ಜನಪರ ನಾಯಕ ಭೀಮರಾಯಗೌಡರಿಗೆ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಪಟ್ಟ

ಮಲ್ಲಿಕಾರ್ಜುನ ಕಡಕೋಳ

ಗೌಡ ಕುಲಕರ್ಣಿ ಒಂದಾದರೆ ಊರನ್ನೇ ಎಕ್ಕುಟ್ಟಿಸಿ ಬಿಡುತ್ತಾರೆಂಬ ಹಳ್ಳಿಗಳ ಲೋಕಾರೂಢಿ ನುಡಿಗಳನ್ನು ಅಕ್ಷರಶಃ ಸುಳ್ಳು ಮಾಡಿದವರು ಇವರು. ಅದಕ್ಕೆ ಬದಲು ಕೂಲಿ ಕಾರ್ಮಿಕರೇ ತುಂಬಿ ತುಳುಕಿರುವ ಅರಳಗುಂಡಿಗಿ ಗ್ರಾಮಪಂಚಾಯ್ತಿಯ ಹಳ್ಳಿಗಳ ಬಾಳು ಹಸನಾದ ಹಾದಿ ಹಿಡಿಯುವಂತೆ ಮಾಡಿದವರು ಈ ಗೌಡ ಕುಲಕರ್ಣಿಯರು. ಹಳ್ಳಿಗಳೆಂದರೆ ವಿಶೇಷವಾಗಿ ಶ್ರಮಿಕ ಸಂಸ್ಕೃತಿಯ ಕೂಲಿನಾಲಿ ಮಾಡಿ ದುಡಿದುಣ್ಣುವ ಕೃಷಿ ಕಾರ್ಮಿಕರ ಜಗತ್ತು.

ಅರಳಗುಂಡಗಿಯ ಜನಪರ ನಾಯಕ ಭೀಮರಾಯಗೌಡರು ಯಡ್ರಾಮಿ ತಾಲೂಕ ‌ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನದ (೦೪.೦೩.೨೦೨೩)ಸರ್ವಾಧ್ಯಕ್ಷರಾಗಿ‌ ಆಯ್ಕೆಯಾಗಿದ್ದಾರೆ. ಅದಕ್ಕೆ ಮೊದಲು ಮಲ್ಲಿಕಾರ್ಜುನ ಕಡಕೋಳ ಅವರು, ೨೦೧೯ ರ ಡಿಸೆಂಬರ್ ೨೨ ರಂದು ಜರುಗಿದ ಯಡ್ರಾಮಿ ತಾಲೂಕು ಪ್ರಪ್ರಥಮ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು. ಆ ಮೂಲಕ ಅವರು ಕಡಕೋಳ ಮಡಿವಾಳಪ್ಪನವರ ಅನುಭಾವ ಸಾಹಿತ್ಯಲೋಕದ ಮತ್ತು ಯಡ್ರಾಮಿ ಸೀಮೆಯ ಆನುಷಂಗಿಕವಾದ ಸಾಹಿತ್ಯ ಪ್ರೀತಿಯನ್ನು ಅನನ್ಯವಾಗಿ ಕಟ್ಟಿಕೊಟ್ಟಿದ್ದರು. ಅದನ್ನವರು ”ಏಕತಾರಿ ನಾದಧ್ಯಾನದ ಬಯಲು ಕಟ್ಟೋಣ” ಎಂಬ ಕರುಳರಕೆಯಿಂದ ಕರೆದಿದ್ದರು. ಇದೀಗ ದ್ವಿತೀಯ ಸಾಹಿತ್ಯ ಸಮ್ಮೇಳನಕ್ಕೆ ಅರಳಗುಂಡಗಿಯ ಹಿರೇಗೌಡರ ಭೀಮರಾಯಗೌಡರು ಸರ್ವಾಧ್ಯಕ್ಷರಾಗಿದ್ದು ಅರಳಗುಂಡಗಿಯ ಶರಣಬಸಪ್ಪನವರ ತ್ರಿವಿಧ ದಾಸೋಹದ ಶರಣ ಪರಂಪರೆಗೆ ದೊರಕಿದ ಗೌರವ ಅದಾಗಿದೆ.

