ಕೊರೊನಾ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ಆದಿವಾಸಿ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ

ಉಡುಪಿ: ಜಿಲ್ಲೆಯ ಅಳಿವಿನಂಚಿನಲ್ಲಿರುವ ಆದಿವಾಸಿ ಬುಡಕಟ್ಟುಗಳಲ್ಲಿ ಒಂದಾದ  ಹಸಲ  ಸಮುದಾಯದ ಕುಟುಂಬಗಳಿಗೆ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ, ಉಡುಪಿ ಜಿಲ್ಲಾ ಸಂಘಟನಾ ಸಮಿತಿ ಇದರ ನೇತೃತ್ವದಲ್ಲಿ ಆಹಾರ ಕಿಟ್‌ ವಿತರಣೆ ಮಾಡಲಾಯಿತು.

ಹಸಲ  ಸಮುದಾಯದ ಈ ಆದಿವಾಸಿಗಳು ಪಶ್ಚಿಮ ಘಟ್ಟದ ತಪ್ಪಲಿನ ಕೊಲ್ಲೂರು, ಕೆರಾಡಿಯ ಕಾರೆಬೈಲು, ಹಳ್ಳಿಹೊಳೆಯ ಕಬ್ಬಿನಾಲೆ, ದೇವರಬಾಳು ಮೊದಲಾದ ದಟ್ಟ ಕಾಡುಗಳಲ್ಲಿ ವಾಸಿಸುತ್ತಾರೆ. ಇವರು ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಪರಿಶಿಷ್ಟ ಪಂಗಡ (ಎಸ್‌.ಟಿ.) ಮೀಸಲುದವರು. ಆದರೆ, ಉಡುಪಿ ಜಿಲ್ಲೆಯಲ್ಲಿ ಮಾತ್ರ ಇವರನ್ನು ಪರಿಶಿಷ್ಠ ಜಾತಿ (ಎಸ್‌.ಸಿ.) ಪಟ್ಟಿಯಲ್ಲಿ ಸೇರಿಸಲಾಗಿದೆ.  ಇದರಿಂದ ಅವರು ಸರಕಾರದಿಂದ ದೊರೆಯುವ ಉಚಿತ ಪೌಷ್ಟಿಕ ಆಹಾರ ಯೋಜನೆ, ಅರಣ್ಯದ ಹಕ್ಕು, ಬುಡಕಟ್ಟುಗಳಿಗೆ ಇರುವ ವಿಶೇಷ ಉದ್ಯೋಗದ ಮೀಸಲಾತಿ ಹಕ್ಕುಗಳಿಂದ ವಂಚಿತರಾಗಿದ್ದಾರೆ. ಆದಿವಾಸಿ ಮಕ್ಕಳಿಗೆ ಶಿಕ್ಷಣ ಪಡೆಯುವ ಸಂಧರ್ಭದಲ್ಲಿಯೂ ಎಸ್‌.ಸಿ. / ಎಸ್‌.ಟಿ. ಗೊಂದಲದಲ್ಲಿ ಅವಕಾಶದಿಂದ ವಂಚಿತರಾಗಿದ್ದಾರೆ.

