ಬಾನು ಮುಶ್ತಾಕ್
ಇದು ಕೇವಲ ನಿಮ್ಮ ಧಾರ್ಮಿಕ ಕರ್ತವ್ಯವಾಗಿ ಉಳಿದಿಲ್ಲ , ಬದಲಿಗೆ ಇದು ಕೋಮುವಾದಿ ರಾಜಕೀಯದ ಅಂಗಳ ವಾಗುತ್ತಿದೆ. ಕರಾವಳಿ ಭಾಗದಲ್ಲಿ ಕಳೆದ ಮೂವತ್ತು ವರ್ಷಗಳಿಂದ ಕೋಮುವಾದಿ ಪ್ರಯೋಗಶಾಲೆ ನಡೆಯುತ್ತಿದೆ ಎಂಬುದು ನಮ್ಮ ಅರಿವಿಗೆ ತಿಳುವಳಿಕೆಗೆ ಬರುತ್ತಿರುವಂತಹ ವಿಷಯವಾಗಿದೆ. ಇಂತಹ ಸಂದರ್ಭದಲ್ಲಿ ಕೊರಗರ ಮದುವೆಯ ಬಗ್ಗೆ ನಡೆದಿರುವಂತಹ ಪೊಲೀಸ್ ಕ್ರಮಗಳಿಂದ ಮತ್ತು ನಾರಾಯಣ ಗುರುವಿನ ಟ್ಯಾಬ್ಲೊ ಕೇಂದ್ರ ಸರ್ಕಾರದ ನಿರಾಕರಣೆಗೆ ಗುರಿಯಾಗಿರುವಂತಹ ಈ ಸಂದರ್ಭದಲ್ಲಿ ಸಂಘಪರಿವಾರದ ಶಕ್ತಿಗಳಿಗೆ ಹಿನ್ನಡೆ ಆಗಿದೆ ಅನ್ನುವ ಅಂಶ ನಿಮ್ಮೆಲ್ಲರ ಗಮನಕ್ಕೆ ಬಂದಿದೆ ಅಂತ ಅಂದುಕೊಳ್ಳುತ್ತೇನೆ. ಈ ವಿಷಯಗಳ ಬಗ್ಗೆ ಮುಜುಗರವನ್ನು ಅನುಭವಿಸುತ್ತಾ ಇರತಕ್ಕಂತ ಆಡಳಿತ ಪಕ್ಷದವರಿಗೆ ಮತ್ತು ರಾಜಕೀಯ ಪಕ್ಷದವರಿಗೆ ಸ್ಕಾರ್ಫ್ ವಿವಾದದ ಮೂಲಕ ನೀವುಗಳು ಅತೀವ ರಕ್ಷಣೆಯನ್ನು ಅವರುಗಳಿಗೆ ಒದಗಿಸಿಕೊಟ್ಟು ಈ ವಿವಾದವು ಅಂತರರಾಷ್ಟ್ರೀಯ ಮಟ್ಟವನ್ನು ತಲುಪುವುದಕ್ಕೂ ಕೂಡ ನೀವು ಕಾಣಿಕೆಯನ್ನು ಕೊಡುತ್ತಿದ್ದೀರಿ ಎಂಬ ಅಂಶ ನಿಮಗೂ ತಿಳಿದಿದೆ ಅಂತ ನಾನು ಭಾವಿಸುತ್ತೇನೆ.
ಕರಾವಳಿ ತೀರದ ನನ್ನ ಎಳೆಯ ಗೆಳತಿಯರೇ, ಸುಮಾರು ಒಂದು ತಿಂಗಳಿನಿಂದ ಸ್ಕಾರ್ಫ್ ಧರಿಸುವ ನಿಮ್ಮ ಧಾರ್ಮಿಕ ಹಕ್ಕಿನ ಬಗ್ಗೆ ನೀವು ನಡೆಸುತ್ತಿರುವ ಹೋರಾಟವನ್ನು ನಾನು ಗಮನಿಸುತ್ತಿದ್ದೇನೆ ಮತ್ತು ಕಾಲಕಾಲಕ್ಕೆ ಕೆಲವೊಂದು ಪೋಸ್ಟ್ಗಳನ್ನು ಕೂಡ ಫೇಸ್ಬುಕ್ ಮೂಲಕ ನಿಮ್ಮೆಲ್ಲರ ಎದುರಿಗೆ ಇಡುತ್ತಿದ್ದೇನೆ. ನನ್ನ ಎಫ್ಬಿ ಗೆಳತಿಯೊಬ್ಬಳು ನನ್ನನ್ನು