ಹಿರಿಯ ಕಮ್ಯುನಿಸ್ಟ್‌ ನಾಯಕಿ ಕೆ.ಆರ್‌.ಗೌರಿ ಅಮ್ಮ ನಿಧನ

ತಿರುವನಂತಪುರ: ಕೇರಳದ ಹಿರಿಯ ಕಮ್ಯುನಿಸ್ಟ್‌ ನಾಯಕಿ ಕೆ.ಆರ್‌.ಗೌರಿ ಅಮ್ಮ ಅವರು ನಿಧನರಾಗಿದ್ದಾರೆ.  ವಯೋಸಹಜ ಕಾಯಿಲೆಯಿಂದಾಗಿ ಬಳಲುತ್ತಿದ್ದ ಅವರನ್ನು ಖಾಸಗಿ ಆಸ್ಪತ್ರೆಯೊಂದಕ್ಕೆ ಸೇರಿಸಲಾಗಿತ್ತು. ಅವರಿಗೆ 102 ವರ್ಷ ವಯಸ್ಸಾಗಿತ್ತು.

ಜ್ವರ, ಉಸಿರಾಟದ ತೊಂದರೆ ಇದ್ದುದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಬೆಳಿಗ್ಗೆ 7 ಗಂಟೆಗೆ ಕೊನೆ ಉಸಿರೆಳೆದರು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಇದನ್ನು ಓದಿ: ತ್ರಿಪುರ: ಮಾಜಿ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ಮೇಲೆ ಹಲ್ಲೆ- ಸಿಪಿಐ(ಎಂ) ಪೊಲಿಟ್‌ ಬ್ಯುರೊ ಖಂಡನೆ

ಕೇರಳದ ಕಮ್ಯೂನಿಸ್ಟ್‌ ಚಳುವಳಿಯಲ್ಲಿ ಅತ್ಯಂತ ದೃಢತೆಯಿಂದ ಸಕ್ರಿಯವಾಗಿ ಜನರೊಂದಿಗೆ ತೊಡಗಿಸಿಕೊಳ್ಳುತ್ತಿದ್ದ ಕೆ.ಆರ್.‌ ಗೌರಿ ಅವರು ರಾಜ್ಯದ ಅಸಂಖ್ಯಾ ಜನತೆ ಅವರನ್ನು ಪ್ರೀತಿಯಿಂದ ಗೌರಿ ಅಮ್ಮ ಎಂದು ಕರೆಯುತ್ತಿದ್ದರು. ಕೇರಳದಲ್ಲಿ ಈಳವ ಸಮುದಾಯದ ಮೊದಲ ಮಹಿಳಾ ಕಾನೂನು ವಿದ್ಯಾರ್ಥಿನಿಯಾಗಿಯೂ ಅವರು ಹೆಸರಾಗಿದ್ದವರು.

ಕೆ ಆರ್‌ ಗೌರಿ ಅಮ್ಮ ಸಂಕ್ಷಿಪ್ತ ಪರಿಚಯ

ಜನನ: ಜೂನ್ 21, 1919, ಸ್ಥಳ: ಪಟ್ಟಣಕ್ಕಾಡ್, ಆಲಪ್ಪುಳ ಜಿಲ್ಲೆ

ಶಾಸಕಿಯಾಗಿ: 1952 ಮತ್ತು 1954 ರಲ್ಲಿ ತಿರುವಾಂಕೂರ್ ಕೌನ್ಸಿಲ್ ಆಫ್ ಲೆಜಿಸ್ಲೇಟಿವ್ ಅಸೆಂಬ್ಲಿ(ತಿರುವಾಂಕೂರು-ಕೊಚ್ಚಿ ವಿಧಾನಸಭೆ)ಗೆ ಆಯ್ಕೆಯಾಗಿದ್ದರು.  1957 ರಿಂದ 2001 (ಕೇರಳ ವಿಧಾನಸಭೆ)

ನಿರ್ವಹಿಸಿದ ಖಾತೆಗಳು: ಕಂದಾಯ, ತೆರಿಗೆ, ನಾಗರಿಕ ಪೂರೈಕೆ, ಸಮಾಜಕಲ್ಯಾಣ, ಕಾನೂನು, ಕೃಷಿ.

