವುದೇ ದೇಶದಲ್ಲಿ ಇದುವರೆಗೂ ಒಂದೇ ದಿನ 75 ಸಾವಿರಕ್ಕೂ ಹೆಚ್ಚು ಸೋಂಕಿತರು ಪತ್ತೆಯಾಗಿಲ್ಲ. ಆದರೆ ಭಾರತದಲ್ಲಿ ಪ್ರತಿದಿನಕ್ಕೆ 90 ಸಾವಿರ ಸಂಖ್ಯೆ ದಾಟುತ್ತಿದೆ. ಇತ್ತೀಚಿನ ದಿನಗಳಲ್ಲಿ ಬ್ರೆಜಿಲ್ ಹಾಗೂ ಅಮೆರಿಕದಲ್ಲಿ ಪ್ರತಿನಿತ್ಯ ಪತ್ತೆಯಾಗುವ ಸೋಂಕಿತರ ಸಂಖ್ಯೆ ಇಳಿಮುಖವಾಗಿದೆ. ಕಳೆದೆರಡು ವಾರಗಳಲ್ಲಿ ಭಾರತಕ್ಕೆ ಹೋಲಿಸಿದರೆ ಬ್ರೆಜಿಲ್ನಲ್ಲಿ ಪತ್ತೆಯಾಗುತ್ತಿರುವ ಸೋಂಕಿತರ ಸಂಖ್ಯೆ ಅರ್ಧದಷ್ಟು ಕಡಿಮೆ ಇದೆ. ಕೆಲ ದಿನಗಳಲ್ಲಿ 20 ಸಾವಿರಕ್ಕೂ ಕಡಿಮೆ ಸೋಂಕಿತರು ಪತ್ತೆಯಾಗುತ್ತಿದ್ದಾರೆ.
ಒಟ್ಟು ಕೊರೊನಾ ಸೋಂಕಿತರಲ್ಲಿ ನಾಲ್ಕನೇ ಸ್ಥಾನದಲ್ಲಿರುವ ರಷ್ಯಾದಲ್ಲಿ ಪ್ರತಿನಿತ್ಯ ಪತ್ತೆಯಾಗುತ್ತಿರುವ ಸೋಂಕಿತರ ಸಂಖ್ಯೆ ನಾಲ್ಕರಿಂದ 5 ಸಾವಿರದಷ್ಟು ಕಡಿಮೆ ಹಂತಕ್ಕೆ ತಲುಪಿದೆ. ಆದರೆ, ಭಾರತದಲ್ಲಿ ಪ್ರತಿನಿತ್ಯ ಪತ್ತೆಯಾಗುತ್ತಿರುವ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಾ ಸಾಗುತ್ತಿದೆ. ಸಾವಿನ ಸಂಖ್ಯೆಯಲ್ಲೂ ದಿನವೊಂದಕ್ಕೆ 1000 ಗಡಿ ದಾಟುತ್ತಿದೆ. ಕೇಂದ್ರ ಆರೋಗ್ಯ ಇಲಾಖೆಯ ವರದಿಯ ಪ್ರಕಾರ 70% ಜನ ಗುಣಮುಖರಾಗುತ್ತಿರವ ಬಗ್ಗೆ ವರದಿಯನ್ನು ನೀಡಿದೆ. ಭಾರತದಲ್ಲಿ ಕೊರೊನಾ ಸೋಕನ್ನು ನಿಯಂತ್ರಿಸುವುದಕ್ಕಾಗಿ ಎರಡುತಿಂಗಳಿಗೂ ಹೆಚ್ಚುಕಾಲ ಲಾಕ್ಡೌನ್ ಹೇರಲಾಗಿತ್ತು. ಅಗತ್ಯ ತಯಾರಿಗಳನ್ನು ಮಾಡಿಕೊಳ್ಳಬಹುದು ಎಂದು ದೇಶದ ಜನ ಭಾವಿಸಿದ್ದರು. ಆದರೆ ಅದು ಈಗ ಸುಳ್ಳಾಗಿದ್ದು ಸರಕಾರ ಜಾಗಟೆ, ದೀಪ, ಚಪ್ಪಾಳೆ ಹೆಸರಲ್ಲಿ ನಮಗೆ ಮೋಸ ಮಾಡಿದೆ ಎಂಬ ಆಕ್ರೋಶಗಳು ವ್ಯಾಪಕವಾಗಿ ಕೇಳಿಬರುತ್ತಿವೆ.
