ಸಂವಿಧಾನ – ಓದು ಅಧ್ಯಯನ- ಅರಿವಿನ ಹಾದಿ; ಗ್ರಾಂಥಿಕ ಸಂವಿಧಾನ – ಸಾಂವಿಧಾನಿಕ ಆಶಯಗಳನ್ನು ಮೌಖಿಕವಾಗಿ ತಳಸಮಾಜಕ್ಕೆ ತಲುಪಿಸಬೇಕಿದೆ

-ನಾ ದಿವಾಕರ

ಸ್ವತಂತ್ರ ಭಾರತ ತನ್ನದೇ ಆದ ಸಂವಿಧಾನವನ್ನು ತನಗೆ ತಾನೇ ಅರ್ಪಿಸಿಕೊಂಡು ಅಂಗೀಕರಿಸಿ ಇಂದಿಗೆ 75 ವರ್ಷಗಳು ತುಂಬುತ್ತವೆ. ಸಂವಿಧಾನ ದಿನವನ್ನು ದೇಶಾದ್ಯಂತ ಸಡಗರ ಸಂಭ್ರಮದೊಂದಿಗೆ ಆಚರಿಸಲಾಗುತ್ತಿದೆ. ವಸಾಹತು ದಾಸ್ಯದಿಂದ ವಿಮೋಚನೆ ಪಡೆದ ಭಾರತಕ್ಕೆ ಆಡಳಿತಾತ್ಮಕವಾಗಿ ಒಂದು ಹೊಸ ಆಯಾಮವನ್ನು ನೀಡಿದ ಭಾರತದ ಸಂವಿಧಾನ 21ನೇ ಶತಮಾನದ ಡಿಜಿಟಲ್‌ ಯುಗದಲ್ಲಿ ದೇಶವನ್ನು ಕೈಹಿಡಿದು ನಡೆಸುವ ಜವಾಬ್ದಾರಿಯನ್ನು ಹೊತ್ತಿದೆ. ಗ್ರಾಂಥಿಕವಾಗಿ ಸಂವಿಧಾನ ಪ್ರತಿಪಾದಿಸುವ ಉನ್ನತಾದರ್ಶಗಳಿಗೂ, ಆಡಳಿತಾತ್ಮಕವಾಗಿ ಸಂವಿಧಾನವನ್ನು ಅನುಸರಿಸಲಾಗುವ ಮಾದರಿಗಳಿಗೂ ಇರುವ ಸೂಕ್ಷ್ಮ ವ್ಯತ್ಯಾಸ ಮತ್ತು ಅಂತರವನ್ನು ಈ ಸಂದರ್ಭದಲ್ಲಿ ಸೂಕ್ಷ್ಮವಾಗಿ ಗಮನಿಸುವುದು ಸಾಂವಿಧಾನಿಕ ಪ್ರಜ್ಞೆಯುಳ್ಳ ನಾಗರಿಕರ ಆದ್ಯತೆ ಮತ್ತು ಕರ್ತವ್ಯವಾಗಬೇಕಿದೆ. ಅಧ್ಯಯನ

ಸಂವಿಧಾನವನ್ನು ಮತ್ತು ಅದರ ಆಶಯಗಳನ್ನು ತಳಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವ ಹಾದಿಯಲ್ಲಿ “ ಸಂವಿಧಾನ ಓದು ಅಧ್ಯಯನದ ಅಭಿಯಾನ ” ವನ್ನೂ ರಾಜ್ಯದಲ್ಲಿ ಹಮ್ಮಿಕೊಳ್ಳಲಾಗಿದೆ. ಈ Ritualistic ಮಾದರಿಯಿಂದಾಚೆಗೆ ಭಾರತದ ಪ್ರಜಾಪ್ರಭುತ್ವವನ್ನು ಕಾಡುತ್ತಿರುವ ಜಟಿಲ ಸಿಕ್ಕುಗಳನ್ನು, ಜ್ವಲಂತ ಸಮಸ್ಯೆಗಳನ್ನು ಗಮನಿಸಿದಾಗ, ಆಡಳಿತ ವ್ಯವಸ್ಥೆಯಲ್ಲಿ ಸಾಂವಿಧಾನಿಕ ಆಶಯಗಳು ಗ್ರಾಂಥಿಕವಾಗಿ ಮಾತ್ರವೇ ಉಳಿದಿರುವುದು ಢಾಳಾಗಿ ಕಾಣುತ್ತದೆ. ಒಂದೆಡೆ ದೇಶದ ತಳಸಮುದಾಯದ ಶೋಷಿತ ವರ್ಗಗಳಿಂದ ಸಂವಿಧಾನ ಅಪಾಯದಲ್ಲಿದೆ ಎಂಬ ಆತಂಕ ವ್ಯಕ್ತವಾಗುತ್ತಿದ್ದರೆ ಮತ್ತೊಂದು ದಿಕ್ಕಿನಿಂದ ಭಾರತೀಯ ಸಂವಿಧಾನದ ನಮ್ಯತೆ (Flexibility)ಯನ್ನೇ ಬಳಸಿಕೊಂಡು, ಕಾನೂನಾತ್ಮಕವಾಗಿ ಈ ಆಶಯಗಳನ್ನು ಶಿಥಿಲಗೊಳಿಸುವ ಪ್ರಯತ್ನಗಳು ಆಳ್ವಿಕೆಯ ಮೂಲಕವೇ ನಡೆಯುತ್ತಿದೆ. ಅಧ್ಯಯನ

ಈ ದ್ವಂದ್ವದ ನಡುವೆ ನಾವು ಸಂವಿಧಾನ ದಿನವನ್ನು ಆಚರಿಸುತ್ತಿದ್ದೇವೆ. ಸಂವಿಧಾನದ ಆಶಯಗಳನ್ನು ಯಾರಿಗೆ ಮತ್ತು ಹೇಗೆ ತಲುಪಿಸಬೇಕು ಎನ್ನುವುದು ನಮ್ಮ ಮುಂದಿನ ಸವಾಲಾಗಿದೆ. ಸಂವಿಧಾನ ತಿದ್ದುಪಡಿ ಆಗದೆಯೇ ಸಾಂವಿಧಾನಿಕ ಪ್ರಜಾತಂತ್ರದ ಮೌಲ್ಯಗಳು ಹಂತಹಂತವಾಗಿ, ಪ್ರತಿಯೊಂದು ಸ್ತರದಲ್ಲೂ ಶಿಥಿಲವಾಗುತ್ತಿರುವುದರ ಅಪಾಯವನ್ನು ತಳಸಮಾಜದ ಅವಕಾಶವಂಚಿತರಿಗೆ-ಶೋಷಿತರಿಗೆ ಮನದಟ್ಟುಮಾಡಬೇಕಾದರೆ, ಆ ಸಮಾಜದ ನಿರೀಕ್ಷೆ, ಆಕಾಂಕ್ಷೆ ಮತ್ತು ಅವಶ್ಯಕತೆಗಳೇನು ಎನ್ನುವುದನ್ನು ಗ್ರಹಿಸುವುದು ಬಹಳ ಮುಖ್ಯವಾಗುತ್ತದೆ. ಈ ಕ್ರಿಯೆಯಲ್ಲಿ ಪುನಃ ನಾವು ಡಾ. ಬಿ. ಆರ್.‌ ಅಂಬೇಡ್ಕರ್‌ ಅವರನ್ನೇ ಆಶ್ರಯಿಸಬೇಕಾಗುತ್ತದೆ. ಸಂವಿಧಾನದ ಪ್ರಧಾನ ಆಶಯಗಳಾದ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ, ಸಾಮಾಜಿಕ ಪಿರಮಿಡ್ಡಿನ ತಳಪಾಯದಲ್ಲಿರುವ ಸಮಾಜಗಳ ನಡುವೆ ಹೇಗೆ ಸಾಕಾರಗೊಂಡಿದೆ ಎಂದು ಶೋಧಿಸುತ್ತಲೇ ಈ ಮೂರೂ ಉನ್ನತಾದರ್ಶಗಳನ್ನು ಮರುನಿರ್ವಚಿಸಬೇಕಿದೆ. ಅಧ್ಯಯನ

ಇದನ್ನೂ ಓದಿ: ಬಿಬಿಎಂಪಿ ಸಿಬ್ಬಂದಿ ನಿರ್ಲಕ್ಷ್ಯ : ಪಾರ್ಕ್‌ನಲ್ಲಿ ಮರ ಬಿದ್ದು ಚಾಲಕ ಸಾವು

ಸ್ವಾತಂತ್ರ್ಯ ಮತ್ತು ಸಮಾನತೆ

ʼಸಮಾನತೆʼ ಎಂಬ ಪದವನ್ನು ಅಂಬೇಡ್ಕರ್‌ ವಿಶಾಲ ಕ್ಯಾನ್ವಾಸ್‌ನಲ್ಲಿ ನಿರ್ವಚಿಸಿದ್ದರು. ರಾಜಕೀಯ-ಸಾಮಾಜಿಕ-ಸಾಂಸ್ಕೃತಿಕ-ಆರ್ಥಿಕ ಸ್ತರಗಳಲ್ಲಿ ಗುರುತಿಸಬಹುದಾದ ಈ ಉದಾತ್ತ ಗುರಿಯನ್ನು ಸಮೀಪಿಸುತ್ತಿರುವ ಭಾರತ ಇನ್ನೂ ಅಂತಿಮ ಗೋಲ್‌ ಪೋಸ್ಟ್‌ ಮುಟ್ಟಬೇಕಿದೆ ಎನ್ನುವುದು ವಾಸ್ತವ. ಸಂಸದೀಯ ಪ್ರಜಾತಂತ್ರದ ಮತದಾನ ವ್ಯವಸ್ಥೆ ರಾಜಕೀಯ ಸಮಾನತೆಯನ್ನು ಕಲ್ಪಿಸಿದೆಯಾದರೂ, ಇದಕ್ಕೆ ಪೂರಕವಾದ ಸಾಮಾಜಿಕ-ಆರ್ಥಿಕ ಸಮಾನತೆಯನ್ನು ಸಾಧಿಸುವಲ್ಲಿ 77 ವರ್ಷಗಳ ಸ್ವತಂತ್ರ ಭಾರತ ಸೋತಿದೆ. ಮೇಲ್ನೋಟಕ್ಕೆ ಕಾಣುವಂತಹ ಸಾಮಾಜಿಕ ಸಮಾನತೆ ತಳಸಮಾಜದ ಒಳಹೊಕ್ಕು ನೋಡಿದಂತೆಲ್ಲಾ ಮಸುಕಾಗುತ್ತಾ ಹೋಗುವುದನ್ನು ವಿಷಾದದಿಂದಲೇ ಗುರುತಿಸಬೇಕಿದೆ.  ಇಂದಿಗೂ ಸಹ, ಗ್ರಾಮೀಣ-ನಗರ ಭಾರತವನ್ನು ಕಾಡುತ್ತಿರುವ ಅಸ್ಪೃಶ್ಯತೆ, ಸಾಮಾಜಿಕ ಬಹಿಷ್ಕಾರ ಮತ್ತು ಸಾಂಸ್ಕೃತಿಕ ಅಡಚಣೆಗಳನ್ನು ನಿವಾರಿಸುವಲ್ಲಿ ನಮ್ಮ ವೈಫಲ್ಯವನ್ನು ಒಪ್ಪಲೇಬೇಕಿದೆ. ಅಧ್ಯಯನ