ಸಾಮಾಜಿಕ ಕಾರ್ಯಗಳು : ಅಧ್ಯಕ್ಷೆ, ಕೇರಳ ರೈತ ಸಂಘ(1960-1984), ಅಧ್ಯಕ್ಷೆ, ಕೇರಳ ಮಹಿಳಾ ಸಂಘ(1967-1976), ಕಾರ್ಯದರ್ಶಿ, ಕೇರಳ ಮಹಿಳಾ ಸಂಘ(1976-1987), ಸ್ಥಾಪಕಿ, ಜನಾಧಿಪತ್ಯ ಸಂರಕ್ಷಣ ಸಮಿತಿ

ಸ್ವಾತಂತ್ರ್ಯ ನಂತರದ ಕೇರಳ ರಾಜ್ಯದ ಮೊದಲ ವಿಧಾನಸಭೆಯ ಸದಸ್ಯರಾಗಿ ಗೌರಿ ಅಮ್ಮ ಅವರು ಆಯ್ಕೆಯಾಗಿದ್ದರು. ಮುಖ್ಯಮಂತ್ರಿ ಇ.ಎಂ.ಎಸ್‌. ನಂಬೂದಿರಿಪಾಡ್ ನೇತೃತ್ವದ ಕೇರಳದ ಪ್ರಥಮ ಕಮ್ಯುನಿಸ್ಟ್‌ ಸರ್ಕಾರದಲ್ಲಿ ಕಂದಾಯ ಸಚಿವರಾಗಿ ಕೆಲಸ ಮಾಡಿದ್ದ ಅವರು ಕ್ರಾಂತಿಕಾರಿ ಕೃಷಿಕ ಸಂಬಂಧ ಮಸೂದೆ ಜಾರಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕಂದಾಯ, ಅಬಕಾರಿ ಮತ್ತು ದೇವಸ್ವಂ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ.

ತಮ್ಮ ಸಂಪುಟ ಸಹೋದ್ಯೋಗಿಯಾಗಿದ್ದ ಟಿ.ವಿ.ಥಾಮಸ್‌ ಅವರನ್ನು ವಿವಾಹವಾಗಿದ್ದರು. 1964ರಲ್ಲಿ ಕಮ್ಯುನಿಷ್ಟ್‌ ಪಕ್ಷ ವಿಭಜನೆಗೊಂಡ ಬಳಿಕ ಗೌರಿ ಅವರು ಸಿಪಿಎಂ ಸೇರಿದ್ದರು. ಅವರ ಪತಿ ಸಿಪಿಐ ಪಕ್ಷದಲ್ಲೇ ಉಳಿದಿದ್ದರು.

ಗೌರಿ ಅಮ್ಮ ವಿಧಾನಸಭಾ ಚುನಾವಣೆಯಲ್ಲಿ 11 ಬಾರಿ ಸ್ಪರ್ಧಿಸಿ 8 ಬಾರಿ ಗೆಲುವು ಸಾಧಿಸಿದ್ದರು.

1994ರಲ್ಲಿ ಸಿಪಿಐ(ಎಂ) ಪಕ್ಷದಿಂದ ಉಚ್ಛಾಟಿತರಾದ ಗೌರಿ ಅವರು ಜನಧಿಪತ್ಯ ಸಂರಕ್ಷಣ ಸಮಿತಿ (ಜೆಎಸ್ಎಸ್) ಪಕ್ಷವನ್ನು ಸ್ಥಾಪಿಸಿದ್ದರು.  ಇದು ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ನ ಒಂದು ಘಟಕವಾಗಿದೆ. ಕೆಲ ವರ್ಷಗಳ ಹಿಂದೆ ಅವರು ಮತ್ತೆ ಸಿಪಿಐಎಂ ಗೆ ಸೇರ್ಪಡೆಯಾಗಿದ್ದರು.

Donate Janashakthi Media

Leave a Reply

Your email address will not be published. Required fields are marked *