ಕುಟುಕಿದಂತೆ ನಾನು ಕಥೆ ಕವನ ಬರೆದುಕೊಂಡು ಹಾಯಾಗಿರಬಹುದಿತ್ತು. ಆದರೆ ಅದು ನನಗೆ ಸಾಧ್ಯವಾಗುತ್ತಿಲ್ಲ ನನ್ನ ಮೊಟ್ಟ ಮೊದಲ ಕಾಳಜಿ ನೀವು ಮತ್ತು ನಿಮ್ಮ ವಿದ್ಯಾಭ್ಯಾಸ ಮತ್ತು ನೀವು ಅನುಭವಿಸುತ್ತಿರುವ ಪರಕೀಯತೆ. ಒಂದೇ ಕ್ಷಣದಲ್ಲಿ ನಿಂತ ನೆಲ ಜರಗುವುದು ಕೈಯಲ್ಲಿ ಹಿಡಿದ ಲೋಟದ ನೀರು ಕುದಿದು, ಗಂಟಲ ಸುಡುವುದು ತಾಯಿಯ ಹಾಲು ವಿಷವಾಗುವುದು, ತಂದೆಯ ಬೆಚ್ಚಗಿನ ತೋಳುಗಳು ಕತ್ತು ಹಿಸುಕುವ ಹಗ್ಗವಾಗುವುದು – ಇಂತಹ ಅತ್ಯಂತ ಅಪರಿಚಿತವಾದ ನಕಾರಾತ್ಮಕವಾದ ನಿಮ್ಮ ಶಕ್ತಿಯ ಸೋರಿಕೆಯಾಗುವ ವಾತಾವರಣದಲ್ಲಿ ಹಾಲಿ ನೀವಿದ್ದೀರಿ. ನಿಮ್ಮಗಳ ಎದುರಿಗೆ ಕಬ್ಬಿಣದ ಗೇಟ್ ಇದೆ ; ಅ ಗೇಟನ್ನು ಬಲವಂತವಾಗಿ ನಿಮಗೆ ಅಕ್ಷರ ಕಲಿಸುವ ಗುರು ಮುಚ್ಚುತ್ತಿದ್ದಾರೆ .ಅದರಾಚೆ ತಂಡತಂಡವಾಗಿ ಮಹಿಳಾ ಅಧ್ಯಾಪಕಿಯರು ನಿಮ್ಮನ್ನೇ ದೃಷ್ಟಿಸುತ್ತ ನಿಂತಿದ್ದಾರೆ. ನಿಮ್ಮನ್ನು ಕಂಡು ಆ ಪೈಕಿ ಕೆಲವರಿಗಾದರೂ ಎದೆ ಮಿಡಿದಿರಬಹುದು. ದೂರದಲ್ಲಿ ಕುಳಿತು ನೋಡುವ ನಮಗೆ ಅಧ್ಯಾಪಕಿಯರು ನಿಮ್ಮೊಡನೆ ಸಂವಹನ ಮಾಡಲು ಬಯಸುತ್ತಿದ್ದಾರೆಯೋ ಸ್ಪಂದನಶೀಲತೆಯಿಂದ ಮಾತನಾಡಲು ಬಯಸುತ್ತಿದ್ದಾರೆಯೋ ಅಥವಾ ಅತ್ಯಂತ ಕ್ರೂರವಾಗಿ ನಿಮ್ಮನ್ನು ಒಳ ಬಿಡದಂತೆ ಕೋಟೆಯಾಗಿ ನಿಂತಿದ್ದಾರೆಯೋ ಒಂದು ಕೂಡಾ ತಿಳಿಯುತ್ತಿಲ್ಲ. ಮೀಡಿಯಾ ಹಲವಾರು ವಿಷಯಗಳನ್ನು ಬಣ್ಣಬಣ್ಣವಾಗಿ ಬಿತ್ತರಿಸುತ್ತಿದೆ .ಹಲವಾರು ವರ್ಷಗಳ ಸಹಪಾಠಿಗಳು ನಿಮ್ಮೆದುರಿಗೆ ವೈರಿಗಳಂತೆ ನಿಂತಿದ್ದಾರೆ ಸ್ಕಾರ್ಫ ಮತ್ತು ಕೇಸರಿ ಶಾಲುಗಳು ತಮ್ಮದಲ್ಲದ ಪಾತ್ರವನ್ನು ನಿರ್ವಹಣೆ ಮಾಡಲು ಸನ್ನದ್ದವಾಗಿ ನಿಂತಿವೆ .
