–ನಾ ದಿವಾಕರ
ನವ ಉದಾರವಾದವು ಶ್ರಮಿಕವರ್ಗವನ್ನು ಹೆಚ್ಚು ಪರಾವಲಂಬಿಗಳನ್ನಾಗಿ ಮಾಡುತ್ತಿದೆ.
(ಜೀವನೋಪಾಯ ಮಾರ್ಗಗಳೂ ಸರ್ಕಾರಗಳ ಉಪಾಯಗಳೂ ಲೇಖನದ ಮುಂದುವರೆದ ಭಾಗ)
ಭಾಗ 2
1947ರಲ್ಲಿ ವಸಾಹತು ದಾಸ್ಯದಿಂದ ವಿಮೋಚನೆ ಪಡೆದ ಭಾರತ ತನ್ನ ಭವಿಷ್ಯದ ಅರ್ಥವ್ಯವಸ್ಥೆಯನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಸೋವಿಯತ್ ಮಾದರಿಯ ಅರ್ಥವ್ಯವಸ್ಥೆಯಿಂದ ಪ್ರಭಾವಿತವಾಗಿತ್ತು. ಆದರೆ ಸ್ವಾತಂತ್ರ್ಯ ಪೂರ್ವದಿಂದಲೇ ಬಂಡವಾಳಿಗರ ಹಿಡಿತದಲ್ಲಿದ್ದ ಕಾಂಗ್ರೆಸ್ ಪಕ್ಷಕ್ಕಾಗಲೀ, ಇತರ ಸಂಸದೀಯ ಪಕ್ಷಗಳಿಗಾಗಲೀ (ಎಡಪಕ್ಷಗಳ ಹೊರತುಪಡಿಸಿ) ಪರಿಪೂರ್ಣ ಸಮಾಜವಾದಿ ಆರ್ಥಿಕ ನೀತಿಗಳು ಅಪಥ್ಯವಾಗೇ ಇದ್ದವು. ಬರಿದಾಗಿದ್ದ ಬೊಕ್ಕಸ ಮತ್ತು ಬ್ರಿಟೀಷ್ ವಸಾಹತುಶಾಹಿಯ ಲೂಟಿಗೊಳಗಾಗಿದ್ದ ಭಾರತದ ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿಕೊಂಡೇ, ಒಂದು ಸ್ವಾವಲಂಬಿ ರಾಷ್ಟ್ರ ನಿರ್ಮಾಣಕ್ಕೆ ಅಗತ್ಯವಾದ ಆರ್ಥಿಕ ನೀತಿಗಳನ್ನು ನೆಹರೂ ಸರ್ಕಾರ ಅನುಸರಿಸಿತ್ತು. ಡಾ. ಬಿ.ಆರ್. ಅಂಬೇಡ್ಕರ್ ಸಂವಿಧಾನ ರಚನೆಯ ಸಂದರ್ಭದಲ್ಲಿ ಪ್ರಸ್ತಾಪಿಸಿದ್ದಂತಹ ಭೂ ರಾಷ್ಟ್ರೀಕರಣ ಮತ್ತು ಎಲ್ಲ ಸಂಪನ್ಮೂಲಗಳ ಮೇಲೆ ಸರ್ಕಾರದ ಒಡೆತನದ ಪ್ರಸ್ತಾಪಗಳು ಅಂತಿಮ ಕ್ಷಣದಲ್ಲಿ ನೇಪಥ್ಯಕ್ಕೆ ಸರಿದು ಭಾರತ ಅರೆ ಸಮಾಜವಾದಿ ಅಥವಾ ಮಿಶ್ರ ಅರ್ಥವ್ಯವಸ್ಥೆಯನ್ನು ಅನುಮೋದಿಸಿತ್ತು.
ನೆಹರೂ ಕಾಲಘಟ್ಟದ ಈ ಆರ್ಥಿಕ ನೀತಿಗಳು ಪ್ರಭುತ್ವದ ನೆರವಿನೊಂದಿಗೇ ಸಾರ್ವಜನಿಕ ಉದ್ದಿಮೆಗಳನ್ನು ಪ್ರೋತ್ಸಾಹಿಸುವ ಮೂಲಕ ವ್ಯಾಪಕವಾಗಿ ಕಾಡುತ್ತಿದ್ದ ಬಡತನ ಮತ್ತು ದಾರಿದ್ರ್ಯವನ್ನು ನಿವಾರಿಸುವ ನಿಟ್ಟಿನಲ್ಲಿ ಆರ್ಥಿಕ ನೀತಿಗಳು ರೂಪುಗೊಂಡವು. ಅನ್ಯ ರಾಷ್ಟ್ರಗಳನ್ನು ಅವಲಂಬಿಸದೆಯೇ ಭಾರತ ಒಂದು ಸ್ವಾವಲಂಬಿ ರಾಷ್ಟ್ರವಾಗಬೇಕು ಎಂಬ ನೆಹರೂ ಆಳ್ವಿಕೆಯ ಕನಸು ಸಾಕಾರಗೊಳ್ಳಲು 25 ವರ್ಷಗಳೇ ಬೇಕಾದವು. ಕೃಷಿ, ಕೈಗಾರಿಕೆ ಮತ್ತಿತರ ವಲಯಗಳಲ್ಲಿ ಉತ್ಪಾದನೆಯ ಮೂಲಗಳು ಹಾಗೂ ಉತ್ಪಾದನಾ ಸಾಧನಗಳು ಬಂಡವಾಳಿಗರ ಒಡೆತನದಲ್ಲೇ ಮುಂದುವರೆದಿದ್ದರೂ, ಸಾರ್ವಜನಿಕ ಉದ್ದಿಮೆಯಲ್ಲಿ ಹೆಚ್ಚಿನ ಬಂಡವಾಳ ಹೂಡುವ ಮೂಲಕ ತಳಮಟ್ಟದ ಶ್ರೀಸಾಮಾನ್ಯನ ಬದುಕಿಗೆ ಆಸರೆ ನೀಡುವ ಮತ್ತು ಜನಸಮುದಾಯಗಳನ್ನು ಸ್ವಾವಲಂಬಿಯನ್ನಾಗಿ ಮಾಡುವ ನಿಟ್ಟಿನಲ್ಲಿ ಆರ್ಥಿಕ ನೀತಿಗಳನ್ನು ರೂಪಿಸಲಾಯಿತು. ಈ ಹಾದಿಯಲ್ಲಿ ಭಾರತ ಯಶಸ್ವಿಯಾದರೂ, ಮೂರು ಯುದ್ಧಗಳಿಂದ ಜರ್ಝರಿತವಾದ ಭಾರತದ ಸಾಮಾಜಿಕ-ಆರ್ಥಿಕ ವ್ಯವಸ್ಥೆ ತನ್ನ ಸ್ವಾವಲಂಬನೆಯ ನೆಲೆಯನ್ನು ಕಳೆದುಕೊಳ್ಳುವ ಭೀತಿ ಎದುರಿಸಿದ್ದು 1966-72ರ ಅವಧಿಯಲ್ಲಿ ತಲೆದೋರಿದ ಆಹಾರದ ಕೊರತೆ, ತೀವ್ರ ಬಡತನ ಮತ್ತು ನಿರುದ್ಯೋಗದ ರೂಪದಲ್ಲಿ.
ಸಮಾಜವಾದದ ಕನಸು ಮತ್ತು ವಾಸ್ತವ
ನೆಹರೂ ಆರ್ಥಿಕತೆಯ ಚೌಕಟ್ಟಿನಲ್ಲೇ ಅನುಸರಿಸಲಾಗುತ್ತಿದ್ದ ಜನಕಲ್ಯಾಣ ಅರ್ಥವ್ಯವಸ್ಥೆಯಲ್ಲಿ ಭಾರತವನ್ನು ಒಂದು ಸ್ವಾವಲಂಬಿ ರಾಷ್ಟ್ರವನ್ನಾಗಿ ಮಾಡುವ ಸುಂದರ ಕನಸು ಕಾಣಬಹುದಿತ್ತು. ಆದರೆ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನೂ ಸ್ವಾವಲಂಬಿಯಾಗಿಸಲು ಅಗತ್ಯವಾದ ಅರ್ಥವ್ಯವಸ್ಥೆಗೆ ಪೂರಕವಾದ ನೀತಿಗಳು ಸಾಧ್ಯವಾಗಲಿಲ್ಲ. ದೇಶದ ಸಂಪತ್ತು, ನೈಸರ್ಗಿಕ ಸಂಪನ್ಮೂಲಗಳು ಹಾಗೂ ಉತ್ಪಾದನೆಯ ಮೂಲಗಳನ್ನು ಸಾರ್ವಜನಿಕ ಒಡೆತನಕ್ಕೆ ಒಳಪಡಿಸದೆಯೇ ಸಮ ಸಮಾಜವನ್ನು ಕಟ್ಟುವುದು ಅಸಾಧ್ಯ ಎನ್ನುವ ವಾಸ್ತವವನ್ನು ಅರಿತಿದ್ದದರಿಂದಲೇ ಅಂದಿನ ಸರ್ಕಾರಗಳು ತಳಮಟ್ಟದ ಜನತೆಯ ಬದುಕು ಹಸನಾಗುವ ರೀತಿಯಲ್ಲಿ ಆರ್ಥಿಕ ಯೋಜನೆಗಳನ್ನು, ನೀತಿಗಳನ್ನು ರೂಪಿಸಿದ್ದವು. ಕೃಷಿಯನ್ನೂ ಒಳಗೊಂಡಂತೆ ಉತ್ಪಾದನಾ ವಲಯಗಳಲ್ಲಿ ಸಾರ್ವಜನಿಕ ಬಂಡವಾಳ ಹೂಡುವ ಮೂಲಕ, ಖಾಸಗಿ ಬಂಡವಾಳಿಗರನ್ನೂ ಔದ್ಯಮಿಕವಾಗಿ ಪ್ರೋತ್ಸಾಹಿಸುವ ನೀತಿಯನ್ನು ಅನುಸರಿಸಿ ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡುವ ಯೋಜನೆಗಳನ್ನು ಸರ್ಕಾರಗಳು ಹಮ್ಮಿಕೊಂಡಿದ್ದವು. ಬ್ಯಾಂಕ್ ರಾಷ್ಟ್ರೀಕರಣ, ಹಸಿರು ಕ್ರಾಂತಿ, ಕ್ಷೀರ ಕ್ರಾಂತಿ ಮತ್ತು 1970ರ ದಶಕದ 20 ಅಂಶದ ಕಾರ್ಯಕ್ರಮಗಳ ಮೂಲಕ ಭಾರತ ಒಂದು ಸ್ವಾವಲಂಬಿ ರಾಷ್ಟ್ರವಾಗಿ ರೂಪುಗೊಂಡಿತಾದರೂ, ವ್ಯಕ್ತಿಗತ ನೆಲೆಯಲ್ಲಿ ಭಾರತದ ಸಮಸ್ತ ಪ್ರಜೆಗಳೂ ಸ್ವಾವಲಂಬಿಗಳಾಗಲಿಲ್ಲ.
