ಕೊರೊನ ಕಾಲದ ಖರೀದಿ ಹಗರಣ: ‘ಬೆಂದ ಮನೆಯಲ್ಲಿ ಗಳ ಇರಿ’ದಿರುವ ಬಿಜೆಪಿ ನಾಯಕ ಗಣ

ಎಸ್‌.ವೈ. ಗುರುಶಾಂತ
ಕೊರೊನ ಸಂಕಷ್ಟದ ಕಾಲದಲ್ಲಿ ವ್ಯಾಪಕವಾದ ಅಕ್ರಮಗಳು ನಡೆದಿವೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಕರ್ನಾಟಕದ ಸರ್ಕಾರದಿಂದ ನ್ಯಾಯಮೂರ್ತಿ ಜಾನ್ ಮೈಕೆಲ್ ಡಿ. ಕುನ್ಹಾ ಅವರ ನೇತೃತ್ವದ ತನಿಖಾ ಸಮಿತಿಯನ್ನು ನೇಮಿಸಲಾಗಿತ್ತು. ಈ ಸಮಿತಿಯು ಮಧ್ಯಂತರ ವರದಿ ನೀಡಿದ್ದು ಹಲವಾರು ಗಂಭೀರ ಪ್ರಕರಣಗಳನ್ನು ಹೊರ ತಂದಿದೆ.

ಕೊರೋನಾ ಕಾಲವು ಒಂದು ವೈದ್ಯಕೀಯ ತುರ್ತು ಪರಿಸ್ಥಿತಿಯಾಗಿತ್ತು. ರಾಜ್ಯದಲ್ಲಿ ಲಕ್ಷಾಂತರ ಜನತೆ ವೈದ್ಯಕೀಯ ಚಿಕಿತ್ಸೆ, ಸೌಲಭ್ಯಗಳು ದೊರಕದೇ ಜೀವನ್ಮರಣದ ಪರಿಸ್ಥಿತಿಯಲ್ಲಿ ಹೋರಾಡುತ್ತಿದ್ದರು. ಆಗ ಆಳುವ ಸರಕಾರಗಳು ಯುದ್ದೋಪಾದಿಯಲ್ಲಿ ಧಾವಿಸಿ ಜನರ ಪ್ರಾಣಗಳನ್ನು ರಕ್ಷಿಸುವ ಅಗತ್ಯವಿತ್ತು. ಆಗ ಕೇಂದ್ರದಲ್ಲಿಯೂ, ಕರ್ನಾಟಕ ರಾಜ್ಯದಲ್ಲಿಯೂ ಅಧಿಕಾರದಲ್ಲಿ ಭಾರತೀಯ ಜನತಾ ಪಕ್ಷ(ಬಿಜೆಪಿ)ದ ಕೇಂದ್ರ ಮಂತ್ರಿಗಳು, ಸಂಸದರು, ಮುಖ್ಯಮಂತ್ರಿ, ಮಂತ್ರಿಗಳು, ಶಾಸಕರು, ನಾಯಕರುಗಳಿಗೆ ಜನರನ್ನು ರಕ್ಷಿಸುವುದು ಆದ್ಯತೆ ಆಗಿತ್ತು. ಆದರೆ ಅದಕ್ಕಿಂತಲೂ ಹೆಚ್ಚಾಗಿ ಈ ಸನ್ನಿವೇಶವನ್ನು ತಮ್ಮ ವಿಕೃತ ಕೋಮುದ್ವೇಷವನ್ನು ಹರಡುವ ಒಂದು ಅತ್ಯುತ್ತಮ ಅವಕಾಶವಾನ್ನಾಗಿಸಲು ಹಲವು ಬಾರಿ ಯತ್ನಿಸಿದ್ದರು.

