ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೇರಿ 100 ದಿನಗಳು ಕಳೆದು ಹೋಗಿವೆ. ಪಕ್ಷವೂ ಅಧಿಕಾರಕ್ಕೆ ಬರಲು ದಲಿತ, ಹಿಂದಿಳಿದ ವರ್ಗ ಅದರಲ್ಲೂ ಮುಖ್ಯವಾಗಿ ಅಲ್ಪಸಂಖ್ಯಾತರು ಮುಖ್ಯ ಕಾರಣ ಎಂದು ರಾಜ್ಯದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಸೇರಿದಂತೆ ಸರ್ಕಾರದ ಸಚಿವ – ಶಾಸಕರು ಎಲ್ಲಾ ಕಡೆಗಳಲ್ಲೂ ಹೇಳಿಕೊಂಡು ತಿರುಗಾಡುತ್ತಿದ್ದಾರೆ. ತಮ್ಮದು ಬಿಜೆಪಿಗೆ ಪರ್ಯಾಯವಾದ ಸರ್ಕಾರ ಎಂದು ಹೇಳುತ್ತಿರುವ ಕಾಂಗ್ರೆಸ್ ಸರ್ಕಾರ ಬಿಜೆಪಿ ನೀತಿಯನ್ನೆ ಮುಂದುವರೆಸಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಕನ್ನ ಕೊರೆದಿದೆ.
ಕಾಂಗ್ರೆಸ್ – ಜೆಡಿಎಸ್ ಸಮ್ಮಿಶ್ರ ಸರ್ಕಾರವಿದ್ದಾಗ ಎಂಫಿಲ್ ಮತ್ತು ಪಿಹೆಚ್ಡಿ ಮಾಡುತ್ತಿರುವ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಜೆಆರ್ಎಫ್ ಮಾದರಿಯಲ್ಲಿ ಫೆಲೋಶಿಪ್ಗಳನ್ನು ಜಾರಿಗೆ ತಂದಿತ್ತು. ಅದರಂತೆ ಪಿಎಚ್ಡಿ (3 ವರ್ಷ) ಮತ್ತು ಎಂ.ಫಿಲ್ (2 ವರ್ಷ) ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು 25,000 ರೂ. ಮತ್ತು ನಿರ್ವಹಣಾ ವೆಚ್ಚ ವರ್ಷಕ್ಕೆ ಒಂದು ಬಾರಿಗೆ 10,000 ರೂ.ಗಳಂತೆ ಪ್ರತಿ ವರ್ಷಕ್ಕೆ ಒಟ್ಟು 3.10 ಲಕ್ಷ ರೂ.ಗಳನ್ನು ನೀಡಲಾಗುತ್ತಿತ್ತು.
ಇದನ್ನೂ ಓದಿ: ಚೈತ್ರಾ ಕುಂದಾಪುರ ಗ್ಯಾಂಗ್ ಮಾದರಿಯಲ್ಲೇ ‘ಟಿಕೆಟ್ ಹೆಸರಲ್ಲಿ’ ವಂಚನೆ!
ಅದಾಗ್ಯೂ, ಈ ನಡುವೆ ಸಮ್ಮಿಶ್ರ ಸರ್ಕಾರ ಬಿದ್ದು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ 25 ಸಾವಿರ ರೂ.ಬದಲಾಗಿ ಪ್ರತಿ ವಿದ್ಯಾರ್ಥಿಗಳಿಗೆ ಕೇವಲ 8,333 ರೂ.ಗೆ ಇಳಿಸಿತ್ತು. ಆದರೆ ಈ ವೇಳೆ ಸಂಶೋಧನಾ ವಿದ್ಯಾರ್ಥಿಗಳು ಜೆಡಿಎಸ್ ನೇತೃತ್ವದಲ್ಲಿ ಹೋರಾಟ ನಡೆಸಿದ್ದರು. ಈ ವೇಳೆ ಹೋರಾಟಕ್ಕೆ ಮಣಿದಿದ್ದ ಬಿಜೆಪಿ ಸರ್ಕಾರ ಹಿಂದಿನ ಆದೇಶದಂತೆ ಫೆಲೋಶಿಪ್ ನೀಡುವುದಾಗಿ ಹೇಳಿತ್ತು. ಹಾಗೂ ಸಂಶೋಧನಾರ್ಥಿಗಳಿಗೆ ಅದರಂತೆ ಸರ್ಕಾರ ಹಣವನ್ನೂ ನೀಡಿತ್ತು ಎಂದು ವರದಿಯಾಗಿದೆ.