ಗೆಳತಿಯರೇ ನಿಮ್ಮ ಕಾಳಜಿ ಮತ್ತು ಹಕ್ಕೊತ್ತಾಯ ನನಗೆ ಅರ್ಥವಾಗುತ್ತೆ. ಒಂದು ಧಾರ್ಮಿಕ ಕರ್ತವ್ಯವನ್ನು ಮಾಡಲೇಬೇಕೆಂಬ ನಿಮ್ಮ ಅನಿಸಿಕೆ ಸರಿ ಇರುತ್ತದೆ . ಆದರೆ ಇದರ ಬಗ್ಗೆ ಅನೇಕರು ಒಂದು ಬಟ್ಟೆ ತುಂಡಿನಿಂದ ಏನಾಗುತ್ತದೆ . .. ಏನಾಗುವುದಿಲ್ಲ ಎಂದು ಹಲವಾರು ಚರ್ಚೆಗಳನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಇನ್ನು ಕೆಲವರು ಸ್ಕಾರ್ಫ್ ಎಂಬುದು ನಮ್ಮ ಹೆಮ್ಮೆ ಎಂದು ಹೇಳುತ್ತಾರೆ ಇನ್ನೂ ಕೆಲವರು ನಮ್ಮ ತಲೆಗವಸು ನಮ್ಮ ಐಡೆಂಟಿಟಿ ನಮ್ಮ ಹೆಣ್ತನದ ಅಭಿರಕ್ಷೆ ಎಂದು ತಮ್ಮ ವಾದವನ್ನು ಮಂಡಿಸುತ್ತಿದ್ದಾರೆ. ಈ ಎಲ್ಲಾ ಪಾತ್ರಗಳು ಕೂಡ ಅವರವರ ಭಾವಕ್ಕೆ ಭಕುತಿಗೆ ತಕ್ಕಂತೆ ಇರುತ್ತವೆ. ನಿಮ್ಮ ನಿಮ್ಮ ಭಾವಗಳನ್ನು ನೀವು ಸ್ಪಷ್ಟವಾಗಿ ಗುರುತಿಸಿ ಹೋರಾಟಕ್ಕೆ ಇಳಿದಿರುವ ಈ ಸಂದರ್ಭದಲ್ಲಿ ನಿಮಗಿಂತ ಒಂದಿಷ್ಟು ಹೆಚ್ಚು ವಯಸ್ಸು ಮತ್ತು ಅನುಭವವನ್ನು ಗಳಿಸಿರುವ ನಾನು ಒಂದೆರಡು ಮಾತುಗಳನ್ನು ಆಡಲೇಬೇಕಾಗಿದೆ. ವಕೀಲರಾಗಿ ನಾನು ಪ್ರಾಕ್ಟೀಸ್ ಮಾಡುವ ಸಂದರ್ಭದಲ್ಲಿ ನನ್ನ ಒಂದು ಕೇಸಿನಲ್ಲಿ ನಾನು ನ್ಯಾಯಾಲಯವನ್ನು ಒಪ್ಪಿಸಿ ಆದೇಶವನ್ನು ಪಡೆಯಲೇಬೇಕಾಗುತ್ತದೆ. ಆ ರೀತಿಯ ಒತ್ತಡ ನನ್ನ ಮೇಲೆ ಇರುತ್ತದೆ. ಹೀಗಾಗಿ ನಾನು ಮರುದಿನ ಬೆಳಿಗ್ಗೆ ಎದ್ದು ಕೋರ್ಟಿಗೆ ಹೋಗಿ ನಾನು ವಾದ ಮಾಡಲೇ ಬೇಕು ಎಂದು ಹಠ ಹಿಡಿಯುವುದಿಲ್ಲ. ನಾನು ಗೆಲುವನ್ನು ಪಡೆಯಲು ಹೇಗೆ ಡ್ರಾಫ್ಟ್ ಮಾಡಬೇಕು ಅದನ್ನು ಹೇಗೆ ನ್ಯಾಯಾಲಯಕ್ಕೆ ಪ್ರೆಸೆಂಟ್ ಮಾಡಬೇಕು ಯಾವಾಗ ನನ್ನ ಕಡತ ಕೋರ್ಟಿಗೆ ಬರುವ ಹಾಗೆ ನೋಡಿಕೊಳ್ಳಬೇಕು ಅದಕ್ಕಿಂತ ಮುಂಚೆ ನ್ಯಾಯಾಧೀಶರ ಮನಸ್ಥಿತಿಯನ್ನು ಹಲವಾರು ದಿನಗಳ ಕಾಲ ನಾನು ಪಟ್ಟಿ ಮಾಡಿಕೊಂಡಿರುತ್ತೇನೆ. ಮತ್ತು ಯಾವ ರೀತಿಯಲ್ಲಿ ನ್ಯಾಯಾಧೀಶರ ಬಳಿ ನಾನು ಆರ್ಡರನ್ನು ಪಡೆಯಬಹುದು ಎಂಬ ಗ್ರೌಂಡ್ ವರ್ಕ್ ಕೂಡ ಮಾಡಿರುತ್ತೇನೆ. ಅದರ ಜೊತೆಯಲ್ಲಿ ವಾದದ ದಿನಾಂಕವೂ ಇಂತಹ ದಿನವೇ ಬರಬೇಕು ಎಂದು ನನ್ನದೊಂದು ತಯಾರಿಯನ್ನು ಮಾಡಿಕೊಂಡಿದ್ದು ಅದರಲ್ಲಿ ನನ್ನ ವಾದವನ್ನು ಮಂಡಿಸಿ ಅದಕ್ಕೆ ಪೂರಕವಾದ ನನ್ನ ಅನೇಕ ಜಡ್ಜ್ಮೆಂಟ್ ಗಳನ್ನು ಕೊಟ್ಟು ನ್ಯಾಯಾಲಯದಿಂದ ಆದೇಶವನ್ನು ನಿರೀಕ್ಷಿಸುತ್ತೇನೆ.
