ಡಾ. ಬಂಜಗೆರೆ ಜಯಪ್ರಕಾಶ್ ಅವರು ಅನುವಾದ ಮಾಡಿರುವ 2008ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ ಪಡೆದ, ಜಾನ್ ಪರ್ಕಿನ್ಸ್ ನ ಕೃತಿಯಾದ “ಪಾಪ ನಿವೇದನೆ” ಕೃತಿಯನ್ನು ಓದುವ ತುರ್ತು ಎಂದಿಗಿಂತ ಇಂದು ಹೆಚ್ಚಿದೆ. ವಿಶ್ವದ ದೊಡ್ಡಣ್ಣ ಎಂದು ಕರೆಸಿಕೊಳ್ಳಲು ಅಮೇರಿಕಾ ತೃತೀಯ ಜಗತ್ತಿನ ರಾಷ್ಟ್ರಗಳನ್ನು ಹೇಗೆ ಬಳಸಿಕೊಳ್ಳುತ್ತದೆ ಎಂಬುದನ್ನು ಈ ಕೃತಿ ಎಳೆ ಎಳೆಯಾಗಿ ಬಿಡಿಸಿಟ್ಟಿದೆ. ಪಾಪ
-ಪವಿತ್ರ ಎಸ್ , ಸಹಾಯಕ ಪ್ರಾಧ್ಯಾಪಕರು
ಎಕಾನಾಮಿಕ್ ಹಿಟ್ ಮನ್ ಎಂದು ಕರೆಸಿಕೊಳ್ಳುವ ಬಂಡವಾಳಶಾಹಿಯ ಏಜೆಂಟರು ತೃತೀಯ ಜಗತ್ತಿನ ರಾಷ್ಟ್ರಗಳನ್ನು ಸಾಲದ ಹುದಿಲಿನಲ್ಲಿ ಸಿಲುಕಿ ಇನ್ನೆಂದು ಹೊರಬರದಂತೆ ಮಾಡುತ್ತಾರೆ. ಈ ಕೆಲಸಗಳಿಗೆ ಎಕಾನಾಮಿಕ್ ಹಿಟ್ ಮನ್ ಗಳಿಗೆ ಕನಸ್ಸಲ್ಲೂ ಊಹಿಸಿದ ಸಂಬಳವನ್ನು ನೀಡುತ್ತಾರೆ. ಇವರ ಭವಿಷ್ಯದ ಮುಂದಾಲೋಚನೆಯ ಪರಿಣಾಮವೇ ಇಂದು ತೃತೀಯ ಜಗತ್ತಿನ ರಾಷ್ಟ್ರಗಳಲ್ಲಿ ಅಭಿವೃದ್ಧಿ ಎಂಬ ಹೆಸರಿನಲ್ಲಿ ನಡೆಯುತ್ತಿರುವ ಗುಲಾಮಿತನ, ನೆಲದ ಸಂಪನ್ಮೂಲಗಳನ್ನು ಬಳಸಿಕೊಂಡು ಧನಿಕರಾದ ಬಂಡವಾಳಶಾಹಿಗಳು ಮತ್ತು ಸಂಬಳಕ್ಕಾಗಿ ಕಷ್ಟಪಟ್ಟರು ಸರಿಯಾಗಿ ವೇತನ ಸಿಗದೆ ಪರದಾಡುವ ಕಾರ್ಮಿಕರು.
