ಟಿ ಎಸ್ ವೇಣುಗೋಪಾಲ್
ಅಸಮಾನತೆ ಎನ್ನುವುದು ಜಗತ್ತನ್ನು ಕಾಡುತ್ತಲೇ ಇರುವ ಸಮಸ್ಯೆ. ಪಿಕೆಟ್ಟಿಯವರು ಅದಕ್ಕೆ ಸಂಬಂಧಿಸಿದಂತೆ ಸಂಗ್ರಹಿಸಬಹುದಾದ ಎಲ್ಲಾ ಅಂಕಿ ಅಂಶಗಳನ್ನು ಒಂದೆಡೆ ಕಲೆ ಹಾಕಿ ಅದನ್ನು ಕುರಿತ ಚರ್ಚೆಯನ್ನು ಮುನ್ನೆಲೆಗೆ ತಂದರು. ಇತ್ತೀಚೆಗೆ ಅಭಿಜಿತ್ ಬ್ಯಾನರ್ಜಿಯವರು ವರ್ಡ್ಲ್ ನಾಲೆಡ್ಜ್ ಫೋರಂನಲ್ಲಿಅಸಮಾನತೆಯ ಭವಿಷ್ಯದ ಬಗ್ಗೆ ಮಾತನಾಡಿದ್ದಾರೆ. ಅರ್ಥಶಾಸ್ತ್ರದಲ್ಲಿ ಭವಿಷ್ಯವನ್ನು ಕುರಿತು ಮಾತನಾಡುವ ರೂಢಿ ಕೆಲವರಲ್ಲಿಇದೆ. ಆದರೆ ಅದು ಬಹುತೇಕ ಊಹೆಯಷ್ಟೇ ಆಗಿರುತ್ತದೆ. ಹಿಂದಿನ, ಹೆಚ್ಚೆಂದರೆ ಈಗಿನ ಪ್ರವೃತ್ತಿಯನ್ನು ಸ್ವಲ್ಪಮಟ್ಟಿಗೆ ನಿಖರವಾಗಿ ಅರ್ಥಮಾಡಿಕೊಳ್ಳುವುದಕ್ಕೆ ಅರ್ಥಶಾಸ್ತ್ರ ನೆರವಾಗಬಹುದು ಅಷ್ಟೆ. ಬ್ಯಾನರ್ಜಿಯವರು ಕೂಡ ಭವಿಷ್ಯದ ಬಗ್ಗೆ ಮಾತನಾಡುವ ಕೆಲಸಕ್ಕೆ ಕೈಹಾಕದೆ ಈವರೆಗಿನ ಸ್ಥಿತಿಯನ್ನು ಚರ್ಚಿಸಿದ್ದಾರೆ. ಅಸಮಾನತೆಯ
ಬಹುತೇಕ ಅಧ್ಯಯನಗಳು ಹೇಳುವಂತೆ ಚೀನಾ,ಇಂಡಿಯಾ, ಜಪಾನ್, ಅಮೇರಿಕಾ ಸೇರಿದಂತೆ ಹಲವು ದೇಶಗಳಲ್ಲಿ ಈಗ ಅಸಮಾನತೆ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಸಾಮಾನ್ಯವಾಗಿ ಅಸಮಾನತೆಯನ್ನು ಅಳೆಯಲು ಮೇಲಿನ 10% ಶ್ರೀಮಂತರ ವರಮಾನ ಹಾಗೂ ಕೆಳಗಿನ 50% ಬಡವರ ವರಮಾನದ ಅನುಪಾತವನ್ನು ಮಾಪನವನ್ನಾಗಿ ಬಳಸುತ್ತಾರೆ. ನಾವು ಅಸಮಾನತೆಯನ್ನು ಅಳೆಯಲು ಪ್ರಾರಂಭಿಸಿದಾಗಿನಿಂದ, ನಮಗೆ ಆ ಬಗ್ಗೆ ಅಂಕಿ ಅಂಶ ಸಿಗಲು ಪ್ರಾರಂಭವಾದಂದಿನಿಂದ ಅಂದರೆ ಸುಮಾರು 1900ರಿಂದ ಈವರೆಗೆ ಅಸಮಾನತೆ ಎಂದೂ ಈ ಪ್ರಮಾಣದಲ್ಲಿಇರಲಿಲ್ಲ. ಎರಡನೇ ಮಹಾಯುದ್ಧದ ನಂತರದಲ್ಲಿಐರೋಪ್ಯದೇಶಗಳಲ್ಲೂಅಸಮಾನತೆ ಈ ಪ್ರಮಾಣ ತಲುಪಿರಲಿಲ್ಲ. ಅಸಮಾನತೆಯ
ಈ ಮಟ್ಟದ ಅಸಮಾನತೆ ಅನಿವಾರ್ಯವೇ?