ತತ್ವಪದಗಳು ಮತ್ತು ಅಂತಃಕರಣದ ಶರಣ ಪರಂಪರೆಗೆ ಕಡಕೋಳ ಮಡಿವಾಳಪ್ಪ ಮತ್ತು ಅರಳಗುಂಡಗಿಯ ಶರಣಬಸಪ್ಪ ಈ ಎರಡು ಹೆಸರುಗಳು ತಾಯ್ತನದ ಅನ್ಯೋನ್ಯತೆಗಳು. ಅವು ಬಹುಶೃತ ಪ್ರೀತಿಯ ಮನುಷ್ಯ ಕುಲಕ್ಕೆ ದಕ್ಕಿದ ಅನುಪಮ ಕಾಣ್ಕೆಗಳು. ಶರಣಬಸಪ್ಪ ಮತ್ತು ಮಡಿವಾಳಪ್ಪ ಈ ಇಬ್ಬರೂ ನಾಡಿನ ಜೀವನಾಡಿಯೇ ಆಗಿರುವ ಕೃಷಿ ಮತ್ತು ಸಮಾಜಮುಖಿ ಬದುಕಿನ ಅಪೂರ್ವ ರೂಪಕಗಳೇ ಹೌದು.

ಇದನ್ನು ಓದಿ: ಮೂಡಲಪಾಯ ಯಕ್ಷಗಾನ ಮತ್ತು ದೊಡ್ಡಾಟ ಬಯಲಾಟಗಳೆಂಬ ಜೋಡಿ ಮಕ್ಕಳು

ಮಡಿವಾಳಪ್ಪನ ಅನುಭಾವದ ಬದುಕಿಗೆ ಬುನಾದಿ ಹಾಕಿ ಮಹಾಮಾರ್ಗವನೇ ತೋರಿದವರು ಶರಣಬಸಪ್ಪ. ಅರಳಗುಂಡಗಿ ಮತ್ತು ಕಡಕೋಳ ಈ ಎರಡೂ ಊರುಗಳು ಪರಸ್ಪರ ಎರಡು ಹರದಾರಿ ದೂರದಲ್ಲಿರುವ, ಹಿರೇಹಳ್ಳದ ದಡದ ಚರಿತ್ರಾರ್ಹ ಹಳ್ಳಿಗಳು. ಈ ಎಲ್ಲ ಹಿನ್ನೆಲೆಯಲ್ಲಿ ಯಡ್ರಾಮಿ ತಾಲೂಕಿನ ಪ್ರಥಮ ಮತ್ತು ದ್ವಿತೀಯ ಸಾಹಿತ್ಯ ಸಮ್ಮೇಳನಗಳು ಸಾಂಸ್ಕೃತಿಕವಾಗಿ ಅದ್ವಿತೀಯ ಮಹತ್ವ ಪಡೆದುಕೊಳ್ಳುತ್ತವೆ. ಅದಕ್ಕಾಗಿ ಯಡ್ರಾಮಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷರಾದ ಮಲ್ಲಿಕಾರ್ಜುನ ಯಳಮೇಲಿ, ಹಾಲಿ ಅಧ್ಯಕ್ಷರಾದ ನಾಗಣ್ಣ ಸಜ್ಜನ ಹಾಗೂ  ಪದಾಧಿಕಾರಿಗಳು ಅಭಿನಂದನಾರ್ಹರು.

