ಮಣಿಪುರನಲ್ಲಿ ನಡೆದ ಹಿಂಸಾಚಾರದ ವೇಳೆ ಕುಕಿ-ಜೋ ಸಮುದಾಯದ ಇಬ್ಬರು ಮಹಿಳೆಯರನ್ನು ನಗ್ನವಾಗಿ ಮೆರವಣಿಗೆ ಹಾಗೂ ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆಗೆ ಸಂಬಂಧಿಸಿದಂತೆ ವಿಡಿಯೋವೊಂದು ಬಧುವಾರ ವೈರಲ್ ಆಗಿದೆ. ಈ ಘಟನೆಗೆ ದೇಶಾದ್ಯಂತ ಭಾರೀ ಅಕ್ರೋಶ ವ್ಯಕ್ತವಾಗಿದ್ದು, ಪ್ರತಿಭಟನೆಗಳು ನಡೆಯುತ್ತಿವೆ. ಈ ಪಾತಕಿ ಘಟನೆಯನ್ನು ಖಂಡಿಸಿ ಹಲವರು ಸಾಮಾಜಿಕ ಜಾಲತಾಣದಲ್ಲಿ ಕಾವ್ಯದ ಮೂಲಕ ಪ್ರತಿರೋಧ ಹೊರಹಾಕಿದ್ದಾರೆ.
ಕಾವ್ಯ – 01
ನಾನು ಹೆಣ್ಣಷ್ಟೇ ಅಲ್ಲ
ನಾನು ಹೆಣ್ಣು
ನಾನು ಹೆಣ್ಣೆಂದು
ನನ್ನ ದೇಹವನು ನಗ್ನಗೊಳಿಸಿ,
ಬೆತ್ತಲೆ ಮಾಡಿದ ಗಂಡಸರೇ
ನನ್ನಂತೆ ನಿಮ್ಮ ಹೆತ್ತವಳು
ಹೆಣ್ಣೆಂಬುದನ್ನು
ಅದೇಕೆ ಮರೆತಿರಿ…
ನಿಮ್ಮ ತಾಯಲ್ಲಿ ಇಲ್ಲದ್ದನ್ನು
ಅದೇನು ಈ ದೇಹದಲ್ಲಿ ನೀವು ಕಂಡೀರಿ….
ನಾನು ಹೆಣ್ಣೆಂದು ಬಗೆದು ನಗ್ನಗೊಳಿಸಿ,
ನನ್ನ ಯೋನಿಯ
ಬಗೆ- ಬಗೆದು ರಾಕ್ಷಸರಾಗುವಾಗ,
ಅದೇಕೇ ಮರೆತಿರಿ
ಅದೇ ಯೋನಿಯಿಂದ ತಾನೇ ?
ನೀವು ಈ ಜಗತ್ತಿಗೆ ಬಂದಿರುವಿರಿ…..
ನಿಮ್ಮ ತಾಯಲ್ಲಿ ಇಲ್ಲದ್ದನ್ನು
ಅದೇನು ಈ ದೇಹದಲ್ಲಿ ನೀವು ಕಂಡೀರಿ….
ನಾನು ಹೆಣ್ಣೆಂದು ಬಗೆದು
ನನ್ನ ಮೊಲೆಯ ಹಿಸುಕಿ
ವಿಕೃತ ಸುಖ ಅನುಭವಿಸುವಾಗ,
ನಿಮ್ಮ ತಾಯ ತೊಡೆ ಮೇಲೆ ಮಲಗಿ
ಮೊಲೆ ಹಾಲ ಹೀರಿ ಕುಡಿದು
ಆಡಿ ಬೆಳೆದದ್ದನ್ನು
ಅದ್ಹೇಗೆ ನೀವು
ಮರೆತು ಹೋದಿರಿ….
ನಿಮ್ಮ ತಾಯಲ್ಲಿ ಇಲ್ಲದ್ದನ್ನು
ಅದೇನು ಈ ದೇಹದಲ್ಲಿ ನೀವು ಕಂಡೀರಿ….