ತಮ್ಮ ಜೀವನ ಹಾಗೂ ಜೀವನೋಪಾಯಕ್ಕಾಗಿ, ಸುಸ್ಧಿರ ಬದುಕನ್ನು ರೂಪಿಸಿಕೊಳ್ಳುವುದಕ್ಕಾಗಿ ಸಂಪತ್ತು ಮತ್ತು ಸಂಪನ್ಮೂಲಗಳ ಮೇಲೆ ಒಡೆತನ ಇಲ್ಲದ ಬಹುಸಂಖ್ಯಾತ ಜನತೆ ಸರ್ಕಾರದ ಜನಕಲ್ಯಾಣ ಯೋಜನೆಗಳು ಮತ್ತು ಸಾಂವಿಧಾನಿಕವಾಗಿ ನೀಡಲಾಗುತ್ತಿದ್ದ ಸವಲತ್ತು, ಸೌಕರ್ಯಗಳನ್ನೇ ಅವಲಂಬಿಸುವುದು ಅನಿವಾರ್ಯವಾಯಿತು. ಕೃಷಿ ಕ್ರಾಂತಿ ಮೂಲತಃ ಆಹಾರ ಉತ್ಪಾದನೆಯನ್ನು ಹೆಚ್ಚಿಸಲು ಸಾಧ್ಯವಾಯಿತೇ ಹೊರತು, ಭೂಹೀನ ಕೃಷಿಕರಿಗೆ ಮತ್ತು ಶೇ 80ರಷ್ಟಿದ್ದ ಗ್ರಾಮೀಣ ಜನತೆಗೆ ಭೂ ಹಂಚಿಕೆಯ ಮಾರ್ಗವಾಗಲಿಲ್ಲ. ಈ ಸಂದರ್ಭದಲ್ಲಿ ಕೈಗೊಂಡ ಭೂ ಸುಧಾರಣಾ ಕ್ರಮಗಳೂ ಸಹ ತಳಮಟ್ಟದ ಅವಕಾಶವಂಚಿತ ಶ್ರೀಸಾಮಾನ್ಯರಿಗೆ ನಿಲುಕದೆ ಹೋದವು. ಕರ್ನಾಟಕವನ್ನೂ ಸೇರಿದಂತೆ ಕೆಲವೇ ರಾಜ್ಯಗಳಲ್ಲಿ ಭೂ ಸುಧಾರಣಾ ಕ್ರಮಗಳು ಕೊಂಚ ಯಶಸ್ಸು ಕಂಡು, ಭೂ ಹಂಚಿಕೆಯೂ ಸಾಧ್ಯವಾಯಿತು. ಭೂಮಿಯನ್ನು ಪಡೆದ ರೈತನಿಗೆ ಕೃಷಿ ಚಟುವಟಿಕೆಗಳಿಗೆ ಅಗತ್ಯವಾದ ಹಣಕಾಸು ಹಾಗೂ ಪರಿಕರಗಳನ್ನು ಪಡೆಯಲು ಸಾರ್ವಜನಿಕ ಬ್ಯಾಂಕುಗಳ ಮೊರೆ ಹೋಗಬೇಕಾಯಿತು. ರಾಷ್ಟ್ರೀಕೃತ ಬ್ಯಾಂಕುಗಳು ದೇಶದ ಮೂಲೆ ಮೂಲೆಗೆ ತಲುಪಿದರೂ ಸಹ ಗ್ರಾಮೀಣ ಬಡಜನತೆ ಖಾಸಗಿ ಲೇವಾದೇವಿಗಾರರ ಹಿಡಿತದಿಂದ ಬಿಡಿಸಿಕೊಳ್ಳಲಾಗಲಿಲ್ಲ.