ಅರವತ್ತರ ದಶಕದಲ್ಲಿ ಗುಲಬರ್ಗಾ ಜಿಲ್ಲೆ ಅಂದಿನ ಜೇವರ್ಗಿ ತಾಲೂಕಿನ ಅರಳಗುಂಡಗಿ ಗ್ರಾಮ ಪಂಚಾಯತಿ ಸರಪಂಚರಾಗಿ ಹತ್ತು ವರ್ಷಗಳ ಕಾಲ ಆದರ್ಶ ಗ್ರಾಮ ಪಂಚಾಯತಿಯನ್ನಾಗಿ ಆಡಳಿತವನ್ನು ಮಾಡಿದವರು. ಅಂತಹದ್ದೊಂದು ಅಪರೂಪದ ಮಾದರಿಗೆ ಹೆಸರಾದವರು ಅದೇ ಊರಿನ ಹಿರೇಗೌಡರ ಮನೆತನದ ಭೀಮರಾಯಗೌಡರು. ಅದರಲ್ಲೂ ಅವರು ಆ ಕಾಲದಲ್ಲಿ ಅಂತಹ ಹಳ್ಳಿಗಾಡಿನ ಗ್ರಾಮ ಪಂಚಾಯತಿಗೆ ಕಮ್ಯುನಿಸ್ಟ್ ಪಕ್ಷದಿಂದ ಸರಪಂಚ(ಅಧ್ಯಕ್ಷ)ರಾಗಿ ಅದೂ ಅವಿರೋಧವಾಗಿ ಆಯ್ಕೆ ಆಗುವುದೆಂದರೆ ಸಾಮಾನ್ಯದ ಮಾತಲ್ಲ. ಅದಕ್ಕೆಲ್ಲ ನೇಪಥ್ಯದಲ್ಲಿ ನಿಂತು ನೆರವಾದವರು ಕುಲಕರ್ಣಿ ನರಸಿಂಗರಾಯರು.

ಇದನ್ನು ಓದಿ: ಸಾಹಿತ್ಯವೆಂದರೆ ಜನ-ಜನರ ಬದುಕಿನ ಪ್ರತಿಫಲನ, ಜನರ ಬದುಕಿಗೆ ಸಂಬಂಧಿಸಿದ್ದು : ಡಾ. ಮೂಡ್ನಾಕೂಡು ಚಿನ್ನಸ್ವಾಮಿ

ಬಾಲಕ ಭೀಮರಾಯಗೌಡ ಅಂದಿನ ಮುಂಬೈ ಕರ್ನಾಟಕದ ಇಂಗ್ರೇಜಿಗೆ ಸೇರಿದ ಊರು ಮೋರಟಗಿಗೆ ಪ್ರತಿನಿತ್ಯವೂ ಶಿಕ್ಷಣಕ್ಕಾಗಿ ಮುವತ್ನಾಲ್ಕು ಕಿ. ಮೀ. ನಡಕೊಂಡೇ ಹೋಗುತ್ತಿದ್ದರು. ಹಾಗೆ ಮೂರುವರ್ಷ ಕಾಲ ಓಡಾಡಿ ವಿದ್ಯ ಕಲಿತು ಮುಲ್ಕಿ ಪರೀಕ್ಷೆ ಪಾಸು ಮಾಡಿದವರು ನಮ್ಮ ಗೌಡರು. ಆ ಕಾಲದ ಇಂಗ್ರೇಜಿ ಕಡೆಯ ಮುಲ್ಕಿ ಪರೀಕ್ಷೆ ಅರ್ಥಾತ್ ಏಳನೇ ಈಯತ್ತೆ ಪಾಸು ಮಾಡುವುದೆಂದರೆ ಈ ಕಾಲದ ಪದವಿಯನ್ನೇ ಪಾಸು ಮಾಡಿದಷ್ಟು ಮಹತ್ತರ ಹಿರಿಮೆ.

ಭೀಮರಾಯಗೌಡರು ಅದೇ ಊರಿನ ಕಮ್ಯುನಿಸ್ಟ್‌ ನಾಯಕ ಕುಲಕರ್ಣಿ ನರಸಿಂಗರಾಯರ ಒಡನಾಡಿ. ನರಸಿಂಗರಾಯರದು ನೂರೈವತ್ತು ಎಕರೆ ಜಮೀನ್ದಾರಿ ಮನೆತನ. ಐದಾರು ಮಕ್ಕಳ ಸಮೃದ್ಧ ಕುಟುಂಬ. ಅದರಲ್ಲಿ ಐವರು ಹೆಣ್ಣುಮಕ್ಕಳು. ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿದ ಅವರು, ಮಕ್ಕಳು ಸ್ವತಂತ್ರ ಜೀವನದ ವಿಚಾರವಂತರಾಗಿ ರೂಪುಗೊಳ್ಳಬೇಕೆಂಬ ಕನಸು ಕಂಡವರು ಕುಲಕರ್ಣಿ ನರಸಿಂಗರಾಯರು.