ನಿಮ್ಮ ಪೂರ್ವತಯಾರಿ ಏನಿದೆಯೋ ನನಗಂತೂ ಗೊತ್ತಿಲ್ಲ. ಕರಾವಳಿ ತೀರದ ಮನಸ್ಥಿತಿಯಾಗಲಿ ರಾಜಕೀಯ ಮೇಲಾಟ ಗಳಾಗಲಿ ಅಷ್ಟಿಷ್ಟು ವೀಡಿಯೋ ಮೂಲಕ ತಿಳಿಯುತ್ತಿದೆ ಹೊರತು ವಾಸ್ತವವಾಗಿ ಮಣ್ಣಿನ ನೆಲದ ಮೂಲಕ ಘಮಲಿನ ಮೂಲಕ ನನ್ನ ಅರಿವಿಗೆ ಬರಲು ಸಾಧ್ಯತೆ ಇಲ್ಲ. ಆದರೂ ಕೂಡ ನೀವು ತಿಳಿಯಬಹುದು ಅರ್ಥಮಾಡಿಕೊಳ್ಳಬಹುದು ಇದು ಕೇವಲ ನಿಮ್ಮ ಧಾರ್ಮಿಕ ಕರ್ತವ್ಯವಾಗಿ ಉಳಿದಿಲ್ಲ , ಬದಲಿಗೆ ಇದು ಕೋಮುವಾದಿ ರಾಜಕೀಯದ ಅಂಗಳ ವಾಗುತ್ತಿದೆ. ಕರಾವಳಿ ಭಾಗದಲ್ಲಿ ಕಳೆದ ಮೂವತ್ತು ವರ್ಷಗಳಿಂದ ಕೋಮುವಾದಿ ಪ್ರಯೋಗಶಾಲೆ ನಡೆಯುತ್ತಿದೆ ಎಂಬುದು ನಮ್ಮ ಅರಿವಿಗೆ ತಿಳುವಳಿಕೆಗೆ ಬರುತ್ತಿರುವಂತಹ ವಿಷಯವಾಗಿದೆ. ಇಂತಹ ಸಂದರ್ಭದಲ್ಲಿ ಕೊರಗರ ಮದುವೆಯ ಬಗ್ಗೆ ನಡೆದಿರುವಂತಹ ಪೊಲೀಸ್ ಕ್ರಮಗಳಿಂದ ಮತ್ತು ನಾರಾಯಣ ಗುರುವಿನ ಟ್ಯಾಬ್ಲೊ ಕೇಂದ್ರ ಸರ್ಕಾರದ ನಿರಾಕರಣೆಗೆ ಗುರಿಯಾಗಿರುವಂತಹ ಈ ಸಂದರ್ಭದಲ್ಲಿ ಸಂಘಪರಿವಾರದ ಶಕ್ತಿಗಳಿಗೆ ಹಿನ್ನಡೆ ಆಗಿದೆ ಅನ್ನುವ ಅಂಶ ನಿಮ್ಮೆಲ್ಲರ ಗಮನಕ್ಕೆ ಬಂದಿದೆ ಅಂತ ಅಂದುಕೊಳ್ಳುತ್ತೇನೆ. ಈ ವಿಷಯಗಳ ಬಗ್ಗೆ ಮುಜುಗರವನ್ನು ಅನುಭವಿಸುತ್ತಾ ಇರತಕ್ಕಂತ ಆಡಳಿತ ಪಕ್ಷದವರಿಗೆ ಮತ್ತು ರಾಜಕೀಯ ಪಕ್ಷದವರಿಗೆ ಸ್ಕಾರ್ಫ್ ವಿವಾದದ ಮೂಲಕ ನೀವುಗಳು ಅತೀವ ರಕ್ಷಣೆಯನ್ನು ಅವರುಗಳಿಗೆ ಒದಗಿಸಿಕೊಟ್ಟು ಈ ವಿವಾದವು ಅಂತರರಾಷ್ಟ್ರೀಯ ಮಟ್ಟವನ್ನು ತಲುಪುವುದಕ್ಕೂ ಕೂಡ ನೀವು ಕಾಣಿಕೆಯನ್ನು ಕೊಡುತ್ತಿದ್ದೀರಿ ಎಂಬ ಅಂಶ ನಿಮಗೂ ತಿಳಿದಿದೆ ಅಂತ ನಾನು ಭಾವಿಸುತ್ತೇನೆ.
ಜಕಾರ್ತದಲ್ಲಿ ನನ್ನ ಮಗಳು ತನ್ನ ಸಂಸಾರದೊಂದಿಗೆ ವಾಸವಾಗಿದ್ದಾಳೆ ಅಲ್ಲಿನ ಮಾಧ್ಯಮದಲ್ಲಿ ನಡೆಯುತ್ತಿರುವಂತಹ ಕೋಲಾಹಲ ಕರವಾದ ವಿಡಿಯೋಗಳನ್ನು ಮತ್ತು ಫೋಟೋಗ್ರಾಫ್ ಗಳನ್ನು ನನಗೆ ಕಳುಹಿಸುತ್ತಿದ್ದಾಳೆ. ನಮ್ಮ ದೇಶದ ಮಾನ ಹರಾಜಾಗುತ್ತಿದೆ. ಮುಂದುವರೆದಂತೆ ನಾನು