ಬ್ಯಾನರ್ಜಿಯವರು ಗುರುತಿಸುವಂತೆ ಮೆಕ್ಸಿಕೊ, ಬ್ರೆಜಿಲ್, ಇಂಡೋನೇಷ್ಯಾ, ಮೊರೋಕ್ಕೊ, ನೈಜೀರಿಯಾ ಅಂತಹ ದೇಶಗಳನ್ನು ನೋಡಿದರೆ ಅಲ್ಲೆಲ್ಲಾ ಅಸಮಾನತೆಯ ಪ್ರಮಾಣ ಕಮ್ಮಿಯಾಗುತ್ತಿದೆ. ವಿಚಿತ್ರವೆಂದರೆ ಈ ಎಲ್ಲವೂ ಚಾರಿತ್ರಿಕವಾಗಿ ಅಸಮಾನತೆ ತೀವ್ರವಾಗಿದ್ದ ದೇಶಗಳು. ಅಷ್ಟೇ ಅಲ್ಲ, ಅವೆಲ್ಲ ತೀವ್ರ ಸಾಮಾಜಿಕ ಪ್ರಕ್ಷುಬ್ಧತೆಯಲ್ಲಿದ್ದ ದೇಶಗಳು. ಹಾಗಾಗಿ ಅಸಮಾನತೆ ಅನಿವಾರ್ಯವಾಗಬೇಕಾಗಿಲ್ಲ.
ಇದನ್ನೂ ಓದಿ: ಕನ್ನಡದಲ್ಲೇ ಔಷಧ ಪ್ರಿಸ್ಕ್ರಿಪ್ಷನ್ ಬರೆಯಲು ಆರಂಭಿಸಿದ ವೈದ್ಯರು
ಜೊತೆಗೆ ಅಸಮಾನತೆ ಹೆಚ್ಚಾಗುತ್ತಿರುವ ಎಲ್ಲಾ ದೇಶಗಳಲ್ಲಿ ಮೊದಲು ಅಸಮಾನತೆ ಕಮ್ಮಿಯೇ ಇತ್ತು. 1980ರ ವರೆಗೂ ಕಮ್ಮಿಯಾಗುತ್ತಾ ಬಂದಿತ್ತು. ಅಲ್ಲಿಂದ ಮುಂದಕ್ಕೆ ಅದು ಹೆಚ್ಚುತ್ತಾ ಹೋಗಿದೆ. ಇದಕ್ಕೆ ಕಾರಣವನ್ನು ಕಂಡುಕೊಳ್ಳಬೇಕು. ಆ ಸಮಯದಲ್ಲಿ ಕೆಲವು ದೇಶಗಳಲ್ಲಿ ಆರ್ಥಿಕ ನೀತಿಗಳು ಬದಲಾಗಿವೆ. 1979ರಲ್ಲಿ ಚೀನಾ ಸಮಾಜವಾದೀ ನೀತಿಯನ್ನು ಬಿಟ್ಟು ಮಾರುಕಟ್ಟೆ ಆರ್ಥಿಕತೆಯನ್ನು ಅಪ್ಪಿಕೊಂಡಿತ್ತು. ಹಾಗಾಗಿ ಅದುಅಸಮಾನತೆ ಹೆಚ್ಚುವುದಕ್ಕೆ ಕಾರಣ ಅಂತ ಹೇಳಬಹುದು. ಉಳಿದ ದೇಶಗಳಲ್ಲಿ ಅಸಮಾನತೆ ಹೆಚ್ಚುವುದಕ್ಕೆ ಕಾರಣಗಳೇನು? ಬ್ಯಾನರ್ಜಿಯವರು ಗಮನಿಸುವಂತೆ ಅದು ರೋನಾಲ್ಡ್ ರೀಗನ್ ಅಮೇರಿಕೆಯ ಅಧ್ಯಕ್ಷರಾದ ಹಾಗೂ ಹಾಗೂ ಮಾರ್ಗರೇಟ್ ಥ್ಯಾಚರ್ ಇಂಗ್ಲೆಂಡಿನ ಪ್ರಧಾನಿಯಾದ ಸಮಯ. ಅವರು ಅಧಿಕಾರಕ್ಕೆ ಬಂದತಕ್ಷಣ ಶ್ರೀಮಂತರ ಮೇಲಿನ ತೆರಿಗೆಯನ್ನು ದಿಢೀರನೆ ಇಳಿಸಿಬಿಟ್ಟರು. ಅಮೇರಿಕೆಯಲ್ಲಿ ಅದನ್ನು70% ಇಂದ 40% ಇಳಿಸಲಾಯಿತು. ಇದು ಅವರ ಸಂಪತ್ತು ಹೆಚ್ಚುವುದಕ್ಕೆ ಮುಖ್ಯ ಕಾರಣವಾಯಿತು.