ಇದನ್ನು ಓದಿ: ಜನ ಸಾಹಿತ್ಯ ಸಮ್ಮೇಳನ – ಔಚಿತ್ಯ ಪ್ರಸ್ತುತತೆಗಳ ನಡುವೆ

ಅವರೆಂತಹ ದೊಡ್ಡ ಮನುಷ್ಯರೆಂದರೆ ಸರಕಾರದ ಕಾನೂನು ಜಾರಿಗೆ ಬರುವ ಮುನ್ನವೇ ಭೂರಹಿತ ಬಡಬಗ್ಗರು, ದಲಿತರು,‌ ಕೂಲಿ ಕಾರ್ಮಿಕರಿಗೆ ತಮ್ಮ ಸ್ವಂತ ಆಸ್ತಿ ನೂರೈವತ್ತೆಕರೆ ಭೂಮಿಯನ್ನೇ ಹಂಚಿಕೆ ಮಾಡಿದವರು ಕುಲಕರ್ಣಿ ನರಸಿಂಗರಾಯರು. ಅವರಿಗೆ ಕಮ್ಯುನಿಸಂ ಪ್ರೀತಿಯಷ್ಟೇ ಸಂಗೀತದಲ್ಲೂ ಅಪಾರ ಪ್ರೀತಿ‌. ಅದು ಅಪ್ಪ ಭೀಮರಾಯರಿಂದ ಬಂದ ಬಳುವಳಿ. ಅಂತೆಯೇ ತುಂಬಾ ಸೊಗಸಾಗಿ ಹಾರ್ಮೋನಿಯಂ, ತಬಲಾ, ಶಹನಾಯ್, ನುಡಿಸುತ್ತಿದ್ದರು. ಭೀಮರಾಯ ಗೌಡರು ನರಸಿಂಗರಾಯರ ಪಟ್ಟದ ಶಿಷ್ಯರು. ಹಾಗೆಯೇ ನಮ್ಮ ನಡುವಿನ ಎಡಚಿಂತನೆಗಳ ಪ್ರಗತಿಪರ ಬರಹಗಾರ ಬೆಳಗಲಿ ಸನತ್ ಕುಮಾರ ನರಸಿಂಗರಾಯರ ಶಿಷ್ಯಪಡೆಗೆ ಸೇರಿದವರು.

ಅರಳಗುಂಡಗಿ ಗ್ರಾಮದಲ್ಲಿ ಕಮ್ಯುನಿಸ್ಟ್ ಪಕ್ಷ ಗಟ್ಟಿಗೊಳಿಸುವುದಷ್ಟೇ ಅಲ್ಲದೇ ನರಸಿಂಗರಾಯರು ತಮ್ಮ ಸ್ವಂತ ಹಣದಿಂದ ಜನತಾ ಶಾಲೆ, ಜನತಾ ಗ್ರಂಥಾಲಯ, ಮತ್ತು ಜನತಾ ಹೋಟೆಲ್ ಸ್ಥಾಪಿಸುತ್ತಾರೆ. ಇವತ್ತಿಗೂ ಅರಳಗುಂಡಗಿಯಲ್ಲಿ ನರಸಿಂಗರಾಯರ ಲೈಬ್ರರಿ ಹೆಸರಿನ ಹೊಲವೇ ಇದೆ. ಅಷ್ಟುಮಾತ್ರವಲ್ಲದೇ ರಾಯರು ಆಗಾಗ ದಲಿತರ ಮನೆಗಳಲ್ಲಿ ಊಟ ಮಾಡುತ್ತಿದ್ದುದು ತೋರಿಕೆಗಾಗಿ ಆಗಿರಲಿಲ್ಲ. ಅವರ ಇಂತಹ ಜನಪರ ಆಚರಣೆ ಮತ್ತು ಆಲೋಚನೆಗಳಿಗೆ ಪ್ರೇರಣೆಯಾದವರು ಆ ಕಾಲದ ಕಟ್ಟರ್ ಕಮ್ಯುನಿಸ್ಟ್ ಆಗಿದ್ದ  ಶ್ರೀಪಾದ ಅಮೃತ ಢಾಂಗೆ ಮತ್ತು ಜೇವರ್ಗಿ ತಾಲೂಕಿನವರೇ ಆದ ಶ್ರೀನಿವಾಸ ಗುಡಿ. ಗುಡಿಯವರ ಗರಡಿಯಲ್ಲಿ ಅರಳಗುಂಡಗಿಯ ಗೌಡ ಮತ್ತು ಕುಲಕರ್ಣಿ ಈ ಇಬ್ಬರೂ ಸಾಮು ತೆಗೆದವರು.