ನಿಮಗೆ ಹೇಳುತ್ತೇನೆ ಕೋರುತ್ತೇನೆ ನಾವು ಎದೆತಟ್ಟಿ ಹೇಳುತ್ತೇವೆ ಈ ದೇಶ ನನ್ನದು ಎಂದು. ಪಾಕಿಸ್ತಾನಕ್ಕೆ ನೀವು ಹೋಗಿ ಎಂದು ಸಂಘ ಪರಿವಾರದ ಮಿತ್ರರು ಯಾರಾದರೂ ಹೇಳಿದಾಗ ನಮಗೆ ಉರಿ ಹತ್ತುತ್ತೆ. ನನ್ನ ಅಜ್ಜ ಮುತ್ತಜ್ಜ ನನ್ನ ಹಿರಿಯ ಎಲ್ಲಾ ಮಹಿಳೆಯರು ತಮ್ಮ ಉಸಿರಿನ ಪ್ರತಿಕ್ಷಣವನ್ನೂ ಕೂಡ ಇಲ್ಲಿನ ಗಾಳಿಯನ್ನು ಉಸಿರಾಡಿ ಇಲ್ಲಿನ ಮಣ್ಣಿನಲ್ಲಿ ಮಣ್ಣಾಗಿ ಹೋಗಿದ್ದಾರೆ. ನನ್ನ ಕುಟುಂಬದ ಹಿರಿಯ ಮಹಿಳೆಯೊಬ್ಬರು ಪ್ರಾಣ ಬಿಡುವ ಸಂದರ್ಭ ಅದಾಗಿತ್ತು. ಎಲ್ಲಾ ರೀತಿಯ ಪವಿತ್ರ ನೀರುಗಳು ಅಂತ ಹೇಳುವಂತಹುದು ಎಲ್ಲವೂ ನಮ್ಮ ಮನೆಯಲ್ಲಿ ಲಭ್ಯವಿತ್ತು. ಆದರೆ ಆಕೆ ಮದುವೆಯಾಗಿ ಹೋಗಿದ್ದು ಅರಕಲಗೂಡಿಗೆ. ಹಾಸನದ ಆಸ್ಪತ್ರೆಯಲ್ಲಿ ಅಕೆ ಕೊನೆಯುಸಿರೆಳೆಯುವ ಸಂದರ್ಭದಲ್ಲಿ ಆಕೆ ಹೇಳಿದರು ಕಾವೇರಿ ನೀರನ್ನು ನನ್ನ ಬಾಯಿಗೆ ಬಿಡಿ’ ಎಂದು. ಇವುಗಳೆಲ್ಲವನ್ನು ನಾವು ಅನುಭವಿಸಿದ್ದೇವೆ ನಮ್ಮ ಕಣ್ಣುಗಳು ಹನಿಗೂಡುತ್ತವೆ. ಆದರೆ ಇದನ್ನು ನಾವು ಎಲ್ಲಿಯೂ ಕೂಡ ಹೇಳಿಕೊಳ್ಳಲಾಗುವುದಿಲ್ಲ. ಆದರೆ ಎಲ್ಲರೂ ತಮ್ಮ ನಾಲಿಗೆಯನ್ನು ಹರಿಬಿಡುತ್ತಾರೆ ; ನನಗೆ ಗೊತ್ತೇ ಇಲ್ಲದ ಅರಿವೇ ಇಲ್ಲದ ನೋಡಿಯೇ ಇಲ್ಲದ ಪಾಕಿಸ್ತಾನಕ್ಕೆ ಹೋಗು ಎಂದು ನನಗೆ ಆದೇಶ ಅಪ್ಪಣೆ ಮಾಡುತ್ತಾರೆ. ಇಂತಹ ದುಸ್ಥಿತಿಯಲ್ಲಿ ಮಾನಸಿಕವಾಗಿ ಪರಕೀಯಳಾಗಿದ್ದು ನಾನು ನನ್ನ ದೇಶ ಎಂದು ಮುಷ್ಟಿ ಹಿಡಿದು ಎದೆಗೆ ಗುದ್ದಿ ಹೇಳುವಂತಹ ಈ ಸಂದರ್ಭದಲ್ಲಿ ಕೂಡ ನೀವು ಎಲ್ಲಿ ನಿಂತಿದ್ದೀರಿ ಎಂಬ ಪ್ರಶ್ನೆಯನ್ನು ಮಾಡಿಕೊಳ್ಳಬೇಕಾಗಿದೆ. ನಾವು ಪರಕೀಯರು ಎಂದು ನಮ್ಮನ್ನು ಗೋಡೆಗೆ ಒತ್ತರಿಸುವ ಸಂದರ್ಭದಲ್ಲಿ ನೀವು ಹೌದು ನಾವು ಪರಕೀಯರು ನಮ್ಮ ಧಾರ್ಮಿಕ ಗುರುತೇ ನಮ್ಮ ಬದುಕು ಮತ್ತು ಸಾವಿನ ಪ್ರಶ್ನೆ ಎಂದು ಸಾರಿಸಾರಿ ಹೇಳುತ್ತಿದ್ದೀರಿ’ ಇದು ಸರಿಯಾ ನೀವು ಪ್ರಶ್ನೆ ಮಾಡಿಕೊಳ್ಳಿ .