ಸಮಾನತೆಯ ಕಲ್ಪನೆಯನ್ನು ʼ ಸಮಾಜಗಳ ನಡುವೆ ʼ ಮತ್ತು ʼ ಸಮಾಜಗಳ ಒಳಗೆ ʼ ಎರಡು ಆಯಾಮಗಳಲ್ಲಿ ನಿರ್ವಚಿಸಬೇಕಿದೆ. ಇವೆರಡರ ಸಮ್ಮಿಲನವನ್ನು ಸಂವಿಧಾನದ ಸಮಗ್ರ ಸಮಾನತೆಯ ಪರಿಕಲ್ಪನೆಯಲ್ಲಿ ಗುರುತಿಸಬಹುದು. ಸಂವಿಧಾನ ಓದು-ಅಧ್ಯಯನ ಅಭಿಯಾನದಲ್ಲಿ ನಾವು ತಲುಪಬೇಕಿರುವುದು ಸಮಾಜದ ಒಳಗಿರುವ ಅಸಮಾನತೆಗಳ ನೆಲೆಗಳನ್ನು. ಈ ಅಸಮಾನತೆಗಳೇ ಇಂದು ಒಳಮೀಸಲಾತಿಯಂತಹ ವಿಚಾರಗಳಲ್ಲಿ ಸಮಾಜವನ್ನು ಬಾಧಿಸುತ್ತಿದೆ. ಈ ಅಸಮಾನತೆ ನೆಲೆಗಳನ್ನು ತಳಸ್ತರದ ಶ್ರಮಜೀವಿಗಳಲ್ಲಿ, ಅವಕಾಶವಂಚಿತ-ಅಂಚಿನಲ್ಲಿರುವವರಲ್ಲಿ, ಮಹಿಳೆಯರಲ್ಲಿ, ಅಲ್ಪಸಂಖ್ಯಾತರಲ್ಲಿ , ಅಸ್ಪೃಶ್ಯತೆಯಂತಹ ಹೀನಾಚರಣೆಗೆ ಗುರಿಯಾಗಿರುವ ಜಾತಿಗಳಲ್ಲಿ ಮತ್ತು ಬಂಡವಾಳಶಾಹಿ ಆಳ್ವಿಕೆಯಲ್ಲಿ ತಮ್ಮ ಮೂಲ ನೆಲೆಯನ್ನೇ ಕಳೆದುಕೊಳ್ಳುತ್ತಿರುವ ಬುಡಕಟ್ಟು ಸಮುದಾಯಗಳಲ್ಲಿ ಮತ್ತು ಬಹುಮುಖ್ಯವಾಗಿ ಭೂ ರಹಿತ ಗ್ರಾಮೀಣ ಕೃಷಿಕರಲ್ಲಿ ಗುರುತಿಸಬೇಕಾಗುತ್ತದೆ. ಅಧ್ಯಯನ

ಈ ವಂಚಿತ ಸಮಾಜಗಳಿಗೆ ಸಂವಿಧಾನ ಏನನ್ನು ಕಲ್ಪಿಸುತ್ತದೆ ಅಥವಾ ನೀಡಬಹುದು ಅಥವಾ ಏನು ನೀಡಲು ಸಾಧ್ಯವಾಗಿಲ್ಲ ಎನ್ನುವುದನ್ನು ನಾವು ಹೇಳುತ್ತಲೇ ಬಂದಿದ್ದೇವೆ. ಆದರೆ ಅಸಮಾನತೆಯಲ್ಲಿ ಬೇಯುತ್ತಿರುವವರ ಮನಗಳಲ್ಲಿ ಇರುವ ʼ ಏಕೆ ನೀಡಲಾಗುತ್ತಿಲ್ಲ ʼ ಎಂಬ ಪ್ರಶ್ನೆಗೆ ಉತ್ತರ ಶೋಧಿಸುತ್ತಿಲ್ಲ. ಅವರಲ್ಲಿರಬಹುದಾದ ಪ್ರಶ್ನೆಯನ್ನು ಹೊರಹಾಕುವ ಅವಕಾಶವನ್ನೂ ನೀಡುತ್ತಿಲ್ಲ. ಬದಲಾಗಿ ನಮ್ಮ ಅವರ ತಿಳುವಳಿಕೆ ಅಥವಾ ಜಿಜ್ಞಾಸೆಯನ್ನೇ ಅನುಮಾನಿಸಿ ʼ ಪಾಠ ಶಾಲೆಯ ಮಾದರಿಯಲ್ಲಿ ʼ ಬೋಧಿಸಲು ಹೊರಟಿದ್ದೇವೆ. ತಮ್ಮ ಶೋಷಣೆ-ಸಂಕಷ್ಟಗಳಿಗೆ ಕಾರಣ ಆಳ್ವಿಕೆಯೋ ಅಥವಾ ಆಳ್ವಿಕೆಯ ಆರ್ಥಿಕ ನೀತಿಗಳೋ ಎಂಬ ವಾಸ್ತವವನ್ನು ಈ ಸಮಾಜಕ್ಕೆ ಮನದಟ್ಟು ಮಾಡಬೇಕಾದರೆ, ನವ ಉದಾರವಾದ ಮತ್ತು ಬಂಡವಾಳಶಾಹಿಯ ಕರಾಳ ಚಹರೆಯನ್ನು ತೆರೆದಿಡಬೇಕಾಗುತ್ತದೆ. ಡಿಜಿಟಲ್‌ ಬಂಡವಾಳ ಸೃಷ್ಟಿಸುವ ನಿರುದ್ಯೋಗ, ಅನಿಶ್ಚಿತ ಬದುಕು ಮತ್ತು ವಸತಿಹೀನತೆಯನ್ನು ಮತ್ತು ಅದಕ್ಕೆ ಕಾರಣವಾಗುವ ರಾಜಕೀಯ ಸಿದ್ಧಾಂತಗಳನ್ನು ತಳಸಮಾಜದ ಅರಿವಿಗೆ ತರಬೇಕಾಗುತ್ತದೆ. ಅಧ್ಯಯನ