ಬಡ ರಾಷ್ಟ್ರಗಳ ಸಂಪತ್ತನ್ನು ತನ್ನ ಒಡಲಲ್ಲಿ ಶೇಖರಿಸಿ ಕೊಂಡಿರುವ ಅಮೇರಿಕಾ ಇಂದು ದೊಡ್ಡಣ್ಣನಂತೆ ಮೆರೆಯತ್ತಿದೆ. ಇದಕ್ಕಾಗಿ ಅಮೇರಿಕಾ ನಡೆದು ಬಂದಿರುವ ಹಾದಿಯಲ್ಲಿ ಮತ್ತೆಂದೂ ಹಸಿರು ಚಿಗುರುವುದಿಲ್ಲ ಎಂಬುದು ವಾಸ್ತವ. ಇದರಿಂದ ತೊಂದರೆಗೊಳಗಾಗಿ ಹಕ್ಕುಗಳನ್ನು ಕೇಳಲು ಬಡ ರಾಷ್ಟ್ರಗಳ ಜನರು ಆಯ್ದುಕೊಂಡಿರುವುದು ಕಮ್ಯುನಿಸಂ ಮತ್ತು ಟೆರರಿಸಂ. ಇವು ಕೆಟ್ಟವುಗಳೆಂದು ಅಭಿಪ್ರಾಯ ಮೂಡಿಸಿ ಅಭಿವೃದ್ಧಿಯ ಹೆಸರಿನಲ್ಲಿ ಬಡ ರಾಷ್ಟ್ರಗಳನ್ನು ಸುಲಿಗೆ ಮಾಡುವ ಅಮೇರಿಕಾದ ಕುತಂತ್ರ ಬುದ್ಧಿಗೆ ಸಹಕರಿಸುವವರನ್ನು ಸೃಷ್ಟಿಸಿಕೊಂಡು ಸಲೀಸಾಗಿ ಹೆಜ್ಜೆ ಹಾಕುವ ದೊಡ್ಡಣ್ಣನಿಗೆ ಗೊತ್ತಿಲ್ಲವೇ? ಕಮ್ಯುನಿಸಂ ಮತ್ತು ಟೆರರಿಸಂ ಅವರ ಕಾರ್ಯ ವಿಧಾನಗಳ ಫಲಿತಾಂಶಗಳೆಂದು. ಗೊತ್ತಿದ್ದರೂ ಅಮೇರಿಕಾ ಎಂದಿಗೂ ಒಪ್ಪಿಕೊಳ್ಳುವುದಿಲ್ಲ. ದೊಣ್ಣೆ ಯಾರು ಕೈಲಿರುತ್ತೋ ಅವನದೇ ಹೆಮ್ಮೆ ಎನ್ನುವ ಸೂತ್ರವನ್ನು ಅಮೇರಿಕಾ ನಂಬುತ್ತದೆ. ಪಾಪ
ಇದನ್ನೂ ಓದಿ: ಸತ್ತ ವ್ಯಕ್ತಿ ಎದ್ದು ಕೂರುವುದು ಹೇಗೆ?
ಅದಕ್ಕೆಂದೆ ಯಾವುದೇ ಬಡ ರಾಷ್ಟ್ರಗಳಲ್ಲಿ ಸಮಾಜವಾದಿ ಆಲೋಚನೆಗಳು ಮೊಳಕೆ ಹೊಡೆಯದಂತೆ ಕಠಿಣ ಪರಿಪಾಲನೆ ನಡೆಸಿದರು. ಹೊರಾಟಗಾರರು ಸಮಾಜದೊಂದಿಗೆ ಬೆರೆಯದಂತೆ ಮಾಡಿದರು. ಸತ್ಯಕ್ಕಾಗಿ ಹೋರಾಟ ಮಾಡುವ ಹೋರಾಟಗಾರರನ್ನು ಟೆರರಿಸ್ಟ್ ಗಳೆಂದು ಕರೆದರು. ಭಾರತದಲ್ಲಿ ನಕ್ಸಲೈಟ್ ಎಂದು ಕರೆದು ಸಮಾಜಕ್ಕೂ ಮತ್ತು ಅವರಿಗೂ ಕಂದಕ ಸೃಷ್ಟಿಯಾಗುವಂತೆ ಮಾಡಿದರು. ನೊಂದವರಿಗೆ ಸಹಾಯ ಮಾಡುವುದನ್ನು ಕರ್ತವ್ಯವನ್ನಾಗಿ ಭಾವಿಸಿದ್ದವರು ಟೆರರಿಸ್ಟ್ ಗಳಾಗಬೇಕಿಲ್ಲ. ಅದೇ ಸಮಯದಲ್ಲಿ ಕಮ್ಯುನಿಸ್ಟ್, ಸಮಾಜವಾದಿ ಕೂಡ ಆಗಬೇಕಿಲ್ಲ. ಇದಕ್ಕೆ ಪ್ರಶ್ನಿಸುವ, ಹೋರಾಟ ಮಾಡುವ ಮನೋಭಾವವಿದ್ದರೆ ಸಾಕು. ಇಂತಹ ಮನೋಭಾವದವರನ್ನು ಅಮೇರಿಕಾದ ಪ್ರಭುತ್ವ ಹೇಗೆಲ್ಲಾ ಹತ್ತಿಕ್ಕಿದೆ ಎಂಬುದಕ್ಕೆ ಇತಿಹಾಸ ಕಣ್ಮುಂದೆ ಇದೆ. ಪಾಪ
ಅಮೇರಿಕಾದ ಈ ಮನಸ್ಥಿತಿಗೆ ಕಾರಣವೇನು ಎಂದರೆ, ಅವರಿಗೆ ಅವರೇ ಬರೆದುಕೊಂಡ “ಮ್ಯಾನಿಫೆಸ್ಟ್ ಡೆಸ್ಟಿನಿ” ಎಂಬ ಕರಾರು ಪತ್ರ. ಈ ಜಗತ್ತಿನ ನೈಸರ್ಗಿಕ ಸಂಪನ್ಮೂಲಗಳೆಲ್ಲಾ ಅಧಿಕಾರಯುತವಾಗಿ ಅಮೇರಿಕಾಗೆ ಸೇರಿದ್ದು. ಉಳಿದ ದೇಶದ ಜನರು ಅದನ್ನು ಪೂರೈಸುವ ಪೂರೈಕೆದಾರರು ಎಂಬ ಮನಸ್ಥಿತಿ. ಜಗತ್ತನ್ನು ಇಷ್ಟು ನಾಶಗೊಳಿಸಲು ಕಾರಣವಾಗಿದೆ. ಪಾಪ
ಅಮೇರಿಕಾ ಕಾಲಿಡುವ ದೇಶಗಳಲ್ಲಿನ ಹೋರಾಟಗಾರರು ಆ ದೇಶದ ಅಧ್ಯಕ್ಷರಾಗಿ ಇನ್ನಿಲ್ಲದಂತೆ ಸಾವಿಗೀಡಾಗುತ್ತಾರೆ. “ಸ್ವಾತಂತ್ರ್ಯ ಹೋಮರ್ ಆಶಯ ಆ ಆಶಯವನ್ನು ಕೊಲ್ಲುವ ಕ್ಷಿಪಣಿ ಇನ್ನು ಕಂಡುಹಿಡಿಯಲ್ಪಟ್ಟಿಲ್ಲ” ಎಂಬ ಘೋಷಣೆ ನೀಡಿದವನನ್ನೇ ಹೆಲಿಕಾಪ್ಟರ್ ದುರಂತವೆಂದು ಬಿಂಬಿಸಿ ಕೊಂದುಹಾಕುತ್ತಾರೆ. ಇದಕ್ಕೆ ಈಕ್ವೆಡಾರ್ ಅಧ್ಯಕ್ಷ ಕೂಡ ಹೊರತಲ್ಲ. ಮನುಷ್ಯ ಜೀವಕ್ಕೆ ಬೆಲೆ ಎಂದರೆ ಅದು ಅಮೇರಿಕಾದ ಮಾತನ್ನು ಕೇಳುವವರೆಗೆ ಮಾತ್ರ. ಕೇಳದಿದ್ದರೆ ಹೆಣವಾಗಲು ತಯಾರಾದಂತೆ. ಪಾಪ