ಈ ಹಿಂದೆ ಬರೆದ ಲೇಖನಗಳಲ್ಲಿ “ನಾನು ಶಾ ಬಾನು ಪ್ರಕರಣದಲ್ಲಿ ಯಾರ ಯಾರ ಪಾತ್ರ ಏನಿತ್ತು ಮತ್ತು ಶರಿಯತ್ ಬಚಾವೋ ಎಂಬ ಸಂದರ್ಭದಲ್ಲಿ ಮುಸ್ಲಿಮರನ್ನು ಬೀದಿಗೆ ಇಳಿಸಿದ ಮತ್ತು ಭಾರತದ ಕೋಮುವಾದಿ ರಾಜಕಾರಣಕ್ಕೆ ಸರ್ವಸ್ವವನ್ನು ಒದಗಿಸಿಕೊಟ್ಟ ಸಂಘಟನೆಗಳ ಪಾತ್ರಗಳನ್ನು ವಿವರವಾಗಿ ಹೇಳಿದ್ದೇನ. ಸಾಧ್ಯವಾದರೆ ಒಮ್ಮೆ ಓದಿ ನೋಡಿ. ಶರಿಯತ್ ಅವರು ಅಂದುಕೊಂಡಂತೆ ಉಳಿಯಲಿಲ್ಲ. ನಮ್ಮ ದೇಶದ ಸರ್ವೋಚ್ಛ ನ್ಯಾಯಾಲಯದ ಅನೇಕ ತೀರ್ಪುಗಳ ಮೂಲಕ ಬದಲಾದ ಶರಿಯತ್‌ನ ರೂಪ ಹಾಲಿ ಏನಾಗಿದೆ ಎಂಬುದನ್ನು ಅನೇಕ ತೀರ್ಪುಗಳ ಮೂಲಕ ನಿಮ್ಮ ಎದುರಿಗೆ ಸಾದರಪಡಿಸಿದ್ದೇನೆ.
ಇನ್ನೂ ಒಂದು ಮಾತಿದೆ ಮುಸ್ಲಿಮರು ಈ ದೇಶದಲ್ಲಿ ದ್ವೀಪಗಳಾಗಿ ಉಳಿದಿಲ್ಲ. ಒಂದು ಬಹುತ್ವದ ಸಮಾಜದಲ್ಲಿ ಬಾಳಿ ಬದುಕುತ್ತಿರುವ ಭಾರತೀಯ ಮುಸ್ಲಿಂ ಮಹಿಳೆ ನಾನು ನೀವು ಮತ್ತು ಎಲ್ಲರೂ ಕೂಡ. ಅಂದರೆ ನನ್ನ ಐಡೆಂಟಿಟಿ ಯಲ್ಲಿ ಭಾರತೀಯ ಎಂಬುದು ಮೊದಲಿಗೆ ಬರುತ್ತದೆ ಮುಸ್ಲಿಂ ನಂತರದ್ದು . ಈ ಅಂಶಕ್ಕೆ ಇಂಬುಕೊಡುವಂತೆ ಹಜ್‌ನ ಸಂದರ್ಭದಲ್ಲಿ ನಾನು ನೋಡಿದ ಒಂದು ಘಟನೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಇಷ್ಟಪಡುತ್ತೇನೆ . 65 ಲಕ್ಷ ಜನ ಭಾಗವಹಿಸಿದ್ದ ಆ ಸಂದರ್ಬದಲ್ಲಿ ಮೀನಾದಲ್ಲಿ ನಾವು ಉಳಿದುಕೊಂಡಿದ್ದಂತಹ ಪ್ರದೇಶವನ್ನು ಗುರುತಿಸಲು ನಮಗೆ ಸಾಧ್ಯವಾಗುತ್ತಿರಲಿಲ್ಲ. ಆ ಸಂದರ್ಭದಲ್ಲಿ ಯಾವ ಪ್ರದೇಶದಲ್ಲಿ ಸಾವಿರಾರು ಭಾರತೀಯ ಧ್ವಜಗಳು ಒಟ್ಟೊಟ್ಟಿಗೆ ಆಕಾಶದೆತ್ತರಕ್ಕೆ ಹಾರಾಡುತ್ತಿದ್ದವೋ ಅದೇ ನಮ್ಮ ಗಮ್ಯಸ್ಥಾನ ಎಂದು ಗುರುತಿಸಿ ನಾವು ಅಲ್ಲಿಗೆ ತಲುಪುತ್ತಿದ್ದೆವು. ಅಂತಹ ದೃಶ್ಯವನ್ನು ನಾನು ಭಾರತದಲ್ಲಿಯೂ ಕೂಡ ಎಲ್ಲಿಯೂ ಇದುವರೆಗೂ ನೋಡಲು ಸಾಧ್ಯವಾಗಿಲ್ಲ. ಅಂತಹ ಪವಿತ್ರ ಭೂಮಿಯಲ್ಲಿಯೂ ಕೂಡ ನಾವು ನಮ್ಮ ಭಾರತೀಯತೆಯ ಮೇಲೆ ಗುರುತಿಸಲ್ಪಡುವಂತಹ ಒಂದು ಪ್ರಸಂಗವೂ ನಿಜವಾಗಿಯೂ ನನಗೆ ಹೆಮ್ಮೆ ತರುತ್ತದೆ ಎಂಬ ಅಂಶವನ್ನು ನಾನು ನಿಮ್ಮೆದುರಿಗೆ ಹೇಳಿಕೆ ಇಷ್ಟಪಡುತ್ತೇನೆ.