ಇದನ್ನು ಓದಿ: ಜೂನ್‌ 7: ಜೀವ ಮತ್ತು ಜೀವನ ಉಳಿಸಲು ಆದಿವಾಸಿಗಳ ಪ್ರತಿಭಟನೆ

ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಹಸಲರು ಸಮುದಾಯಕ್ಕೆ ಉಚಿತ ಪೌಷ್ಟಿಕ ಆಹಾರ ಯೋಜನೆ ಮಳೆಗಾಲದ ಆರು ತಿಂಗಳ ಕಾಲ ನೀಡಲಾಗುತ್ತಿದೆ.  ಆದರೆ ಉಡುಪಿ ಜಿಲ್ಲೆಯಲ್ಲಿ ಇವರನ್ನು ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಸರಕಾರ ಗುರುತಿಸಿದೆ. ಆದರಿಂದ ಇವರಿಗೆ ಉಚಿತ ಪೌಷ್ಟಿಕ ಆಹಾರ ಸಿಗುತ್ತಿಲ್ಲ. ಇದು ಸರಕಾರ ಈ ಆದಿವಾಸಿ ಜನಾಂಗಕ್ಕೆ ಮಾಡಿರುವ ಐತಿಹಾಸಿಕ ಅನ್ಯಾಯವಾಗಿದೆ ಎಂದು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಸಂಘಟಕರು ಆರೋಪಿಸಿದ್ದಾರೆ.

ಇವರನ್ನು ಸರಕಾರ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಇಟ್ಟಿರುವ ಕಾರಣಕ್ಕೆ  ಬುಡಕಟ್ಟು ಅಲ್ಲಾ ಎಂದು ತಿಳಿಯಲು ಸಾಧ್ಯವಿಲ್ಲ. ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಸಂಘಟನೆ ಮೂಲಕ ಇವರನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸಲು ಹೋರಾಟ ಮುಂದುವರಿದಿದೆ. ಆದರೆ ಆಡಳಿತದ ಪ್ರತಿಕ್ರಿಯೆ ಬಂದಿಲ್ಲ ಎಂದು ಸಂಘಟಕರು ತಿಳಿಸಿದರು.

ಇವರ ಸಾಂಪ್ರದಾಯಿಕ ಆಹಾರ ಪದ್ದತಿ ನಶಿಸಿ ಹೋಗಿದೆ. ಅತ್ಯಂತ ಆರೋಗ್ಯದಾಯಕ ಬದುಕು ನಡೆಸುತ್ತಿರುವ ಇವರಿಗೆ  ಸರಕಾರದ ಅರಣ್ಯ ನೀತಿಗಳು, ವನ್ಯಜೀವಿ ಕಾಯ್ದೆ, ಜೀವ ವೈವಿಧ್ಯತೆ ಕಾಯ್ದೆಗಳು, ಆಹಾರದ ಕಾಯ್ದೆಗಳು, ಇವರ ಕುಲಕಸುಬುಗಳ ಅವನತಿ, ನಿರುದ್ಯೋಗ ಸಮಸ್ಯೆ ಇಂತಹ ಹಲವಾರು ಕಾರಣಗಳಿಗೆ ಅಪೌಷ್ಟಿಕತೆಯಿಂದ ಬಳಲುವಂತೆ ಮಾಡಿವೆ.

ಇಂತಹ ಸಂದರ್ಭದಲ್ಲಿ ಕೋವಿಡ್ ಸಂಕಷ್ಟಗಳು ಇವರ ಬದುಕು ಇನಷ್ಟು ಕುಸಿಯುವಂತೆ ಮಾಡಿದೆ. ಜಿಲ್ಲಾ ಆಡಳಿತ ಹಸಲ ಸಮುದಾಯ ಸೇರಿದಂತೆ ಕೊರಗ, ಮಲೆಕುಡಿಯ, ಮರಾಠಿ ನಾಯಕ ಸಮುದಾಯಗಳ ನೆರವಿಗೆ ಬರದೆ ಇರುವುದು ವಿಷಾದನೀಯ ಎಂದು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯು ತಿಳಿಸಿದೆ.

