ಕೊಡುಗೆಗಳು ಮತ್ತು ರಾಜಕಾರಣ

                                                                                                                                                                                                                  -ಯು. ಬಸವರಾಜ್

ಕರ್ನಾಟಕದಲ್ಲಿ ಮತ್ತು ಬೇರೆ ಕಡೆಗಳಲ್ಲಿಯೂ ಈಗ ಉಚಿತ ಕೊಡುಗೆಗಳ ಕುರಿತೇ ಚರ್ಚೆ ನಡೆಯುತ್ತಿದೆ. ಹಲವು ಪ್ರಶ್ನೆಗಳನ್ನೂ ಎತ್ತಲಾಗುತ್ತಿದೆ. ಉದಾರಿಕರಣ, ಕಾರ್ಪೊರೇಟೀಕರಣದ ಆರ್ಥಿಕ ನೀತಿಗಳ ಜಾರಿಯಲ್ಲಿರುವ ಸರಕಾರಗಳು ನೀಡುತ್ತಿರುವ ಉಚಿತ ಯೋಜನೆಗಳು, ಕೊಡುಗೆಗಳು- ಗ್ಯಾರಂಟಿಗಳು ಮತ್ತು ಅದರ ಸುತ್ತ ಇರುವ ರಾಜಕೀಯದ ಕುರಿತಾದಂತೆ ಈ ಲೇಖನ.

ಬಹುರಾಷ್ಟ್ರೀಯ ಕಂಪನಿಗಳು, ಕಾರ್ಪೋರೇಟ್ ಕಂಪನಿಗಳ ಪರವಾದ ನವ ಉದಾರೀಕರಣದ ನೀತಿಗಳನ್ನು ಜಾರಿಗೆ ತರುವುದಷ್ಠೇ ಸರಕಾರದ ಕೆಲಸವಾಗಬೇಕು! ಸಾರ್ವಜನಿಕ ವೆಚ್ಚವನ್ನು ಕಡಿತ ಮಾಡಬೇಕು ಹಾಗೂ ಸಾರ್ವಜನಿಕ ಉದ್ದಿಮೆಗಳು ನಡೆಸುವುದು ಸರಕಾರದ ಕೆಲಸವಲ್ಲಾ! ಅವುಗಳನ್ನು ನಾವು ನಡೆಸಲು ನಾವಿದ್ದೇವೆ! ಬಡವರಿಗೆ ನೆರವು ನೀಡುವುದು ಬೇಡಾ? ಬಡತನದ ನಿವಾರಣೆಗೆ ನಾವಿದ್ದೇವೆ! ಹೀಗೆ ಬಡತನ ನಿವಾರಣೆಯ ಕೆಲಸ ಉದ್ದಿಮೆಗಳನ್ನು ನಡೆಸುವ ಕೆಲಸ ನಿಮ್ಮದಲ್ಲ!. ಸರಕಾರದ ಕೆಲಸ ವೇನಿದ್ದರೂ ನಮಗೆ ಉತ್ತೇಜನ ನಿಡುವುದು ಮತ್ತು ನೆರವು ನೀಡುವುದಾಗಬೇಕು ಎಂದು ದೊಡ್ಡ ಬಂಡವಾಳದಾರರು ಸರಕಾರಗಳಿಗೆ ಮತ್ತು ಸಮಾಜಕ್ಕೆ ಬೋದನೆ ಮಾಡುವ ಮತ್ತು ಸರಕಾರಗಳು ಆ ದಿಸೆಯಲ್ಲಿ ಧೃಢವಾಗಿ ನಡೆಯುತ್ತಿರುವ ಜಾಗತೀಕರಣದ ಕಾಲದಲ್ಲಿ ನಾವಿದ್ದೇವೆ! ಇದೀಗ ಕರ್ನಾಟಕದ ವಿಧಾನಸಭಾ ಚುನಾವಣೆ ನಡೆದು ಕಾಂಗ್ರೆಸ್ ಪಕ್ಷ ಸ್ವಂತ ಬಲದ ಮೇಲೆ ಅಧಿಕಾರ ಹಿಡಿದು, ಚುನಾವಣೆಯಲ್ಲಿ ಅದು ಜನತೆಗೆ ನೀಡಿದ ಐದು ಖಾತ್ರಿ ವಾಗ್ದಾನಗಳನ್ನು ಜಾರಿಗೊಳಿಸಲು ಯತ್ನಿಸುವಾಗ ಪುನಃ ಬಿಜೆಪಿ ಪಕ್ಷ ಹಾಗೂ ಹಿಂದುತ್ವವಾದಿಗಳಿಂದ ಮತ್ತು ಕೆಲ ಬಂಡವಾಳಶಾಹಿ