ರಾಷ್ಟ್ರ ಮಟ್ಟದಲ್ಲಿ ತಬ್ಲೀಘೀ ಜಮಾತ್ ಸಂಸ್ಥೆಯ ಕಾರ್ಯಕ್ರಮವನ್ನೇ ನೆಪ ಮಾಡಿಕೊಂಡು ಹಸಿ ಹಸಿ ಮುಸ್ಲಿಂ ದ್ವೇಷ ಹರಡಲಾಯಿತು. ರಾಜ್ಯದಲ್ಲಿ ಬೆಂಗಳೂರಿನ ಬಿಬಿಎಂಪಿ ಕೊರೊನ ವಾರ್ ರೂಮ್ ನಲ್ಲಿ ಕೆಲಸ ಮಾಡುತ್ತಿದ್ದ ನೌಕರರಲ್ಲಿ ಮುಸ್ಲಿಂ ನೌಕರರ ಮೇಲೆ ವಿನಾಕಾರಣ ಧಾರ್ಮಿಕ ಪಕ್ಷಪಾತ, ಹಗರಣದ ಆರೋಪ ಹೊರಿಸಿ, ನಿಂದಿಸಿ ಕೆಲಸದಿಂದ ವಜಾ ಮಾಡಲಾಯಿತು. ಇಂತಹ ಕುತ್ಸಿದ್ದ ಪ್ರಯತ್ನಗಳ ಪರಿಣಾಮವಾಗಿ ಐಕ್ಯತೆಯಿಂದ ಜನತೆ ಸಂಕಷ್ಟದ ಸಂದರ್ಭವನ್ನು ಎದುರಿಸುವ ಬದಲು ಪರಸ್ಪರ ಅನುಮಾನ ಮತ್ತು ದ್ವೇಷ ವಿರೋಧದ ಮನೋಭಾವವನ್ನು ಬೆಳೆಸಿಕೊಂಡು ವಿಭಜಿತವಾಗುವ ಸಂದರ್ಭಗಳು ಸೃಷ್ಟಿಯಾಗಿದ್ದವು. ಇವು ಕೆಲವು ಉದಾಹರಣೆಗಳಷ್ಟೆ.

ಇದನ್ನೂ ಓದಿ: ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿ ಮೃತ; ಪ್ರತಿಭಟಿಸಿದ ಕುಟುಂಬಸ್ಥರು

ಈ ದುಷ್ಟ ಕೋಮುವಾದಿ ಆಟಗಳು ತೆರೆಯ ಮುಂದೆ ನಡೆಯುತ್ತಿದ್ದರೆ, ತೆರೆಯ ಮರೆಯಲ್ಲಿ ನಡೆಯುತ್ತಿದ್ದುದೇ ಬೇರೆ ‘ಆಟ’. ಅದು ‘ಬೆಂದ ಮನೆಯಲ್ಲಿ ಗಳ ಇರಿಯುವ ಆಟ’. ಅಕ್ಷರಶಃ ಆಗ ಬಿಜೆಪಿಗರು ಮಾಡಿರುವುದು ಅದನ್ನೇ ಎನ್ನುವುದು ತನಿಖೆಯ ವಿವರಗಳಿಂದ ತಿಳಿಯುತ್ತದೆ. ಕೊರೊನ ಕಾಲದ ಕಿಟ್, ವೈದ್ಯಕೀಯ ಸಾಧನ, ಸಲಕರಣೆ, ವಿವಿಧ ಸೇವೆಗಳಿಗೆ ಹಣ ಪಾವತಿ ಇತ್ಯಾದಿ ವಿಷಯಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿರುವ ಬಗೆಗೆ ಆಗಲೇ ಹಲವು ಗಂಭೀರ ಆರೋಪಗಳು ಕೇಳಿಬಂದಿದ್ದವು.

ಆದರೆ ಬಿಜೆಪಿ ಸರಕಾರ ಹಗರಣವನ್ನು ಮುಚ್ಚಿಹಾಕಲು ಪ್ರಯತ್ನಿಸಿತ್ತು. ರಾಜ್ಯದಲ್ಲಿ ಬಿಜೆಪಿ ಸೋತು ಕಾಂಗ್ರೆಸ್ ಪಕ್ಷದ ಹೊಸ ಸರಕಾರ ಬಂದ ಮೇಲೆ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕೆಲ್ ಡಿ ಕುನ್ಹಾ ನೇತೃತ್ವದ ತನಿಖಾ ಸಮಿತಿ ನೇಮಿಸಿದ್ದು, ಈ ಸಮಿತಿಯು ಹಗರಣದ ಸಂಬಂಧ ವಿಚಾರಣೆ ನಡೆಸಿ ಮಧ್ಯಂತರ ವರದಿಯನ್ನು ನೀಡಿ ಹಲವು ಶಿಫಾರಸು ಮಾಡಿದೆ ಎಂದು ವರದಿಯಾಗಿದೆ.

