ಪ್ರಕಾಶ್ ಕಾರಟ್
ದಕ್ಷಿಣ ಏಷ್ಯಾದ್ಯಂತ ಧಾರ್ಮಿಕ ಹಾಗೂ ಜನಾಂಗೀಯ ಅಲ್ಪಸಂಖ್ಯಾತರು ಬಹುಸಂಖ್ಯಾತ ಸಮುದಾಯಗಳ ಮೂಲಭೂತವಾದಿ ಹಾಗೂ ಕೋಮುವಾದಿ ಶಕ್ತಿಗಳ ಆಕ್ರಮಣಗಳಿಗೆ ತುತ್ತಾಗುತ್ತಿದ್ದಾರೆ. ಈ ದೇಶಗಳ ಆಳುವ ವರ್ಗಗಳ ಪಕ್ಷಗಳು ಮತಾಂಧತೆಯನ್ನು ಮತ್ತು ಜನಾಂಗೀಯ ರಾಷ್ಟ್ರವಾದವನ್ನು ಪೋಷಿಸುತ್ತಿವೆ. ಈ ಪೈಕಿ ಅತಿ ದೊಡ್ಡ ಹಾಗೂ ಬಲಿಷ್ಠ ದೇಶವಾಗಿರುವ ಭಾರತದಲ್ಲಿನ ಹಿಂದುತ್ವ ಕೋಮುವಾದ ಮತ್ತು ಹಿಂದೂ ರಾಷ್ಟçವಾದವು ಅದರ ನೆರೆಯ ದೇಶಗಳಲ್ಲಿ ಅನಿವಾರ್ಯವಾಗಿ ಸಮಾನಾಂತರ ಸ್ಪಂದನೆಯನ್ನು ಹುಟ್ಟುಹಾಕುತ್ತಿದೆ. ಈ ಸಮಾಜಗಳಲ್ಲಿನ ಸಂಕೀರ್ಣ ಧಾರ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಂಪರೆಗಳು ಅಂಥದ್ದಕ್ಕೆ ಅವಕಾಶ ಕಲ್ಪಿಸುತ್ತವೆ. ಸಮತ್ವಪೂರ್ಣ ಅಭಿವೃದ್ಧಿಯ ಮತ್ತು ಜನರ ಕಲ್ಯಾಣದ ರಾಜಕೀಯದ ಬುನಾದಿ ಹೊಂದಿರುವ ಜಾತ್ಯತೀತ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಎತ್ತಿ ಹಿಡಿಯುವುದರಿಂದ ಮಾತ್ರವೇ ಇಡೀ ದಕ್ಷಿಣ ಏಷ್ಯಾದ ಉತ್ತಮ ಭವಿಷ್ಯ ಮತ್ತು ಪ್ರಗತಿಯ ಹಾದಿಯನ್ನು ತೆರೆಯಬಹುದಾಗಿದೆ.
ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದಕ ಗುಂಪುಗಳು ಅಲ್ಪಸಂಖ್ಯಾತರು ಮತ್ತು ವಲಸೆ ಕಾರ್ಮಿಕರ ಮೇಲೆ ಗುರಿಯಿಟ್ಟು ಕೊಲ್ಲುತ್ತಿರುವುದು ಈಗಾಗಲೇ ಸಂಕಟಕ್ಕೆ ಒಳಗಾಗಿರುವ ಜಮ್ಮು ಮತ್ತು ಕಾಶ್ಮೀರವನ್ನು ಹತಾಶೆ ಮತ್ತು ಕತ್ತಲಿನ ಹೊಸ ಆಳಕ್ಕೆ ತಳ್ಳಿದೆ. ಕೋಮು ವಿಭಜನೆ ಉಂಟು ಮಾಡುವುದು ಹಾಗೂ ಜನರು ದೊಡ್ಡ ಪ್ರಮಾಣದಲ್ಲಿ ವಲಸೆ ಹೋಗುವಂಥ ವಾತಾವರಣ ಸೃಷ್ಟಿಸುವುದು ಶಾಲಾ ಶಿಕ್ಷಕರು, ಬೀದಿ ವ್ಯಾಪಾರಿಗಳು ಮತ್ತು ವಲಸೆ ಕಾರ್ಮಿಕರನ್ನು ಕೊಲ್ಲುವ ಪೈಶಾಚಿಕ ಕೃತ್ಯದ ಹಿಂದಿನ ಉದ್ದೇಶವಾಗಿದೆ.