ತೊಟ್ಟಿಕ್ಕುವ ರಕ್ತದಾ ಮಡುವು,
ನಿನ್ನ ಗಂಡಸುತನದ ಹೇಡಿತನಕೆ ಹೆಗ್ಗುರುತು,
ನೀನು ಬೆತ್ತಲೆಗೊಳಿಸಿರುವುದು ನನ್ನ ದೇಹವಲ್ಲ
ನಾಗರೀಕ ಸಮಾಜದಾ ದೇಹ….
ತಲೆಬಾಗಿ ಕಣ್ಣೀರು ಸುರಿಸುತಿಹಳು,
ತಾಯಿ ಭಾರತಿಯೆನ್ನುವದನು
ಅದೇಕೆ ಅರಿಯದಾದಿರಿ…..
ನಿಮ್ಮ ತಾಯಲ್ಲಿ ಇಲ್ಲದ್ದನ್ನು
ಅದೇನು ಈ ದೇಹದಲ್ಲಿ ನೀವು ಕಂಡೀರಿ….
ಬೆತ್ತಲೆಯ ನಿಮ್ಮ ದೇಹವನು ಬಿಗಿದಪ್ಪಿ,
ನಿಮ್ಮ ಹಾಲ ಗೆನ್ನೆಗೆ ಮುತ್ತನ್ನಿಕ್ಕಿ,
ನೀವು ಅತ್ತಾಗ
ತಾನೂ ಅತ್ತು ,
ನಿಮ್ಮ ಲಾಲಿಸಿ ಬೆಳೆಸಿದವಳು
ತಾಯಿ ರೂಪದಾ ಹೆಣ್ಣೆಂಬುದನ್ನು
ಅದೇಕೆ ಮರೆತುಹೋದಿರಿ..
ಮೀಸೆ ಮೂಡಿದಾಕ್ಷಣ
ಗಂಡಸೆಂಬ ದುರಹಂಕಾರದಲಿ,
ಮುಗ್ದ ಹೆಣ್ಣುಗಳನು
ಅತ್ಯಾಚಾರ ಮಾಡಿದಾಕ್ಷಣ,
ನೀನು ಗಂಡಸಲ್ಲ ನಪುಂಸಕನಾದೆ
ಅನ್ನುವದನ್ನು
ನೀವು ಅರಿಯದಾದಿರಿ…
ನಾನು ಹೆಣ್ಣು,
ಹೌದು ನಾನೊಂದು ಹೆಣ್ಣು
ನನ್ನ ಬೆತ್ತಲು ಮಾಡಿದರೇನು ?
ನನ್ನ ನೀವು ಸಾಮೂಹಿಕವಾಗಿ
ಅತ್ಯಾಚಾರ ಮಾಡಿದರೇನು ?
ನಾನು ಕುಗ್ಗುವುದಿಲ್ಲ,
ನಾನು ಬಗ್ಗುವುದಿಲ್ಲ,
ನನಗೆ ನೋವಾಗುವುದಿಲ್ಲ
ಬದಲಾಗಿ,
ನಿಮಗೆ ಜನ್ಮಕೊಟ್ಟವಳಾ ನೆನೆನೆನೆದು
ನನಗೆ ನೋವಾಗುತ್ತಿದೆ
ಅವಳ ಕಣ್ಣೀರಿನಲಿ
ನಾನೂ ಕರಗುತಿರುವೆ
ಅದ ನೀವು ಕಾಣದಾದಿರಿ…
ನಿಮ್ಮ ತಾಯಲ್ಲಿ ಇಲ್ಲದ್ದನ್ನು
ಅದೇನು ಈ ದೇಹದಲ್ಲಿ ನೀವು ಕಂಡಿರಿ….
ನಾನು ಹೆಣ್ಣು ಅಷ್ಟೇ ಅಲ್ಲ
ತಾಯಿಯೂ ಹೌದು.
ಅದ ಮರೆತು ಹೋದಿರಿ….