ರಾಜ್ಯದಲ್ಲಿಯೇ 330 ರಿಂದ 400 ರೂ. ದರದಲ್ಲಿ ಪಿಪಿಇ ಕಿಟ್ ಲಭ್ಯವಿದ್ದರೂ ವಿದೇಶೀ ಚೀನಾದ ಕಂಪನಿಗಳಿಗೆ ತಲಾ ಕಿಟ್ ಗೆ ರೂ. 2,117ರ ದರ ನೀಡಿ 3 ಲಕ್ಷ ಕಿಟ್‌ಗಳನ್ನು ಖರೀದಿ ಮಾಡಲಾಗಿದೆ. ಒಂದೇ ದಿನ ಈ ಎರಡೂ ದರಗಳಲ್ಲಿ ಖರೀದಿ ನಡೆದಿದೆ. ಖಾಸಗಿ ಪ್ರಯೋಗಾಲಯಗಳಿಗೆ ಅಕ್ರಮವಾಗಿ ರೂ. 6.93 ಕೋಟಿ ಪಾವತಿಸಲಾಗಿದೆ. ಮಾನ್ಯತೆಯೇ ಇಲ್ಲದ ಖಾಸಗಿ ಪ್ರಯೋಗಾಲಯಗಳಿಗೆ 4.28 ಕೋಟಿ ರೂಪಾಯಿಗಳನ್ನು ಅಕ್ರಮವಾಗಿ ಪಾವತಿ ಮಾಡಲಾಗಿದೆ ಎಂಬಂತಹ ಹಲವು ಗಂಭೀರ ಅಕ್ರಮಗಳನ್ನು ಸಮಿತಿ ಗುರುತಿಸಿದ್ದು, ಒಟ್ಟಾರೆ ಸುಮಾರು 7,223 ರೂಪಾಯಿಗಳಷ್ಟು ಭ್ರಷ್ಟಾಚಾರ ನಡೆದಿದೆ ಎಂದು ಗುರುತಿಸಿರುವುದಾಗಿ ವರದಿಯಾಗಿದೆ. ಆಸ್ಪತ್ರೆಗಳ ಹಾಸಿಗೆ, ವೆಂಟಿಲೇಟರ್, ಪಲ್ಸ್ ಆಕ್ಸಿಮೀಟರ್, ಆಕ್ಸಿಜನ್ ಸಿಲಿಂಡರ್ ಗಳಿಂದ ಹಿಡಿದು ಸ್ಯಾನಿಟೈಸರ್ ಮತ್ತು ಮಾಸ್ಕ್ ಗಳವರೆಗೆ ಪ್ರತಿಯೊಂದು ಸಾಮಗ್ರಿ ಖರೀದಿಯಲ್ಲಿ ಅಕ್ರಮ ನಡೆದಿದೆ ಎಂದು ವರದಿ ಗುರುತಿಸಿದೆ ಎಂದು ಹೇಳಲಾಗಿದೆ. ರಾಜ್ಯದ ಮುಖ್ಯಮಂತ್ರಿ ಸುಮಾರು 15,000 ಕೋಟಿ ರೂಪಾಯಿಗಳವರೆಗೆ ಭ್ರಷ್ಟಾಚಾರ ನಡೆದಿರಬಹುದು ಎಂದಿದ್ದಾರೆ.