ಈ ನಡುವೆ 2022ರ ಆಗಸ್ಟ್ನಲ್ಲಿ ಮತ್ತೆ ಆದೇಶವೊಂದನ್ನು ಹೊರಡಿಸಿದ್ದ ಬಿಜೆಪಿ ಸರ್ಕಾರ, “2೦22-23ನೇ ಸಾಲಿನ ಪಿಎಚ್ಡಿ ಮತ್ತು ಎಮ್ಫಿಲ್ ವಿದ್ಯಾರ್ಥಿಗಳಿಗೆ 2022-23ನೇ ಸಾಲಿನಿಂದ ಮುಂದಿನ ವರ್ಷಗಳಿಗೆ ಪ್ರತಿ ತಿಂಗಳು ರೂ. 10,000 ನೀಡಬೇಕು” ಎಂದು ಹೇಳಿತ್ತು. ಈ ನಡುವೆ ಹೋರಾಟಗಳಾಗಿತ್ತಾದರೂ ಯಾವುದೆ ಪ್ರಯೋಜನ ಆಗಲಿಲ್ಲ. ಅದಾಗಿಯೂ ಹೊಸ ಸರ್ಕಾರ ಬಂದರೂ ಬಿಜೆಪಿಯ ಅಲ್ಪಸಂಖ್ಯಾತ ದ್ವೇಷ ರಾಜಕಾರಣವನ್ನು ಹೊಸ ಕಾಂಗ್ರೆಸ್ ಸರ್ಕಾರ ಕೂಡಾ ಮುಂದುವರೆಸಿದ್ದು ಸಂಶೋಧನಾ ವಿದ್ಯಾರ್ಥಿಗಳನ್ನು ಕಂಗೆಡಿಸಿದ.
ಈ ಬಗ್ಗೆ ಜನಶಕ್ತಿ ಮೀಡಿಯಾ ಜೊತೆಗೆ ಮಾತನಾಡಿದ ಸಂಶೋಧನಾ ವಿದ್ಯಾರ್ಥಿನಿ ರೆಹನಾ, “ರಾಜ್ಯದಲ್ಲಿ ಎಣಿಕೆ ಮಾಡಿದರೂ ಒಟ್ಟು 200 ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಪಿಹೆಚ್ಡಿ ಮಾಡುತ್ತಿಲ್ಲ. ನಮ್ಮ ಫೀಸ್, ಸಂಶೋಧನೆ ಮತ್ತು ಫೀಲ್ಡ್ ವರ್ಕ್ಗಳಿಗೆ 25 ಸಾವಿರವೇ ಸಾಕಾಗುವುದಿಲ್ಲ. ಪರಿಸ್ಥಿತಿ ಹೀಗಿರುವಾಗ ಕಾಂಗ್ರೆಸ್ ಸರ್ಕಾರ ಕೂಡಾ ಬಿಜೆಪಿಯ ದ್ವೇಷ ರಾಜಕಾರಣವನ್ನು ಮುಂದುವರೆಸಿದರೆ ಹೇಗೆ?” ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಕಲ್ಲಿದ್ದಲು ಬಿಕ್ಕಟ್ಟು ಎಂಬುದು ಒಂದು ಹಗರಣವಲ್ಲದೆ ಬೇರೇನೂ ಅಲ್ಲ -ವಿದ್ಯುತ್ ಮತ್ತು ಕಲ್ಲಿದ್ದಲು ಕಾರ್ಮಿಕರ ಸಂಘಟನೆಗಳ ಆರೋಪ