ಇದನ್ನು ಓದಿ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮುಸ್ಲಿಂ ಲೇಖಕರ ಕಡೆಗಣನೆ-ಪರ್ಯಾಯ ಸಮ್ಮೇಳನಕ್ಕೆ ಚಿಂತನೆ

ಗೌಡ ಕುಲಕರ್ಣಿ ಒಂದಾದರೆ ಊರನ್ನೇ ಎಕ್ಕುಟ್ಟಿಸಿ ಬಿಡುತ್ತಾರೆಂಬ ಹಳ್ಳಿಗಳ ಲೋಕಾರೂಢಿ ನುಡಿಗಳನ್ನು ಅಕ್ಷರಶಃ ಸುಳ್ಳು ಮಾಡಿದವರು ಇವರು. ಅದಕ್ಕೆ ಬದಲು ಕೂಲಿ ಕಾರ್ಮಿಕರೇ ತುಂಬಿ ತುಳುಕಿರುವ ಅರಳಗುಂಡಿಗಿ ಗ್ರಾಮಪಂಚಾಯ್ತಿಯ ಹಳ್ಳಿಗಳ ಬಾಳು ಹಸನಾದ ಹಾದಿ ಹಿಡಿಯುವಂತೆ ಮಾಡಿದವರು ಈ ಗೌಡ ಕುಲಕರ್ಣಿಯರು. ಹಳ್ಳಿಗಳೆಂದರೆ ವಿಶೇಷವಾಗಿ ಶ್ರಮಿಕ ಸಂಸ್ಕೃತಿಯ ಕೂಲಿನಾಲಿ ಮಾಡಿ ದುಡಿದುಣ್ಣುವ ಕೃಷಿ ಕಾರ್ಮಿಕರ ಜಗತ್ತು.

ಸಹಜವಾಗಿ ಗ್ರಾಮಸಮಾಜದ ವರ್ಗ ಮತ್ತು ವರ್ಣ ಸಂಘರ್ಷದ ಹಲವು ಸವಾಲುಗಳ ತೀವ್ರ ಮುಖಾಮುಖಿಯ ನಿತ್ಯ ಸಂಗತಿಗಳು. ಅಂತಹ ಹಳ್ಳಿಗಾಡಿನ ರಾಜಕಾರಣದ ಸಂಕೀರ್ಣತೆಗಳೊಂದಿಗೆ ಸಂಭಾಳಿಸಿಕೊಂಡು ಹೋಗುವುದು ಅಕ್ಷರಶಃ ಸವಾಲು. ಒಂದು ಸಣ್ಣ ಕಪ್ಪುಚುಕ್ಕೆ ಇಲ್ಲದೇ ಹತ್ತಾರು ಹಳ್ಳಿಗಳ ಗ್ರೂಪ್ ಗ್ರಾಮಪಂಚಾಯ್ತಿ ಆಡಳಿತವನ್ನು ನಿರಂತರ ಹತ್ತುವರ್ಷಗಳ ಕಾಲ ಸುಲಲಿತವಾಗಿ ನಡೆಸುವುದು ಸಾಹಸವೇ ಸೈ.