ಈ ಮಾದರಿಯಲ್ಲಿ ತಳಸಮಾಜದ ಪ್ರಶ್ನೆಗಳಿಗೆ ನಾವು ಉತ್ತರಿಸಬೇಕಾಗುತ್ತದೆ. ಬೌದ್ಧಿಕ ಸಮಾಜವು ಅನುಸರಿಸುವ, ತನಗೆ ತಿಳಿದಿರುವುದನ್ನು ಪರರಿಗೆ ಮುಟ್ಟಿಸುವ ಪಾಠಶಾಲಾ ಮಾದರಿ, ಅವಕಾಶವಂಚಿತ ಜನತೆಯನ್ನು ಮತ್ತಷ್ಟು ಜಿಜ್ಞಾಸೆಗಳಿಗೆ ದೂಡುತ್ತದೆ. ಇಲ್ಲಿ ಸೃಷ್ಟಿಯಾಗುವ ಗೊಂದಲಗಳೇ ಬೂರ್ಷ್ವಾ ರಾಜಕೀಯ ಪಕ್ಷಗಳಿಗೆ ಚುನಾವಣಾ ಬಂಡವಾಳವಾಗುತ್ತವೆ. ತಳಸಮಾಜದ ಅಂದಂದಿನ ಅಗತ್ಯತೆಗಳನ್ನು ಪೂರೈಸುವ ಕಲ್ಯಾಣ ಯೋಜನೆಗಳು ತಮ್ಮ ನಾಳಿನ ಬದುಕನ್ನು ಸುಸ್ಥಿರಗೊಳಿಸುವುದಿಲ್ಲ ಎಂಬ ವಾಸ್ತವವನ್ನು ಈ ಜನತೆಗೆ ತಿಳಿಸುವ ಹಾದಿಯಲ್ಲಿ ಶೋಷಣೆಯ ಮೂಲ ಕಾರಣವನ್ನು ಬಂಡವಾಳಶಾಹಿ, ಜಾತಿ ವ್ಯವಸ್ಥೆ, ಪಿತೃಪ್ರಧಾನತೆ ಮತ್ತು ಊಳಿಗಮಾನ್ಯತೆಯಲ್ಲಿ ಗುರುತಿಸುವ ಮೂಲಕ ತಳ ಸಮಾಜದಲ್ಲಿ ಸಾಂವಿಧಾನಿಕ ಪ್ರಜ್ಞೆಯನ್ನು ಉದ್ಧೀಪನಗೊಳಿಸಬೇಕಿದೆ. ತನ್ಮೂಲಕ ಆಳುವ ವರ್ಗಗಳ ಶೋಷಣೆಗೆ ಇಂಧನ ಒದಗಿಸುವ ತಾತ್ವಿಕ ನೆಲೆಗಳನ್ನು ಭೇದಿಸಲು ಸಾಧ್ಯವಾಗುತ್ತದೆ. ಸಮಾಜವಾದದ ಆಶಯಗಳನ್ನು ಹೊತ್ತಿದ್ದರೂ ಭಾರತದ ಸಂವಿಧಾನ ಬಂಡವಾಳಶಾಹಿಯನ್ನು ಪೋಷಿಸುವ-ನಿಯಂತ್ರಿಸುವ ವಿವೇಕ ವಿವೇಚನೆಯನ್ನು ಆಳ್ವಿಕೆಗಳಿಗೆ ಬಿಟ್ಟುಕೊಟ್ಟಿರುವ ವಾಸ್ತವವನ್ನೂ ಮನದಟ್ಟುಮಾಡಬೇಕಿದೆ. ಅಧ್ಯಯನ

ಸ್ವಾತಂತ್ರ್ಯ ಮತ್ತು ಸೋದರತ್ವ

ಸಂವಿಧಾನ ಓದು ಮತ್ತು ಅಧ್ಯಯನದ ಅಭಿಯಾನದಲ್ಲಿ ಗಮನಿಸಬೇಕಾದ ಮತ್ತೊಂದು ಅಂಶ ಎಂದರೆ ಸಾಮಾಜಿಕ ಸಾಮರಸ್ಯ ಮತ್ತು ಸಾಂಸ್ಕೃತಿಕ ಸಹಿಷ್ಣುತೆಯನ್ನು ಅಪೇಕ್ಷಿಸುವ ಸೋದರತ್ವದ ಪರಿಕಲ್ಪನೆ. ಭಾರತದ ಸಂವಿಧಾನ ಅಪಾಯದಲ್ಲಿದೆ ಎಂಬ ಕೂಗಿಗೆ ಮೂಲ ಕಾರಣ ಬಹುಸಂಖ್ಯಾವಾದದ ಕೋಮುವಾದಿ ಸಾಂಸ್ಕೃತಿಕ ರಾಜಕಾರಣ ಮತ್ತು ಇದು ಪ್ರಚೋದಿಸುತ್ತಿರುವ ಲಂಬಗತಿಯ ಸಾಮಾಜಿಕ ವಿಘಟನೆ (Vertical Social Disintegration) . ಈ ಪ್ರಕ್ರಿಯೆಯಲ್ಲಿ ಅಲ್ಪಸಂಖ್ಯಾತರಷ್ಟೇ ಗುರಿಯಾಗಿ ಉಳಿದಿಲ್ಲ, ಪ್ರತಿಯೊಂದು ಸಾಮಾಜಿಕ ಸ್ತರದಲ್ಲೂ ಬೇರೂರಿರುವ ಜಾತಿ ಶ್ರೇಷ್ಠತೆಯ ಪ್ರಜ್ಞೆ ಸಮಾಜದಲ್ಲಿ ಪಿತೃಪ್ರಧಾನತೆಯ ಧೋರಣೆಗಳನ್ನು ಪೋಷಿಸುತ್ತಿದ್ದು, ಸಾಮಾಜಿಕ ವಿಘಟನೆಯಲ್ಲಿ ಧಾರ್ಮಿಕ ಅಸ್ಮಿತೆ ಮತ್ತು ಸಾಂಸ್ಕೃತಿಕ ಪ್ರಜ್ಞೆ ಮುಖ್ಯ ಪಾತ್ರ ವಹಿಸುತ್ತಿದೆ. ಸಂಸ್ಕೃತಿ ಮತ್ತು ಧರ್ಮದ ನಡುವೆ ಇರುವ ವ್ಯತ್ಯಾಸವನ್ನು ಸಂಕುಚಿತಗೊಳಿಸುವ ಮೂಲಕ ಹಿಂದುತ್ವವಾದವು ತಳಸಮಾಜದ ಜನಸಂಸ್ಕೃತಿಯ ನೆಲೆಗಳನ್ನೂ ಆಕ್ರಮಿಸಿಕೊಂಡು, ವಿಶಾಲ ಹಿಂದೂ ಧರ್ಮದ ವ್ಯಾಖ್ಯಾನಕ್ಕೊಳಪಡಿಸುತ್ತಿದೆ.