ಆ ಸಮಯದಲ್ಲಿ ಆರ್ಥಿಕ ಬೆಳವಣಿಗೆಗೆ ಅಸಮಾನತೆ ಅವಶ್ಯಕ ಅನ್ನುವ ಅಭಿಪ್ರಾಯ ಅರ್ಥಶಾಸ್ತ್ರದಲ್ಲಿ ವ್ಯಾಪಕವಾಗಿತ್ತು. ಅದೊಂದು ರಾಜಕೀಯ ವಿಚಾರವಾಗಿತ್ತು. ಆರ್ಥಿಕ ಬೆಳವಣಿಗೆಯಾಗಬೇಕಾದರೆ ಅಸಮಾನತೆ ಹೆಚ್ಚಲೇಬೇಕು. ಅದರ ಬಗ್ಗೆ ಆತಂಕಗೊಳ್ಳಬೇಕಾದ ಅವಶ್ಯಕತೆಯಿಲ್ಲ. ಅದೊಂದು ತೀರಾ ಸ್ವಾಭಾವಿಕವಾದ ಸಂಗತಿ ಅನ್ನುವುದು ಆಗಿನ ಚಿಂತನೆಯಾಗಿತ್ತು. ಹೀಗೆ ಅಸಮಾನತೆಗೆ ಸಮರ್ಥನೆ ಸಿಕ್ಕ ಮೇಲೆ ಅದರ ಪರಿಣಾಮ ಹಲವು ರೀತಿಯಲ್ಲಿಆಗುತ್ತದೆ. ಉದಾಹರಣೆಗೆ ಉದ್ದಿಮೆಯೊಳಗೂ ಈ ಪ್ರವೃತ್ತಿ ಹೆಚ್ಚುತ್ತದೆ. ಉದ್ದಿಮೆಯ ಸಿಇಒಗಳ ಸಂಬಳ ವಿಪರೀತವಾಗಿ ಏರತೊಡಗಿತು. ಅವರ ವೇತನ ಸಾಮಾನ್ಯ ನೌಕರನ 60ರಷ್ಟು ಇದ್ದುದು 6000 ಪಟ್ಟಾಯಿತು. ಅಂದರೆ ನೂರುಪಟ್ಟು ಹೆಚ್ಚಿತು. ಅವರು ಕಷ್ಟಪಟ್ಟು ದುಡಿಯುತ್ತಾರೆ, ಉತ್ಪಾದನೆಯನ್ನು ಹೆಚ್ಚಿಸುತ್ತಾರೆ. ಅದಕ್ಕೆ ಅನುಗುಣವಾಗಿ ಅವರಿಗೆ ವೇತನ ಕೊಡಬೇಕು ಅನ್ನುವುದು ಅದರ ಹಿಂದಿನ ತರ್ಕವಾಗಿತ್ತು. ಇವೆಲ್ಲಾ ಒಂದು ಸೈದ್ಧಾಂತಿಕ ಚಿಂತನೆಯ ಭಾಗ. ಆಚಿಂತನೆ ಅಲ್ಲಿಗೆ ನಿಲ್ಲುವುದಿಲ್ಲ. ಕೆಲಸಗಾರರು ಅಷ್ಟೊಂದು ಉಪಯುಕ್ತರಲ್ಲ ಅವರಿಗೆ ಕಡಿಮೆ ಕೂಲಿ ಕೊಡುವುದು ಸರಿ ಅನ್ನುವುದಕ್ಕೆ ಅದು ಬಂದು ನಿಲ್ಲುತ್ತದೆ.