ಅದ ನೀವು
ಮರೆತು ಹೋದಿರಿ…..
ಶೈಲಜಾ ಹಿರೇಮಠ, ಗಂಗಾವತಿ
ಕಾವ್ಯ – 02
ಮುಚ್ಚಿಟ್ಟ ಮಾನ ಭಂಗವಾಗಿದೆ!
ಈಗ ಅವಳೆಂದರೆ ಪರಿಪೂರ್ಣ
ತನ್ನ ತಾನೇ ದಫನ್ ಮಾಡಿಕೊಳ್ಳಲು ಕಲಿತ ಕುಶಲಗಾರ್ತಿ…
ಅವಳೆಂದರೆ,
ಎಲ್ಲವನ್ನು ಮುಚ್ಚಿಕೊಂಡೇ ಮಾಡಬೇಕು
ಜೀವಂತ ದಫನ್ ಕಾರ್ಯ ಹುಟ್ಟುತ್ತಲೇ
ಶುರುವಾಗುತ್ತದೆ ಮುಚ್ಚಿಕೊಳ್ಳುವ ಕೆಲಸ!
ಹಾಗೆ ಕುಳಿತುಕೊಳ್ಳಬೇಡ
ಕಾಲು ಅಗಲ ಮಾಡಬೇಡ
ಮಂಡಿ ಒತ್ತಿ ಇಟ್ಟುಕೋ
ತೊಡೆ ಸಂಧಿಗಳು ಒಡೆಯದಂತೆ ಜೋಡಿಸು
ಛೇ ಅಂಬೆಗಾಲಿಕ್ಕುವಾಗಲೇ
ಶುರುವಾಯ್ತು ಕೈಕಾಲು ನರ ಹಿಡಿದುಕೊಳ್ಳಲು!
ಮುಚ್ಚಿ ತೊಳೆಯಬೇಕು
ಕಾಣದಂತೆ ಒಣಗಿಸಬೇಕು
ಸದ್ದಾಗದಂತೆ ವಿಸರ್ಜಿಸಬೇಕು
ಎಲ್ಲೆಂದರಲ್ಲಿ ಕೂರಬೇಡ
ಓಹ್ ಸಾಕೇಸಾಕು
ದೊಡ್ಡವಳಾಗುವಾಗಿನ ದೊಡ್ಡವರ ಮಾತು!
ಮನಸ್ಸಿನಲ್ಲಿದ್ದುದೆಲ್ಲ ಮಾತಾಡಬೇಡ
ಕಂಡಕಂಡಲೆಲ್ಲ ನಿಲ್ಲಬೇಡ
ಸೆರಗು ಹಾಗೆಲ್ಲ ಹಾಕಬೇಡ,
ಕುಪ್ಪಸದ ತೋಳು ಕತ್ತಿನ ಅಗಲ ನೋಡಿಕೋ
ಹೊಕ್ಕಳು ಕೆಳಗೆ ಸೀರೆ ಉಡಬೇಡ
ಆಹಾ, ಉಪದೇಶವೆನು
ನಿರ್ವಸಿತಳು ಶಿಬಿರ ಸೇರುವಾಗಿನ ಪಿಸುಮಾತು!
ಈಗ ಹಲ್ಲು ಉದುರಿ ಕಿವಿಕೇಳದ ಸಮಯ
ಇಷ್ಟಾದರೂ ಮತ್ತೆ
ಬೆಳಕು ಹರಿಯೋದರಲ್ಲಿ ಸುದ್ದಿ ಬಂದಿದೆ
ಇಷ್ಟುದಿನ “ಮುಚ್ಚಿಟ್ಟ ಮಾನ ಭಂಗ”ವಾಗಿದೆ ಎಂದು!