ಈ ವಿಘಟನೆಯ ಪ್ರಕ್ರಿಯೆಗೆ ಪೂರಕವಾಗಿ ಸಮಾಜದಲ್ಲಿ ಪಿತೃಪ್ರಧಾನ ಮೌಲ್ಯಗಳು ಮತ್ತು ವೈದಿಕಶಾಹಿಯ ಆಚರಣೆಗಳನ್ನು ಸಾರ್ವತ್ರೀಕರಿಸಲಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಸೋದರತ್ವವನ್ನು ಎತ್ತಿಹಿಡಿಯುವ ಸಮಾಜಗಳೂ ಸಹ ಪಿತೃಪ್ರಧಾನತೆಯಿಂದ ಹೊರಬರದಿರುವುದು ದೇಶದ ಮಹಿಳಾ ಸಂಕುಲದ ಮೇಲೆ ನಡೆಯುತ್ತಿರುವ ನಿರಂತರ ದೌರ್ಜನ್ಯ, ತಾರತಮ್ಯ ಮತ್ತು ಶೋಷಣೆಗಳಿಗೆ ಮೂಲ ಕಾರಣವಾಗಿದೆ. ಬಹುತೇಕ ಸಾರ್ವಜನಿಕ ಸಂಕಥನಗಳಲ್ಲಿ ʼಮನುವಾದ/ದಿʼ ಎಂಬ ಪದ ಬಳಕೆ ಒಂದು ಕ್ಲೀಷೆಯಂತಾಗಿದ್ದು, ಇದರ ಮರುನಿರ್ವಚನೆ ಅತ್ಯವಶ್ಯವಾಗಿದೆ. ಮನುವಾದವನ್ನು ಕೇವಲ ಜಾತಿ ಶ್ರೇಣಿಯ ನೆಲೆಯಲ್ಲಿ ವ್ಯಾಖ್ಯಾನಿಸುವುದರ ಮೂಲಕ ಆ ಪ್ರಾಚೀನ ತಾತ್ವಿಕತೆಯೊಳಗೆ ಅಡಗಿರುವ ಪಿತೃಪ್ರಧಾನ, ಊಳಿಗಮಾನ್ಯ, ಧಾರ್ಮಿಕ ಶ್ರೇಷ್ಠತೆಯ ಮನಸ್ಥಿತಿಗಳನ್ನು ಅಲಕ್ಷಿಸಲಾಗುತ್ತಿದೆ. ಭಾರತೀಯ ಸಮಾಜವನ್ನು ಮೇಲಿನಿಂದ ಕೆಳಗಿನವರೆಗೂ ಆವರಿಸಿರುವ ಈ ಚಿಂತನಾ ವಿಧಾನವನ್ನು ಹೊರಗಿಟ್ಟು, ಕೇವಲ ಜಾತಿ ಶ್ರೇಣಿಯ ನೆಲೆಯಲ್ಲಿ ʼಮನುವಾದʼವನ್ನು ನಿರ್ವಚಿಸುವುದು ಆತ್ಮದ್ರೋಹವಾಗುತ್ತದೆ.

ಸಮಕಾಲೀನ ಸಂದರ್ಭಲ್ಲಿ ಮನುವಾದ ಎಂದರೆ ಜಾತಿ ಶ್ರೇಷ್ಠತೆ, ಧಾರ್ಮಿಕ ಪಾರಮ್ಯ, ಪಿತೃಪ್ರಧಾನತೆ, ಊಳಿಗಮಾನ್ಯತೆ ಇವೆಲ್ಲವನ್ನೂ ಒಳಗೊಂಡ ಒಂದು ಪ್ರಾಚೀನ ಮನಸ್ಥಿತಿ ಎಂದೇ ನಿರ್ವಚಿಸಬೇಕಾಗಿದೆ. ಜಾತಿ ಸಮಾನತೆಗಾಗಿ ಹೋರಾಡುವ ಸಮಾಜಗಳಲ್ಲಿ ಬೇರೂರಿರುವ ಪಿತೃಪ್ರಧಾನ-ಊಳಿಗಮಾನ್ಯ ಮನಸ್ಥಿತಿಯನ್ನು ಕಿತ್ತುಹಾಕದಿದ್ದರೆ, ಸಮಾನತೆ ಕೇವಲ ತೋರಿಕೆಯಾಗಿಬಿಡುತ್ತದೆ. ಬಂಡವಾಳಶಾಹಿಯು ಪೋಷಿಸುವ ಈ ಮೂರೂ ವಿಚಾರಧಾರೆಗಳನ್ನು ಎದುರಿಸುವುದು ಸಂವಿಧಾನ ಜಾಗೃತಿ ಅಭಿಯಾನದ ಮೂಲ ಆದ್ಯತೆಯಾಗಬೇಕಿದೆ. ಇದು ಸಾಧ್ಯವಾಗಿಲ್ಲ ಎನ್ನುವುದನ್ನು ತಳಸಮುದಾಯಗಳಿಂದ ಮತ್ತು ಸಮುದಾಯದಲ್ಲಿ ಆಂತರಿಕವಾಗಿಯೂ ನಡೆಯುತ್ತಿರುವ ಅಸ್ಪೃಶ್ಯತೆ, ಸಾಮಾಜಿಕ ಬಹಿಷ್ಕಾರ ಮತ್ತು ಮಹಿಳಾ  ದೌರ್ಜನ್ಯಗಳಲ್ಲಿ ಕಾಣಬಹುದಾಗಿದೆ. ಇಲ್ಲಿ ಬೇರೂರಿರಬಹುದಾದ ಉಚ್ಛ-ನೀಚ ಪರಿಕಲ್ಪನೆಯನ್ನು ಹೋಗಲಾಡಿಸುವುದು ಸಂವಿಧಾನ ಓದು ಅಭಿಯಾನದ ಆದ್ಯತೆಯಾಗಬೇಕಿದೆ.

