ಬೆಂಗಳೂರು: ನಮ್ಮ ರಾಜ್ಯದ ರಾಜ್ಯ ಪಠ್ಯಕ್ರಮದ ಮಕ್ಕಳು ೬ನೇ ತರಗತಿಯಿಂದ ತ್ರಿಭಾಷಾ ಸೂತ್ರದ ಭಾಗವಾಗಿ ಹಿಂದಿಯನ್ನು ಮೂರನೇ ಭಾಷೆಯಾಗಿ , ಒಂದು ರೀತಿಯಲ್ಲಿ ಒತ್ತಾಯಪೂರ್ವಕವಾಗಿ ಕಲಿಯುತ್ತಿದ್ದಾರೆ. 6ಮತ್ತು 7 ನೇ ತರಗತಿಯಲ್ಲಿ ಈ ವಿಷಯ ಪಾಠ ಮಾಡಲು ಶಿಕ್ಷಕರೇ ಇಲ್ಲ ಎಂದು ಶಿಕ್ಷಣ ತಜ್ಙ ಡಾ.ನಿರಂಜನಾರಾಧ್ಯ ವಿ.ಪಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ್ದು, ದೊಡ್ಡ ಶಾಲೆಗಳಲ್ಲಿ ಒಬ್ಬರಿದ್ದರೂ ,ಅವರು ಎಲ್ಲಾ ಮಕ್ಕಳಿಗೆ ಹಿಂದಿ ಕಲಿಸುವುದು ಎಷ್ಟು ಕಷ್ಟ ಸಾಧ್ಯವೆಂದು ಬಿಡಿಸಿ ಹೇಳಬೇಕಿಲ್ಲ. ಈ ಕಾರಣಗಳಿಂದ, ಹಿಂದಿ ಭಾಷೆಯನ್ನು ಕಲಿಯಬೇಕೆಂಬ ಹೆಚ್ಚಿನ ಆಸಕ್ತಿ ಅಥವಾ ಉತ್ಸಾಹ ರಾಜ್ಯ ಮಂಡಳಿ ಪಠ್ಯಕ್ರಮ ಮಕ್ಕಳಲ್ಲಿ ಇಲ್ಲದಿರುವುದು ಹಲವು ಸಂದರ್ಭಗಳಲ್ಲಿ ಕಂಡು ಬಂದಿದೆ . 9ನೇ ತರಗತಿಯವರೆಗೆ ಅದು ಕೇವಲ ಪ್ರಗತಿ ಪತ್ರದ ಭಾಷೆಯಾಗಿ ಉಳಿದಿದೆ ಎಂದಿದ್ದಾರೆ.
ಇದನ್ನು ಓದಿ:ದೆಹಲಿ ಹೈಕೋರ್ಟ್ ಜಡ್ಜ್ ಮನೆಗೆ ಬೆಂಕಿ – ಅಗ್ನಿ ನಂದಿಸುವಾಗ ಅಪಾರ ನಗದು ಪತ್ತೆ
ಅಂತಿಮವಾಗಿ , ಎಸ್ ಎಸ್ ಎಲ್ ಸಿಯಲ್ಲಿ ಮಕ್ಕಳು ಹಿಂದಿಯಲ್ಲಿ ಕಡ್ಡಾಯವಾಗಿ ಉತ್ತೀರ್ಣರಾಗಬೇಕಿದೆ. ಲಭ್ಯವಿರುವ ಅಂಕಿ-ಅಂಶಗಳ ಅನ್ವಯ 2024 ರ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಸುಮಾರು 90794 ಮಕ್ಕಳು ಮೂರನೇ ಭಾಷೆಯಲ್ಲಿ ಅನುತ್ತೀರ್ಣರಾಗಿದ್ದಾರೆ .ಇದು ಕನ್ನಡದ ಮಕ್ಕಳಿಗೆ ಅನಗತ್ಯವಾಗಿ ಮೂರನೇ ಭಾಷೆ ಕಲಿಯುವ ಹೊರೆಯಲ್ಲದೆ ಮತ್ತೇನು ಅಲ್ಲ. ಈ ಮಕ್ಕಳು ಎಸ್ ಎಸ್ ಎಲ್ ಸಿ ನಂತರ ಹಿಂದಿ ಭಾಷೆಯನ್ನು ಮುಂದುವರಿಸುವ ಸಾಧ್ಯತೆ ತುಂಬಾ ಕಡಿಮೆ. ಮೂರನೇ ಭಾಷೆಯನ್ನು ಐಚ್ಚಿಕ ಭಾಷೆಯನ್ನಾಗಿ ಮಾಡಿ,8 ನೇ ಶೆಡ್ಯೂಲ್ ನಲ್ಲಿರುವ ಅಥವಾ 2011 ರ ಜನಗಣತಿಯಲ್ಲಿ ಮಾತೃಭಾಷೆಯೆಂದು ಗುರುತಿಸಿರುವ ಯಾವುದೇ ಭಾಷೆಯನ್ನು ಕಲಿಯಲು ಅವಕಾಶ ಸಂಪನ್ಮೂಲ ಕಲ್ಪಿಸಬೇಕು. ಇದು ಹೇರಿಕೆಯಾಗಬಾರದು ಎಂದು ತಿಳಿಸಿದ್ದಾರೆ.