ಕೊರೊನ ಕಾಲದಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಮತ್ತು ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರು ಈ ಹಗರಣದ ಪ್ರಮುಖ ಹೊಣೆಗಾರರಾಗಿದ್ದಾರೆ ಎಂಬುದು ಸ್ಪಷ್ಟ. ಈಗ ಯಡಿಯೂರಪ್ಪ, ಶ್ರೀರಾಮುಲು ಅವರ ಮೇಲೆ ಭ್ರಷ್ಟಾಚಾರ ನಿಷೇಧ ಕಾಯ್ದೆಯಡಿಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ತನಿಖಾ ಸಮಿತಿ ಶಿಫಾರಸು ಮಾಡಿದೆ ಎಂದೂ ವರದಿಯಾಗಿದೆ.

ಇದನ್ನೂ ನೋಡಿ: ಅನರ್ಹರ ಬಿಪಿಎಲ್ ಕಾರ್ಡ್ ಗಳು ಮಾತ್ರ ರದ್ದು: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ Janashakthi Media

ವಿಚಾರಣಾ ಸಮಿತಿಯು ಅಕ್ಟೋಬರ್ ಎರಡನೇ ವಾರದಲ್ಲಿ ನೀಡಿದ ಸುಮಾರು 1,700ಕ್ಕೂ ಹೆಚ್ಚು ಪುಟಗಳ ವರದಿಯನ್ನು ಸಂಪುಟ ಉಪಸಮಿತಿ ಅಧ್ಯಯನ ನಡೆಸಿದ್ದು, ಇತ್ತೀಚೆಗೆ ಹಗರಣದ ತನಿಖೆಗೆ ವಿಶೇಷ ತನಿಖಾ ತಂಡ(ಎಸ್‌ಐಟಿ) ರಚನೆ ಮಾಡಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ. ತನಿಖಾ ಸಮಿತಿಗೆ ಪೂರ್ಣ ವರದಿ ನೀಡಲು ರಾಜ್ಯ ಸರಕಾರವು ಮತ್ತೆ ಆರು ತಿಂಗಳ ಕಾಲಾವಕಾಶ ನೀಡಿರುವುದಾಗಿಯೂ ವರದಿಯಾಗಿದೆ.

ತನಿಖಾ ಸಮಿತಿ ಸಾಧ್ಯವಾದಷ್ಟೂ ಬೇಗ ಪೂರ್ಣ ವರದಿ ನೀಡಲು ಸರಕಾರವು ಅಗತ್ಯವಾದ ಸೌಲಭ್ಯಗಳನ್ನು ನೀಡಬೇಕು. ಎಲ್ಲ ಬಗೆಯ ಅಕ್ರಮಗಳ ಬಗೆಗೆ, ಹಗರಣದಲ್ಲಿ ಭಾಗಿಯಾದ ಮತ್ತು ಹಗರಣ ತಡೆಯುವಲ್ಲಿ ವಿಫಲರಾದ ಎಲ್ಲ ರಾಜಕಾರಣಿಗಳು, ಅಧಿಕಾರಿಗಳ ಪಾತ್ರದ ಬಗೆಗೆ ಪಕ್ಷಬೇಧವಿಲ್ಲದ ಮತ್ತು ಪಕ್ಷಪಾತವಿಲ್ಲದ ರೀತಿಯಲ್ಲಿ ಸಮಗ್ರವಾದ ತನಿಖೆ ನಡೆಯಬೇಕು. ತನಿಖೆ ಬೇಗನೆ ಮುಗಿದು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು. ದುರುಪಯೋಗವಾದ ಹಣವನ್ನು ಭ್ರಷ್ಟರಿಂದ ವಸೂಲಿ ಮಾಡಬೇಕು.

ಇಂತಹ ಸನ್ನಿವೇಶದಲ್ಲಿ ಮುಕ್ತವಾದ ತನಿಖೆ ನಡೆದು ಸತ್ಯ ಹೊರ ಬರಬೇಕು ಎಂದು ವಿರೋಧ ಪಕ್ಷದ ಸ್ಥಾನದಲ್ಲಿರುವ ಬಿಜೆಪಿ ನಾಯಕರು ತನಿಖೆಗೆ ಸಹಕರಿಸಬೇಕಿತ್ತು. ಆದರೆ ಅದರ ಬದಲು ವಿಚಾರಣಾ ಆಯೋಗದ ಮುಖ್ಯಸ್ಥರ ಮೇಲೆಯೇ ಕೇಂದ್ರ ಸಚಿವ ಪ್ರಹ್ಲಾದ ಜೋಷಿಯವರು ಮಾಡಿರುವ ಮಾತಿನ ದಾಳಿ ಅಕ್ಷಮ್ಯ. ನ್ಯಾ. ಡಿ ಕುನ್ಹಾ ಅವರು ರಾಜಕೀಯ ಪೂರ್ವಾಗ್ರಹದಿಂದ ವರ್ತಿಸುತ್ತಿದ್ದಾರೆ, ಅವರು ಸ್ವತಂತ್ರ ವಿಚಾರಣಾ ಸಮಿತಿಯ ಮುಖ್ಯಸ್ಥರಂತೆ ಕೆಲಸ ಮಾಡುವ ಬದಲು ‘ಏಜೆಂಟ’ರಂತೆ ವರ್ತಿಸುತ್ತಿದ್ದಾರೆ ಎಂದು ಅವರು ಮಾಡಿರುವ ಆರೋಪ ಖಂಡನಾರ್ಯ.

ಈ ಧಾಳಿ ಉಪ ಚುನಾವಣೆಗಳ ಕಾಲದಲ್ಲಿ ಬಿಜೆಪಿಯ ಮುಖವನ್ನು ಉಳಿಸಲು ಮತ್ತು ಹಗರಣಗಳನ್ನು ಮರೆಮಾಚಲು ಹೂಡಿರುವ ತಂತ್ರವಷ್ಟೆ. ತನಿಖೆ ನಡೆಸುತ್ತಿರುವ ಮುಖ್ಯಸ್ಥರ ಮೇಲೆಯೇ ತೀವ್ರ ವಾಗ್ದಾಳಿಗಳನ್ನು ನಡೆಸಿ ಬೆದರಿಸುವುದನ್ನು ಕೇಂದ್ರ ಸಚಿವ ಕುಮಾರಸ್ವಾಮಿಯವರು ಸಹ ನಡೆಸಿರುವುದನ್ನು ಗಮನಿಸಬಹುದು. ‘ಕಳ್ಳನ ಮನಸ್ಸು ಹುಳ್ಳ ಹುಳ್ಳಗೆ’ ಎನ್ನುವಂತಿದೆ ಇವರ ನಡತೆ.

ಇದನ್ನೂ ಓದಿ: ಪಡಿತರ ಕಾರ್ಡ್‌ ಪರಿಷ್ಕರಣೆ – ಬಡ ಚಾಲಕನ ಕುಟುಂಬದ ಬಿಪಿಎಲ್ ಕಾರ್ಡ್ ರದ್ದು

ಇಂತಹ ಯಾವ ಗೊಡ್ಡು ಬೆದರಿಕೆಗಳಿಗೂ ತನಿಖಾ ಸಂಸ್ಥೆಯ ಮುಖ್ಯಸ್ಥರು ಹೆದರಬೇಕಿಲ್ಲ, ಹಿಂಜರಿಯ ಬೇಕಿಲ್ಲ. ನಿಷ್ಠುರ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಜರುಗಿಸುವಂತೆ ಆಗಬೇಕು. ಇದಕ್ಕೆ ಸಾರ್ವಜನಿಕರು ಮತ್ತು ಅಧಿಕಾರದಲ್ಲಿರುವ ಸರ್ಕಾರವು ಬೆಂಬಲ ನೀಡಬೇಕು. ಇದು ಜನಸಾಮಾನ್ಯರು ತಮ್ಮ ಬೆವರಿನಿಂದ ನೀಡಿದ ತೆರಿಗೆ ಹಣ. ಅತ್ಯಂತ ಸಂಕಷ್ಟದ ಸನ್ನಿವೇಶದಲ್ಲಿ ಅಮಾನವೀಯವಾಗಿ ವರ್ತಿಸಿದವರ ಬಗ್ಗೆ ಯಾವುದೇ ರೀತಿಯ ರಿಯಾಯಿತಿಯೂ ಇರಕೂಡದು. ರಾಜ್ಯ ಸರಕಾರ ಈ ಪ್ರಶ್ನೆಯನ್ನು ಚುನಾವಣಾ ಕಾಲದ ತಾತ್ಕಾಲಿಕ ತಂತ್ರಗಾರಿಕೆಗಳಿಗೆ ಬಳಸದೇ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಬೇಕು. ಜನತೆಯ ಹಿತ ಕಾಯುವ ಸಂವಿಧಾನಿಕ ಕರ್ತವ್ಯವನ್ನು ನಿರ್ವಹಿಸಬೇಕು.