ಅಮೇರಿಕೆಯಲ್ಲಿ, ಇಂಗ್ಲೆಂಡಿನಲ್ಲಿ ತೆರಿಗೆ ಕಡಿತ ಮಾಡಿ ಅಸಮಾನತೆಯನ್ನು ಹೆಚ್ಚಿಸಿದ್ದರಿಂದ ಬೆಳವಣಿಗೆ ಹೆಚ್ಚಿದೆಯೇ ಅಂದರೆ ಇಲ್ಲ. ಅಲ್ಲಿ ಬೆಳವಣಿಗೆ ನಿಧಾನವಾಯಿತು. ಅಂದರೆ ಅಸಮಾನತೆ ಹೆಚ್ಚಿದಂತೆ, ಆ ರಾಷ್ಟ್ರಗಳಲ್ಲಿ ಬೆಳವಣಿಗೆ ಹೆಚ್ಚುವುದರ ಬದಲು ಕಡಿಮೆಯಾಗುತ್ತಿದೆ. ಹಾಗಾಗಿ ಅಸಮಾನತೆ ಹೆಚ್ಚಿದರೆ ಬೆಳವಣಿಗೆ ಹೆಚ್ಚಿಬಿಡುತ್ತದೆ ಎನ್ನುವುದಕ್ಕಾಗಲಿ, ಅಥವಾ ಬೆಳವಣಿಗೆ ಹೆಚ್ಚಬೇಕಾದರೆ ಅಸಮಾನತೆ ಹೆಚ್ಚಲೇ ಬೇಕು. ಒಮ್ಮೆ ಬೆಳವಣಿಗೆ ಹೆಚ್ಚಿದರೆ ಅದರ ಫಲ ಎಲ್ಲರಿಗೂ ಹರಿದುಬರುತ್ತದೆ ಅನ್ನುವ ವಾದಕ್ಕೆ ಬಲವಾದ ಪುರಾವೆ ಇಲ್ಲ. ಅರ್ಥಶಾಸ್ತ್ರದ ಸಿದ್ದಾಂತಗಳೂ ಅದನ್ನು ಸಮರ್ಥಿಸುವುದಿಲ್ಲ. ಅಸಮಾನತೆ ಕಡಿಮೆ ಇದ್ದಾಗ ಅಮೇರಿಕೆಯಲ್ಲಿ ಹೆಚ್ಚಿನ ಸಾಮಾಜಿಕ ಚಲನೆ ಸಾಧ್ಯವಾಗಿತ್ತು. ವಾಸ್ತವ ಅಂದರೆ ಸಮಾಜವಾದಿ ಐರೋಪ್ಯ ದೇಶಗಳಿಗಿಂತ ಎರಡು ಪಟ್ಟು ಚಲನೆ ಸಾಧ್ಯವಾಗಿತ್ತು. ಈಗ ಅಲ್ಲಿಅಂತಹ ಚಲನೆ ಅರ್ಧದಷ್ಟೂಇಲ್ಲ. ಬಡವರಿಗೆ ಹೂಡುವುದಕ್ಕೆ ಬಂಡವಾಳ ವಿಲ್ಲದೇ ಇರುವುದರಿಂದ ಅವರಲ್ಲಿ ಮೇಲ್ಮುಖ ಚಲನೆ ಸಾಧ್ಯವಾಗುತ್ತಿಲ್ಲ.