1970ರ ದಶಕದಲ್ಲಿ ಅನುಸರಿಸಲಾದ ಜನಕಲ್ಯಾಣ ಆರ್ಥಿಕ ನೀತಿಗಳು ದೇಶದ ಶ್ರಮಿಕ ವರ್ಗಗಳಿಗೆ ಹಾಗೂ ಬಡಜನತೆಗೆ ಬದುಕು ರೂಪಿಸಿಕೊಳ್ಳುವ ಸುಸ್ಥಿರ ನೆಲೆಯನ್ನು ನೀಡುವುದರ ಬದಲು, ತಮ್ಮ ಜೀವನೋಪಾಯದ ಮಾರ್ಗಗಳನ್ನು ಸುಗಮಗೊಳಿಸಿಕೊಳ್ಳುವ ಮಟ್ಟಿಗೆ ಮಾತ್ರ ನೆರವಾಗಿದ್ದವು. ಬಡತನ ನಿವಾರಣೆ ಎನ್ನುವುದು ಶಾಶ್ವತವಾಗಿ ದಾರಿದ್ರ್ಯವನ್ನು ಹೋಗಲಾಡಿಸಿ, ಪ್ರತಿಯೊಬ್ಬ ಪ್ರಜೆಯನ್ನೂ ಸ್ವಾವಲಂಬಿಯನ್ನಾಗಿ ಮಾಡುವುದಕ್ಕಿಂತಲೂ ಹೆಚ್ಚಾಗಿ, ತಮ್ಮ ನಿತ್ಯ ಬದುಕಿನ ಸವಾಲುಗಳನ್ನು ಎದುರಿಸಿ ತಾತ್ಕಾಲಿಕ ನೆಮ್ಮದಿಯ ಬದುಕು ನಡೆಸುವ ಅವಕಾಶಗಳನ್ನು ಕಲ್ಪಿಸಿದ್ದು ವಾಸ್ತವ. ಈ ಅರೆ ಸಮಾಜವಾದಿ ಆರ್ಥಿಕ ನೀತಿಗಳೇ ಜನಕಲ್ಯಾಣ ಅರ್ಥವ್ಯವಸ್ಥೆಯ ಬುನಾದಿಯೂ ಆಗಿತ್ತು. ಈ ಸನ್ನಿವೇಶದಲ್ಲೇ ಜನಕಲ್ಯಾಣ ಆರ್ಥಿಕತೆಯ ಕಲ್ಯಾಣ ಯೋಜನೆಗಳಿಂದಾಚೆಗೂ, ಸವಲತ್ತು-ಸೌಲಭ್ಯ ವಂಚಿತ ಜನಸಮುದಾಯಗಳಿಗೆ ನಿತ್ಯ ಬದುಕಿಗೆ ನೆರವಾಗುವಂತಹ ಕೆಲವು ಅನುಕೂಲತೆಗಳನ್ನು ಒದಗಿಸುವ ನಿಟ್ಟಿನಲ್ಲಿ ಸರ್ಕಾರಗಳು ತಮ್ಮ ವಾರ್ಷಿಕ ಬಜೆಟ್‌ಗಳ ಮೂಲಕ ಬಡಜನತೆಗೆ, ಶ್ರಮಿಕ ವರ್ಗಗಳಿಗೆ ಹಾಗೂ ನಿರ್ಲಕ್ಷಿತ ಸಮುದಾಯಗಳಿಗೆ ಭೌತಿಕ ಸವಲತ್ತುಗಳನ್ನು ಒದಗಿಸುವ ಯೋಜನೆಗಳಿಗೆ ನಾಂದಿ ಹಾಡಿದ್ದವು. ಜನಕಲ್ಯಾಣ ಯೋಜನೆಗಳು ದೀರ್ಘಾವಧಿಯದ್ದಾಗಿದ್ದು ಶೋಷಿತ-ಅವಕಾಶವಂಚಿತ ಹಾಗೂ ಅಂಚಿಗೆ ತಳ್ಳಲ್ಪಟ್ಟ ಜನಸಮುದಾಯಗಳ ಬದುಕನ್ನು ಸುಸ್ಥಿರಗೊಲಿಸುವ ಉದ್ದೇಶಗಳನ್ನು ಹೊಂದಿರುತ್ತವೆ.
ಬಂಡವಾಳಶಾಹಿ ಅರ್ಥವ್ಯವಸ್ಥೆಯಲ್ಲಿ ಅರೆ ಸಮಾಜವಾದಿ ತತ್ವಗಳನ್ನೇ ಅನುಸರಿಸಿದರೂ ಸಂಪತ್ತಿನ ಸಮಾನ ಒಡೆತನ ಅಥವಾ ವಿತರಣೆ ಸಾಧ್ಯವಾಗದೆ ಇರುವುದರಿಂದ, ದುಡಿಯುವ ವರ್ಗಗಳ ಹಾಗೂ ಉತ್ಪಾದಕೀಯ ಶಕ್ತಿಗಳ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ಈ ಯೋಜನೆಗಳು ಬದುಕಿಗೆ ಅತ್ಯವಶ್ಯವಾದ ಮೂಲ ಪರಿಕರಗಳನ್ನು ಒದಗಿಸುತ್ತವೆ. 1960ರ ದಶಕದಲ್ಲಿ ದೇಶಾದ್ಯಂತ ಉದ್ಭವಿಸಿದ ಆಹಾರ ಕೊರತೆ, ನಿರುದ್ಯೋಗ, ಬೆಲೆ ಏರಿಕೆಯಂತಹ ಸಮಸ್ಯೆಗಳು ಮತ್ತು ತಳಮಟ್ಟದಲ್ಲಿ ಉಂಟಾದ ಕ್ಷೋಭೆಯ ಪರಿಣಾಮವೇ 1970ರ ದಶಕದ 20 ಅಂಶದ ಕಾರ್ಯಕ್ರಮಗಳು ಮತ್ತು ಸಾರ್ವಜನಿಕ ಉದ್ದಿಮೆಯ ಬೆಳವಣಿಗೆ. ಹಸಿರು ಕ್ರಾಂತಿಯೂ ಸಹ ಸಮಾಜದ ಒಂದು ನಿರ್ದಿಷ್ಟ ವರ್ಗದ ಏಳಿಗೆಗೆ ಪೂರಕವಾಯಿತೇ ಹೊರತು, ಗ್ರಾಮೀಣ ಬದುಕನ್ನಾಗಲೀ, ಭೂಹೀನ, ಅಲ್ಪ ಭೂಮಿಯ, ಭೂರಹಿತ ರೈತಾಪಿ-ಕೃಷಿಕ ಸಮುದಾಯವನ್ನು ಮೇಲೆತ್ತಲು ಪೂರಕವಾಗಲಿಲ್ಲ. ಈ ಅವಕಾಶವಂಚಿತ ಸಮುದಾಯಗಳ ಬದುಕು ಹಸನಾಗಿಸುವ ನಿಟ್ಟಿನಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳ ಕೊಡುಗೆಯನ್ನು ನೆನೆಯಲೇಬೇಕು.