“ಹಿಂದಿನ ಸರ್ಕಾರ ಮಾಡಿರುವ ತಪ್ಪುಗಳನ್ನು ಈ ಸರ್ಕಾರ ಸರಿ ಮಾಡುತ್ತದೆ ಎಂದು ಭಾವಿಸಿದ್ದೆವು. ಕಳೆದ ಒಂದೆರೆಡು ತಿಂಗಳಿನಿಂದ ಅಲ್ಪಸಂಖ್ಯಾತ ಇಲಾಖೆಯಿಂದ ಹಿಡಿದು ಎಲ್ಲಾ ಅಧಿಕಾರಿಗಳನ್ನು ಮಾತನಾಡುತ್ತಿದ್ದೇವೆ. ಆದರೆ ಯಾರೂ ಕೂಡಾ ಇದರ ಬಗ್ಗೆ ಸಕಾರಾತ್ಮಕವಾಗಿ ಮಾತನಾಡುತ್ತಿಲ್ಲ. ಹೀಗಾದರೆ ನಮ್ಮಂತಹ ಬಡವಿದ್ಯಾರ್ಥಿಗಳು ಶಿಕ್ಷಣ ಮುಂದುವರೆಸುವುದು ಹೇಗೆ? ಹಿಂದಿನ ಸರ್ಕಾರಕ್ಕೂ, ಈಗಿನ ಸರ್ಕಾರಕ್ಕೂ ಹಾಗಾದರೆ ವ್ಯತ್ಯಾಸವೇನು?” ಎಂದು ಕೇಳುತ್ತಾರೆ ಸಂಶೋಧನಾ ವಿದ್ಯಾರ್ಥಿನಿ ರೆಹನಾ.
ಜನಶಕ್ತಿ ಜೊತೆಗೆ ಮಾತನಾಡಿದ ಅಲ್ಪಸಂಖ್ಯಾತ ನಿರ್ದೇಶನಾಲಯದ ನಿರ್ದೇಶಕರಾದ ಜೀಲಾನಿ ಎಚ್ ಅವರು, “ಸಧ್ಯಕ್ಕೆ, ಸರ್ಕಾರ ಆದೇಶವನ್ನೆ(ಪ್ರತಿ ತಿಂಗಳು 10 ಸಾವಿರ) ಪಾಲಿಸುತ್ತಿದ್ದೇವೆ. ಇದೀಗ ವಿದ್ಯಾರ್ಥಿಗಳು ಫೆಲೋಶಿಪ್ ಹೆಚ್ಚಿಸುವ ಬಗ್ಗೆ ಮನವಿ ಮಾಡುತ್ತಿದ್ದಾರೆ. ಈ ಆಗ್ರಹವನ್ನು ನಾವು ಸರ್ಕಾರಕ್ಕೆ ಸಲ್ಲಿಸುತ್ತೇವೆ. ಮುಂದಿನದು ಸರ್ಕಾರದ ತೀರ್ಮಾನಕ್ಕೆ ಬಿಟ್ಟಿದ್ದು” ಎಂದು ಹೇಳಿದ್ದಾರೆ. ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಬಿ.ಜೆಡ್. ಜಮೀರ್ ಅಹ್ಮದ್ ಅವರಿಗೆ ಈ ಬಗ್ಗೆ ಪ್ರತಿಕ್ರಿಯೆಗೆ ಸಂಪರ್ಕಿಸಿದ್ದು ಅವರು ಸಂಪರ್ಕಕ್ಕೆ ಲಭ್ಯವಾಗಿಲ್ಲ.
ಮೂಲಕಗಳ ಪ್ರಕಾರ, ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಫೆಲೋಶಿಪ್ ಬಗ್ಗೆ ಇಲಾಖೆಯಲ್ಲಿ ಸಭೆ ನಡೆದಿದೆ ಎಂದು ತಿಳಿದು ಬಂದಿದೆ. ಸಭೆಯಲ್ಲಿ, ವಿದ್ಯಾರ್ಥಿಗಳು ಫೇಲೋಶಿಪ್ ಹೆಚ್ಚಳ ಮಾಡುವ ಬಗ್ಗೆ ಒತ್ತಡ ಹೇರಿಲ್ಲವೆಂದರೆ, ಅದನ್ನು ಹಾಗೆ ಮುಂದುವರೆಸುವುದು ಅಥವಾ ಒತ್ತಡ ಬಂದರೆ ನಂತರ ನೋಡಿಕೊಳ್ಳೋಣ ಎಂಬಂತಹ ಮಾತುಕತೆಗಳು ಆಗಿವೆ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ಜನಶಕ್ತಿ ಮೀಡಿಯಾಗೆ ಹೇಳಿದ್ದಾರೆ.