2019ರ ಆಗಸ್ಟ್ ನಿಂದ ಕೇಂದ್ರಾಡಳಿತ ಪ್ರದೇಶವಾಗಿ ನೇರವಾಗಿ ಕೇಂದ್ರ ಸರ್ಕಾರದ ಆಡಳಿತದಲ್ಲಿರುವ ಜಮ್ಮು ಮತ್ತು ಕಾಶ್ಮೀರದಲ್ಲಿ ಇದು ಸಂಭವಿಸುತ್ತಿದೆ ಎಂಬುದು ಜಮ್ಮು ಮತ್ತು ಕಾಶ್ಮೀರ, ಅದರಲ್ಲೂ ವಿಶೇಷವಾಗಿ ಕಣಿವೆಯ ಜನರನ್ನು ಕೇಂದ್ರ ಸರ್ಕಾರ ನೋಡಿಕೊಂಡ ರೀತಿಗೆ ಪ್ರಬಲ ಛೀಮಾರಿಯಂತೆ ಇದೆ. ಸಂವಿಧಾನದ 370 ಮತ್ತು 35ಎ ವಿಧಿಗಳನ್ನು ತೆಗೆದು ಹಾಕಿದ್ದು ಮತ್ತು ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಬರ್ಖಾಸ್ತುಗೊಳಿಸಿದ್ದು ಭಾರತದೊಂದಿಗೆ ದೃಢವಾಗಿ ನಿಂತ ಕಣಿವೆಯ ಜನರು ಹಾಗೂ ಜಾತ್ಯತೀತ ರಾಜಕೀಯ ಶಕ್ತಿಗಳನ್ನು ಶಿಕ್ಷಿಸಲು ಕೈಗೊಂಡ ಪ್ರತೀಕಾರದ ಕ್ರಮಗಳಾಗಿವೆ.
ಭದ್ರತಾ–ಪ್ರಭುತ್ವದ ಧೋರಣೆಗಳಿಂದಾಗಿ
ಜಮ್ಮು ಮತ್ತು ಕಾಶ್ಮೀರವನ್ನು ಕೋಮು ಆಧಾರದಲ್ಲಿ ವಿಭಜಿಸುವ, ಕಣಿವೆಯಲ್ಲಿ ಮುಸ್ಲಿಂ ಬಹುಸಂಖ್ಯಾತ ಜನಸಂಖ್ಯೆಯನ್ನು ಅಂಚಿಗೆ ತಳ್ಳುವ ಹಾಗೂ ಕಾಶ್ಮೀರಿಯತ್ (ಕಾಶ್ಮೀರಿ ಅಸ್ಮಿತೆ) ಅನ್ನು ನಾಶ ಮಾಡುವ ಕ್ರಮಗಳನ್ನು ಕೈಗೊಳ್ಳುವ ತನ್ನ ಉದ್ದೇಶವನ್ನು ಮೋದಿ-ಅಮಿತ್ ಷಾ ಆಡಳಿತ ಯಾವತ್ತೂ ಮುಚ್ಚಿಟ್ಟಿಲ್ಲ. ಕಣಿವೆಯ ಮುಖ್ಯವಾಹಿನಿ ರಾಜಕೀಯ ಪಕ್ಷಗಳ ಮೇಲಿನ ದಬ್ಬಾಳಿಕೆ ಈ ಅಜೆಂಡಾದ ಭಾಗವಾಗಿದೆ.
ಎಲ್ಲ ಭಿನ್ನಾಭಿಪ್ರಾಯಗಳನ್ನು ಬಗ್ಗುಬಡಿದು ಹಾಗೂ ಮಾಧ್ಯಮದ ಕತ್ತು ಹಿಸುಕುವ ಮೂಲಕ ಜಮ್ಮು ಮತ್ತು ಕಾಶ್ಮೀರದ ರಾಜಕೀಯದಲ್ಲಿ ಪ್ರಜಾಸತ್ತಾತ್ಮಕ ದನಿಗಳಿಗೆ ಅವಕಾಶವಿಲ್ಲದಂತೆ ಮಾಡಿದ್ದು ಹಾಗೂ ಕಠಿಣ ಭದ್ರತಾ-ಪ್ರಭುತ್ವದ ಧೋರಣೆಗಳಿಂದಾಗಿ ಪಾಕಿಸ್ತಾನದಿಂದ ಪೋಷಣೆ ಪಡೆಯುತ್ತಿರುವ ಅತ್ಯುಗ್ರ ಭಯೋತ್ಪಾದಕ ಶಕ್ತಿಗಳಿಗೆ ಹಿಂಸಾತ್ಮಕ ಚಟುವಟಿಕೆಗಳನ್ನು ನಡೆಸಲು ಹಾದಿಯನ್ನು ತೆರೆದಂತಾಗಿದೆ.