ಯಾಕೆ ಅಸಮಾನತೆ ಹೆಚ್ಚುತ್ತಿದೆ, ಶ್ರೀಮಂತರು ಹೆಚ್ಚು ಶ್ರೀಮಂತರಾಗುತ್ತಿದ್ದಾರೆ ಅನ್ನುವುದಕ್ಕೆ ಒಂದು ಕಾರಣವೆಂದರೆ ಹೇಗೆ ಮಾಡಿದರೂ ಅವರ ಸಂಪಾದನೆಯನ್ನು ಖರ್ಚು ಮಾಡಲಾಗುತ್ತಿಲ್ಲ. ಬ್ಯಾನರ್ಜಿಯವರು ಹೇಳುವಂತೆ ತಿಂಗಳಿಗೊಂದು ಫೆರಾರಿಕಾರು ಕೊಂಡರೂ ಎಲನ್ ಮಸ್ಕ್ ಸಂಪತ್ತಿನ ಒಂದು ಸಣ್ಣ ಭಾಗವೂಕರಗುವುದಿಲ್ಲ.ಅದಕ್ಕೆಅವರು ಮಂಗಳ ಗ್ರಹಕ್ಕೆ ಹೋಗುವುದಕ್ಕೋ, ಮಕ್ಕಳ ಮದುವೆಗೋ ಲಕ್ಷಾಂತರ ಕೋಟಿ ಖರ್ಚು ಮಾಡುತ್ತಾರೆ. ಆದರೂ ಅವರ ಸಂಪಾದನೆ ಖಾಲಿಯಾಗುವುದಿಲ್ಲ. ಹಾಗಾಗಿ ಅವರ ಸಂಪತ್ತು ಬೆಳೆಯುತ್ತಾ ಹೋಗುತ್ತದೆ. ಈ ಸಂಪತ್ತುಇನ್ನಷ್ಟು ವರಮಾನವನ್ನು ಹೆಚ್ಚಿಸುತ್ತದೆ. ವಾಸ್ತವದಲ್ಲಿ ಶ್ರೀಮಂತರ ವರಮಾನದ ಬಹುತೇಕ ಈ ಸಂಪತ್ತಿನಿಂದಲೇ ಬರುತ್ತಿರುವುದು. ಅವರ ಶ್ರಮದಿಂದ, ದುಡಿಮೆಯಿಂದ, ಕೌಶಲದಿಂದ ಬರುತ್ತಿರುವುದು ಕಡಿಮೆ.
ಅದರಲ್ಲೂಅತಿ ಶ್ರೀಮಂತ 1000 ಜನರ ವರಮಾನ ತೀವ್ರವಾಗಿ ಬೆಳೆಯುತ್ತಿದೆ. ಶ್ರೀಮಂತ 1% ಜನರಿಗಿಂತ ಈ ಅತಿ ಶ್ರೀಮಂತ 1000 ಜನರ ವರಮಾನ ಎರಡುವರೆ ಪಟ್ಟು ಹೆಚ್ಚಾಗಿದೆ. ಹಾಗಾಗಿ ಅವರ ಸಂಪತ್ತಿನ ಕ್ರೋಡೀಕರಣ ಹೆಚ್ಚುತ್ತಿದೆ. ಇದರಿಂದ ಹೂಡಿಕೆ ಹೆಚ್ಚುತ್ತಿಲ್ಲ.ಯಾಕೆಂದರೆ ಬಹುತೇಕ ಉದ್ದಿಮೆಗಳಲ್ಲಿ ಏಕಸ್ವಾಮ್ಯ ಸಾಧ್ಯವಾಗಿದೆ. ಅದರಿಂದ ಅವರಿಗೆ ಸ್ಪರ್ಧೆ ಕಡಿಮೆಯಾಗಿದೆ. ಹಾಗಾಗಿ ಹೂಡಿಕೆಯನ್ನು ಹೆಚ್ಚಿಸದೆ ಲಾಭವನ್ನು ಹೆಚ್ಚಿಸಿಕೊಳ್ಳಬಹುದು. ಹೂಡಿಕೆ ಹಾಗೂ ಲಾಭದ ನಡುವಿನ ಸಂಬಂಧ ಕಡಿಮೆಯಾಗಿದೆ. ಉತ್ಪಾದನೆಯ ಹೆಚ್ಚಳದ ದೃಷ್ಟಿಯಿಂದ ಇದು ಒಳ್ಳೆಯ ಬೆಳವಣಿಗೆಯಲ್ಲ.