ಬುದ್ದಿಜೀವಿಗಳಿಂದ ಇದೇ ವಾದವನ್ನು ಮುಂದೆ ಮಾಡಲಾಗಿದೆ. ಶ್ರೀಮಂತರಿಗೆ ಕೊಡುಗೆ ನೀಡುವುದು ಹೊರೆಯಲ್ಲ! ಬಡವರಿಗೆ ನೀಡಿದರೆ ದೇಶಕ್ಕೆ ಹೊರೆ!? ಶ್ರೀ ಸಿದ್ಧರಾಮಯ್ಯನವರ ನೇತೃತ್ವದ ಹೊಸ ಕಾಂಗ್ರೆಸ್ ಸರಕಾರ ಈಚೆಗೆ ಐದು ಗ್ಯಾರಂಟಿಗಳನ್ನು ಚುನಾವಣೆಯಲ್ಲಿ ನೀಡಿದ ವಾಗ್ದಾನದಂತೆ ರಾಜ್ಯದ ಮತದಾರರಿಗೆ ನೀಡಲು ನಿರ್ಧರಿಸಿದೆ. ಗೃಹ ಜ್ಯೋತಿ ಹೆಸರಿನಲ್ಲಿ 2೦೦ ಯುನಿಟ್ ವರೆಗೆ ವಿದ್ಯುತ್, ಗೃಹ ಲಕ್ಷ್ಮಿ ಹೆಸರಿನಲ್ಲಿ ಮನೆಯೊಡತಿಯರಿಗೆ ಮಾಸಿಕ 2000 ರೂ, ರಾಜ್ಯದ ಮಹಿಳೆಯರಿಗೆ ರಾಜ್ಯದಾದ್ಯಂತ ಪ್ರಯಾಣ ಮತ್ತು ಬಿಪಿಎಲ್ ಮತ್ತು ಅಂತ್ಯೋದಯ ಪಡಿತರ ಚೀಟಿದಾರರಿಗೆ ತಲಾ 10 ಕೆ.ಜಿ. ಪಡಿತರ ಮತ್ತು 2022-23 ರ ಸಾಲಿನ ಪದವಿಧರ ಹಾಗು ಡಿಪ್ಲೊಮಾ ನಿರುದ್ಯೋಗಿಗಳಿಗೆ ಯುವನಿಧಿ ೨೪ ತಿಂಗಳ ಕಾಲ ತಲಾ ಕ್ರಮವಾಗಿ 3000 ಮತ್ತು 1500 ರೂ. ಗಳನ್ನು ಪ್ರಕಟಿಸಿದೆ. ಸುಮಾರು ೧.೨೫ ಕೋಟಿ ಯಷ್ಟು ಬಡತನದ ರೇಖೆಯ ಕೆಳಗಿನ ಕುಟುಂಬದ ಬಡವರಿರುವ ರಾಜ್ಯದಲ್ಲಿ ಈ ಕೊಡುಗೆ ಖಂಡಿತಾ ಸ್ವಾಗತಾರ್ಹವಾಗಿದೆ. ಇದರಿಂದ ಪ್ರತಿ ಕುಟುಂಬ ಮಾಸಿಕ ಕನಿಷ್ಠ 4 ರಿಂದ 5 ಸಾವಿರದಷ್ಠು ನೆರವು ಪಡೆಯಲಿದೆ. ಕಾಂಗ್ರೆಸ್ ಸರಕಾರದ ಈ ಕೊಡುಗೆಯಿಂದ ಬಿಜೆಪಿ ಹಾಗೂ ಹಿಂದೂ ಮತಾಂಧ ಶಕ್ತಿಗಳಿಗೆ ತನ್ನ ಮತದಾರರ ತಳಹದಿ ಕಳೆದುಕೊಳ್ಳುವ ಭೀತಿ ಎರಡು ಕಾರಣಕ್ಕೆ ಉಂಟಾಗಿದೆ. ಒಂದು, ಬಿಜೆಪಿ ಹಾಗೂ ಹಿಂದುತ್ವವಾದಿ ಮತಾಂಧ ಶಕ್ತಿಗಳು ಈ
ಹಿಂದಿನ ಚುನಾವಣೆಗಳಲ್ಲಿ ದೇಶದ ಹಾಗೂ ರಾಜ್ಯದ ಮತದಾರರಿಗೆ ಬಡಜನತೆಗೆ,ಯುವಜನತೆಗೆ ನೀಡಿದ ಒಂದೇ ಒಂದು ವಾಗ್ದಾನ ನೀಡದೇ ಸುಳ್ಳು ಹೇಳಿ ವಂಚಿಸಿರುವುದನ್ನು ಜನತೆ ತಿಳಿದಿರುವುದು ಮತ್ತು ಕಾಂಗ್ರೆಸ್ ಸರಕಾರದ ಈ ಕೊಡುಗೆಗಳಿಂದ ಜನತೆಗೆ ಬಿಜೆಪಿಯ ವಂಚನೆ ಮತ್ತಷ್ಠು ಮನನವಾಗುತ್ತಿರುವುದು. ಎಲ್ಲಾ ಬಡವರಿಗೆ ಅವರ ಬ್ಯಾಂಕ್ ಖಾತೆಗಳಿಗೆ ತಲಾ ಹದಿನೈದು ಲಕ್ಷ ರೂ.ಗಳನ್ನು ವಿದೇಶಗಳಲ್ಲಿರುವ 45 ಲಕ್ಷ ಕೋಟಿ ರೂ. ಕಪ್ಪು ಹಣ ಹೊರಗೆಳೆದು ನೀಡಲಾಗುವುದೆಂಬ ಭರವಸೆ, ಅದೇ ರೀತಿ, ಪ್ರತಿವರ್ಷ ವಿದ್ಯಾವಂತ ನಿರುದ್ಯೋಗಿಗಳಿಗೆ ಎರಡು ಕೋಟಿ ಉದ್ಯೋಗ ನೀಡುವುದಾಗಿ ಮತ್ತು ರೈತರ ಆದಾಯ ದ್ವಿಗುಣಗೊಳಿಸುವುದಾಗಿ ನೀಡಲಾದ ಮುಂತಾದ ಭರವಸೆಗಳು ಶ್ರೀ ನರೇಂದ್ರ ಮೋದಿಯವರು ಹತ್ತು ವರ್ಷಗಳ ಅಧಿಕಾರವನ್ನು ಪೂರೈಸುವ ಹಂತದಲ್ಲಿದ್ದರೂ ಈಡೇರಿಸಲಿಲ್ಲ.
ಹೀಗಾಗಿ ಬಹುತೇಕ ಜನತೆಗೆ ಇದು `ಸುಳ್ಳರ ಪಕ್ಷವೆಂದು ಗುರುತಿಸುವಂತಾಗಿದೆ. ಎರಡನೆಯದಾಗಿ, ಮುಂಬರುವ ಪಾರ್ಲಿಮೆಂಟ್ ಚುನಾವಣೆಯಲ್ಲಿ
ಕಾಂಗ್ರೆಸ್ ಪಕ್ಷದ ಜನಪ್ರಿಯತೆಯು ಈ ಕೊಡುಗೆಗಳ ಕಾರಣದಿಂದ ವಿಸ್ತಾರಗೊಂಡು ರಾಜ್ಯದಲ್ಲಿ ಮತ್ತೊಮ್ಮೆ ತನಗೆ ಹಿನ್ನಡೆಯಾಗ ಬಹುದೆಂಬುದಾಗಿದೆ.
