ಬೆಂಗಳೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಳೆದ ವಿಧಾನಸಭೆ ಚುನಾವಣೆಯ ವೇಳೆ ಕೊಟ್ಟ ಭರವಸೆಯನ್ನು ಈಡೇರಿಸಲು ಮುಂದಾಗಿರುವ ರಾಜ್ಯ ಕಾಂಗ್ರೆಸ್ ಸರಕಾರ “ಗಿಗ್ ಕಾರ್ಮಿಕ’ರಿಗೆ ಸಾಮಾಜಿಕ ಭದ್ರತೆ ಒದಗಿಸಲು ತೀರ್ಮಾನಿಸಿದೆ. ಇದರಿಂದ ಅಮೆಜಾನ್, ಪ್ಲಿಪ್‌ಕಾರ್ಟ್, ಒಲಾ, ಊಬರ್, ಝೋಮ್ಯಾಟೋ, ಸ್ವಿಗ್ಗಿ ಮತ್ತಿತರ ಪ್ಲಾಟ್‌ಫಾರ್ಮ್ ಆಧಾರಿತ ಸೇವೆಗಳಲ್ಲಿ ತೊಡಗಿಸಿಕೊಂಡಿರುವ ಕಾರ್ಮಿಕರಿಗೆ ಅನುಕೂಲವಾಗಲಿದೆ.
ಬೆಂಗಳೂರು ಒಂದರಲ್ಲೇ 3.50 ಲಕ್ಷ ಗಿಗ್ ಕಾರ್ಮಿಕರು ಇರಬಹುದೆಂದು ಕಾರ್ಮಿಕ ಇಲಾಖೆ ಅಂದಾಜಿಸಿದೆ.
ಕಳೆದ ವರ್ಷ ರೂಪಿಸಲಾಗಿದ್ದ “ಕರ್ನಾಟಕ ಪ್ಲಾಟ್‌ಫಾರ್ಮ್ ಆಧಾರಿತ ಗಿಗ್ ಕಾರ್ಮಿಕರ (ಸಾಮಾಜಿಕ ಭದ್ರತೆ ಹಾಗೂ ಕಲ್ಯಾಣ) ವಿಧೇಯಕ-2024′ ಅನ್ನು ಅಧ್ಯಾದೇಶದ ಮೂಲಕ ಜಾರಿಗೆ ತರಲು ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ಸಚಿವ ಸಂಪುಟ ಸಭೆಯ ಬಳಿಕ ಸಂಸದೀಯ ವ್ಯವಹಾರ ಸಚಿವ ಎಚ್.ಕೆ. ಪಾಟೀಲ್ ತಿಳಿಸಿದರು.
ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ದಿಲ್ಲಿಗೆ ಭೇಟಿ ನೀಡಿದ್ದಾಗ ರಾಹುಲ್ ಗಾಂಧಿ ಜತೆಗೆ ಈ ವಿಷಯ ಕುರಿತು ಚರ್ಚಿಸಿದ್ದರು.
ಈಗಾಗಲೇ ರಾಜ್ಯದ ಗಿಗ್ ಕಾರ್ಮಿಕರಿಗಾಗಿ 2 ಲಕ್ಷ ರೂ. ಮೊತ್ತದ ಜೀವ ವಿಮೆ ಹಾಗೂ 2 ಲಕ್ಷ ರೂ. ಮೊತ್ತದ ಅಪಘಾತ ಪರಿಹಾರ ವಿಮೆ ಸೇರಿ ಒಟ್ಟು 4 ಲಕ್ಷ ರೂ. ಮೊತ್ತದ ವಿಮಾ ಯೋಜನೆಯನ್ನು ರಾಜ್ಯ ಸರಕಾರ ಜಾರಿಗೊಳಿಸಿದೆ.
ಈಗ ಮುಂದುವರಿದು ಅವರ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣಕ್ಕಾಗಿ ಕಾಯ್ದೆ ತರುತ್ತಿದೆ. ಕಳೆದ ವಿಧಾನಸಭೆ ಚುನಾವಣೆ ಪ್ರಚಾರದ ವೇಳೆ ರಾಹುಲ್ ಗಾಂಧಿ ಅವರು ಗಿಗ್ ಕಾರ್ಮಿಕರ ಜತೆ ಉಪಾಹಾರ ಸೇವಿಸಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಗಿಗ್ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯ “ಗ್ಯಾರಂಟಿ’ ಕೊಟ್ಟಿದ್ದರು.
ಜಾರಿ ಹೇಗೆ?