ಬಹುತ್ವದ ದೇಶದಲ್ಲೇ ಬಹುತ್ವದ ಸಂಸ್ಕೃತಿಯನ್ನು ಸೃಷ್ಟಿ ಮಾಡಲು ನಾವು ವಿಫಲವಾಗಿದ್ದೇವೆ ನಮ್ಮೊಂದಿಗೆ ಅನೇಕ ಜನ ಕೂಡ ವಿಫಲರಾಗಿದ್ದಾರೆ. ಶಾಲೆಯಲ್ಲಿ ನೀವು ಸರಸ್ವತಿ ಪೂಜೆ ಮಾಡುತ್ತೀರಿ , ಸ್ವಾಮಿದೇವನೆ ಲೋಕಪಾಲನೆ ಅಂತ ಪ್ರಾರ್ಥನೆ ಮಾಡಿಸುತ್ತೀರಿ ಅಂತ ಯಾವೊತ್ತು ನಾವು ಗಟ್ಟಿದನಿಯಲ್ಲಿ ಕೇಳಿದ್ದೇವೆ? ಬದಲಿಗೆ ನಾವು ನೆಪವನ್ನು ಮುಂದಿಡುತ್ತಿದ್ದೇವೆ. ಇಷ್ಟೆಲ್ಲ ಸವಲತ್ತು ನಿಮಗೆ ಇದೆ ನಮಗೂ ಇಂತಹ ಧಾರ್ಮಿಕ ಹಕ್ಕನ್ನು ಕೊಡಿ ಅಂತ. ನನ್ನ ಹಿಂದಿನ ಮಾತಿಗೆ ಬರುವುದಾದರೆ ಬಹುತ್ವದ ದೇಶದಲ್ಲಿ ನಾವು ಬಹುತ್ವದ ಸಂಸ್ಕೃತಿಯನ್ನು ರೂಪಿಸಬೇಕಿತ್ತು ಮನಃಸ್ಥಿತಿಯನ್ನು ರೂಡಿಸಿಕೊಳ್ಳಬೇಕಿತ್ತು ನಮ್ಮ ನೆಲ-ಜಲದೊಡನೆ ಸಂಬಂಧ ಬೆಳೆಸ ಬೇಕಿತ್ತು. ಆದರೆ ನಾವು ನಮ್ಮದೇ ಧೋರಣೆಗಳನ್ನು ಪ್ರತಿಪಾದಿಸುತ್ತಾ ಬಂದೆವು.ಈ ದೇಶದ ವಿಭಿನ್ನ ಸಂಸ್ಕೃತಿಯನ್ನು ಗುರುತಿಸುವುದೇ ಆಗಲಿ ಅದರ ಬಗ್ಗೆ ಉದಾರತೆಯ ಬಾಂಧವ್ಯವನ್ನು ಬೆಳೆಸಿಕೊಳ್ಳುವುದೇ ಆಗಲಿ ನಮ್ಮಿಂದ ಈ ನಿಟ್ಟಿನಲ್ಲಿ ಹೆಚ್ಚಿನ ಕೆಲಸವಾಗಿಲ್ಲ.
ಮಹಮ್ಮದ್‌ರವರ ಬದುಕಿನಲ್ಲಿ ಕೂಡ ಅಪಾರ ಸಂಘರ್ಷ ವಿತ್ತು ತಮ್ಮ ಸಂಘರ್ಷವನ್ನು ಎಲ್ಲಾ ಸಂದರ್ಬಗಳಲ್ಲಿಯೂ ಕೂಡ ಅವರುಯುದ್ಧದ ಹಂತಕ್ಕೆ ಕೊಂಡು ಹೋಗಲಿಲ್ಲ. ಬದಲಿಗೆ ಅನೇಕ ಸಂದರ್ಭಗಳಲ್ಲಿ ಅವರು ಸಂದಾನಕ್ಕೆ ಪ್ರಾಶಸ್ತ್ಯವನ್ನು ಕೊಟ್ಟಿದ್ದಾರೆ. ಅವರ ಆ ಕೃತಿಯು ನಮಗೆಲ್ಲಾ ಅನುಕರಣೀಯವಾಗಿದೆ. ಸೋಲು ಮತ್ತು ಗೆಲುವು ಒಂದು ಸಂದರ್ಭದ ಪರಿಣಾಮಕಾರಿ ತಿರುವಿನಲ್ಲಿ ನಾವು ಗಮನಿಸಬೇಕಾಗುತ್ತದೆ .ಮನುಷ್ಯ ಜೀವಿಗಳ ಒಳಿತಿಗೆ ಸಮಾಜದಲ್ಲಿ ಶಾಂತಿ ಸ್ಥಾಪನೆಯ ಸಲುವಾಗಿ ಮತ್ತು ನಿಮ್ಮೆಲ್ಲರ ವಿದ್ಯಾಭ್ಯಾಸವು ಸುಗಮವಾಗಿ ಮುಂದುವರೆಯುವ ದಿಕ್ಕಿನಲ್ಲಿ ಹಾಗೂ ಕೋಮುವಾದಿ ರಾಜಕಾರಣದ ಪ್ರೇರೇಪಣೆ ಗಳಿಗೆ ನೀವು ದಾಳವಾಗದೆ ಇರುವಂತಾಗಲು ದಯವಿಟ್ಟು ನಿಮ್ಮ ನಿಮ್ಮ ತರಗತಿಗಳಿಗೆ ಮರಳಿ ಹೋಗಿ. ಈಗಾಗಲೇ ಮುಸ್ಲಿಂ ಹೆಣ್ಣು ಮಕ್ಕಳ ಸ್ಕಾರ್ಫ್ ತೊಡುವ ಹಕ್ಕಿನ ಬಗ್ಗೆ ನೀವು ನಮ್ಮ ರಾಜ್ಯದ ಉಚ್ಚ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಿದ್ದೀರಿ. ಅಲ್ಲಿ ವಾದ ಮಂಡನೆಗೆ ನಿಮ್ಮ ವಕೀಲರಿಗೆ ಅವಕಾಶ ಕೊಡಿ . ಸೂಕ್ತವಾದಂತಹ ಮೆಟೀರಿಯಲ್ ಒದಗಿಸಿಕೊಡಿ.
