ಆಯೋಧ್ಯೆ: ಸುಪ್ರೀಂ ಆದೇಶದಂತೆ ಮಸೀದಿ ನಿರ್ಮಾಣಕ್ಕೆ ಎನ್‌ಒಸಿ ನೀಡಲು ವಿಳಂಬ

ಅಯೋಧ್ಯೆ: ಸುಮಾರು ಮೂರು ವರ್ಷಗಳ ಹಿಂದೆ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಮಹತ್ವದ ಆದೇಶವನ್ನು ಹೊರಡಿಸಿದ ಸುಪ್ರೀಂ ಕೋರ್ಟ್‌ ತನ್ನ ತೀರ್ಪನ್ನು ನೀಡಿತು. ಅದರಂತೆ ನಿಗದಿತ ಜಾಗದಲ್ಲಿ ಮಸೀದಿ ನಿರ್ಮಾಣ ಮಾಡಬೇಕೆಂದು ಆದೇಶವನ್ನು ಹೊರಡಿಸಿತು. ಆದರೆ, ಒಂದೆಡೆ ರಾಮ ಮಂದಿರ ನಿರ್ಮಾಣ ಕಾರ್ಯ ನಡೆಯುತ್ತಿದೆ. ಆದರೆ, ಮಸೀದಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅಗ್ನಿಶಾಮಕ ಸೇವೆಗಳು, ಮಾಲಿನ್ಯ ಮಂಡಳಿ ಮತ್ತು ನಾಗರಿಕ ಪ್ರಾಧಿಕಾರಗಳಿಂದ ನಿರಾಕ್ಷೇಪಣಾ ಪ್ರಮಾಣಪತ್ರಗಳು (ಎನ್‌ಒಸಿ) ದೊರೆಯದ ಕಾರಣ ವಿಳಂಬವಾಗುತ್ತಿದೆ ಎಂದು ವರದಿಯಾಗಿದೆ.

ಮಸೀದಿ ನಿರ್ಮಾಣಕ್ಕೆ ಧನ್ನಿಪುರ ಗ್ರಾಮದಲ್ಲಿ ಐದು ಎಕರೆ ಭೂಮಿಯನ್ನು ಮಂಜೂರು ಮಾಡಲಾಗಿದೆ. ಇದಕ್ಕಾಗಿ ಉತ್ತರ ಪ್ರದೇಶ ಸುನ್ನಿ ಸೆಂಟ್ರಲ್ ವಕ್ಫ್ ಮಂಡಳಿ ಅಸ್ತಿತ್ವದಲ್ಲಿದೆ. ಸುಪ್ರೀಂ ಕೋರ್ಟಿನ ಆದೇಶದ ಅನುಸಾರವಾಗಿಯೇ ಮಂಡಳಿಯು ಮಸೀದಿ, ಆಸ್ಪತ್ರೆ ಮತ್ತು ವಸ್ತು ಸಂಗ್ರಹಾಲಯ ನಿರ್ಮಾಣಕ್ಕಾಗಿ ‘ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ (ಐಐಸಿಎಫ್‌) ಟ್ರಸ್ಟ್’ ಅನ್ನು ಸ್ಥಾಪಿಸಿದೆ.

ಮಸೀದಿ ನಿರ್ಮಾಣಕ್ಕೆ ಎನ್‌ಒಸಿ ನೀಡಬೇಕೆಂದು ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರವು ಜುಲೈ 15ರಂದು ಅಗ್ನಿಶಾಮಕ ಸೇವೆಗಳು, ನಾಗರಿಕ ವಿಮಾನಯಾನ, ಅಯೋಧ್ಯೆ ಮುನ್ಸಿಪಲ್ ಕಾರ್ಪೊರೇಷನ್, ನೀರಾವರಿ, ಲೋಕೋಪಯೋಗಿ, ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಜಿಲ್ಲಾಡಳಿತ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದೆ ಎಂದು ಐಐಸಿಎಫ್ ಕಾರ್ಯದರ್ಶಿ ಆಥರ್ ಹುಸೇನ್ ಸಿದ್ದಿಕಿ ತಿಳಿಸಿದರು.

