ಬೆಂಗಳೂರು : ಇಡೀ ದೇಶದಲ್ಲೇ ಹೈನುಗಾರಿಕೆ ಉತ್ಪಾದನೆ ಹಾಗೂ ಸಹಕಾರಿ ಸಂಸ್ಕರಣೆ ಅನುಪಾತ ಗರಿಷ್ಠ ಪ್ರಮಾಣದಲ್ಲಿರುವ ರಾಜ್ಯದ ರೈತಾಪಿ ಹೈನುಗಾರಿಕೆಯನ್ನು ಸರ್ವನಾಶ ಮಾಡಲು, ಡೈರಿ ಕ್ಷೇತ್ರದ ಕಾರ್ಪೋರೇಟೀಕರಣ ಸಾಧಿಸಲು ,ಆಸ್ಟ್ರೇಲಿಯಾ, ಡೆನ್ಮಾರ್ಕ್, ನ್ಯೂಜಿಲೆಂಡ್ ಮುಂತಾದ ಯೂರೋಪಿಯನ್ ದೇಶಗಳ ಡೈರಿ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಲು ಅಮೂಲ್ ಹೆಸರಿನ ಮರೆಯಲ್ಲಿ ನಡೆಯುತ್ತಿರುವ ಬಹು ದೊಡ್ಡ ಹುನ್ನಾರವನ್ನು ಹಿಮ್ಮೆಟ್ಟಿಸಬೇಕೆಂದು ಕರ್ನಾಟಕ ಪ್ರಾಂತರೈತ ಸಂಘ (KPRS) ರಾಜ್ಯದ ರೈತಾಪಿ ಸಮುದಾಯ, ಸಹಕಾರಿ ಸಮುದಾಯ ಹಾಗೂ ನಾಡಿನ ಜನತೆಯಲ್ಲಿ ವಿನಂತಿಸಿದೆ.
ಮುಂದುವರಿದು, ಲಾಭದಾಯಕ ದರವನ್ನು ನಿಗದಿಪಡಿಸುವಂತೆ ,ಸಹಕಾರಿ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸುವಂತೆ ನಿರಂತರವಾಗಿ ರಾಜ್ಯದ ಹಾಲು ಉತ್ಪಾದಕರು ಪ್ರತಿಭಟನೆ-ಹೋರಾಟಗಳನ್ನು ನಡೆಸಿ ಆಗ್ರಹಿಸಿದ್ದರೂ ನಿರ್ಲಕ್ಷಿಸಿದ್ದ ಬಿಜೆಪಿ ನೇತೃತ್ವದ ರಾಜ್ಯ, ಕೇಂದ್ರ ಸರ್ಕಾರಗಳು ಕೆಎಂಎಫ್ ನ 16 ಜಿಲ್ಲಾ ಹಾಲು ಒಕ್ಕೂಟಗಳ ಮಾರುಕಟ್ಟೆ ಕಸಿಯಲು ಟೊಂಕ ಕಟ್ಟಿ ನಿಂತಿರುವುದು ಹಾಗೂ ಚುನಾವಣಾ ಸಂದರ್ಭದಲ್ಲೂ ನಿರ್ಲಜ್ಜವಾಗಿ ಸಮರ್ಥಿಸುತ್ತಿರುವುದು ಅತ್ಯಂತ ನಾಚೀಕೆಗೇಡು ಮಾತ್ರವಲ್ಲ ರೈತರನ್ನು ನಾಶ ಮಾಡುವ ಸರ್ವಾಧಿಕಾರಿ ಠೇಂಕಾರ ಎಂದು ಸಮಿತಿ ಟೀಕಿಸಿದೆ.
ಭಾರತದ ಡೈರಿ ಉತ್ಪನ್ನಗಳ ಮಾರುಕಟ್ಟೆ ಯ ಒಟ್ಟು ಗಾತ್ರ ಸುಮಾರು 12 ಲಕ್ಷ ಕೋಟಿ ರೂ ನಷ್ಟಿದೆ. ದೇಶದ ಎರಡು ಬೃಹತ್ ಡೈರಿ ಸಹಕಾರಿ ಸಂಸ್ಥೆಗಳ ವಹಿವಾಟು ಸುಮಾರು ಅರ್ದ ಲಕ್ಷ ಕೋಟಿ ಯಷ್ಟು ಮಾತ್ರ ಇದೆ. ದೇಶೀಯ ಸಹಕಾರಿ ಹೈನುಗಾರಿಕೆ ಬೆಳವಣಿಗೆಗೆ ಇಷ್ಟು ವಿಫುಲ ವಾದ ಅವಕಾಶಗಳಿದ್ದರೂ ವಹಿವಾಟು ಗಾತ್ರದಲ್ಲಿ ಸಣ್ಣದಾಗಿರುವ ಕೆಎಂಎಫ್ ನಂತಹ ಸಹಕಾರಿ ಸಂಸ್ಥೆಗಳನ್ನು ನಾಶ ಮಾಡಿ ಕೇಂದ್ರೀಕರಣವನ್ನು ಉತ್ತೇಜಿಸುವುದು ಹಾಗೂ ಕಾರ್ಪೋರೇಟೀಕರಣ ಸಾಧಿಸುವುದು ಗ್ರಾಮೀಣ ನಿರುದ್ಯೋಗ ಮತ್ತು ಬಡತನವನ್ನು ತೀವ್ರಗೊಳಿಸುತ್ತದೆ ಹಾಗೂ ವಲಸೆ ಮತ್ತು ಆತ್ಮಹತ್ಯೆಗಳನ್ನು ಹೆಚ್ಚಿಸುತ್ತದೆ. ದೊಡ್ಡದಾಗಿ ಆತ್ಮ ನಿರ್ಭರತೆ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುವ ಬಿಜೆಪಿ ಸರ್ಕಾರ , ಕೃಷಿ ಉತ್ಪನ್ನಗಳ ಖಾತರಿ ಖರೀದಿಯ ಮಾದರಿ ವ್ಯವಸ್ಥೆಯನ್ನು ನಾಶ ಮಾಡುತ್ತಿದೆ .ಈ ಬಗ್ಗೆ ರಾಜ್ಯದ ಜನರಲ್ಲಿ ವ್ಯಾಪಕ ಪ್ರಚಾರಾಂದೋಲನ ನಡೆಸಲಾಗುವುದು ಎಂದು ತಿಳಿಸಿದೆ.