ಮತ್ತೊಂದು ಸಂಗತಿಯೆಂದರೆ ದೇಶದಲ್ಲಿ ಕೊರೊನ ಸೋಂಕಿನಿಂದ ಪ್ರಾಣ ಕಳೆದುಕೊಂಡವರ ವಾಸ್ತವಿಕ ಸಂಖ್ಯೆಯನ್ನು ಕೇಂದ್ರ ಸರಕಾರ ಮುಚ್ಚಿಹಾಕಲು ಪ್ರಯತ್ನಿಸಿದೆ ಎಂಬ ಆರೋಪವೂ ಕೇಳಿ ಬಂದಿತ್ತು.. ದೇಶದಲ್ಲಿ ಕೊರೊನ ಸಾವಿನ ಸಂಖ್ಯೆ ಕೇವಲ 5,33,570 ಎಂದು ದಾಖಲಿಸಿತ್ತು. ಆದರೆ ಹಲವು ಅಂತರ ರಾಷ್ಟ್ರೀಯ ತಜ್ಞ ಸಂಸ್ಥೆಗಳು ಅಧ್ಯಯನ ನಡೆಸಿ, ವಾಸ್ತವಿಕ ಸಾವುಗಳ ಸಂಖ್ಯೆ ಅಧಿಕೃತ ದಾಖಲೆಗಳ ಹಲವು ಪಟ್ಟು ಜಾಸ್ತಿ ಎಂದು ಸಾರಿದವು. ಸತ್ಯವನ್ನು ಹೊರ ತಂದವು.

ರಾಜ್ಯದಲ್ಲಿಯೂ ಕೊರೊನ ಸಂಬಂಧಿ ಸಾವುಗಳ ಕುರಿತ ಅಧಿಕೃತ ಸಂಖ್ಯೆ 37,007 ಮಾತ್ರ ಇದೆ. ಆದರೆ ವಾಸ್ತವಿಕ ಸಾವುಗಳು 50,000 ವನ್ನು ಮೀರುತ್ತವೆ ಎನ್ನುತ್ತವೆ ಕೆಲವು ಮೂಲಗಳು. ಜಗತ್ ಪ್ರಸಿದ್ದಿ ಪಡೆದ ಕೊರೊನ ಬಿಕ್ಕಟ್ಟು ನಿರ್ವಹಣೆಯ ‘ಕೇರಳ ಮಾದರಿ’ ಕಣ್ಣ ಮುಂದೆ ಇದ್ದರೂ ಈ ಸರಕಾರಗಳು ಅದನ್ನು ಸರಿಯಾಗಿ ಪಾಲಿಸಲಿಲ್ಲ. ಪಾಲಿಸಿದಿದ್ದರೆ ಎಷ್ಟೋ ಅಮೂಲ್ಯ ಜೀವಗಳನ್ನು ಉಳಿಸಿ ಕೊಳ್ಳಬಹುದಿತ್ತು. ಈಗಲಾದರೂ ಕೊರೊನ ಹಗರಣದ ಅಪರಾಧಿಗಳನ್ನಾದರೂ ಪತ್ತೆ ಹಚ್ಚಿ ಕಠಿಣ ಕ್ರಮ ವಹಿಸಬೇಕು. ಸೂಕ್ತಪಾಠ ಕಲಿಸಬೇಕು.

Donate Janashakthi Media

Leave a Reply

Your email address will not be published. Required fields are marked *