ಕಾಂಗ್ರೆಸ್ 100 ದಿನದ ಆಡಳಿತ ಸಂಪೂರ್ಣ ವಿಫಲ: ಶಾಸಕ ಎಚ್.ಡಿ ರೇವಣ್ಣ ಆರೋಪ

ಸಕಲೇಶಪುರ: 100 ದಿನಗಳ ಕಾಲ ಆಡಳಿತ ನಡೆಸಿರುವ ಕಾಂಗ್ರೆಸ್ ಪಕ್ಷ ಜನರ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ ಎಂದು ಮಾಜಿ ಸಚಿವ, ಜೆಡಿಎಸ್‌ನ ಹಾಲಿ ಶಾಸಕ ಎಚ್.ಡಿ ರೇವಣ್ಣ ಆರೋಪಿಸಿದ್ದಾರೆ.

ಪಟ್ಟಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಆಡಳಿತಕ್ಕೆ ಬಂದು 100 ದಿನಗಳಾಗುತ್ತ ಬಂದಿದ್ದು, 100 ದಿನದಲ್ಲಿ 5 ಗ್ಯಾರಂಟಿಗಳನ್ನು ಕೊಡುತ್ತೇವೆ ಎಂದು ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಭರವಸೆ ಕೊಟ್ಟಿತ್ತು. ಚುನಾವಣೆ ಗ್ಯಾರಂಟಿ ಮೇಲೆ ಗೆದ್ದರೋ, ಜನಪ್ರಿಯತೆಯಲ್ಲಿ ಗೆದ್ದರೋ ಅಥವಾ ಬಿಜೆಪಿಯ ಆಡಳಿತ ವಿರೋಧಿ ಅಲೆಯಲ್ಲಿ ಗೆದ್ದರೋ ಅದರ ಬಗ್ಗೆ ನಾನು ಚರ್ಚೆ ಮಾಡಲು ಹೋಗುವುದಿಲ್ಲ. ಆದರೆ ಇದೀಗ ಕಾಂಗ್ರೆಸ್ ಆಡಳಿತ ಯಂತ್ರವನ್ನು ದುರುಪಯೋಗ ಮಾಡಿಕೊಂಡು ಸುಮಾರು ನಾಲ್ಕೈದು ಜಿಲ್ಲೆಗಳಿಂದ ಮಹಿಳೆಯರನ್ನು , ಅಂಗನವಾಡಿ ಕಾರ್ಯಕರ್ತೆಯರನ್ನು ಮೈಸೂರಿಗೆ ಕರೆಸಿಕೊಂಡು ತನ್ನ ವೈಪಲ್ಯವನ್ನು ಮರೆಮಾಚಲು ದೊಡ್ಡ ಕಾರ್ಯಕ್ರಮವನ್ನು ಆಯೋಜನೆ ಮಾಡುತ್ತಿದೆ ಎಂದರು.

ಇದನ್ನೂ ಓದಿ:ಕಾಡಾನೆ ದಾಳಿ ಪ್ರಕರಣ: ನ್ಯಾಯ ಕೇಳಿದ್ದಕ್ಕೆ ಪ್ರಕರಣ ದಾಖಲಿಸಿದ ಪೊಲೀಸರು!

ರಾಜ್ಯದಲ್ಲಿ ಕಾವೇರಿ ಸಮಸ್ಯೆ ಮಿತಿ ಮೀರಿದ್ದು ಸರ್ವ ಪಕ್ಷಗಳ ಮುಖಂಡರು ಹಾಗೂ ನೀರಾವರಿ ಸಮಿತಿಯ ಸಭೆಯನ್ನು ಕರೆಯುವ ಮೊದಲೇ ಹೇಮಾವತಿಯಿಂದ 11.5 ಟಿ.ಎಮ್.ಸಿ ನೀರನ್ನು ಬಿಟ್ಟಿದ್ದು ಎಷ್ಟು ಸರಿ? ಹೇಮಾವತಿ ನೀರನ್ನು ನಂಬಿಕೊಂಡು ಕೆಳ ಜಿಲ್ಲೆಗಳ ರೈತರು ಗದ್ದೆ ನಾಟಿ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆದಿದ್ದು ಇದೀಗ ರೈತರ ಬೆಳೆಗೆ ಸರ್ಕಾರ ನೀರು ಬಿಡದಿದ್ದರೆ ರೈತರು ಬೀದಿಗೆ ಬರುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. 20,000 ಸಾವಿರಕ್ಕೂ ಹೆಚ್ಚು ಖರ್ಚು ಮಾಡಿ ಬೆಳೆ ಬೆಳೆಯುವ ರೈತನಿಗೆ ಸರ್ಕಾರ 2000 ನೀಡುವ ಮುಖಾಂತರ ಮೂಗನ್ನು ಸವರಲಾಗುತ್ತಿದೆ. ರೈತರನ್ನು ಸರ್ಕಾರ ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದೆ. ಅಧಿಕಾರದ ಆಸೆಗಾಗಿ ಕಾಂಗ್ರೆಸ್ ತಮಿಳುನಾಡಿನ ಒಲೈಕೆ ಮಾಡಲು ಕಾವೇರಿ ನೀರನ್ನು ತಮಿಳುನಾಡಿಗೆ ಹರಿದು ಬಿಡುತ್ತಿದೆ ಎಂದು ಹೇಳಿದರು.