ಯಮುನಾ ಗಾಂವ್ಕರ್
ಕಾವ್ಯ – 03
ಮೆರವಣಿಗೆ …
(ಮಣಿಪುರದಲ್ಲಿ ದುಷ್ಕರ್ಮಿಗಳಿಂದ ನಡೆದಿರುವ ಮಹಿಳೆಯರ ಬೆತ್ತಲೆ ಮೆರವಣಿಗೆ ನೋಡಿ ನಾಗಾ ಕವಯತ್ರಿ ನಿಂಗ್ರೆ ಚಾನ್ ಮರುಗಿ ಬರೆದಿರುವ ಇಂಗ್ಲಿಷ್ ಕವನದ ಅನುವಾದ)
ನೀವು ಅವರನ್ನು ಬೆತ್ತಲುಗೊಳಿಸಿದಿರಿ
ಅವರನ್ನು ನಡೆಸಿದಿರಿ
ಅವರನ್ನು ಭೋಗಿಸಿದಿರಿ –
ನಿಮ್ಮ ಕಾಮ ,
ದ್ವೇಷಗಳಿಂದ
ಅದು ದೇಹ ದೇಹದ ನಡುವೆ
ಆದರೆ ;
ನೀವು ಯುದ್ಧ ಗೆದ್ದಿಲ್ಲ
ಬೆನ್ನು ಬಿದ್ದಿರುವ ನೀವು
ಅವರ ಆತ್ಮಗಳನ್ನು ತಟ್ಟಲಾರಿರಿ
ದೇವರು ಅವರ ಘನತೆಯನ್ನು ತಾನೇ ಮುಚ್ಚಿಟ್ಟಿದ್ದಾನೆ
ಅದು ಅವರ ಬೆತ್ತಲೆ
ದೇಹಗಳಲ್ಲಿಲ್ಲ .
ಅದನ್ನು ಗುಂಪು
ಹಿಂಡುಗಳಿಂದ
ಬೆತ್ತಲುಗೊಳಿಸಲಾಗದು .
ಆ ಧೀರ ಮಹಿಳೆಯರು
ಕಾಂಗ್ಲಾ ಕೋಟೆ
ಮುಂದೆ ತಾವೇ ಸ್ವಯಂ
ಬೆತ್ತಲಾದರು .
ಮಹಿಳೆ ಮಹಿಳೆಯರೇ !
ಹೌದು , ಸೋದರರೇ
ಹಿಂಸೆ ದೇಹ ದೇಹದ ನಡುವೆ
ಆದರೆ ತೀರ್ಪು
ಆತ್ಮ ಆತ್ಮಗಳ
ಜೊತೆ .
ಇಂದು ಕೇಕೆ ನಿಮ್ಮದು
ಇಂದು ಅಳು ನಮ್ಮದು
ನಾಳೆ ಅದು ದೇವರಿಗೆ
ಸೇರಿದ್ದು ..
ನಿಂಗ್ರ್ ಚಾನ್
ಇದನ್ನೂ ಓದಿ:ಮಣಿಪುರ ಹಿಂಸಾಚಾರ | ಯುವತಿಯರ ಬೆತ್ತಲೆ ಮೆರವಣಿಗೆ; ಸಾಮೂಹಿಕ ಅತ್ಯಾಚಾರ
ಕಾವ್ಯ – 04
ಇದು ಕೊಲೆಯುಗ
ಹಿಡಿದಿದ್ದವು ಮೊಲೆಗಳ ನಾಲಕ್ಕು ಕೈಗಳು
ಕೈಗಳಿಗೆ ಬಲ ಕೊಟ್ಟ ಮೊಲೆ ಹಾಲು
ನೆನಪಾಗದೆ ಉಳಿದಿದ್ದೆ ಸೋಜಿಗ
ಇದು ಇಂಥಾ ಯುಗ ಕೊಳೆಯುಗ
ಯೋನಿಯ ಸ್ಪರ್ಶದಲ್ಲಿ ಐದು ಬೆರಳುಗಳು
ನೋವಲ್ಲೂ ಸುಖವರಸುತ್ತಿದ್ದ ಅವಕ್ಕೆ
ತಾವು ಹೊರಬಂದ ತಾವು
ಮರೆವಿನ ಮರೆಗೆ ಅದೇಗೆ ಸರಿಯಿತೋ?