ಅಮೇರಿಕಾದ ಶ್ರೇಷ್ಠ ಮನಸ್ಥಿತಿಯೇ ಪನಾಮ ದೇಶದವರಿಗೂ ಇದೆ. ಅದಕ್ಕೆ ಉತ್ತಮ ಉದಾಹರಣೆ ಎಂದರೆ “ಪನಾಮ ಸ್ತ್ರೀಯರಿಗೆ ವ್ಯಭಿಚಾರ ಮಾಡಲು ಅವಕಾಶವಿಲ್ಲ ಅವರು ಬಾರ್ ಗಳಲ್ಲಿ ವೇಯ್ಟರ್ ಗಳಾಗಿ, ಡ್ಯಾನ್ಸರ್ಗಳಾಗಿ ಕೆಲಸ ಮಾಡಬಹುದು ಆದರೆ ಮೈಮಾರಿಕೊಳ್ಳುವಂತಿಲ್ಲ ಆ ಕೆಲಸವನ್ನು ವಿದೇಶಿಯರಿಗೆ ಬಿಟ್ಟುಬಿಡಲಾಗಿದೆ”. ಎಂಬುದು ಹೆಣ್ಣನ್ನು ಭೋಗದ ವಸ್ತುವಿನಂತೆ ನೋಡುವುದರೊಂದಿಗೆ ಒಂದು ಕೆಟ್ಟ ಸಮಾಧಾನ ಆ ಹೆಣ್ಣುಗಳು ನಮ್ಮ ದೇಶದವರಲ್ಲಾ ಎಂಬುದು. ಅಷ್ಟೆ ಅಲ್ಲದೇ “ಅವರು ತಮ್ಮ ದೇಶಗಳಲ್ಲಿನ ಕ್ರೌರ್ಯವನ್ನು ತಪ್ಪಿಸಿಕೊಳ್ಳಲಿಕ್ಕಾಗಿ ಇಲ್ಲಿಗೆ ಬರುತ್ತಾರೆ” ಎಂಬ ಮನಸ್ಥಿತಿ. ಪಾಪ
ಇನ್ನೂ ಅಮೇರಿಕಾದ ದೊಡ್ಡಣ್ಣನ ಸ್ಥಾನ ಹುಟ್ಟಿದ್ದು, ಬೆಳವಣಿಗೆ ಹೊಂದಿದ್ದು ಹೇಗೆ ಎಂಬುದನ್ನು ಗಮನಿಸಿದರೆ, “ಅಮೆರಿಕವನ್ನು ಎದುರಿಸಿ ನಿಲ್ಲುವುದು ನಮ್ಮ ಗುರಿ ಅಲ್ಲ ಬಡವರ ಪರವಾಗಿ ನಿಂತುಕೊಳ್ಳುವುದೇ ನಮಗೆ ಬೇಕಾಗಿರುವುದು ಅದೆಲ್ಲ ಸಾಧ್ಯವಾಗಬೇಕಾದರೆ ನಮಗೆ ಮೂಲಭೂತ ಸೌಕರ್ಯಗಳು ಬೇಕು, ವಿದ್ಯುತ್ ಬೇಕು, ಬಡವರನ್ನು ತಲುಪುವ ಹಗ್ಗದ ಸಬ್ಸಿಡಿ ವಿದ್ಯುತ್ ಬೇಕು. ಚುರುಕಾದ ಸಾರಿಗೆ, ಕಮ್ಯುನಿಕೇಷನ್ ಸೌಕರ್ಯಗಳು ಬೇಕು. ಇವೆಲ್ಲವನ್ನು ಮಾಡುವುದಕ್ಕೆ ವಿಶ್ವಬ್ಯಾಂಕ್ ಇಂಟರ್ ಅಮೆರಿಕನ್ ಡೆವಲಪ್ಮೆಂಟ್ ಬ್ಯಾಂಕ್ ಹಣ ಬೇಕು. ಇಂತಹ ಮನಸ್ಥಿತಿಯನ್ನು ಬಡ ರಾಷ್ಟ್ರಗಳ ಜನರಲ್ಲಿ ಬಿತ್ತಿ, ಆ ದೇಶದವರನ್ನು ಕೈವಶ ಮಾಡಿಕೊಂಡು ನೈಸರ್ಗಿಕ ಸಂಪನ್ಮೂಲಗಳನ್ನು ಕೊಳ್ಳೆಹೊಡೆದಿರುವುದು. ಪಾಪ