ಕಾಂಗ್ರೆಸ್ 135 ಶಾಸಕರನ್ನು ಹೊಂದಿದ್ದರು ಸಹ ಇನ್ನು ಹೆಚ್ಚಿನ ಅಧಿಕಾರಕ್ಕಾಗಿ ಕಳೆದ 20 ದಿನಗಳಿಂದ ವಿರೋಧ ಪಕ್ಷಗಳ ಶಾಸಕರನ್ನು ಹಾಗೂ ಮುಖಂಡರನ್ನು ಸೆಳೆಯಲು ಕಾಂಗ್ರೆಸ್ ಪ್ರಯತ್ನ ಮಾಡುತ್ತಿರುವುದು ಹಾಸ್ಯಾಸ್ಪದವಾಗಿದೆ. ಕ್ಷೇತ್ರದ ಅಭಿವೃದ್ದಿಗೆ ಹೆಚ್ಚಿನ ಅನುದಾನ ನೀಡುವ ಮುಖಾಂತರ ಶಾಸಕರನ್ನು ಸೆಳೆಯುವ ಕೆಲಸವನ್ನು ಮಾಡುತ್ತಿದೆ. ಆದರೆ ನಮ್ಮ ಪಕ್ಷದ ಯಾವ ಶಾಸಕರು ಹಾಗೂ ಮುಖಂಡರು ಕಾಂಗ್ರೆಸ್ ಸೇರ್ಪಡೆಯಾಗುವುದಿಲ್ಲ. ಹಿಂದೆ ಹಲವು ಬಾರಿ ಜೆಡಿಎಸ್ ಅಧಿಕಾರ ಕಳೆದುಕೊಂಡರು ಸಹ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ಮಾರ್ಗದರ್ಶನದಲ್ಲಿ ಪಕ್ಷ ಕಟ್ಟಲಾಗಿದೆ. ಈ ಚುನಾವಣೆಯಲ್ಲಿ ಸೋಲಾಗಿರುವುದು ನಿಜ ಸೋಲಿಗೆ ನಾವು ಅಂಜದೆ ಕುಮಾರಣ್ಣ ಹಾಗೂ ನಾವೆಲ್ಲಾ ಸೇರಿ ಪಕ್ಷವನ್ನು ಮುಂದಿನ ದಿನಗಳಲ್ಲಿ ಸದೃಡವಾಗಿ ಕಟ್ಟುತ್ತೇವೆ. ರಾಜ್ಯಕ್ಕೆ ಎರಡು ರಾಷ್ಟ್ರೀಯ ಪಕ್ಷಗಳಿಂದ ಯಾವುದೆ ನ್ಯಾಯ ದೊರಕುವುದಿಲ್ಲ. ಜೆಡಿಎಸ್‌ನಿಂದ ಮಾತ್ರ ರಾಜ್ಯಕ್ಕೆ ನ್ಯಾಯ ದೊರಕುತ್ತದೆ ಎಂದರು.

ರಾಜ್ಯ ಸರ್ಕಾರ ಜಿಲ್ಲೆಯನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಬೇಕು ಹಾಗೂ ರೈತರಿಗೆ ಆಗಿರುವ ಬೆಳೆನಷ್ಟಕ್ಕೆ ಪರಿಹಾರ ಕೊಡಲು ಮುಂದಾಗಬೇಕು. ರಾಜ್ಯ ಸರ್ಕಾರ ಗ್ಯಾರಂಟಿಗಳನ್ನು ಏನಾದರು ಕೊಟ್ಟುಕೊಳ್ಳಲಿ, ಅದು ಜನರ ತೆರಿಗೆಯಿಂದನೆ ತಾನೆ ಕೊಡುವುದು. ಸರ್ಕಾರ ಬೇಕಾಬಿಟ್ಟಿ ಗ್ಯಾರಂಟಿಗಳನ್ನು ಕೊಡುವ ಬದಲು ಶಿಕ್ಷಣಕ್ಕೆ ಆದ್ಯತೆ ಕೊಡಲಿ, ಇಂದು ಸರ್ಕಾರಿ ಶಾಲೆಗಳು ಮುಚ್ಚುವ ಪರಿಸ್ಥಿತಿ ಇದೆ. ಶಿಕ್ಷಣಕ್ಕೆ ಒತ್ತು ಕೊಡಲು ಮುಂದಾಗಬೇಕು ಎಂದರು.

ಈ ಸಂಧರ್ಭದಲ್ಲಿ ಮಾಜಿ ಶಾಸಕ ಎಚ್.ಕೆ ಕುಮಾರಸ್ವಾಮಿ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಬಾಳ್ಳು ಜಗನ್ನಾಥ್, ತಾಲೂಕು ಜೆಡಿಎಸ್ ಅಧ್ಯಕ್ಷ ಕೆ.ಎಲ್ ಸೋಮಶೇಖರ್, ಜೆಡಿಎಸ್ ಮುಖಂಡರುಗಳಾದ ಸಚ್ಚಿನ್ ಪ್ರಸಾದ್, ಸಬಾ ಭಾಸ್ಕರ್ ಹಾಜರಿದ್ದರು.

Donate Janashakthi Media

Leave a Reply

Your email address will not be published. Required fields are marked *