ಉಪಾಸನಾ ಸ್ವಾತಂತ್ರ್ಯ- ವೈಚಾರಿಕತೆ

ಭಾರತದ ಸಂವಿಧಾನವು ಎಲ್ಲ ಮತಾಚರಣೆಗಳಿಗೂ, ಧಾರ್ಮಿಕ ಶ್ರದ್ಧಾನಂಬಿಕೆಗಳಿಗೂ, ಉಪಾಸನೆ ಮತ್ತು ಆಚರಣೆಗಳಿಗೂ ಸಮಾನ ಗೌರವ ನೀಡುತ್ತದೆ. ನಾವು ಒಪ್ಪಿಕೊಂಡು ಅನುಸರಿಸುತ್ತಿರುವ ಸೆಕ್ಯುಲರಿಸಂ ಅಥವಾ ಜಾತ್ಯತೀತತೆ ಮತನಿರಪೇಕ್ಷತೆಯ ಚೌಕಟ್ಟಿನಲ್ಲಿ ನಿರ್ವಚನೆಗೊಳಗಾಗಿದೆಯೇ ಹೊರತು ಮತಬಾಹಿರವಾಗಿ ಅಲ್ಲ. ಹಾಗೆಯೇ ಎಲ್ಲ ಮತಗಳ, ಧರ್ಮಗಳ ಆರಾಧನಾ ಸಂಸ್ಕೃತಿಗಳಿಗೂ ಸಂವಿಧಾನ ಅವಕಾಶ ಕಲ್ಪಿಸಿದೆ. ಆದರೆ ಈ ಸಾಂಪ್ರದಾಯಿಕತೆಯ ಜೊತೆಗೇ ವೈಚಾರಿಕತೆ ಮತ್ತು ವೈಜ್ಞಾನಿಕ ಪ್ರಜ್ಞೆಯೊಂದಿಗೆ ಸಮಾಜವನ್ನು ನಾಗರಿಕತೆಯತ್ತ ಕರೆದೊಯ್ಯುವ ಆಶಯವನ್ನೂ ಸಂವಿಧಾನ ವ್ಯಕ್ತಪಡಿಸುತ್ತದೆ. ಆರಾಧನಾ ಸಂಸ್ಕೃತಿ ಮತ್ತು ವೈಜ್ಞಾನಿಕ ಮನೋಭಾವ ಎರಡೂ ಪರಸ್ಪರ ವಿರುದ್ಧ ದಿಕ್ಕಿನಲ್ಲಿ  ಚಲಿಸುವ ವಿದ್ಯಮಾನಗಳು ಎನ್ನುವುದನ್ನು ಸೂಕ್ಷ್ಮವಾಗಿ ಗಮನಿಸಬೇಕಿದೆ. ಭಾರತದ ಸಂವಿಧಾನ ನಾಸ್ತಿಕತೆಯನ್ನು ಪ್ರತಿಪಾದಿಸುವುದಿಲ್ಲ ಆದರೆ ಗೌರವಿಸುತ್ತದೆ. ಹಾಗೆಯೇ ವೈಚಾರಿಕತೆ ಮತ್ತು ವೈಜ್ಞಾನಿಕ ಮನೋಭಾವವನ್ನು ಸಾಧಿಸುವ ಮೂಲಕ ಸಾಮಾಜಿಕ ಸಾಮರಸ್ಯ ಮತ್ತು ಸಾಂಸ್ಕೃತಿಕ ಸೌಹಾರ್ದತೆಯನ್ನು ಕಾಪಾಡುವ ಆಶಯವನ್ನು ಸೋದರತ್ವದ ನೆಲೆಯಲ್ಲಿ ವ್ಯಕ್ತಪಡಿಸುತ್ತದೆ.

ಹಿಂದೂ-ಮುಸ್ಲಿಂ-ಕ್ರೈಸ್ತ-ಸಿಖ್‌ ಧರ್ಮಗಳ ಆಚರಣಾತ್ಮಕ ನೆಲೆಯಲ್ಲಿ ನೋಡಿದಾಗ ಇಂದು ಭಾರತವನ್ನು ಸಾಂಪ್ರದಾಯಿಕತೆಯೆಡೆಗೆ ದೂಡುತ್ತಿರುವುದು ಪ್ರತಿ ಮತದಲ್ಲೂ ಇರುವಂತಹ ಆರಾಧನಾ ಸಂಸ್ಕೃತಿ ಮತ್ತು ಅದರ ಶ್ರೇಣೀಕರಣ ಎನ್ನುವುದು ಸ್ಪಷ್ಟವಾದೀತು. ಈ ಕಾರಣಕ್ಕಾಗಿಯೇ ಡಾ. ಬಿ. ಆರ್.‌ ಅಂಬೇಡ್ಕರ್‌, ಸ್ವತಃ ನಾಸ್ತಿಕತೆಯನ್ನು ಪ್ರತಿಪಾದಿಸದಿದ್ದರೂ, ಈ ಧರ್ಮಗಳನ್ನು ತಿರಸ್ಕರಿಸಿ ವೈಚಾರಿಕ ಪ್ರಜ್ಞೆಯನ್ನು ಬೋಧಿಸುವ ಬೌದ್ಧ ಧಮ್ಮವನ್ನು ಸ್ವೀಕರಿಸಿದರು. ಆದರೆ ಇಂದು ಬೌದ್ಧ ಧಮ್ಮವು ಸಾಂಸ್ಥೀಕರಣಕ್ಕೊಳಗಾಗುತ್ತಿರುವುದೇ ಅಲ್ಲದೆ, ತನ್ನದೇ ಆದ ಆರಾಧನಾ ಮಾದರಿಗಳನ್ನು ಅನುಸರಿಸಲಾರಂಭಿಸಿದೆ. ಆರಾಧನಾ ಸಂಸ್ಕೃತಿಗೆ ಮೂಲಾಧಾರವಾದ ಮೂರ್ತಿ ಪೂಜೆ, ಮಠ ಸಂಸ್ಕೃತಿ ಮತ್ತು ಸಾಂಸ್ಥಿಕ ಬೋಧನಾ ಪ್ರವೃತ್ತಿಗಳು ನವ ಬೌದ್ಧರಲ್ಲೂ ಕಾಣಲಾರಂಭಿಸಿದೆ. ಸಹಜವಾಗಿಯೇ ಇಲ್ಲಿ ವೈಚಾರಿಕತೆ ಮತ್ತು ವೈಜ್ಞಾನಿಕ ಮನೋಭಾವಕ್ಕೆ ಹಿನ್ನಡೆಯಾಗುತ್ತದೆ.

ಇದನ್ನೂ ನೋಡಿ: ನವೆಂಬರ್ 26 ಭಾರತದ ಸಂವಿಧಾನ ದಿನ | ಈ ದಿನದ ಮಹತ್ವ, ಇತಿಹಾಸದ ಬಗ್ಗೆ ತಿಳಿಯಿರಿ Janashakthi Media