ಇದನ್ನು ಓದಿ: ಸಾರ್ಥಕತ ಸೇವೆ ಸಲ್ಲಿಸುತ್ತಿರುವ ವಿಕಲಾಂಗ ಮಹಿಳೆ : ಮಾಸಿಕ ಪಿಂಚಣಿ ಹಣದಲ್ಲಿ 50 ಜನರಿಗೆ ಆಹಾರದ ಕಿಟ್‌ ವಿತರಣೆ

ಸಂಘಟಕರು ಜಿಲ್ಲೆಯಲ್ಲಿ ಆದಿವಾಸಿಗಳನ್ನು ಆಡಳಿತ, ಸರಕಾರ ಕಡೆಗಣಿಸಿರುವುದರ ಪ್ರತಿಭಟನಾ ಪ್ರತಿಕ್ರಿಯೆಯಾಗಿ  ಆದಿವಾಸಿಗಳ ಗುಂಪುಗಳಲ್ಲಿ ಅವರ ಆಹಾರದ ಹಕ್ಕುಗಳ ಕುರಿತು ಜಾಗೃತಿ ಮೂಡಿಸಿ ಅತಿ ಸಂಕಷ್ಟಕ್ಕೆ ಒಳಗಾದ ಕುಟುಂಬಗಳಿಗೆ ದಾನಿಗಳ ನೆರವಿನಿಂದ ಆಹಾರದ ಕಿಟ್ ವಿತರಣೆ ಮಾಡಿದರು. ಇದುವರೆಗೆ ಜಿಲ್ಲೆಯ 150 ಆದಿವಾಸಿ ಕುಟುಂಬಗಳಿಗೆ ಕಿಟ್ ವಿತರಣೆ ಮಾಡಿರುತ್ತಾರೆ.

ಈ ಕಿಟ್ ನೀಡಲು ಶ್ರಮಿಸಿದ ಸೆಂಟರ್‌ ಆಫ್‌ ಇಂಡಿಯನ್‌ ಟ್ರೇಡ್‌ ಯೂನಿಯನ್ಸ್‌ (ಸಿಐಟಿಯು) ಹಿರಿಯ ಮುಖಂಡರಾದ ಬಾಲಕೃಷ್ಣ ಶೆಟ್ಟಿ, ಸುರೇಶ್ ಕಲಾಗಾರ್, ನರಸಿಂಹ ಆಚಾರ್ ಕೊಲ್ಲೂರು, ಮಹಾದೇವ ಹಸಲ, ಪ್ರಕಾಶ, ಸುಭಾಶ್, ಸುಧಾಕರ, ಸುರೇಶ್, ಸಂಜು ಕಾರೆಬೈಲು, ಮೂರ್ತಿ ಕಬ್ಬಿನಾಲೆ, ಬೇಬಿ ಕತ್ತಲಕೊಡು, ಶಿವರಾಜ್ ನಾಡ, ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ರಾಜ್ಯ ಸಹ ಸಂಚಾಲಕರು ಶ್ರೀಧರ್ ನಾಡ ಉಪಸ್ಥಿಯಲ್ಲಿ ಆದಿವಾಸಿಗಳಿಗೆ ಆಹಾರ ಕಿಟ್ ವಿತರಣೆ ಮಾಡಲಾಯಿತು.

ಪ್ರಮುಖವಾಗಿ ಆಹಾರದ ಕಿಟ್ ಹಲವು ದಾನಿಗಳ ಸಹಾಯದಿಂದ ನೆರವಾಗಿದ್ದು, ಸಿಐಟಿಯು ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿ ವತಿಯಿಂದ ಹಮ್ಮಿಕೊಂಡ ʻಅನ್ನಪೂರ್ಣ ಅಭಿಯಾನʼ ಯೋಜನೆ ಮೂಲಕ ವಿತರಣೆಯಾಗಿದೆ.

ಇದೇ ಸಂದರ್ಭದಲ್ಲಿ ಕೋವಿಡ್ ಎದುರಿಸುವ ಕುರಿತು ಮತ್ತು ಅತ್ಯಗತ್ಯವಾಗಿ ಎಲ್ಲರೂ ಲಸಿಕೆ ಪಡೆಯಲು ಅವರಲ್ಲಿ ಜಾಗೃತಿ ಮೂಡಿಸಿದರು.

Donate Janashakthi Media

Leave a Reply

Your email address will not be published. Required fields are marked *