ಈ ಕಾರಣಗಳಿಂದ ಮಾತ್ರವಲ್ಲಾ, ತಾನು ಕಾರ್ಪೋರೇಟ್ ಕಂಪನಿಗಳ ಭಂಟನಾಗಿಯೆ ಇರುವೆನೆಂಬುದನ್ನು ತೋರಿಸಿಕೊಳ್ಳಲು ಕಾಂಗ್ರೆಸ್ ಸರಕಾರ ಮತದಾರರಿಗೆ ನೀಡಿದ ಕೊಡುಗೆಗಳ ಕುರಿತು ಟೀಕೆಗೆ ಮುಂದಾಗಿದೆ. ಇವರು ಮಾತ್ರವಲ್ಲಾ, ಕಾರ್ಪೋರೇಟ್ ಭಂಟ ಬುದ್ದಿಜೀವಿಗಳು ಈ ಕುರಿತಂತೆ ತಮ್ಮ ತಣ್ಣನೆಯ ವಾಗ್ದಾಳಿ ಹರಿಬಿಟ್ಟಿದ್ದಾರೆ. ಈ ಭಂಟ ಬುದ್ದಿಜೀವಿಗಳು ಮತ್ತು ಬಿಜೆಪಿಗರು ಹಾಗೂ ಹಿಂದುತ್ವವಾದಿ ಮತಾಂಧರು ಒಕ್ಕೂಟ ಸರಕಾರದ ನರೇಂದ್ರ ಮೋದಿಯವರು, ಒಕ್ಕೂಟ ಸರಕಾರಕ್ಕೆ ಲಕ್ಷಾಂತರ ಕೋಟಿ ರೂ.ಗಳ ಆದಾಯ ತರುತ್ತಿದ್ದ ಒಕ್ಕೂಟ ಸರಕಾರದ ಉದ್ದಿಮೆಗಳಾಗಿದ್ದ ಬ್ಯಾಂಕ್, ವಿಮೆ, ರೈಲ್ವೇ, ಏರ್ ವೇಸ್, ಬಿ.ಎಸ್.ಎನ್.ಎಲ್. ಮುಂತಾದ ಸಂಸ್ಥೆಗಳನ್ನು ಕಾರ್ಪೋರೇಟ್ ಸಂಸ್ಥೆಗಳಿಗೆ

ದಾನವಾಗಿ ಕೊಡುವಾಗ ಮತ್ತು ಒಂದು ನೂರು ಕಾರ್ಪೋರೇಟ್ ಕಂಪನಿಗಳ ಸುಮಾರು 11 ಲಕ್ಷ ಕೋಟಿ ರೂ.ಗಳ ಸಾಲವನ್ನು ಮನ್ನಾ ಮಾಡುವಾಗ ಹಾಗೂ ದಶ ಲಕ್ಷಾಂತರ ಕೋಟಿ ರೂ.ಗಳ ತೆರಿಗೆ ಮನ್ನಾ ಮಾಡುವಾಗ ಅದೇ ರೀತಿ, ದೇಶದ ಜನತೆಯ ಮೇಲಿನ ಸಾಲದ ಹೊರೆಯನ್ನು ಶ್ರೀ ನರೇಂದ್ರ ಮೋದಿಯವರು 82 ಲಕ್ಷ ಕೋಟಿ ರೂಗಳಿಂದ 159 ಲಕ್ಷ ಕೋಟಿ ರೂಗಳಿಗೆ ಹೆಚ್ಚಿಸಿದಾಗ ಮತ್ತು ರಾಜ್ಯದ ಹಿಂದಿನ ಬಿಜೆಪಿ ಸರಕಾರ ರಾಜ್ಯ ಸರಕಾರದ ಸಾಲವನ್ನು ದ್ವಿಗುಣಗೊಳಿಸಿ 5.80 ಲಕ್ಷ ಕೋಟಿ ರೂಗಳಿಗೆ ವಿಸ್ತರಿಸಿದಾಗ, ದೇಶದ 75 ಕೋಟಿ ಜನ ಬಡವರ ಪಡಿತರವನ್ನು 10 ಕೆ.ಜಿ.ಯಿಂದ 5 ಕೆ.ಜಿ.ಗಳಿಗೆ ಇಳಿಸಿದಾಗ ಮುಂತಾದ ಸಂದರ್ಭದಲ್ಲಿ ಯಾಕೆ ಮಾತನಾಡಲಿಲ್ಲ? ಯಾಕೆ? ಇಂತಹ ಎಲ್ಲ ದೇಶದ ಅತಿದೊಡ್ಡ ಶ್ರೀಮಂತರ ಪರವಾಗಿ, ಲೂಟಿಕೋರ ಕಾರ್ಪೋರೇಟ್ ಪರವಾಗಿ, ಬಡವರ ವಿರುದ್ಧವಾಗಿ ಬಿಜೆಪಿ, ಶ್ರೀ ನರೇಂದ್ರ ಮೋದಿ ಸರಕಾರ ದುಷ್ಕೃತ್ಯದಲ್ಲಿ ತೊಡಗಿದಾಗ ಅದು ಒಕ್ಕೂಟ ಸರಕಾರಕ್ಕೆ ಅಥವಾ ರಾಜ್ಯ ಸರಕಾರಕ್ಕೆ ಹೊರೆಯಾಗಲಿಲ್ಲ! ಈಗ ರಾಜ್ಯದ ಮಹಿಳೆಯರು,
ದಲಿತರು, ಯುವಜನರ ಪರವಾಗಿ ಒಂದಷ್ಟು ನೆರವು ನೀಡಿದ ತಕ್ಷಣವೇ ಹೊರೆಯಾಗುತ್ತದೆಯೋ? ಅದು ಹೇಗೆ? ಶ್ರೀಮಂತರು, ಲೂಟಿಕೋರ ಕಾರ್ಪೋರೇಟ್ ಕಂಪನಿಗಳಿಗೆ ದಾನ ಮಾಡಿದರೇ ದೇಶಕ್ಕೆ ಹೊರೆಯಲ್ಲಾ? ಬಡ ಹಾಗೂ ದುರ್ಬಲ ಸಮುದಾಯಗಳಿಗೆ ನೆರವಾದರೇ ಹೊರೆಯಾಗುವುದೊ? ಇದು ಯಾವ ನ್ಯಾಯ? ನಮಗೆ ಗೊತ್ತಿದೆ! ನೀವು ಹೇಳುವ ನ್ಯಾಯ ಇದು ಲೂಟಿಕೋರರ ಪರವಾದ ನ್ಯಾಯವೆಂಬುದು. ಬಡವರ ನಡುವೆ ಸೋಮಾರಿತನ ಹೆಚ್ಚುವುದಿಲ್ಲವೇ?