ಅಂಬೇಡ್ಕರ್‌ ಕಟುವಾಗಿ ವಿರೋಧಿಸಿದ್ದ ಆರಾಧನಾ ಸಂಸ್ಕೃತಿ ಅವರನ್ನೇ ಆಕ್ರಮಿಸುತ್ತಿರುವುದು ವಾಸ್ತವ. ವ್ಯಕ್ತಿ ಅಥವಾ ವ್ಯಕ್ತಿತ್ವವನ್ನು Romanticise ಮಾಡಿದಷ್ಟೂ, ವೈಭವೀಕರಿಸಿದಷ್ಟೂ ಆರಾಧನಾ ಮನೋಭಾವ ಉದ್ಧೀಪನವಾಗುವುದು ಸಹಜ ವಿದ್ಯಮಾನ. ಅಂಬೇಡ್ಕರ್‌ ಇದಕ್ಕೆ ವಿರುದ್ಧವಾಗಿದ್ದರು. ವೈಚಾರಿಕತೆಯ ನೆಲೆಯಲ್ಲಿ ಬೌದ್ಧ ಧಮ್ಮವನ್ನು ಸ್ವೀಕರಿಸಿ, ಎಲ್ಲ ರೀತಿಯ ಮೌಢ್ಯಾಚರಣೆಗಳನ್ನು, ಮೂಢ ನಂಬಿಕೆಗಳನ್ನು, ಪ್ರಾಚೀನ ಮನಸ್ಥಿತಿಯನ್ನು ಹೋಗಲಾಡಿಸುವುದು ಅಂಬೇಡ್ಕರರ ಜೀವನದ ಮಿಷನ್‌ ಆಗಿತ್ತು. ಸಂವಿಧಾನ ನಮಗೆ ನೀಡುವ ಉಪಾಸನಾ ಸ್ವಾತಂತ್ರ್ಯ ಈ ಗುರಿ ತಲುಪಲು ಅಡ್ಡಿಯಾಗುತ್ತಿದೆಯೇ ? ಯೋಚಿಸಬೇಕಿದೆ. ಅಥವಾ ಈ ಸ್ವಾತಂತ್ರ್ಯವನ್ನು ಪರಿಪಾಲಿಸುತ್ತಲೇ, ನಿತ್ಯ ಬದುಕಿನಲ್ಲಿ ವೈಚಾರಿಕತೆ ಮತ್ತು ವೈಜ್ಞಾನಿಕ ಮನಸ್ಥಿತಿಯನ್ನು ರೂಢಿಸಿಕೊಳ್ಳಬೇಕೇ ? ಈ ಜಟಿಲ ಪ್ರಶ್ನೆಗೆ ಉತ್ತರ ಶೋಧಿಸಬೇಕಿದೆ. ಜನಪದ ಕಲೆಯೊಂದನ್ನು ಅಪಭ್ರಂಶಗೊಳಿಸುವ ರೀತಿಯಲ್ಲಿ ಪೂಜಾ ಕುಣಿತದಲ್ಲಿ ಅಂಬೇಡ್ಕರ್‌ ಭಾವಚಿತ್ರವನ್ನು ತಲೆಯ ಮೇಲೆ ಹೊತ್ತಿರುವ ಇತ್ತೀಚಿನ ಪ್ರಸಂಗ ನಮ್ಮನ್ನು ಈ ನಿಟ್ಟಿನಲ್ಲಿ ಯೋಚಿಸುವಂತೆ ಮಾಡಬೇಕಿದೆ.

ಓದು ಅಧ್ಯಯನ ಮತ್ತು ಭವಿಷ್ಯ

ಸಂವಿಧಾನ ಓದು-ಅಧ್ಯಯನ ಎಂದರೆ ಅಲ್ಲಿರುವುದನ್ನು ಗ್ರಾಂಥಿಕವಾಗಿ ಜನರಿಗೆ ಹೇಳುವುದು ಮಾತ್ರವೇ ಅಲ್ಲ. ಅಕ್ಷರ ಕಲಿತವರು ಎರಡನ್ನೂ ಸುಲಭವಾಗಿ ಕಂಠಪಾಠ ಮಾಡಲೂ ಸಾಧ್ಯ. ಆದರೆ ಸಂವಿಧಾನದ ನೈಜ ಫಲಾನುಭವಿಗಳಾಗಬೇಕಾದ ಅಪಾರ ಸಂಖ್ಯೆಯ ಜನರು ನಮ್ಮ ಸಾಮಾಜಿಕ ಪಿರಮಿಡ್ಡಿನ ತಳಪಾಯದಲ್ಲಿದ್ದಾರೆ. ಈ ಬೃಹತ್‌ ಜನಸ್ತೋಮವನ್ನು ಓದಲು ಪ್ರಚೋದಿಸುವುದರೊಂದಿಗೇ, ಈ ಸಮಾಜಗಳಲ್ಲಿ ಸಂವಿಧಾನದ ಅರಿವು ಮೂಡಿಸುವುದು ನಮ್ಮ ಅಭಿಯಾನದ ಆದ್ಯತೆಯಾಗಬೇಕಿದೆ. ಇದು ಸಾಧ್ಯವಾಗಬೇಕಾದರೆ ಈ ಸಮಾಜಕ್ಕೆ ತಾವು ಹೇಗೆ, ಯಾರಿಂದ, ಏಕೆ ವಂಚಿತರಾಗುತ್ತಿದ್ದೇವೆ ಎಂಬ ಅರಿವು ಮೂಡುವುದು ಅತ್ಯವಶ್ಯ. ಈ ಅರಿವು ಜಾತಿ ವ್ಯವಸ್ಥೆಯ ನೆಲೆಯಲ್ಲಿ ಮೂಡುವುದು ಎಷ್ಟು ಮುಖ್ಯವೋ,  ಸಮಾಜವನ್ನು ಕಟ್ಟಲು ಅತ್ಯವಶ್ಯವಾದ ಆರ್ಥಿಕ ಸಂರಚನೆಗಳ ನೆಲೆಯಲ್ಲಿ ಮೂಡುವುದೂ ಅಷ್ಟೇ ಮುಖ್ಯವಾಗುತ್ತದೆ. ಈ ಹಾದಿಯಲ್ಲಿ ನಾವು ಸಂವಿಧಾನ ಮತ್ತು ಅದರ ಮೌಲ್ಯಗಳನ್ನು ಅಂತರೀಕರಿಸಿಕೊಳ್ಳುವುದು (Internalise) ಅನಿವಾರ್ಯ.