ಅಧ್ಯಾದೇಶವನ್ನು ರಾಜ್ಯಪಾಲರಿಗೆ ಕಳಿಸಿ ಕೊಡಲಾಗುತ್ತದೆ. ಇದರ ನಡುವೆಯೇ ಕಾರ್ಮಿಕ ಇಲಾಖೆ ಅಧಿಕಾರಿಗಳು ನಿಯಮಗಳನ್ನು ರೂಪಿಸಿಕೊಳ್ಳುತ್ತಾರೆ. ಸಾಧಕ-ಬಾಧಕಗಳ ಪರಿಶೀಲನೆ, ಆಕ್ಷೇಪಣೆ, ಸ್ಪಷ್ಟನೆಗಳನ್ನು ಆಲಿಸಿದ ಬಳಿಕ ಅವುಗಳನ್ನು ಅಂತಿಮಗೊಳಿಸಿ ಜಾರಿಗೆ ತರಲಾಗುತ್ತದೆ. ಈ ಪ್ರಕ್ರಿಯೆ ಕನಿಷ್ಠ 1 ತಿಂಗಳು ಹಿಡಿಯಬಹುದು ಎಂದು ಕಾರ್ಮಿಕ ಇಲಾಖೆ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕಾಯ್ದೆ ಜಾರಿಗೆ ಕಾರ್ಮಿಕ ಸಚಿವರ ಅಧ್ಯಕ್ಷತೆಯಲ್ಲಿ ಗಿಗ್ ಕಾರ್ಮಿಕರ ಕಲ್ಯಾಣ ಮಂಡಳಿ ಸ್ಥಾಪಿಸಲಾಗುತ್ತದೆ.
ಶೇ. 5ರಷ್ಟು ಸೆಸ್ ಸಂಗ್ರಹ
ಅಗ್ರಿಗೇಟರ್ ಹಾಗೂ ಪ್ಲಾಟ್‌ಫಾರ್ಮ್ದಾರರು (ಸೇವೆಗಳನ್ನು ಒದಗಿಸುವರು) ತಮ್ಮ ವ್ಯಾಪಾರ ಮತ್ತು ವಹಿವಾಟಿನ ಮೇಲೆ ಗಿಗ್ ಕಾರ್ಮಿಕರಿಗೆ ನೀಡುವ ಲಾಭಾಂಶ ಅಥವಾ ಕಮಿಷನ್ ರೂಪದಲ್ಲಿ ಪಾವತಿಸುವ ಒಟ್ಟು ಮೊತ್ತದಲ್ಲಿ ಕನಿಷ್ಠ ಶೇ. 1ರಿಂದ ಗರಿಷ್ಠ ಶೇ. 5ರಷ್ಟು ಸೆಸ್ ಸಂಗ್ರಹ ಮಾಡಿ ಅದನ್ನು ಗಿಗ್ ಕಾರ್ಮಿಕ ಕಲ್ಯಾಣ ನಿಧಿಗೆ ಜಮೆ ಮಾಡಬೇಕು. ಸೇವೆ ಮತ್ತು ವಹಿವಾಟು ಆಧರಿಸಿ ಕನಿಷ್ಠ ಮತ್ತು ಗರಿಷ್ಠ ಸೆಸ್ ಸ್ಲಾéಬ್‌ಗಳನ್ನು ನಿಗದಿಪಡಿಸಲಾಗುತ್ತದೆ. ಈ ನಿಧಿಯಲ್ಲಿ ಸಂಗ್ರಹವಾಗುವ ಹಣದಲ್ಲಿ ಗಿಗ್ ಕಾರ್ಮಿಕರ ಕಲ್ಯಾಣಕ್ಕಾಗಿ ಯೋಜನೆ ಮತ್ತು ಕಾರ್ಯಕ್ರಮಗಳನ್ನು ಜಾರಿಗೆ ತರಲಾಗುತ್ತದೆ. ಆಡಳಿತಾತ್ಮಕ ವೆಚ್ಚಕ್ಕಾಗಿ ಶೇ. 5ಕ್ಕಿಂತ ಹೆಚ್ಚು ಹಣವನ್ನು ಖರ್ಚು ಮಾಡುವಂತಿಲ್ಲ ಎಂದು ಮಸೂದೆಯಲ್ಲಿ ಹೇಳಲಾಗಿದೆ.
ಯಾರೆಲ್ಲ ಗಿಗ್ ಕಾರ್ಮಿಕರು?
ಪ್ಲಾಟ್‌ಫಾರ್ಮ್ ಆಧರಿತ ಸೇವೆಗಳಾದ ಅಮೆಜಾನ್, ಫ್ಲಿಪ್‌ಕಾರ್ಟ್, ಸ್ವಿಗ್ಗಿ, ಝೋಮ್ಯಾಟೋ, ಅಗ್ರಿಗೇಟರ್‌ಗಳಾದ ಓಲಾ, ಊಬರ್ ಸೇರಿ ರೈಡ್ ಶೇರಿಂಗ್ ಸರ್ವಿಸಸ್, ಫುಡ್ ಆಯಂಡ್ ಗ್ರಾಸರಿ ಡಿಲೆವರಿ ಸರ್ವಿಸಸ್, ಲಾಜಿಸ್ಟಿಕ್ ಸರ್ವಿಸಸ್, ಇ-ಮಾರ್ಕೆಟ್, ಹೆಲ್ತ್‌ಕೇರ್, ಟ್ರಾವೆಲ್ ಆಯಂಡ್ ಹಾಸ್ಪಿಟಾಲಿಟಿ, ಕಂಟೆಂಟ್ ಆಯಂಡ್ ಮೀಡಿಯಾ ಸರ್ವಿಸ್ ಒಟ್ಟು 8 ಸೇವೆಗಳಲ್ಲಿ ತೊಡಗಿಸಿಕೊಂಡವರು.
ಇದನ್ನೂ ನೋಡಿ: ಬದುಕನ್ನು ಕಿತ್ತುಕೊಂಡ ʼವೈಟ್ ಟಾಪಿಂಗ್ ಕಾಮಗಾರಿʼ! Janashakthi Media