ಇದರಿಂದ ಬಡವರ ನಡುವೆ ಸೋಮಾರಿತನ ಹೆಚ್ಚುವುದಿಲ್ಲವೇ? ಎಂಬುದು ಕೇಳಲಾಗುತ್ತಿರುವ ಪ್ರಶ್ನೆ. ಖಂಡಿತಾ ಇಲ್ಲ! ರಾಜ್ಯ ಸರಕಾರದ ಅಂಕಿ ಅಂಶಗಳ ಪ್ರಕಾರ
ಗ್ರಾಮೀಣ ಹಾಗೂ ನಗರ ಪ್ರದೇಶದ ಬಡವರ ತಲಾ ಆದಾಯ 60- 65ರೂ.ಗಳಿಗಿಂತ ಕಡಿಮೆಯಾಗಿದೆ. ಈ ನೆರವು ಇನ್ನೊಂದು 10-20 ರೂಗಳನ್ನು ಹೆಚ್ಚಿಸಬಹುದಷ್ಠೇ? ಈ 60-80 ರೂ.ಗಳ ಆದಾಯದಲ್ಲಿ ಈ ದಿನದ ಅಗತ್ಯ ವಸ್ತುಗಳ ಬೆಲೆ ಏರಿಕೆ ಸಂದರ್ಭದಲ್ಲಿ ದಿನಗಳೆಯಲು ಸಾಧ್ಯವೇ? ಅವರು ದುಡಿಯಲೇ
ಬೇಕಾಗುತ್ತದೆ. ಹೀಗೆ ಹೇಳುವವರು ಹೆದರಿಕೊಳ್ಳುವುದು! ಅವರ ಕೂಲಿ ಹೆಚ್ಚಳ ಮಾಡಿಕೊಳ್ಳುವ ಚೌಕಾಶಿತನಕ್ಕೆ ಇದು
ನೆರವಾಗಲಿದೆ ಎಂಬುದಾಗಿದೆ. ಖಂಡಿತಾ ಈ ಬೆಳವಣಿಗೆ ಆಗಬೇಕಾದದ್ದೇ ಆಗಿದೆ. ಈ ಬೆಳವಣಿಗೆ ಅವರ ನಡುವೆ ಸ್ವಾವಲಂಬಿತನ ಮತ್ತು ಸ್ವಾಭಿಮಾನ ಹೆಚ್ಚಲು ನೆರವಾಗಬಹುದಾಗಿದೆ. ಕೊಡುಗೆ ನೀಡುವ ಬದಲು ಅವರ ಆದಾಯ ಹೆಚ್ಚಳಕ್ಕೆ ನೆರವಾಗಬಹುದಲ್ಲವೇ? ಖಂಡಿತಾ ಸರಿ! ಇದನ್ನು ಬಿಜೆಪಿ ಅಧಿಕಾರದಲ್ಲಿದ್ದಾಗ
ಮಾಡಬಹುದಿತ್ತಲ್ಲವೇ? ಈಗಲೂ ಅದು ಒಕ್ಕೂಟ ಸರಕಾರ ನಡೆಸುತ್ತಿದೆ! ಅದೂ ಆ ಕೆಲಸವನ್ನು ಮಾಡ ಬಹುದು!?

ಜನತೆಯ ತಲಾ ಆದಾಯ ಹೆಚ್ಚಳವಾಗ ಬೇಕೆಂದರೆ, ಮಾಡ ಬೇಕಾದ ಕೆಲಸದ ಕುರಿತು ಈಗಾಗಲೇ ಎಡ ಮತ್ತು ಜಾತ್ಯತೀತ ಪ್ರಗತಿಪರ ಶಕ್ತಿಗಳು ಮತ್ತು ಸಿಪಿಐ(ಎಂ) ಪಕ್ಷವು ಒಕ್ಕೂಟ ಹಾಗೂ ರಾಜ್ಯ ಸರಕಾರಗಳ ಮುಂದೆ ಸ್ಪಷ್ಢ ಕಾರ್ಯಕ್ರಮವನ್ನು ಮಂಡಿಸಿವೆ. ಗ್ರಾಮೀಣ ಪ್ರದೇಶದ ಬಡ ರೈತ ಹಾಗೂ ಗೇಣಿದಾರರಿಗೆ ತಲಾ ಐದು ಎಕರೆ ಜಮೀನು ಒದಗಿಸುವುದು ಮತ್ತು ಕೃಷಿಕೂಲಿಕಾರರಿಗೆ ತಲಾ ಎರಡು ನೂರು ದಿನಗಳ ಉದ್ಯೋಗ ಖಾತ್ರಿ ಕೆಲಸ ಒದಗಿಸಬೇಕು! ನಗರದ ಬಡವರಿಗೂ ಅದನ್ನು
ವಿಸ್ತರಿಸಬೇಕು ಮತ್ತು ಕನಿಷ್ಟ ವೇತನವನ್ನು 650 ರೂ.ಗಳಿಗೆ ಹೆಚ್ಚಿಸಬೇಕು.