ಇದ್ಕಕೆ ರಾಜಕೀಯ ಆಯಾಮವೂ ಇದೆ.ಅಭಿಜಿತ್ ಹೇಳುವಂತೆ ನೈಜ ಕೂಲಿ ಕಡಿಮೆಯಾಗಿರುವವರು ಟ್ರಂಪ್ ನಂತಹ ಜನಪ್ರಿಯ ನಾಯಕರಿಗೆ ಮತ ಚಲಾಯಿಸಿದ್ದಾರೆ. ಆರ್ಥಿಕ ಅಸ್ಥಿರತೆ, ನಿರುದ್ಯೋಗ, ಕೂಲಿಯ ಸ್ಥಗಿತತೆ ಇವೆಲ್ಲಾ ಜನಪ್ರಿಯ ನಾಯಕರಿಗೆ ಅನುಕೂಲವಾಗುತ್ತದೆ. ಪಿಕೆಟ್ಟಿ ಹಾಗೂ ಗೆಳೆಯರು ಮಾಡಿರುವ ಅಧ್ಯಯನವೂ ಇದನ್ನು ಹೇಳುತ್ತದೆ.
ಒಟ್ಟಾರೆ ಆರ್ಥಿಕ ಬೆಳವಣಿಗೆಗೆ ಅಸಮಾನತೆ ಅವಶ್ಯಕ ಅನ್ನುವುದಕ್ಕೆ ಪೂರವೆಗಳಿಲ್ಲ. ಐಎಂಎಫ್ ಪ್ರಕಟಿಸಿರುವ ಕಾಸಸ್ ಅಂಡ್ ಕಾನ್ಸಿಕ್ವೆನ್ಸ್ ಆಫ್ ಇನ್ಕಮ್ ಇನಿಕ್ವಾಲಿಟಿ: ಎ ಗ್ಲೋಬಲ್ ಪರ್ಸ್ಪೆಕ್ಟೆವ್ ಅನ್ನುವ ಅಧ್ಯಯನದ ಪ್ರಕಾರವೂ ವರಮಾನದ ಅಸಮಾನತೆ ಕಮ್ಮಿಯಾದರೆ ಅದರಲ್ಲೂ ಬಡವರ ಆದಾಯ ಸುಧಾರಿಸಿದರೆ ದೇಶದ ಜಿಡಿಪಿಯ ದರ ಹೆಚ್ಚುತ್ತದೆ. ಅಂದರೆ ಬಡವರ ಸ್ಥಿತಿ ಸುಧಾರಿಸಿದರೆ ಒಟ್ಟಾರೆ ಆರ್ಥಿಕತೆಗೆ ಅನುಕೂಲವಾಗುತ್ತದೆ. ಆ ಅಧ್ಯಯನದ ಪ್ರಕಾರ ಕೆಳಗಿನ 20% ಜನರ ವರಮಾನ ಹೆಚ್ಚಿದಂತೆ ಜಿಡಿಪಿಯ ಬೆಳವಣಿಗೆಯ ದರವೂ ಹೆಚ್ಚಿದೆ. ಅದಕ್ಕೆ ವ್ಯತಿರಿಕ್ತವಾಗಿ ಅತಿ ಶ್ರೀಮಂತ 20% ಜನರ ವರಮಾನ ಹೆಚ್ಚಿದರೆ ಬೆಳವಣಿಗೆ ಕಮ್ಮಿಯಾಗಿರುವುದು ಕಂಡು ಬಂದಿದೆ.