ಕೇಳಿ ತಿಳಿಯಬೇಕು ಇದು ಕೊಲೆಯುಗ
ಪೌರುಷದ ವಿಷಗಾಳಿ ಸುತ್ತ ಆವರಿಸಿ
ಕೈ ಕೋತಿಯಾ ಕುಣಿಸಿ ದಾಖಲಿಸಿ
ನಕ್ಕ ಮನಸಿನ ಮನಸು ಕಾಣೆಯಾಗಿತ್ತು
ಬಯಲೂ ಬೆತ್ತಲಾಗಿತ್ತು..
ಮಿಕ ಮಿಕ ನೋಡಿತ್ತು..
ರೋದನೆಯ ಮೀರಿದ
ಶೋಷಣೆಯ ಹಾದಿಯಲಿ
ಕೂಗುತ್ತಿದೆ ಮನ ಬೆತ್ತಲಾಗಿ
ನಿಲಲಿಲ್ಲ ತೃಷ್ಣ ಬರಲಿಲ್ಲ ಕೃಷ್ಣ
ರಾಮನಾದರೂ ಬರಬಹುದಿತ್ತು
ವಿರಾಮದಲಿದ್ದನೇನೋ..
ಅಲ್ಲವಲ್ಲ ಇದು ತ್ರೇತಾಯುಗ
ಅಲ್ಲ ದ್ವಾಪರವೂ…
ಕ್ರೌರ್ಯ ಅಪಾರ
ನಿತ್ಯ ಅತ್ಯಾಚಾರ
ಇದು ಬೆತ್ತಲೆ ಯುಗ
ಇದು ಬೆತ್ತ ಅಲೆ ಯುಗ.
ಭೀಮವಾದಿ ರವಿ
ಕಾವ್ಯ – 05
ಬೆತ್ತಲಾದದ್ದು ಯಾರು?
ಹೆಣ್ಣನ್ನು ಬೆತ್ತಲೆಯಾಗಿಸಿದಿರಿ
ಮೆರವಣಿಗೆ ಮಾಡಿದ್ದೀರಿ
ಕೇಕೆ ಹಾಕಿದ್ದೀರಿ
ಆದರೆ…
ಬೆತ್ತಲೆಯಾದದ್ದು ಅವರಲ್ಲ
ನೀವು… ನೀವೇ..
ನಿಮ್ಮ ಮೈಮೇಲೆ
ಪ್ಯಾಂಟ್ ಇದೆ
ಶರ್ಟು ಇದೆ
ಅವರ ಬಟ್ಟೆಯನ್ನು ಕಳಚಿದಿರಿ
ನಗ್ನವಾಗಿ ನಡೆಸಿದ್ದೀರಿ
ಮಾನ ಮುಚ್ಚಬೇಕಾದ ನೀವು
ಕಾಮುಕ ಕಣ್ಣುಗಳನ್ನು ಧರಿಸಿದ್ದೀರಿ
ಆದರೆ…
ಬೆತ್ತಲೆಯಾದದ್ದು ಅವರಲ್ಲ
ನೀವು….ನೀವೇ…
ನೀವು ಬೆತ್ತಲೆಯಾದಿರಿ
ಭಾರತ ಬೆತ್ತಲೆಯಾಯಿತು
ಜಗದ ಮುಂದೆ
ಅಟ್ಟಹಾಸದ ಹಿಂದೆ
ಇನ್ನು ಹೇಗೆ ಹೇಳುವಿರಿ
ಹೆಣ್ಣನ್ನು ದೇವತೆಯೆಂದು..?
ಹೆಣ್ಣನ್ನು ಬೆತ್ತಲೆಗೊಳಿಸಿದ
ಬೆತ್ತಲೆ ಮನಸ್ಸುಗಳು
ಹೊದ್ದುಕೊಂಡಿರುವುದು
ನರ ಸತ್ತ ಮೆದುಳನ್ನು
ಕರುಣೆ ಬತ್ತಿದ ಹೃದಯವನ್ನು
ಈಗ ಹೇಳಿ
ಬೆತ್ತಲೆಯಾದದ್ದು ಯಾರು ?