ಮತ್ತು ನಾವು ನೀವು ಎಲ್ಲರೂ ಕೂಡ ಅತ್ಯಂತ ಗೌರವದಿಂದ ಉಚ್ಚ ನ್ಯಾಯಾಲಯದ ತೀರ್ಪನ್ನು ಎದುರು ನೋಡೋಣ.
ಏಕೆಂದರೆ ಕೋಮುವಾದಿ ರಾಜಕಾರಣದ ಮೊದಲ ಮತ್ತು ಕೊನೆಯ ಬಲಿ ಒಬ್ಬ ಅಲ್ಪಸಂಖ್ಯಾತ ವ್ಯಕ್ತಿಯಾಗಿರುತ್ತಾನೆ. ನಿಮ್ಮ ಸಂವೇದನಾಶೀಲ ಕೃತ್ಯದಿಂದ ಯಾರ ತಾಯಿಯ ಮಡಿಲು ಕೂಡ ಬರಿದಾಗದಿರಲಿ ಯಾವ ಮಕ್ಕಳು ಕೂಡ ತಬ್ಬಲಿಗಳಾಗದಿರಲ . ನಿಮ್ಮ ನಿಯತ್ ಎಷ್ಟು ಒಳ್ಳೆಯದಾಗಿರುತ್ತದೆ ಅಷ್ಟು ನಿಮಗೆ ಸಫಲತೆ ದೊರಕುತ್ತದೆ ಎಂದು ಹೇಳುತ್ತಾ. ಈ ನನ್ನ ಅಪೀಲು ಅಥವಾ ಕೋರಿಕೆ ಕೇವಲ ಆ ಹೆಣ್ಣು ಮಕ್ಕಳಿಗೆ ಮಾತ್ರ ಎಂದು ಬಾವಿಸದಿರಿ. ಎಲ್ಲ ಸಂವೇದನಾಶೀಲ ಮತ್ತು ಮನುಷ್ಯ ಪ್ರೀತಿಯ ಮನಸ್ಸುಗಳಿಗೆ ತಟ್ಟಿದಲ್ಲಿ ನನ್ನ ಕೊರಿಕೆ ಸಫಲವಾದಂತೆ. ಆದರೂ ನಿರ್ದಿಷ್ಟವಾಗಿ ಆಹೆಣ್ಣು ಮಕ್ಕಳ ತಂದೆ ತಾಯಿಯರು, ಶಾಲೆಯ ಆಡಳಿತ ಮಂಡಳಿಯವರು, ಕರಾವಳಿ ತೀರದ ಸುಸಂಸ್ಕೃತ ಮನುಷ್ಯರು, ದಾರ್ಮಿಕ ವಿಧ್ವಾಂಸರು ಹಾಗೂ ಸಾಮಾಜಿಕ ಕಾರ್ಯಕರ್ತರು ಎಲ್ಲರಿಗೂ ನಾನು ಬೇಡಿಕೊಳ್ಳುತ್ತಿದ್ದೇನೆ. ದಯವಿಟ್ಟು ನ್ಯಾಯಾಲಯದ ತೀರ್ಪನ್ನು ಎದುರುನೋಡುತ್ತಾ ಹೊರಗುಳಿದಿರುವ ಮುಸ್ಲಿಮ್ ಹೆಣ್ಣು ಮಕ್ಕಳು ತರಗತಿಗಳಿಗೆ ಮರಳಿ ಹೋಗಿ ,ತರಗತಿಯಲ್ಲಿ ಮಾತ್ರ ಸ್ಕಾರ್ಫ್ ಇಲ್ಲದೆ ತಮ್ಮ ಪಾಠ ಪ್ರವಚನಗಳಿಗೆ ಹಾಜರಾಗುವಂತಹ ಸಹಬಾಳ್ವೆಯ ಪರಿಸರವನ್ನು ಒದಗಿಸಿಕೊಡಿ. ಕೂಡಲೇ ತರಗತಿಗಳಿಗೆ ಹಾಜರಾಗಿ ನ್ಯಾಯಾಲಯದ ಆದೇಶವನ್ನು ನಿರೀಕ್ಷಿಸಿದರೆ ನಿಮಗೆ, ನಿಮ್ಮ ವಿದ್ಯಾಭ್ಯಾಸಕ್ಕೆ ಮತ್ತು ಇಡೀ ಸಮಾಜಕ್ಕೆ ಒಂದು ಒಳಿತಿನ ಸಂದೇಶವನ್ನು ನೀವು ಕೊಡುತ್ತೀರಿ ಎಂದು ಭಾವಿಸಿ ನನ್ನದೊಂದು ಸಲಹೆಯನ್ನು ನಿಮ್ಮೆದುರಿಗೆ ಹೇಳುತ್ತಿದ್ದೇನೆ ಬಹುಶಃ ನನ್ನ ಈ ಕೋರಿಕೆಯನ್ನು ನೀವು ಸ್ವೀಕರಿಸುತ್ತೀರಿ ಎಂಬ ಎಲ್ಲಾ ನಂಬಿಕೆ ಇದೆ.