ಸಮಾಜವಾದಿ ಆಶಯಗಳಿರುವ ಸಂವಿಧಾನದ ಚೌಕಟ್ಟಿನೊಳಗೇ ಬಂಡವಾಳಶಾಹಿ ಏಕೆ ನೆಲೆಗೊಳ್ಳುತ್ತಿದೆ ಎಂಬ ಸಾಮಾಜಿಕ ಜಿಜ್ಞಾಸೆಗೆ ಕೆಳಸ್ತರದ ಸಮಾಜ ಉತ್ತರ ಶೋಧಿಸುತ್ತಿರುತ್ತದೆ. ಇಲ್ಲಿ ಉತ್ತರಿಸುವ ಜವಾಬ್ದಾರಿ ಇರುವುದು ಸಂವಿಧಾನವನ್ನು ಅರಗಿಸಿಕೊಂಡವರಲ್ಲಿ. ಗ್ರಾಂಥಿಕವಾಗಿ ಸಂವಿಧಾನವನ್ನೇ ಆರಾಧಿಸುವ ಅಥವಾ Romanticise ಮಾಡುವ ಮೂಲಕ ಏನನ್ನೂ ಸಾಧಿಸಲಾಗುವುದಿಲ್ಲ. ಸಾಂವಿಧಾನಿಕ ಆಶಯಗಳನ್ನು ಮತ್ತು ತಾತ್ವಿಕ ನೆಲೆಗಳನ್ನು ನಮ್ಮೊಳಗೆ ಇಳಿಸಿಕೊಳ್ಳುವ ಪ್ರಕ್ರಿಯೆಗೆ ಚಾಲನೆ ನೀಡಬೇಕಿದೆ. ಇದು ಸಾಧ್ಯವಾಗಬೇಕಾದರೆ ಬೌದ್ಧಿಕ ಸಮಾಜ ಮೊದಲು ವೈಚಾರಿಕತೆಯತ್ತ, ವೈಜ್ಞಾನಿಕತೆಯತ್ತ, ನೈಜ ಸಮಾಜವಾದ ಅಥವಾ ಸಮತಾವಾದದತ್ತ ಹೊರಳಬೇಕಾಗುತ್ತದೆ. ನೆಲಮೂಲ ಸಂಸ್ಕೃತಿಯನ್ನು ರಕ್ಷಿಸುವ ಭರದಲ್ಲಿ ಮೌಢ್ಯಾಚರಣೆಗಳಿಗೆ ಎಡೆಮಾಡಿಕೊಡುವುದು ಭಾರತದಂತಹ ಸಾಂಪ್ರದಾಯಿಕ ಸಮಾಜವನ್ನು ಮತ್ತಷ್ಟು ಹಿಂದಕ್ಕೆ ಕರೆದೊಯ್ಯುತ್ತದೆ. ವೈಚಾರಿಕ ನೆಲೆಯಲ್ಲಿ ತಳಸಮಾಜಕ್ಕೆ ಸಾಮಾಜಿಕ ತಳಹದಿಯ ವಾಸ್ತವಗಳನ್ನು ತಲುಪಿಸುತ್ತಲೇ, ವೈಜ್ಞಾನಿಕ ನೆಲೆಯಲ್ಲಿ ಆರ್ಥಿಕ ಅಡಿಪಾಯದ ವಾಸ್ತವಗಳನ್ನು ತಲುಪಿಸಬೇಕಿದೆ. ಆಗಲೇ ಆರ್ಥಿಕ ಶೋಷಣೆ, ಸಾಮಾಜಿಕ ತಾರತಮ್ಯ, ಸಾಂಸ್ಕೃತಿಕ ದೌರ್ಜನ್ಯ ಮತ್ತು ಧಾರ್ಮಿಕ ದಬ್ಬಾಳಿಕೆಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯ.

ಸಂವಿಧಾನ ಓದು ಮತ್ತು ಅಧ್ಯಯನದ ಅಭಿಯಾನ ತಳಸಮಾಜದಲ್ಲಿ ಸಂವಿಧಾನ ಪ್ರಜ್ಞೆಯನ್ನು ನೆಲೆಗೊಳ್ಳುವಂತೆ ಮಾಡಬೇಕಾದರೆ ನಾವು ನಡೆಯುತ್ತಿರುವ ಹಾದಿಯನ್ನು ಮರುನಿರ್ವಚನೆಗೊಳಪಡಿಸುವುದು ಅತ್ಯಗತ್ಯ. ಸಾಮಾಜಿಕ ಅರಿವಿನ ಪಯಣದಲ್ಲಿ ಸಂವಿಧಾನ ಮತ್ತು ಸಾಂವಿಧಾನಿಕ ಮೌಲ್ಯ-ಆಶಯಗಳು ಒಳಗಿಳಿಸಿಕೊಳ್ಳಬೇಕಾದ ವಸ್ತುಗಳಾಗಿ ಪರಿಣಮಿಸಬೇಕಿದೆ. ಇದು ಸಾಧ್ಯವಾಗಬೇಕಾದರೆ ನಾವು ಸಂವಿಧಾನ ಫಲಾನುಭವಿಗಳಿಂದಾಚೆಗಿರುವ ಬೃಹತ್‌ ಜನಸ್ತೋಮವನ್ನು ತಲುಪಬೇಕಿದೆ. ಅವರ ಮನದಾಳದ ಪ್ರಶ್ನೆಗಳಿಗೆ ಉತ್ತರಿಸಬೇಕಿದೆ. ತನ್ಮೂಲಕ ತಳಸಮಾಜವನ್ನು ನಿರಂತರ ಶೋಷಣೆಗೊಳಪಡಿಸುತ್ತಿರುವ ಪ್ರಾಚೀನ ಮನಸ್ಥಿತಿಯ ವಿರುದ್ದ ಹೋರಾಟಕ್ಕೆ ಸಜ್ಜುಗೊಳಿಸಬೇಕಿದೆ. ಸಂವಿಧಾನವನ್ನು ದೇಶದ ಜನತೆ ತನಗೆ ತಾನೇ ಅರ್ಪಿಸಿಕೊಂಡ ದಿನದಂದು, ವ್ಯಕ್ತಿಗತ ನೆಲೆಯಲ್ಲಿ ಸಾಂವಿಧಾನಿಕ ಮೌಲ್ಯಗಳನ್ನು ನಮಗೆ ನಾವೇ ಅರ್ಪಿಸಿಕೊಂಡಿದ್ದೇವೆಯೇ ಎಂಬ ಪ್ರಶ್ನೆಗೆ ಉತ್ತರ ಏನು ?

ಇದು ನವಂಬರ್‌ 26ರಂದು ನಾವು ಕಂಡುಕೊಳ್ಳಬೇಕಿರುವ ಸುಡು ವಾಸ್ತವ.

ಇದನ್ನೂ ಓದಿ: ಸಂವಿಧಾನದ ಮೌಲ್ಯ ತಿಳಿಸಲು ಸರ್ಕಾರದಿಂದ ರಾಜ್ಯಾದ್ಯಂತ ಅಭಿಯಾನ

Donate Janashakthi Media

Leave a Reply

Your email address will not be published. Required fields are marked *