ನವ ಉದಾರವಾದದ ಪ್ರವೇಶ
ಆದರೆ 1970ರ ದಶಕದ ಈ ಜನಕಲ್ಯಾಣ ಅರ್ಥವ್ಯವಸ್ಥೆಯು ಒಂದು ಹದಕ್ಕೆ ಬರುವ ಹೊತ್ತಿಗೇ 1980ರ ದಶಕದ ಆರಂಭದಲ್ಲೇ ಭಾರತ ನವ ಉದಾರವಾದಿ ಆರ್ಥಿಕ ನೀತಿಗಳಿಗೆ ಹೆಬ್ಬಾಗಿಲನ್ನು ತೆರೆದಿತ್ತು. ಜಾಗತೀಕರಣ ಮತ್ತು ತತ್ಸಂಬಂಧಿ ಉದಾರೀಕರಣ-ಖಾಸಗೀಕರಣ ನೀತಿಗಳು ಅಧಿಕೃತವಾಗಿ 1991ರ ಗ್ಯಾಟ್ ಒಪ್ಪಂದದ ನಂತರದಲ್ಲೇ ಅನುಷ್ಟಾನವಾದರೂ, ಭಾರತವು 80ರ ದಶಕದ ಆರಂಭದಿಂದಲೇ ಮಾರುಕಟ್ಟೆ ಬಂಡವಾಳಕ್ಕೆ ಪ್ರವೇಶ ದ್ವಾರಗಳನ್ನು ತೆರೆದಿತ್ತು. ಜಾಗತಿಕ ಬಂಡವಾಳಶಾಹಿಯ ಈ ಪ್ರವೇಶಕ್ಕೂ, ದೇಶದ ರಾಜಕಾರಣದಲ್ಲಿ ಉಂಟಾದ ವ್ಯತ್ಯಯಗಳಿಗೂ ನೇರವಾದ ಸಂಬಂಧವಿರುವುದನ್ನು ರಾಜಕೀಯ ಅರ್ಥಶಾಸ್ತ್ರಜ್ಞರು ಸ್ಪಷ್ಟವಾಗಿ ಗುರುತಿಸಿದ್ದಾರೆ. ಮಂಡಲ-ಕಮಂಡಲ ರಾಜಕಾರಣ, ಏಕ ಪಕ್ಷದ ಆಧಿಪತ್ಯ ರಾಜಕಾರಣ ಕೊನೆಗೊಂಡು ಬಹುಪಕ್ಷಗಳ ಉದಯವಾದದ್ದು, ಪಕ್ಷ ರಾಜಕಾರಣದ ವಿಘಟನೆ, ಪ್ರಾದೇಶಿಕ ಪಕ್ಷಗಳ ಉಗಮ, ಮೊದಲ ಮೂರು ದಶಕಗಳ ಆರ್ಥಿಕ ಬೆಳವಣಿಗೆಗಳ ಫಲಾನುಭವಿಗಳಾದ ಕೆಲವು ನಿರ್ದಿಷ್ಟ ಜಾತಿ ಸಮುದಾಯಗಳು ಹಾಗೂ ಈ ಮಾರ್ಗದಲ್ಲೇ ಅವಕಾಶಗಳನ್ನು ಕಳೆದುಕೊಂಡ ಹಿಂದುಳಿದ ವರ್ಗಗಳು ಚಾಲನೆ ನೀಡಿದ ಅಸ್ಮಿತೆಯ ರಾಜಕಾರಣ ಇವೆಲ್ಲವೂ ಪರ್ಯವಸಾನಗೊಂಡಿದ್ದು ಹಿಂದೂ ಅಸ್ಮಿತೆಯ ಹಿಂದುತ್ವ ರಾಜಕಾರಣದ ಉಗಮದಲ್ಲಿ.
ಮೂಲತಃ ಸೈದ್ಧಾಂತಿಕವಾಗಿ ಸಮಾಜವಾದಿ ಆರ್ಥಿಕತೆಯನ್ನು ವಿರೋಧಿಸುತ್ತಲೇ, ಬಂಡವಾಳಶಾಹಿಯ ಮಾರುಕಟ್ಟೆ ಆರ್ಥಿಕ ನೀತಿಗಳಿಗೆ ಬೆಂಬಲಿಸುತ್ತಿದ್ದ ಹಿಂದುತ್ವ ರಾಜಕಾರಣವು ಪ್ರಾರಂಭಿಕ ಹಂತದಲ್ಲಿ ಸ್ವದೇಶಿ ಆಂದೋಲನದ ಮೂಲಕ, ಮುಕ್ತ ಮಾರುಕಟ್ಟೆ ನೀತಿಗಳನ್ನು ವಿರೋಧಿಸಿದ್ದರೂ, 1998-99ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅಧಿಕಾರಕ್ಕೆ ಬರುವ ಹೊತ್ತಿಗೆ, ಸ್ವದೇಶಿ ಕೂಗು ನೇಪಥ್ಯಕ್ಕೆ ಸರಿದಿತ್ತು. ಕೃಷಿ, ಹಣಕಾಸು, ವಿಮಾ ಕ್ಷೇತ್ರಗಳನ್ನೂ ಸೇರಿದಂತೆ ಭಾರತದ ಅರ್ಥವ್ಯವಸ್ಥೆಯ ಎಲ್ಲ ವಲಯಗಳೂ 21ನೆಯ ಶತಮಾನದ ಆರಂಭದ ಹೊತ್ತಿಗೆ ಮುಕ್ತ ಮಾರುಕಟ್ಟೆಯ ಜಗುಲಿಗಳಾಗಿದ್ದವು. ಆನಂತರದಲ್ಲಿ ಹಿಂದಿರುಗಿ ನೋಡದ ಭಾರತದ ಆಳುವ ವರ್ಗಗಳು ಪಕ್ಷಾತೀತವಾಗಿ ಮುಕ್ತ ಮಾರುಕಟ್ಟೆ ಆರ್ಥಿಕತೆಯನ್ನು, ಹಣಕಾಸು ಬಂಡವಾಳದ ಆಧಿಪತ್ಯವನ್ನು ಹಾಗೂ ಬಂಡವಾಳಶಾಹಿಯ ಪಾರಮ್ಯವನ್ನು ಒಪ್ಪಿಕೊಂಡೇ ಮುಂದುವರೆದಿರುವುದನ್ನು ಗಮನಿಸಿದ್ದೇವೆ. ಇಂದು ನಾಲ್ಕನೆಯ ಔದ್ಯೋಗಿಕ ಕ್ರಾಂತಿಯ ಹಾದಿಯನ್ನು ಕ್ರಮಿಸಿರುವ ಭಾರತ, ವಿಶ್ವಗುರು ಆಗುವ ಸಾಧ್ಯಾಸಾಧ್ಯತೆಗಳ ನಡುವೆ, ಭಾರತದ ಆರ್ಥಿಕತೆಯನ್ನು ಸಂಪೂರ್ಣವಾಗಿ ಮುಕ್ತಗೊಳಿಸಿದೆ.