ಈ ಕಾರಣದಿಂದ ಹಿಂದಿಯನ್ನು ತೃತೀಯ ಭಾಷೆಯಾಗಿ ಮಕ್ಕಳ ಮೇಲೆ ಹೇರುವ ಮೂಲಕ ಕಾಟಾಚಾರಕ್ಕಾಗಿ ಕಲಿಸುವುದಾಗಿದೆ.ನಮ್ಮ ಸರ್ಕಾರಿ ಪ್ರಾಥಮಿಕ ಶಾಲೆ ಗಳಲ್ಲಿ ಕೇವಲ ಬೆರಳೆಣಿಕೆಯಷ್ಟು ಮಾತ್ರ ಹಿಂದಿ ಶಿಕ್ಷಕರಿದ್ದು, ಇದು ಅನಗತ್ಯ ಶಿಕ್ಷಕ ಹುದ್ದೆ ಯಂತಾಗಿದೆ. ಮೂರನೇ ಭಾಷೆಯ ಅನಗತ್ಯ ಹೊರೆ ಮಾತೃ ಭಾಷೆ ಮತ್ತು ಎರಡನೇ ಭಾಷೆಯ ಕಲಿಕೆಯ ಮೇಲೂ ಗಾಢ ಪರಿಣಾಮ ಬೀರುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ , ಹಿಂದಿ ಭಾಷೆಯನ್ನು ತೃತೀಯ ಭಾಷೆಯಾಗಿ ಆಯ್ಕೆ ಮಾಡಿದರೂ ಅದು ಪರೀಕ್ಷಾ ದೃಷ್ಟಿಯಿಂದ ಅನಿವಾರ್ಯವಾಗಿದೆಯೇ ಹೊರತು ವಿದ್ಯಾರ್ಥಿಯ ಜ್ಞಾನಾರ್ಜನೆಗಾಗಲಿ, ವ್ಯವಹಾರಕ್ಕಾಗಲಿ, ಭವಿಷ್ಯಕ್ಕಾಗಲಿ, ಬದುಕಿಗಾಗಲಿ, ಉನ್ನತ ವ್ಯಾಸಂಗಕ್ಕಾಗಲಿ ಅಥವಾ ದೈನಂದಿನ ವ್ಯವಹಾರ ಕ್ಕಾಗಲಿ ಕನ್ನಡದ ಮಕ್ಕಳಿಗೆ ಪ್ರಯೋಜನವಾಗುತ್ತಿಲ್ಲ. ತ್ರಿಭಾಷಾ ನೀತಿಯ ಭಾಗವಾಗಿ ಹಿಂದಿ ಕಲಿಕೆಯೆಂದರೆ , ನೆಪಮಾತ್ರಕ್ಕೆ ಕಲಿತು ಮರೆಯಲಿಕ್ಕೆ ಎಂದಂತಾಗಿದೆ . ಹಿಂದಿ ಕಲಿಸಲು ನೇಮಕ ಮಾಡಿಕೊಳ್ಳುವ ಶಿಕ್ಷಕರನ್ನು ಕನ್ನಡ ಮತ್ತು ಆಂಗ್ಲ ಭಾಷಾ ವಿಷಯಗಳ ಕಲಿಕೆಗೆ ಹೆಚ್ಚಿನ ಸಂಖ್ಯೆಯಲ್ಲಿ ನೇಮಕ ಮಾಡಿಕೊಂಡರೆ, ಈ ಎರಡೂ ಭಾಷಾ ಕಲಿಕೆಯ ಗುಣಮಟ್ಟವನ್ನು ಪ್ರಭುತ್ವ ಮಟ್ಟಕ್ಕೆ ಒಯ್ಯಬಹುದು ಎಂದರು.
ಇದನ್ನು ಓದಿ:9 ತಿಂಗಳ ಬಾಹ್ಯಾಕಾಶ ವಾಸ: ಸುನಿತಾ ವಿಲಿಯಮ್ಸ್ ಪಡೆಯುವ ಸಂಬಳ ಎಷ್ಟು?
ಕಲಿಕಾ ದೃಷ್ಟಿಯಿಂದ ಶಾಲಾ ಹಂತದಲ್ಲಿ ಮಕ್ಕಳಿಗೆ ಎರಡು ಭಾಷೆ ಸಾಕು . ಮಕ್ಕಳ ಹಿತದೃಷ್ಟಿಯಿಂದ ಬಹಳ ಮುಖ್ಯ .ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳನ್ನು ಚೆನ್ನಾಗಿ ಕಲಿಸಿದರೆ ಮಗು ದೇಶದಲ್ಲಿ ಹಾಗೂ ಹೊರ ದೇಶದಲ್ಲಿ ಯಾವುದೇ ಕೋರ್ಸ್ ಗಳನ್ನು ವ್ಯಾಸಂಗ ಮಾಡಬಹುದು. ಆದ್ದರಿಂದ,ಶಿಕ್ಷಣದಲ್ಲಿ ದ್ವಿಭಾಷಾ ಸೂತ್ರ ಒಂದು ಮಾದರಿ ಎನಿಸುತ್ತದೆ. ಕರ್ನಾಟಕ ಸರ್ಕಾರ ಇದನ್ನು ಪರಿಶೀಲಿಸಿ ಒಂದು ದಿಟ್ಟ ನಿರ್ಧಾರಕ್ಕೆ ಬಂದರೆ ವಿದ್ಯಾರ್ಥಿಗಳು-ಪಾಲಕರು ಸರ್ಕಾರವನ್ನು ಸದಾ ಸ್ಮರಿಸುತ್ತಾರೆ ಎಂದು ತಿಳಿಸಿದ್ದಾರೆ.