ಇದನ್ನೂ ಓದಿ : ಬೆಂಗಳೂರು ಮಾರುಕಟ್ಟೆಯಲ್ಲಿ ಅಮುಲ್ ವಿರುದ್ದ ನಂದಿನಿ ಉಳಿಸಲು #SaveNandini ಅಭಿಯಾನ
ಜಾನುವಾರು ಸಂರಕ್ಷಣೆ ಹೆಸರಿನಲ್ಲಿ ತಂದಿರುವ ಗೋ ಹತ್ಯೆ ನಿಷೇಧ ಕಾಯ್ದೆ 2020 ಹಾಗೂ ಬಹು ರಾಜ್ಯಗಳ ಸಹಕಾರಿ ಸಂಘಗಳ ತಿದ್ದುಪಡಿ ಕಾಯ್ದೆ 2022 , ಹೈನುಗಾರಿಕೆ ಮೇಲಿನ ಜಿಎಸ್ ಟಿ ಕ್ರಮಗಳು, ರೈತಾಪಿ ಹೈನುಗಾರಿಕೆ ಯನ್ನು ನಿರುತ್ಸಾಹಗೊಳಿಸುವ , ಕಾರ್ಪೋರೇಟೀಕರಣ ವನ್ನು ಉತ್ತೇಜಿಸುವ ಅಂಶಗಳನ್ನು ಒಳಗೊಂಡಿದೆ. ರಾಜ್ಯದಲ್ಲಿ ಹಾಗೂ ದೇಶದಲ್ಲಿ ಈಗಾಗಲೇ ರೈತರನ್ನು ಅಡ್ಡಗಟ್ಟಿ ಹಲ್ಲೆ ನಡೆಸುವ ,ಜೈಲಿಗೆ ತಳ್ಳುವ ಹಲವು ಪ್ರಕರಣಗಳು ವರದಿಯಾಗಿವೆ. ಮುಕ್ತವಾಗಿದ್ದ ಜಾನುವಾರು ಸಾಗಾಣಿಕೆ, ಸಾಂಪ್ರದಾಯಿಕ ದನಗಳ ಜಾತ್ರೆ ಗಳು ಹಲವು ನಿರ್ಬಂಧಗಳನ್ನು ಅನುಭವಿಸುತ್ತಿದ್ದು ಜಾನುವಾರು ಗಳ ಸಂಖ್ಯೆ ಹಾಗೂ ಹಾಲು ಉತ್ಪಾದನೆ ತೀವ್ರವಾಗಿ ಕುಸಿಯುತ್ತಿದೆ. ಅದೇ ಸಂದರ್ಭದಲ್ಲಿ ಜಾನುವಾರು ಮಾಂಸದ ರಪ್ತು ಉದ್ಯಮ ಬಹು ವೇಗವಾಗಿ ಬೆಳೆಯುತ್ತಿದೆ. ಕೃಷಿ ಹಾಗೂ ರೈತ ವಿರೋಧಿಯಾದ ಕೃಷಿ ಕಾಯ್ದೆಗಳನ್ನು ಹಾಗೂ ಸಹಕಾರಿ ತಿದ್ದುಪಡಿ ಕಾಯ್ದೆಗಳನ್ನು ರದ್ದುಪಡಿಸಬೇಕು , ಹೈನುಗಾರಿಕೆ ಮೇಲೆ ಹಾಕಿರುವ ಜಿಎಸ್ ಟಿ ರದ್ದುಪಡಿಸಬೇಕು ಮತ್ತು ರೈತರಿಂದ ಖರೀದಿಸುವ ಲೀಟರ್ ಹಾಲಿಗೆ ಕನಿಷ್ಠ 50 ರೂ ನಿಗದಿಪಡಿಸಬೇಕು ಸರ್ಕಾರವನ್ನು ಆಗ್ರಹಿಸಿದೆ.