ರೈತಾಪಿ ಜನರ ಕೃಷಿ ಉತ್ಪನ್ನಗಳಿಗೆ ಅವುಗಳ ಉತ್ಪಾದನಾ ವೆಚ್ಚಕ್ಕೆ ಶೇಕಡಾ 50 ಲಾಭಾಂಶ ಸೇರಿಸಿ ನಿಗದಿಸುವ ಕನಿಷ್ಠ ಬೆಂಬಲಬೆಲೆಯನ್ನು ಖಾತರಿಯಾಗಿ ದೊರೆಯುವಂತೆ ಕಾಯ್ದೆಯನ್ನು ಜಾರಿಗೊಳಿಸಬೇಕು ಮತ್ತು ಕೇರಳ ಸರಕಾರದ ಮಾದರಿಯಲ್ಲಿ ಋಣಮುಕ್ತ ಕಾಯ್ದೆಯನ್ನು ಜಾರಿಗೊಳಿಸಬೇಕು! ಕಾರ್ಮಿಕರ ಕನಿಷ್ಟ ವೇತನವನ್ನು ಮಾಸಿಕ 36000 ರೂ.ಗಳಿಗೆ ಹೆಚ್ಚಿಸಬೇಕು. ಈ ಕಾರ್ಯಕ್ರಮಗಳ ಜಾರಿ ಖಂಡಿತಾ ಅವರ ಆದಾಯ ಹೆಚ್ಚಿಸಲು ಮತ್ತು ಆ ಮೂಲಕ ಕೊಂಡುಕೊಳ್ಳುವ ಶಕ್ತಿಯು ಮಾರುಕಟ್ಟೆ ವಿಸ್ತರಿಸಲು ನೆರವಾಗಲಿದೆ. ಅದು ಕೈಗಾರಿಕಾ ವಿಸ್ತರಣೆಗೆ ಮತ್ತು ಆ ಮೂಲಕ ವಿದ್ಯಾವಂತರ ನಿರುದ್ಯೋಗ ನಿವಾರಣೆಗೆ ನೆರವಾಗಲಿದೆ. ಆದರೇ, ಇವುಗಳನ್ನು ಜಾರಿಗೆ ತರಲು ಆಳುವ ವರ್ಗಗಳಾದ ಭೂಮಾಲಕ ಬಂಡವಾಳದಾರರು ಹಾಗೂ ಕಾರ್ಪೊರೇಟ್ ಕಂಪನಿಗಳು ತಯಾರಿಲ್ಲ. ಇವು ಜಾರಿಯಾದರೇ ತಾವು ಮುಳುಗಿ ಹೋಗುತ್ತೇವೆಂಬ ಭಯ ಅವುಗಳಿಗಿದೆ. ಹೀಗಾಗಿ ಇವರನ್ನೇ ಬಹುತೇಕ ಪ್ರತಿನಿಧಿಸುವ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಈ ಕಾರ್ಯಕ್ರಮ ಜಾರಿಗೊಳಿಸಲು ತಯಾರಿಲ್ಲ. ಅದೇ ರೀತಿ, ಕೇವಲ ರಾಜ್ಯ ಸರಕಾರ ಮಾತ್ರವೇ ಅವುಗಳ ಅಧಿಕಾರ ಮತ್ತು ಸಂಪನ್ಮೂಲಗಳ ಮಿತಿಯೊಳಗೆ ಜಾರಿಗೆ ತರಲು ಸಾಧ್ಯತೆಗಳು ಕಡಿಮೆ ಇವೆ. ಒಕ್ಕೂಟ ಹಾಗೂ ರಾಜ್ಯ ಸರಕಾರಗಳು ಒಟ್ಟಾಗಿ ನಿಲ್ಲಬೇಕಾಗುತ್ತದೆ. ಹೀಗಾಗಿಯೇ ಅವುಗಳು ಜನ ಬೆಂಬಲ ಉಳಿಸಿಕೊಳ್ಳಲು ಹಲವು ಕಸರತ್ತುಗಳನ್ನು ಮಾಡುತ್ತವೆ! ಅದರಲ್ಲಿ ಬಿಜೆಪಿಯು ತನ್ನ ಮತದಾರರನ್ನು ಹೆಚ್ಚಿಸಿಕೊಳ್ಳಲು ಕೆಲವೊಮ್ಮೆ ಸಣ್ಣ ಪುಟ್ಟ ರಿಯಾಯಿತಿಗಳನ್ನು ನೀಡುತ್ತಾ ಹಿಂದುತ್ವವಾದಿ ಕೋಮುವಾದಿ ಚಟುವಟಿಕೆಗೆ ಹೆಚ್ಚಿನ ಆಧ್ಯತೆ ನೀಡಿದರೇ! ದೇಶದಲ್ಲಿ ತನ್ನ ಈ ಹಿಂದಿನ ದುರಾಡಳಿತದಿಂದಾಗಿ ದುರ್ಬಲಗೊಂಡಿರುವ ಕಾಂಗ್ರೆಸ್ ಪಕ್ಷ ಇಂತಹ ಕೊಡುಗೆಗಳನ್ನು ಇದೀಗ ಪ್ರಕಟಿಸುತ್ತಾ ಜಾತಿ ರಾಜಕಾರಣಕ್ಕೆ ಕ್ರಮವಹಿಸುವ ಕೆಲಸದಲ್ಲಿ ತೊಡಗಿದೆ. ಹೀಗಾಗಿ, ಕೊಡುಗೆಗಳನ್ನು ಕೊಡುವುದು ಬೇಡವೆಂದರೆ ಜನತೆಗೆ ಅದೂ ಇಲ್ಲ ಮತ್ತು ಇದೂ ಇಲ್ಲವೆಂದಾಗುತ್ತದೆ. ಬಡ ಜನತೆಗೆ ಹಾಗಾಗಲಿ ಎಂಬುದೇ ಆಳುವ ವರ್ಗಗಳ ಮತ್ತು ಅವರ ಬೆಂಬಲಿಗರ ರಾಜಕಾರಣವಾಗಿದೆ. ಇದರೊಂದಿಗೆ, ಜನತೆಯ ನೈಜ ಸಮಸ್ಯೆ ಪರಿಹಾರ ಕಾಂಗ್ರೆಸ್ ಪಕ್ಷಕ್ಕೂ ಬೇಕಿಲ್ಲವೆಂಬುದನ್ನು ಗಮನಿಸಬೇಕು. ಪರಿಣಾಮವಾಗಿ, ಈ ಕೊಡುಗೆಗಳು ಕೇವಲ ಕಾಂಗ್ರೆಸ್ ಪಕ್ಷ ತನ್ನ ಅಧಿಕಾರಕ್ಕಾಗಿ ಮತದಾರರ ಬೆಂಬಲಗಳಿಸುವ ಉದ್ದೇಶದಿಂದ ಬರಬಹುದೆಂಬ ಅದರ ಮಿತಿಯನ್ನು ನಾವು ಅರಿಯಬೇಕಿದೆ. ಮತದಾರರು ನೈಜ ಪರಿಹಾರಕ್ಕಾಗಿ ಚಳುವಳಿಯನ್ನು ಮುನ್ನಡೆಸದೇ ಗತ್ಯಂತವಿಲ್ಲವೆಂಬುದನ್ನು ಇದು ತಿಳಿಸುತ್ತದೆ. ಎಡ ಮತ್ತು ಪ್ರಜಾ ಸತ್ತಾತ್ಮಕ ರಾಜಕೀಯದ ಮೇಲಾಗುವ ಪರಿಣಾಮಗಳೇನು?

ಕಾಂಗ್ರೆಸ್ ಸರಕಾರ ಒಂದೆಡೆ ಈ ಬಡ ಮತದಾರರನ್ನು ಗಮನದಲ್ಲಿಟ್ಟುಕೊಂಡು ಕೊಡುಗೆಗಳನ್ನು ನೀಡಿದ್ದರೆ ಇನ್ನೊಂದೆಡೆ, ಅದು ಜಾಗತೀಕರಣದ ನೀತಿಗಳನ್ನು ಆಳುವ ವರ್ಗಗಳಾದ ಭೂ ಮಾಲಕ ಬಂಡವಾಳದಾರರು ಹಾಗೂ ಲೂಟಿಕೋರ ಕಾರ್ಪೊರೇಟ್ ಕಂಪನಿಗಳ ಪರ ಜಾರಿಗೆ ಕ್ರಮವಹಿಸುವುದನ್ನು ಹೀಗೆ ಅಲ್ಲದಿದ್ದರೂ ಮತ್ತೊಂದು ವಿಧದಲ್ಲಿ ಮುಂದುವರೆಸುವರೆಂಬುದು ಅನುಭವವಾಗಿದೆ. ಇಂತಹ ನೀತಿಗಳನ್ನು ಅದು ಜಾರಿಗೊಳಿಸುವಾಗ ಬಿಜೆಪಿ ಮತ್ತು ಮತಾಂಧ ಶಕ್ತಿಗಳು ರಾಜ್ಯದಲ್ಲಿನ ಸೌಹಾರ್ಧತೆಯನ್ನು ಕದಡಿ ಜನತೆಯ ಗಮನವನ್ನು ಬೇರೆಡೆ ಸೆಳೆದು ಅವುಗಳ ಜಾರಿಗೆ ಕ್ರಮವಹಿಸುವ ಸಂಭವಗಳು ಇದ್ದೇ ಇವೆ. ಹೀಗಾಗಿ, ಈ ಕೊಡುಗೆಗಳು ಬಡ ಮತದಾರರು, ಆಳುವ ವರ್ಗಗಳ ನಡುವೆ ಅವರು ನಡೆಸಿರುವ ಸಂಘರ್ಷಕ್ಕೆ ಸ್ವಲ್ಪವಾದರೂ ತುಪ್ಪ ಸುರಿದಿರುವುದನ್ನು ಎಡ ಮತ್ತು ಪ್ರಜಾಸತ್ತಾತ್ಮಕ ಶಕ್ತಿಗಳು ಗಮನಿಸಬೇಕಾಗಿದೆ.

ಇದು ಇನ್ನು ಮೇಲೆ ತೀವ್ರಗೊಳ್ಳುವುದು. ಸ್ವಲ್ಪವಾದರೂ ಮಹಿಳೆಯರ ಹಾಗೂ ದಲಿತರ ಕುಟುಂಬಗಳ ಸಬಲೀಕರಣಕ್ಕೆ ಕ್ರಮವಹಿಸಿರುವುದು, ಬಡವರು, ದಲಿತರು, ಮಹಿಳೆಯರು ಹಾಗೂ ಕಾರ್ಮಿಕರ ಮೇಲಿನ ದೌರ್ಜನ್ಯಗಳು ಹೆಚ್ಚಲು ಕಾರಣವಾಗುವ ಸಂಭವಗಳಿವೆ. ನಮ್ಮ ಗಮನವನ್ನು ಈ ದಿಶೆಯಲ್ಲಿ ಹೆಚ್ಚಿಸಬೇಕಾಗಿದೆ. ಈ ಕೊಡುಗೆಗಳು, ಜನತೆ ಎಡ ಮತ್ತು ಪ್ರಜಾಸತ್ತಾತ್ಮಕ ಶಕ್ತಿಗಳ ಜೊತೆ ಈ ಮತದಾರರು ಸೇರದಂತೆ ತಾತ್ಕಾಲಿಕವಾಗಿ ತಡೆಯುವ ಸಂಭವಗಳು ಇವೆ ಎಂಬುದನ್ನು ಇಲ್ಲಿ ಗಮನಿಸಬೇಕಾಗಿದೆ. ಇವುಗಳಿಂದ ಕಾಂಗ್ರೆಸ್ ಮೇಲೆ ಒಲವು ಮತ್ತು ಅದರ ಪರಿಣಾಮವಾಗಿ ಅದರ ಹಿಡಿತವು ಜನರ ಮೇಲೆ ಹೆಚ್ಚಳವಾಗಬಹುದು. ಸ್ವಲ್ಪ ಮಟ್ಟಿಗೆ ಪ್ರತಿ ಕುಟುಂಬವು ಮಾಸಿಕವಾಗಿ ಆದಾಯಗಳಿಸುವುದರಿಂದ ಸಹಜವಾಗಿಯೇ ತಾತ್ಕಾಲಿಕವಾಗಿ ಚಳುವಳಿಯಿಂದ ಹಿಂದೆ ಸರಿಯುವ ಸಂಭವಗಳಿಗೆ ಹಲವು ಒತ್ತಡಗಳು ಉಂಟಾಗಲಿವೆ. ಮತ್ತೊಂದು ಕಡೆ, ಈ ಕೊಡುಗೆಗಳು ಈ ಸರಕಾರದ ಮೇಲೆ ಮತ್ತಷ್ಟೂ ಒತ್ತಡ ಹೇರಿದರೆ, ತಮ್ಮ ಬೇಡಿಕೆಗಳನ್ನು ಚಳುವಳಿ ನಿರತರು ಪಡೆಯಲು ಅವಕಾಶಗಳಿವೆ ಎಂಬ ಆಶಾ ಭಾವನೆ ಹುಟ್ಟು ಹಾಕಿವೆ ಮತ್ತು ಅವು ಮುಂದೆ ಸಾಗಲು ಅನುವು ಮಾಡಿವೆ.

ಯುವನಿಧಿಯ ಲಾಭ ದೊರೆಯದ ಹಳೆಯ ನಿರುದ್ಯೋಗಿ ಯುವಕ ಯುವತಿಯರು ಚಳುವಳಿಯ ಮುನ್ನೆಲೆಗೆ ಬರಲು ಹೊಸ ಅವಕಾಶಗಳನ್ನು ತೆರೆದಿದೆ. ಈ ಹಿಂದೆಯೆ ಎಡ ಮತ್ತು ಪ್ರಜಾ ಸತ್ತಾತ್ಮಕ ಶಕ್ತಿಗಳು ನಿರುದ್ಯೋಗ ಭತ್ಯೆಯ ಪ್ರಶ್ನೆಯನ್ನು ಎತ್ತಿದ್ದವು! ಆದರೆ ಆ ಪ್ರಶ್ನೆಯನ್ನು ಸರಕಾರಗಳು ಗಮನಿಸದೇ ನಿರ್ಲಕ್ಷ್ಯ ಮಾಡುತ್ತಾ ಬಂದಿರುವುದರಿಂದ ನೇಪಥ್ಯಕ್ಕೆ ಸರಿದಿತ್ತು. ಈಗ ಅದು ಮುನ್ನೆಲೆಗೆ ಬರುವಂತೆ ಕ್ರಮವಹಿಸಬೇಕಾಗಿದೆ. ಆ ಮೂಲಕ ಪ್ರಜಾಸತ್ತಾತ್ಮಕ ಚಳುವಳಿ ವಿಸ್ತಾರಗೊಂಡು ಕೋಮುವಾದಿ, ಜಾತಿವಾದ ಹಾಗೂ ಭಾಷಾಂಧವಾದಂತಹ ವಿಭಜನಕಾರಿ ಶಕ್ತಿಗಳ ವಿರುದ್ದ ಬೆಳೆದು ಬರಲು ಅವಕಾಶಗಳನ್ನು ತೆರೆದಿದೆ. ಗೃಹ ಲಕ್ಷ್ಮೀ: ಗೃಹ ಲಕ್ಷ್ಮೀ ಯೋಜನೆಯಡಿ ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ನೀಡಿದ ವಾಗ್ದಾನ ಎಲ್ಲ ಗೃಹಿಣಿಯರಿಗೆ ಅಂದರೆ ಮನೆಯೊಡತಿಯರಿಗೆ ಮಾಸಿಕ 2,೦೦೦ ರೂಗಳನ್ನು ನೀಡಲಾಗುವುದು ಎಂದಿದ್ದರು. ಇದೀಗ ಅದರ ಅರ್ಜಿ ಸಲ್ಲಿಕೆಯಲ್ಲಿ ಅದರಲ್ಲೂ ಕಡಿತಗೊಳಿಸಿದ್ದಾರೆ. ಆದಾಯ ತೆರಿಗೆ ನೀಡುವ ಗಂಡನನ್ನು ಹೊಂದಿರುವ ಗೃಹಿಣಿಯರನ್ನು ಹೊರಗಿಟ್ಟಿದ್ದಾರೆ.

ಮುಖ್ಯ ಮಂತ್ರಿ ಶಿದ್ಧರಾಮಯ್ಯನವರು ಮಂತ್ರಿಮಂಡಲದ ಆದೇಶವನ್ನು ಪತ್ರಿಕಾ ಗೋಷ್ಠಿಯಲ್ಲಿ ಹೇಳುವಾಗ ಎಲ್ಲ ಮನೆಯ ಒಡತಿಯರಿಗೂ ಎಂದಿದ್ದಾರೆ. ಭಾವುಕರಾಗಿ ನನ್ನ ಹೆಂಡತಿಗೂ ಸೇರಿ ಎಂದು ವಿವರಿಸಿದ್ದಾರೆ. ಈಗ ಆದಾಯ ತೆರಿಗೆ ನೀಡುವ ಯಾಜಮಾನನ ಮನೆಯ ಒಡತಿಯರನ್ನು ಹೊರಗಿಟ್ಟಿದ್ದಾರೆ. ಅವರಿಗೆ ಯಾವುದೇ ಆದಾಯವಿಲ್ಲದೇ, ಅವರು ಸ್ವತಃ ಆದಾಯ ತೆರಿಗೆ ನೀಡದವರಾಗಿದ್ದರೂ ಅವರು ಫಲಾನುಭವಿಗಳಾಗುವುದಿಲ್ಲ. ಅದೇ ರೀತಿ, ಇದರ ಫಲಾನುಭವಿಯಾಗಲು ಆಧಾರ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ ಮತ್ತು ರೇಷನ್ ಕಾರ್ಡ ಇದ್ದರೆ ಸಾಲದಂತೆ, ಪ್ಯಾನ್ ಕಾರ್ಡ್, ವಿಳಾಸ ಮತ್ತು ವಾಸ ಸ್ಥಳದ ಸರ್ಟಿಫಿಕೇಟ್ ಗಳು ಬೇಕಂತೆ ಇಂತಹ ಅನಗತ್ಯಗಳಿಗಾಗಿ, ಅನಗತ್ಯವಾಗಿ ಜನತೆ ಸಾವಿರಾರು ರೂಗಳನ್ನು ಖರ್ಚು ಮಾಡಿಕೊಂಡು ಅಲೆಯ ಬೇಕಾಗಿದೆ.ಇದು ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡಲಿದೆ. ಮಹಿಳೆಯರಿಗೆ ಸಾರಿಗೆ ಉಚಿತ: ಕೆಎಸ್‌ಆರ್‌ಟಿಸಿ ಬಿಎಂಟಿಸಿ ಯ ಕೆಲ ಐಶಾರಾಮಿ ಬಸ್ ಹೊರತು ಪಡಿಸಿ ಕೆಂಪು ಬಸ್‌ಗಳಲ್ಲಿ ರಾಜ್ಯದ ಎಲ್ಲ ಮಹಿಳೆಯರಿಗೆ ರಾಜ್ಯದೊಳಗೆ ಉಚಿತ ಸಾರಿಗೆ ಸೌಲಭ್ಯ ಕಲ್ಪಿಸಲಾಗಿದೆ. ಆದರೇ ಈ ಯೋಜನೆಯಡಿ ಹಲವು ಷರತ್ತುಗಳು ಕೆಎಸ್‌ಆರ್‌ಟಿಸಿ ಸಂಸ್ಥೆಗೆ ಸೌಲಭ್ಯಕ್ಕಾಗಿ ಅಲೆಯುವುದನ್ನು ತಪ್ಪಿಸಬಹುದಿತ್ತು. ಮಹಿಳೆಯರು ಆಧಾರ್ ಕಾರ್ಡ್ ಅಥವಾ ಐಡಿ ಕಾರ್ಡ್ ತೋರಿಸಿದರೇ ಸಾಕೆಂಬ ಶರತ್ತು ಇದ್ದರೆ
ಸಾಕಿತ್ತು.

ಯುವ ನಿದಿ ಈ ಕಾರ್ಯಕ್ರಮ 2022-23 ರ ಸಾಲಿನಿಂದ ಜಾರಿಗೆ ಬರಲಿದೆ ಎಂದು ಹೇಳಿ, ಈ ಸಾಲಿನಲ್ಲಿ ಪದವಿ ಹಾಗೂ ಡಿಪ್ಲೊಮಾ ಪಡೆದವರು ಅಸರು ತಿಂಗಳ ಕಾಲ ನಿರುದ್ಯೋಗಿಯಾಗಿ ಉಳಿದರೆ ಅವರಿಗೆ ಮುಂದಿನ 24 ತಿಂಗಳವರೆಗೆ ಕ್ರಮವಾಗಿ ತಲಾ 3000 ರೂ ಹಾಗೂ 1500ರೂ ನೀಡಲಾಗುವುದು ಎನ್ನಲಾಗಿದೆ. ಖಾಸಗೀ ಕೆಲಸದಲ್ಲಿ ತೊಡಗಿದ್ದರೂ ಉದ್ಯೋಗಿಗಳೇ ಎನ್ನಲಾಗಿದೆ. ಬಹುತೇಕ ನಿರುದ್ಯೋಗಿಗಳು ಉದ್ಯೋಗ ದೊರೆಯದೇ ಜೀವನ ನಿರ್ವಹಣೆಗಾಗಿ ಅವರ ವಿದ್ಯಾರ್ಹತೆಗೆ ತಕ್ಕದಲ್ಲದಾ ಮತ್ತೇನೋ ಕೆಲಸದಲ್ಲಿ ತೊಡಗಿದವರು ಅರೆ ಉದಗಯೋಗದಲ್ಲಿ ತೊಡಗಿದವರು ಮತ್ತಷ್ಢು ಸ್ಪಷ್ಢನೆ ಬಯಸಿದ್ದಾರೆ. ಇದನ್ನು 2020-21 ರ ಸಾಲಿನಿಂದ ಜಾರಿಗೆ ಬರುವಂತೆ ಕ್ರಮವಹಿಸಿದ್ದರೇ ಮತ್ತಷ್ಟು ನ್ಯಾಯ ಸಿಗುತ್ತಿತ್ತು ಎಂಬ ಧ್ವನಿ ಕೇಳಿ ಬರುತ್ತಿದೆ. ಏನೆ ಆದರೂ ರಾಜ್ಯದಾದ್ಯಂತ ಕಳೆದ ಹಲವಾರು ದಶಕಗಳಿಂದ ಎಡ ಮತ್ತು ಪ್ರಜಾಸತ್ತಾತ್ಮಕ ಶಕ್ತಿಗಳು ಧ್ವನಿ ಎತ್ತುತ್ತಿದ್ದ ನಿರುದ್ಯೋಗ ಭತ್ಯೆಯ ವಿಚಾರದ ಹೋರಾಟಕ್ಕೆ ಇದರಿಂದ ಪುಷ್ಟಿ ಸಿಕ್ಕಂತಾಗಿದೆ. ಖಾಸಗೀಕರಣದ ಆತಂಕ ಈ ಕೊಡುಗೆಗಳು ಕೆಲವು ಕೊರತೆಗಳನ್ನು ಹೊಂದಿದ್ದರೂ ಇವು ಸ್ವಾಗತಾರ್ಹವೇ ಆಗಿವೆ. ರಾಜ್ಯ ಸರಕಾರ ಇಂಧನ ಇಲಾಖೆಗೆ ಹಾಗೂ ಸಾರಿಗೆ ಸಂಸ್ಥೆಗಳಿಗೆ ಕೊಡುಗೆಗಳ ಕಾರಣದಿಂದ ಅವುಗಳಿಗೆ ಕೊಡಬೇಕಾದ ಹಣವನ್ನು ಸಕಾಲದಲ್ಲಿ ಒದಗಿಸಲು ಕ್ರಮ ವಹಿಸಬೇಕು. ಸರಕಾರ ಒದಗಿಸಬೇಕಾದ ಸಕಾಲಿಕ ನೆರವು ಅಥವಾ ಬಾಕಿ ಹಣ ನೀಡದೇ ಹೋದಲ್ಲಿ ಅವುಗಳು ಮತ್ತಷ್ಢು ನಷ್ಟಕ್ಕೆ ತುತ್ತಾಗುವ ಸಂಭವಗಳಿವೆ. ಅದನ್ನೇ ನೆಪವಾಗಿಸಿ ಖಾಸಗೀಕರಣ ಮಾಡುವ ಹುನ್ನಾರಕ್ಕೆ ಖಾಸಗೀಕರಣ ಬಯಸುವ ಶಕ್ತಿಗಳಿಗೆ ಕುಮ್ಮಕ್ಕಾಗದಂತೆ ಸರಕಾರ ಎಚ್ಚರವಹಿಸುವುದು ಅಗತ್ಯವಿದೆ. ಇಂತಹ ಅಪಾಯಕ್ಕೆ ಕಾಂಗ್ರೆಸ್ ಪಕ್ಷ ದೂಡಲಾರದೆಂಬ ಯಾವ
ಗ್ಯಾರೆಂಟಿ ಇಲ್ಲವೆಂಬ ಆತಂಕಗಳು ಒಂದೆಡೆಯಾದರೇ ಮತ್ತೊಂದೆಡೆ, ಈ ಬೆಳವಣಿಗೆಗಾಗಿ ಕಾತರಿಸುತ್ತಿರುವ ಖಾಸಗೀಕರಣ ಬಯಸುವ ಶಕ್ತಿಗಳು ಜೊಲ್ಲು ಸುರಿಸುವ
ಕ್ರಿಯೆಗಳು ನಡೆದಿವೆ. ಈ ಕುರಿತಂತೆ ಎಡ ಮತ್ತು ಜಾತ್ಯತೀತ ಪ್ರಗತಿಪರ ಶಕ್ತಿಗಳು ಈ ಕುರಿತಂತೆ ಜಾಗೃತಿಯನ್ನು ವಹಿಸಬೇಕಿದೆ.

Donate Janashakthi Media

Leave a Reply

Your email address will not be published. Required fields are marked *