ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಪುತ್ರ ಹಾಗೂ ಸೊರಬ ಕ್ಷೇತ್ರದ ಮಾಜಿ ಶಾಸಕ ಮಧು ಬಂಗಾರಪ್ಪ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಳ್ಳುವ ಮೂಲಕ ಸಕ್ರಿಯ ರಾಜಕಾರಣಕ್ಕೆ ಮತ್ತೆ ಧುಮುಖಿದ್ದಾರೆ. ಜೆಡಿಎಸ್ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು.
ಇಂದು ಹುಬ್ಬಳ್ಳಿಯ ಗೋಕುಲ್ ಗಾರ್ಡನ್‌ನಲ್ಲಿ ಕರ್ನಾಟಕ ಕಾಂಗ್ರೆಸ್ ವಿಭಾಗದ ಸಭೆ ನಡೆಯಿತು. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಮುಂತಾದ ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು.
ಇದನ್ನು ಓದಿ: ಸಿದ್ಧರಾಮಯ್ಯ ಭೇಟಿ ಮಾಡಿದ ಮಧು ಬಂಗಾರಪ್ಪ
‘ಕಾಂಗ್ರೆಸ್ ಪಕ್ಷಕ್ಕೆ ನನ್ನ ಶಕ್ತಿಯನ್ನೆಲ್ಲಾ ಧಾರೆಯೆರೆವೆ. ತಂದೆ ಎಸ್. ಬಂಗಾರಪ್ಪ ಅವರ ಹೆಸರನ್ನು ಉಳಿಸುವಂತಹ ಕೆಲಸ ಮಾಡುವೆ’ ಎಂದು ಮಧು ಬಂಗಾರಪ್ಪ ಭರವಸೆ ನೀಡಿ ಪಕ್ಷಕ್ಕೆ ಸೇರಿದರು. ಅವರೊಂದಿಗೆ ಅವರ ಬೆಂಬಲಿಗರು ಸೇರ್ಪಡೆಗೊಂಡರು. ಕಾಂಗ್ರೆಸ್ ಬಾವುಟವನ್ನು ನೀಡುವ ಮೂಲಕ ಹಿರಿಯ ನಾಯಕರು ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು. ಧಾರವಾಡ, ಹುಬ್ಬಳ್ಳಿಯ ಕೆಲವು ನಾಯಕರು ಸಹ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ‘ಮಧು ಕಾಂಗ್ರೆಸ್ ಸೇರ್ಪಡೆ ಸಂದರ್ಭದಲ್ಲೇ ಶಿವಮೊಗ್ಗದಲ್ಲಿ ಬಿಜೆಪಿ ನಾಯಕ ಬಿ.ಎಸ್. ಯಡಿಯೂರಪ್ಪ ಅವರ ರಾಜಕೀಯ ಕಾಲ ಮುಗಿಯುತ್ತಾ ಬಂದಿದೆ. ತಂದೆಯ ವಾರಸುದಾರನಾಗಿ, ಭವಿಷ್ಯದ ನಾಯಕನಾಗಿ ಮಧು ಬೆಳೆಯಬೇಕು. ರಾಜ್ಯ ಸುತ್ತಿ ಪಕ್ಷವನ್ನು ಸಂಘಟಿಸಬೇಕು. ಎಸ್. ಬಂಗಾರಪ್ಪ ಅವರಿಂದ ಪಕ್ಷಕ್ಕೆ ಆಗಿದ್ದ ನಷ್ಟವನ್ನು ನೀವು ತುಂಬಬೇಕು’ ಎಂದು ಸಲಹೆ ನೀಡಿದರು.
2021ರ ಮಾರ್ಚ್‌ನಲ್ಲಿಯೇ ಮಧು ಬಂಗಾರಪ್ಪ ಕಾಂಗ್ರೆಸ್ ಸೇರುವುದಾಗಿ ಘೋಷಣೆ ಮಾಡಿದ್ದರು. ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್ ಭೇಟಿಯಾಗಿ ಈ ಕುರಿತು ಚರ್ಚೆಯನ್ನು ನಡೆಸಿದ್ದರು. ಆದರೆ ಕೋವಿಡ್ ಪರಿಸ್ಥಿತಿಯ ಕಾರಣದಿಂದಾಗಿ ಮಧು ಬಂಗಾರಪ್ಪ ಅಧಿಕೃತವಾಗಿ ಕಾಂಗ್ರೆಸ್ ಪಕ್ಷವನ್ನು ಸೇರಿರಲಿಲ್ಲ.