ಈಕ್ವೆಡಾರ್, ಸೌದಿ ಅರೇಬಿಯಾ, ಇರಾನ್, ಇರಾಕ್, ಅಫ್ಘಾನಿಸ್ತಾನ, ಪನಾಮ ಹೀಗೆ ಪೆಟ್ರೋಲಿಯಂ ಸಿಗುವ ದೇಶಗಳನ್ನು ಅಭಿವೃದ್ದಿಯ ಕಪಿಮುಷ್ಠಿಯಲ್ಲಿ ಬಂಧಿಸಿ ತೈಲ ಸಂಗ್ರಹವನ್ನು ಹೆಚ್ಚಿಸಿಕೊಂಡು, ಈ ದೇಶಗಳನ್ನು ಇನ್ನಿಲ್ಲದಂತೆ ದಿವಾಳಿ ಮಾಡಿತು. ಸಪ್ತ ಸೋದರಿಯರು ಎಂದು ಹೆಸರಾದ ಏಳು ಪ್ರಮುಖ ತೈಲ ಕಂಪನಿಗಳು ತೈಲದ ಬೆಲೆಯನ್ನು ಕಡಿತಗೊಳಿಸಬೇಕೆಂಬ ಹುನ್ನಾರ ಹೂಡಿದ್ದಾವೆ ಎಂಬುದನ್ನು ತಿಳಿದುಕೊಂಡ ಕೆಲವು ದೇಶಗಳು ಸೇರಿ ಆತುರಾತುರವಾಗಿ ಒಪೆಕ್ ರಚನೆ ಮಾಡಿಕೊಂಡಿತು. ಸದ್ದಾಂ ಹುಸೇನ್ ನನ್ನು ರಕ್ಷಿಸಿ, ಬೆಂಬಲಿ ಇರಾಕ್ ನ ತೈಲಾಗಾರಗಳನ್ನು ಬರಿದು ಮಾಡಿತು. ಇದಕ್ಕೆ ಬದಲಾಗಿ ಸದ್ದಾಂ ಗೆ ಆಧುನಿಕ ಯುದ್ದೋಪಕರಣಗಳನ್ನು ಸರಬರಾಜು ಮಾಡಿತು. ತೈಲಾಗಾರಗಳು ಬರಿದಾದಾಗ ಸದ್ದಾಂ ನನ್ನು ಹೊರಗಟ್ಟಲ್ಪಟ್ಟಿತು. ಇದರ ಪ್ರತಿಫಲವೆ ಅಮೇರಿಕಾದ ಟ್ರೇಡ್ ಸೆಂಟರ್ ಮೇಲಿನ ದಾಳಿ. ಪಾಪ
ಕಾರ್ಪೊರೇಟ್ ಶಾಹಿಯ ಮೂರು ಸ್ತಂಭಗಳಾದ ಬಹು ರಾಷ್ಟ್ರೀಯ ಸಂಸ್ಥೆಗಳು, ಅಂತರಾಷ್ಟ್ರೀಯ ಬ್ಯಾಂಕುಗಳು ಮತ್ತು ಸರ್ಕಾರ ಇವುಗಳ ನಡುವಿನ ಸಂಬಂಧದಲ್ಲಿ ಬಿರು ಮೂಡಿಸಿ ತಾನು ಲಾಭ ಪಡೆದುಕೊಳ್ಳುತ್ತದೆ. ಭಾರಿ ಸಾಲಗಳ ಮುಖಾಂತರ ದೇಶಗಳನ್ನು ಅಭಿವೃದ್ಧಿ ಮಾಡುತ್ತೇವೆಂಬ ಮೋಸಗಾರಿಕೆಯ ಮಾತುಗಳಿಂದ ಮರುಳು ಮಾಡಿ ಅಭಿವೃದ್ಧಿ ಎಂಬುದು ಬಡ ರಾಷ್ಟ್ರಗಳ ಜನರಿಗೆ ಉರುಳಾಗುವಂತೆ ಮಾಡುತ್ತದೆ. ಮೀಡಿಯಾವನ್ನು ಕೂಡ ಕೊಂಡು ಕೊಂಡು ತೈಲ ಕಂಪನಿಗಳ ಅಧೀನದಲ್ಲಿರಿಸಿ, ಅಭಿವೃದ್ಧಿ ಎಂಬ ಕಣ್ಣಿಗೆ ಕಾಣದ ಮರೀಚಿಕೆಯನ್ನು ಜನರು ಬೆಂಬತ್ತುವಂತೆ ಮಾಡುತ್ತದೆ. ಸಮಕಾಲೀನ ಭಾರತದ ಮಾಧ್ಯಮಗಳನ್ನು ಗಮನಿಸಿದರೆ ಈ ವಿಷಯಗಳು ಮತ್ತಷ್ಟು ಸ್ಪಷ್ಟವಾಗುತ್ತದೆ. ಪಾಪ
ಅಷ್ಟೇ ಅಲ್ಲದೇ ಅಮೇರಿಕಾ ಸಾಧಾರಣವಾಗಿ ತನ್ನ ದೇಶದ ಪ್ರಜೆಗಳನ್ನು ಅಪಾಯಕಾರಿ ಪ್ರಾಂತ್ಯಗಳಲ್ಲಿ ಕೆಲಸ ಮಾಡುವುದಕ್ಕೆ ಅನುಮತಿಸುವುದಿಲ್ಲ ಅದಕ್ಕಾಗಿಯೇ ಬಹಳ ಕಡೆ ಸ್ಥಳೀಯರನ್ನು ತೆಗೆದುಕೊಳ್ಳುತ್ತವೆ. ಸ್ಥಳೀಯರ ಪ್ರಾಣಗಳಿಗೆ ಬೆಲೆ ಇಲ್ಲವೆಂಬುದು ಅಮೇರಿಕಾ ದೇಶದ ಅಭಿಪ್ರಾಯ. ಇಲ್ಲಿ ಯೋಚಿಸಲೇ ಬೇಕಾದ ಸಂಗತಿಯೊಂದು ಅದಕ್ಕೆ ಪುಷ್ಠಿಕೊಡುವಂತೆ ಎದುರಾಗಿದೆ. ಈಗ ಅಮೇರಿಕಾ ಭಾರತದ ಪ್ರಜೆಗಳನ್ನು ಎಷ್ಟು ನಿಕೃಷ್ಟವಾಗಿ ನಡೆಸಿಕೊಂಡು ಗಡಿಪಾರು ಮಾಡಿದೆ ಎಂಬುದು ಕಣ್ಮುಂದೆ ಇದೆ.
ಕಾರ್ಪೊರೇಟೀಕರಣವನ್ನು ವಿರೋಧಿಸುವವರು ಬದುಕಲು ಬಿಡುವುದು ಅಮೇರಿಕಾಗೆ ಇಷ್ಟವಿಲ್ಲ. ಬುಡಕಟ್ಟು ಜನರನ್ನು ತೈಲಕ್ಕಾಗಿ ಅವರ ಬದುಕನ್ನು ಕಸಿದುಕೊಂಡು ಸಂಸ್ಕೃತಿಯನ್ನು ಬುಡ ಸಮೇತ ನಾಶ ಮಾಡಿದ್ದಕ್ಕೆ ಈಕ್ವೆಡಾರ್ ಉದಾಹಣೆಯಾಗಿ ನಮ್ಮ ಕಣ್ಮುಂದೆ ಇದೆ. ಅದೇ ಧ್ವನಿ ಇಂದು ಭಾರತದಲ್ಲಿ ಕೇಳಿ ಬರುತ್ತಿದೆ. ಬಂಡವಾಳಶಾಹಿಯೊಬ್ಬರು “ಕಾರ್ಮಿಕರು ವಾರದಲ್ಲಿ 70 ಗಂಟೆ ಕೆಲಸ ಮಾಡ್ಬೇಕು”. ಎಂಬ ಹೇಳಿಕೊಡುತ್ತಾ ಸರ್ವಾಧಿಕಾರಿಯಾಗುತ್ತಿದ್ದಾರೆ.