ಬಲಪ್ರಯೋಗದಿಂದ ಭಯೋತ್ಪಾದನೆ ಜಾಲಗಳನ್ನು ಮಟ್ಟ ಹಾಕಲಾಗಿದೆ ಎಂಬ ಸರ್ಕಾರದ ಹೇಳಿಕೆಗಳು ಭಾಗಶಃ ಸತ್ಯ ಎನ್ನುವುದು ಸ್ಪಷ್ಟವಾಗಿದೆ. ಭಯೋತ್ಪಾದಕ ಶಕ್ತಿಗಳು ಮುಗ್ಧ ನಾಗರಿಕರನ್ನು ಇನ್ನಿಲ್ಲದಂತೆ ಕಾಡಿಸಿ ಹತ್ಯೆ ಮಾಡುತ್ತಿರುವ ಘಟನೆಗಳು ಇದಕ್ಕೆ ಸಾಕ್ಷಿಯಾಗಿದೆ. ಮೋದಿ ಸರ್ಕಾರದ ವಿಭಜನಕಾರಿ ಹಾಗೂ ಹಿಂದುತ್ವ-ಕೇಂದ್ರಿತ ನೀತಿಗಳು ಕೂಡ ಜನರನ್ನು ಪ್ರತ್ಯೇಕಗೊಳಿಸಿವೆ. ಅದರಿಂದ ಉಗ್ರಗಾಮಿ ಶಕ್ತಿಗಳಿಗೆ ಹೆಚ್ಚಿನ ನೆರವು ಸಿಕ್ಕಿದೆ. ಈ ಪ್ರವೃತ್ತಿಗಳನ್ನು ಎದುರಿಸಲು ಪ್ರಜಾಸತ್ತಾತ್ಮಕ ಚಟುವಟಿಕೆಗೆ ಅವಕಾಶವೇ ಇಲ್ಲದಂತಾಗಿದೆ. ಉಗ್ರಗಾಮಿಗಳು ಮತ್ತು ಭಯೋತ್ಪಾದಕರ ವಿರುದ್ಧ ಭದ್ರತಾ ಪಡೆಗಳ ಸತತ ಕಾರ್ಯಾಚರಣೆಗಳ ಹೊರತಾಗಿಯೂ ಪರಿಸ್ಥಿತಿ ಹದಗೆಡುತ್ತಿರುವುದನ್ನು ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಪುನರ್ ಪ್ರತಿಷ್ಠಾಪಿಸುವುದು, ರಾಜಕೀಯ ಚಟುವಟಿಕೆಗಳ ಮೇಲಿನ ಎಲ್ಲ ನಿರ್ಬಂಧಗಳನ್ನು ತೆಗೆದು ಹಾಕುವುದು, ರಾಜಕೀಯ ಸಂವಾದದ ಪುನರಾರಂಭ ಮತ್ತು ಮಾಧ್ಯಮ ಸ್ವಾತಂತ್ರ್ಯ -ಇವುಗಳ ಮೂಲಕ ಮಾತ್ರವೇ ಬದಲಾಯಿಸಬಹುದು. ಆ ಮೂಲಕ ಉಗ್ರಗಾಮಿ ಶಕ್ತಿಗಳನ್ನು ಪ್ರತ್ಯೇಕಿಸಲು ಮತ್ತು ಭಯೋತ್ಪಾದಕರ ಹಿಂಸಾಚಾರವನ್ನು ನಿಭಾಯಿಸಲು ಸಾಧ್ಯವಾಗುತ್ತದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ಹಿಂಸಾಚಾರ ನಡೆಸುವ ಸರಣಿ ದುಷ್ಕೃತ್ಯಗಳನ್ನು ದೇಶದ ಬೇರೆ ಭಾಗಗಳಲ್ಲಿನ ಘಟನೆಗಳಿಂದ ಪ್ರತ್ಯೇಕಗೊಳಿಸಿ ನೋಡಲು ಸಾಧ್ಯವಿಲ್ಲ.