ಆದರೆ, ಅಗ್ನಿಶಾಮಕ ದಳ ಹೊರತುಪಡಿಸಿ ಉಳಿದ ಯಾವುದೇ ಇಲಾಖೆಯೂ ಸ್ಥಳ ಪರಿಶೀಲನೆ ನಡೆಸಿಲ್ಲ. ಯಾವ ಇಲಾಖೆಗಳು ಎನ್‌ಒಸಿ ನೀಡಿಲ್ಲ ಎಂದು ತಿಳಿಸಿರುವ ಅಥರ್‌ ಹುಸೇನ್‌ ಅವರು, ಉದ್ದೇಶಿತ ಮಸೀದಿಗೆ ತಲುಪುವ ಕಿರಿದಾದ ರಸ್ತೆಯ ಬಗ್ಗೆ ಪ್ರಶ್ನೆ ಮಾಡಿರುವ ಅಗ್ನಿಶಾಮಕ ಸೇವಾ ಇಲಾಖೆ ಎನ್‌ಒಸಿ ನಿರಾಕರಿಸಿದೆ. ‘ಮಸೀದಿ ತಲುಪುವ ರಸ್ತೆಯು 12-ಮೀಟರ್ ಅಗಲವಾಗಿರಬೇಕು. ಆದರೆ, ಅಸ್ತಿತ್ವದಲ್ಲಿರುವ ಎರಡೂ ರಸ್ತೆಗಳು ಆರು ಮೀಟರ್‌ ಮೀರಿಲ್ಲ. ಮುಖ್ಯ ಮಾರ್ಗದ ಅಗಲವು ಕೇವಲ ನಾಲ್ಕು ಮೀಟರ್‌ಗಳಿವೆ ಎಂದು ಅಗ್ನಿಶಾಮಕ ಇಲಾಖೆ ಹೇಳಿದೆ ಎಂದು ತಿಳಿಸಿದ್ದಾರೆ.

ಅಯೋಧ್ಯೆಯ ಮುಖ್ಯ ಅಗ್ನಿಶಾಮಕ ಅಧಿಕಾರಿ ಆರ್.ಕೆ.ರೈ ಅವರು, ‘ಮಸೀದಿ ತಲುಪುವ ರಸ್ತೆಯು ಕಿರಿದಾಗಿರುವ ಕಾರಣ ಅಗ್ನಿಶಾಮಕ ಇಲಾಖೆಯು ಅಯೋಧ್ಯೆ ಮಸೀದಿ ಯೋಜನೆಗೆ ಎನ್‌ಒಸಿ ನೀಡುವುದನ್ನು ತಡೆಹಿಡಿದಿದೆ. ‘ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್‌ ಟ್ರಸ್ಟ್‌ಗೆ’ ಇಲಾಖೆ ಪತ್ರ ಬರೆದಿದ್ದು, 12 ಮೀಟರ್ ಅಗಲದ ರಸ್ತೆಗಳಿದ್ದರೆ ಮಾತ್ರ ಎನ್‌ಒಸಿ ನೀಡಲಾಗುವುದಾಗಿ ಸ್ಪಷ್ಟಪಡಿಸಲಾಗಿದೆ’ ಎಂದರು.

2019ರ ನವೆಂಬರ್ 9 ರಂದು ರಾಮ ಜನ್ಮಭೂಮಿ-ಬಾಬರಿ ಮಸೀದಿ ವಿವಾದದಲ್ಲಿ ಸುಪ್ರೀಂ ಕೋರ್ಟ್ ತನ್ನ ತೀರ್ಪು ನೀಡಿತ್ತು. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಅವಕಾಶ ನೀಡಿದ್ದ ಸುಪ್ರೀಂ ಕೋರ್ಟ್‌, ಮಸೀದಿ ನಿರ್ಮಾಣಕ್ಕೆ ಪ್ರತ್ಯೇಕ ಐದು ಎಕರೆ ಭೂಮಿಯನ್ನು ಮಂಜೂರು ಮಾಡಿತು.

Donate Janashakthi Media

Leave a Reply

Your email address will not be published. Required fields are marked *