ಮಧು ಬಂಗಾರಪ್ಪ 2013ರ ವಿಧಾನಸಭೆ ಚುನಾವಣೆಯಲ್ಲಿ ಸೊರಬ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದರು. 2018ರ ಚುನಾವಣೆಯಲ್ಲಿ ಸಹೋದರ ಮತ್ತು ಬಿಜೆಪಿ ಅಭ್ಯರ್ಥಿ ಕುಮಾರ್ ಬಂಗಾರಪ್ಪ ವಿರುದ್ಧ ಸೋಲು ಕಂಡರು. ಈಗ ಜೆಡಿಎಸ್ ಪಕ್ಷ ತೊರೆದು ಈಗ ಕಾಂಗ್ರೆಸ್ ಪಕ್ಷಕ್ಕೆ ಮಧು ಬಂಗಾರಪ್ಪ ಸೇರ್ಪಡೆಗೊಂಡದಿದ್ದಾರೆ.
2018ರ ವಿಧಾನಸಭೆ ಚುನಾವಣೆ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು. ಮಧು ಬಂಗಾರಪ್ಪ 2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಒಮ್ಮತದ ಶಿವಮೊಗ್ಗ ಕ್ಷೇತ್ರದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಬಿಜೆಪಿಯ ಬಿ. ವೈ. ರಾಘವೇಂದ್ರ ವಿರುದ್ಧ ಸೋಲುಂಡ ಮಧು ಬಂಗಾರಪ್ಪ ಜೆಡಿಎಸ್ ಪಕ್ಷದ ಚಟುವಟಿಕೆಗಳಿಂದ ದೂರವಾಗಿದ್ದರು. ಈಗ ಕಾಂಗ್ರೆಸ್ ಸೇರಿದ್ದಾರೆ.
ಮಧು ಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆಯಿಂದಾಗಿ ಸೊರಬ ಕ್ಷೇತ್ರದ ರಾಜಕೀಯ ಚಿತ್ರಣ ಬದಲಾಗಿದೆ. 2018ರ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ನಲ್ಲಿದ್ದ ಕುಮಾರ್ ಬಂಗಾರಪ್ಪ ಬಿಜೆಪಿ ಶಾಸಕರಾದರು. ಈಗ ಸಹೋದರರಿಬ್ಬರು ರಾಷ್ಟ್ರೀಯ ಪಕ್ಷವನ್ನು ಪ್ರತಿನಿಧಿಸುತ್ತಿದ್ದಾರೆ. ಇದರಿಂದ ಸೊರಬ ಕ್ಷೇತ್ರ ಹಾಗೂ ಶಿವಮೊಗ್ಗ ಜಿಲ್ಲೆಯ ರಾಜಕೀಯ ಚಿತ್ರಣ ಬದಲಾಗಿದೆ. ಜಿಲ್ಲೆ ವಿಧಾನಸಭಾ ಕ್ಷೇತ್ರಗಳಲ್ಲಿ ಭದ್ರಾವತಿ ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್ ಪಕ್ಷ ಜಯಗಳಿಸಿದೆ.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್, ಈಶ್ವರ ಖಂಡ್ರೆ, ವಿಧಾನ ಪರಿಷತ್ ವಿರೋಧ ಪಕ್ಷದ ಮುಖಂಡ ಎಸ್.ಆರ್. ಪಾಟೀಲ, ಶಾಸಕರಾದ ಪ್ರಸಾದ ಅಬ್ಬಯ್ಯ, ಕುಸುಮಾವತಿ ಶಿವಳ್ಳಿ, ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ, ಮುಖಂಡರಾದ ಕೆ.ಎಸ್. ಮುನಿಯಪ್ಪ, ವೀರಣ್ಣ ಮತ್ತಿಕಟ್ಟಿ, ವಿ.ಆರ್. ಸುದರ್ಶನ್, ಐ.ಜಿ. ಸನದಿ, ಹಿಂಡಸಗೇರಿ, ಭೀಮಣ್ಣ ನಾಯ್ಕ, ಅಲ್ಲಂ ವೀರಭದ್ರಪ್ಪ ಮುಂತಾದವರ ಇದ್ದರು.