ಇದನ್ನು ಓದಿ: ಸಾಹಿತ್ಯ ಸಮ್ಮೇಳನ ಮತ್ತು ಪ್ರತಿರೋಧ ಸಾಹಿತ್ಯ ಸಮಾವೇಶಗಳು…..

ಭೀಮರಾಯಗೌಡರ ಸೋದರ ಸಂಬಂಧಿ ಸಾಹೇಬಗೌಡ ಸಹಿತ ಕಮ್ಯುನಿಸ್ಟ್  ಪಾರ್ಟಿಯ ಧುರೀಣರಾಗಿದ್ದರು. ದೇವರಮನಿ ನೀಲಕಂಠಪ್ಪ ಅವರಂತಹ ಕಾಂಗ್ರೆಸ್ ಪಕ್ಷದ ಪ್ರಭಾವಿ ರಾಜಕಾರಣಿಯನ್ನೇ ತಾಲೂಕು ಲೋಕಲ್ ಬೋರ್ಡ್ ಚುನಾವಣೆಯಲ್ಲಿ ಸೋಲಿಸಿ ಅವರು ಟಿ.ಎಲ್. ಬಿ. ಸಾಹೇಬಗೌಡರೆಂದೇ ಪ್ರಸಿದ್ಧರಾದರು. ಅಂತಹದ್ದೊಂದು ಎಡಪಂಥೀಯ ರಾಜಕೀಯ ಪರಿಸರ ಜೇವರ್ಗಿ ತಾಲೂಕು ತುಂಬಾ ಕಟ್ಟಿ ಬೆಳೆಸಿದ ಊರು ಅರಳಗುಂಡಗಿ. ಆಗ ಅರಳಗುಂಡಗಿ ಕಮ್ಯುನಿಸ್ಟರ ಕೇಂದ್ರವಾಗಿ ಅರವತ್ತು ಎಪ್ಪತ್ತರ ದಶಕದಲ್ಲಿ ಕೋಣಸಿರಸಗಿ, ಕಡಕೋಳ, ಕುಕನೂರು, ಸುಂಬಡ, ಆಲೂರು, ಮಳ್ಳಿ ಮುಂತಾದ ಇಪ್ಪತ್ಮೂರಕ್ಕೂ ಹೆಚ್ಚು ಊರುಗಳಲ್ಲಿ ಕಮ್ಯುನಿಸ್ಟ್ ಪಾರ್ಟಿ ಪಾರಮ್ಯ ಮೆರೆದಿತ್ತು. ಕುಡುಗೋಲು ತೆನೆ ‘ಗುರುತು’ ಮೂಡಿಸಿತ್ತು. ಅಂತೆಯೇ ಜೇವರ್ಗಿ ತಾಲೂಕು ಲೋಕಲ್ ಬೋರ್ಡ್(TLB)ಗೆ ಕಮ್ಯುನಿಸ್ಟ್ ಭೀಮರಾಯಗೌಡ ಅವಿರೋಧವಾಗಿ ಆಯ್ಕೆಯಾಗುತ್ತಾರೆ.