ಸಂಪತ್ತಿನ ಕೇಂದ್ರೀ ಕರಣದ ಪರಿಣಾಮ ವ್ಯಾಪಾರದ ಮೇಲೂ ಆಗುತ್ತದೆ. ಶ್ರೀಮಂತರಿಗೆ ಅವರ ಸಂಪಾದನೆಯನ್ನು ಖರ್ಚು ಮಾಡುವುದಕ್ಕೆ ಆಗುವುದಿಲ್ಲ. ಹಾಗಾಗಿ ಅದು ಬೆಳೆಯುತ್ತಾ ಹೋಗುತ್ತದೆ. ಹೆಚ್ಚು ಬೆಲೆಯ ಸರಕುಗಳನ್ನು ಅದರಲ್ಲೂ ಬ್ರಾಂಡಡ್ ವಸ್ತುಗಳನ್ನು ಕೊಳ್ಳುತ್ತಾರೆ. ಅವುಗಳ ಬೇಡಿಕೆ ಹೆಚ್ಚುತ್ತದೆ. ಅಂತಹ ಸರಕುಗಳ ಉತ್ಪಾದನೆ ಜಾಗತಿಕ ಆರ್ಥಿಕ ಬೆಳವಣಿಗೆಗಿಂತ ವೇಗವಾಗಿ ಬೆಳೆಯುತ್ತಿದೆ. ಒಟ್ಟಾರೆ ಜಾಗತಿಕ ವ್ಯಾಪಾರದ ಸ್ವರೂಪವೇ ಬದಲಾಗಿಬಿಟ್ಟಿದೆ.
ಕೃತಕ ಬುದ್ಧಿಮತ್ತೆ ಬಿಕ್ಕಟ್ಟನ್ನುಇನ್ನಷ್ಟು ತೀವ್ರಗೊಳಿಸಿದೆ. ಇತ್ತೀಚಿನ ಐಎಲ್‌ಒ ಪ್ರಕಟಿಸಿರುವ ಜಾಗತಿಕ ಉದ್ಯೋಗ ಹಾಗೂ ಸಾಮಾಜಿಕ ಸ್ಥಿತಿಯನ್ನು ಕುರಿತ ವರದಿಯ ಪ್ರಕಾರ ಕಾರ್ಮಿಕರ ವರಮಾನ ಕಡಿಮೆಯಾಗುತ್ತಿರುವುದಕ್ಕೆ ಕೃತಕ ಬುದ್ಧಿಮತ್ತೆ ಕಾರಣ. ಎಲ್ಲೆಲ್ಲಿ ಕೃತಕ ಬುದ್ಧಿಮತ್ತೆ ಹೆಚ್ಚಿದೆಯೋ ಆ ಕ್ಷೇತ್ರಗಳಲ್ಲಿ ಕೂಲಿಯ ಪ್ರಮಾಣ ಕಡಿಮೆಯಾಗುತ್ತಿದೆ. ಕೃತಕ ಬುದ್ಧಿಮತ್ತೆ ಮಧ್ಯಮಕೌಶಲದ ಕೆಲಸಗಳನ್ನು ಕಸಿದುಕೊಳ್ಳುತ್ತಿವೆ. ಅಕೌಂಟಿಂಗ್ ಅಂತಹ ಕೆಲಸಗಳನ್ನು ಅದು ಮನುಷ್ಯರಿಗಿಂತ ಚೆನ್ನಾಗಿ ಮಾಡಬಲ್ಲದು.