ಅಮೇರಿಕಾ ಕೇವಲ ತೈಲ ನಿಕ್ಷೇಪಗಳನ್ನು ಮಾತ್ರ ಹಿಡಿತದಲ್ಲಿಟ್ಟುಕೊಳ್ಳಬೇಕೆಂದು ಬಯಸುತ್ತಿಲ್ಲ. ನೀರಿನ ಮೇಲೂ ಅಧಿಕಾರ ಬಯಸುತ್ತಿದೆ “ನೀರೆಂಬುದು ಆ ಕಡೆ ಆರ್ಥಿಕವಾಗಿ ಈ ಕಡೆ ರಾಜಕೀಯವಾಗಿ ಬಹಳ ಪ್ರಾಧಾನ್ಯತೆ ಪಡೆದುಕೊಂಡಿದೆ. ಅಮೇರಿಕಾ ನಡೆಸಿರುವ ಹೆಚ್ಚಿನ ಯುದ್ದಗಳು ತೈಲಗಳಿಗಾಗಿ ಆಗಿದ್ದರೆ, ಮುಂದೊಂದು ದಿನ ನಡೆಯುವ ಯುದ್ದಗಳು ನೀರಿಗಾಗಿ ಎಂಬುದನ್ನು ಈ ಕೃತಿ ಸೂಚ್ಯವಾಗಿ ಹೇಳುತ್ತಿದೆ. ಅನೇಕ ಬಹು ರಾಷ್ಟ್ರೀಯ ಕಂಪನಿಗಳು ಈಗ ಖಾಸಗೀಕರಣದ ತರಾತುರಿಯಲ್ಲಿ ಆಫ್ರಿಕಾ, ಲ್ಯಾಟಿನ್ ಅಮೆರಿಕ, ಪಶ್ಚಿಮ ಏಷ್ಯಾ ದೇಶಗಳಲ್ಲಿ ಇರುವ ಜಲ ಸಂಪನ್ಮೂಲದ ಮೇಲೆ ಕಣ್ಣು ಹಾಕಿವೆ.
ಇವೆಲ್ಲವನ್ನೂ ನೋಡಿದರೆ ಪ್ರಜಾಪ್ರಭುತ್ವ ಎಂಬುದು ಹಳೆಯ ಮಾತು. ಈಗ ನಡೆಯುತ್ತಿರುವುದು ಕಾರ್ಪೊರೇಟ್ ಪ್ರಭುತ್ವ ಎಂಬುದು ಪ್ರತಿನಿತ್ಯ ಸಾಬೀತಾಗುತ್ತಲೆ ಇದೆ. ಕಣ್ಕಟ್ಟಿಕೊಂಡಿರುವ ಜನರು ಎಚ್ಚೆತ್ತುಕೊಳ್ಳಬೇಕಾದ ಜರೂರು ಇದೆ.
ಕೊನೆಯದಾಗಿ “ನಿಮ್ಮ ಮಕ್ಕಳಿಗಾಗಿ ಏನು ಬಿಟ್ಟು ಹೋಗುತ್ತೀರಿ ಎಂಬುದಲ್ಲ…
ನಿಮ್ಮ ಮಕ್ಕಳಲ್ಲಿ ಏನು ಬಿಟ್ಟು ಹೋಗುತ್ತೀರಿ ಎಂಬುದು….” ಯೋಚಿಸಬೇಕಾದದ್ದು ಅನಿವಾರ್ಯ.
ಇದನ್ನೂ ನೋಡಿ: ಪ್ರೇಮಿಗಳ ದಿನದ ವಿಶೇಷ | ನೋಡಿದೇನೆ ಪ್ರೌಢಸುಂದರಿ | ಸಂಗೀತ, ಗಾಯನ : ಪಿಚ್ಚಳ್ಳಿ ಶ್ರೀನಿವಾಸ Janashakthi Media