ನೀವೋ…ಅವರೋ…?
– ಸಿಹಾನ ಬಿ.ಎಂ.
ಕಾವ್ಯ – 06
ಕಾಮುಕ ಪಿಶಾಚಿಗಳಿಗೆ…..!
ಹೆಣ್ಣುಗಳನ್ನು ರಸ್ತೆಯಲ್ಲಿ
ನಗ್ನಗೊಳಿಸಿ
ಹಿಂಸಿಸಿ ಸಾಯಿಸಿದ
ಕಾಮುಕ ಪಿಶಾಚಿಗಳೇ
‘ ಪಿಶಾಚಿ’ ಎನ್ನುವ ಪದ
ನಿಮಗೆ ತುಟ್ಟಿಯಾಯಿತು
ನಾವು ತಡೆದುಕೊಳ್ಳಲಾರೆವು ಇನ್ನು
ನಿಜ, ನಿಮ್ಮನ್ನೂ ಬೆತ್ತಲೆ
ಮೆರವಣಿಗೆ ಮಾಡಿ ಸಾಮೂಹಿಕವಾಗಿ
ಕಲ್ಲು ಹೊಡೆದು ಸಾಯಿಸಬೇಕು
ಎಂಬ ಆಕ್ರೋಶ ಉಕ್ಕುತ್ತಿದೆ
ನೊಂದ ಆ ಹೆಣ್ಣುಗಳ ಆತ್ಮಗಳು
ತುಸುವಾದರೂ ನಿರಾಳಗೊಂಡಾವು !
ನೀವು ಅವರನ್ನು ಬೆತ್ತಲೆ
-ಗೊಳಿಸಿರಬಹುದು
ಸಜ್ಜನರು ನೋಡಲಾರರು
ಕಣ್ಮುಚ್ಚಿ ತುಟಿ ಕಚ್ಚಿದ್ದಾರೆ
ನಾವೆಲ್ಲರೂ ನಮ್ಮ ಮುದ್ದು
ಕಂದಮ್ಮಗಳನ್ನು ಬೆತ್ತಲೆಯ
ಸ್ಥಿತಿಯಲ್ಲೇ ಹೆತ್ತಿದ್ದೇವೆ
ಮಣಿಪುರದ ನತದೃಷ್ಟ
ಹೆಣ್ಣುಗಳೂ ನಮ್ಮ ಮಕ್ಕಳು,
ಅಕ್ಕ ತಂಗಿ ಅವ್ವಂದಿರು
ಮೂಳೆ ಮಾಂಸ ರಕ್ತಗಳಿಂದ
ತುಂಬಿಕೊಂಡ ಈ ದೇಹ
ಹೆಣ್ಣಿಗೂ ಗಂಡಿಗೂ ಒಂದೇ
ನಿಸರ್ಗ ಸಹಜ ಅನಿವಾರ್ಯತೆ !
ಅಂತರಾಳದ ಆತ್ಮವನ್ನು
ಯಾರೂ ಮುಟ್ಟಲಾರರು,
ಅತ್ಯಾಚಾರವೆಸಗಿ ರಕ್ತ ಹರಿಸಲಾರರು
ಕೊನೆಗೊಂದು ಮಾತು…
ಮೂಕ ಮುಗ್ಧ ಪ್ರಾಣಿಗಳ
ಪದತಲದಲ್ಲಿ ಕುಳಿತು
ತುಸು ಕರುಣೆಯನ್ನು,
ನಾಗರಿಕತೆಯನ್ನು
ಕಡ ಪಡೆಯಿರಿ
ಕಾಮುಕ ಪಿಶಾಚಿಗಳೇ
ತೊಲಗಿ!
ವಿಜಯಶ್ರೀ ಎಂ.ಹಾಲಾಡಿ