ಈ ಮುಕ್ತ ವಾತಾವರಣದಲ್ಲಿ ಬ್ಯಾಂಕ್, ವಿಮೆ, ಕೃಷಿ, ಹೈನುಗಾರಿಕೆ, ಗಣಿಗಾರಿಕೆ, ಜಲಸಂಪನ್ಮೂಲಗಳು, ರಸ್ತೆ-ರೈಲು-ವಿಮಾನ ಸಾರಿಗೆಯ ವಲಯಗಳೂ ಸಹ ಮಾರುಕಟ್ಟೆ ಪಾಲಾಗಲು ಇನ್ನು ಕೆಲವೇ ವರ್ಷಗಳು ಉಳಿದಿವೆ. ಒಂದು ವರ್ಷದ ಸುದೀರ್ಘ ರೈತ ಮುಷ್ಕರಕ್ಕೆ ಮಣಿದು ಕೇಂದ್ರ ಸರ್ಕಾರ ಹಿಂಪಡೆದುಕೊಂಡ ಮೂರು ಕೃಷಿ ನೀತಿಗಳು ಮುಂದಿನ ದಿನಗಳಲ್ಲಿ ಪರಿಷ್ಕೃತ ರೂಪದಲ್ಲಿ ಜಾರಿಯಾಗುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗುವುದಿಲ್ಲ. ಮತ್ತೊಂದೆಡೆ ಮಾರುಕಟ್ಟೆ ಆರ್ಥಿಕತೆಗೆ ಮತ್ತು ವಿದೇಶಿ-ದೇಶಿ ಬಂಡವಾಳ ಹೂಡಿಕೆಗೆ ಪೂರಕವಾಗಿ ಕಾರ್ಮಿಕ ಕಾನೂನುಗಳು ಶಿಥಿಲವಾಗುವುದನ್ನೂ ಈಗಾಗಲೇ ಕಾಣುತ್ತಿದ್ದೇವೆ. ಶಿಕ್ಷಣ ವಲಯದ ಖಾಸಗೀಕರಣಕ್ಕೆ ನರಸಿಂಹರಾವ್-ವಾಜಪೇಯಿ ಆಳ್ವಿಕೆಯಲ್ಲೇ ಚಾಲನೆ ದೊರೆತಿದ್ದರೂ ಹೊಸ ಶಿಕ್ಷಣ ನೀತಿ -2020ರ ಅನುಷ್ಟಾನದೊಂದಿಗೆ, ಭಾರತದ ಇಡೀ ಶಿಕ್ಷಣ ವ್ಯವಸ್ಥೆಯು ಖಾಸಗೀಕರಣಗೊಂಡು ಕಾರ್ಪೋರೇಟೀಕರಣಕ್ಕೊಳಗಾಗುವುದು ಬಹುತೇಕ ನಿಶ್ಚಿತ. 2024ರ ಚುನಾವಣೆಗಳು ಈ ನಿಟ್ಟಿನಲ್ಲಿ ನಿರ್ಣಾಯಕವಾಗಲಿದೆ.