ಮುಸ್ಲಿಂ-ವಿರೋಧಿ ಅಜೆಂಡಾ ಹರಡಲು ಬಿಜೆಪಿ-ಆರ್‌ಎಸ್‌ಎಸ್ ಕೂಟ ವ್ಯವಸ್ಥಿತವಾಗಿ ಕೆಲಸ ಮಾಡುತ್ತಿದೆ. ಮುಸ್ಲಿಮರ ಮೇಲಿನ ದಾಳಿ ನಡೆಯದ ಒಂದು ದಿನವೂ ಕಾಣ ಸಿಗುವುದಿಲ್ಲ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಪ್ರತಿದಿನವೂ ಅಲ್ಪಸಂಖ್ಯಾತರ ವಿರುದ್ಧ ದ್ವೇಷ ಪ್ರಚಾರಗಳು ನಡೆಯುತ್ತಿವೆ. ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಇಂಥ ಚಟುವಟಿಕೆಗಳಲ್ಲಿ ತೊಡಗಿರುವ ಹಿಂದುತ್ವ ಸಂಘಟನೆಗಳಿಗೆ ರಕ್ಷಣೆ ನೀಡಲಾಗುತ್ತಿದೆ. ಕರ್ನಾಟಕದಂಥ ಕೆಲವು ರಾಜ್ಯಗಳಲ್ಲಿ ಕ್ರೈಸ್ತರ ಪ್ರಾರ್ಥನಾ ಸ್ಥಳಗಳು ಮತ್ತು ಪ್ರಾರ್ಥನಾ ಸಭೆಗಳ ಮೇಲೆ ದಾಳಿಗಳು ನಡೆದಿವೆ. ಆಳುವ ಪಕ್ಷ ಮತ್ತು ಹಿಂದುತ್ವ ಸಂಘಟನೆಗಳ ಅಲ್ಪಸಂಖ್ಯಾತ-ವಿರೋಧಿ ಅಜೆಂಡಾಗಳು ಕಾಶ್ಮೀರದಲ್ಲಿ ಮೂಲಭೂತವಾದಿ-ಉಗ್ರಗಾಮಿ ಶಕ್ತಿಗಳಿಗೆ ಹೆಚ್ಚಿನ ಪ್ರಚೋದನೆ ಒದಗಿಸುತ್ತವೆ.
ದಕ್ಷಿಣ ಏಷ್ಯಾ ದೇಶಗಳ ಆಳುವ ವರ್ಗಗಳ ಪಕ್ಷಗಳ ಪೋಷಣೆ
ಇತ್ತೀಚೆಗೆ ಬಾಂಗ್ಲಾದೇಶದಲ್ಲಿ ಮೂಲಭೂತವಾದಿ ಶಕ್ತಿಗಳು ಹಿಂದೂ ಸಮುದಾಯ ಮತ್ತು ದೇವಸ್ಥಾನಗಳ ಮೇಲೆ ದಾಳಿಗಳನ್ನು ನಡೆಸಿದ್ದು ಕಳವಳದ ಸಂಗತಿಯಾಗಿದೆ. ದಕ್ಷಿಣ ಏಷ್ಯಾ ದೇಶಗಳಲ್ಲಿ ಕೋಮುವಾದಿ ರಾಜಕಾರಣ ಮತ್ತು ಮೂಲಭೂತವಾದದ ನಡುವೆ ಅಂತರ್-ಸಂಬಂಧ ಇರುವುದನ್ನು ಇದು ನೆನಪಿಸುತ್ತದೆ. ಕುರಾನ್‌ಗೆ ಅವಮಾನ ಮಾಡಲಾಗಿದೆ ಎಂದು ಸಾಮಾಜಿಕ ಮಾಧ್ಯಮ ಮೂಲಕ ಪ್ರಚಾರ ನಡೆಸಿದ್ದು ದುರ್ಗಾ ಪೂಜಾ ವೇಳೆ ಹಿಂದೂ ಸಮುದಾಯದ ವಿರುದ್ಧ ಭಾವನೆಗಳನ್ನು ಕೆಣಕಲು ನಡೆಸಿದ ಒಂದು ವ್ಯವಸ್ಥಿತ ಯೋಜನೆಯಂತೆ ಕಾಣುತ್ತದೆ. ಬಾಂಗ್ಲಾ ದೇಶದಾದ್ಯಂತ ನಡೆದ ಕೋಮು ಹಿಂಸಾಚಾರದ 17 ಘಟನೆಗಳಲ್ಲಿ ಆರು ಜನರು ಮೃತಪಟ್ಟಿದ್ದಾರೆ. ಕೋಮು ಸಮಸ್ಯೆ ಸೃಷ್ಟಿಸುವವರ ಬಗ್ಗೆ ದೃಢವಾಗಿ ವರ್ತಿಸುವುದಾಗಿ ಶೇಖ್ ಹಸೀನಾ ಸರ್ಕಾರ ಹೇಳಿದೆ. ಈಗಾಗಲೇ ನೂರಾರು ದೊಂಬಿಕೋರರನ್ನು ಬಂಧಿಸಲಾಗಿದೆ. ಭಾರತದಲ್ಲಿ ನಡೆಯುತ್ತಿರುವ ಮುಸಿಂ-ವಿರೋಧಿ ಹಿಂಸಾಚಾರಗಳು ಬಾಂಗ್ಲಾದೇಶದೊಳಗಿನ ಮೂಲಭೂತವಾದಿ ಶಕ್ತಿಗಳಿಗೆ ಪ್ರೇರಣೆ ನೀಡಿವೆ ಎಂದು ಬಾಂಗ್ಲಾದ ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.