ಇನ್ನೂ ಕರ್ನಾಟಕದಲ್ಲೂ ಕೊರೊನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. 4 ಲಕ್ಷದ 59 ಸಾವಿರದ 445 ಕೇಸುಗಳು ಪತ್ತೆಯಾಗಿದ್ದು 3,52,958 ಸೋಂಕಿತರು ಗುಣಮುಖರಾಗಿದ್ದಾರೆ. 99,203 ಸಂಕ್ರೀಯ ಪ್ರಕರಣಗಳು ಇವೆ. 7265 ಜನ ಸಾವನ್ನಪ್ಪಿದ್ದಾರೆ. ಒಟ್ಟು ಸೋಂತರ ಪ್ರಕರಣದಲ್ಲಿ ಕರ್ನಾಟಕ ದೇಶದಲ್ಲಿ 4ನೇ ಸ್ಥಾನದಲ್ಲಿದ್ದು, ದಿನಂಪ್ರತಿ ಸೋಂಕು ಪತ್ಯೆ ಪ್ರಕರಣದಲ್ಲಿ 2 ನೆಯ ಸ್ಥಾನದಲ್ಲಿದೆ. ಸಕ್ರಿಯ ಪ್ರಕರಣಗಳಲ್ಲಿ ಶೇಕಡಾ 18.32 % ಸೋಂಕಿತರು ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅನೇಕರು ಆಸ್ಪತ್ರೆಗೆ ಸೇರಲು ಭಯ ಬೀಳುತ್ತಿದ್ದಾರೆ ಎಂದು ಮಾರ್ಕ್ಸವಾದಿ ಕಮ್ಯೂನಿಷ್ಟ ಪಕ್ಷದ ಬೆಂಗಳೂರು ದಕ್ಷಿಣ ಜಿಲ್ಲಾ ಕಾರ್ಯದರ್ಶಿ ಕೆ.ಎನ್.ಉಮೇಶ್ ಅಸಮಧಾನವನ್ನು ಹೊರಹಾಕಿದ್ದಾರೆ.
ರಾಜ್ಯ ಸರ್ಕಾರದ ದುರಾಡಳಿತ ಮತ್ತು ಅವ್ಯವಹಾರಗಳಿಂದಾಗಿ ಆಸ್ಪತ್ರೆಗೆ ಸೇರಿದರೆ ಬದುಕಿ ಬರಲಾರವೆಂಬ ಅಪನಂಬಿಕೆಯನ್ನು ಜನತೆಯಲ್ಲಿ ಉಂಟು ಮಾಡಿದೆ. ಅದರಿಂದಾಗಿ ಹಾಲಿ ಲಭ್ಯವಿರುವ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿನ ಕೋವಿಡ್ ಹಾಸಿಗೆಗಳು ಭರ್ತಿಯಾಗದೆ ಹಾಗೆ ಉಳದಿಯೇ ಉಳದಿವೆ. ರಾಜ್ಯ ಸರ್ಕಾರಿ ಆಸ್ಪತ್ರೆಗಳು ಮತ್ತು ಸರ್ಕಾರಿ ವೈದ್ಯಕೀಯ ಕಾಲೇಜುಗಳು ಹಾಗೂ ಸರ್ಕಾರದ ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಲಭ್ಯವಿರುವ 3,478 ಹಾಸಿಗೆಗಳ ಪೈಕಿ ಕೇವಲ 2,313 ಅಂದರೆ 66.5 ಶೇಕಡ ಮಾತ್ರ ಭರ್ತಿಯಾಗಿವೆ. ಅಂತೆಯೇ ಖಾಸಗೀ ಆಸ್ಪತ್ರೆಗಳು ಮತ್ತು ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿನ ಒಟ್ಟು 9,859 ಕೋವಿಡ್ ಹಾಸಿಗೆಗಳಲ್ಲಿ 4,964 ಮಾತ್ರ ಅಂದರೆ 50.34 ಶೇ ಹಾಸಿಗೆಗಳು ಭರ್ತಿಯಾಗಿರುವುದು ಕೋವಿಡ್ ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಲಭ್ಯವಿರುವ ಸೌಲಭ್ಯಗಳು ಮತ್ತು ಅಲ್ಲಿನ ಪರಿಸ್ಥಿತಿಯ ಕುರಿತು ಉಂಟಾಗಿರುವ ಭೀತಿಯನ್ನು ಪ್ರತಿಬಿಂಬಿಸುತ್ತದೆ.
ಒಂದೆಡೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸಮರ್ಪಕ ಸೌಲಭ್ಯಗಳ ಕೊರತೆ, ಇನ್ನೊಂದೆಡೆ ಖಾಸಗಿ ಆಸ್ಪತ್ರೆಗಳಲ್ಲಿನ ದುಬಾರಿ ಶುಲ್ಕ ಜನತೆಯನ್ನು ಆಸ್ಪತ್ರೆ ಚಿಕಿತ್ಸೆಯಿಂದ ವಿಮುಖರನ್ನಾಗಿಸಿದೆ. ಆರಂಭದಲ್ಲಿ ರಾಜ್ಯ ಸರ್ಕಾರವು ತೋರಿದ ನಿರ್ಲಕ್ಷ್ಯ, ರೋಗಿಗಳಿಗೆ ಹಾಸಿಗೆ ಒದಗಿಸಲು, ಆಂಬುಲೆನ್ಸ್ ಸೇವೆ ನೀಡಲು ಮತ್ತು ಆಮ್ಲಜನಕ, ವೆಂಟಿಲೇಟರ್ ವ್ಯವಸ್ಥೆಗಳನ್ನು ಸರಿಯಾಗಿ ಮಾಡದಿದ್ದ ಕಾರಣ ಹಾಗೂ ಖರೀದಿಯಲ್ಲಿನ ಹಗರಣವು ಜನತೆಗಿದ್ದ ಅಲ್ಪಸ್ವಲ್ಪ ವಿಶ್ವಾಸವನ್ನು ಇಲ್ಲದಾಗಿಸಿದೆ. ಇದರ ಪರಿಣಾಮವಾಗಿ ಕೋವಿಡ್ ರೋಗಿಗಳು ಆಸ್ಪತ್ರೆ ಚಿಕಿತ್ಸೆಯಿಂದ ದೂರವಾಗಿದ್ದಾರೆ. ಈ ಪರಿಸ್ಥಿತಿಯ ತೀವ್ರತೆಯನ್ನು ಅರಿತು ಜನತೆಯಲ್ಲಿ ವಿಶ್ವಾಸ ಮೂಡಿಸಲು ರಾಜ್ಯ ಬಿಜೆಪಿ ಸರ್ಕಾರ ವಿಫಲವಾಗಿದೆ ಎಂದು ಕೆ.ಎನ್ ಉಮೇಶ್ ಆರೋಪಿಸಿದ್ದಾರೆ.
“COVIFOR” ಇದು ಕೊರೋನಾ ತೀವ್ರ ಹಂತ ತಲುಪಿದವರಿಗೆ ನೀಡುವ ಇಂಜಕ್ಷನ್. ಇದನ್ನು ಆರು ದಿನಗಳ ವರೆಗೆ ರೋಗಿಗೆ ನೀಡಲಾಗುವುದು. ಆದರೆ ಇದರ ಬೆಲೆ ಒಂದೊಂದು ಕಡೆ ಒಂದು ರೀತಿಯಲ್ಲಿ ಬಳಕೆಯಾಗುತ್ತಿದೆ. ಇದರಿಂದ ಖಾಸಗಿ ಆಸ್ಪತ್ರೆಗಳು ಲಾಭಿಮಾಡುತ್ತಿವೆ. ಕೋರೊನಾ ಮಹಾಮಾರಿ ಸೋಂಕಿನಿಂದ ಜನರು ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಸೋಂಕಿಗೊಳಗಾದವರಿಂದ ಖಾಸಗಿ ಆಸ್ಪತ್ರೆಗಳು ಸುಲಿಗೆ ಮಾಡುತ್ತಿದೆ. ಈ ಸುಲಿಗೆ ವಿರುದ್ದ ಡಿವೈಎಫ್ಐ ರಾಜ್ಯವ್ಯಾಪಿ ಪ್ರತಿಭಟನೆ ನಡೆಸಿದ್ದು ಸರಕಾರಿ ಆಸ್ಪತ್ರೆಗಳನ್ನು ಬಲಪಡಿಸಬೇಕು ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಆಗ್ರಹಿಸಿದೆ.
ಇಷ್ಟೊಂದು ಸುಲಿಗೆಯಲ್ಲಿ ಖಾಸಗಿ ಆಸ್ಪತ್ರೆಗಳು ಮುಳುಗಿರುವಾಗ ಸರಕಾರ ಕ್ರಮ ವಹಿಸುವ ಬದಲು ಇವರ ಜೊತೆ ಶಾಮೀಲಾಗಿ ಕಮೀಷನ್ ಪಡೆಯುತ್ತಿರಬಹುದು ಎಂದು ಮುನೀರ್ ಕಾಟಿಪಳ್ಳರವರು ಆರೋಪಿಸಿದ್ದಾರೆ. ಇಷ್ಟೊಂದು ದೂರುಗಳು ಕೇಳಿಬರುತ್ತಿರುವಾಗ ಸರಕಾರ , ಆರೋಗ್ಯ ಇಲಾಖೆಯ ತಂಡ ಖಾಸಗಿ ಆಸ್ಪತ್ರೆಗಳಿಗೆ ದಿಢೀರ್ ಭೇಟಿ ನೀಡಿ ಕೊರೋನ ಸೋಂಕಿತರ ಚಿಕಿತ್ಸೆ, ವಿಧಿಸಲಾಗುತ್ತಿರುವ ದರಗಳ ಕುರಿತು ಪರಿಶೀಲನೆಗಳನ್ನು ನಡೆಸಬೇಕಿದೆ. ಸಂಕಷ್ಟದಲ್ಲಿರುವ ಜನರ ನೆರವಿಗೆ ಬರಲು ರಾಜ್ಯ ಸರಕಾರ ಮುಂದಾಗಬೇಕಿದೆ.