ಡಿಜಿಟಲ್ ಯುಗದ ಹೆಜ್ಜೆಗಳು
ಆದರೆ ಈ ನವ ಉದಾರವಾದಿ ಆರ್ಥಿಕ ನೀತಿಗಳಿಗೆ ಪ್ರಬಲವಾದ ರಾಜಕೀಯ ವಿರೋಧ (ಎಡಪಕ್ಷಗಳನ್ನು ಹೊರತುಪಡಿಸಿ) ವ್ಯಕ್ತವಾಗದಿರುವುದೂ ಈ ಕ್ಷಿಪ್ರ ಬೆಳವಣಿಗೆಗೆ ಕಾರಣವಾಗಿದೆ. ಕಾಂಗ್ರೆಸ್ ಒಳಗೊಂಡಂತೆ ಯಾವುದೇ ಪ್ರಾದೇಶಿಕ ಪಕ್ಷಗಳೂ ಸಹ ನವ ಉದಾರವಾದ ಮತ್ತು ಕಾರ್ಪೋರೇಟ್ ಮಾರುಕಟ್ಟೆ ಆರ್ಥಿಕತೆಗೆ ಪರ್ಯಾಯ ಅರ್ಥವ್ಯವಸ್ಥೆಯ ಬಗ್ಗೆ ಸೊಲ್ಲೆತ್ತುವುದಿಲ್ಲ. ಅರೆ ಸಮಾಜವಾದಿ ಬಂಡವಾಳಶಾಹಿ ಅರ್ಥವ್ಯವಸ್ಥೆಯಲ್ಲೇ ಅವಕಾಶವಂಚಿತ-ಅಂಚಿಗೆ ತಳ್ಳಲ್ಪಟ್ಟ ಜನಸಮುದಾಯಗಳು ಇವತ್ತಿನ ಕಾರ್ಪೋರೇಟ್ ಮಾರುಕಟ್ಟೆ ಆರ್ಥಿಕತೆಯ ಹೊಡೆತದಿಂದ ಜರ್ಝರಿತವಾಗಿವೆ. ಮಾರುಕಟ್ಟೆಯ ಅಭಿವೃದ್ಧಿಯಾಗುತ್ತಿದ್ದಂತೆಲ್ಲಾ ಸಮಾಜದ ಕೆಳಸ್ತರದಲ್ಲಿ ಹೆಚ್ಚಿನ ಸಂಖ್ಯೆಯ ದುಡಿಮೆಗಾರರು ತಮ್ಮ ಅಲ್ಪ ಭದ್ರತೆಯನ್ನೂ ಕಳೆದುಕೊಂಡು ನಿರ್ಗತಿಕತೆಯತ್ತ ಸಾಗುತ್ತಿದ್ದಾರೆ. ಇದನ್ನು Proletarisation of the working population ಎನ್ನಲಾಗುತ್ತದೆ. ಅಂದರೆ ತಮ್ಮ ಸಾಮಾಜಿಕ ಸ್ಥಿತಿಗತಿಗಳಿಂದ ವಂಚಿತರಾಗಿ ಆರ್ಥಿಕ ನೆಲೆಯಲ್ಲಿ ಶ್ರಮಜೀವಿಗಳಾಗಿ ಮಾರ್ಪಡುವ ಅಪಾರ ಸಂಖ್ಯೆಯ ದುಡಿಮೆಗಾರರು ಅನಿಶ್ಚಿತ ನಾಳೆಗಳನ್ನು, ಅಭದ್ರತೆಯ ಭವಿಷ್ಯವನ್ನು ಎದುರಿಸುವಂತಾಗುತ್ತದೆ. ಬಂಡವಾಳ ಮತ್ತು ಮಾರುಕಟ್ಟೆಯ ಹಿಡಿತದಲ್ಲಿ ಸಂಪತ್ತಿನ ಕ್ರೋಢೀಕರಣ ಹೆಚ್ಚಾದಂತೆಲ್ಲಾ, ತಮ್ಮ ಸಾಮಾಜಿಕ-ಆರ್ಥಿಕ ನೆಲೆ ಕಳೆದುಕೊಳ್ಳುವ ಕೆಳಸ್ತರದ ಸಮುದಾಯಗಳಿಂದ ಹೆಚ್ಚಿನ ಶ್ರಮಿಕರು ಮಾರುಕಟ್ಟೆಗೆ ಪೂರೈಕೆಯಾಗುತ್ತಾರೆ.
ಈ ಮಾರುಕಟ್ಟೆ ಅರ್ಥವ್ಯವಸ್ಥೆಗೆ ಪೂರಕವಾಗುವಂತಹ ಶಿಕ್ಷಣ ನೀತಿಗಳು ಈಗಾಗಲೇ ಜಾರಿಯಾಗುತ್ತಲಿದ್ದು , ಭಾರತದ ದುಡಿಯುವ ವರ್ಗಗಳಿಗೆ ಸೇವಾ ಭದ್ರತೆ ಹಾಗೂ ಸುಸ್ಥಿರ ಬದುಕು ರೂಪಿಸಿಕೊಳ್ಳಲು ನೆರವಾಗುವಂತಿದ್ದ ಕಾರ್ಮಿಕ ಕಾನೂನುಗಳನ್ನೂ ತಿದ್ದುಪಡಿ ಮಾಡಲಾಗಿದೆ. ಕೃಷಿ ಮಸೂದೆಗಳ ಮೂಲಕ ಇಡೀ ಕೃಷಿ ವ್ಯವಸ್ಥೆಯನ್ನು ಅಂತಾರಾಷ್ಟ್ರೀಯ ಬಂಡವಾಳ ಮಾರುಕಟ್ಟೆಯ ನಿಯಂತ್ರಣಕ್ಕೆ ಒಪ್ಪಿಸುವ ಆಡಳಿತ ನೀತಿಗಳು ಜಾರಿಯಾಗುತ್ತವೆ. ಇದರ ಮೂಲವನ್ನು 1991ರ ಗ್ಯಾಟ್ ಒಪ್ಪಂದದಲ್ಲೇ ಗುರುತಿಸಬಹುದು. ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಹೊಸ ಶಿಕ್ಷಣ ನೀತಿ ಈ ಮಾರುಕಟ್ಟೆಗೆ ಬೌದ್ಧಿಕ ಸರಕುಗಳನ್ನು ಒದಗಿಸುವ ಕಾರ್ಖಾನೆಗಳನ್ನು ಸೃಷ್ಟಿಸುತ್ತವೆ. ವಿಶ್ವವಿದ್ಯಾಲಯಗಳು, ಉನ್ನತ ಶಿಕ್ಷಣ ಸಂಸ್ಥೆಗಳು ಈ ಕಾರ್ಖಾನೆಗಳ ಪ್ರತಿರೂಪವಾದರೆ, ವಿದ್ಯಾರ್ಜನೆಯನ್ನು ಪೂರೈಸಿ ಹೊರಬೀಳುವ ಕೋಟ್ಯಂತರ ಸಂಖ್ಯೆಯ ಯುವ ಸಮೂಹ ಮಾರುಕಟ್ಟೆಯ ಬೌದ್ಧಿಕ ಸರಕುಗಳಾಗುತ್ತವೆ. ಈ ಪ್ರಕ್ರಿಯೆಯಲ್ಲಿ ಮತ್ತೊಮ್ಮೆ ತಳಸಮುದಾಯಗಳು, ಆದಿವಾಸಿಗಳು, ಮಹಿಳೆಯರು ಅವಕಾಶವಂಚಿತರಾಗುವ ಅಥವಾ ಅಂಚಿಗೆ ತಳ್ಳಲ್ಪಡುವ ಸಾಧ್ಯತೆಗಳು ನಿಚ್ಚಳವಾಗಿ ಕಾಣುತ್ತದೆ.
ಹಾಗಾಗಿಯೇ ಪ್ರತಿಯೊಂದು ಚುನಾವಣೆಯಲ್ಲೂ, ಪ್ರತಿಯೊಂದು ವಾರ್ಷಿಕ ಬಜೆಟ್‌ಗಳಲ್ಲೂ ತಳಸ್ತರದ ಜನತೆಗೆ ತಲುಪುವಂತಹ ಉಚಿತಗಳನ್ನು, ಕಲ್ಯಾಣ ಯೋಜನೆಗಳನ್ನು ಘೋಷಿಸುವುದು ಎಲ್ಲ ಬೂರ್ಷ್ವಾ ರಾಜಕೀಯ ಪಕ್ಷಗಳ ಆದ್ಯತೆಯಾಗಿರುತ್ತದೆ. ತನ್ಮೂಲಕ ಈ ಪಕ್ಷಗಳು ಅಧಿಕಾರ ರಾಜಕಾರಣದ ವಿರುದ್ಧ ಸೃಷ್ಟಿಯಾಗಬಹುದಾದ ಅತೃಪ್ತಿ ಮತ್ತು ಅಸಮಾಧಾಗಳನ್ನು ನಿಯಂತ್ರಿಸಲು ಯತ್ನಿಸುತ್ತವೆ. ಆದಾಗ್ಯೂ ಮಾರುಕಟ್ಟೆ ಶಕ್ತಿಗಳು ಈ ಉಚಿತಗಳನ್ನು, ಸವಲತ್ತುಗಳನ್ನು ಕೊನೆಗೊಳಿಸುವಂತೆ ಆಡಳಿತ ವ್ಯವಸ್ಥೆಯ ಮೇಲೆ ಒತ್ತಡ ಹೇರುತ್ತಲೇ ಇವೆ. ರಾಜಕೀಯವಾಗಿಯೂ ಒಂದು ವರ್ಗ ಇದನ್ನೇ ಅನುಮೋದಿಸುವಂತಿದ್ದು, ಈ ಉಚಿತ-ಸವಲತ್ತುಗಳ ವಿರುದ್ಧ ಪ್ರಚಾರಾಂದೋಲನ ನಡೆಸುವ ವಾಟ್ಸಾಪ್ ವಿದ್ವಾಂಸರ ಪಡೆಯನ್ನೂ ತಯಾರಿಸಿದೆ. ಈ ಸಂದಿಗ್ಧತೆಯ ನಡುವೆಯೇ ಅರ್ಥವ್ಯವಸ್ಥೆಗೆ ಅನಪೇಕ್ಷಿತ ಎನಿಸುವ ಈ ಸಾಂವಿಧಾನಿಕ ಹಕ್ಕುಗಳು ಶ್ರೀಸಾಮಾನ್ಯನ ಪಾಲಿಗೆ ಮರುಭೂಮಿಯಲ್ಲಿನ ಓಯಸಿಸ್‌ನಂತೆ ಕಾಣುತ್ತದೆ.
ನೆಲದ ಮೇಲೆ ಓಡಾಡುವವರಿಗೆ ಮಾತ್ರ ರಸ್ತೆಬದಿಯ ಹಸಿವು ಮತ್ತು ಬಡತನ ಗೋಚರಿಸಲು ಸಾಧ್ಯ ಎನ್ನುವ ಸುಡು ವಾಸ್ತವತೆಯನ್ನು ಅರಿತೇ ನಾವು ಸರ್ಕಾರಗಳು ಕೊಡಮಾಡುವ ʼ ಉಚಿತ ʼಗಳನ್ನು ಪರಾಮರ್ಶೆ ಮಾಡಬೇಕಾಗುತ್ತದೆ.
( ಉಚಿತಗಳ ಔಚಿತ್ಯ ಮತ್ತು ಸಮಾಜದೊಳಗಿನ ವೈಚಿತ್ರ್ಯ ಕುರಿತು ಮುಂದಿನ ಲೇಖನದಲ್ಲಿ)
-೦-೦-೦-