ಅದಕ್ಕೆ ಮುನ್ನ ಅವರು ೧೯೭೨ ರಲ್ಲಿ ಪಂಚಾಯತಿ ಸರಪಂಚರಾಗಿದ್ದಾಗ ‘ಬರಗಾಲ ಕಾಮಗಾರಿ’ ಆರಂಭಿಸಲು ಸರಕಾರಕ್ಕೆ ಒತ್ತಾಯಿಸಿ ಒಂದು ವಾರಕಾಲ ತಾಲೂಕು ಕೇಂದ್ರ ಜೇವರ್ಗಿಯಲ್ಲಿ ಉಪವಾಸ ಸತ್ಯಾಗ್ರಹ ಆಚರಿಸುತ್ತಾರೆ. ಅದೇ ಆಗ ಧರ್ಮಸಿಂಗ್ ಶಾಸಕರಾಗಿದ್ದರು. ಆಗ ನಾಲ್ಕು ನೂರು ಮಂದಿ ಅನುಯಾಯಿಗಳೊಂದಿಗೆ ಜೈಲುಭರೋ ಚಳವಳಿಯೇ ನೆರವೇರುತ್ತದೆ. ಹೋರಾಟದ ಮೂಲಕ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಮತ್ತು  ಊರಿಗೆಲ್ಲ ಕುಡಿಯುವ ನೀರು, ಜನಾರೋಗ್ಯಕ್ಕಾಗಿ ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರು ಮಾಡಿಸಿದ ಸಂತೃಪ್ತಿ. ಹೀಗೆ ಹತ್ತಾರು ವರ್ಷಗಳ ಕಾಲ ಲೋಕೋಪಯೋಗಿ ನಿಲುವನ್ನು ತಮ್ಮ ರಾಜಕೀಯ ಬಾಳಿನುದ್ದಕ್ಕೂ ಬದುಕಿ ಇತ್ತೀಚೆಗೆ ೨೦೧೪ ರ ಕಾಲಘಟ್ಟದಲ್ಲಿ ಭೀಮರಾಯ ಗೌಡರು ಸಾಹಿತ್ಯದ ಬರವಣಿಗೆಗೆ ತಿರುಗುತ್ತಾರೆ.

ಇದನ್ನು ಓದಿ: “ಧೀರ ಟಿಪ್ಪುವಿನ ಲಾವಣಿಗಳು” ಜನವರಿ 8 ರಂದು ‘ಜನಸಾಹಿತ್ಯ ಸಮ್ಮೇಳನ’ದಲ್ಲಿ ಬಿಡುಗಡೆಯಾಗಲಿದೆ

ಆಗ ಕಲಬುರ್ಗಿಯ ಶರಣಬಸವೇಶ್ವರ ಕಾಲೇಜಿನ ಅಧ್ಯಾಪಕ ಮಹೇಶ ಪಾಟೀಲರು ಪಿಎಚ್. ಡಿ. ಸಂಶೋಧನಾ ವಿದ್ಯಾರ್ಥಿ. ಶರಣ ಬಸವೇಶ್ವರರ ತಳಮನೆ ಅರಳಗುಂಡಗಿ ಪ್ರದೇಶದ “ಜನಪದರ ತ್ರಿಪದಿಗಳಲ್ಲಿ ಶರಣ ಬಸವೇಶ್ವರ” ಕುರಿತು ಸಂಶೋಧನಾ ವಿಷಯ. ಅವರ ಮಹಾಪ್ರಬಂಧದ ಪೂರ್ಣ ಹೊಣೆಹೊತ್ತು ಸಂಗ್ರಹ ಕಾರ್ಯಕ್ಕೆ ನೆರವಾಗುವ ಅವಕಾಶ ಭೀಮರಾಯ ಗೌಡರ ಹೆಗಲಿಗೆ. ಹಂತಿ, ಭಜನೆ, ಮೊಹರಮ್, ತೊಟ್ಟಿಲು, ಕುಟ್ಟುವ, ಬೀಸುವ ಪದಗಳು… ಹೀಗೆ ಎಲ್ಲಾ ಸಂದರ್ಭಗಳಲ್ಲಿ ಜನಪದರು ಹಾಡುತ್ತಿದ್ದ ಶರಣಬಸಪ್ಪನ ಕುರಿತಾದ ತ್ರಿಪದಿಗಳನ್ನು ಸಂಗ್ರಹಿಸಿಕೊಡುತ್ತಾರೆ.