ಇದನ್ನೂ ಓದಿ: ʼಗ್ಯಾರಂಟಿʼಯಲ್ಲಿ ನೂರು ದಿನ ! ಐದು ವರ್ಷ ಕಳೆದರೂ ಅಚ್ಚರಿಯಿಲ್ಲ!!
ಈ ಬಗ್ಗೆ ಜನಶಕ್ತಿ ಮೀಡಿಯಾ ಜೊತೆಗೆ ಮಾತನಾಡಿದ ಜಾತ್ಯಾತೀತ ಜನತಾದಳದ ಕಾರ್ಯಾಧ್ಯಕ್ಷೆ ನಜ್ಮಾ ನಜೀರ್ ಚಿಕ್ಕನೇರಳೆ, “ಬಿಜೆಪಿ ಸರ್ಕಾರದ ದ್ವೇಷ ರಾಜಕಾರಣವನ್ನು ಕಾಂಗ್ರೆಸ್ ಮುಂದುವರೆಸುತ್ತಿದೆ. ಈ ಬಗ್ಗೆ ಪಕ್ಷದ ನೇತೃತ್ವದೊಂದಿಗೆ ನಾನು ಸಂಶೋಧನಾ ವಿದ್ಯಾರ್ಥಗಳ ಜೊತೆಗೂಡಿ ಬಿಜೆಪಿ ಸರ್ಕಾರದ ವಿರುದ್ಧ ನಿರಂತರ ಹೋರಾಟ ಮಾಡಿದ್ದೆ. ನಮ್ಮ ಹೋರಾಟಕ್ಕೆ ಬಿಜೆಪಿ ಸರ್ಕಾರ ಮಣಿದಿತ್ತು. ನಂತರದ ದಿನಗಳಲ್ಲಿ ಮತ್ತೆ ತನ್ನ ಚಾಳಿ ಮುಂದುವರೆಸಿತ್ತು, ಆದರೆ ಕಾಂಗ್ರೆಸ್ ಸರ್ಕಾರ ಕೂಡಾ ಅದನ್ನೆ ಮುಂದುವರೆಸಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಈಗಲೂ ರಾಜ್ಯದ ಎಲ್ಲಾ ಸಂಶೋಧನಾ ವಿದ್ಯಾರ್ಥಿಗಳು ನನ್ನೊಂದಿಗೆ ಸಂಪರ್ಕದಲ್ಲಿದ್ದಾರೆ. ಅವರನ್ನು ಸಂಘಟಿಸಿ ಅಧಿಕಾರಿಗಳು ಮತ್ತು ಸಚಿವರ ಜೊತೆಗೆ ಸಮಸ್ಯೆ ಇತ್ಯರ್ಥ ಮಾಡುವಂತೆ ಮನವಿ ಮಾಡುತ್ತೇವೆ. ನಮ್ಮ ಮನವಿಯನ್ನು ಪರಿಗಣಿಸಿಲ್ಲ ಎಂದಾದರೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಕೂಡಾ ಹೋರಾಟವನ್ನು ಮಾಡಲಿದ್ದೇವೆ” ಎಂದು ಹೇಳಿದರು.
ವಿಡಿಯೊ ನೋಡಿ: ಖಾಲಿ ಹುದ್ದೆಗಳಿಗೆ ನಿವೃತ್ತಿ ಹೊಂದಿದವರೇ ಮರು ನೇಮಕವಾದರೆ ಯುವಕರ ಗತಿ ಏನು? ಎಂ.ಎನ್ ವೇಣುಗೋಪಾಲ್ ಜೊತೆ ಮಾತುಕತೆ