ಕೃತಕ ಬುದ್ಧಿಮತ್ತೆಗೆ ಬೇಡಿಕೆ ಹೆಚ್ಚಿದಂತೆ ಎಲೀಟ್ ಕೌಶಲಗಳಿಗೆ ಬೇಡಿಕೆ ಹೆಚ್ಚುತ್ತದೆ. ಎಲೀಟ್ ವಿಶ್ವ ವಿದ್ಯಾನಿಲಯಗಳಿಗೆ ಬೇಡಿಕೆ ಹೆಚ್ಚುತ್ತದೆ. ಶಿಕ್ಷಣ ತೀರಾ ದುಬಾರಿಯಾಗಿರುವುದರಿಂದ ಇಂತಹ ದೊಡ್ಡ ವಿಶ್ವ ವಿದ್ಯಾನಿಲಯಗಳಿಗೆ ಅವಕಾಶ ಪಡೆಯುವುದು ಅನುಕೂಲ ಸ್ಥರಿಗೆ ಹೆಚ್ಚು ಸುಲಭ. ಆರ್ಥಿಕ ಶ್ರೇಣಿಯಲ್ಲಿ ಕೆಳಗಿರುವವರಿಗೆ ಅಂತಹ ಅವಕಾಶಗಳು ಗಣನೀಯವಾಗಿ ಕಡಿಮೆ ಎನ್ನಲಾಗಿದೆ. ಈ ಪ್ರಕ್ರಿಯೆಯಲ್ಲಿ ಅವರು ಹೊರಗುಳಿಯುತ್ತಾ ಹೋಗುತ್ತಾರೆ. ಕೃತಕ ಬುದ್ಧಿಮತ್ತೆ, ಬದಲಾದ ವ್ಯಾಪಾರ ಸ್ವರೂಪ, ದುಬಾರಿಯಾದ ಶಿಕ್ಷಣ ವ್ಯವಸ್ಥೆಇವೆಲ್ಲವೂ ಅಸಮಾನತೆಯನ್ನು ಹೆಚ್ಚಿಸುವಲ್ಲಿ ಪಾಲು ಹೊಂದಿದೆ. ಇದು ಉಂಟುಮಾಡುತ್ತಿರುವ ಆತಂಕ ಜನರ ಬದುಕಿನ ಮೇಲೆ ಪರಿಣಾಮ ಬೀರುತ್ತದೆ. ಈಗ ಹೆಚ್ಚುತ್ತಿರುವ ಡ್ರಗ್, ಕುಡಿತ, ಆತ್ಮ ಹತ್ಯೆ ಇತ್ಯಾದಿಗಳಿಗೆ ಅವೇ ಕಾರಣ ಎನ್ನಲಾಗಿದೆ. ಇಂದು ಅಮೇರಿಕೆಯ ಬಿಳಿಯರಲ್ಲೂ ನಿರೀಕ್ಷಿತ ಆಯುಷ್ಯದ ಪ್ರಮಾಣ ಕಡಿಮೆಯಾಗಿರುವುದು ಸಮಸ್ಯೆಯ ಗಂಭೀರತೆಯನ್ನು ಸೂಚಿಸುತ್ತದೆ.
ಅಸಮಾನತೆಯನ್ನು ಕಡಿಮೆ ಮಾಡುವ, ಸಂಪತ್ತಿನ ವಿಪರೀತ ಏರಿಕೆಗೆ ಕಡಿವಾಣ ಹಾಕುವ ಕೆಲಸ ಜರೂರಾಗಿ ನಡೆಯಬೇಕಾಗಿದೆ. ಸಂಪತ್ತಿನ ಮೇಲಿನ ತೆರಿಗೆಯಿಂದ ಹಾಗೂ ಅನುವಂಶೀಯ ತೆರಿಗೆಯಿಂದ ಹಣ ಸಂಗ್ರಹಿಸಿ ಅದನ್ನು ಜನರ ಒಳಿತಿಗೆ ಬಳಸುವುದಕ್ಕೆ ಸಾಧ್ಯವಾದರೆ ವರಮಾನದ ಮರುಹಂಚಿಕೆಗೆ ಸಾಧ್ಯವಾಗಬಹುದು.
ಇದನ್ನೂ ನೋಡಿ: ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳ ಆರ್ಥಿಕ ಹಕ್ಕುಗಳನ್ನು ಎನ್‌ಡಿಎ ಸರ್ಕಾರ ಹತ್ತಿಕ್ಕುತ್ತಿದೆ