ಹಾಗೆ ಸಂಗ್ರಹಿಸಿದ ತ್ರಿಪದಿಗಳ ಜತೆಗೆ ಸಹಜವಾಗಿ ಗೌಡರಲ್ಲಿಯೇ ತ್ರಿಪದಿಗಳು ಹುಟ್ಟಿಕೊಳ್ಳುತ್ತವೆ. ಜನಪದರಿಂದ ಸಂಗ್ರಹಿಸಿದ ತ್ರಿಪದಿಗಳ ಜತೆಗೆ ತಾನು ರಚಿಸಿದ ತ್ರಿಪದಿಗಳನ್ನು ಒಟ್ಟುಗೂಡಿಸಿ “ಜನಪದ ತ್ರಿಪದಿಗಳಲ್ಲಿ ಶರಣ ಬಸವೇಶ್ವರ” ಎಂಬ ಪುಸ್ತಕ ಪ್ರಕಟಿಸುವ ಸಾಹಸ ಮಾಡುತ್ತಾರೆ. ಆ ಸಂದರ್ಭದಲ್ಲಿ ಡಾ. ಕೆ. ಕೆ. ದೇಸಾಯಿ‌ ಮತ್ತಿತರರು ಮತ್ತು ಕಲಬುರ್ಗಿಯ ಬಸವರಾಜಪ್ಪ ಅಪ್ಪ ಅವರಿಂದ ದೊರಕಿದ ಸಹಕಾರವನ್ನು ಗೌಡರು ಸ್ಮರಿಸುತ್ತಾರೆ. ಅದಾದ ಮೇಲೆ ನಗನೂರು ಬಲವಂತ ಶರಣರು, ಮುಧೋಳ ಮೌನಮುನಿ ಅಪ್ಪಾಜಿ ಮತ್ತು ಲಚ್ಯಾಣ ಸಿದ್ದಪ್ಪ ಮಹಾರಾಜರ ಜೀವನ ಚರಿತ್ರೆಗಳನ್ನು ಪ್ರಕಟಿಸಿದ್ದಾರೆ. ಅದರ ನಡುವೆ ಅವರು ಕರುಣಾಕರ ಶರಣ ಬಸವೇಶ್ವರ ಹೆಸರಿನ ಪುಸ್ತಿಕೆಯನ್ನು ಪ್ರಕಟಿಸುತ್ತಾರೆ.

ಎಂಬತ್ತೆರಡರ ಏರುಪ್ರಾಯದಲ್ಲೂ ಅವರ ಆರೂಢ ಆಸ್ಥೆಯ ಬುಗ್ಗೆ ಬತ್ತಿಲ್ಲ. ಈಗಲೂ ಮಹಾರಾಷ್ಟ್ರದಲ್ಲಿ ಜರುಗುವ ಸಿದ್ಧಪ್ಪ ಮಹಾರಾಜರ ಆರೂಢ ಆರಾಧನೆಗಳಿಗೆ ಹೋಗುವ ಅವರ ಹೆಬ್ಬಯಕೆಗೆ ಹಿಂಜರಿಕೆ ಎಂಬುದಿಲ್ಲ. ಅವರು ಕಳೆದೆರಡು ದಶಕಗಳಿಂದ ಸಕ್ರಿಯ ರಾಜಕಾರಣದಿಂದ ದೂರ ಸರಿದಿದ್ದಾರೆ. ಅವರ ಆರು ಮಂದಿ ಮಕ್ಕಳಲ್ಲಿ ನಾಲ್ವರು ಸರಕಾರದ ಉನ್ನತ ಹುದ್ದೆಗಳಲ್ಲಿ ಉದ್ಯೋಗಿಗಳು. ಗೌಡರು ಪ್ರಸ್ತುತ ತಮ್ಮ ಹುಟ್ಟೂರು ಅರಳಗುಂಡಗಿಯಲ್ಲಿ ಪತ್ನಿ ಲಕ್ಷ್ಮಿಬಾಯಿ ಜತೆ ನೆಮ್ಮದಿಯ ಬದುಕು ಸಾಗಿಸುತ್ತಿದ್ದಾರೆ. ಹೌದು, ನಿಜವಾದ ಅಧ್ಯಾತ್ಮ ಎಂದರೆ ನೆಮ್ಮದಿಯ ಬದುಕೆಂಬುದು ಅವಧೂತ ಸಿದ್ಧಾಂತ. ಅದಕ್ಕಿಂತ ಅವರಿಗೆ ಇನ್ನೇನು ಬೇಕು.?

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *