ಗುಂಡಿಗೆ ಬಿದ್ದು ಬೈಕ್‌ ಸವಾರ ಸಾವು ಪ್ರಕರಣ: ಗುತ್ತಿಗೆದಾರರಿಗೆ ಜಾಮೀನು ನಿರಾಕರಣೆ

ನವದೆಹಲಿ: ರಾಜ್ಯದ ರಸ್ತೆಯ ಮಧ್ಯದಲ್ಲಿ ತೋಡಿದ್ದ 14 ಅಡಿ ಆಳದ ಗುಂಡಿಗೆ ಬಿದ್ದು ಯುವ ಬೈಕ್‌ ಸವಾರರೊಬ್ಬರು ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಫೆಬ್ರವರಿ 25ರಂದು ಇಬ್ಬರು ಗುತ್ತಿಗೆದಾರರಿಗೆ ನಿರೀಕ್ಷಣಾ ಜಾಮೀನು ನಿರಾಕರಿಸಿದೆ.

ಸಾರ್ವಜನಿಕ ರಸ್ತೆಗಳು ನಗರದ ಜನರಿಗೆ ಸೇರಿದ್ದು ಪ್ರಕರಣ ಕೇವಲ ಒಪ್ಪಂದದ ಷರತ್ತು ಉಲ್ಲಂಘನೆಯಷ್ಟೇ ಅಲ್ಲ; ಸಾರ್ವಜನಿಕ ರಸ್ತೆಗಳು ಮೃತ್ಯುಪಾಶವಾಗಿ ಬದಲಾಗಬಾರದು ಎಂಬ ನ್ಯಾಯಸಮ್ಮತ ನಿರೀಕ್ಷೆ ಹೊಂದಿರುವ ಸಾಮಾನ್ಯ ನಾಗರಿಕರ ಸುರಕ್ಷತೆಗೆ ಸಂಬಂಧಿಸಿದೆ ಎಂದು ನ್ಯಾ. ಸ್ವರಣ ಕಾಂತ ಶರ್ಮ ಹೇಳಿದರು.

“ಪ್ರಸ್ತುತ ಪ್ರಕರಣದ ಸಂದರ್ಭ ಮತ್ತು ಸನ್ನಿವೇಶಗಳನ್ನು ಗಮನಿಸಿದಾಗ ನ್ಯಾಯಾಲಯ ಮೃದು ಧೋರಣೆ ತಳೆದರೆ, ಸಾರ್ವಜನಿಕ ರಸ್ತೆಗಳನ್ನು ಮೇಲ್ನೋಟಕ್ಕೆ ಮೃತ್ಯುಬಲೆಯಾಗಿ ಮಾಡುತ್ತಿರುವವರು, ಮಾನವ ಜೀವಹಾನಿಯನ್ನು ಗುತ್ತಿಗೆದಾರಿಕೆ ಕೆಲಸದ ಅಡ್ಡಪರಿಣಾಮದ ಮಟ್ಟಕ್ಕೆ ಇಳಿಸುವವರು ಹಾಗೂ ಬಳಿಕ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಹೊರಡುವವರ ಜವಾಬ್ದಾರಿಯ ಬಗ್ಗೆ ಅಸಡ್ಡೆ ತೋರಲಾಗಿದೆ ಎಂಬ ಆತಂಕಾರಿ ಸಂದೇಶ ರವಾನೆಯಾದಂತಾಗುತ್ತದೆ” ಎಂದು ಪೀಠ ವಿವರಿಸಿದೆ.

ಇದನ್ನೂ ಓದಿ: 60 ಸಾವಿರ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ರಾಜ್ಯ ಸರ್ಕಾರ ಮುಂದು

ಸಾರ್ವಜನಿಕ ಒಪ್ಪಂದ ಪಡೆದ ವ್ಯಕ್ತಿ ಅಥವಾ ಸಂಸ್ಥೆ ಜವಾಬ್ದಾರಿಯುತವಾಗಿ ಕೆಲಸ ನಿರ್ವಹಿಸಬೇಕು; ಜವಾಬ್ದಾರಿ ನಿರ್ವಹಿಸದಿದ್ದರೆ ಕಾನೂನುಬದ್ಧ ಹೊಣೆ ಹೊರಬೇಕಾಗುತ್ತದೆ. ಸಿಸಿಟಿವಿ ದೃಶ್ಯಾವಳಿ ಮತ್ತು ವರದಿಗಳನ್ನು ಗಮನಿಸಿದರೆ ಅಪಘಾತದ ವೇಳೆ ಯಾವುದೇ ಬ್ಯಾರಿಕೇಡ್‌, ಎಚ್ಚರಿಕೆ ಫಲಕ, ಬೆಳಕು ಅಥವಾ ಮೂಲಭೂತ ಸುರಕ್ಷತಾ ಕ್ರಮ ಕೈಗೊಂಡಿಲ್ಲ ಎಂದ ನ್ಯಾಯಾಲಯ, ಜನನಿಬಿಡ ರಸ್ತೆಗಳಲ್ಲಿ ಸುರಕ್ಷತಾ ಕ್ರಮಗಳಿಲ್ಲದೆ ತೋಡುವ ಕಾಮಗಾರಿಗಳನ್ನು ನಡೆಸುವುದು ಸಾರ್ವಜನಿಕರ ಅಮೂಲ್ಯ ಜೀವಗಳನ್ನು ಅಪಾಯಕ್ಕೆ ಒಡ್ಡಿದಂತೆ ಎಂದಿತು.

ಅಪಘಾತದ ನಂತರ ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವುದು ಅಥವಾ ವೈದ್ಯಕೀಯ ನೆರವು ಒದಗಿಸುವುದನ್ನು ಬಿಟ್ಟು ಹೊಂಡವನ್ನು ಮುಚ್ಚಲು ಹೊರಟಂತಿದೆ ಎಂತಲೂ ನ್ಯಾಯಾಲಯ ಟೀಕಿಸಿತು.

ಜನಕಪುರಿಯ ರಸ್ತೆಯೊಂದರಲ್ಲಿ ಸುಮಾರು 20 ಅಡಿ ಉದ್ದ, 13 ಅಡಿ ಅಗಲ ಮತ್ತು 14 ಅಡಿ ಆಳದ ಗುಂಡಿ ತೋಡಲಾಗಿತ್ತು. ಫೆಬ್ರವರಿ 6 ರ ರಾತ್ರಿ, ಮೋಟಾರ್ ಸೈಕಲ್ ಸವಾರರೊಬ್ಬರು ಎಚ್ಚರಿಕೆ ಫಲಕ, ಬ್ಯಾರಿಕೇಡ್ ಇಲ್ಲದ‌ ಈ ಗುಂಡಿಗೆ ಬಿದ್ದು ಸಾವನ್ನಪ್ಪಿದ್ದರು.

ಇದನ್ನೂ ನೋಡಿ: ಧಾರವಾಡ | ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆ: ಕಾಂಗ್ರೆಸ್–ಬಿಜೆಪಿಗೆ ಎಚ್ಚರಿಕೆಯ ಸಂಕೇತ! Janashakthi Media

Donate Janashakthi Media

Leave a Reply

Your email address will not be published. Required fields are marked *