ದಕ್ಷಿಣ ಏಷ್ಯಾದ್ಯಂತ ಧಾರ್ಮಿಕ ಹಾಗೂ ಜನಾಂಗೀಯ ಅಲ್ಪಸಂಖ್ಯಾತರು ಬಹುಸಂಖ್ಯಾತ ಸಮುದಾಯಗಳ ಮೂಲಭೂತವಾದಿ ಹಾಗೂ ಕೋಮುವಾದಿ ಶಕ್ತಿಗಳ ಆಕ್ರಮಣಗಳಿಗೆ ತುತ್ತಾಗುತ್ತಿದ್ದಾರೆ. ಶ್ರೀಲಂಕಾದಲ್ಲಿ ಬೌಧ್ಧ ಧರ್ಮದ ಮತಾಂಧ ಶಕ್ತಿಗಳು ಅಲ್ಲಿನ ಅಲ್ಪಸಂಖ್ಯಾತರನ್ನು ಗುರಿ ಮಾಡುತ್ತಿವೆ; ಪಾಕಿಸ್ತಾನದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರು ಮಾತ್ರವಲ್ಲದೆ ಅಲ್ಪಸಂಖ್ಯಾಕ ಷಿಯಾಗಳು ಕೂಡ ನಿರಂತರವಾಗಿ ಹಿಂಸಾಚಾರದ ಭಯದ ವಾತಾವರಣದಲ್ಲಿ ಬದುಕುತ್ತಿದ್ದಾರೆ. ತಾಲಿಬಾನ್ ಆಡಳಿತಕ್ಕೆ ಬಂದಿರುವ ಅಫ್ಘಾನಿಸ್ತಾನದಲ್ಲಿ ಧಾರ್ಮಿಕ ಮತ್ತು ಜನಾಗೀಯ ಅಲ್ಪಸಂಖ್ಯಾತರು ನೆಮ್ಮದಿಯಿಂದ ಬದುಕುವಂತಿಲ್ಲ.
ದಕ್ಷಿಣ ಏಷ್ಯಾ ದೇಶಗಳ ಆಳುವ ವರ್ಗಗಳ ಪಕ್ಷಗಳು ಮತಾಂಧತೆಯನ್ನು ಮತ್ತು ಜನಾಂಗೀಯ ರಾಷ್ಟ್ರವಾದವನ್ನು ಪೋಷಿಸುತ್ತಿವೆ. ಈ ಪೈಕಿ ಅತಿ ದೊಡ್ಡ ಹಾಗೂ ಬಲಿಷ್ಠ ದೇಶವಾಗಿರುವ. ಭಾರತದಲ್ಲಿನ ಹಿಂದುತ್ವ ಕೋಮುವಾದ ಮತ್ತು ಹಿಂದೂ ರಾಷ್ಟ್ರವಾದವು ನೆರೆಯ ದೇಶಗಳಲ್ಲಿ ಅನಿವಾರ್ಯವಾಗಿ ಸಮಾನಾಂತರ ಸ್ಪಂದನೆಯನ್ನು ಹುಟ್ಟುಹಾಕುತ್ತದೆ. ಈ ಸಮಾಜಗಳಲ್ಲಿನ ಸಂಕೀರ್ಣ ಧಾರ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಪ್ರದಾಯಗಳು ಅಂಥದ್ದಕ್ಕೆ ಅವಕಾಶ ಕಲ್ಪಿಸುತ್ತವೆ
ಸಮತ್ವಪೂರ್ಣ ಅಭಿವೃದ್ಧಿಯ ಮತ್ತು ಜನರ ಕಲ್ಯಾಣದ ರಾಜಕೀಯದ ಬುನಾದಿ ಹೊಂದಿರುವ ಜಾತ್ಯತೀತ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಎತ್ತಿ ಹಿಡಿಯುವುದರಿಂದ ಮಾತ್ರವೇ ಇಡೀ ದಕ್ಷಿಣ ಏಷ್ಯಾದ ಉತ್ತಮ ಭವಿಷ್ಯ ಮತ್ತು ಪ್ರಗತಿಯ ಹಾದಿಯನ್ನು ತೆರೆಯಬಹುದಾಗಿದೆ.
ಅನು: ವಿಶ್ವ